ಅಕಾಡಮಿಗಳಲ್ಲಿ ಮುಂಬೈ ಸಾಹಿತಿಗಳಿಗೆ ಅವಕಾಶ ಸಿಗುತ್ತಿಲ್ಲ -ಡಾ. ಸುನೀತಾ ಎಂ. ಶೆಟ್ಟಿ

Update: 2016-07-29 17:05 GMT

ಮುಂಬೈಯ ಖಾಲ್ಸಾ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ, ಮುಂಬೈ ವಿ.ವಿ. ಕನ್ನಡ ವಿಭಾಗದಲ್ಲಿ ಆಮಂತ್ರಿತ ಪ್ರಾಧ್ಯಾಪಕಿಯಾಗಿ ಸೇವಾ ನಿವೃತ್ತರಾಗಿರುವ ಡಾ. ಸುನೀತಾ ಎಂ. ಶೆಟ್ಟಿಯವರದು ಕನ್ನಡ -ತುಳು ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಹೆಸರು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಪುಸ್ತಕ ಬಹುಮಾನ, ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ತುಳು ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ, ರಾಣಿ ಅಬ್ಬಕ್ಕ ಪ್ರಶಸ್ತಿ, ಗುರು ನಾರಾಯಣ ಸಾಹಿತ್ಯ ಪ್ರಶಸ್ತಿ, ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ, ಮುಂಬೈ ಕರ್ನಾಟಕ ಸಂಘದ ಸಾಧಕ ಪ್ರಶಸ್ತಿ, ನುಡಿಸಿರಿ ಪ್ರಶಸ್ತಿ, ಕರ್ನಾಟಕ ಸರಕಾರದ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ.... ಇತ್ಯಾದಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುವ ಸಾಹಿತಿ ಡಾ. ಸುನೀತಾ ಎಂ. ಶೆಟ್ಟಿಯವರು ಮುಲ್ಕಿ ಬಪ್ಪನಾಡಿನಲ್ಲಿ ಆಗಸ್ಟ್ 13 ಮತ್ತು 14ರಂದು ನಡೆಯಲಿರುವ ತುಳು ಸಮ್ಮೇಳನದ ಅಧ್ಯಕ್ಷರಾಗಿ ನಿಯುಕ್ತಿಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರ ಜೊತೆ ನಡೆಸಿದ ಮಾತುಕತೆ ಇಲ್ಲಿದೆ.

ಪ್ರಶ್ನೆ: ಇಂದು 8ನೆ ಪರಿಛ್ಛೇದಕ್ಕೆ ತುಳುವಿನ ಸೇರ್ಪಡೆ ಬಗ್ಗೆ ಹೋರಾಟ ನಡೆಯುತ್ತಿದೆ. ಮುಲ್ಕಿಯಲ್ಲಿ ಜರಗಲಿರುವ ತುಳು ಸಮ್ಮೇಳನದ ಅಧ್ಯಕ್ಷರಾಗಿದ್ದೀರಿ. ನಿಮಗೆ ಅಭಿನಂದನೆ. ಇಂತಹ ಸಮ್ಮೇಳನದ ಮೂಲಕ ಯಾವ ರೀತಿಯ ಪ್ರಗತಿ ನಿರೀಕ್ಷಿಸಬಹುದು?

ಡಾ. ಸುನೀತಾ ಶೆಟ್ಟಿ: ಭಾಷೆಯ ಅರಿವಿಗೆ, ಜನ ಸಂಘಟನೆಗೆ ಸಮ್ಮೇಳನಗಳು ಅನಿವಾರ್ಯ. ಇಂದು ವಿದೇಶದ ದಾಳಿ ಸಂಸ್ಕೃತಿಯ ಮೇಲೆ ನಡೆಯುತ್ತಿದೆ. ಒಳ್ಳೆಯ ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಪರದೇಶಕ್ಕೆ ಹೋಗುತ್ತಿದ್ದಾರೆ, ಹೋಗಲಿ. ಆದರೆ ನಮ್ಮ ಭಾಷೆ ಸಂಸ್ಕೃತಿಯ ಅರಿವು ಎಲ್ಲರಲ್ಲಿ ಮೂಡಿಸಬೇಕು. ಭಾಷೆ - ಸಾಹಿತ್ಯ ಬೆಳೆದು ಸಹಸ್ರಾರು ಜನರನ್ನು ಮುಟ್ಟಬೇಕು. ಜನರನ್ನು ತಲುಪುವುದು ನಮ್ಮ ಉದ್ದೇಶ. ಮರೆತು ಹೋಗುತ್ತಿರುವ ಸಂಸ್ಕೃತಿಯನ್ನು ಮತ್ತೆ ನೆನಪಿಸಲು ಇಂತಹ ಸಮ್ಮೇಳನಗಳು ನೆರವು ನೀಡುತ್ತವೆ. ಇಂದು 8ನೆ ಪರಿಚ್ಛೇದಕ್ಕೆ ತುಳು ಸೇರ್ಪಡೆ ಬಗ್ಗೆ ಹೋರಾಟವಾಗುತ್ತಿದೆ. ಸಮ್ಮೇಳನಗಳನ್ನು ನಡೆಸುವ ಮೂಲಕ ಸಂವಿಧಾನದ 8ನೆ ಪರಿಚ್ಛೇದಕ್ಕೆ ತುಳುವನ್ನು ಸೇರಿಸಲಾಗದು. ಇನ್ನು ಅಕಾಡಮಿಗಳಿಗೂ ಇದಕ್ಕೂ ಸಂಬಂಧವಿಲ್ಲ. ಕರ್ನಾಟಕ ಸರಕಾರವೇ ಮೊದಲು ಈ ಭಾಷೆಗೆ ಮಾನ್ಯತೆ ಕೊಡಬೇಕು. ರಾಜ್ಯದ ಸರಕಾರ ತುಳುವಿಗೆ ದ್ವಿತೀಯ ಭಾಷೆಯ ಮನ್ನಣೆ ಕೊಡಬೇಕು. ನಾವು ಆಗಾಗ ಹೇಳುವುದಿದೆ. -ಕೆಲವು ಬುಡಕಟ್ಟು ಜನಾಂಗದ ಭಾಷೆ 8ನೆ ಪರಿಚ್ಛೇದಕ್ಕೆ ಸೇರಿದೆ ಎಂದು. ಅದಕ್ಕೆ ಅಲ್ಲಿಯ ಸರಕಾರ ಕೆಲಸ ಮಾಡಿದ್ದರಿಂದ ಆಗಿದೆ. ನಮ್ಮ ಸಾಹಿತ್ಯ ಸಂಖ್ಯೆ, ಜನಬಲ, ನಮ್ಮ ಎಂ.ಪಿ.ಗಳು, ಶಾಸಕರು ಎಲ್ಲರೂ ಒಟ್ಟಾಗಿ ಈ ದಿಕ್ಕಿನಲ್ಲಿ ಪ್ರಯತ್ನಿಸಬೇಕು. ಸರಕಾರದ ಮೂಲಕವೇ ಹೋಗಬೇಕಾಗಿದೆ. ರಾಜಕೀಯ ಮಟ್ಟದಲ್ಲೇ ಪ್ರಮುಖವಾಗಿ ನಡೆಯಬೇಕಾದ ಕೆಲಸ ಇದು. ಸಾಮಾನ್ಯ ಜನ ಏನು ಮಾಡಬಹುದು? ಒಂದು ಸಮ್ಮೇಳನ ಮಾಡಬಹುದು. ಮೊದಲು ಆ ಭಾಷೆ, ಸಾಹಿತ್ಯ ಇವೆಲ್ಲ ಪ್ರಚಾರ ಆಗಬೇಕು. ಇತ್ತೀಚಿನ ದಿನಗಳಲ್ಲಿ ನಮ್ಮ ಅಕಾಡಮಿಗಳಲ್ಲೂ ಮುಂಬೈ ಸಾಹಿತಿಗಳಿಗೆ ಆದ್ಯತೆ ಸಿಗುತ್ತಿಲ್ಲ. ಈ ಬಗ್ಗೆಯೂ ಗಮನ ಸೆಳೆಯಬೇಕಾಗಿದೆ.

