ಭಾರತೀಯತೆಯ ಹೆಮ್ಮೆ ಮತ್ತು ವಾಸ್ತವ
ನನ್ನ ಆಪ್ತರೊಬ್ಬರು ಹೇಳಿದರು: ‘‘ನನಗೆ ಈ ಭಾರತೀಯತೆಯಲ್ಲಿ ನಂಬಿಕೆಯೇ ಹೊರಟು ಹೋಗಿದೆ.’’ ನನಗೆ ಅಚ್ಚರಿಯಾಯಿತು, ಮತ್ತು ಅವರಲ್ಲಿ ಕೇಳಿದೆ: ‘‘ಯಾಕೆ?’’ ‘‘ನಾವೊಮ್ಮೆ ಮದುವೆ ದಿಬ್ಬಣ ಹೋಗಲು ಕಾಂಟ್ರಾಕ್ಟ್ ಬಸ್ಸು ಹತ್ತಿದೆವು. ಅಲ್ಲಿಯವರೆಗೆ ಭಾವ, ಮಾವ ಎಂದು ಮಾತನಾಡುತ್ತಿದ್ದ ಯುವಕರೆಲ್ಲ ಇತರರನ್ನು ನೂಕಿ, ತಳ್ಳಿ, ಬಸ್ಸಿನ ಆಯಕಟ್ಟಿನ-ಅಂದರೆ ಮುಂದಿನ, ಕಿಟಿಕಿ ಬದಿಯ ಸೀಟುಗಳನ್ನು ಹಿಡಿದರು. ನಮ್ಮ ಸಮೀಪ ಬಂಧುವೊಬ್ಬರು ಸುಮಾರು 80 ವರ್ಷ ದಾಟಿದವರು ಈ ನೂಕುನುಗ್ಗಲಿನಲ್ಲಿ ಮೇಲೇರಲು ಸಾಧ್ಯವಾಗದೆ ಕೊನೆಗೆ ಬಸ್ಸು ಹತ್ತಿದರು. ಆ ಹೊತ್ತಿಗೆ ಬಸ್ಸಿನ ಸೀಟುಗಳೆಲ್ಲ ಭರ್ತಿಯಾಗಿದ್ದವು. ಅವರು ನಿಂತರು. ಅಷ್ಟು ಮಂದಿಯಲ್ಲಿ, ನೆನಪಿಡಿ, ಎಲ್ಲರೂ ಪರಸ್ಪರ ಬಂಧುಗಳೇ, ಯಾರೂ ಅವರಿಗೆ ಸೀಟು ಕೊಡಲು ಮುಂದೆ ಬರಲಿಲ್ಲ, ನಾನು ಹಿಂದೆ ಕುಳಿತಿದ್ದವನು ಅವರಿಗೆ ಸೀಟು ಬಿಟ್ಟುಕೊಟ್ಟೆ, ಜೊತೆಗೆ ಬಂಧು-ಬಳಗ ಮುಂತಾದ ನಂಬಿಕೆಗಳನ್ನೂ ನಮ್ಮ ಹಿರಿದಾದ ಸಂಸ್ಕೃತಿಯೆಂದು ನಾವು ಕರೆಯುವ ಈ ಭಾರತೀಯತೆಯ ಕುರಿತ ಗೌರವವನ್ನೂ ಕಳೆದುಕೊಂಡೆ.’’
