ಮಾನವೀಯತೆಯ ಮಾನ
ಮೊನ್ನೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಗ ಅಕಾಲಿಕ ಸಾವನ್ನು ಕಂಡಾಗ ಭಾರೀ ಸಂಖ್ಯೆಯ ಜನರು ಗತಜೀವಿಯ ಅಂತಿಮ ದರ್ಶನ ಪಡೆದರು. ಅಲ್ಲಿ ಮನುಷ್ಯತನದ ಹೊರತು ಇನ್ನೇನೂ ಇರಲಿಲ್ಲ; ಇರಬಾರದು. ಈ ಪೈಕಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಎಲ್ಲ ಪಕ್ಷದ ರಾಜಕಾರಣಿಗಳಿದ್ದರು. ದು:ಖದ ಕ್ಷಣಗಳಲ್ಲಿ ರಾಜಕಾರಣವಿರಬಾರದು, ಮಾನವೀಯತೆಯಷ್ಟೇ ಮೆರೆಯಬೇಕು ಎಂಬ ಮನುಷ್ಯನ ಮೂಲ ಸಿದ್ಧಾಂತ ಅಲ್ಲಿ ನೆಲೆಮಾಡಿತ್ತು. ಕೇಂದ್ರ ಮಂತ್ರಿ ಹಾಗೂ ಕರ್ನಾಟಕದ ಮಾಜಿ ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡರು ಸಿದ್ದರಾಮಯ್ಯನವರನ್ನು ತಬ್ಬಿ ಸಾಂತ್ವನಮಾಡುತ್ತಿದ್ದ ದೃಶ್ಯವು ಸಮಾನ ದುಃಖಿಗಳ ಭಾವವನ್ನು ಸಾಕ್ಷಾತ್ಕರಿಸಿದಂತಿತ್ತು. ವಿದ್ಯುನ್ಮಾನ ಮಾಧ್ಯಮಗಳೂ ತಮ್ಮ ಎಂದಿನ ಬೇಜವಾಬ್ದಾರಿತನವನ್ನು ಮರೆತಂತೆ ಸ್ವಲ್ಪಗಂಭೀರವಾಗಿ ಘಟನೆಯ ವಿವರಗಳನ್ನು ಬಿಂಬಿಸುತ್ತಿದ್ದವು.
ಸಾವಿನೊಂದಿಗೆ ಎಲ್ಲ ದ್ವೇಷವೂ ಸಾಯಬೇಕು. ಅದಕ್ಕೆ ಪುನರ್ಜನ್ಮವಿಲ್ಲ. ಅಂತಹ ಕ್ಷಣದಲ್ಲಿ ದ್ವೇಷವನ್ನು ಪುನರುಜ್ಜೀವನಗೊಳಿಸುವುದು ಮನುಷ್ಯತ್ವಕ್ಕೆ ಬಗೆವ ಅತೀ ದೊಡ್ಡ ಅಪಚಾರ. ಆದರೆ ನಮ್ಮ ನಾಯಕರಿಂದ ಈ ಕನಿಷ್ಠ ಸೌಜನ್ಯವನ್ನು ಕಲಿಯದ ಅವಿದ್ಯಾವಂತ ಮತ್ತು ವಿದ್ಯಾವಂತ-ಬುದ್ಧಿವಂತ ಪ್ರಜೆಗಳು ಈ ಸಾವಿನ ಕಣವನ್ನು ಅಪಹಾಸ್ಯಗೊಳಿಸಿ ಅಂತರ್ಜಾಲಗಳಲ್ಲಿ ವಿಷಕಾರುತ್ತಿದ್ದುದನ್ನು ಗಮನಿಸಿದರೆ ಜಗತ್ತು ಯಾವ ದಿಸೆಯಲ್ಲಿ ಸಾಗುತ್ತಿದೆಯೆಂದು ಗೊತ್ತಾಗುತ್ತಿತ್ತು. ಅಲ್ಲಿದ್ದ ಟೀಕೆಗಳು ಮನುಷ್ಯನ ನಂಬಿಕೆಗಳನ್ನೇ ಸುಳ್ಳುಮಾಡುವಂತಿದ್ದವು.