ಪ್ರಶ್ನೆ: ಈಗೀಗ ಆಟಿ ತಿಂಗಳ ಅಡುಗೆ ಕುರಿತಂತೆ ಹೆಚ್ಚಿನ ಕಡೆ ಪ್ರದರ್ಶನಗಳು ನಡೆಯುತ್ತಿವೆ. ಆಟಿ ಅಂದರೆ ಸ್ವಲ್ಪಕಷ್ಟ ಪಡುವ ತಿಂಗಳು ಎಂಬ ಪ್ರತೀತಿ. ಈ ಸಂದರ್ಭದ ವೈವಿಧ್ಯಮಯ ಅಡುಗೆ ಚರ್ಚೆ ಹುಟ್ಟಿಸುತ್ತಿದೆಯಲ್ಲ......

ಡಾ. ಸುನೀತಾ ಶೆಟ್ಟಿ: ಇಲ್ಲಿ ಗೊಂದಲ ಬೇಡ. ತುಳುವರಿಗೆ ಆಟಿ ಕಷ್ಟದ ತಿಂಗಳು ಹೌದು. ಆದರೆ ಆಟಿ ತಿಂಗಳಲ್ಲಿ ಬರುವಷ್ಟು ಆಚರಣೆ ಬೇರೆ ತಿಂಗಳಲ್ಲಿ ಕಾಣುವುದಿಲ್ಲ. ಆಟಿ (ಆಷಾಢ) ತಿಂಗಳಲ್ಲೇ ಬೆಳೆಯುವ ಹಲವು ಸಸ್ಯಗಳು ಪ್ರಕೃತಿಯಲ್ಲಿವೆ. ಇದು ಆರೋಗ್ಯಕ್ಕೂ ಭಾರೀ ಒಳ್ಳೆಯದು. ಇವು ಆಗ ಮಾತ್ರ ಪ್ರಕೃತಿಯಲ್ಲಿ ಕಾಣಿಸುವ ಸಸ್ಯಗಳು. ಇವುಗಳ ಅಡುಗೆ ಈ ತಿಂಗಳಲ್ಲೇ. ಇವೆಲ್ಲ ದೇಹಕ್ಕೆ ಪೋಷಕವಾಗುವ ಸಸ್ಯಗಳು. ರೋಗ ಬರದಂತೆ ಪ್ರಕೃತಿ ನೀಡಿರುವ ಈ ಸಸ್ಯಗಳ ಅಡುಗೆ ಮಾಡುವುದರಲ್ಲಿ ಗೊಂದಲ ಯಾಕೆ? ಆಟಿಯ ಅಡುಗೆ, ಆಟಿದ ಕೂಟ, ಆಟಿದ ಅರಗಣ ಇವೆಲ್ಲ ನಮ್ಮ ಆರೋಗ್ಯ ಗಟ್ಟಿಗೊಳಿಸುವ ಅಂಶಗಳಿಂದ ಕೂಡಿವೆ. ಆಟಿ ಕಳಂಜ ಬರ್ತಾರೆ. ಇದು ಮಹಾಮಾರಿ ರೋಗ ಹೋಗಲಾಡಿಸಲು ಬರುವುದು. ನಾವು ಅವರಿಗೆ ಗೆರೆಸೆ ಭತ್ತ ಮತ್ತು ಮಸಿ ಕೊಡ್ತೇವೆ. ಯಾಕೆ? ಮಸಿ ಸ್ವಚ್ಛ ಮಾಡುವುದು. ಅಪಶಕುನ ಹೋಗಲಾಡಿಸಲೂ ಬಳಸುತ್ತಾರೆ. ಹೀಗಾಗಿ ಆಟಿಯ ಅಡುಗೆಗೆ ಅದರದ್ದೇ ಆದ ವೈಶಿಷ್ಟ್ಯಗಳಿವೆ. ಇಲ್ಲಿ ವೈವಿಧ್ಯಮಯ ಅಡುಗೆ ಎಂಬ ಬಗ್ಗೆ ಗೊಂದಲದ ಆವಶ್ಯಕತೆ ಇಲ್ಲ. ಆಟಿ ತಿಂಗಳದ್ದೇ ಆದ ಸಸ್ಯಗಳನ್ನು ನಾವು ಬಳಸಿಕೊಳ್ಳುವುದು ಮುಖ್ಯ.

ಪ್ರಶ್ನೆ: ತುಳು ನಾಟಕಗಳಂತೆ ಇಂದು ತುಳು ಸಿನೆಮಾಗಳೂ ವಿಜೃಂಭಿಸುವ ದಿನಗಳು ಬಂದಿವೆ. ಇದಕ್ಕೆ ತುಳುವರ ಪ್ರೋತ್ಸಾಹವೇ....ಅಥವಾ....

