ಎನ್ನ ಕಿವುಡನ ಮಾಡಯ್ಯ!

Update: 2016-07-07 18:09 GMT

ಅಪರೂಪಕ್ಕೆ ಈ ಜಗದ ಜಂಜಡಗಳನ್ನು ತೊರೆದು ಆಪ್ತ ಕ್ಷಣಗಳಿಗಾಗಿ ಹಂಬಲಿಸುವುದೇ ಸುಖವನ್ನು ನೀಡುತ್ತದೆ. ಸದ್ದು ಮತ್ತು ಸುದ್ದಿ ಎಂದಿಗೂ ನಿರಾತಂಕವಲ್ಲ. ನೋಡುವ ಕಣ್ಣನ್ನು ಮುಚ್ಚಿ ನಾನೇನನ್ನೂ ನೋಡುವುದಿಲ್ಲ ಎನ್ನಬಹುದು; ಮಾತನಾಡುವ ನಾಲಿಗೆಯನ್ನು ಹದ್ದುಬಸ್ತಿ ನಲ್ಲಿಟ್ಟು ಮೌನಕ್ಕೆ ಶರಣಾಗಬಹುದು; ಆದರೆ ಕೇಳಿಸುವ ಮಾಲಿನ್ಯಕ್ಕೇನು ಮಾಡಬಹುದು? ಈ ಜಗತ್ತಿನಲ್ಲಿ ಮಾತಿಲ್ಲದ, ಸದ್ದಿಲ್ಲದ, ಸುದ್ದಿ ತಲುಪದ ಜಾಗವೇನಾದರೂ ಇದ್ದರೆ ಅಲ್ಲಿ ಮನುಷ್ಯನಿಗೆ ಬದುಕಲು ಬೇಕಾದ ಜೀವಜಲ, ಉಸಿರು ಸಿಗಲಾರದು. ಅಂತಹ ಜಗತ್ತನ್ನು ನಮ್ಮ ಹಿರಿಯರು ಸ್ವರ್ಗ, ವೈಕುಂಠ, ಕೈಲಾಸ ಮುಂತಾದ ರೂಪಕಗಳೊಂದಿಗೆ ವಿವರಿಸಿದ್ದಾರೆ. ಅಂತಹ ಜಗತ್ತೊಂದು ಇದೆಯೆಂಬ ಬಗ್ಗೆ ನಂಬಿಕೆಯ ಹೊರತಾಗಿ ಯಾವ ಪುರಾವೆಯೂ ಇಲ್ಲ. ಅಲ್ಲಿ ಏನಿದೆಯೆಂಬುದು ಯಾರಿಗೂ ಗೊತ್ತಿಲ್ಲ. ಅಲ್ಲಿಗೆ ಹೋದರೆನ್ನಲಾದ ಮಂದಿ ಯಾವ ವರದಿಯನ್ನೂ ನೀಡಿಲ್ಲ. ಆದರೆ ಕಲ್ಪನೆಯ ಕುದುರೆ ಕೆನೆದಾಗ ಈ ರೂಪಕಗಳಿಗೆ ಮೂರ್ತ ರೆಕ್ಕೆ-ಪುಕ್ಕ ಸೇರಿ ಸಾಕಾರ ಜಗತ್ತಾಗುತ್ತದೆ. ನಮ್ಮ ಪುರಾಣಗಳಲ್ಲಿ, ಮತ್ತು ಅವುಗಳನ್ನಾಧರಿ ಸಿದ ಚಿತ್ರ, ಶಿಲ್ಪಮುಂತಾದ ಕಲೆಗಳಲ್ಲಿ, ನಾಟಕ, ಸಿನೆಮಾ ಮುಂತಾದ ದೃಶ್ಯಾವಳಿಗಳಲ್ಲಿ ಇರುವ ಮೂರ್ತಗಳು ಇಂತಹವೇ. ಕುರ್‌ಆನ್‌ನಲ್ಲೂ ಸ್ವರ್ಗದ ಕಲ್ಪನೆಯಿದೆ: ಸ್ವರ್ಗದ ಬೋರೆಹಣ್ಣಿಗೆ ಮುಳ್ಳುಗಳಿಲ್ಲ ಎಂಬ ಮಾತಿದೆ. ನಂಬಿಕೆಗೆ ಪರಿಧಿಗಳಿಲ್ಲ; ಆದ್ದರಿಂದ ಮಿತಿಗಳಿಲ್ಲ. ಎಷ್ಟು ನಡೆದರೂ ಮುಗಿಯದ ಹಾದಿ.