ಇದೊಂದು ಚಿಕ್ಕ ಘಟನೆ. ಇಷ್ಟಕ್ಕೆ ಭಾರತೀಯತೆಯನ್ನು ಅಗೌರವದಿಂದ ಕಾಣುವುದೆಂದರೆ? ವಿದೇಶಕ್ಕೆ ಹೋದ ಭಾರತೀಯರನ್ನು ಗಮನಿಸಿ: ಅವರು ಅಲ್ಲಿ ತಮ್ಮ ಮಾತೃ ಭೂಮಿಯಾದ ಈ ದೇಶವನ್ನು ನೆನಪಿಸುತ್ತಲೇ ಇರುತ್ತಾರೆ. ವಿದೇಶಕ್ಕೆ ಹೋದರೆ ನಮ್ಮ ದೇಶವನ್ನು ಗೌರವದಿಂದ ವಿವರಿಸಬೇಕು, ಸರಿ. ಆದರೆ ಸತ್ಯ ಬೇರೆಲ್ಲೋ ಇದ್ದರೆ ಆಗ ಉಭಯ ಸಂಕಟ. ಆದರೂ ಇದನ್ನು ಮೀರಿ ನಾವು ಹೊಗಳಬೇಕಾದರೂ ವಾಸ್ತವಸ್ಥಿತಿಯನ್ನು ನೆನಪಿನಲ್ಲಿಟ್ಟುಕೊಂಡೇ ನಮ್ಮ ಚಿಂತನೆಗಳನ್ನು ಜಾಗ್ರತೆಯಿಂದ ಹೊರಗೆಡಹಬೇಕು. ಇಲ್ಲವಾದರೆ ನಮ್ಮನ್ನೂ ಸಂಶಯದಿಂದ ಕಾಣುವ ಸ್ಥಿತಿಗೆ ನಾವೇ ಕಾರಣರಾಗುತ್ತೇವೆ. ದೇಶವಾಸಿಗಳಾದ ನಾವೀಗ ಒಂದು ಭೌಗೋಳಿಕ ಪರಿಧಿಯೊಳಗಿನ ನಮ್ಮ ಮಣ್ಣಲ್ಲೇ ಇದ್ದೇವೆ. ಇಲ್ಲಿನ ದೈನಂದಿನ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೇವೆ. ಇಲ್ಲಿನ ಸುಖ ದುಃಖಗಳ ಹೊಣೆ ನಮ್ಮದು. ನಮ್ಮ ಸಮಾಜ ಸುಖೀ ಸಮಾಜವಾಗಿರಬೇಕು; ನಮ್ಮ ಸಮಾಜದಲ್ಲಿ ಜಾತಿ, ಮತ, ಲಿಂಗ, ಜನಾಂಗ, ಭಾಷೆ ಇವೆಲ್ಲದರ ವೈವಿಧ್ಯಗಳ ನಡುವೆಯೂ ಸಾಮರಸ್ಯವಿರಬೇಕು ಎಂದು ತಿಳಿದಿರಬೇಕು ಮಾತ್ರವಲ್ಲ ಅದು ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಅಷ್ಟೇ ಅಲ್ಲ, ನಮ್ಮ ದೇಶದ ಕುರಿತು ವಿದೇಶಿಯರಿಗೆ ತಪ್ಪುಅಭಿಪ್ರಾಯ, ಕಲ್ಪನೆ ಮೂಡದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮದೇ. ಇಷ್ಟೆಲ್ಲ ಕರ್ತವ್ಯಗಳನ್ನು ನಿಭಾಯಿಸಿದರೆ ಮಾತ್ರ ನಾವು ಗೌರವಕ್ಕೆ ಪಾತ್ರರಾಗುತ್ತೇವೆ; ಅರ್ಹರಾಗುತ್ತೇವೆ. ಹಾಗಲ್ಲದೆ ನಾವು ಹೇಗಾದರೂ ಇರುತ್ತೇವೆ; ನಮ್ಮನ್ನು ಗೌರವಿಸಿ ಎಂದರೆ ಅದು ಸಾಧ್ಯವಾಗುವುದಾದರೂ ಹೇಗೆ?
