ಯೋಗ ಜನಾಂದೋಲನವಾಗಿದೆ: ನರೇಂದ್ರ ಮೋದಿ

Update: 2016-06-21 05:35 GMT

ಚಂಡೀಗಢ, ಜೂ.21: ‘‘ಯೋಗ ಒಂದು ಧಾರ್ಮಿಕ ಚಟುವಟಿಕೆಯಲ್ಲ. ಯೋಗವನ್ನು ವಿವಾದವನ್ನಾಗಿಸುವುದು ಸರಿಯಲ್ಲ. ಕಳೆದ ಒಂದು ವರ್ಷದಲ್ಲಿ ಯೋಗ ಒಂದು ಜನಾಂದೋಲನವಾಗಿ ಹೊರಹೊಮ್ಮಿದೆ’’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ ಇಲ್ಲಿ ಹೇಳಿದ್ದಾರೆ.
 ಇಲ್ಲಿ ಮಂಗಳವಾರ ನಡೆದ ಎರಡನೆ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ವಿವಿಧ ಆಸನಗಳನ್ನು ಮಾಡಿ ದೇಶಾದ್ಯಂತ ಯೋಗ ದಿನಾಚರಣೆ ಆಚರಿಸಿದ ಜನರೊಂದಿಗೆ ಕೈಜೋಡಿಸಿದರು. ಬಿಳಿ ಟೀ-ಶರ್ಟ್, ಟ್ರಾಕ್ ಪ್ಯಾಂಟ್  ಧರಿಸಿದ್ದ ಮೋದಿ ವಿವಿಧ ಪ್ರಕಾರದ ಯೋಗಾಸನವನ್ನು ಮಾಡಿದ ಬಳಿಕ ಮ್ಯಾಟ್ ಮೇಲೆ ಕುಳಿತುಕೊಂಡರು.
ಮೊಬೈಲ್ ಫೋನ್‌ನಂತೆಯೇ ಯೋಗವನ್ನು ತಮ್ಮ ಜೊತೆಯಲ್ಲೆ ಇರಿಸಿಕೊಳ್ಳಿ. ಇದು ನಯಾ ಪೈಸೆ ಖರ್ಚಿಲ್ಲದೆ ಆರೋಗ್ಯವನ್ನು ಕಾಪಾಡುತ್ತದೆ ಎಂದು ಚಂಡೀಗಢದ ಕ್ಯಾಪಿಟಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೋದಿ ಜನತೆಗೆ ಕರೆ ನೀಡಿದರು.
ಭಾರತ ಹಾಗೂ ವಿದೇಶದಲ್ಲಿ ಯೋಗವನ್ನು ಜನಪ್ರಿಯಗೊಳಿಸುತ್ತಿರುವವರಿಗೆ ಎರಡು ಪ್ರಶಸ್ತಿಗಳನ್ನು ಪ್ರಧಾನಮಂತ್ರಿಗಳು ಘೋಷಿಸಿದರು.
ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಯೋಗ ದಿನಕ್ಕೆ ಚಾಲನೆ ನೀಡಿದರು. ಸುಮಾರು 1,000 ಜನರು ಇದರಲ್ಲಿ ಭಾಗವಹಿಸಿದ್ದರು.
 ವಿಶ್ವಸಂಸ್ಥೆ ಕಳೆದ ವರ್ಷ ಜೂ.21ನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿದ್ದು, ಕಳೆದ ವರ್ಷ ಮೊದಲ ಬಾರಿ ವಿಶ್ವದಾದ್ಯಂತ ಯೋಗ ದಿನಾಚರಣೆ ಆಚರಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News