ಮುಂಬೈಗೆ ಬರಲಿದೆ ತೇಲುವ ರೆಸ್ಟೋರಂಟ್! ಟ್ರಾಫಿಕ್ ಪೊಲೀಸರಿನ್ನು ಒಂದೇ ಕಡೆ ನಿಲ್ಲುವಂತಿಲ್ಲ
972 ಮನೆಗಳಿಗೆ 1,69,702 ಅರ್ಜಿಗಳು
ಸರಕಾರಿ ಸ್ವಾಮ್ಯದ ಮಹಾರಾಷ್ಟ್ರ ಹೌಸಿಂಗ್ ಆ್ಯಂಡ್ ಡೆವೆಲಪ್‌ಮೆಂಟ್ ಅಥಾರಿಟಿ (ಮ್ಹಾಡಾ)ಯ 972 ಮನೆಗಳಿಗೆ 1,69,702 ಜನರು ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಫಲಾನುಭವಿಗಳನ್ನು 10 ಆಗಸ್ಟ್ 2016ರಂದು ಲಾಟರಿ ಮೂಲಕ ಆಯ್ಕೆಮಾಡಲಾಗುತ್ತದೆ. 23 ಜೂನ್ 2016 ರಂದು ಮ್ಹಾಡಾ ಈ ವರ್ಷದ ತನ್ನ ಮೂರನೆ ಲಾಟರಿಗಾಗಿ ಅರ್ಜಿಯನ್ನು ಕರೆದಿತ್ತು. 1,28,000ಗೂ ಅಧಿಕ ಜನರು ರಿಜಿಸ್ಟ್ರೇಷನ್ ಮಾಡಿದ್ದರು. ಜೊತೆಗೆ 1,04,064 ಜನರು ಶುಲ್ಕ ಕೂಡಾ ಸಲ್ಲಿಸಿದ್ದಾರೆ. ಇದರಲ್ಲಿ 64,343 ಜನರು ಆನ್‌ಲೈನ್ ಮೂಲಕ ಪಾವತಿಸಿದ್ದಾರೆ. 39,721 ಜನರು ಡಿಮಾಂಡ್ ಡ್ರಾಫ್ಟ್ ಮೂಲಕ ಪಾವತಿಸಿದ್ದಾರೆ. ಮ್ಹಾಡಾದ ಈ ಮನೆಗಳ ಬೆಲೆ ತಲಾ 8 ಲಕ್ಷ ರೂಪಾಯಿಂದ 83 ಲಕ್ಷ ರೂ. ತನಕ ಇದೆ. ಪ್ರತೀ ವರ್ಷದಂತೆ ಮ್ಹಾಡಾ ಈ ಮನೆಗಳ 4 ಆರ್ಥಿಕ ಗುಂಪು ಮಾಡಿದೆ. ಅತ್ತ ಖಾಸಗಿ ಬಿಲ್ಡರ್‌ಗಳ ರೂಮ್‌ಗಳು ಸಾಕಷ್ಟು ಖಾಲಿ ಇದೆಯಾದರೂ ಮ್ಹಾಡಾ ಕಟ್ಟಡಗಳಿಗೆ ಡಿಮಾಂಡ್ ಕಡಿಮೆಯಾಗಿಲ್ಲ. ಆಗಾಗ ಮ್ಹಾಡಾ ವಿವಾದಕ್ಕೂ ಸಿಕ್ಕಿಬೀಳೋದು ಕೂಡಾ ಇದೆ!. * * * ಸಿದ್ದಿವಿನಾಯಕ ಮಂದಿರದಲ್ಲೂ ಡಿಮೆಟ್ ಖಾತೆ ಆರಂಭ
ಮುಂಬೈಯ ಪ್ರಭಾದೇವಿಯ ಪ್ರಸಿದ್ಧ ಸಿದ್ಧಿವಿನಾಯಕ ಮಂದಿರದ ಭಕ್ತರು ನಗದು ಹಣ ಮತ್ತು ಆಭರಣಗಳನ್ನು ಸಿದ್ಧಿವಿನಾಯಕನಿಗೆ ನೀಡುವುದು ಬಹಳ ಕಾಲದಿಂದ ಇರುವ ಸಂಗತಿ. ಆದರೆ ಈಗ ಸಿದ್ಧಿವಿನಾಯಕನಿಗೆ ಶೇರುಗಳನ್ನೂ ದಾನ ಮಾಡಬಹುದಾಗಿದೆ. ಇದಕ್ಕಾಗಿ ಸಿದ್ಧಿವಿನಾಯಕ ಮಂದಿರದಲ್ಲಿ ಡಿಮೆಟ್ ಅಕೌಂಟ್ ಕೂಡಾ ತೆರೆಯಲಾಗಿದೆ. ಸಿದ್ಧಿವಿನಾಯಕ ಮಂದಿರವು ಇದಕ್ಕಾಗಿ ಎಸ್‌ಬಿಆರ್‌ಸಿಎಪಿ ಸೆಕ್ಯುರಿಟೀಸ್‌ನ ಜೊತೆ ಒಪ್ಪಂದ ಮಾಡಿಕೊಂಡಿದೆ.
