ರಾಜಕೀಯ ಮತ್ತು (ಅ)ನೈತಿಕತೆ
ಕಳೆದ ಅನೇಕ ದಶಕಗಳಿಂದ ಭಾರತದ ರಾಜಕೀಯದ ಸಂಸ್ಕೃತಿ ವಿಕೃತವಾಗುತ್ತಿದೆ. ನೀತಿಯೆಂಬುದು ಕಾಣದ ಗುಣವಾಗುತ್ತಿದೆ. ಭಾರತೀಯ ದಂಡಸಂಹಿತೆ ಮಾತ್ರವಲ್ಲ ಕಾನೂನಿನ ಎಲ್ಲ ಉಲ್ಲಂಘನೆಗಳನ್ನು ಮಾಡಬಲ್ಲವರು ಮಾತ್ರ ರಾಜಕಾರಣದಲ್ಲಿರಬಹುದೆಂಬ ಹೊಸ ರಾಜನೀತಿ ಹುಟ್ಟಿಕೊಂಡಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಗುಜರಾತ್‌ನಿಂದ ಅಸ್ಸಾಮಿನ ವರೆಗೆ ದೇಶದ ರಾಜಕೀಯವನ್ನು ಈ ನೈತಿಕ ಅಧಃಪತನವು ವ್ಯಾಪಿಸಿದೆ. ಮಾಧ್ಯಮಗಳಲ್ಲಿ ಇದೇ ಕೇಂದ್ರವೃತ್ತಾಂತವಾಗುತ್ತಿರುವುದರಿಂದ ಇದು ನಮ್ಮ ವೈಭವವನ್ನು ವಿಶ್ವವ್ಯಾಪಕವಾಗಿಸುತ್ತಿದೆ.
ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಭಾಜಪದ ನಾಯಕನೊಬ್ಬ ಮಾಯಾವತಿಯ ಬಗ್ಗೆ ಕೀಳು ಅಭಿರುಚಿಯ ಟೀಕೆಯನ್ನು ಮಾಡಿದರು. ಭಾಜಪ ಸಂಕೇತಿಸುತ್ತದೆಯೆಂದು ನಂಬುವ(!) ಮಹಿಳೆಯರನ್ನು ಗೌರವಿಸುವ ಭಾರತೀಯತೆಯನ್ನು, ಭಾರತ ಮಾತಾಕೀ ಜೈ ಎಂಬ ಭಾವನೆಯ ಹಿಂದೆ ಇರಬೇಕಾಗಿದ್ದ ಮಾತೃರೂಪವನ್ನು ತಿಪ್ಪೆಗೆಸೆದರು. ರಾಜನೀತಿಯಲ್ಲಿ ಹೊಸದೊಂದು ಅಧ್ಯಾಯ ಆರಂಭವಾಯಿತು.
ಇದು ಇಷ್ಟಕ್ಕೇ ಮುಗಿಯುವುದೆಂದು ಯಾರೂ ಭಾವಿಸಲಾರರು. ಮಾಯಾವತಿಯವರ ಪ್ರತಿಕ್ರಿಯೆ ಎಷ್ಟು ಪ್ರಬಲವಾಗಿತ್ತೆಂದರೆ ಅದು ಭಾಜಪವನ್ನು ಗಾಬರಿಗೀಡುಮಾಡಿತು. ತಕ್ಷಣವೇ ಕಾರ್ಯಪ್ರವೃತ್ತವಾದ ಭಾಜಪ ಆ ನಾಯಕನನ್ನು ದೂರಮಾಡಿದರು. ಉತ್ತರಪ್ರದೇಶದ ಚುನಾವಣೆ ಹತ್ತಿರವಾಗಿರುವುದರಿಂದ ಹೀಗೆ ಮಾಡದೆ ಭಾಜಪಕ್ಕೆ ಬೇರೆ ದಾರಿಯಿರಲಿಲ್ಲ. (ಪ್ರಾಯಃ ಚುನಾವಣೆ ಮುಗಿದ ನಂತರ ಆ ನಾಯಕನನ್ನು ಮತ್ತೆ ಬರಸೆಳೆಯಬಹುದು!) ಮಾಯಾವತಿ ತನ್ನ ರಾಜನೀತಿಯನ್ನು