ಕಸುವಿಲ್ಲದ, ಜಾಗತೀಕರಣದ, ಪಲಾಯನವಾದದ ಶಿಕ್ಷಣ ನೀತಿ

Update: 2016-07-22 23:01 IST
ಕಸುವಿಲ್ಲದ, ಜಾಗತೀಕರಣದ, ಪಲಾಯನವಾದದ ಶಿಕ್ಷಣ ನೀತಿ
  • whatsapp icon

ಭಾಗ 2

► ಉದಾಹರಣೆಗೆ ದೇಶಾದ್ಯಂತ ಸರಾಸರಿ 26 ಕೋಟಿ ಬಾಲಕ/ ಬಾಲಕಿಯರು ಪ್ರಾಥಮಿಕ ಶಿಕ್ಷಣಕ್ಕೆ ಸೇರಿಕೊಂಡರೆ ಉನ್ನತ ಶಿಕ್ಷಣದ ಹೊತ್ತಿಗೆ (ಪದವಿ, ಸ್ನಾತಕೋತ್ತರ) ಅವರ ಸಂಖ್ಯೆ 6 ಕೋಟಿಗೆ ಇಳಿದಿರುತ್ತದೆ. ಅಂದರೆ ಸುಮಾರು 20 ಕೋಟಿ ಬಾಲಕ/ಬಾಲಕಿಯರು ತನ್ನ ವಿದ್ಯಾಭ್ಯಾಸವನ್ನು ವಿವಿಧ ಹಂತಗಳಲ್ಲಿ ಅರ್ಧದಲ್ಲಿಯೇ ಮೊಟಕುಗೊಳಿಸಿರುತ್ತಾರೆ. ಅಂದರೆ ನಮ್ಮ ಜನಸಂಖ್ಯೆಯ ಶೇ.25 ಪ್ರಮಾಣದಲ್ಲಿ ಬಾಲಕ/ಬಾಲಕಿಯರು ಶಿಕ್ಷಣಕ್ಕೆ ಸೇರಿಕೊಂಡರೆ ಅದರಲ್ಲಿ ಶೇ. 80ರಷ್ಟು ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸುತ್ತಾರೆ. ಇದರ ಕುರಿತಾಗಿ ಆಳವಾದ ಅಧ್ಯಯನವನ್ನೇ ಕೈಗೊಳ್ಳದ ಈ ಹೊಸ ಶಿಕ್ಷಣ ನೀತಿಯು ಕೇವಲ ಮೇಲ್ಮಟ್ಟದಲ್ಲಿ ಕೌಶಲ್ಯ ಅಭಿವೃದ್ಧಿಯ ಕುರಿತಾಗಿ ಮಾತನಾಡುತ್ತದೆ. ಆದರೆ ವಿದ್ಯಾರ್ಥಿಗಳು ಶಿಕ್ಷಣವನ್ನು ಅರ್ಧಕ್ಕೆ ಯಾತಕ್ಕೆ ಬಿಡುತ್ತಾರೆ? ಆರ್ಥಿಕ ಕಾರಣಗಳಿಗಾಗಿಯೇ? ಸಾಮಾಜಿಕ ಕಾರಣಗಳಿಗಾಗಿಯೇ?ಧಾರ್ಮಿಕ ಕಾರಣಗಳಿಗಾಗಿಯೇ? ಇದರ ಕುರಿತಾಗಿ ಕೂಲಂಕಷವಾಗಿ ಕ್ಷೇತ್ರ ಅಧ್ಯಯನವನ್ನು, ಆಳವಾದ ಸಂಶೋಧನೆಯನ್ನು ಕೈಗೊಳ್ಳದ ಈ ಸಮಿತಿಯು ಆ ವಿದ್ಯಾರ್ಥಿಗಳಿಗೆ ಕೌಶಲ್ಯ ಅಭಿವೃದ್ಧಿಯನ್ನು ಶಿಫಾರಸು ಮಾಡುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ ಮತ್ತು ಅಪಾಯಕಾರಿ. ಏಕೆಂದರೆ ರೋಗಕ್ಕೆ ಮೂಲ ಕಾರಣವನ್ನು ಹುಡುಕದೆ ಅದಕ್ಕೆ ತಾತ್ಕಾಲಿಕ ಪರಿಣಾಮಗಳನ್ನು ಹೇಳುವ ಈ ಮಾದರಿ ಕಡೆಗೆ ಶಿಕ್ಷಣ ಪದ್ಧತಿಯನ್ನೇ ನಾಶಗೊಳಿಸುತ್ತದೆ. ಕಡೆಗೆ ಕೇವಲ ಉಳ್ಳವರಿಗಾಗಿ ಮಾತ್ರ ಶಿಕ್ಷಣ ಎನ್ನುವ ವ್ಯವಸ್ಥೆ ತಯಾರಾಗುತ್ತದೆ.

