ಕರಗದ ಮುನಿಸು: ಧಾರಾವಾಹಿ-2

Update: 2016-06-22 18:55 GMT

‘‘ಸತ್ಯ ಹೇಳಿದ್ದರೆ ನಿನ್ನನ್ನು ಇಲ್ಲಿಗೆ ಬರ್ಲಿಕ್ಕೆ ಬಿಡ್ತಾ ಇರಲಿಲ್ಲವಾ?’’

‘‘ಹಾಗೇನಿಲ್ಲ. ನಾನು ಎಲ್ಲಿಗೆ ಹೋಗಬೇಕೆಂದರೂ ಅಮ್ಮ ಬೇಡ ಅನ್ನುವುದಿಲ್ಲ’’
‘‘ಕಾಲೇಜಿಗೆ ಹೋಗ್ತಾ ಇದ್ದಿಯಾ?’’
‘‘ಹೌದು, ಮುಗಿಯಿತು’’
‘‘ಒಂದು ವಾರ ಇಲ್ಲೇ ಇರ್ತಿಯಾ?’’
‘‘ಹೌದು’’
‘‘ಯಾಕೆ ಬಂದೆ ಇಲ್ಲಿಗೆ?’’
‘‘ಅಜ್ಜಿಯನ್ನು ನೋಡಬೇಕು ಎನಿಸಿತು. ಅದಕ್ಕೆ ಬಂದೆ’’
‘‘ಅದೇನು ಇದ್ದಕ್ಕಿದ್ದಂತೆ ಅಜ್ಜಿಯ ನೆನಪಾಗಿದ್ದು?’’
‘‘ಇದ್ದಕ್ಕಿದ್ದಂತೆ ಅಲ್ಲ, ನೆನಪಿತ್ತು. ಅಜ್ಜ ತೀರಿಕೊಂಡ ಸುದ್ದಿ ತುಂಬಾ ತಡವಾಗಿ ತಿಳಿಯಿತು. ಆಗ ನಾನು ಸ್ವಲ್ಪ ಚಿಕ್ಕವಳಿದ್ದೆ. ಅಜ್ಜಿಯನ್ನಾದರೂ ಒಮ್ಮೆ ನೋಡಿಕೊಂಡು ಹೋಗಬೇಕು ಎಂಬ ಆಶೆ ಇತ್ತು. ಆಮೇಲೆ ಬರಲಿಕ್ಕಾಗಲಿಲ್ಲ. ಈಗ ಕಾಲೇಜು ಮುಗೀತಲ್ಲ ಬಂದೆ’’
‘‘ನಿನಗೆ ಇಲ್ಲಿಗೆ ಬರಲಿಕ್ಕೆ ದಾರಿ ಯಾರು ಹೇಳಿದ್ದು?’’
‘‘ಅಮ್ಮನ ಕಾಲೇಜು ಸರ್ಟಿಫಿಕೇಟ್‌ನಲ್ಲಿ ವಿಳಾಸ ನೋಡಿದ್ದೆ. ಅದನ್ನು ಯಾವಾಗಲೋ ಕದ್ದು ಬರೆದುಕೊಂಡಿದ್ದೆ’’
‘‘ಅಜ್ಜಿ ತುಂಬಾ ಕೋಪದಲ್ಲಿದ್ದಾರೆ. ಅವರೇನಾದರೂ ಅಂದರೆ ನೀನು ಬೇಜಾರು ಮಾಡ್ಕೋಬೇಡ. ಒಂದೆರಡು ದಿನದಲ್ಲಿ ಸರಿಹೋಗುತ್ತಾರೆ’’.
‘‘ಯಾಕೆ ಕೋಪ?’’
