ಕೃಷ್ಣಮೃಗವೇ ಕಾರು ಬಿಡುತ್ತಿತ್ತು!

Update: 2016-07-25 10:29 GMT

ಜೈಪುರ್, ಜು.25:ಕೃಷ್ಣಮೃಗ ಮತ್ತು ಚಿಂಕಾರ ಬೇಟೆಯಾಡಿದ ಆರೋಪ ಹೊತ್ತಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಸೋಮವಾರ ರಾಜಸ್ಥಾನ ಹೈಕೋರ್ಟ್ ಖುಲಾಸೆಗೊಳಿಸಿದೆ. 1998ರಲ್ಲಿ ನಡೆದಿದೆಯೆನ್ನಲಾದ ಈ ಎರಡೂ ಪ್ರಕರಣಗಳಲ್ಲಿ ಸಲ್ಮಾನ್ ಖಾನ್ ಅವರನ್ನು ಬೆನಿಫಿಟ್ ಆಫ್ ಡೌಟ್ ಆಧಾರದಲ್ಲಿ ಕೋರ್ಟ್ ದೋಷಮುಕ್ತಿಗೊಳಿಸಿದೆ.

ಕೆಳಗಿನ ಹಂತದ ನ್ಯಾಯಾಲಯವೊಂದು ಸಲ್ಮಾನ್ ಅವರಿಗೆ ಕೃಷ್ಣಮೃಗ ಬೇಟೆ ಹಾಗೂ ಚಿಂಕಾರ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮವಾಗಿ ಒಂದು ಹಾಗೂ ಐದು ವರ್ಷಗಳ ಜೈಲು ಶಿಕ್ಷೆ ಘೋಷಿಸಿರುವುದನ್ನು ಪ್ರಶ್ನಿಸಿ ಸಲ್ಮಾನ್ ಹೈಕೋರ್ಟಿಗೆ ಮೊರೆ ಹೋಗಿದ್ದರು. ಸೂರಜ್ ಭಾರ್ಜಾತ್ಯರ ಚಿತ್ರ ‘ಹಮ್ ಸಾಥ್ ಸಾಥ್ ಹೇ’ ಶೂಟಿಂಗಿಗಾಗಿ ಆಗಮಿಸಿದ್ದ ಸಮಯದಲ್ಲಿ ಸಲ್ಮಾನ್ ಹಾಗೂ ಇತರ ಏಳು ಸಹನಟರು ಬೇಟೆಯಾಡಿದ್ದರೆಂದು ಆರೋಪಿಸಲಾಗಿತ್ತು. ಆದರೆ ಅರಣ್ಯ ಇಲಾಖೆ ತನ್ನ ಮೇಲೆ ಅನಗತ್ಯವಾಗಿ ಆರೋಪ ಹೊರಿಸಿದೆಯೆಂದು ಸಲ್ಮಾನ್ ವಾದಿಸಿದ್ದರು.

ಸಲ್ಮಾನ್ ಅವರ ದೋಷಮುಕ್ತಿಗೆ ಟ್ವಿಟ್ಟರಿಗರು ತಮ್ಮ ಟ್ವೀಟ್‌ಗಳಿಂದ ಅವರನ್ನು ಕುಟುಕಿದ್ದಾರೆ. ಒಬ್ಬರಂತೂ ಕೃಷ್ಣ ಮೃಗವೇ ಕಾರು ಬಿಡುತ್ತಿತ್ತು, ಎಂದು ಅಪಹಾಸ್ಯ ಮಾಡಿದ್ದಾರೆ, ಇನ್ನೊಬ್ಬರು ‘ಚಿಂಕಾರವನ್ನು ಯಾರೂ ಕೊಂದಿಲ್ಲ, ಅದು ಆತ್ಮಹತ್ಯೆ ಮಾಡಿಕೊಂಡಿತ್ತು,’’ ಎಂದಿದ್ದಾರೆ. ‘‘ಸಲ್ಮಾನ್ ಖಾನ್ ಕೃಷ್ಣಮೃಗವನ್ನು ಕೊಂದಿಲ್ಲ. ಅವರ ಸಿನಿಮಾಗಳಿಲ್ಲದ ಉತ್ತಮ ಜಾಗಕ್ಕೆ ಅವುಗಳನ್ನು ಕಳುಹಿಸಿದ್ದಾರೆ,’’ ಎಂದು ಇನ್ನೊಂದು ಟ್ವೀಟ್ ಹೇಳಿದೆ.

ಟ್ವಿಟ್ಟರಿನ ಅಷ್ಟೆಲ್ಲಾ ಪ್ರತಿಕ್ರಿಯೆಗಳಿಗೂ ನಟ ಮೌನ ವಹಿಸಿದ್ದಾರೆ. ‘ಸುಲ್ತಾನ್ ಚಿತ್ರದ ಶೂಟಿಂಗ್ ಮುಗಿಸಿ ಬರುವಾಗ ರೇಪ್ ಮಾಡಲ್ಪಟ್ಟ ಮಹಿಳೆಯ ಸ್ಥಿತಿ ತನ್ನದಾಗುತ್ತಿತ್ತು’ ಎಂಬ ಅವರ ಇತ್ತೀಚಿಗಿನ ಅವರ ಹೇಳಿಕೆ ವಿಚಾರದಲ್ಲೂ ಟ್ವಿಟ್ಟರ್ ಪ್ರತಿಕ್ರಿಯೆಗೆ ಸಲ್ಮಾನ್ ಮೌನ ವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News