ಭಾರತ ಸರಕಾರದ ನಿಯಂತ್ರಣದಲ್ಲಿರುವಂತೆ ಇಂಡಿಯನ್ ಎಜುಕೇಶನ್ ಸರ್ವೀಸ್ (ಐಇಎಸ್)ಅನ್ನು ಹುಟ್ಟುಹಾಕ ಬೇಕೆಂದು ಶಿಫಾರಸು ಮಾಡುತ್ತದೆ. ಅಂದರೆ ಶಿಕ್ಷಣವನ್ನು ಕೇಂದ್ರೀಕರಣಗೊಳಿಸಲು ಒತ್ತಾಯಿಸುತ್ತಿದೆ. ರಾಜ್ಯಗಳ, ಜಿಲ್ಲಾ ಪಂಚಾಯತ್‌ಗಳ, ಗ್ರಾಮ ಪಂಚಾಯತ್‌ಗಳ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಂದಿನ ವಿಕೇಂದ್ರಿಕರಣದ ಶಿಕ್ಷಣ ನೀತಿಯನ್ನು ಈ ಹೊಸ ಶಿಕ್ಷಣ ನೀತಿಯು ಬದಲಾಯಿಸಿ ಕೇಂದ್ರೀಕರಣಕ್ಕೆ ಶಿಫಾರಸು ಮಾಡುತ್ತಿದೆ. ಇದು ಸಹ ತುಂಬಾ ಅಪಾಯಕಾರಿ. ಈ ಮೂಲಕ ಸ್ಥಳೀಯ ಜ್ಞಾನ, ಸಂಸ್ಕೃತಿಯ ಒಂದು ಪರಂಪರೆಗೆ ಧಕ್ಕೆ ಉಂಟು ಮಾಡುತ್ತದೆ ಮತ್ತು ಏಕರೂಪಿ ಪಠ್ಯಕ್ರಮವನ್ನು ಬೆಂಬಲಿಸುತ್ತದೆ. ಕೇಂದ್ರದಲ್ಲಿ ಫ್ಯಾಸಿಸ್ಟ್ ಮತೀಯವಾದಿ ಸರಕಾರ ಅಧಿಕಾರದಲ್ಲಿರುವ ಇಂದಿನ ದಿನಗಳಲ್ಲಿ ಈ ಕೇಂದ್ರೀಕೃತ ಪಠ್ಯಗಳ, ಪಠ್ಯಕ್ರಮಗಳು ಯಾವ ರೀತಿಯಲ್ಲಿರಬಹುದೆಂದು ನಿಮ್ಮ ಊಹೆಗೆ ಬಿಟ್ಟಿದ್ದು.

