ರಾಜನಾಥ್, ಮಾಯಾವತಿ, ಕಾರಟ್, ಪವಾರ್, ಸೋನಿಯಾಗೆ ಮಾಹಿತಿ ಆಯೋಗ ನೋಟಿಸ್

Update: 2016-07-17 18:29 GMT

ಹೊಸದಿಲ್ಲಿ, ಜು.17: ಕೇಂದ್ರೀಯ ಮಾಹಿತಿ ಆಯೋಗ ಆರು ಪ್ರಮುಖ ರಾಷ್ಟ್ರೀಯ ಪಕ್ಷಗಳ ಮುಖಂಡರಿಗೆ ಮತ್ತೆ ಹೊಸದಾಗಿ ನೋಟಿಸ್ ನೀಡಿದೆ. ರಾಜನಾಥ ಸಿಂಗ್, ಮಾಯಾವತಿ, ಪ್ರಕಾಶ್ ಕಾರಟ್, ಶರದ್ ಪವಾರ್, ಸೋನಿಯಾಗಾಂಧಿ ಹಾಗೂ ಸುಧಾಕರ ರೆಡ್ಡಿಯವರಿಗೆ ಆಯೋಗದ ಮುಂದೆ ಹಾಜರಾಗುವಂತೆ ನೋಟಿಸ್ ನೀಡಿದೆ. ಮಾಹಿತಿಹಕ್ಕು ಕಾರ್ಯಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸದ ಹಿನ್ನೆಲೆಯಲ್ಲಿ ಸಲ್ಲಿಸಿದ ಅರ್ಜಿಯ ಬಗ್ಗೆ ವಿಚಾರಣೆ ನಡೆಸಿದ ಆಯೋಗ ಈ ನೋಟಿಸ್ ನೀಡಿದೆ.

ನಾನು ಆರು ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್, ಬಿಎಸ್ಪಿ, ಎನ್‌ಸಿಪಿ, ಸಿಪಿಐಎಂ ಹಾಗೂ ಸಿಪಿಐ ವಿರುದ್ಧ ನೀಡುವ ದೂರನ್ನು ನಿರ್ವಹಿಸುವ ವಿಚಾರದಲ್ಲಿ ಸಿಐಸಿ ರಿಜಿಸ್ಟ್ರಾರ್ ತಾರತಮ್ಯ ಎಸಗಿದ್ದಾರೆ ಎಂದು ದೂರುದಾರರ ಪೈಕಿ ಒಬ್ಬರಾದ ಆರ್.ಕೆ.ಜೈನ್ ಅವರು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಈ ನಾಯಕರ ಹೆಸರಿನಲ್ಲಿ ನೋಟಿಸ್ ಹೊರಡಿಸಲು ಸೂಚಿಸಲಾಗಿದೆ. ಸೋನಿಯಾಗಾಂಧಿಗೆ ನೀಡಿದ ನೋಟಿಸ್‌ನಲ್ಲಿ ಮಾತ್ರ ಅವರ ಹೆಸರು ನಮೂದಿಸಲಾಗಿದೆ. ಇತರ ನೋಟಿಸ್‌ಗಳನ್ನು ಆಯಾ ಪಕ್ಷದ ಮುಖ್ಯಸ್ಥರಿಗೆ ನೀಡಲಾಗಿದೆ ಎಂದು ಅರ್ಜಿದಾರರು ದೂರಿದ್ದರು.
ಎಲ್ಲ ರಾಷ್ಟ್ರೀಯ ಪಕ್ಷಗಳು ಆರ್‌ಟಿಐ ಕಾಯ್ದೆಯಡಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಆಯೋಗ 2013ರಲ್ಲಿ ನಿರ್ಧಾರ ಕೈಗೊಂಡ ಬಳಿಕ. ಜೈನ್ ಅವರು ಕಾಂಗ್ರೆಸ್ ಹಾಗೂ ಇತರ ಪಕ್ಷಗಳಿಗೆ ಪಡೆದ ದೇಣಿಗೆ, ನಿಧಿ ಒದಗಿಸುವುದು ಹಾಗೂ ಪಕ್ಷದ ಆಂತರಿಕ ಚುನಾವಣೆಗಳ ಬಗ್ಗೆ ವಿವರ ಬಯಸಿ ಅರ್ಜಿ ಸಲ್ಲಿಸಿದ್ದರು. 2014ರ ಫೆಬ್ರವರಿಯಲ್ಲಿ ಯಾವುದೇ ಉತ್ತರ ಬಾರದ ಹಿನ್ನೆಲೆಯಲ್ಲಿ ಸಿಐಸಿಗೆ ಅರ್ಜಿ ಸಲ್ಲಿಸಿದ್ದರು.
ಜುಲೈ 22ರಂದು ಆಯೋಗದ ಪೂರ್ಣ ಪ್ರಮಾಣದ ಪೀಠದ ಮುಂದೆ ತಮ್ಮ ವಾದವನ್ನು ಮಂಡಿಸುವಂತೆ ಈ ಎಲ್ಲ ನಾಯಕರಿಗೆ ಸೂಚನೆ ನೀಡಲಾಗಿದೆ. ಬಿಮಲ್ ಜುಲ್ಕಾ, ಶ್ರೀಧರ್ ಆಚಾರ್ಯಲು ಹಾಗೂ ಸುಧೀರ್ ಭಾರ್ಗವ ಅವರನ್ನೊಳಗೊಂಡ ಪೀಠ ಜೈನ್ ಅವರ ಅರ್ಜಿಯ ವಿಚಾರಣೆ ನಡೆಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News