ಎತ್ತರದಲ್ಲಿಡಬಹುದಾಗಿತ್ತು. ಆದರೆ ಅವರ ಬೆಂಬಲಿಗರು ರಾಜನೀತಿಯನ್ನು ಭಾಜಪದ ನಾಯಕನ ಟೀಕೆಯ ಮಟ್ಟಕ್ಕೆ ಮಾತ್ರವಲ್ಲ ಅದಕ್ಕಿಂತಲೂ ಕೆಳಮಟ್ಟಕ್ಕೆ ಒಯ್ದರು. ಇದರಿಂದಾಗಿ ರಾಜನೀತಿಯ ಕೊಳಚೆಗುಂಡಿ ಇನ್ನಷ್ಟು ದೊಡ್ಡದಾಯಿತು. ನಮ್ಮ ಶಾಸಕರು, ಸಂಸದರು ಮತ್ತಿತರ ನಾಯಕರು ತೋಳ್ಬಲವನ್ನೇ ನಂಬಿ ಆಯ್ಕೆಯಾದವರಂತೆ ವರ್ತಿಸುತ್ತಿದ್ದಾರೆ. ಭ್ರಷ್ಟಾಚಾರ, ಅನೀತಿ ಇವನ್ನೆಲ್ಲ ಮಸಾಲಾ ಸಿನೆಮಾಗಳಲ್ಲಿ ನೋಡುತ್ತಿದ್ದೆವು. ಅವೂ ಡಬ್ಬಾ ಸೇರುವಷ್ಟು ಪ್ರಚ್ಛನ್ನವಾಗಿ ರಾಜಕಾರಣಿಗಳು ನಡೆದುಕೊಳ್ಳುತ್ತಿದ್ದಾರೆ. ನಮ್ಮ ಹೆಣ್ಣುಮಕ್ಕಳನ್ನು ರಾಜಕಾರಣಿಗಳಿಂದ ರಕ್ಷಿಸು ದೇವರೇ ಎಂದು ಪ್ರಾರ್ಥಿಸುವ ಕಾಲ ಬರಬಹುದೇನೋ?
ಇದನ್ನು ಒಪ್ಪಿಕೊಳ್ಳುವವರಂತೆ ಕುರಿಮಂದೆಯಂತಿರುವ ಪ್ರಜೆಗಳು ನಡೆದುಕೊಳ್ಳುತ್ತಿದ್ದಾರೆ. ಒಂದು ರೀತಿಯಲ್ಲಿ ಕುರಿಮಂದೆಗೆ ತೋಳಗಳೇ ಕಾವಲುಗಾರರು! ಮುಂದೇನಾಗಬಹುದೆಂದು ನಿರೀಕ್ಷಿಸುವುದು ತಪ್ಪಲ್ಲ. *
ಇತ್ತೀಚೆಗಿನ ರಾಜಕೀಯ ಬೆಳವಣಿಗೆಗಳು- ವಿಶ್ವದ ಎಲ್ಲಕಡೆ ಒಂದೇ ಬಗೆಯ ನೀತಿಯನ್ನು ಸಾರುತ್ತವೆ. ಬಹುತೇಕ ಎಲ್ಲ ನಾಯಕರು ತಮ್ಮ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ನೀತಿಪಾಠಗಳಲ್ಲಿ ತಮ್ಮ ವರ್ಚಸ್ಸು ಉಳಿಯುವುದನ್ನಷ್ಟೇ ಬಯಸುತ್ತಾರೆ. ಮುಂದೆ ಏನಾಗಬಹುದೆಂಬ ಯೋಚನೆಯನ್ನು ಗಮನಿಸದೆ ತನ್ನ ಉಳಿವಿಗೆ ಮತ್ತು ತನಗೆ ಸರಿಯೆಂದು ಕಾಣುವ ಅಥವಾ ಹಾಗೆ ಕಾಣಿಸಿ ಮಂದಿಯ ಕಣ್ಣಿಗೆ ಮಣ್ಣೆರಚುವ ಸಾಧನಗಳನ್ನು ಮುಖವಾಡಗಳಂತೆ ಬಳಸುತ್ತಾರೆ. ಅಮೆರಿಕದ ರಾಜನೀತಿ ಎಂದಿಗೂ ವಿಶ್ವಶಾಂತಿಯನ್ನು ಬಯಸಿರಲಿಲ್ಲವೆಂಬುದು ನಿರ್ವಿವಾದ. ಅವರ ನೀತಿಯ ಚೌಕಟ್ಟೆಂದರೆ ಅವರ ಅನುಕೂಲ. ಅದು