ಎಲ್ಲ ಸಮಾಜಗಳಲ್ಲೂ ಕೇಡಿಗರು ಇದ್ದರು; ಮತ್ತು ಇಂದಿಗೂ ಇದ್ದೇ ಇದ್ದಾರೆ. ಆದರೆ ವರ್ತಮಾನ ಸ್ಥಿತಿಯನ್ನು ಅವಲೋಕಿಸಿದರೆ ಈ ಕೇಡಿಗರ ಸಂಖ್ಯೆ ಭಾರೀ ಹೆಚ್ಚಳವನ್ನು ಕಂಡಿದೆಯೆನ್ನಿಸುತ್ತದೆ. ಅನೇಕ ಬಾರಿ ಸಂಸ್ಕಾರದ ಕೊರತೆ, ವಿದ್ಯೆಯ ಕೊರತೆ, ಸಹವಾಸ-ಪರಿಸರದ ಪ್ರಭಾವ ಇವುಗಳಿಂದ ಮನಸ್ಸು ಕೆಡಬಹುದು. ಆದರೆ ಈ ಕೇಡು ಯೋಜನಾಬದ್ಧವಾದಾಗ ಮಾತ್ರ ಸಮಾಜವು ಜಾತಿ, ಮತ, ಪಕ್ಷ, ಪಂಗಡಗಳನ್ನು ಮೀರಿ ಯೋಚಿಸಬೇಕಾಗುತ್ತದೆ. ಭಾವ ಇತ್ತೀಚೆಗೆ ಹೆಚ್ಚು ಪ್ರಕಟವಾಗುತ್ತಿರುವುದರ ಹಿಂದೆ ಅಸಹನೆಗಿಂತಲೂ ವಿಕೃತಿಯ ಮನೋಭಾವವು ದೊಡ್ಡ ಪಾಲನ್ನು ಪಡೆದಿದೆ. ಗತವನ್ನು ಒಂದಿಷ್ಟು ಗಮನಿಸಿದರೆ ಡಾ.ಕಲಬುರ್ಗಿ, ಡಾ.ಯು.ಆರ್.ಅನಂತಮೂರ್ತಿಯವರಂತಹ ಸಮಕಾಲೀನ ಸಾಕ್ಷಿಪ್ರಜ್ಞೆಗಳು ಮೃತಪಟ್ಟಾಗ ಒಂದು ವರ್ಗದಿಂದ ಪ್ರಜ್ಞಾವಂತರನ್ನು ಬೆಚ್ಚಿಬೀಳಿಸುವ ಅಟ್ಟಹಾಸ, ಗಹಗಹಿಸುವಿಕೆ ಇವೆಲ್ಲ ಪ್ರಕಟವಾಗಿದ್ದವು. ಇವುಗಳನ್ನು ಯಾವುದೇ ರಾಜಕೀಯ ಪಕ್ಷ ಹುಟ್ಟುಹಾಕಿದಂತಿರಲಿಲ್ಲ. ಯಾವನೇ ಹಿರಿಯ ರಾಜಕಾರಣಿಯಾಗಲೀ, ಪಕ್ಷವಾಗಲೀ ಈ ಸೌಜನ್ಯರಹಿತ ಟೀಕೆಗಳಿಗೆ ನೇರ ಕುಮ್ಮಕ್ಕು ನೀಡಿದಂತಿರಲಿಲ್ಲ. ಅದಕ್ಕೂ ಕಾರಣವಿದೆ:
ನಮ್ಮ ಹಿರಿಯ ರಾಜಕಾರಣಿಗಳನ್ನು ಒಂದು ವಿಚಾರಕ್ಕೆ ಮಾತ್ರ ಮೆಚ್ಚಬೇಕು. ಅವರಿಗೆಂದೂ ಶಾಶ್ವತ ಮಿತ್ರರಾಗಲೀ, ಶಾಶ್ವತ ಶತ್ರುಗಳಾ ಗಲೀ ಇಲ್ಲ. ನೇಪಥ್ಯದಲ್ಲಿ ಒಟ್ಟಿಗೇ ಚಹ ಕುಡಿದು ರಂಗಸ್ಥಳದಲ್ಲಿ ರಾಮ-ರಾವಣರಾಗಿ, ಕೌರವ-ಪಾಂಡವರಾಗಿ ನಟಿಸುವುದು ಅವರಿಗೆ ಅತ್ಯಂತ ಸಹಜ. ಇದನ್ನು ಅರ್ಥಮಾಡಿಕೊಳ್ಳದೆ ಹಿಂಸಾಕೃತ್ಯಗಳಲ್ಲಿ ಪಾಲ್ಗೊ ಳ್ಳುವುದು ಮತ್ತು ಕೋರ್ಟು, ಆಸ್ಪತ್ರೆ ಅಲೆಯುವುದು ಮರಿಪುಢಾರಿಗಳಿಗೆ ಮತ್ತು ನಿಗದಿತ ಬೆಂಗಾವಲುಪಡೆಗಳಿಗೆ ಮೀಸಲು. ರಾಜಕೀಯದಿಂದ ನಮ್ಮ ಜನರು ಕೆಟ್ಟದ್ದನ್ನು ಕಲಿಯುತ್ತಾರೆಯೇ ಹೊರತು ಒಂದಿಷ್ಟೂ ಒಳ್ಳೆಯದನ್ನು ಕಲಿಯುವುದಿಲ್ಲ. ಪ್ರಾಯಶಃ ಹಿರಿಯ ರಾಜಕಾರಣಿಗಳಿಗೆ ವೃತ್ತಿಪರತೆಯ ಅಪಾರ ಅನುಭವವಿರುವುದರಿಂದ ಅವರು ರಾಜಕೀಯವನ್ನು ವೈಯಕ್ತಿಕತೆಗೆ ಇಳಿಸುತ್ತಿರಲಿಲ್ಲ. ಅವೇನಿದ್ದರೂ ಚುನಾವಣಾ ರಾಜಕೀಯ; ಅಧಿಕಾರ ರಾಜಕೀಯ. ಅಂದರೆ ತಾವೆಂದೂ ರಾಜಕೀಯದಲ್ಲಿ, ಅಧಿಕಾರದಲ್ಲಿ ಶಾಶ್ವತವಲ್ಲವೆಂಬ ಅರಿವು ಎಲ್ಲಾ ಪಕ್ಷ ರಾಜಕಾರಣಿಗಳಿಗಿರುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಅವರಿಗೆ ಮತದಾರರಲ್ಲಿ ನಂಬಿಕೆಯಿಲ್ಲದಿರುವುದು. ಯಾವುದೇ ರಾಜಕಾರಣಿಯ ಏಳುಬೀಳುಗಳಿಗೆ ಮತದಾರರೇ ಮುಖ್ಯ ಕಾರಣರಾಗುತ್ತಾರೆ. ಅವರು ಬೆನ್ನ ಹಿಂದೆ ಬಡಿಗೆಯನ್ನು ಹಿಡಿದುಕೊಂಡೇ ಇದ್ದು ಸಮಯ ಬಂದಾಗ ಅದನ್ನು ರಾಜಕಾರಣಿಗಳ ವಿರುದ್ಧ ಪ್ರಯೋಗಿಸುತ್ತಾರೆ. ಇದನ್ನು ನಿಷ್ಣಾತ ರಾಜಕಾರಣಿ ಬಲ್ಲರು.