‘‘ಅದೆಲ್ಲ ಆಮೇಲೆ ಹೇಳ್ತೇನೆ. ಮೊದಲು ನೀನು ಬಟ್ಟೆ ಬದಲಿಸಿ ಮುಖ ತೊಳೆದು ಬಾ. ತಿಂಡಿ ಕೊಡ್ತೇನೆ’’

ಐಸು ಅವಳಿಗೆ ಬಚ್ಚಲು ಮನೆ ತೋರಿಸಿದಳು. ಅವಳು ಅತ್ತ ಹೋಗುತ್ತಿದ್ದಂತೆಯೇ ಐಸು ಮತ್ತೆ ಅಜ್ಜಿಯ ಬಳಿಗೆ ಹೋದಳು. ಅಜ್ಜಿ ಅದೇ ಭಂಗಿಯಲ್ಲಿ ಗೋಡೆಗೆ ಮುಖ ಮಾಡಿ ಮಲಗಿದ್ದರು. ಅವರ ಹೃದಯದೊಳಗೆ ಬೀಸುತ್ತಿರುವ ಬಿರುಗಾಳಿ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿತ್ತು. ‘‘ನಾನು ಅವಳನ್ನು ಒಳಗೆ ಕರೆದೆ... ಮುಖ ತೊಳೆಯಲಿಕ್ಕೆ ಹೋಗಿದ್ದಾಳೆ... ಅವಳಿಗೆ ತಿಂಡಿ ಕೊಡ್ತೇನೆ...’’
ಅಜ್ಜಿ ಮಾತನಾಡಲಿಲ್ಲ.
 ‘‘ರಾತ್ರಿ ಒಬ್ಬಳೇ ಬೆಂಗಳೂರಿನಿಂದ ಬಂದಿದ್ದಾಳೆ ಹುಡುಗಿ. ಅವಳಿಗೆ ಹಸಿವಾಗುವುದಿಲ್ಲವಾ...? ನೀವು ಹೀಗೆ ಬಾಯಿಗೆ ಬೀಗ ಹಾಕಿ ಬಿದ್ದುಕೊಂಡರೆ ನಾನೆಂತ ಮಾಡುವುದು. ಆ ಹುಡುಗಿ ಎಂತ ತಪ್ಪು ಮಾಡಿದೆ. ಅದಕ್ಕೆ ಅಜ್ಜಿ ಮೇಲೆ ಎಷ್ಟು ಪ್ರೀತಿ ಉಂಟು ಗೊತ್ತುಂಟಾ ನಿಮಗೆ... ನಿಮ್ಮನ್ನು ನೋಡಲಿಕ್ಕಾಗಿಯೇ ಅದು ಬೆಂಗಳೂರಿನಿಂದ ಇಲ್ಲಿಯವರೆಗೆ ಬಂದಿದ್ದಂತೆ...ಇನ್ನು ಒಂದು ವಾರ ಇಲ್ಲೇ ಇರ್ತಾಳಂತೆ... ಇನ್ನು ನೀವು ಅವಳಿಗೆ ಜೋರು ಮಾಡಲಿಕ್ಕೆ ಹೋಗಬೇಡಿ. ಹಾಗೇನಾದರೂ ಮಾಡಿದರೆ ನಾನು ಹೇಳದೆ ಕೇಳದೆ ಎಲ್ಲಿಗಾದರೂ ಹೊರಟು ಹೋಗುತ್ತೇನೆ... ಗೊತ್ತಾಯಿತಲ್ಲಾ...’’
ಅಜ್ಜಿ ತುಟಿ ಬಿಚ್ಚಲಿಲ್ಲ.
‘‘ಮತ್ತೆ ನನ್ನನ್ನು ಏನೂ ಹೇಳ್ಬೇಡಿ. ನಿಮ್ಮಲ್ಲಿ ಕೇಳಿಯೇ ಕೊಡುವುದು. ಅವಳಿಗೆ ತಿಂಡಿ ಕೊಡ್ತೇನೆ..’’
ಈಗಲೂ ಅಜ್ಜಿ ಮಾತನಾಡಲಿಲ್ಲ. ಅವರು ತಿಂಡಿ ಕೊಡಬೇಡ ಎಂದು ಹೇಳಲಿಲ್ಲವಲ್ಲ, ಅವಳಿಗೆ ಅಷ್ಟು ಸಾಕಾಯಿತು. ಬಂದಷ್ಟೇ ವೇಗವಾಗಿ ಅಡುಗೆ ಮನೆಗೆ ತೆರಳಿದವಳು ತಿಂಡಿ ತಯಾರಿಗೆ ತೊಡಗಿದಳು.
ಬಚ್ಚಲು ಮನೆಯಿಂದ ಮುಖ ಒರೆಸಿಕೊಳ್ಳುತ್ತಾ ಅಡುಗೆ ಮನೆಗೆ ಬಂದ ತಾಹಿರಾ ಅಲ್ಲೇ ಇದ್ದ ಸ್ಟೂಲು ಎಳೆದು ಕುಳಿತುಕೊಂಡಳು.
‘‘ಅಜ್ಜಿ ಎಲ್ಲಿ ಮಾಮಿ...?’’
‘‘ಓ ಅಲ್ಲಿ ಕೋಣೆಯಲ್ಲಿ ಮಲಗಿದ್ದಾರೆ’’
‘‘ಯಾಕೆ? ನಾನು ಬಂದದ್ದು ಅವರಿಗೆ ಇಷ್ಟವಾಗಲಿಲ್ಲವಾ?’’
‘‘ಹಾಗೇನಿಲ್ಲ... ಅವರು ಹಾಗೆಯೇ, ಒಮ್ಮಮ್ಮೆ 2-3 ದಿನ ಯಾರೊಂದಿಗೂ ಮಾತನಾಡುವುದಿಲ್ಲ. ಒಮ್ಮೆಮ್ಮೆ ಊಟ-ತಿಂಡಿ ತೆಗೆದುಕೊಳ್ಳುವುದಿಲ್ಲ.. ಎಲ್ಲರ ಜೊತೆ ಸಿಟ್ಟು ಮಾಡ್ತಾರೆ, ಸಿಡುಕುತ್ತಾರೆ.’’
‘‘ಯಾಕೆ ಹಾಗೆ, ಹುಷಾರಿಲ್ಲವಾ...?’’
‘‘ಹಾಗೇನಿಲ್ಲ. ಪ್ರಾಯ ಆಯ್ತಲ್ಲಾ..’’
‘‘ಅಜ್ಜಿಗೆ ಈಗ ಎಷ್ಟು ಪ್ರಾಯ ಆಗಬಹುದು?’’
‘‘90 ದಾಟಬಹುದೂಂತ ಕಾಣುತ್ತೆ. ನೂರೂ ಆಗಬಹುದು. ಸರಿಯಾದ ಲೆಕ್ಕ ಅವರಿಗೂ ಗೊತ್ತಿಲ್ಲ’’

ಐಸು ಒಂದೊಂದೇ ನೀರುದೋಸೆ ಹೊಯ್ದು, ತೆಂಗಿನಕಾಯಿ ಚಟ್ನಿ ಹಾಕಿ ಬಡಿಸಿದಳು. ‘‘ಅಜ್ಜಿಗೆ ಒಟ್ಟು ಎಷ್ಟು ಮಕ್ಕಳು ಮಾಮಿ’’ ಬಿಸಿಬಿಸಿ ದೋಸೆ ತಿನ್ನುತ್ತಾ ತಾಹಿರಾ ಕೇಳಿದಳು.
‘‘ಒಟ್ಟು ಐದು ಮಕ್ಕಳು. ಐದೂ ಹೆಣ್ಣೆ. ನಿನ್ನಮ್ಮ ಕಿರಿಯವಳು’’
‘‘ದೊಡ್ಡಮ್ಮನವರೆಲ್ಲ ಇಲ್ಲಿಗೆ ಬರ್ತಾ ಇರ್ತಾರಾ?’’