ಶಸ್ತ್ರದಿಂದ ಬರಲಿ, ಶಾಸ್ತ್ರದಿಂದ ಬರಲಿ ಅವರಿಗೆ ಏನೂ ಅನ್ನಿಸುವುದಿಲ್ಲ. ಮುಂದೆ ಅಮೆರಿಕದ ಅಧ್ಯಕ್ಷರಾಗಬಯಸುವ ಡೊನಾಲ್ಡ್ ಟ್ರಂಪ್ ಈಗಲೇ ಅಮೆರಿಕದಲ್ಲಿ ರಾಷ್ಟ್ರೀಯತೆಯ ಬೆಂಕಿಯನ್ನು ಹಚ್ಚುತ್ತಿದ್ದಾರೆ. ಅಲ್ಲಿರುವ ಲಕ್ಷೋಪಲಕ್ಷ ವಿದೇಶಿಗಳಿಗೆ ಕರಿಛಾಯೆ ಗೋಚರವಾಗುತ್ತಿದೆ. ಇದೇ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅವರಿಗೆ ಸಮದಂಡಿಯಾಗಬಲ್ಲ ಎಲ್ಲ ಲಕ್ಷಣಗಳನ್ನು ಮುಂಚಿತವಾಗಿ ರೂಪಿಸಿಕೊಂಡ ಭಾರತದ ಪ್ರಧಾನಿ ದೇಶಭಕ್ತಿಯ ಬೆಂಕಿ ಹಚ್ಚಿ ತನ್ನ ಮಹಾತ್ವಾಕಾಂಕ್ಷೆಯನ್ನು ಬೇಯಿಸಿಕೊಳ್ಳಲು ಬಯಸಿದ್ದಾರೆ. ಇಲ್ಲಿ ಎದುರಾಗುವ, ಎದುರಾಗಬಲ್ಲ ವಿಚಾರಗಳನ್ನು ತಿರುಚುವ, ತಿರುಚಬಲ್ಲ ಒಂದು ದೊಡ್ಡ ತಂಡವೇ ಅವರ ಜೊತೆಗಿದೆೆ. ಉದಾಹರಣೆಗೆ ರಾಜ್ಯಗಳ ಚುನಾವಣೆಗಳಲ್ಲಿ ಹೇಗೆ ಗೆಲ್ಲಬೇಕೆಂಬ ಬಗೆಗೆ ಇರುವ ಜಾತಿಸೂತ್ರಗಳನ್ನು ಕಾಂಗ್ರೆಸ್ ಹೇಗೆ ಹಿಂದೆ ಬಳಸಿಕೊಂಡಿತೋ ಹಾಗೆಯೇ ಈಗ ಭಾಜಪವು ಬಳಸಿಕೊಳ್ಳುತ್ತಿದೆ. ಜಾತಿಗಿಂತ ದೇಶದ ಅಭಿವೃದ್ಧಿ ಮುಖ್ಯವೆಂದು ಸಾರುವ ಪ್ರಧಾನಿಯವರು ಮತ-ಧರ್ಮಗಳನ್ನೂ ಜಾತಿಯಂತೆಯೇ ತಿಪ್ಪೆಗೆಸೆಯಿರಿ ಎಂದಿದ್ದರೆ ಚೆನ್ನಾಗಿತ್ತು. ಆದರೆ ಹಾಗೆ ಹೇಳುವ ಮನಸ್ಸು ಅವರಿಗಿಲ್ಲ; ಏಕೆಂದರೆ ಅದು ಅವರ ಅಜೆಂಡಾದಲ್ಲಿಲ್ಲ. ಈಗ ಉಂಟಾದ ಪರಿಸ್ಥಿತಿಯಿಂದ ದಲಿತರಿಗೆ ಆಗಿರುವ ಅಸಮಾಧಾನವನ್ನು ದೂರಮಾಡುವುದಷ್ಟೇ ಅವರ ಉದ್ದೇಶವಾಗಿತ್ತು. ಪ್ರಾಯಃ ಮುಂದೆ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾದರೆ ಈಗಾಗಲೇ ಬಿಗಡಾಯಿಸಿದ ದೇಶಭಕ್ತಿಯ ಉರಿಗೆ ಅಂತಹದ್ದೇ ಉರಿ ಎದುರಾಗುವ ಭಾರತ-ಅಮೆರಿಕದ ಸಂಬಂಧ ಹೇಗಿರಬಹುದೆಂಬುದು ಕುತೂಹಲಕಾರಿ.
