ಎರಡು ವರ್ಷಗಳಲ್ಲಿ 22,000 ಕೋ.ರೂ. ಅಘೋಷಿತ ಆದಾಯ ಪತ್ತೆ: ಸಚಿವ ಜೇಟ್ಲಿ

Update: 2016-07-22 13:17 GMT

ಹೊಸದಿಲ್ಲಿ,ಜು.22: ಆದಾಯ ತೆರಿಗೆ ಇಲಾಖೆಯು ಕಳೆದ ಎರಡು ವರ್ಷಗಳಲ್ಲಿ 9,547 ತಪಾಸಣೆಗಳನ್ನು ನಡೆಸಿ 22,475 ಕೋ.ರೂ.ಗಳ ಅಘೋಷಿತ ಆದಾಯವನ್ನು ಪತ್ತೆ ಹಚ್ಚಿದೆ ಎಂದು ವಿತ್ತಸಚಿವ ಅರುಣ್ ಜೇಟ್ಲಿ ಅವರು ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದರು.
 ಇದೇ ಅವಧಿಯಲ್ಲಿ ಅನುಷ್ಠಾನ ಕ್ರಮಗಳ ಅಂಗವಾಗಿ ಇಲಾಖೆಯು ವಿವಿಧ ವರ್ಗಗಳ ತೆರಿಗೆದಾತರ ಮೇಲೆ ದಾಳಿ ಕಾರ್ಯಾಚರಣೆ ನಡೆಸಿ 1,474 ಕೋ.ರೂ.ಗಳ ಅಘೋಷಿತ ಸಂಪತ್ತನ್ನು ವಶಪಡಿಸಿಕೊಂಡಿದೆ ಎಂದು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಅವರು ಹೇಳಿದರು.
ಕಳೆದೆರಡು ವರ್ಷಗಳಲ್ಲಿ ಆದಾಯ ತೆರಿಗೆ ಇಲಾಖೆಯು ದಾಖಲಿಸಿರುವ ಕ್ರಿಮಿನಲ್ ಪ್ರಕರಣಗಳಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಸಚಿವರು ತಿಳಿಸಿದರು. 2012-14ರ ಅವಧಿಯಲ್ಲಿ 1,690 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರೆ, 2014-15 ಮತ್ತು 2015-15ನೇ ಹಣಕಾಸು ವರ್ಷಗಳಲ್ಲಿ 3,140 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದರು.
ಕಪ್ಪುಹಣ,ಅದರಲ್ಲೂ ವಿದೇಶಗಳಲ್ಲಿ ಕಪ್ಪುಹಣ ಶೇಖರಣೆಗೆ ಪರಿಣಾಮಕಾರಿಯಾಗಿ ಕಡಿವಾಣ ಹಾಕಲು ಸರಕಾರವು ವಿಶೇಷ ತನಿಖಾ ತಂಡದ ರಚನೆ,ಬೇನಾಮಿ ವಹಿವಾಟು(ನಿಷೇಧ) ಮಸೂದೆಯ ಮಂಡನೆಯಂತಹ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದರು.
ಪ್ರಸ್ತುತ ಜಾರಿಯಲ್ಲಿರುವ ಆದಾಯ ಬಹಿರಂಗ ಯೋಜನೆ(ಐಡಿಎಸ್)ಯು ಈ ಹಿಂದೆ ಪೂರ್ಣ ತೆರಿಗೆಯನ್ನು ಪಾವತಿಸದ ಎಲ್ಲ ವ್ಯಕ್ತಿಗಳಿಗೆ ತಮ್ಮ ಅಘೋಷಿತ ಆದಾಯವನ್ನು ಘೋಷಿಸಲು ಮತ್ತು ಮೇಲ್ತೆರಿಗೆ ಹಾಗೂ ದಂಡ ಪಾವತಿಸಿ ನಿರಾಳರಾಗಿರಲು ಅವಕಾಶವನ್ನು ಒದಗಿಸಿದೆ. ಯೋಜನೆಯು ಸೆ.30ರವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಜೇಟ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News