‘‘ಹೂಂ... ಮತ್ತೆ ಬರದೇ ಇರ್ತಾರಾ? ತಿಂಗಳಿಗೊಮ್ಮೆಯಾದರೂ ಬಂದು, ಒಂದೆರಡು ದಿನ ಇದ್ದು, ಅಜ್ಜಿಯನ್ನು ನೋಡಿಕೊಂಡು ಹೋಗ್ತಾರೆ’’
ತಾಹಿರಾ ತಿಂಡಿ ಮುಗಿಸಿ ಕೈ ತೊಳೆದು ಹಜಾರಕ್ಕೆ ಬಂದವಳು ಮನೆಯ ಪ್ರತಿಯೊಂದು ಕೋಣೆಯನ್ನೂ ಹೊಕ್ಕು ಬಂದಳು. ಪ್ರತಿಯೊಂದು ಕಂಬವನ್ನೂ, ಗೋಡೆಯನ್ನೂ, ವಸ್ತುಗಳನ್ನೂ, ಮುಟ್ಟಿ ಮುಟ್ಟಿ ನೋಡಿದಳು. ತನ್ನ ತಾಯಿ ಹುಟ್ಟಿ ಬೆಳೆದ ಮನೆ. ಅವಳಿಗೆ ಆ ಮನೆಯ ಬಗ್ಗೆ ಅಭಿಮಾನ ಮೂಡಿತು. ಅಜ್ಜಿ ಮಲಗಿದ ಕೋಣೆಯೊಳಗೆ ಅಡಿ ಇಡುವಾಗ...
‘‘ಏಯ್... ಅಲ್ಲಿಗೆ ಹೋಗಬೇಡ... ಇಲ್ಲಿ ಬಾ...’’ ಐಸು ಕರೆದಳು.
‘‘ಯಾಕೆ ಅಜ್ಜಿಯ ಹತ್ತಿರ ಮಾತನಾಡಬಾರದಾ..?’’
‘‘ಬೇಡ. ಈಗ ಬೇಡ. ಅಜ್ಜಿ ಅವರಾಗಿಯೇ ಬಂದು ನಿನ್ನೊಡನೆ ಮಾತನಾಡುವವರೆಗೂ ನೀನು ಮಾತನಾಡಬೇಡ. ಒಂದೆರಡು ದಿನ, ಆಮೇಲೆ ಸರಿಯಾಗ್ತಾರೆ. ಆ ಮೇಲೆ ಮಾತಾಡ್ತಾರೆ. ಈಗವರು ತುಂಬ ನೋವನ್ನನುಭವಿಸುತ್ತಿರಬಹುದು’’
‘‘ಯಾಕೆ...?’

‘‘ಯಾಕೇಂದ್ರೆ..., ಅದೆಲ್ಲ ಈಗ ಬೇಡ. ಇನ್ನೊಮ್ಮೆ ಹೇಳ್ತೇನೆ. ರಾತ್ರಿಯೆಲ್ಲ ಪ್ರಯಾಣ ಮಾಡಿ ಬಂದಿದ್ದಿಯಲ್ಲಾ, ಈಗ ನೀನು ಆ ಕೋಣೆಯಲ್ಲಿ ಹೋಗಿ ಮಲಗು. ನೀರು ಕಾಯಿಸಿ ನಿನ್ನನ್ನು ಎಬ್ಬಿಸುತ್ತೇನೆ. ಸ್ನಾನ ಮಾಡುವಿಯಂತೆ’’ ಎಂದಳು ಐಸು. ‘‘ನನಗೆ ಈ ತೋಟವನ್ನೆಲ್ಲ ಒಮ್ಮೆ ಸುತ್ತಾಡಬೇಕು, ನೋಡಬೇಕೂಂತ ಆಸೆ. ಕರೆದುಕೊಂಡು ಹೋಗ್ತೀರಾ ಮಾಮಿ?’’
