ಭೀಕರ ಅಪಘಾತದ ಬಳಿಕ 6 ಮಂದಿಗೆ ಜೀವದಾನ ನೀಡಿದ 17 ವರ್ಷದ ಭವೇಶ್

Update: 2016-06-27 08:44 GMT

ಮುಂಬೈ, ಜೂ.27: ಕಿಕ್ಕಿರಿದು ತುಂಬಿದ್ದ ರೈಲಿನಿಂದ ಬಿದ್ದು ಸಾವನ್ನಪ್ಪಿದ 17 ವರ್ಷದ ಕಾಲೇಜು ವಿದ್ಯಾರ್ಥಿ ಭವೇಶ್ ಆರು ಮಂದಿಗೆ ಜೀವದಾನ ನೀಡಿದ್ದಾನೆ. ಆತನ ಅಂಗಗಳನ್ನು ಆರು ಮಂದಿಗೆ ಕಸಿ ಮಾಡಿ ಅವರಿಗೆ ಹೊಸ ಜೀವ ನೀಡಲಾಗಿದೆ.

ಕಳೆದ ಮಂಗಳವಾರ ವಡಾಲದಲ್ಲಿರುವ ತನ್ನ ಕೆ.ಜೆ. ಸೋಮಯ್ಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭವೀಶ್ ದಿಗ್ಗೆ ಕಾರ್ಯಕ್ರಮ ಮುಗಿದ ಕೂಡಲೇ ಮನೆಗೆ ಬರುವುದಾಗಿ ಹೇಳಿದ್ದ. ಆತ ಹಾಗೂ ಆತನ ಗೆಳೆಯರು ಕಿಕ್ಕಿರಿದು ತುಂಬಿದ್ದ ರೈಲಿನೊಳಗೆ ಪ್ರವೇಶಿಸಿದ್ದರೂ ಭವೇಶ್ ಜಾರಿ ಹಳಿಗೆ ಬಿದ್ದಿದ್ದ. ಅಪಘಾತದಿಂದ ತಲೆಗೆ ತೀವ್ರ ಗಾಯಗಳುಂಟಾಗಿ ಆತನನ್ನು ಘಾಟ್‌ಕೋಪರ್‌ನ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆತನ ಸ್ಥಿತಿ ಚಿಂತಾಜನಕವಾಗಿದೆಯೆಂದು ತಿಳಿಸಿದ ನಂತರ ಆತನ ಕುಟುಂಬ ಆತನ ಅಂಗಗಳನ್ನು ದಾನ ಮಾಡಲು ನಿರ್ಧರಿಸಿತು.

ಅಂತೆಯೇ ಝೋನಲ್ ಟ್ರಾನ್ಸ್‌ಪ್ಲಾಂಟ್ ಕೊ-ಆರ್ಡಿನೇಶನ್ ಕಮಿಟಿಯ ಸಹಯೋಗದೊಂದಿಗೆ ಆತನನ್ನು ವಿಕ್ರೋಲಿಯಲ್ಲಿರುವ ಗೋದ್ರೇಜ್ ಸ್ಮಾರಕ ಆಸ್ಪತ್ರೆಗೆ ಸಾಗಿಸಲಾಗಿ ಅಲ್ಲಿ ಆತನ ಹೃದಯ, ಲಿವರ್, ಕಿಡ್ನಿ ಹಾಗೂ ಕಾರ್ನಿಯಾಗಳನ್ನು ಶಸ್ತ್ರಕ್ರಿಯೆ ಮೂಲಕ ಹೊರತೆಗೆಯಲಾಯಿತು.
ಭವೇಶ್‌ನ ಹೃದಯವನ್ನು ಅಂಧೇರಿಯಲ್ಲಿರುವ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಕಸಿ ಮಾಡಲಾಯಿತಾದರೆ, ಆತನ ಲಿವರ್‌ನ್ನು ಗ್ಲೋಬಲ್ ಆಸ್ಪತ್ರೆಯಲ್ಲಿ 76 ವರ್ಷದ ವ್ಯಕ್ತಿಯೊಬ್ಬರಿಗೆ ಕಸಿ ಮಾಡಲಾಯಿತು. ಎರಡು ಕಿಡ್ನಿಗಳನ್ನು ಜಸ್ಲೋಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 29 ವರ್ಷದ ಯುವತಿ ಹಾಗೂ ಗೋದ್ರೇಜ್ ಆಸ್ಪತ್ರೆಯಲ್ಲಿದ್ದ 42 ವರ್ಷದ ವ್ಯಕ್ತಿಯೊಬ್ಬರಿಗೆ ಕಸಿ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News