ಪೊಲೀಸರ ಗುಂಡಿಗೆ ಇಬ್ಬರು ನಕ್ಸಲರು ಬಲಿ

Update: 2016-07-23 18:27 GMT

ರಾಯಪುರ,ಜು.23: ಛತ್ತೀಸ್‌ಗಡದ ಮಾವೋವಾದಿ ಪೀಡಿತ ಸುಕ್ಮಾ ಜಿಲ್ಲೆಯ ಕೊಂಟಾದಲ್ಲಿ ಶನಿವಾರ ಪೊಲೀಸರೊಂದಿಗಿನ ಗುಂಡಿನ ಕಾಳಗದಲ್ಲಿ ಇಬ್ಬರು ನಕ್ಸಲರು ಕೊಲ್ಲಲ್ಪಟ್ಟಿದ್ದಾರೆ.

ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಗೆ ಹೊಂದಿಕೊಂಡಿರುವ ಕೊಂಟಾ ಅರಣ್ಯದಲ್ಲಿ ನಕ್ಸಲರ ಚಲನವಲನಗಳ ಬಗ್ಗೆ ಮಾಹಿತಿ ಲಭಿಸಿದ ಬಳಿಕ ಪೊಲೀಸರು ಗಂಗ್ರಾಜ್ ಗುಡ್ಡಪ್ರದೇಶದ ಸುಗುಡಾ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಶಸ್ತ್ರಸಜ್ಜಿತ ಬಂಡುಕೋರರು ಪೊಲೀಸರತ್ತ ಗುಂಡು ಹಾರಿಸಿದ್ದರು. ಬಳಿಕ ನಡೆದ ಗುಂಡಿನ ಕಾಳಗದಲ್ಲಿ ನಕ್ಸಲರಿಬ್ಬರು ಕೊಲ್ಲಲ್ಪಟ್ಟಿದ್ದಾರೆ ಎಂದು ಸುಕ್ಮಾ ಎಸ್‌ಪಿ ಇಂದಿರಾ ಕಲ್ಯಾಣ್ ಎಲಿಸೆಲಾ ತಿಳಿಸಿದರು.


......................


ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಭಾರತ-ಪಾಕಿಸ್ತಾನಗಳಲ್ಲಿ ಸೌಜನ್ಯ ಅಗತ್ಯ

ವಿಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ಅಧಿಕಾರಿಯ ಅಭಿಪ್ರಾಯ
ವಿಶ್ವಸಂಸ್ಥೆ, ಜು.23: ಭಾರತ-ಪಾಕಿಸ್ತಾನಗಳ ನಡುವಿನ ಕಾಶ್ಮೀರ ಸಮಸ್ಯೆಯ ಪರಿಹಾರಕ್ಕೆ ಉಭಯ ದೇಶಗಳಲ್ಲೂ ಸೌಜನ್ಯವು ಅಗತ್ಯವಾಗಿದೆಯೆಂದು ವಿಶ್ವಸಂಸ್ಥೆಯ ಉನ್ನತ ಭಯೋತ್ಪಾದನೆ ನಿಗ್ರಹ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘‘ನಾವು ಸದಸ್ಯ ರಾಷ್ಟ್ರಗಳ ಸೌಜನ್ಯವನ್ನೂ ಬಯಸುತ್ತೇವೆ. ಅವುಗಳಲ್ಲಿ ಸೌಜನ್ಯವಿಲ್ಲದಿದ್ದರೆ ಸಮಸ್ಯೆಯನ್ನು ತಾವು ಪರಿಹರಿಸುವುದಾದರೂ ಹೇಗೆ?’’ ಎಂದು ವಿಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ಸಮಿತಿಯ ಕಾರ್ಯಕಾರಿ ನಿರ್ದೇಶಕ ಜೀನ್ ಪೌಲ್ ಲ್ಯಾಬೋರ್ಡ್ ಪ್ರಶ್ನಿಸಿದ್ದಾರೆ.
ಭಾರತ-ಪಾಕಿಸ್ತಾನಗಳ ನಡುವಿನ ಕಾಶ್ಮೀರ ಸಮಸ್ಯೆ ಹಾಗೂ ಸಂಘರ್ಷದಿಂದಾಗಿ ಪ್ರದೇಶದಲ್ಲಿ ಭಯೋತ್ಪಾದನೆಯ ಸಮಸ್ಯೆಯ ಕುರಿತಾದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.
ತಡೆ ರಾಜತಂತ್ರ ಹಾಗೂ ಸಂಘರ್ಷ ಪರಿಹಾರದಲ್ಲಿ ವಿಶ್ವಸಂಸ್ಥೆಯ ಪಾತ್ರವು ಜನರನ್ನು ಒಟ್ಟಿಗಿರಿಸುವುದು ಹಾಗೂ ಮಾತನಾಡುವುದನ್ನು ಮುಂದುವರಿಸುವುದಾಗಿದೆ. ಒಂದು ದಿನ ತಾವು ಈ ಸಂಘರ್ಷವನ್ನು ಕೊನೆಗಾಣಿಸಿ, ಪರಿಹರಿಸುವ ಹಾಗೂ ಭಯೋತ್ಪಾದನೆ ಕೃತ್ಯಗಳನ್ನು ಕಡಿಮೆಗೊಳಿಸುವ ಆಶಾವಾದ ಹೊಂದಿದ್ದೇವೆಂದು ನಿನ್ನೆ ಪತ್ರಿಕಾಗೋಷ್ಠಿಯೊಂದರಲ್ಲಿ ಲ್ಯಾಬೋರ್ಡ್ ಹೇಳಿದ್ದಾರೆ.
ಭಯೋತ್ಪಾದನೆಯ ಕುರಿತು ಮಾತನಾಡಿದ ಅವರು, ವಿಶ್ವಾದ್ಯಂತ ಸುಮಾರು 100 ದೇಶಗಳ 30 ಸಾವಿರಕ್ಕೂ ಹೆಚ್ಚು ಮಂದಿ ವಿದೇಶಿ ಭಯೋತ್ಪಾದಕರನ್ನೊಳಗೊಂಡಿರುವ ಭಯೋತ್ಪಾದನೆಯು ಜಾಗತಿಕ ಬೆದರಿಕೆಯಾಗಿದೆ. ಅದಕ್ಕೆ ಸಮಗ್ರ ಹಾಗೂ ಒಗ್ಗಟ್ಟಿನ ಪ್ರತಿಕ್ರಿಯೆ ಅಗತ್ಯವಾಗಿದೆ ಎಂದಿದ್ದಾರೆ.
ಭಯೋತ್ಪಾದನೆಯ ಬೆದರಿಕೆ ಜೀವಂತವಾಗಿದೆಯೆಂಬುದರಲ್ಲಿ ಸಂದೇಹವೇ ಇಲ್ಲ. ದುರದೃಷ್ಟವಶಾತ್, ಅದು ಹಲವು ಸ್ಥಳಗಳಲ್ಲಿ ಪ್ರದರ್ಶಿಸಲ್ಪಟ್ಟಿರುವಂತೆ ಭೀಕರವೂ ಆಗಿದೆ. ಒಂದು ದೇಶವು ಈ ಪಿಡುಗಿನ ವಿರುದ್ಧ ಏಕಾಂಗಿ ಹೋರಾಟ ನಡೆಸಲಾರದು ಹಾಗೂ ಅಂತಹ ಸ್ಥಿತಿಯೂ ಇಲ್ಲವೆಂದು ಲ್ಯಾಬೋರ್ಡ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News