ಡಿಮೆಟ್ ಅಕೌಂಟ್ ತೆರೆದಿರುವುದರಿಂದ ಈಗ ಮುಂಬೈಯಲ್ಲೇ ಅಲ್ಲ, ದೇಶ ವಿದೇಶಗಳ ಭಕ್ತರು ಈ ಸೌಲಭ್ಯದ ಮೂಲಕ ಶೇರುಗಳನ್ನು ದಾನ ಮಾಡಬಹುದಾಗಿದೆ. ದಾದರ್‌ನ ಪ್ರಸಿದ್ಧ ಸಿದ್ಧಿವಿನಾಯಕ ಮಂದಿರದ ಗಣಪತಿಯ ದರ್ಶನಕ್ಕಾಗಿ ದೂರದೂರದಿಂದ ಭಕ್ತರು ಬರುತ್ತಾರೆ. ಕೆಲ ವರ್ಷಗಳ ಹಿಂದೆ ಖ್ಯಾತ ನಟ ಅಮಿತಾಬ್ ಬಚ್ಚನ್‌ರ ಪರಿವಾರ ಜುಹು ಬಂಗ್ಲೆಯಿಂದ ದಾದರ್‌ನ ಸಿದ್ಧಿವಿನಾಯಕ ಮಂದಿರಕ್ಕೆ ಮುಂಜಾನೆ ನಡೆದುಕೊಂಡೇ ಬಂದು ಸುದ್ದಿ ಮಾಡಿದ್ದರು. ಈ ಭಕ್ತರಲ್ಲಿ ಅನೇಕರು ದೇವರಿಗೆ ಚಿನ್ನ, ಬೆಳ್ಳಿ, ನಗದು ಹಣವನ್ನು ಒಪ್ಪಿಸುತ್ತಾರೆ. ಇದೀಗ ಡಿಮೆಟ್ ಅಕೌಂಟ್ ತೆರೆಯಲ್ಪಟ್ಟಿರುವುದರಿಂದ ಸಿದ್ಧಿವಿನಾಯಕ ಮಂದಿರವು ಆಂಧ್ರದ ಪ್ರಖ್ಯಾತ ತಿರುಪತಿ ಬಾಲಾಜಿ ಮಂದಿರದ ನಂತರ ದೇಶದ ಎರಡನೆ ಮಂದಿರ ಎನಿಸಿದೆ.
ಸದ್ಯ ಭಕ್ತರು ಕೇವಲ ಸೂಚಿಬದ್ಧ ಕಂಪೆನಿಗಳ ಶೇರು ಮಾತ್ರ ದಾನ ಮಾಡಬಹುದಾಗಿದೆ. ನಂತರ ಇದನ್ನು ವಿಸ್ತರಿಸಲಾಗುವುದಂತೆ.