‘‘ಈಗ ಬೇಡ, ಇನ್ನೂ ಒಂದು ವಾರ ನೀನು ಇಲ್ಲೇ ಇರ್ತಿಯಲ್ಲ, ಒಂದು ದಿನ ಕರ್ಕೊಂಡು ಹೋಗಿ ಎಲ್ಲ ತೋರಿಸ್ತೇನೆ. ಈಗ ಹೋಗಿ ಮಲಗು’’ ಎಂದು ತಾಹಿರಾಳನ್ನು ಕಳುಹಿಸಿದ ಐಸು, ಒಂದು ತಟ್ಟೆಯಲ್ಲಿ ಎರಡು ದೋಸೆ, ಚಟ್ನಿ ಹಾಕಿ ಅಜ್ಜಿಯ ಕೋಣೆಗೆ ಬಂದಳು. ಅಜ್ಜಿ ಇನ್ನೂ ಅದೇ ಭಂಗಿಯಲ್ಲಿ ಗೋಡೆಗೆ ಮುಖ ಮಾಡಿ ಮಲಗಿದ್ದರು. ಅವರು ಎಚ್ಚರದಿಂದಿದ್ದಾರೆ ಎಂದು ಐಸುಳಿಗೆ ತಿಳಿದಿತ್ತು. ಆದರೂ ‘‘ಅಜ್ಜಿ... ನಿದ್ದೆ ಮಾಡುತ್ತಾ ಇದ್ದೀರಾ... ತಿಂಡಿ ತಂದಿದ್ದೇನೆ ತಿನ್ನಿ. ಗಂಟೆ ಹತ್ತಾಯಿತು’’ ಎಂದಳು.
ಅಜ್ಜಿ ಮಾತನಾಡಲಿಲ್ಲ.
ಐಸು ಅವರ ಪಕ್ಕ ಕುಳಿತು ‘‘ಅಜ್ಜೀ... ಅಜ್ಜೀ...’’ ಎಂದು ಕರೆಯುತ್ತಾ ಅವರ ಬೆನ್ನ ಮೇಲೆ ಕೈಯಿಟ್ಟಳು. ಅಜ್ಜಿ ಮಿಸುಕಾಡಲಿಲ್ಲ.
‘‘ಅಜ್ಜೀ... ನನಗೆ ಇನ್ನು ಅಡುಗೆ ಆಗಬೇಕು. ಒಂದೂ ಕೆಲಸ ಆಗಲಿಲ್ಲ. ಒಂದು ದೋಸೆ ತಿಂದು, ಚಾ ಕುಡಿದು ಮತ್ತೆ ಬೇಕಾದರೆ ಮಲಗಿ’’ ಎಂದಳು.
‘‘ನನಗೆ ಏನೂ ಬೇಡ...’’ ಅಜ್ಜಿಯ ಮಾತು ಭಾರವಾಗಿತ್ತು.
‘‘ಯಾಕೆ ಬೇಡ, ಯಾರ ಮೇಲೆ ಕೋಪ ನಿಮಗೆ. ಆ ಹುಡುಗಿ ಬಂದದ್ದಕ್ಕಾ... ಅವಳೇನು ಮಾಡಿದ್ದಾಳೆ ನಿಮಗೆ. ಇನ್ನು ಮಧ್ಯಾಹ್ನದ ವರೆಗೆ ಖಾಲಿ ಹೊಟ್ಟೆಯಲ್ಲಿ ಇರ್ತೀರಿ. ಒಂದು ದೋಸೆ ತಿನ್ನಿ, ಹಠ ಮಾಡಬೇಡಿ...’’ ಎಂದಳು.
ಅಜ್ಜಿ ಮಲಗಿದಲ್ಲಿಂದಲೇ ಒಮ್ಮೆ ಮಗ್ಗುಲು ಬದಲಿಸಿ ಅವಳನ್ನೇ ದಿಟ್ಟಿಸಿ ನೋಡಿ, ‘‘ಬೇಡಾಂತ ಹೇಳಿದ್ದಲ್ಲವಾ ನಿನಗೆ, ತಕ್ಕೊಂಡೋಗು ಇಲ್ಲಿಂದ. ನನಗೆ ಏನೂ ಬೇಡ. ನನ್ನನ್ನು ಒಂಟಿಯಾಗಿ ಇರಲು ಬಿಟ್ಟರೆ ಅಷ್ಟೇ ಸಾಕು’’ ಅವರ ಕಣ್ಣುಗಳು ಕೆಂಡದಂತೆ ಉರಿಯುತ್ತಿತ್ತು. ಮುಖದ ತುಂಬಾ ದುಗುಡ ತುಂಬಿದಂತಿತ್ತು. ಐಸು ಮರು ಮಾತನಾಡದೆ ಕೋಣೆಯಿಂದ ಹೊರಬಂದಳು. ‘‘ಹತ್ತು ಮಕ್ಕಳನ್ನಾದರೂ ಸುಧಾರಿಸಬಹುದು ಆದರೆ ಒಬ್ಬ ವೃದ್ಧರನ್ನು ನೋಡಿಕೊಳ್ಳುವುದು ಕಷ್ಟ. ಇನ್ನು ಎಷ್ಟು ದಿನ ಬೇಕೋ ಇವರು ಸರಿಯಾಗಲಿಕ್ಕೆ’’ ಎನ್ನುತ್ತಾ ಮತ್ತೆ ಅಡುಗೆ ಮನೆಗೆ ಹೋಗಿ ಒಂದು ಚೊಂಬು ನೀರು ಅಜ್ಜಿಯ ಕೋಣೆಯಲ್ಲಿಟ್ಟು ಬಂದವಳು ತನ್ನ ಕೆಲಸದಲ್ಲಿ ತೊಡಗಿದಳು. ಅಡುಗೆಯ ಮಧ್ಯೆ ಒಮ್ಮೆ ಹೋಗಿ ಅಜ್ಜಿಯ ಕೋಣೆಗೆ ಇಣುಕಿದಳು. ಇಲ್ಲ, ಅಜ್ಜಿ ಹಾಗೆಯೇ ಮಲಗಿದ್ದರು.
ಅಡುಗೆ ಮಾಡಿಟ್ಟು, ನೀರು ಕಾಯಿಸಿ ತಾಹಿರಾ ಮಲಗಿದ್ದ ಕೋಣೆಗೆ ನಡೆದಳು ಐಸು. ಅಲ್ಲಿ ತಾಹಿರಾ ಗಟ್ಟಿ ನಿದ್ದೆಯಲ್ಲಿದ್ದಳು. ಐಸು ಅವಳ ಪಕ್ಕ ಕುಳಿತು ಅವಳ ಮುಖವನ್ನೇ ದಿಟ್ಟಿಸಿ ನೋಡಿದಳು. ತಾಯಿಯಂತೆಯೇ ಮುದ್ದಾಗಿದ್ದಾಳೆ ಹುಡುಗಿ. ಅದೇ ಕಣ್ಣು, ಅದೇ ಮೂಗು, ಚಂದ್ರನಂತಹ ಉರುಟಾದ ಮುಖ, ಹಣೆಯ ಮೇಲೆ ಕೈಯಿಟ್ಟು, ತಲೆಯನ್ನೊಮ್ಮೆ ಸವರಿದಳು. ಆಗಲೇ ತಾಹಿರಾಳಿಗೆ ಎಚ್ಚರವಾಯಿತು.