ಕೆಲವು ವಿಚಾರಗಳನ್ನು ಚರ್ಚಿಸೋಣ: ನಿರ್ಣಯ ಜಿಜ್ಞಾಸೆಗೆ ಬಿಟ್ಟದ್ದು. ಮೇಲೆ ಉದಾಹರಿಸಿದ ಪ್ರಸಂಗವನ್ನೇ ಮೆಲುಕುಹಾಕೋಣ: ಹಿರಿಯರನ್ನು ಗೌರವಿಸಬೇಕೆಂಬುದು ಭಾರತೀಯತೆ. ಇದು ಇಲ್ಲಿರುವಷ್ಟು ಇನ್ನೆಲ್ಲೂ ಇಲ್ಲವೆಂದು ನಮ್ಮ ದೇಶಭಕ್ತರು, ಸಾಧು-ಸಂತರು ಮತ್ತಿತರ ವಕ್ತಾರರು ಜಗತ್ತಿನ ಉದ್ದಗಲಕ್ಕೆ ಉದಾಹರಿಸುತ್ತಾರೆ. ನಾವು ನಿಜಕ್ಕೂ ಇದನ್ನು ಪಾಲಿಸುತ್ತಿದ್ದೇವೆಯೇ? ನಮ್ಮ ಅನೇಕ ಹಿರಿಯರು ಅದರಲ್ಲೂ ಶ್ರೀಮಂತರು ಇಂದು ವೃದ್ಧಾಶ್ರಮಗಳಲ್ಲಿ ಜೀವಿಸುತ್ತಿದ್ದಾರೆ. ವೃದ್ಧರು ವಾನಪ್ರಸ್ಥವನ್ನು ಅನುಭವಿಸ ಬೇಕೆಂಬುದು ನಮ್ಮ ಸಾಂಪ್ರದಾಯಿಕ ನಂಬಿಕೆ. ತಲೆಗೂದಲು ಬೆಳ್ಳಗಾ ದರೆ ಮಗನಿಗೆ ಪಟ್ಟಕಟ್ಟಿ ಕಾಡಿಗೆ ಹೋಗುತ್ತಿದ್ದ ರಾಜರಿದ್ದರಂತೆ. ಆದರೆ ಇಂದು ಪರಿಸ್ಥಿತಿ ಎಷ್ಟು ದುರಂತಮಯವಾಗಿದೆಯೆಂದರೆ ತಮ್ಮ ಮಕ್ಕಳು ಇಂಗ್ಲೆಂಡ್, ಅಮೆರಿಕಗಳಲ್ಲಿ ಉನ್ನತ ಹುದ್ದೆಗಳಲ್ಲಿದ್ದಾರೆಂದು ಇತರರ ಮುಂದೆ ಬೀಗುವ ವೃದ್ಧರು ಒಳಗೊಳಗೇ ಮಾನಸಿಕವಾಗಿ ಕೊರಗುತ್ತಾ, ಬೌದ್ಧಿಕವಾಗಿ ಕೊಳೆಯುತ್ತಾ ಸಾವನ್ನೇ ಕಾಯುತ್ತಿರುತ್ತಾರೆ. ಬೆಂಗಳೂರಿನ ವೃದ್ಧಾಶ್ರಮವೊಂದರಲ್ಲಿ ವಿಶ್ವವಿದ್ಯಾನಿಲಯವೊಂದರ ಮಾಜಿ ಉಪಕುಲಪತಿಯೊಬ್ಬರಿದ್ದರು. ಇನ್ನೊಂದು ವೃದ್ಧಾಶ್ರಮದಲ್ಲಿ ತನ್ನನ್ನು ಕಾಣಲು ಬಂದ ಮಗನ ಕಾಲು ಹಿಡಿದುಕೊಂಡು ‘‘ಬೇಕಾದರೆ ನಿನ್ನ ಮನೆಕೆಲಸ ಮಾಡಿಕೊಂಡಿರುತ್ತೇನೆ; ನನ್ನನ್ನು ಈ ನರಕದಿಂದ ಕರೆದುಕೊಂಡು ಹೋಗು ಮಗನೇ’’ ಎಂದು ವೃದ್ಧರೊಬ್ಬರು ರೋಧಿಸುತ್ತಿದ್ದುದನ್ನು ನಾನೇ ನೋಡಿದ್ದೇನೆ. ಆಧುನಿಕ ಭಾರತದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ ಮಾತ್ರವಲ್ಲ, ಅವುಗಳ ಸ್ಥಾಪನೆಯನ್ನು ಸರಕಾರ ಬೆಂಬಲಿಸುತ್ತಿದೆಯೆಂಬುದು ವಿಷಾದಕರ.