* * *
ಮುಂಬೈಯಲ್ಲಿ ಬರಲಿದೆ ತೇಲುವ ರೆಸ್ಟೋರಂಟ್
ಮುಂಬೈ ಪೋರ್ಟ್ ಟ್ರಸ್ಟ್ (ಎಂ,ಬಿ,ಪಿ,ಟಿ,) ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡಲು ತನ್ನ 1,800 ಎಕ್ರೆ ಜಮೀನಿನ ಕೆಲವು ಭಾಗದಲ್ಲಿ ಟೂರಿಸ್ಟ್ ವಿಲೇಜ್ ನಿರ್ಮಾಣಕ್ಕೆ ಮುಂದಾಗಿದೆ. ಈ ಯೋಜನೆಯಂತೆ ನಗರದ ಮೂರು ತೀರಗಳಲ್ಲಿ ಫ್ಲೋಟಿಂಗ್ ರೆಸ್ಟೋರಂಟ್ ಅರ್ಥಾತ್ ಸಮುದ್ರದಲ್ಲಿ ತೇಲುವ ರೆಸ್ಟೋರಂಟ್ ನಿರ್ಮಿಸಲು ನಿರ್ಧರಿಸಿದೆ. ಊಟ ತಿಂಡಿಯ ಶೋಕಿ ಇರುವ ಮುಂಬೈ ವಾಸಿಗಳಿಗೂ ಇದು ಖುಷಿ ನೀಡುವ ಸುದ್ದಿ. ನಗರದ 26 ಕಿ.ಮೀಟರ್ ಉದ್ದದ ಪೂರ್ವ ಸಮುದ್ರ ತೀರದಲ್ಲಿ ಈ ತನಕ ಕೇವಲ ಹಡಗು ನಿರ್ಮಾಣ ಮತ್ತು ಹೊರಗಿನ ಹಡಗುಗಳ ತಂಗು ದಾಣ ಇತ್ಯಾದಿಗಳಿಗೆ ಮಾತ್ರ ಆದ್ಯತೆ ನೀಡಲಾಗಿದೆ. ಶೀಘ್ರವೇ ಗೇಟ್‌ವೇ ಆಫ್ ಇಂಡಿಯಾದಿಂದ ದೂರ ಸಮುದ್ರದಲ್ಲಿ ಎರಡು ಮತ್ತು ಗಿರ್‌ಗಾಂವ್ ಚೌಪಾಟಿಯಲ್ಲಿ ಒಂದು ತೇಲುವ ರೆಸ್ಟೋರಂಟ್ ಆರಂಭಿಸಲಿದೆ.
ಎಂ,ಬಿ,ಪಿ,ಟಿ, ಅಧಿಕಾರಿಗಳ ಪ್ರಕಾರ ಈ ರೆಸ್ಟೋರಂಟ್‌ಗಳ ಲೈಸನ್ಸ್‌ಗಾಗಿ ಟೆಂಡರ್ ಜಾರಿಗೊಳಿಸಿದೆ. ಶೀಘ್ರವೇ ಈ ಟೆಂಡರ್ ತೆರೆಯಲಾಗುವುದು. ಸುಮಾರು 125 ಜನರು ಕೂರಬಹುದಾದ ಸಾಮರ್ಥ್ಯ ಒಂದು ರೆಸ್ಟೋರಂಟಾಗಿರುತ್ತದೆ. ರೆಸ್ಟೋರಂಟ್ ನಡೆಸುವವರಿಗೆ 15 ವರ್ಷಗಳ ತನಕ ಲೈಸನ್ಸ್ ನೀಡಲಾಗುವುದು. ಈ ರೆಸ್ಟೋರಂಟ್ ರಾತ್ರಿ,ಹಗಲು ತೆರೆದಿರುವುದು. ಆದರೆ ಈ ರೆಸ್ಟೋರಂಟ್ ನಡೆಸುವವರು ಮುಂಬೈ ಮನಪಾದಿಂದ ಮಾತ್ರವಲ್ಲದೆ, ಕೇಂದ್ರ ಸರಕಾರದ ಸಂಬಂಧಿತ ವಿಭಾಗಗಳ ಅನುಮತಿ ಪಡೆಯಬೇಕಾಗುವುದು. ಸುರಕ್ಷೆಯ ದೃಷ್ಟಿಯಿಂದ ಹೊಟೇಲ್ ಮಾಲಕರಿಗೆ ಭಾರತೀಯ ನೌಕಾ ಸೇನೆ, ಕೋಸ್ಟಲ್ ಗಾರ್ಡ್ ಮತ್ತು ಮುಂಬೈ ಪೊಲೀಸರಿಂದಲೂ ಅನುಮತಿ ಪಡೆಯಲಿಕ್ಕಿದೆ. ಲೈಸನ್ಸ್ ಪಡೆಯಬೇಕಾದರೆ ರೆಸ್ಟೋರಂಟ್ ನಡೆಸುವವರು ತಮ್ಮ ಸಂಪಾದನೆಯ 5 ಪ್ರತಿಶತ ಎಂ,ಬಿ,ಪಿ,ಟಿ,ಗೆ ನೀಡಬೇಕಾಗುವುದು. ಇದೆಲ್ಲ ಕೆಲಸಗಳು ಮುಗಿದು ರೆಸ್ಟೋರಂಟ್ ಆರಂಭವಾಗುವುದು ಎರಡು ವರ್ಷಗಳ ನಂತರ! ಹಾಗಿದ್ದೂ ಇಷ್ಟೆಲ್ಲ ಅನುಮತಿಗಳನ್ನು ಪಡೆದು ರೆಸ್ಟೋರಂಟ್ ನಡೆಸಲು ಯಾರು ಮುಂದೆ ಬರುತ್ತಾರೋ ಅದೇ ಕುತೂಹಲ.
* * *
ಟ್ರಾಫಿಕ್ ಪೊಲೀಸರೆ ಜಾಗಬದಲಿಸಿ!
ಮುಂಬೈಯ ಟ್ರಾಫಿಕ್ ಪೊಲೀಸ್ ವಿಭಾಗದಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಣದಲ್ಲಿರಿಸಲು ವರಿಷ್ಠ ಅಧಿಕಾರಿಗಳು ಹೊಸ ಹೆಜ್ಜೆ ಇರಿಸಿದ್ದಾರೆ. ಟ್ರಾಫಿಕ್ ನಿರ್ವಹಿಸುತ್ತಿರುವ ಟ್ರಾಫಿಕ್ ಪೊಲೀಸರ ಜಾಗಗಳನ್ನು ಆಗಾಗ ಬದಲಿಸುತ್ತಲೇ ಇರಬೇಕೆಂದು ಸೂಚನೆ ಬಂದಿದೆ. ಒಂದು ಜಾಗದಲ್ಲಿ ಅಧಿಕ ಸಮಯ ನಿಂತರೆ ಟ್ರಾಫಿಕ್ ಪೊಲೀಸರು ಅಲ್ಲಿ ಭ್ರಷ್ಟಾಚಾರ ನಡೆಸುವ ಸಾಧ್ಯತೆಗಳಿವೆ ಎನ್ನುವುದು ಇದಕ್ಕೆ ಕಾರಣ. ಟ್ರಾಫಿಕ್ ಪೊಲೀಸ್ ವಿಭಾಗದ ಪೊಲೀಸರಾಗಲಿ, ಅಥವಾ ಅಧಿಕಾರಿಗಳಾಗಲಿ ಈ ತನಕ ಅವರ ವರ್ಗಾವಣೆ ಅದೇ ವಿಭಾಗದಲ್ಲಿ ಆಗುತ್ತಿತ್ತು. ಕೇವಲ ಪೊಲೀಸ್ ಠಾಣೆ ಮತ್ತು ಪೊಲೀಸ್ ಚೌಕಿ ಬದಲಿಸಲಾಗುತ್ತಿತ್ತು. ಹೀಗಾಗಿ ಭ್ರಷ್ಟಾಚಾರ ನಡೆಸುವ ಇವರ ದಾರಿ ಸ್ಥಿರವಾಗಿರುತ್ತದೆ.
ಇತ್ತೀಚೆಗಿನ ದಿನಗಳಲ್ಲಿ ಟ್ರಾಫಿಕ್‌ನಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು ತಡೆಯುವುದಕ್ಕಾಗಿ ಟ್ರಾಫಿಕ್ ಪೊಲೀಸರನ್ನು ಶಹರ ಪೊಲೀಸ್ ವಿಭಾಗದಲ್ಲಿ ವರ್ಗಾವಣೆ ಮಾಡಲಾಗಿತ್ತು, ಶಹರ ಪೊಲೀಸ್ ವಿಭಾಗದಲ್ಲಿನ ಪೊಲೀಸ್ ಅಧಿಕಾರಿ ಮತ್ತು ಪೊಲೀಸರ ವರ್ಗಾವಣೆ ಟ್ರಾಫಿಕ್ ಪೊಲೀಸ್ ವಿಭಾಗದಲ್ಲಿ ಮಾಡಲಾಗಿತ್ತು. ಇದರಿಂದ ಟ್ರಾಫಿಕ್ ವಿಭಾಗದಲ್ಲಿ ಭ್ರಷ್ಟಾಚಾರಕ್ಕೆ ಅಂಕುಶ ಹಾಕಲಾಗಿತ್ತು. ಆದರೆ ಭ್ರಷ್ಟಾಚಾರವನ್ನು ಇನ್ನಷ್ಟು ನಿಯಂತ್ರಿಸಲು ಆಡಳಿತವು ಟ್ರಾಫಿಕ್ ಪೊಲೀಸ್ ವಿಭಾಗದಲ್ಲಿ ಮಹಿಳಾ ಟ್ರಾಫಿಕ್ ಪೊಲೀಸರ ಸಂಖ್ಯೆ ಹೆಚ್ಚಿಸಿದೆ. ಇದೀಗ ಆಡಳಿತದಿಂದ ಮೌಖಿಕ ರೂಪದಲ್ಲಿ ಟ್ರಾಫಿಕ್ ಪೊಲೀಸ್ ವಿಭಾಗಕ್ಕೆ ಆದೇಶ ನೀಡಲಾಗಿದ್ದು ಓರ್ವ ಟ್ರಾಫಿಕ್ ಪೊಲೀಸನನ್ನು ಹಾಗೂ ಪೊಲೀಸ್ ಅಧಿಕಾರಿಯನ್ನು 8 ರಿಂದ 15 ದಿನಗಳಿಗಿಂತ ಅಧಿಕ ಸಮಯದ ತನಕ ಒಂದೇ ಸ್ಥಳದಲ್ಲಿ ಇರಿಸಬಾರದು. ಅವರನ್ನು ಬೇರೆ ಬೇರೆ ಜಾಗಗಳಿಗೆ ಬದಲಿಸುತ್ತಿರಬೇಕು ಎಂದು ಸೂಚನೆ ನೀಡಲಾಗಿದೆ.
* * *
ಸೊಳ್ಳೆ ಕೊಲ್ಲಲು ಪೊಲೀಸರಿಗೆ ತರಬೇತಿ
ಮುಂಬೈ ಪೊಲೀಸರಿಗೆ ಈ ತನಕ ಕಳ್ಳರನ್ನು, ದರೋಡೆಕೋರರನ್ನು, ಆತಂಕವಾದಿಗಳನ್ನು ಇತ್ಯಾದಿ ಅಪರಾಧ ಕೃತ್ಯಗಳಲ್ಲಿ ತೊಡಗಿಸಿ ಕೊಂಡವರನ್ನು ಬಂಧಿಸಬೇಕಾಗಿದ್ದರೆ ಇದೀಗ ಸೊಳ್ಳೆಗಳನ್ನೂ ಕೊಲ್ಲುವ ತರಬೇತಿ ಕೂಡಾ ನೀಡಲಾಗುತ್ತಿದೆ. ಸೊಳ್ಳೆಗಳನ್ನು ಕೊಲ್ಲುವ ಈ ತರಬೇತಿಯನ್ನು ಮಹಾನಗರ ಪಾಲಿಕೆಯ ಕೀಟನಾಶಕ ವಿಭಾಗವು ನೀಡುತ್ತಿದೆ. ಈ ತರಬೇತಿಯ ಆಧಾರದಲ್ಲಿ ಪೊಲೀಸ್ ಜವಾನರು ಪೊಲೀಸ್ ಠಾಣೆಗಳ ಪರಿಸರದಲ್ಲಿ ಮಲೇರಿಯಾ, ಡೆಂಗ್ಯೂ ಹರಡುವ ಸೊಳ್ಳೆಗಳ ವಿರುದ್ಧ ನಿಯಂತ್ರಣದ ಉಪಾಯಗಳನ್ನು ಕೈಗೊಳ್ಳಬೇಕಾಗಿದೆ. ಮನಪಾದ ಜನಜಾಗೃತಿ ಅಭಿಯಾನದ ಒಂದು ಭಾಗ ಇದಾಗಿದೆ. ಮಳೆಗಾಲದಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ಅಂತಹ ರೋಗಗಳೂ ಹೆಚ್ಚು ಕಾಣಿಸಿಕೊಳ್ಳುತ್ತವೆ. ಇಂತಹ ಸಮಯದಲ್ಲಿ ಮಹಾನಗರ ಪಾಲಿಕೆಯ ಕೀಟನಾಶಕ ವಿಭಾಗವು ಜನಸಾಮಾನ್ಯರ ಜೊತೆ ಮುಂಬೈ ಪೊಲೀಸರಿಗೂ ಈ ಅಪಾಯಕಾರಿ ರೋಗಗಳಿಂದ ಪಾರಾಗುವಲ್ಲಿ ತರಬೇತಿ ನೀಡುತ್ತಿವೆ.
* * *
ಎಂ,ಸಿ,ಎ,ಯಿಂದ ಪೊಲೀಸರಿಗೆ ನೀಡಬೇಕಾದ ಹಣ ಬಾಕಿ
ಮುಂಬೈಯ ಪೊಲೀಸ್ ಇಲಾಖೆಯ ಸಾವಿರಾರು ಪೊಲೀಸರನ್ನು ಕ್ರಿಕೆಟ್ ವರ್ಲ್ಡ್ ಕಪ್‌ನ ಬಂದೋಬಸ್ತ್‌ಗಾಗಿ ನಿಯೋಜಿಸಲಾಗಿತ್ತು. ಆದರೆ ಈ ಬಂದೋಬಸ್ತ್ ಶುಲ್ಕವನ್ನು ಇದುವರೆಗೆ ಮುಂಬೈ ಕ್ರಿಕೆಟ್ ಅಸೋಸಿಯೇಶನ್ (ಎಂ,ಸಿ,ಎ) ನೀಡಿಲ್ಲ.
ಕಳೆದ 6 ಕ್ರಿಕೆಟ್ ಪಂದ್ಯಗಳಿಗೆ ಮುಂಬೈ ಪೊಲೀಸರು ಮಾಡಿರುವ ಬಂದೋಬಸ್ತ್‌ನ 3.60 ಕೋಟಿ ರೂಪಾಯಿ ನೀಡಲು ಎಂ,ಸಿ,ಎ, ಮೀನಮೇಷ ಎಣಿಸುತ್ತಿದೆ. ಈ ಮಾಹಿತಿ ಆರ್,ಟಿ,ಐ, ಕಾರ್ಯಕರ್ತ ಅನಿಲ್ ಗಲಗಲಿ ಅವರಿಗೆ ಮುಂಬೈ ಪೊಲೀಸರು ನೀಡಿದ್ದಾರೆ.
ಸೂಚನಾ ಅಧಿಕಾರಿ ಮತ್ತು ಸಹಾಯಕ ಪೊಲೀಸ್ ಆಯುಕ್ತ (ಸಮನ್ವಯ) ರಮೇಶ್ ಘಡ್‌ವಲೆ ಅವರು ಬಂದೋಬಸ್ತ್ ಶಾಖಾ ಮೂಲಕ ನೀಡಿದ ಮಾಹಿತಿಯನ್ನು ಗಲಗಲಿ ಅವರಿಗೆ ಒದಗಿಸಿದ್ದಾರೆ. ಅದರಲ್ಲಿ ಐಸಿಸಿ ಟಿ-20 ಕ್ರಿಕೆಟ್ ವಿಶ್ವಕಪ್ 2016ರ ಸಂದರ್ಭದಲ್ಲಿ ತಲಾ 60 ಲಕ್ಷ ರೂಪಾಯಿ ಲೆಕ್ಕಾಚಾರದಂತೆ 6 ಪಂದ್ಯಗಳ 3.60 ಕೋಟಿ ರೂಪಾಯಿ ಶುಲ್ಕ ನೀಡಲು ಬಾಕಿ ಇದೆ ಎಂದು ತಿಳಿಸಿದ್ದಾರೆ.