ಶಬ್ದಗುಣಂ ಆಕಾಶಂ ಎಂದಿದ್ದರು. ವೇದ ಪೂರ್ವ ಭಾರತದಲ್ಲಿ ಪಂಚಭೂತಗಳನ್ನು ಆರಾಧಿಸಲಾಗುತ್ತಿತ್ತೇ ವಿನಾ ಇಂದು ನಾವು ಕಾಣುವ, ಪೂಜಿಸುವ ದೇವದೇವತೆಗಳನ್ನಲ್ಲ. ಭೂಮಿ, ಗಾಳಿ, ನೀರು, ಬೆಂಕಿ ಮತ್ತು ಆಕಾಶ ಆಗಿನ ದೇವರುಗಳು. ಇವೆಲ್ಲ ಸ್ವಯಂ ಆಕಾರವನ್ನು ಹೊಂದಿದವಲ್ಲ. ಆದ್ದರಿಂದ ಅವನ್ನು ಹೀಗೇ ಎಂದು ಚಿತ್ರಿಸುವಂತಿಲ್ಲ; ವರ್ಣಿಸುವಂತಿಲ್ಲ. ಅವಕ್ಕೆ ಮಾಧ್ಯಮ ಬೇಕು. ಅದಕ್ಕೆ ಉಪಾಧಿ ಎನ್ನುತ್ತಾರೆ. ಬೆಂಕಿ ಉರಿಯುವುದಕ್ಕೆ ಸೌದೆಯೋ ಇನ್ನೇನೋ ಮಾಧ್ಯಮ ಬೇಕು. ನೀರು ತಾನು ಹರಿಯುವ ಮೇಲ್ಮೈಯ ಅಥವಾ ತುಂಬಿಕೊಂಡ ಆವರಣದ ಆಧಾರದಲ್ಲಿ ಆಕಾರ ಪಡೆಯುತ್ತದೆ. ಗಾಳಿಯನ್ನು ಚಿತ್ರಿಸುವುದು ಹೇಗೆ? ಭೂಮಿಯ ಚಿತ್ರ ಇಲ್ಲಿ ಒಂದು ಥರ; ಹೊರಗೆ ನಿಂತರೆ ಇನ್ನೊಂದು ಥರ. ಆಕಾಶದಲ್ಲಿ ಕಣ್ಣು ಕೋರೈಸುವ ಸೂರ್ಯ, ಇರುಳು ಕಾಣುವ ಚಂದ್ರ, ಅಮಾವಾಸ್ಯೆಯ ಕತ್ತಲು, ಗುಡುಗು, ಸಿಡಿಲು, ಮಿಂಚು, ಸುರಿವ ಜಲಧಾರೆ, ಹೀಗೆ ಒಂದಲ್ಲ ಹತ್ತಾರು ಬೆರಗಿನ ಸುದ್ದಿಗಳನ್ನು, ಸದ್ದನ್ನು ಕಂಡ ಕಣ್ಣು, ಕೇಳಿದ ಕಿವಿ ಅವೆಲ್ಲವನ್ನೂ ಮಾತಿಗೆ ಅಳವಡಿಸಲಾಗದೆ ಆಕಾಶಕ್ಕೆ ಆರೋಪಿಸಿತು. ಇವೆಲ್ಲವೂ ವಿವರಿಸಲಾಗದ ಸತ್ಯಗಳು. ಇವನ್ನು ಬಿಟ್ಟು ಬದುಕಿಲ್ಲವೆಂಬುದನ್ನು