ಉಳಿದವರು ‘ಪಾಲನೆ ಕಂಡಂ ಬಡಿಗಂಡನಲ್ತು’ ಎಂಬಂತೆ ತಮ್ಮನ್ನು ಬಿಟ್ಟರೆ ಜನರಿಗೆ ಬೇರೆ ಹಾದಿಯಿಲ್ಲವೆಂಬಂತೆ ಮದದಿಂದ, ಮೈಮರೆತು ಜೀವಿಸುತ್ತಾರೆ. ಏಟು ಬಿದ್ದಾಗ ಶಾಶ್ವತವಾಗಿ ಕರಗಿಹೋಗುತ್ತಾರೆ.
ಕಳೆದ ಒಂದೆರಡು ವರ್ಷಗಳಿಂದ ಭಾರತೀಯ ರಾಜಕಾರಣದಲ್ಲಿ ಒಂದು ವಿಶೇಷ ಸೈದ್ಧಾಂತಿಕ ಪಲ್ಲಟವಾಗುತ್ತಿದೆ. ಭಾರತೀಯತೆಯೆಂಬ ಬೆದರುಗೊಂಬೆ ಸೃಷ್ಟಿಯಾಗುತ್ತಿದೆ. ಸಂಸ್ಕೃತಿಯ ಹೆಸರಿನಲ್ಲಿ ಈ ಮಣ್ಣನ್ನು ಮಲಿನಗೊಳಿಸಲಾಗುತ್ತಿದೆ. ಒಂದು ಕಡೆ ಎಲ್ಲ ಬೇಕು-ಬೇಡಗಳಿಗೂ ವಿಶ್ವದ ಎಲ್ಲ ದೇಶಗಳ ಕಡೆಗೆ ಕೈಚಾಚುತ್ತ್ತ, ಇನ್ನೊಂದು ಕಡೆಗೆ ನಾವೇ ವಿಶ್ವಶ್ರೇಷ್ಠರೆಂದು ಸಕಾರಣವಿಲ್ಲದೆ ಬೀಗುತ್ತಾ ಏಕಕಾಲಕ್ಕೆ ನಮ್ಮ ಜನಗಳನ್ನೂ ವಿದೇಶೀಯರನ್ನೂ ಬೆರಗಿನಲ್ಲಿ ಮತ್ತು ಭ್ರಮೆಯಲ್ಲಿ ತೇಲಿಸುವುದರಲ್ಲಿ ಎಂದಿಲ್ಲದ ನೈಪುಣ್ಯವನ್ನು ಹೊಂದುತ್ತಿದ್ದೇವೆ. ನಮ್ಮ ಅಪಾರ ಜನಸ್ತೋಮ ಈ ನೀರ್ಗುಳ್ಳೆಗಳನ್ನು ನಂಬುತ್ತಿದೆ ಮತ್ತು ಈ ಸಮಯಸಾಧಕ ಸಂಚಿನಲ್ಲಿ ಭಾಗವಹಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ದೇಶಭಕ್ತಿಯೆಂಬುದು ಅತ್ಯಂತ ಪವಿತ್ರವಾದ ಒಂದು ಭಾವ. ಆದರೆ ಅದನ್ನು ಎಷ್ಟು ನೀಚತನದಲ್ಲಿ ಪ್ರದರ್ಶಿಸಬಹುದೋ ಅದಕ್ಕಿಂತಲೂ ಒಂದಡಿ ಕೆಳಗೆ ನಮ್ಮ ಅನೇಕರಿದ್ದಾರೆ. ಹಿಂದೆಲ್ಲ ಯಾವುದೇ ರಾಜಕಾರಣದ ಬೆಳವಣಿಗೆಗೆ ಪತ್ರಿಕೆಗಳು ವೇದಿಕೆಗಳಾಗುತ್ತಿದ್ದವು. ಅದರಲ್ಲಿ ಜವಾಬ್ದಾರಿಯಿಂದ ಪ್ರತಿಕ್ರಿಯಿಸಬೇಕಿತ್ತು. ಉಡಾಫೆಗಳಿಗೆ ಅಲ್ಲಿ ಅವಕಾಶವಿರುತ್ತಿರಲಿಲ್ಲ. ಬಹಳಷ್ಟು ಸಂಪಾದಕರು ಸಂಯಮರಹಿತ ಟೀಕೆಗಳಿಗೆ ವೇದಿಕೆ ಕಲ್ಪಿಸುತ್ತಿರಲಿಲ್ಲ. ಇದರಿಂದಾಗಿ ನಾಲಿಗೆ, ಬರಹ ಎಷ್ಟೇ ಹರಿತವಾಗಿದ್ದರೂ ಅವು ಸಮಾಜದ ಗೊತ್ತಾದ ಮಾನದಂಡಗಳನ್ನು ಪೂರೈಸದೆ ಬೆಳಕು ಕಾಣುತ್ತಿರಲಿಲ್ಲ.