ಪ್ರಾಥಮಿಕ ಶಿಕ್ಷಣ
 ಅಧ್ಯಾಯ 6 ಆರಂಭದಲ್ಲಿಯೇ ‘‘ Wherever possible, efforts should be made to convert existing non-viable schools into composite schools for better academic performance and cost effective management.’’ಎಂದು ಶಿಫಾರಸು ಮಾಡಿಬಿಡುತ್ತದೆ. ಇದಕ್ಕೆ ಪ್ರಚೋದನೆ ಏನು? ಈಗಾಗಲೇ ತನ್ನ ಮನಸ್ಸಿಗೆ ಬಂದ ಹಾಗೆ ಮಕ್ಕಳ ನೇಮಕಾತಿಯ ಕೊರತೆಯನ್ನು ಮುಂದಿಟ್ಟು ಸರಕಾರಿ ಶಾಲೆಗಳನ್ನು ಮುಚ್ಚುತ್ತಿರುವ ನಮ್ಮ ರಾಜ್ಯ ಸರಕಾರ ಮತ್ತು ಇತರೇ ರಾಜ್ಯ ಸರಕಾರಗಳು (ರಾಜಸ್ತಾನ, ಗುಜರಾತ್, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ) ಈ ಸಮಾನ ಶಿಕ್ಷಣ ವಿರೋಧಿ ನೀತಿಯನ್ನು ಸ್ವತಃ ಈ ಹೊಸ ಶಿಕ್ಷಣ ನೀತಿ ಅನುಮೋದಿಸುತ್ತದೆ. ಮಕ್ಕಳು ಯಾವ ಕಾರಣಕ್ಕಾಗಿ ಶಾಲೆ ಸೇರುತ್ತಿಲ್ಲ, ಯಾವ ಕಾರಣಕ್ಕೆ ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸುತ್ತಾರೆ ಎಂದು ಈ ಹೊಸ ಶಿಕ್ಷಣ ನೀತಿ ಪರಾಮರ್ಶಿಸುವುದಿಲ್ಲ. ಕೂಲಂಕಷ ಅಧ್ಯಯನ ನಡೆಸುವುದೇ ಇಲ್ಲ. ನೇರವಾಗಿ ಮುಚ್ಚುವ, ವಿಲೀನಗೊಳಿಸುವ ರಾಜ್ಯ ಸರಕಾರಗಳ ಈ ಶಿಕ್ಷಣ ವಿರೋಧಿ ನೀತಿಯನ್ನು ಈ ಹೊಸ ಶಿಕ್ಷಣ ನೀತಿಯು ಬಲಪಡಿಸುವುದು, ಕ್ರೋಡೀಕರಿಸುವುದು ಎಂದು ಕರೆಯುತ್ತದೆ. ಇದರ ಅರ್ಥ ಈ ಸಮಿತಿಯ ಉದ್ದೇಶವೂ ಸಹ ಖಾಸಗೀಕರಣದ ಪರವಾಗಿದೆ ಎಂದೇ ಅಭಿಪ್ರಾಯಪಡಬೇಕಾಗುತ್ತದೆ. ಒಂದು ಕಡೆ ಜಿಡಿಪಿಯ ಅನುಪಾತದಲ್ಲಿ ಶೇ. 6 ಪ್ರಮಾಣವನ್ನು ಶಿಕ್ಷಣಕ್ಕೆ ಮೀಸಲಿಡಬೇಕೆಂದು ಹೇಳುವ ಈ ಹೊಸ ಶಿಕ್ಷಣ ನೀತಿ ಇಲ್ಲಿ ಆದಷ್ಟೂ ಕಡಿಮೆ ಖರ್ಚಿನ ಶಿಕ್ಷಣದ ಕುರಿತು ಶಿಫಾರಸು ಮಾಡುತ್ತದೆ. ಇದು ಶಿಕ್ಷಣವಿರೋಧಿ ನೀತಿ ಅಷ್ಟೆ.
