ಮೋದಿ ಸರಕಾರದಿಂದ 45 ಸಾವಿರ ಕೋಟಿ ರೂ. ಸ್ಪೆಕ್ಟ್ರಂ ಹಗರಣ

Update: 2016-07-08 18:01 GMT

ಹೊಸದಿಲ್ಲಿ, ಜು.8: ಮೋದಿ ಸರಕಾರ ಆರು ದೂರಸಂಪರ್ಕ ಸೇವಾ ಸಂಸ್ಥೆಗಳಿಗೆ ರಹಸ್ಯವಾಗಿ 45 ಸಾವಿರ ಕೋಟಿ ರೂ. ಲಾಭವಾಗುವಂತೆ ನಿರ್ಧಾರ ಕೈಗೊಂಡಿದೆ ಎಂದು ಕಾಂಗ್ರೆಸ್ ಪಕ್ಷ ಗಂಭೀರ ಆರೋಪ ಮಾಡಿದೆ. ಸರಕಾರಕ್ಕೆ ಬರಬೇಕಿದ್ದ ದೊಡ್ಡ ಮೊತ್ತದ ಆದಾಯವನ್ನು ಕಂಪೆನಿಗಳು ತಪ್ಪಿಸಿವೆ ಎಂಬ ಸಿಎಜಿ ವರದಿಗೆ ಇದೀಗ ಪುಷ್ಟಿ ಸಿಕ್ಕಿದಂತಾಗಿದೆ.

ಕೇಂದ್ರಕ್ಕೆ ದೂರಸಂಪರ್ಕ ಸೇವಾಸಂಸ್ಥೆಗಳು ನೀಡಬೇಕಿದ್ದ ಕಂಪೆನಿಗಳ ಲೈಸನ್ಸ್ ಶುಲ್ಕ ಹಾಗೂ ಸ್ಪೆಕ್ಟ್ರಂ ಶುಲ್ಕವನ್ನು ಮರು ವೌಲ್ಯಮಾಪನ ಮಾಡುವಂತೆ ದೂರಸಂಪರ್ಕ ಇಲಾಖೆ ನೇಮಿಸಿದ ಲೆಕ್ಕಪರಿಶೋಧಕರಿಗೆ ಕೇಂದ್ರ ಸರಕಾರ ಸೂಚನೆ ನೀಡಿತ್ತು. ಹೇಗೆ ಸಿಎಜಿಯವರನ್ನು ಸೂಪರ್‌ಸೀಡ್ ಮಾಡಲು ಹೇಗೆ ಸಾಧ್ಯವಾಯಿತು ಹಾಗೂ ಕೇಂದ್ರಕ್ಕೆ ಬರಬೇಕಿದ್ದ 45 ಸಾವಿರ ಕೋಟಿ ರೂಪಾಯಿಯನ್ನು ಕೇಂದ್ರ ಏಕೆ ವಸೂಲಿ ಮಾಡಿಲ್ಲ ಎಂದು ಪಕ್ಷ ಪ್ರಶ್ನಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲಾ, ಈ ದೂರಸಂಪರ್ಕ ಹಗರಣ ಸುಮಾರು 45 ಸಾವಿರ ಕೋಟಿ ರೂಪಾಯಿಯದ್ದು. ಇಂಥ ಬೃಹತ್ ಹಗರಣವನ್ನು ಮೋದಿ ಸರಕಾರ ಮುಚ್ಚಿಹಾಕಿದೆ. ಇದು ಸರಕಾರದ ಬೊಕ್ಕಸಕ್ಕೆ ಆದ ನಷ್ಟವಾಗಿದ್ದು, ಇದನ್ನು ಸಿಎಜಿ ಕೂಡಾ ದೃಢೀಕರಿಸಿದ್ದಾರೆ. ಬಂಡವಾಳಶಾಹಿ ಉದ್ಯಮಿಗಳಿಗೆ ನೆರವು ನೀಡುವ ಏಕೈಕ ಉದ್ದೇಶದಿಂದ ಕೇಂದ್ರ ಈ ಕ್ರಮ ಕೈಗೊಂಡಿದೆ ಎಂದು ದೂರಿದರು.
ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ ಅಂದರೆ 2006-10ರ ಅವಧಿಯಲ್ಲಿ ಟೆಲಿಕಾಂ ಕಂಪೆನಿಗಳು ತೋರಿಸಿದ ಕಡಿಮೆ ಆದಾಯದ ಬಗ್ಗೆ ಹಾಗೂ 2016ರಲ್ಲಿ 46 ಸಾವಿರ ರೂ. ಕಡಿಮೆ ಆದಾಯ ಬಂದದ್ದನ್ನು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಜೊತೆಗೆ 12,488 ಕೋಟಿ ರೂ. ವಸೂಲಾಗದಿರುವ ಬಾಕಿ ಬಗ್ಗೆಯೂ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News