ಇದು ಗಹನ ಗಂಭೀರ ವಾಸ್ತವವಾದರೆ ದಿನನಿತ್ಯದ ಡೈರಿಗಳಲ್ಲೂ ಇದೇ ಗೋಳು. ನಮ್ಮ ಬಸ್ಸುಗಳಲ್ಲಿ ಹಿರಿಯ ನಾಗರಿಕರಿಗೆಂದು ಮೀಸಲಾಗಿಟ್ಟ ಸೀಟುಗಳಲ್ಲಿ ನಮ್ಮ ಯುವಕ ಯುವತಿಯರು ಕೂರುತ್ತಾರೆ. ಹಿರಿಯ ನಾಗರಿಕರು ಬಂದರೂ ಕಲ್ಲಿನಂತೆ ಕೂರುತ್ತಾರೆಯೇ ವಿನಾ ಸೀಟಿನಿಂದ ಏಳುವುದಿಲ್ಲ. ಆ ಮುದುಕರು ಧೈರ್ಯ ಮಾಡಿ ತಮ್ಮ ಹಕ್ಕನ್ನು ಕೇಳಲು ಹೋದರೆ ‘‘ಹೋಗಯ್ಯಾ’’ ಎಂದು ಉಡಾಫೆಯ ಉತ್ತರ ಸಿಗುತ್ತದೆ; ಹಾಗಲ್ಲದಿದ್ದರೆ ಏನೂ ಹೇಳದೆ ನಕ್ಕು ಲೇವಡಿಮಾಡುತ್ತಾರೆ. ಹಿರಿಯ ನಾಗರಿಕರು ನಿಂತೇ ಪಯಣಿಸಬೇಕಾಗುತ್ತದೆ. ಮಹಿಳೆಯರ ಕುರಿತೂ ಇದೇ ಧೋರಣೆ: ವಿಶ್ವದೆಲ್ಲೆಡೆ ನಾವು ನಮ್ಮ ಹಿರಿಮೆಯನ್ನು ಹೇಳುವಾಗ ಈ ಮಹಿಳೆಯರನ್ನು ಗೌರವಿಸುವ ಪ್ರಸಂಗ ಸಾಕಷ್ಟು ಸಲ ಹೇಳಲ್ಪಡುತ್ತದೆ. ಭಾರತಕ್ಕೂ ಪಾಶ್ಚಾತ್ಯರಿಗೂ ಏನು ವ್ಯತ್ಯಾಸ ವೆಂದು ಕೇಳಿದಾಗ ಸ್ವಾಮಿ ವಿವೇಕಾನಂದರು ‘‘ನಮ್ಮಲ್ಲಿ ಪತ್ನಿಯೊಬ್ಬಳನ್ನು ಹೊರತು ಪಡಿಸಿ ಇನ್ನೆಲ್ಲ ಮಹಿಳೆಯರನ್ನೂ ತಾಯಿಯಂತೆ ಕಾಣುತ್ತಾರೆ; ಆದರೆ ನಿಮ್ಮಲ್ಲಿ ಹಾಗಲ್ಲ- ತಾಯಿಯೊಬ್ಬಳನ್ನು ಹೊರತುಪಡಿಸಿ ಇನ್ನೆಲ್ಲರನ್ನೂ ಪತ್ನಿಯಂತೆ ಕಾಣುತ್ತೀರಿ’’ ಎಂದು ಹೇಳಿದರೆಂದು ಪ್ರತೀತಿ. ಅವರು ಹೇಳಿದರೋ ಬಿಟ್ಟರೋ ಗೊತ್ತಿಲ್ಲ; ಆದರೆ ಅವರ ಹೆಗಲ ಮೇಲೆ ನಿಂತು ನಾವು ಉನ್ನತಿಯನ್ನು ಕಾಣುತ್ತೇವೆ. ಆದರೆ ಈ ದೇಶದಲ್ಲಿ ಮಹಿಳೆಯರಿಗೆ ಶೌಚಾಲಯವಿಲ್ಲವೆಂದು ಅದೇ ಸ್ವಾಮಿ ವಿವೇಕಾನಂದರು ಪ್ರತಿಭಟಿಸಿ ದ್ದನ್ನು ನಾವು ನೆನಪಿಸುವುದೇ ಇಲ್ಲ. ನಮ್ಮಲ್ಲಿ ಅಹಲ್ಯಾ ಶಾಪ, ದ್ರೌಪದಿ ವಸ್ತ್ರಾಪಹಾರ ಮುಂತಾದ ಪೌರಾಣಿಕ ಪ್ರಸಂಗಗಳು ಹೋಗಲಿ, ಇತಿಹಾಸದ ಪುಟಗಳಲ್ಲೂ ಮಹಿಳೆ ಅವಮಾನವನ್ನು ಅನುಭವಿಸಿದ್ದು ನಾವೆಷ್ಟೇ ಮುಚ್ಚಿಕೊಂಡರೂ ಹೊರಗೆ ಕಾಣಿಸುತ್ತದೆ; ಇತ್ತೀಚೆಗಿನ ನಿರ್ಭಯ ಗ್ಯಾಂಗ್ ರೇಪ್ ಪ್ರಕರಣ ನಮ್ಮ ಉತ್ಸಾಹದ, ಹೆಮ್ಮೆಯ ಬಲೂನಿಗೆ ಚುಚ್ಚಿದ ಸೂಜಿಯೇ ಸರಿ.