► ಮತ್ತೆ ಮತ್ತೆ ಶಿಕ್ಷಣವನ್ನು ಅರ್ಧದಲ್ಲಿ ಮೊಟಕುಗೊಳಿಸಿದ ಮಕ್ಕಳಿಗೋಸ್ಕರ ಕೌಶಲ್ಯ ಶಾಲೆಗಳನ್ನು ತೆರೆಯಬೇಕೆಂದು ಶಿಫಾರಸು ಮಾಡುತ್ತದೆ. ಅಂದರೆ ಮಕ್ಕಳು ಯಾವ ಕಾರಣಕ್ಕಾಗಿ ಶಿಕ್ಷಣವನ್ನು ಮೊಟಕುಗೊಳಿಸುತ್ತಾರೆ, ಅರ್ಧದಲ್ಲೇ ಶಿಕ್ಷಣವನ್ನು ತೊರೆದ ಮಕ್ಕಳಿಗೆ ಮರಳಿ ಶಾಲೆಗೆ ಕರೆತರುವ ಮಾರ್ಗಗಳಾವುವು ಎಂದು ಅಧ್ಯಯನ ಮಾಡುವ ಗೋಜಿಗೇ ಹೋಗದ ಈ ಸಮಿತಿ ನೇರವಾಗಿ ಈ ಮಕ್ಕಳನ್ನು ಕೌಶಲ್ಯ ಶಾಲೆಗೆ ಸೇರಿಸಿ ನಂತರ ಕೆಲಸಕ್ಕೆ ಸೇರಿಕೊಳ್ಳಲಿ ಎಂದು ಶಿಫಾರಸು ಮಾಡುತ್ತದೆ. ಇದು ನಿಜಕ್ಕೂ ಒಂದು ಬೂರ್ಜ್ವಾ ಮನಸ್ಥಿತಿಯ ಸಮಿತಿ ಎಂದೇ ಹೇಳಬೇಕಾಗುತ್ತದೆ. ಏಕೆಂದರೆ ಸಾಧಾರಣವಾಗಿ ಗ್ರಾಮೀಣ ಮಟ್ಟದಲ್ಲಿ ಮತ್ತು ನಗರಗಳಲ್ಲಿ ಸ್ಲಂವಾಸಿಗಳ ಮಕ್ಕಳು ಮತ್ತು ಬಡತನದ ಹಿನ್ನೆಲೆಯಿಂದ ಬಂದ ಮಕ್ಕಳು ಆರ್ಥಿಕ ನೆರವಿನ ಕೊರತೆಯಿಂದ ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸುತ್ತಾರೆ. ಸಾಮಾಜಿಕವಾಗಿ ಅಸ್ಪಶ್ಯತೆ ಮತ್ತು ಜಾತಿ ತಾರತಮ್ಯದ ಕಾರಣಕ್ಕಾಗಿಯೂ ಮಕ್ಕಳು ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸುತ್ತಾರೆ. ಇದಕ್ಕೆ ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಯಾವ ಪರಿಹಾರಗಳಿವೆ ಎಂದು ಅಧ್ಯಯನ ನಡೆಸಿ ಪರಿಹಾರ ಕೊಡಬೇಕಾದ ಈ ಸಮಿತಿ ಸಂಪೂರ್ಣ ವ್ಯತಿರಿಕ್ತವಾಗಿ ವರ್ತಿಸುತ್ತಾ ನವ ಉದಾರೀಕರಣದ ಬಂಡವಾಳಶಾಹಿ ಧ್ವನಿಯಲ್ಲಿ ಕೌಶಲ್ಯ ಶಾಲೆಗಳ ಕುರಿತು ಮಾತನಾಡುತ್ತದೆ. ಆದರೆ ಇದೇನಾದರೂ ಜಾರಿಗೆ ಬಂದರೆ ಮುಂದಿನ ದಿನಗಳಲ್ಲಿ ಶಿಕ್ಷಣವು ಮೇಲ್ಜಾತಿಗಳ, ಮೇಲ್ವರ್ಗಗಳಿಗೆ ಮಾತ್ರ ಸೀಮಿತಗೊಳ್ಳುತ್ತದೆ. ಮತ್ತೆ ಚಾತುರ್ವರ್ಣ ಪದ್ಧತಿ ನೇರವಾಗಿ ಮುಂಬಾಗಿಲಿನಿಂದಲೇ ಪ್ರವೇಶಿಸುತ್ತದೆ.
► ಆರ್‌ಟಿಇ ಕಾನೂನು ಕುರಿತಾಗಿ ಮಾತನಾಡುವ ಈ ಸಮಿತಿಯು ನೆರೆಹೊರೆ ಶಾಲಾ ಪದ್ಧತಿ ಕುರಿತಾಗಿ ಏನನ್ನೂ ಹೇಳುವು ದಿಲ್ಲ. ಸಮಾನ ಶಿಕ್ಷಣದ ಅಂತಿಮ ಗುರಿಯಾದ ನೆರೆಹೊರೆ ಶಾಲಾ ಪದ್ಧತಿಯ ಕುರಿತಾಗಿ ಈ ಹೊಸ ಶಿಕ್ಷಣ ನೀತಿಯು ತೋರಿಸುವ ಅವಜ್ಞೆ ಮತ್ತು ನಿರ್ಲಕ್ಷ ನಿಜಕ್ಕೂ ಅಪಾಯಕಾರಿ
  