‘‘ತುಂಬಾ ಹೊತ್ತಾಯಿತಾ ಮಾಮಿ...?’’ ಎನ್ನುತ್ತಾ ತಾಹಿರಾ ಎದ್ದು ಕುಳಿತುಕೊಳ್ಳಲು ಹವಣಿಸಿದಳು. ‘‘ಇಲ್ಲಮ್ಮಾ... ಮಲಗು. ರಾತ್ರಿಯೆಲ್ಲ ನಿದ್ದೆ ಬಿಟ್ಟಿದ್ದಿಯಲ್ಲಾ... ಮಲಗು...’’ ಎಂದಳು ಐಸು.
‘‘ಅಜ್ಜಿ ಎಲ್ಲಿ...?’’ ಪುಟ್ಟ ಮಗುವಿನಂತೆ ಕೇಳಿದಳು ತಾಹಿರಾ.
‘‘ಅವರು ಇನ್ನೂ ಮಲಗಿಯೇ ಇದ್ದಾರಮ್ಮಾ... ಬೆಳಗ್ಗೆ ತಿಂಡಿನೂ ತಿಂದಿಲ್ಲ’’
‘‘ನಾನು ಹೋಗಿ ಎಬ್ಬಿಸುತ್ತೇನೆ’’ ಎನ್ನುತ್ತಾ ತಾಹಿರಾ ಎದ್ದು ಕುಳಿತಳು.
‘‘ಬೇಡಮ್ಮಾ... ಅವರು ಯಾರು ಹೇಳಿದರೂ ಕೇಳೋಲ್ಲ. ಅವರಾಗಿಯೇ ಸರಿಯಾಗ್ತಾರೆ. ನೀರು ಬಿಸಿಯಾಗಿದೆ, ನೀನು ಹೋಗಿ ಸ್ನಾನ ಮಾಡಿ ಬಾ. ಊಟ ಮಾಡು.’’ ಎಂದ ಐಸು ಮತ್ತೆ ಹೋಗಿ ಅಜ್ಜಿಯ ಕೋಣೆಗೆ ಇಣುಕಿದಳು. ಅಜ್ಜಿ ಈಗ ಎದ್ದು ಕುಳಿತಿದ್ದರು. ಮುಖದ ತುಂಬಾ ಅದೇ ದುಗುಡವಿತ್ತು. ಅದಾಗಲೇ ಮಧ್ಯಾಹ್ನದ ನಮಾಝ್‌ನ ಕರೆ ಕೇಳಿಸಿತು. ಐಸು ಅವರನ್ನು ಮಾತನಾಡಿಸುವ ಗೋಜಿಗೆ ಹೋಗದೆ ಹಿಂದಿರುಗಿದಳು. ಅವಳಿಗೆ ಗೊತ್ತಿತ್ತು, ಅಜ್ಜಿ ಎಷ್ಟೇ ಸಿಟ್ಟು ಮಾಡಿಕೊಂಡರೂ, ನೋವಿದ್ದರೂ ನಮಾಝ್‌ಗೆ ಏಳ್ತಾರೆ, ಆಮೇಲೆ ಸರಿ ಹೋಗ್ತಾರೇಂತ.
ಅಜ್ಜಿ ಎದ್ದು ನಿಂತರು. ಯಾಕೋ ಇಂದು ಅವರಿಗೆ ತಲೆ ಸುತ್ತಿದಂತೆ, ದೇಹ ವಾಲಿದಂತಾಯಿತು. ಮೆಲ್ಲನೆ ಕಾಲೆಳೆಯುತ್ತಾ ವುಝೂ ಮಾಡಲು ಬಚ್ಚಲಿನತ್ತ ನಡೆದರು. ಅವರು ಬಚ್ಚಲಿನ ಬಾಗಿಲು ತಲುಪುವುದಕ್ಕೂ ತಾಹಿರಾ ಸ್ನಾನ ಮುಗಿಸಿ ಹೊರಡುವುದಕ್ಕೂ ಸರಿ ಹೋಯಿತು. ಒಂದು ಕ್ಷಣ ತನ್ನೆದುರು ನಿಂತ ಮೊಮ್ಮಗಳನ್ನು ಕಣ್ತುಂಬ ನೋಡಿದರು ಅಜ್ಜಿ. ಅವರ ಮನಸಿನಲ್ಲಿ ಆನಂದದ ಸೆಳೆಯೊಂದು ಮಿಂಚಿತಾದರೂ ಅದನ್ನು ಮುಖದಲ್ಲಿ ತೋರಗೊಡದೆ, ತಾಹಿರಾ ‘‘ಅಜ್ಜೀ...’’ ಎಂದು ಕರೆಯುತ್ತಿದ್ದಂತೆಯೇ ಬಚ್ಚಲಿನೊಳಗೆ ನುಗ್ಗಿ ಬಾಗಿಲೆಳೆದುಕೊಂಡರು.
