ಗೋವಿಂದ ಪನ್ಸಾರೆ ಕೊಲೆಯನ್ನು ಕಣ್ಣಾರೆ ಕಂಡಿದ್ದ 14 ವರ್ಷದ ಬಾಲಕ

Update: 2016-07-13 02:58 GMT

ಮುಂಬೈ, ಜು.13: ಕಮ್ಯುನಿಸ್ಟ್ ಮುಖಂಡ ಗೋವಿಂದ ಪನ್ಸಾರೆ ಅವರನ್ನು ಕಳೆದ ವರ್ಷದ ಫೆಬ್ರವರಿಯಲ್ಲಿ ಕೊಲ್ಲಾಪುರದಲ್ಲಿ ಬೈಕ್‌ನ ಹಿಂಬದಿ ಸವಾರ ಹೇಗೆ ಗುಂಡಿಕ್ಕಿ ಕೊಂದಿದ್ದ ಎಂಬ ಘಟನೆಯನ್ನು 14ರ ಬಾಲಕ ಹಾಗೂ ಪ್ರತ್ಯಕ್ಷದರ್ಶಿ ಮೈನಡುಗುವ ರೀತಿಯಲ್ಲಿ ತನಿಖಾ ತಂಡದ ಮುಂದೆ ಬಣ್ಣಿಸಿದ್ದಾನೆ.

ಈ ದಾರುಣ ಘಟನೆಗೆ ಏಕೈಕ ಪ್ರತ್ಯಕ್ಷದರ್ಶಿಯಾಗಿದ್ದ ಬಾಲಕ ಆರೋಪಿಗಳನ್ನು ಪರೇಡ್‌ನಲ್ಲಿ ಗುರುತಿಸಿದ್ದ. ದಿಢೀರನೇ ನನಗೆ ಪಟಾಕಿ ಸಿಡಿದ ಸದ್ದು ಕೇಳಿಸಿತು. ಅತ್ತ ನೋಡಿದಾಗ ಮೋಟಾರ್‌ಬೈಕ್‌ನ ಹಿಂದೆ ಕೂತಿದ್ದ ಕುಳ್ಳಗಿನ ವ್ಯಕ್ತಿಯೊಬ್ಬ ಸಣ್ಣ ಗನ್ ಹಿಡಿದಿದ್ದ. ಆತ ಗುಂಡು ಹಾರಿಸಿದಾಗ ಅದು ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯೊಬ್ಬರಿಗೆ ತಗುಲಿತು. ತಕ್ಷಣ ಆಕೆ ಬಿದ್ದಳು. ತಕ್ಷಣ ಬೈಕ್ ಸವಾರ ಯು ಟರ್ನ್ ತೆಗೆದುಕೊಂಡ. ಆಗ ಬೈಕ್ ಸೈಕಲ್ ಸವಾರನೊಬ್ಬನಿಗೆ ಢಿಕ್ಕಿ ಹೊಡೆಯಿತು. ಆತ ಕೂಡ ಬಿದ್ದ. ಆಗ ಫೂಟ್‌ರೆಸ್ಟ್ ಮೇಲೆ ನಿಂತ ಹಿಂಬದಿ ಸವಾರ ಅವರತ್ತ ಬರುತ್ತಿದ್ದ ವೃದ್ಧರೊಬ್ಬರ ಮೇಲೆ ಗುರಿಯಿಟ್ಟು ಗುಂಡು ಹೊಡೆದ. ಹಲವು ಸುತ್ತು ಆತ ಗುಂಡು ಹಾರಿಸಿದ. ವೃದ್ಧ ವ್ಯಕ್ತಿ ಕೆಳಕ್ಕೆ ಕುಸಿದರು ಎಂದು ಘಟನೆಯ ವಿವರ ನೀಡಿದ್ದಾನೆ.

2015ರ ಫೆಬ್ರವರಿ 16ರಂದು ಪನ್ಸಾರೆ ಹಾಗೂ ಅವರ ಪತ್ನಿಯ ಮೇಲೆ ಇಬ್ಬರು ಮೋಟರ್‌ಬೈಕ್‌ನಲ್ಲಿ ಬಂದ ಹಂತಕರು ಕೊಲ್ಲಾಪುರ ಬಳಿ ದಾಳಿ ಮಾಡಿದ್ದರು. ಪತ್ನಿ ಉಳಿದುಕೊಂಡು ಸಿಪಿಐ ಮುಖಂಡ ಪನ್ಸಾರೆ ಮುಂಬೈ ಆಸ್ಪತ್ರೆಯಲ್ಲಿ ಫೆಬ್ರವರಿ 20ರಂದು ಮೃತಪಟ್ಟಿದ್ದರು.

ಅಜ್ಜ ಕುಸಿದು ಬೀಳುತ್ತಿದ್ದುದನ್ನು ನೋಡಿದ ತಕ್ಷಣ ನಾನು ಅತ್ತ ಧಾವಿಸಿದೆ. ಆದರೆ ಮತ್ತೊಬ್ಬ ವೃದ್ಧರು ನನ್ನನ್ನು ತಡೆದರು. ಇಲ್ಲಿ ನೀನೇನು ಮಾಡುತ್ತಿದ್ದಿ? ಓಡು, ಓಡು ಎಂದು ನನಗೆ ಹೇಳಿದರು. ಭಯದಿಂದ ನಾನು ಓಡಿದೆ. ನಾನು ಸೈಕಲ್‌ನಲ್ಲೂ ಕೂರಲಾಗದೇ, ತರಗತಿಯತ್ತ ಓಡಿದೆ ಎಂದು ವಿವರಿಸಿದ್ದಾನೆ. ಕೊಲ್ಲಾಪುರದ ಹಿರಿಯ ಪೊಲೀಸ್ ಅಧಿಕಾರಿಗಳು ಈ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News