ಮನದಟ್ಟುಮಾಡಿಕೊಂಡು ಬದುಕಿತು. ಗಾಯತ್ರಿ ಮಂತ್ರವು ಸೂರ್ಯನನ್ನು ಕುರಿತಾದ್ದು. ಬೆಳಗಿನ ಮಂದಬೆಳಕಿನಲ್ಲಿ ಕಾಡಿನ ದಟ್ಟ ಮರಗಿಡಪೊದೆಗಳ ನಡುವೆ ಇಣುಕುವ ಸೂರ್ಯಕಿರಣಗಳನ್ನು ಕಂಡ ವನವಾಸಿಯೊಬ್ಬ ಈ ಬೆಳಕು ತನ್ನ ಬುದ್ಧಿಯನ್ನು ಜಾಗ್ರತಗೊಳಿಸಲಿ ಎಂದು ಬಯಸಿದ; ಲೋಕಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ. ಅದು ‘ಧೀಯೋ ಯೋನಃ ಪ್ರಚೋದಯಾತ್’ ಎನ್ನಿಸಿತು. ಯಾವುದೇ ಒಂದು ಧರ್ಮದ ಹಂಗಿಗೆ ಇಂತಹ ಉದಾತ್ತವಾದ ಕಲ್ಪನೆಗಳು ಸೀಮಿತವಾಗಿಲ್ಲ. ದುರದೃಷ್ಟವೆಂದರೆ ಇವನ್ನೆಲ್ಲ ಒಂದೊಂದು ಧರ್ಮಕ್ಕೆ, ಮತಗಳಿಗೆ ಹೈಜಾಕ್ ಮಾಡಿದ್ದರಿಂದ ಅವು ಇತರರಿಗೆ ಅಸ್ಪಶ್ಯವಾಯಿತು. ಎಲ್ಲ ಧರ್ಮಗಳಲ್ಲೂ ಮತಗಳಲ್ಲೂ ಇಂತಹ ವಿಚಾರಗಳಿವೆ. ಅವನ್ನು ಕೃತಕ ಗಡಿರೇಖೆೆಗಳ ಮೂಲಕ ಪೇಟೆಂಟ್ ಮಾಡಿರುವ ಕಾರಣ ಅವನ್ನು ಸಾರ್ವತ್ರಿಕವೆಂದು ಸ್ವೀಕರಿಸಲು ಅನೇಕರಿಗೆ ಹಿಂಜರಿಕೆ. ಆದರೆ ವಿಶಾಲವಾದ ಮನಸ್ಸು ಇಂತಹ ಅಸಹಜ ಮಿತಿಗಳಿಂದ ಮುಕ್ತವಾಗಿ ಎಲ್ಲವನ್ನೂ ಸ್ವೀಕರಿಸುತ್ತದೆ ಮತ್ತು ತನ್ನೊಳಗೆ ಶಾಂತವಾಗಿರುತ್ತದೆ. ನದಿಗಳ ಅಬ್ಬರದ ಪ್ರವಾಹವನ್ನು ಸ್ವೀಕರಿಸಿಯೂ ಸಾಗರ ಶಾಂತವಾದ ಅಂತರಂಗವನ್ನು ಹೊಂದಿರುವುದಿಲ್ಲವೇ, ಹಾಗೆ.