ಇಲ್ಲಿ ಸತಿಸಹಗಮನ ಪದ್ದತಿಯಿತ್ತು, ಬಾಲ್ಯವಿವಾಹವಿತ್ತು. ವಿಧವೆ ಯರ ಬದುಕು ಬವಣೆಯದ್ದಾಗಿತ್ತು. ಹೆರಿಗೆಗಳಲ್ಲಿ ತಾಯಂದಿರು ತೀರಿಹೋಗುವುದು ಸಾಮಾನ್ಯವಾಗಿತ್ತು. ಇದನ್ನು 1920ರ ದಶಕದಲ್ಲಿ ಕ್ಯಾಥರಿನ್ ಮೆಯೊ ಎಂಬ ಐರೋಪ್ಯ ಮಹಿಳೆ ತನ್ನ ’’ಟಠಿಛ್ಟಿ ಐ್ಞಜಿ’’ ಕೃತಿಯಲ್ಲಿ ವಿವರಿಸಿದ್ದಾರೆ ಇದನ್ನು ಓದಿ ನಮ್ಮ ಸಮಾಜವನ್ನು ಉದ್ಧರಿಸುವ ಬದಲು ಆಕೆಯನ್ನು ಟೀಕಿಸಿದೆವು. ಗಾಂಧಿಯಂಥವರೇ ಆ ಕೃತಿಯನ್ನು ಜ್ಠಠಿಠಿಛ್ಟಿ ಜ್ಞಿಛ್ಚಿಠಿಟ್ಟೞ ್ಟಛಿಟ್ಟಠಿ ಎಂದು ತಿರಸ್ಕರಿಸಿದರು. ಒಳಗಿಂದೊಳಗೇ ಎಲ್ಲರಿಗೂ ಆಕೆ ಭಾರತದ ಭಯಾನಕ ರಹಸ್ಯಗಳನ್ನು ಹೇಳಿದ್ದಾಳೆಂಬ ಅರಿವಿತ್ತು.
ನಮ್ಮ ಶಿಕ್ಷಣ ನಮ್ಮ ಟ ್ಚಚ್ಝ್ಝಛಿ ಭಾರತೀಯತೆಯನ್ನು ಸಂರಕ್ಷಿಸುತ್ತದೆಯೆಂದು ತಿಳಿಯುತ್ತೇವೆ; ಅಥವಾ ಕೊನೇ ಪಕ್ಷ ಹೇಳುತ್ತೇವೆ. ಆದರೆ ಆಧುನಿಕತೆಯ ಭರಾಟೆಯಲ್ಲಿ ಮಾತೃಭಾಷೆ ಮರೆತುಹೋಗುತ್ತಿದೆ; ಮಹಾ ನಗರಗಳ ಫಳಫಳನೆ ಹೊಳೆಯುವ ಸುಳ್ಳುಗುಳ್ಳೆಯ ಬದುಕೇ ನಮ್ಮದಾಗಿದೆ. ಎಲ್ಲಿ ಹೋದವು ಭಾರತೀಯತೆಯೆಂದು ಕರೆಯಲ್ಪಡುವ, ನಾವು ಹೆಮ್ಮೆಯಿಂದ ಹೇಳುವ ಆ ದಿವ್ಯಭವ್ಯ ವೈಭವಗಳು? ನಾವು ಇಂದು ಗುಣಮಟ್ಟದ ದೃಢೀಕರಣಪತ್ರವನ್ನು ವಿದೇಶಿಯರಿಂದ ಯಾಚಿಸುತ್ತೇವೆ. ಅವರು ಔದಾರ್ಯದಿಂದಲೋ ವ್ಯಾಪಾರೀ ಮನೋಭಾವದಿಂದಲೋ ಭಾರತವನ್ನು ಇನ್ನಿಲ್ಲದಂತೆ ಹೊಗಳುತ್ತಾರೆ. ಈಚೆಗೆ ನಮ್ಮ ಪ್ರಧಾನಿಯವರಿಂದ ಮೊದಲ್ಗೊಂಡು ಎಲ್ಲ ಭಾರತೀಯ ಪ್ರವಾಸಿಗರೂ (ಇವರಲ್ಲಿ ಅನೇಕ ಚಿಂತಕರು, ಲೇಖಕರು ಸೇರಿದ್ದಾರೆಂಬುದು ಗಮನಾರ್ಹ!) ಈ ವಿದೇಶಿ ಸರ್ಟಿಫಿಕೇಟ್ ಪಡೆದು ಉಬ್ಬಿಕೊಳ್ಳುತ್ತಿದ್ದಾರೆ.