ಆದರೆ ಇವನ್ನು ಇಷ್ಟಕ್ಕೇ ಮಿತಿಗೊಳಿಸಿ ನೋಡುವುದು ಸಾಧುವಾಗದು. ಇದರ ಹಿಂದಿನ ಮನೋವೃತ್ತಿ ಚರ್ಚೆಗೆ ಅರ್ಹ. ಯಾವುದು ನೀತಿ? ಯಾವುದು ಅನೀತಿ?
*
ನೈತಿಕತೆಯ ಕುರಿತ ಯಾವುದೇ ಚರ್ಚೆಯು ಅನೈತಿಕತೆಯನ್ನು ಚರ್ಚಿಸಲೇ ಬೇಕು. ಒಂದನ್ನು ಬಿಟ್ಟು ಇನ್ನೊಂದಿಲ್ಲ. ಸರಿಯೆಂಬುದಿಲ್ಲದಿರುತ್ತಿದ್ದರೆ ತಪ್ಪೆಂಬುದು ಇರುತ್ತಿರಲಿಲ್ಲ ಮತ್ತು ತಪ್ಪೆಂಬುದು ಇಲ್ಲದಿರುತ್ತಿದ್ದರೆ ಸರಿಯೆಂಬುದು ಇರುತ್ತಿರಲಿಲ್ಲ ಅಲ್ಲವೇ? ಹಾಗೆಯೇ ಅನೈತಿಕತೆಯೆಂಬುದಿಲ್ಲ ದಿರುತ್ತಿದ್ದರೆ ನೈತಿಕತೆಯೆಂಬುದು ಇರುತ್ತಿರಲಿಲ್ಲ; ಅಥವಾ ಹೀಗೂ ಹೇಳಬಹುದು: ನೈತಿಕತೆಯ ಮಾನದಂಡಗಳು ಅನೈತಿಕತೆಯಲ್ಲೇ ಇವೆ ಹಾಗೂ ಅನೈತಿಕತೆಯ ಮಾನದಂಡಗಳು ನೈತಿಕತೆಯಲ್ಲೇ ಇವೆ. ಸಮಾಜದಲ್ಲಿ ಇವೆಲ್ಲ ಇದೆಯೆಂದೇ ಸಮಾಜವಿಜ್ಞಾನ ಸೃಷ್ಟಿಯಾಗಿದೆ. ಮನುಷ್ಯಸೃಷ್ಟಿ ಈ ಭೂಮಿಯೆಂಬ ಗ್ರಹದಲ್ಲಿ ಆಗುವ ಮೊದಲು ಸಮಾಜ ಹೇಗಿತ್ತೋ ಗೊತ್ತಿಲ್ಲ; ಆದರೆ ಮನುಷ್ಯನೆಂಬ ಯೋಚಿಸಬಲ್ಲ ಪ್ರಾಣಿ ಸೃಷ್ಟಿಯಾದ ಮೇಲಂತೂ ಪ್ರಾಣಿಗಳಿಗಿಲ್ಲದ ಅಥವಾ ಇದ್ದರೂ ಹಿತಮಿತವಾಗಿ ಬಳಕೆಯಾಗಿದ್ದ ಕಾಮ, ಕ್ರೋಧ, ಲೋಭ, ಮೋಹ, ಮದ ಮತ್ಸರಗಳೆಂದು ನಾವು ಗುರುತಿಸುವ ಗುಣಗಳು ಅತಿರೇಕಕ್ಕೆ ತಲುಪಿ ಸಮಾಜಹಿತವನ್ನು ಕಂಗೆಡಿಸಿದವು. ಪ್ರಾಯಃ ಈ ಎಲ್ಲ ಗುಣಗಳು -ಆರಂಭದಲ್ಲಲ್ಲ-ತಮ್ಮ ಅತಿಯಲ್ಲಿ- ಕೆಡುತ್ತವೆ. ಏಕೆಂದರೆ ಇವೆಲ್ಲ ಇಲ್ಲದ ಮನುಷ್ಯನೇ ಇರಲಿಕ್ಕಿಲ್ಲ. ಕಾಮವೆಂಬುದು ಜೀವಸಹಜ. ಕ್ರೋಧವೆಂಬುದು ಪ್ರಾಣಿಗಳಿಗೂ ಇದೆ; ಇನ್ನು ಮನುಷ್ಯರಿಗಿಲ್ಲದಿದ್ದೀತೇ? ಒಂದು ಸರಳ ಉದಾಹರಣೆಯೆಂದರೆ ತನ್ನ ಕೈಸೇರಿದ ಆಹಾರವನ್ನು ಇನ್ನೊಂದು ಜೀವಿ ಕಬಳಿಸಲು ಇಲ್ಲವೇ ಅಪಹರಿಸಲು ಬಂದರೆ ಯಾವ ಜೀವಿ ತಾನೇ ಸಿಟ್ಟಿಗೇಳದಿದ್ದೀತು? ಇದು ಒಂದರ್ಥದಲ್ಲಿ ಲೋಭವೂ ಹೌದು. ಮೋಹವೆಂಬುದನ್ನು ನೋಡಬೇಕಾದರೆ ಸುಮ್ಮನೆ ಒಂದು ಸುತ್ತು ಪ್ರಾಣಿವರ್ತುಲದಲ್ಲಿ ಕಣ್ಣು ಹಾಯಿಸಬೇಕು: ಬೆಕ್ಕು ತನ್ನ ಮರಿಯನ್ನು ಕಾಪಾಡುವುದನ್ನು ಗಮನಿಸಿ. ಇಂತಹ ನಿದರ್ಶನಗಳು ಎಲ್ಲೆಡೆ (ಪಟ್ಟಣಗಳ ಹೊರತು) ಸಿಗಬಹುದು. ಮದವೆಂಬುದು ಪ್ರಾಣಿಗಳಲ್ಲಿ ಸಾಂದರ್ಭಿಕ. ಒಂದು ಥರದ ಹುಚ್ಚು. ಆಗ ಎಂತಹ ಶಾಂತಿಪ್ರಿಯ ಪ್ರಾಣಿಯೂ ಸಿಟ್ಟಿಗೇಳುತ್ತದೆ. ಮತ್ಸರ ಮಾತ್ರ ಪ್ರಾಣಿಗಳಲ್ಲಿ ಅಪರೂಪ. ಏಕೆಂದರೆ ಅವಕ್ಕೆ ಅಂತಹ ತಾರತಮ್ಯದ ಆವಶ್ಯಕತೆಯೇ ಬೀಳುವುದಿಲ್ಲ. ಮನುಷ್ಯನ ಯೋಚಿಸುವ ಗುಣವೇ ಈ ಗುಣಗಳ ಮಿತಿಗೆ ಮಾರಕವಾಗಿದೆಯೇನೋ ಅನ್ನಿಸುತ್ತದೆ. ಆದರೆ ಇವಿಷ್ಟೂ ಗುಣಗಳನ್ನು ಪ್ರೇರೇಪಿಸಬಲ್ಲ ಗುಣವೆಂದರೆ ಆಸೆ. ಆಸೆಯೇ ದುಃಖಕ್ಕೆ ಕಾರಣವೆಂದು ಮಹಾತ್ಮರು ಹೇಳಿದರೂ ಅಂತಹ ದುಃಖವೇ ಇಷ್ಟವಾದ ಮನುಷ್ಯರೇ ಹೆಚ್ಚಾಗಿರುವುದು ಮನುಷ್ಯ ಜೀವನದ ದುರಂತವೆನ್ನುವುದಕ್ಕಿಂತಲೂ ವಿಶ್ವದ ವಿಚಿತ್ರವೆನ್ನಬಹುದು. ಆಸೆ ಎಲ್ಲರಲ್ಲೂ ಸ್ವಲ್ಪಮಟ್ಟಿಗೆ ಇರುತ್ತದೆ; ಇರಲೇಬೇಕು. ಇವು ಪ್ರಾಣಿಗಳಿಗೂ ಇರುತ್ತವೆ. ಮನುಷ್ಯರಲ್ಲಂತೂ ಆಸೆಯಿಲ್ಲದಿದ್ದರೆ ಚಿಂತನೆಗಳು ಹುಟ್ಟಲಾರವು. ಆಸೆಯಿಲ್ಲದಿದ್ದರೆ ಉನ್ನತಿ ಲಭಿಸದು. ಆಸೆಯ ಹೊರತಾಗಿ ಮಹತ್ವವೇನೂ ಘಟಿಸದು. ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳು ಲಭಿಸಬೇಕಾದರೂ ಕೀರ್ತಿಯ ಆಸೆ ಬೇಕಷ್ಟೇ? ಮೇಲೆ ಹೇಳಿದ ಆರೂ ಗುಣಗಳಿಗೆ ಆಸೆಯೇ ಮೂಲ.
ಆದರೆ ಆಸೆಯೆಂಬುದು ವಿನಾಶಕಾರಿಯಾಗುವುದು ಈ ಆಸೆಯಿಂದ ಹುಟ್ಟಿಕೊಂಡ ಆಕಾಂಕ್ಷೆಯು ಮಹತ್ವಾಕಾಂಕ್ಷೆಯಾಗಿ ಪರಿಣಮಿಸಿದಾಗ. ಮನುಷ್ಯನು ಸಮಾಜವೆಂಬ ಪಿರಮಿಡ್‌ನಲ್ಲಿ ವಾಸಿಸುವವನು. ಇದು ಜಾತಿ-ಧರ್ಮಸೂಚಕವಾಗದೆ ವರ್ಗಸೂಚಕವಾಗಿರುತ್ತದೆ. ಕೆಳಹಂತದಲ್ಲಿ ಬೇಕಾದಷ್ಟು ಜನರು ತುಂಬಿಕೊಳ್ಳುತ್ತಾರೆ. ಅಲ್ಲಿ ಪರಸ್ಪರರ ಹಿತ ಅನಿವಾರ್ಯವಾಗಿಯಾದರೂ ಮುಖ್ಯವಾಗುತ್ತದೆ. ಜಗಳ ಮಾಡುವುದಕ್ಕೆ ಸ್ಥಳಾವಕಾಶವಾಗಲೀ ಕಾಲಾವಕಾಶವಾಗಲೀ ಇರುವುದಿಲ್ಲ. ಇಂತಹ ಸಮಾಜದಲ್ಲಿಯೂ ಅತೀ ಹೆಚ್ಚು ಪರಹಿತವನ್ನು ಗಣಿಸುವವನು ಜನರಿಂದ ಎತ್ತರದಲ್ಲಿ ನಿಲ್ಲದಿದ್ದರೂ ಜನರ ನಡುವೆ ಗುರುತಿಸಲ್ಪಡುತ್ತಾನೆ. ಇತರರು ಗೌರವದಿಂದ ತಲೆಬಾಗುವಂತೆ ಮಾಡಿ ಕಾಣಿಸಿಕೊಳ್ಳುತ್ತಾನೆ