ಡಾ. ಸುನೀತಾ ಶೆಟ್ಟಿ:  ಈಗ ನಾವು ಇದರ ಹಿಂದಿರುವ ತಾಂತ್ರಿಕತೆ ಗಮನಿಸಬೇಕು. ಹಿಂದಿನವರಂತೆ ಕಷ್ಟಪಡಬೇಕಾಗಿಲ್ಲ, ತಾಂತ್ರಿಕತೆ ಅಷ್ಟು ಮುಂದುವರಿದಿದೆ. ಹೀಗಾಗಿ ಅದರ ಬೆಳವಣಿಗೆಯೂ ಸುಲಭವಾಯಿತು. ಆಗಿನಷ್ಟು ತೊಂದರೆಗಳನ್ನು ಎದುರಿಸಬೇಕಾಗಿಲ್ಲ. ಹಣ ಹಾಕುವವರೂ ಇದ್ದಾರೆ. ಇನ್ನು ಕಲಾವಿದರೂ ಕಲೆಯ ಮೇಲೆ ಪ್ರೀತಿ ಇದ್ದವರಾಗಿದ್ದಾರೆ. ಅವರೂ ಕೂಡಾ ಕೇವಲ ಹಣದ ಹಿಂದೆ ಹೋಗುವುದಿಲ್ಲ. ತುಳುವಿನ ಅಲೆ - ಭಾಷೆಯ ಬಗೆಗಿನ ಅಲೆ ಎದ್ದಿರುವುದೂ ಇದರ ಮತ್ತೊಂದು ಅಂಗವಾಗಿ ತುಳು ಸಿನೆಮಾ ಕೂಡಾ ಕೆಲಸ ಮಾಡುತ್ತಿದೆ ಎನ್ನಬಹುದು.

ಪ್ರಶ್ನೆ: ಶಾಲೆಗಳಲ್ಲೂ ತುಳು ಕಲಿಸುತ್ತಾರೆ. ನಮ್ಮ ತುಳು ಲಿಪಿಯ ಬಗ್ಗೆ.......

ಡಾ. ಸುನೀತಾ ಶೆಟ್ಟಿ: ಶಾಲೆಗಳಲ್ಲಿ ಈಗ ತುಳು ಕಲಿಸುತ್ತಾರೆ ಒಂದು ಭಾಷೆಯಾಗಿ. ಒಳ್ಳೆಯ ಪ್ರತಿಕ್ರಿಯೆ ಆರಂಭವಾಗಿದೆ. ಇದು ಜೂನಿಯರ್ ಕಾಲೇಜ್ ಮುಟ್ಟುವ ತನಕ ಹೋದರೆ ಇನ್ನೂ ಲಾಭವಾಗಲಿದೆ, ಸರಕಾರದ ಕಣ್ಣು ತೆರೆಸಬಹುದು. ತುಳು-ತಿಗಳಾರಿ ಲಿಪಿ ಪ್ರಾಚೀನ ಲಿಪಿ. ಮಲಯಾಳಕ್ಕೆ ತಿಗಳಾರಿ ಲಿಪಿಯೇ ಮೂಲ. ತಿಗಳಾರಿ ಮತ್ತು ಮಲಯಾಳಿ ಲಿಪಿಯಲ್ಲಿ ಸಾಮ್ಯ ಇದೆ. ಆದರೆ ಮಲಯಾಳಿಗಳು ಮಲಯಾಳಿಯಿಂದಲೇ ತುಳು ಎಂಬ ವಾದ ಮುಂದಿಡುತ್ತಾರೆ. ಈ ಚರ್ಚೆ ನಡೆದೇ ಇದೆ. ಸದ್ಯ ಕನ್ನಡ ಲಿಪಿಯಲ್ಲೇ ಬರೆಯುವುದು ಕಾಣುತ್ತಿದ್ದೇವೆ.

ಪ್ರಶ್ನೆ: ತಾವು ಕನ್ನಡ ಮತ್ತು ತುಳು ಎರಡೂ ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದೀರಿ. ಎರಡೂ ಭಾಷೆಯಲ್ಲಿ ಹೇಗೆ ಹೊಂದಿಸಿಕೊಳ್ಳುತ್ತೀರಿ?