‘ಅತಿಥಿ ದೇವೋಭವ’ ಎಂಬ ಪ್ರಸಿದ್ಧ ಉಕ್ತಿಯಿದೆ. ಇದು ಇಂದು ನಿನ್ನೆಯದಲ್ಲ; ಈ ದೇಶದ ಸಂಸ್ಕೃತಿಯೆಂದು ನಾವು ಕರೆಯುವ ವಿಚಾರಧಾರೆಗೆ, ಆಚಾರ, ಸಂಪ್ರದಾಯಗಳಿಗೆ ಹೊಳಪು ತರುವ ಆರ್ಷೇಯ ಸಂಗತಿ. ಇದು ನಮ್ಮ ಮನೆಗೆ, ಊರಿಗೆ, ರಾಜ್ಯಕ್ಕೆ ಮತ್ತು ದೇಶಕ್ಕೆ ಬರುವ ಎಲ್ಲರಿಗೆ ಅನ್ವಯಿಸುವ ಒಂದು ಪರಂಪರೆ. ಈ ಉಕ್ತಿ ನಿಸ್ಸಂದೇಹವಾಗಿ ಶ್ರೇಷ್ಠವಾದದ್ದು.
ಆದರೆ ಇದರ ಅನುಷ್ಠಾನ ಈಗ ಹೇಗೆ ನಡೆಯುತ್ತಿದೆ? ಪ್ರವಾಸಿಗರು ಅವರು ಸಂದರ್ಶಿಸುವ ದೇಶ, ರಾಜ್ಯ, ಊರು, ಮನೆಗಳ ಹೀಗೆ ಎಲ್ಲರ ಅತಿಥಿಗಳು. ಆದರೆ ಬಹುಪಾಲು ವಿದೇಶಿಯರು ಅಥವಾ ಪರವೂರಿನವರು ಭಾರತದ ಪ್ರೇಕ್ಷಣೀಯ ಸ್ಥಳಗಳಲ್ಲಿ, ಕ್ಷೇತ್ರಗಳಲ್ಲಿ, ತಮಗೆ ಮೋಸವಾಗುತ್ತಿದೆಯೆಂದು ಭಾವಿಸುತ್ತಾರೆ. ಹೀಗೆ ಭಾವಿಸುವುದಕ್ಕೆ ಸಕಾರಣವಿದೆ. ಮಾಮೂಲಾಗಿ ನೀಡುವ ಪದಾರ್ಥಗಳನ್ನೇ ಅವರಿಗೂ ನೀಡುವುದಾದರೂ ದರ ಹೆಚ್ಚಿಸಿರುತ್ತಾರೆ. ವಾಹನಗಳ ಬಾಡಿಗೆ ಅವರಿಗೆ ದುಪ್ಪಟ್ಟಾಗಿರುತ್ತದೆ. ಅವರಲ್ಲಿ ಸಿಕ್ಕದ, ಅಥವಾ ಸಿಕ್ಕಬಹುದಾದರೂ ಇಲ್ಲಿ ಪಡಕೊಂಡರೆ ಅದಕ್ಕೊಂದು ವಿಶೇಷ ಮಹತ್ವವಿದೆಯೆಂದು ಅವರು ಭಾವಿಸಿ ಯಾವುದನ್ನು ಯಾಚಿಸಿದರೂ ಅದರಲ್ಲಿ ಎಷ್ಟು ಲಾಭಮಾಡಬಹುದೆಂದಷ್ಟೇ ಚಿಂತಿಸುತ್ತೇವೆ. ಇಂತಹ ಹಗಲು ದರೋಡೆ ಬಹುತೇಕ ಪ್ರವಾಸಿ ಧಾಮಗಳಲ್ಲಿ ಸಹಜವಾಗಿದೆ. ಇನ್ನು ಭಾಷೆ ಬರದಿದ್ದರಂತೂ ಅವರ ಪಾಡು