 

ಶಬ್ದವನ್ನು ಸ್ವರವಾಗಿ ಪರಿವರ್ತಿಸಬಹುದು; ಇಲ್ಲವೇ ಸದ್ದಾಗಿ ಪರಿವರ್ತಿ ಸಬಹುದು. ಸ್ವರವಾದಾಗ ಅದು ಕಲೆಯಾಗುತ್ತದೆ; ಸದ್ದಾದಾಗ ಅದು ಸಹಿಸಬೇಕಾದ ಕಳೆಯಾಗುತ್ತದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಕಳೆ ಕಲೆಯನ್ನು ನುಂಗುತ್ತದೆ. ಕತ್ತಲು ಬೆಳಕನ್ನು ನುಂಗುವುದಿಲ್ಲ, ಬದಲಾಗಿ ಆವರಿಸುತ್ತದೆ ಮತ್ತೆ ಬಿಟ್ಟುಕೊಡುತ್ತದೆ. ತಮದ ಮಾಯೆಗೆ ದ್ಯುಮಣಿ ಸಿಕ್ಕುವುದಿಲ್ಲ. ಆದರೆ ಮಿತಿಯುಳ್ಳ ಮನಸ್ಸುಗಳಿಗೆ ಈ ಸದ್ದಿನಲ್ಲಿ ಸುಸ್ವರ ಕೇಳುವುದಿಲ್ಲ. ಇದಕ್ಕೂ ಅಪವಾದಗಳಿವೆ: ವ್ಯಾವಹಾರಿಕ ಜಗತ್ತಿನಲ್ಲಿ ಭಾರೀ ಸದ್ದಿನ ನಡುವೆಯೂ ಮಾತಿನಲ್ಲಿ ತೊಡಗುವವರನ್ನು ಕಾಣುತ್ತೇವೆ. ಹಿಂದೆ ಪಟ್ಟಣದ ಹೊಟೇಲ್‌ಗಳಲ್ಲಿ ಸಮೀಪದಲ್ಲೇ ವಾಹನಗಳ ಸದ್ದು, ಮಾತಿನ ಸದ್ದು, ಮತ್ತಿತರ ಸದ್ದಿನ ಗಡಣಗಳಿದ್ದರೂ ಇವೆಲ್ಲದರ ನಡುವೆಯೇ ಕೌಂಟರಿನಲ್ಲಿ ಕುಳಿತ ಮಾಲಕನೋ ಮ್ಯಾನೇಜರನೋ ಫೋನಿನಲ್ಲಿ ಮಾತನಾಡುತ್ತಿರುತ್ತಾನೆ. ಲೌಕಿಕದ ಈ ಭೌತಿಕ ಜಗತ್ತಿನ ಈ ಶಬ್ದಾಡಂಬರದಿಂದ ಮುಕ್ತಿ ಹೇಗೆ? ಕೆಲವರು ಇವೆಲ್ಲದರ ನಡುವೆ ಅನ್ಯಮನಸ್ಕರಾಗಿರುತ್ತಾರೆ. ಮಾರುಕಟ್ಟೆಯಲ್ಲಿ ಯಾವುದೂ ಕೇಳದವರಂತೆ ಅವಧೂತಪ್ರಜ್ಞೆಯಿಂದ ವಿಹರಿಸುವ ಮಂದಿ ಕಾಣಿಸುತ್ತಾರಲ್ಲವೇ? ಅವರನ್ನು ಭ್ರಮಾಜಗತ್ತಿನ ರಾಜರೆಂದು ಟೀಕಿಸು ವವರಿರಬಹುದು. ಆದರೂ ಅವರು ಪುಣ್ಯಾತ್ಮರು. ಅವರಿಗೆ ಈ ಜಗತ್ತಿನ ಪರಿವೆಯೇ ಇರುವುದಿಲ್ಲ. ನಿಮ್ಮಿಡನಿದ್ದೂ ನಿಮ್ಮಂತಾಗದೆ ಬದುಕುವ ಈ ಪರಿ ಎಲ್ಲರಿಗೂ ಒದಗದು. ಶಬ್ದಗುಣದಿಂದ ದೂರವಿರುವುದು ಅಥವಾ ಬಿಡುಗಡೆಯಾಗುವುದು ಹೇಗೆ? ಇತರ ಸಹಜ ಮನುಷ್ಯರು ಏನು ಮಾಡಬಹುದು? ಕಿವಿಗೆ ಹತ್ತಿಯನ್ನಿಟ್ಟುಕೊಳ್ಳಬಹುದು ಎನ್ನುತ್ತಾರೆ. ಈ ಪ್ರಯೋಗವನ್ನು ನಾನೂ ಮಾಡಿದ್ದೇನೆ. ಆದರೂ ಕೇಳಿಸುತ್ತದೆ. ಮಳೆಗಾಲ, ಚಳಿಗಾಲದಲ್ಲಿ ಮಲೆನಾಡಿನಲ್ಲಿ ಬಹುತೇಕ ಮಂದಿ ಕಿವಿಗೆ ಹತ್ತಿಯಿಟ್ಟುಕೊಳ್ಳುತ್ತಾರೆ. ಅದೇನೂ ಶಬ್ದಾಡಂಬರಕ್ಕೆ ಹೆದರಿ ಅಲ್ಲ; ಕಿವಿಗೆ ಗಾಳಿ ನುಗ್ಗುತ್ತದೆ ಮತ್ತು ಆ ಕಾರಣಕ್ಕೆ ಶೀತವಾಗುತ್ತದೆ ಅಥವಾ ಕಿವಿ ನೋಯುತ್ತದೆ ಎಂಬ ಕಾರಣಕ್ಕೆ. ಹೀಗೆ ಹತ್ತಿಯನ್ನು ಅಳವಡಿಸಿ ಕೊಂಡವರಿಗೂ ಹೊರಜಗತ್ತಿನ ಎಲ್ಲವೂ ಕೇಳಿಸುತ್ತದೆ. ಆದ್ದರಿಂದ ಹತ್ತಿಯನ್ನು ಶಬ್ದಪ್ರತಿಬಂಧಕವೆಂದು ನಂಬಬಾರದು. ಹೆಲ್ಮೆಟ್ ಹಾಕಿ ದ್ವಿಚಕ್ರವಾಹನಗಳನ್ನೋಡಿಸುವವರಿಗೆ ಹಾರ್ನ್ ಕೇಳಿಸುವುದಿಲ್ಲವೇ? ಹಿಂಬದಿಯಲ್ಲಿ ಕುಳಿತ ಹುಡುಗಿ ಪಿಸುಗುಟ್ಟಿದ್ದು ಕೇಳಿಸುವುದಿಲ್ಲವೇ? ಕೇಳಿಸಬೇಕೆಂದರೆ ಕೇಳುತ್ತದೆ; ಇಲ್ಲವೆಂದರೆ ಇಲ್ಲ. ಇದನ್ನು ಜಾಣ ಕಿವುಡು ಎನ್ನುವುದೂ ಉಂಟು. ಟೀಕೆ ವ್ಯಕ್ತವಾದಾಗ ತನಗೇನೂ ಕೇಳಿಸಿಲ್ಲವೆಂದು ಗಂಭೀರಮುಖಮುದ್ರೆಯೊಂದಿಗೆ ಮೌನಕ್ಕೆ ಶರಣಾದವರುಂಟು; ಸಹಜವಾಗಿ ನಕ್ಕು ಮುನ್ನಡೆದವರುಂಟು. ಪ್ರಾಯಃ ಈ ಸಂದರ್ಭಕ್ಕೇ ‘ವಚನಕಾರರು ಎನ್ನ ಕಿವುಡನ ಮಾಡಯ್ಯ ತಂದೆ’ ಎಂದಿರಬೇಕೇನೋ?