ಡಾ. ಸುನೀತಾ ಶೆಟ್ಟಿ: ಮೊದಲು ಕನ್ನಡದಲ್ಲಿ ಯೋಚಿಸಿ ತುಳುವಿನಲ್ಲಿ ಬರೆಯುತ್ತಿದ್ದೆ. ಈಗ ತುಳುವಿನಲ್ಲೇ ಯೋಚಿಸಿ ಬರೆಯುತ್ತೇನೆ. ವಿಶೇಷತೆ ಎಂದರೆ 23 ವರ್ಷಗಳ ಕಾಲ ಹಳ್ಳಿಯಲ್ಲಿ ಬೆಳೆದವಳು. ತುಳು ಸಂಸ್ಕೃತಿಯ ಚೆನ್ನಾದ ಪರಿಚಯ ನನಗಿದೆ.

ಪ್ರಶ್ನೆ: ಕೊನೆಯದಾಗಿ -ಮುಂಬೈಯಲ್ಲಿ ನಮ್ಮ ಭಾಷೆ - ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ.........

ಡಾ. ಸುನೀತಾ ಶೆಟ್ಟಿ: ನಾನು ನನ್ನ ಮೂವರು ಮಕ್ಕಳನ್ನೂ ಕನ್ನಡ ಮಾಧ್ಯಮದಲ್ಲೇ ಓದಿಸಿದ್ದೆ. ಕುರ್ಕಾಲ್, ಡಾ. ಜಿ.ಡಿ.ಜೋಶಿ..... ಇಂತಹ ಕೆಲವೇ ಕೆಲವು ಬೆರಳೆಣಿಕೆಯವರು ತಮ್ಮ ತಮ್ಮ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿದವರು. ಭಾಷೆಯ ಬಗ್ಗೆ ನನಗೆ ಕಾಳಜಿ ಇದ್ದೇ ಮಕ್ಕಳನ್ನು ಕನ್ನಡ ಶಾಲೆಗೆ ಕಳುಹಿಸಿದ್ದೆ. ಆದರೆ ಈಗಿನ ತಂದೆ ತಾಯಿಯರು ಹೆಚ್ಚು ವಿದ್ಯಾವಂತರಾಗಿದ್ದಾರೆ. ಅವರು ತಮ್ಮ ಮಕ್ಕಳ ಜೊತೆ ಇಂಗ್ಲಿಷೋ - ಹಿಂದಿಯೋ ಮಾತಾಡುವುದಕ್ಕೆ ಇಷ್ಟಪಡುತ್ತಾರೆ. ಕನಿಷ್ಠ ಮನೆಯಲ್ಲಾದರೂ ನಮ್ಮ ಭಾಷೆ ಮಾತಾಡೋಣ. ಆವಾಗ ಭಾಷೆಯ ಪ್ರೀತಿ ಉಳಿಯುತ್ತದೆ. ಮುಂಬೈಯಲ್ಲಿ ಪತ್ರಿಕೆಗಳೂ ನಮ್ಮ ಭಾಷೆ - ಸಂಸ್ಕೃತಿ ಉಳಿಸಲು ಕೆಲಸ ಮಾಡುತ್ತಿವೆ. ಮತ್ತೊಂದೆಡೆ ಈಗ ಎಣಿಸಿದಾಗ ಊರಿಗೆ ಹೋಗಿ ಬರುವಂತೆ ಮಾಡಲು ಕೊಂಕಣ ರೈಲು ಇದೆ. ಹೀಗಾಗಿ ಊರಿನ ಜೊತೆ ನಮ್ಮ ಸಂಪರ್ಕವೂ ಹೆಚ್ಚುತ್ತಿದೆ. ಇಲ್ಲಿ ಭಾಷೆ, ಸಂಸ್ಕೃತಿ ಬೆಳೆಯಲು ಪರೋಕ್ಷ ಪ್ರೋತ್ಸಾಹದ ದೃಶ್ಯಗಳನ್ನೂ ಕಾಣುತ್ತ್ತಿದ್ದೇವೆ.


 

Writer - ಶ್ರೀನಿವಾಸ ಜೋಕಟ್ಟೆ

contributor

Editor - ಶ್ರೀನಿವಾಸ ಜೋಕಟ್ಟೆ

contributor

Similar News