►ಅಲ್ಪಸಂಖ್ಯಾತ ಮ್ಯಾನೇಜ್‌ಮೆಂಟ್ ಶಾಲೆಗಳಿಗೂ ಆರ್‌ಟಿಇ ಕಾನೂನು ಒಳಪಡಿಸಬೇಕೆಂದು ಹೇಳುವ ಈ ಸಮಿತಿ ಈ ಆರ್‌ಟಿಇ ಕಾನೂನು ಕೇವಲ ಖಾಸಗಿ ಶಾಲೆಗಳನ್ನು ಬಲಪಡಿಸುತ್ತದೆ ಎನ್ನುವ ಸತ್ಯವನ್ನು ಎಲ್ಲಿಯೂ ಮಾತನಾಡುವುದಿಲ್ಲ. ಆರ್ಥಿಕವಾಗಿ ಹಿಂದುಳಿದ ಶೇ. 25ಕ್ಕೆ ನಿಯಮಿತಗೊಳಿಸುವ ಆರ್‌ಟಿಇ ಕಾನೂನು ಉಳಿದ ಶೇ. 75 ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸದ ಭವಿಷ್ಯವೇನೆಂದು ಈ ಹೊಸ ಶಿಕ್ಷಣ ನೀತಿ ತಲೆಕೆಡಿಸಿಕೊಂಡಿಲ್ಲ. ಈ ಆರ್‌ಟಿಇ ಆಕ್ಟ್‌ನ ಅಡಿಯಲ್ಲಿ ನೇಮಕಗೊಂಡ ಆರ್ಥಿಕವಾಗಿ ಹಿಂದುಳಿದ ಬಡಕುಟುಂಬದ ಮಕ್ಕಳಿಗೆ ಶಾಲೆಯ ಮ್ಯಾನೇಜ್‌ಮೆಂಟ್ ತೋರಿಸುವ ಪ್ರತ್ಯೇಕತೆ ಮತ್ತು ತಾರತಮ್ಯ ನೀತಿಯ ಕುರಿತಾಗಿ ಈ ಹೊಸ ಶಿಕ್ಷಣ ನೀತಿಯು ಯಾವುದೇ ಮಾತನ್ನೂ ಹೇಳುವುದಿಲ್ಲ. ಅದರ ಕುರಿತಾಗಿ ರ್ಚಿಸುವುದಿಲ್ಲ. ಈ ಸಮಿತಿಯ ಚಿಂತನೆ ಒಂದು ಮಧ್ಯಮವರ್ಗದ ಮಟ್ಟದಿಂದ ಮೇಲೇರಲೇ ಇಲ್ಲ ಎಂದು ಸಾಬೀತುಪಡಿಸುತ್ತದೆ