ಆದರೂ ಇಂತಹ ಸಂದರ್ಭಗಳಲ್ಲಿ ಪ್ರಶಾಂತವಾದ ವಾತಾವರಣವನ್ನು ಹುಡುಕಿ ಹೋದರೆ ಸ್ವಲ್ಪ ನಿರಾಳವಾಗುತ್ತದೆ. ಹಿಂದೆಲ್ಲ ಬೆಳಗು-ಬೈಗುಗಳಲ್ಲಿ ರಸ್ತೆಗಳಲ್ಲಿ, ಉದ್ಯಾನಗಳಲ್ಲಿ ನಡೆಯುವ ಪದ್ದತಿಯಿತ್ತು. ಇದರಿಂದಾಗಿ ಮೈಮನಸ್ಸುಗಳಿಗೆ ಒಂದಷ್ಟು ವ್ಯಾಯಾಮ, ಒಂದಷ್ಟು ವಿಶ್ರಾಂತಿ ಲಭಿಸುತ್ತಿತ್ತು. ಉದ್ಯಾನಗಳಲ್ಲಿರುವ ಕಲ್ಲುಬೆಂಚುಗಳಲ್ಲಿ ಕುಳಿತರೆ ಪ್ರಕೃತಿ ಯೊಂದಿಗೆ ಮೌನವಾಗಿ ಮಾತನಾಡಬಹುದಿತ್ತು. ಗಿಡಮರಗಳ ಉಸಿರು ಮನುಷ್ಯನ ಉಸಿರಿನೊಂದಿಗೆ ಒಂದಾಗುತ್ತಿತ್ತು. ಇಲ್ಲೂ ಒಂದು ಸಮನ್ವಯ ಸಮೀಕರಣವಿತ್ತು. ಮನುಷ್ಯನ ನಿಶ್ವಾಸದ ಅಂಗಾರಾಮ್ಲವನ್ನು ಸೇವಿಸಿ ಸಸ್ಯಗಳು ಮನುಷ್ಯನ ಉಚ್ಛ್ವಾಸಕ್ಕೆ ಅಗತ್ಯವಾದ ಆಮ್ಲಜನಕವನ್ನು ನೀಡುತ್ತಿದ್ದವು. ಇಂತಹ ದ್ಯುತಿಸಂಶ್ಲೇಷಣಾ ಕ್ರಿಯೆಯ ಲಾಭ ಮನುಷ್ಯನಿಗೆ. ಆದರೆ ಇದನ್ನೇ ಉಲ್ಟಾಗೊಳಿಸಿ ಮನುಷ್ಯ ತಾನು ಸಸ್ಯಗಳಿಗೆ ಅಗತ್ಯವಿರುವ ಅಂಗಾರಾಮ್ಲವನ್ನು ನೀಡುತ್ತಿದ್ದೇನೆಂಬ ಬಿಂಕವನ್ನೂ ತೋರಬಹುದು. ಹೇಗೂ ಇರಲಿ, ಇಲ್ಲೊಂದು ನಿಯಮ-ವಿನಿಮಯವಿದೆ.


ಆದರೆ ಈಗೀಗ ನಿಮಗೆ ಯಾವ ಉದ್ಯಾನದಲ್ಲೂ ಶಾಂತಿ ಲಭಿಸದು. ಅಲ್ಲಿ ಯಾರೋ ಓಡಿಸಿಕೊಂಡು ಬರುವಂತೆ ಓಡುವ ಮನುಷ್ಯರು, ಬದುಕಿಡೀ ಮುಖ ಸಿಂಡರಿಸಿಕೊಂಡು ಉದ್ಯಾನದಲ್ಲಷ್ಟೇ ಒಂದು ಗೊತ್ತಾದ ಅವಧಿಯಲ್ಲಿ ನೈಟ್ರಸ್ ಆಕ್ಸೈಡ್ ಸೇವಿಸಿದವರಂತೆ ನಗುವ ಮನುಷ್ಯರ ಗುಂಪು, ಕುಳಿತು ಹರಟೆ ಹೊಡೆಯುವ ಮನುಷ್ಯರು, ಜೋಡಿ ಹಕ್ಕಿಗಳಂತೆ ವಿಹರಿಸಲು