ಶೋಚನೀಯ. ಕಲಾತ್ಮಕವೆಂದು ಅತಿಥಿಗಳು ಭಾವಿಸುವ ವಸ್ತುಗಳ ಬೆಲೆಗಂತೂ ಆಕಾಶವೇ ಮಿತಿ. ಬೇಡಿಕೆ ಮತ್ತು ಪೂರೈಕೆಗಳ ಅರ್ಥಶಾಸ್ತ್ರಗಳ ಎಲ್ಲ ತರ್ಕಗಳನ್ನು ಮೀರಿ ಈ ದಂಧೆ ಬೆಳೆಯುತ್ತಿದೆ. ಹೀಗೆ ಮಾಡಿದಾಗ ನಾವು ನಮ್ಮ ಊರಿನ, ರಾಜ್ಯದ, ದೇಶದ ಮಾನವನ್ನು ಹರಾಜು ಹಾಕುತ್ತಿದ್ದೇವೆಂದು ಅನ್ನಿಸುವುದೇ ಇಲ್ಲ. ಜಗತ್ತು ನಮ್ಮನ್ನು ಗೌರವಿಸಬೇಕೆಂದು ಭಾವಿಸುವಾಗ ಇವನ್ನು ನಾವು ಗಣಿಸುವುದಿಲ್ಲ. ನಮ್ಮಲ್ಲಿ ಆರೋಗ್ಯ ಮತ್ತು ಶಿಕ್ಷಣಕ್ಕೆ ನಮ್ಮ ಅರ್ಥವ್ಯವಸ್ಥೆಯ ತೀರಾ ಕಡಿಮೆ ಅಂಶವು ವಿನಿಯೋಗವಾಗುತ್ತಿರುವುದು ಹಗಲ ಸೂರ್ಯನಷ್ಟೇ ಸತ್ಯ. ಇವಕ್ಕೆ ಅಂಕಿ-ಅಂಶಗಳು ಲಭ್ಯವಿವೆ. ಈ ಪ್ರಮಾಣದಲ್ಲಿ ನಾವು ಜಗತ್ತಿನ ದೇಶಗಳ ಪೈಕಿ ಕೊನೆಯ ಕೆಲವು ಸ್ಥಾನಗಳಲ್ಲಿದ್ದೇವೆ. ಈಗಲೂ ಪರಿಸ್ಥಿತಿ ಹೀಗಿರುವಾಗ ಹಿಂದೆ ಹೇಗಿತ್ತೆಂದು ಊಹಿಸಬಹುದು.
ಇಂತಹ ಅನೇಕ ಅಂಶಗಳನ್ನು ಹೇಳಬಹುದು. ಅರವಿಂದ ಅಡಿಗರ ’’ಛಿ ಜಿಠಿಛಿ ಜಿಜಛ್ಟಿ’’
ನ ಭಾರತ ಮತ್ತು ಭಾರತೀಯತೆ ಇಂದಿನ ವಾಸ್ತವವೆಂದು ಭಾವಿಸಿದರೆ ತಪ್ಪೇನು? ಭಾರತದ ಲೋಪದೋಷಗಳ ಹೊರತಾಗಿಯೂ ನಾವು ನಮ್ಮ ಮಾತೃಭೂಮಿಯನ್ನು ಪ್ರೀತಿಸೋಣ; ಆದರೆ ಅತಿಶಯ ಸುಳ್ಳುಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಮ್ಮಲ್ಲಿ ಎಲ್ಲವೂ ಸರಿಯಿಲ್ಲವೆಂದು ಒಪ್ಪಿ ಕೊಳ್ಳೋಣ. ಆಗ ಇರುವ ಲೋಪದೋಷಗಳನ್ನು ಸರಿಪಡಿಸಬಹುದು.