ಆದರೆ ಮನುಷ್ಯನ ಆಕಾಂಕ್ಷೆ ಈ ಹಿತಮಿತಗಳನ್ನು ಮೀರಿದಂತೆಲ್ಲ ಆತನು ಪಿರಮಿಡ್‌ನ ಮೇಲಂತಸ್ತುಗಳ ಆಸೆಯನ್ನು ಹೊಂದುತ್ತಾನೆ. ಗೌರವಕ್ಕಿಂತ ಭಯದ ಮೂಲಕ ಮೇಲೇರುವುದು ಇಷ್ಟವಾಗುತ್ತದೆ. ಇನ್ನೊಬ್ಬರ ಬೆನ್ನೇರಿಯಾದರೂ ಎಲ್ಲರ ಕಣ್ಣಿಗೆ ಕಾಣಬೇಕೆಂಬ ಆಸೆ ಅವನಿಗೆ. (ಹೀಗೆ ಇನ್ನೊಬ್ಬನ ಬೆನ್ನೇರುವಾಗ ಆತನಿಗೆ ಹೊರೆಯಾಗುತ್ತೇನೆಂಬ ಅರಿವಿರುವವನು ಮೇಲೇರಲಾರ.) ಮೇಲೇರಿದಂತೆಲ್ಲ ಅಲ್ಲಿ ಶಕ್ತಿಯ ಪ್ರಭಾವ ಹೆಚ್ಚಾಗಿ ಜೀವಸೆಲೆಯ, ಜೀವಾನಿಲದ ಮತ್ತು ನಿಬಿಡತೆಯ ಅಭಾವ ಗುರುತಾದರೆ ಆತ ಮತ್ತೆ ತನ್ನ ತಳಹದಿಗೆ ಬರುವುದನ್ನು ಇಷ್ಟಪಡುತ್ತಾನೆ. ಹಾಗಲ್ಲದೇ ಕೆಲವೇ ಮಂದಿಯ ನಡುವೆ ಗುರುತಾಗುತ್ತಾ ಕೆಳಹಂತದ ಜನರಗಿಂತ ಸಾಕಷ್ಟು ಅಂತರವನ್ನು ಕಾಪಾಡಿಕೊಳ್ಳುವವನು ಎಲ್ಲರಿಗೂ ಗುರುತಾಗುತ್ತಾನೆ ಮತ್ತು ಎಲ್ಲರ ಗೌರವಕ್ಕಲ್ಲದಿದ್ದರೂ ಭಯಕ್ಕಾದರೂ ಪಾತ್ರನಾಗುತ್ತಾನೆ.
ಇನ್ನೂ ಎತ್ತರಕ್ಕೆ ಹೋದಾಗ ಆತನ ಸುತ್ತ ಕೈಬೆರಳೆಣಿಕೆಯ ಜನರಿರುತ್ತಾರೆ; ಇವರೆಲ್ಲ ತಮಗಿಂತ ಕೆಳಹಂತದ ಜನರನ್ನು, ಸಮಾಜವನ್ನು ಶಕ್ತಿಯಿಂದ, ದರ್ಪದಿಂದ, ಮತ್ತು ಇವಕ್ಕೆ ಪೋಷಕವಾಗಬಲ್ಲ ಹಿಂಸೆ, ಕ್ರೌರ್ಯ ಮುಂತಾದ ಪ್ರವೃತ್ತಿಯಿಂದ ಆಳಬಯಸುತ್ತಾರೆ. ಈ ಹಂತದಲ್ಲಿ ಪಿರಮಿಡ್‌ನ ತಳಹದಿಯಲ್ಲಿರುವವರಿಗೂ ಮೇಲಿರುವವರಿಗೂ ಸಾಕಷ್ಟು ಅಂತರವಿದ್ದು ಪರಸ್ಪರ ಅರ್ಥವಿಸುವಿಕೆಯ ಅಭಾವವಿರುತ್ತದೆ. ಕೆಲವೇ ಮಂದಿ ಬಹುಜನರನ್ನು ಆಳುವ ಈ ಕ್ರಮವನ್ನು ಇಂಗ್ಲಿಷ್‌ನಲ್ಲಿ ಟ್ಝಜಿಜಚ್ಟ್ಚಎನ್ನುತ್ತಾರೆ.