ಬಂದು ಚಾಟ್ ಮಸಾಲಾ ಮುಂತಾದ ತಿಂಡಿಗಳನ್ನು ಕಬಳಿಸಲೇ ಬಂದವರಂತೆ ಮಾತನ್ನೂ ಮರೆತಂತೆ ತಿನ್ನುವ ಮನುಷ್ಯರು, ಇವರನ್ನು ನೋಡಿ ಗಹಗಹಿಸುವ, ಇಲ್ಲವೇ ಗಟ್ಟಿಯಾಗಿ ನಗುವ ಮನುಷ್ಯರು, ಜೊತೆಗೆ ಉದ್ಯಾನದ ಹೊರಗೆ ಹಾರ್ನ್ ಹಾಕುತ್ತ ಒಳಗಿನವರಿಗೆ ಸಂದೇಶವೋ ಸಂಜ್ಞೆಯೋ ನೀಡುವ ವಾಹನಗಳು ಮತ್ತು ಅವುಗಳ ಸರದಾರ ಮನುಷ್ಯರು, ಹೀಗೆ ಮೌನದ ಆವಾಸಸ್ಥಾನವಾಗಿರಬೇಕಾಗಿದ್ದ ಉದ್ಯಾನಗಳೂ ರಸ್ತೆಗಳೂ ಮಂದಿ ಗಿಜಿಗುಟ್ಟುವ ನಿ(ನ)ಲ್ದಾಣವಾಗಿವೆ. ಇದರಿಂದಾಗಿ ನಗರಗಳಲ್ಲಿ ರೈಲ್ವೇ ಸ್ಟೇಷನ್, ಮಾರ್ಕೆಟ್, ಉದ್ಯಾನ, ಶಾಲೆ ಇವುಗಳ ನಡುವೆ ಯಾವ ವ್ಯತ್ಯಾಸವೂ ಗೋಚರಿಸದೆ ಎಲ್ಲವೂ ಶಬ್ದಬ್ರಹ್ಮನ ಗೂಡುಗಳಾಗಿವೆ. ಬಸ್ಸಿನಂತಹ ಸಾರ್ವಜನಿಕ ಸಾರಿಗೆಯಲ್ಲಿ ನೋಡಿ: ಕೆಲವರು ಎಷ್ಟು ಗಟ್ಟಿಯಾಗಿ ಮಾತನಾಡುತ್ತಾರೆಂದರೆ ಆ ಸದ್ದಿಗೆ ಬಸ್ಸಿನ ಇಂಜಿನಿನ ಸದ್ದೇ ಚಿಕ್ಕದಾಗಿ ಕೇಳುತ್ತದೆ. ಈಚೆಗೆ ಮೊಬೈಲ್ ಬಂದ ನಂತರವಂತೂ ಜನರು ಅವುಗಳಲ್ಲಿ ಎಷ್ಟು ಗಟ್ಟಿಯಾಗಿ ಮಾತನಾಡುತ್ತಾರೆಂದರೆ ಸೀಮಿತ ದೂರದಲ್ಲಿ ರುವವರಿಗೆ (ಅಂದರೆ ಒಂದೇ ಟವರಿನೊಳಗಿರುವವರಿಗೆ) ಮೊಬೈಲ್‌ನ ಹೊರತಾಗಿಯೂ ಕೇಳಿಸಬಹುದು. ಇಂಥವರಿಗೆ ಮೊಬೈಲ್ ಆಫ್ ಮಾಡಿ ಮಾತನಾಡ್ರೀ ಎಂದು ಸಲಹೆ ನೀಡಬಹುದು. ದೇವರ ಭಜನೆ ಮಾಡುತ್ತೇವಲ್ಲವೇ? ದೇವಸ್ಥಾನ, ಇಗರ್ಜಿ, ಮಸೀದಿ ಇಲ್ಲೆಲ್ಲ ಭಗವಂತ ವಾಸ ಮಾಡುತ್ತಾನೆಂದು ನಂಬಲಾಗಿದೆ. ಆತನಿಗೆ ಒಂದು ನಿಯಮಿತ ಕಾಲದಲ್ಲಿ ಪೂಜೆ ನಡೆಯಬೇಕು. ಆತನನ್ನು