ಮುಂಬೈಯಲ್ಲಿ ಕಾಸರಗೋಡಿನಿಂದ ಕಾಣೆಯಾದವರ ಪೈಕಿ ಓರ್ವನ ಬಂಧನ

Update: 2016-07-11 04:45 GMT

  ಮುಂಬೈ,ಜುಲೈ 11: ಕಾಸರಗೋಡಿನಿಂದ ಇತ್ತೀಚಿಗೆ ಕಾಣೆಯಾಗಿದ್ದವರಲ್ಲಿ ಓರ್ವನನ್ನು ಮುಂಬೈಯ ಹೊಟೇಲೊಂದರಿಂದ ಬಂಧಿಸಲಾಗಿದೆಯೆಂದು ವೆಬ್‌ಪೋರ್ಟಲೊಂದು ವರದಿಮಾಡಿದೆ. ಕಾಸರಗೋಡಿನ ತೃಕ್ಕರಿಪುರದ ಬಾಕಿರುಮುಕ್ಕಿನ ಫೀರೋಝ್ ಖಾನ್‌ನನ್ನು ರವಿವಾರ ರಾತ್ರಿ ಮೊಬೈಲ್‌ಟವರ್ ಲೊಕೇಶನ್ ಕೇಂದ್ರೀಕರಿಸಿ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದ್ದು ಐಬಿ, ರಾ ನೇತೃತ್ವದಲ್ಲಿ ಆತನನ್ನು ಪ್ರಶ್ನಿಸಲಾಗುತ್ತಿದೆಯೆಂದು ವರದಿಯಾಗಿದೆ. ಕಾಸರಗೋಡಿನಿಂದ ಹದಿನೇಳು ಮಂದಿ ಕಾಣೆಯಾಗಿದ್ದರು.

ಹತ್ತು ದಿವಸ ಮೊದಲು ಫಿರೋಝ್ ಖಾನ್ ತನ್ನ ಮನೆಗೆ ಫೋನ್ ಮಾಡಿದ್ದ. ನಾವೆಲ್ಲ ಇಸ್ಲಾಮಿಕ್ ಸ್ಟೇಟ್‌ಗೆ ಸೇರಲು ಹೊರಟದ್ದೇವೆ ತಾನು ಈಗ ಮುಂಬೈಯಲ್ಲಿದ್ದೇನೆ ಎಂದು ಫಿರೋಝ್ ಖಾನ್ ಮನೆಯವರಿಗೆ ಫೋನ್‌ಮಾಡಿ ತಿಳಿಸಿದ್ದ. ತಂಡದ ಇತರರು ಸಿರಿಯಕ್ಕೆ ಹೊರಟು ಹೋಗಿದ್ದಾರೆಂದು ಈತ ಈ ವೇಳೆ ತಿಳಿಸಿದ್ದಾನೆನ್ನಲಾಗಿದೆ.

  ಈತನ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಈ ಆಧಾರದಲ್ಲಿ ಗುಪ್ತಚರ ವಿಭಾಗ ಫಿರೋಝ್ ಖಾನ್‌ನನ್ನು ಮುಂಬೈಯಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.ಈತನನ್ನು ಪ್ರಶ್ನಿಸಿದರೆ ತಂಡದ ಇತರರ ಕುರಿತು ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಗುಪ್ತಚರ ವಿಭಾಗ ಭಾವಿಸಿದೆ.

ಇದೇ ವೇಳೆ ಕಾಸರಗೋಡಿನಿಂದ ಕಾಣೆಯಾದ ಹದಿನೈದು ಮಂದಿಯ ತಂಡದಲ್ಲಿ ಹನ್ನೆರಡು ಮಂದಿ ಇರಾನ್‌ಗೆ ತಲುಪಿರುವ ಮಾಹಿತಿ ಲಭಿಸಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದ್ದು ಬೆಂಗಳೂರು,ಹೈದರಾಬಾದ್,ಮುಂಬೈಯಿಂದ ಈ ತಂಡ ಇರಾನ್‌ಗೆ ಪ್ರಯಾಣಿಸಿತ್ತೆನ್ನಲಾಗಿದೆ.ಕೋಝಿಕ್ಕೋಡ್‌ನ ಏಜೆನ್ಸಿಯೊಂದು ಇವರ ಪ್ರಯಾಣಕ್ಕೆ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಟ್ಟಿತ್ತು ಎನ್ನಲಾಗಿದೆ.

   ಕಾಸರಗೋಡಿನಿಂದ ಕಾಣೆಯಾದವರ ಪೈಕಿ ಪಾಲಕ್ಕಾಡ್ ಈಸಾ ಎಂಬವರ ಪತ್ನಿ ತಿರುವನಂತಪುರಂ ಆಟ್ಟುಕ್ಕಲ್‌ನ ಫಾತಿಮಾ ಯಾನೆ ನಿಮಿಷಾಳಕುರಿತು ತನಿಖೆ ನಡೆಸಬೇಕೆಂದು ಅವಳ ತಾಯಿ ಬಿಂದು ಎಂಬವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ರನ್ನು ಭೇಟಿಯಾಗಿ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News