► no-detention policy ಯನ್ನು ಕಿರಿಯ ಪ್ರಾಥಮಿಕ ಹಂತಕ್ಕೆ ಅಂದರೆ 5 ತರಗತಿಗೆ ಅಂದರೆ ಮಕ್ಳಳ 11ನೆ ವಯಸ್ಸಿಗೆ ಮೊಟಕುಗೊಳಿಸಬೇಕೆಂದು ಶಿಫಾರಸು ಮಾಡುತ್ತದೆ. 6ನೇ ತರಗತಿಯಿಂದ ಈ ಪಾಲಿಸಿಯನ್ನು ತೆಗೆದು ಹಾಕಬೇಕೆಂದು ಶಿಫಾರಸು ಮಾಡುತ್ತದೆ. ಆದರೆ ಈ ಮಕ್ಕಳು ಫೇಲಾಗುವ ಕಾರಣಗಳನ್ನು ಕೇವಲ ಮೇಲ್ಮಟ್ಟದಲ್ಲಿ ಕಂಡುಕೊಳ್ಳುವ ಈ ಸಮಿತಿಯು ಇದಕ್ಕೆ ಸೂಚಿಸುವ ಸುಧಾರಣೆಗಳೂ ಸಹ ತುಂಬಾ ಸಾಮಾನ್ಯವಾದವುಗಳು. ಅದು ಗುಣಮಟ್ಟದ ಶಿಕ್ಷಕರ ತರಬೇತಿ, ಮೂಲಭೂತ ಸೌಕರ್ಯ, ಶಿಕ್ಷಕರ ವೇತನ ಹೀಗೆ ಈಗಾಗಲೇ ಚರ್ಚಿತ ಅಂಶಗಳನ್ನೇ ಮತ್ತೆ ಹೇಳುತ್ತದೆ. ಆದರೆ ಪಠ್ಯಗಳು, ಪಠ್ಯಕ್ರಮಗಳು, ಅರ್ಥಹೀನ ಪಠ್ಯ ಬೋಧನೆಯ ಪದ್ಧತಿ, ದೋಷಪೂರ್ಣ ಕಲಿಕಾ ಪದ್ಧತಿ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಒಳಗೊಳ್ಳದ ಪಠ್ಯಗಳು ಸಹ ಮಕ್ಕಳು ಫೇಲಾಗಲು ಬಹುಮುಖ್ಯ ಕಾರಣವೆಂದು ಈ ಸಮಿತಿಗೆ ಹೊಳೆಯದೇ ಹೋಗಿದ್ದು ದುರಂತವೇ ಸರಿ. ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಕಾರಣಗಳನ್ನು ಹುಡುಕದ ಈ ಸಮಿತಿಯು ಒಬ್ಬ ಮಧ್ಯಮವರ್ಗದ ಕುಟುಂಬದಂತೆ ಚಿಂತಿಸುವುದು ಈ ಸಮಿತಿಯ ಬಲು ದೊಡ್ಡ ಮಿತಿಗಳಲ್ಲೊಂದು.