ಇದನ್ನೂ ಮೀರಿ ಮನುಷ್ಯನು ಪಿರಮಿಡ್‌ನ ತುತ್ತತುದಿಗೆ ತಲುಪಿದ ನೆಂದರೆ ಆತನೊಬ್ಬನೇ ಸರ್ವಶಕ್ತನಾಗುತ್ತಾನೆ. ಆತನ ಇಷ್ಟಾನಿಷ್ಟಗಳೇ ಎಲ್ಲರ ಇಷ್ಟಾನಿಷ್ಟಗಳೆಂದು ಆತ ತಿಳಿಯುವ ವರ್ತುಲ ಸೃಷ್ಟಿಯಾಗುತ್ತದೆ. ಇಂಥಲ್ಲಿ ವಂದಿಮಾಗಧರು ಸಾಕಷ್ಟು ಹುಟ್ಟಿಕೊಳ್ಳುತ್ತಾರೆ. (ಈ ವಂದಿಮಾಗಧರ ಸಂತತಿ ಸೂಚಿಸುವ ಲಕ್ಷಣವೆಂದರೆ ಮಹತ್ವಾಕಾಂಕ್ಷೆಯಿರುವ ಮಂದಿ ಸಮಾಜದಲ್ಲಿ ಸಾಕಷ್ಟಿದ್ದು ಅವರೆಲ್ಲರೂ ಶಿಖರವನ್ನು ತಲುಪಲಾಗದಿದ್ದಾಗ ಅಲ್ಲೋ ಇಲ್ಲೋ ಸುಸ್ತಾಗಿ ನಿಂತು ಗುಲಾಮಗಿರಿಯಲ್ಲಿ ತೃಪ್ತರಾಗುವುದು.) ಬರ್ಲಿನ್ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಹಿಟ್ಲರ್ ಉದ್ಘಾಟಿಸಲಿಲ್ಲವೇ? ಅದನ್ನು ಆಗಿನ ಜನ ವಿರೋಧಿಸಿದರೇ?
ಇಂತಹವರ ಸಂಖ್ಯೆ ಈಗ ಎಂದಿಗಿಂತ ಹೆಚ್ಚಾಗಿದೆ. ಎಲ್ಲ ಕಡೆ ಆಳುವವವರ, ಮತ್ತು ಇದನ್ನು ರೂಪಿಸಬಲ್ಲ ರಾಜಕೀಯ ಇಂತಹ ಮನುಷ್ಯವರ್ತನೆಯನ್ನೇ ಲಾಂಛನವಾಗಿಸಿದೆ. ಅಲ್ಲಿ ಎಲ್ಲವೂ ನೀತಿಯೇ. ಸಮಾಜದ ನೀತಿ-ಅನೀತಿಯನ್ನು ಈ ಆಳುವ ಗುಂಪೇ ರೂಪಿಸುತ್ತದೆ. ಮನುಷ್ಯ ಆಧುನಿಕತೆಯತ್ತ ಸಾಗುತ್ತಿದ್ದಂತೆ ಎಲ್ಲ ಬಗೆಯ ಆವಿಷ್ಕಾರಗಳೂ ಈ ಆಳುವ ನೀತಿಗೆ ಪೂರಕವಾಗಿಯೇ ಕಾರ್ಯಪ್ರವೃತ್ತವಾಗುತ್ತದೆ. ಅಲ್ಲಿ ನಿರ್ಮಾಣ-ನಿರ್ನಾಮಗಳಿಗೆ ವ್ಯತ್ಯಾಸವಿರುವುದಿಲ್ಲ. ಎಲ್ಲವೂ ಸರಿ.