ತಾಹಿರಾಳಿಗೆ ಪೆಚ್ಚಾದಂತಾಯಿತು. ಅಡುಗೆ ಮನೆಗೆ ಬಂದವಳು, ‘‘ಮಾಮಿ, ಅಜ್ಜಿ ಯಾಕೆ ನನ್ನಲ್ಲಿ ಸಿಟ್ಟು ಮಾಡಿಕೊಂಡಿದ್ದಾರೆ. ಎದುರು ಸಿಕ್ಕಿದರೂ ಮಾತನಾಡಿಸಲಿಲ್ಲ. ಕರೆದರೂ ಓಗೊಡಲಿಲ್ಲ. ಒಂದು ನಗು ಕೂಡಾ ಇಲ್ಲ. ಬಚ್ಚಲು ಕೋಣೆಗೆ ಹೋದವರು ದಢಾರನೆ ಬಾಗಿಲು ಹಾಕಿಕೊಂಡರು. ನಾನು ಬಂದದ್ದು ಅವರಿಗೆ ಇಷ್ಟವಾಗಲಿಲ್ಲವಾ...?’’ ಎಂದು ಬೇಸರಿಸಿದಳು.
‘‘ಅವರಿಗೆ ಹಿಂದಿನದೆಲ್ಲಾ ನೆನಪಾಗಿರಬೇಕು. ಹಾಗೆ ನೆನಪಾದಾಗಲೆಲ್ಲಾ ಅವರು ಯಾರೊಂದಿಗೂ ಮಾತನಾಡೋಲ್ಲ. ಒಂದೆರಡು ದಿನ, ಮತ್ತೆ ಸರಿ ಹೋಗ್ತಾರೆ. ನೀನು ಬೇಸರ ಮಾಡಿಕೊಳ್ಳಬೇಡ. ಊಟ ಮಾಡು’’ ಎಂದರು.

‘‘ಅಜ್ಜಿಯನ್ನು ಕರೆಯಿರಿ. ಒಟ್ಟಿಗೆ ಊಟ ಮಾಡೋಣ ಮಾಮಿ’’ ‘‘ಬೇಡಮ್ಮಾ, ಸದ್ಯ ಅವರ ಸುದ್ದಿಗೆ ಹೋಗುವುದು ಬೇಡ. ನೀನು ಊಟ ಮಾಡು’’ ಎನ್ನುತ್ತಾ ಬಡಿಸತೊಡಗಿದರು.
‘‘ಮತ್ತೆ ಅಜ್ಜಿ ಊಟ ಮಾಡುವುದಿಲ್ಲವಾ...?’’
‘‘ಮಾಡಬಹುದು ನೋಡುವಾ, ಬೆಳಗ್ಗೆ ಏನೂ ತಿಂದಿಲ್ಲ’’
(ರವಿವಾರದ ಸಂಚಿಕೆಗೆ)

Writer - ಮುಹಮ್ಮದ್ ಕುಳಾಯಿ

contributor

Editor - ಮುಹಮ್ಮದ್ ಕುಳಾಯಿ

contributor

Similar News