► ರಾಷ್ಟ್ರೀಯ ಆವಶ್ಯಕತೆಗೆ ಅನುಗುಣವಾಗಿ ಸಿಲೆಬಸ್ ಅನ್ನು, ಪಠ್ಯಪುಸ್ತಕಗಳನ್ನು, ಪಠ್ಯಕ್ರಮಗಳನ್ನು ರೂಪಿಸಬೇಕೆಂದು ಹೇಳುತ್ತದೆ. ಏನಿದು ರಾಷ್ಟ್ರೀಯ ಆವಶ್ಯಕತೆ? ಯಾವುದು ರಾಷ್ಟ್ರೀಯ ಆವಶ್ಯಕತೆ? ಇದು ಸಂಪೂರ್ಣವಾಗಿ ಆರೆಸ್ಸೆಸ್‌ನ ಹಿಂದೂತ್ವ ರಾಷ್ಟ್ರೀಯವಾದದಿಂದ ಪ್ರೇರೇಪಿತವಾದದ್ದೆಂದು ಆರ್ಥವಾಗುತ್ತದೆ.

► ಮತ್ತೆ ಮತ್ತೆ ಕೌಶಲ್ಯ ಶಿಕ್ಷಣದ ಕುರಿತಾಗಿ ಮಾತನಾಡುತ್ತದೆ. ಶಿಕ್ಷಣವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದ ಮಕ್ಕಳಿಗೆ ಮತ್ತು 12ನೆ ತರಗತಿಯನ್ನು ಮುಗಿಸಿದ ಮಕ್ಕಳಿಗೆ ಕೌಶಲ್ಯ ತರಬೇತಿಯನ್ನು ಅದರ ಆವಶ್ಯಕತೆಯನ್ನು ಒತ್ತಿ ಹೇಳುತ್ತದೆ. ಇದಕ್ಕಾಗಿ ಕೇಂದ್ರ ಸರಕಾರದ ಕೌಶಲ್ಯ ಸುಧಾರಣೆಗಳಿಗಾಗಿಯೇ ಇರುವ ಅನೇಕ ಯೋಜನೆಗಳನ್ನು ಶಿಕ್ಷಣ ಇಲಾಖೆಯು ಪಡೆದುಕೊಳ್ಳಬೇಕೆಂದು ಹೇಳುತ್ತದೆ. ಆದರೆ ಈಗಾಗಲೇ ಚಾಲ್ತಿಯಲ್ಲಿರುವಂತೆ ಹೈಸ್ಕೂಲ್ ಮುಗಿಸಿದ ವಿದ್ಯಾರ್ಥಿಗಳಿಗೆ ಐಟಿಐ, ಡಿಪ್ಲ್ಲೊಮೊ ಕೋರ್ಸುಗಳನ್ನೊಳಗೊಂಡ ವಿವಿಧ ವಲಯಗಳಲ್ಲಿ (ಕಾರ್ಪೆಂಟರಿ, ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್,ಟಿವಿ,ದೃಶ್ಯ ಮಾಧ್ಯಮ ಇತ್ಯಾದಿ) ಈ ಕೌಶಲ್ಯ ತರಬೇತಿಯನ್ನು ಮೂರು ವರ್ಷಗಳ ಅವಧಿಯಲ್ಲಿ ಬೋಧಿಸಲಾಗುತ್ತದೆ.ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಇದರಲ್ಲಿ ತೇರ್ಗಡೆ ಹೊಂದಿ ಪರಿಣಿತಿಯನ್ನು ಸಾಧಿಸುತ್ತಾರೆ. ಹಾಗಿದ್ದಲ್ಲಿ ಈ ಹೊಸ ಶಿಕ್ಷಣ ನೀತಿಯು ಮತ್ಯಾವ ಕೌಶಲ್ಯ ಶಿಕ್ಷಣದ ಕುರಿತಾಗಿ ಮಾತನಾಡುತ್ತಿದೆ? ನಿಜಕ್ಕೂ ಇದು ದಿಕ್ಕುತಪ್ಪಿಸುವ ತಂತ್ರವಾಗಿದೆ.
► ಪೂರ್ವ ಪ್ರಾಥಮಿಕ ಹಂತದ ಶಿಕ್ಷಣದ ಆವಶ್ಯಕತೆಯನ್ನು ಈ ಸಮಿತಿ ಒತ್ತಿ ಹೇಳುತ್ತದೆ. ಇದು ನಿಜಕ್ಕೂ ಸ್ವಾಗತಾರ್ಹ. 3-5 ವಯಸ್ಸಿನ ಮಕ್ಕಳಿಗೆ ಸರಕಾರಿ ಶಾಲೆಗಳಲ್ಲಿ ಶಿಕ್ಷಣವನ್ನು ಕೊಡಲೇಬೇಕೆಂದು ಶಿಫಾರಸು ಮಾಡುತ್ತದೆ. ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಐಸಿಡಿಎಸ್ ( ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆ) ಮುಖಾಂತರವೇ ಇದನ್ನು ರೂಪಿಸಬೇಕೆಂದು ಹೇಳುತ್ತದೆ. ಇದು ನಿಜಕ್ಕೂ ಆವಶ್ಯಕವಾದ, ತುರ್ತಾಗಿ ಜಾರಿಗೊಳ್ಳಲೇಬೇಕಾದ ಯೋಜನೆ. ಇದರಿಂದ ಅಂಗನವಾಡಿ ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣದ ನಡುವಿನ ಗೊಂದಲಗಳು ಮತ್ತು ಅನುಮಾನಗಳು ಪರಿಹಾರವಾಗುವ ಸಾಧ್ಯತೆಗಳಿವೆ. ಏಕೆಂದರೆ ಸರಕಾರಿ ಶಾಲೆಗಳಲ್ಲಿ ಪೂರ್ವಪ್ರಾಥಮಿಕ ಶಿಕ್ಷಣ(ಎಲ್‌ಕೆಜಿ, ಯುಕೆಜಿ)ವನ್ನು ಪ್ರಾರಂಭಿಸದೆ ಹೋದರೆ ಪೋಷಕರು ತಮ್ಮ ಮಕ್ಕಳನ್ನು ಇಂದು ಸರಕಾರಿ ಶಾಲೆಗಳಿಗೆ ಸೇರಿಸುವ ಸಾಧ್ಯತೆಗಳು ತುಂಬಾ ಕಡಿಮೆ. ಇದು ಕಟುಸತ್ಯ.

Writer - ಬಿ. ಶ್ರೀಪಾದ ಭಟ್

contributor

Editor - ಬಿ. ಶ್ರೀಪಾದ ಭಟ್

contributor

Similar News