ಮುಂಬೈ ಪೊಲೀಸರು ಆ ಸಮಯ 3,753 ಪೊಲೀಸರನ್ನು ಬಂದೋಬಸ್ತ್‌ಗಾಗಿ ನಿಯೋಜಿಸಿದ್ದು ಆ ಹಣವನ್ನು ವಸೂಲಿ ಮಾಡಿರಲಿಲ್ಲ. ಅನಿಲ್ ಗಲಗಲಿ ಅವರ ಆರ್,ಟಿ,ಐ, ನಂತರ 24 ಜೂನ್ 2016 ರಂದು ಪೊಲೀಸ್ ಉಪಾಯುಕ್ತ ಅಶೋಕ್ ದುಧೆ (ಅಭಿಯಾನ) ಅವರು ಸಶಸ್ತ್ರ ಪೊಲೀಸ್ ಪಡೆಯ ಪೊಲೀಸ್ ಉಪ ಆಯುಕ್ತರಿಗೆ ಪತ್ರ ಬರೆದು ಪೊಲೀಸ್ ಬಂದೋಬಸ್ತ್‌ನ ಹಣವನ್ನು ವಸೂಲಿ ಮಾಡಲು ಸೂಚನೆ ನೀಡಿದ್ದರು. ಆದರೆ ಇತ್ತೀಚಿನ ತನಕವೂ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಉತ್ತರ ನೀಡಿಲ್ಲವಂತೆ.
* * *
ಪೊವಾ ಸರೋವರದ ನೀರು ಪ್ರಾಣಿಗಳಿಗೆ ಅಪಾಯಕಾರಿ!
ಮುಂಬೈಯ ಪೊವಾ ಸರೋವರದ ನೀರು ಆರೆ ಮಿಲ್ಕ್ ಕಾಲನಿಯಲ್ಲಿರುವ ಅನೇಕ ತಬೇಲಾಗಳ (ಎಮ್ಮೆ ಹಟ್ಟಿಗಳು) ಜಾನುವಾರುಗಳಿಗೆ ಪೂರೈಸುತ್ತಾರೆ. ಇತ್ತೀಚೆಗೆ ಒಂದು ಸಾಮಾಜಿಕ ಸಂಸ್ಥೆಯು ಈ ನೀರಿನ ಸ್ಯಾಂಪಲ್‌ನ ತನಿಖೆ ನಡೆಸಿತ್ತು. ಹಾಗೂ ಈ ತಪಾಸಣೆಯಲ್ಲಿ ಸರೋವರದ ನೀರಿನಲ್ಲಿ ಇ ಕೋಲೀ ಹೆಸರಿನ ಬ್ಯಾಕ್ಟೀರಿಯಾದ ಪ್ರಮಾಣ ಅಧಿಕವಿದ್ದು, ಈ ನೀರು ಜಾನುವಾರುಗಳ ಆರೋಗ್ಯಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ ಎಂದಿವೆ. ಪ್ಲಾಂಟ್ ಆ್ಯಂಡ್ ಎನಿಮಲ್ ವೆಲ್ಫೇರ್ ಸೊಸೈಟಿ ಹೆಸರಿನ ಸಾಮಾಜಿಕ ಸಂಸ್ಥೆಯು ಆರೆ ಕಾಲನಿಯ 26 ತಬೇಲಾಗಳು ಮತ್ತು ಗಣಪತಿ ವಿಸರ್ಜನಾ ಘಟ್ಟಗಳಲ್ಲಿ ನೀರಿನ ಸ್ಯಾಂಪಲ್ ಪರೀಕ್ಷೆ ನಡೆಸಿದೆ.