ಮತ್ತು ಭಕ್ತರನ್ನು ಎಚ್ಚರಿಸಬೇಕು. ಇದಕ್ಕಾಗಿ ಆರಂಭವಾದ ಪ್ರಾರ್ಥನೆ ಈಗ ಭಗವಂತನನ್ನೂ ಭಕ್ತರನ್ನೂ ಎಚ್ಚರಿಸುವುದು ಹೋಗಲಿ, ಈ ಪ್ರಾರ್ಥನೆ ಈಗ ಧ್ವನಿವರ್ಧಕಗಳ ಸಹಾಯದಿಂದ ದೇವರಾಗಲೀ ಭಕ್ತರಾಗಲೀ ನಿದ್ರೆಯನ್ನೇ ಮಾಡದಂತೆ ಮತ್ತು ನಿದ್ರೆಗೆಟ್ಟು ಸದಾ ಕಣ್ಣು ಕೆಂಪಾಗಿರುವಂತೆ ಮಾಡುತ್ತಿದೆ. ಧ್ವನಿ ಮಾಲಿನ್ಯವನ್ನು ನಿಯಂತ್ರಿಸಲು ಅಗತ್ಯ ಕಾನೂನುಗಳಿದ್ದರೂ ಅವು ಶಾಸನ ಪುಸ್ತಕಗಳಲ್ಲಷ್ಟೇ ಉಳಿದಿವೆ.
ಧ್ಯಾನವೆಂದರೆ ಮೌನ; ಧ್ಯಾನದಲ್ಲಿ ಭಗವಂತ ಧ್ಯಾನಿಯೊಂದಿಗೆ ಮೌನವಾಗಿ ಮಾತನಾಡುತ್ತಾನಂತೆ. ಭಕ್ತನ ನಿಷ್ಠೆಯೇ, ಏಕಾಗ್ರತೆಯೇ ಪ್ರತಿಕ್ರಿಯೆ. ಗಟ್ಟಿಯಾಗಿ ಭಜನೆ ಮಾಡುವುದೆಂದರೆ ಭಕ್ತ ಭಗವಂತನೊಂದಿಗೆ ಮಾತನಾಡುವುದಂತೆ; ಆಗ ದೇವರು ಮೌನವಾಗಿರುತ್ತಾನಂತೆ; ಪ್ರತಿಕ್ರಿಯಿಸು ವುದಿಲ್ಲ. ಆದ್ದರಿಂದಲೇ ಪಾರಾಯಣಕ್ಕಿಂತ ಧ್ಯಾನ ಶ್ರೇಷ್ಠವೆನಿಸಿಕೊಂಡಿದೆ.
ಮೌನವಾಗಿ ಮಾತನಾಡಲು ಮನುಷ್ಯ ಕಲಿಯಬೇಕಾಗಿದೆ. ದೇವರ ಕೃಪೆಯಿದ್ದರೆ ಮೂಕನು ಮಾತನಾಡಬಹುದಂತೆ. ಬುದ್ಧಿಯಿದ್ದರೆ ವಾಚಾಳಿಯೂ ಮೌನಿಯಾಗಬಹುದು. ಈ ಸುಬುದ್ಧಿಯನ್ನು ಭಗವಂತ ಕರುಣಿಸಬೇಕು.
ಮಾತು ಮುತ್ತಾದರೆ ಮೌನ ಬಂಗಾರ. ಬದುಕಿನ ಹಗುರವನ್ನೂ ಗಾಂಭೀರ್ಯವನ್ನೂ ಗಮನಿಸಿ. ಯಾವುದು ಆಪ್ತವೋ ಅದನ್ನು ಪ್ರೀತಿಸಿ. ಆದರೆ ನಿಮ್ಮ ಚರ್ಯೆ ಯಾರನ್ನು ಗತಿಗೆಡಿಸದಿರಲಿ; ಕೆಣಕದಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News