60 ಅಡಿ ಎತ್ತರದ ನೀರಿನ ಟ್ಯಾಂಕ್ ಏರಿದ ಗೂಳಿ!

Update: 2016-07-14 04:41 GMT

ಜೈಪುರ, ಜು.14: ಬಾಲಿವುಡ್ ಬ್ಲಾಕ್‌ಬಸ್ಟರ್ ಚಿತ್ರ ‘ಶೋಲೆ’ ಯಲ್ಲಿ ವೀರೂ(ಧರ್ಮೇಂದ್ರ) ಪಾತ್ರಧಾರಿ ನೀರಿನ ಟ್ಯಾಂಕ್‌ನ ಮೇಲೇರುವ ದೃಶ್ಯ ಜನ ಮಾನಸದಲ್ಲಿ ಹೆಚ್ಚು ಪರಿಣಾಮ ಬೀರಿದೆ. ಕೆಲವು ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು, ಇನ್ನೂ ಕೆಲವರು ಆತ್ಮಹತ್ಯೆ ಬೆದರಿಕೆ ಹಾಕಲು ಎತ್ತರದ ಟ್ಯಾಂಕ್ ಏರುತ್ತಾರೆ. ಆದರೆ, ರಾಜಸ್ಥಾನದಲ್ಲಿ ಗೂಳಿಯೊಂದು 60 ಮೀ. ಎತ್ತರದ ವಾಟರ್ ಟ್ಯಾಂಕ್‌ವೊಂದನ್ನು ಏರಿ ಸುದ್ದಿಯಾಗಿದೆ.

60 ಅಡಿ ಎತ್ತರದ ವಾಟರ್ ಟ್ಯಾಂಕ್ ತುದಿಗೆ ಏರಿರುವ ಗೂಳಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅಕ್ಕ-ಪಕ್ಕ ನಿವಾಸಿಗಳಿಗೆ ಹಾಗೂ ಅಧಿಕಾರಿಗಳಿಗೆ ಆತಂಕ ಮೂಡಿಸಿದ್ದ ಈ ಗೂಳಿಯನ್ನು 8 ಗಂಟೆಗಳ ಕಾಲ ಕಾರ್ಯಾಚರಣೆ ಬಳಿಕ ಸುರಕ್ಷಿತವಾಗಿ ಕೆಳಗಿಸಲಾಯಿತು.

 ಈ ಘಟನೆಯು ರಾಜಸ್ಥಾನದ ಚಾರೂ ಜಿಲ್ಲೆಯ ನವಲ್‌ಗಘ್ ತಾಲೂಕಿನ ರತ್ನಗಢ ಜನರಿಗೆ ಹೊಸ ಅನುಭವ ನೀಡಿದೆ. ಸೋಮವಾರ ಮಧ್ಯಾಹ್ನ 2.30ಕ್ಕೆ ಗೂಳಿಯೊಂದು ವಾಟರ್ ಟ್ಯಾಂಕ್ ಏರಿದ್ದನ್ನು ರತ್ನಗಢ ಜನ ನೋಡಿದ್ದರು. ತಕ್ಷಣವೇ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಅಧಿಕಾರಿಗಳು ಗೂಳಿಯನ್ನು ಕೆಳಗಿಳಿಸಲು ಯತ್ನಿಸಿದರೂ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ.

  9 ಗಂಟೆಯ ಸುಮಾರಿಗೆ ಎಲ್ಲ ಪ್ರಯತ್ನಗಳು ವಿಫಲವಾದಾಗ ಪಶುವೈದ್ಯರನ್ನು ಕರೆಸಲಾಯಿತು. ಕ್ರೈನ್‌ನ ಸಹಾಯದಿಂದ ಟ್ಯಾಂಕ್‌ನ ಮೇಲ್ಗಡೆ ಕಳುಹಿಸಲಾಯಿತು. ವೈದ್ಯರು ಅರೆವಳಿಕೆ ನೀಡಿದ ಬಳಿಕ ಗೂಳಿಯನ್ನು ಕೆಳಗಿಳಿಸಲಾಯಿತು.

ಟ್ಯಾಂಕ್‌ಗೆ ಹಗ್ಗವನ್ನು ಕಟ್ಟಿ ಗೂಳಿಯ ದೇಹಕ್ಕೆ ಬೆಲ್ಟ್ ಹಾಕಿ ಸುರಕ್ಷಿತವಾಗಿ ಕೆಳಗಿಳಿಸಲಾಯಿತು ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. 

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News