ಆದರೆ ಈಗೀಗ ಪತ್ರಿಕೆಗಳ ಸ್ಥಾನವನ್ನು ವಿದ್ಯುನ್ಮಾನ ಜಾಲಗಳು ಆಕ್ರಮಿಸತೊಡಗಿದ ನಂತರ ಎಲ್ಲರೂ ಎಲ್ಲವನ್ನೂ ಹೇಗೆ ಬೇಕಾದರೂ ಹೇಳಬಹುದಾದ ಕಾಮಾಟಿಪುರಗಳು ಸೃಷ್ಟಿಯಾಗಿವೆ. ಇಂದು ಲೈಂಗಿಕತೆ-ಹಿಂಸೆ ಇಂತಹ ಚಲನ ಚಿತ್ರಗಳನ್ನೇ ನೋಡಿ ಮನಸ್ಸು ವಿಕೃತಗೊಳ್ಳಬೇಕಾಗಿಲ್ಲ. ಬದಲಾಗಿ ಸಮಾಜದ ಆಗುಹೋಗುಗಳ ಕುರಿತ ವಿಕೃತ ಚರ್ಚೆಗಳನ್ನು ನೋಡಿದರೆ ಮನಸ್ಸು ವಿಕಾರಗೊಳ್ಳುವುದು ತಪ್ಪುವುದಿಲ್ಲ. ಇದರ ಮೇಲೆ ಫೇಸ್‌ಬುಕ್, ಟ್ವಿಟರ್ ಮುಂತಾದ ತಕ್ಷಣದ ಪೀಕದಾನಿಗಳಿಂದಾಗಿ ಬೆಂಕಿಯನ್ನೂ, ವಿಷವನ್ನೂ ಕೊನೆಗೆ ಅಮೇಧ್ಯವನ್ನೂ ಉಗುಳುವವರ ಸಂಖ್ಯೆ ತೀರಾ ಹೆಚ್ಚುತ್ತಲಿದೆ. ಮಾತು ಆಡುವಂಥಾದ್ದು. ಸಂಚಾರಿ ಮಾತಿನ ದೃಢೀಕೃತ ಸ್ಥಾಯಿ ನಿಲುವು ಬರಹ. ಇನ್ನೂ ಮುಂದಿನ ಸ್ಥಿತಿ ಕೃತಿ. ಇದರಿಂದಾಗಿ ಸಾಮಾನ್ಯರೆಂದು ಸಮಾಜ ಬಗೆಯುವ ವ್ಯಕ್ತಿಗಳು ತಮ್ಮ ಸೇಡಿನ, ಕೇಡಿನ ಮನೋಭಾವದಿಂದಾಗಿ ಅಸಾಮಾನ್ಯರಾಗುತ್ತಿದ್ದಾರೆ. ದೊಡ್ಡವರೆಂದು ಸಮಾಜ ಗೌರವಿಸುತ್ತಿದ್ದ ವ್ಯಕ್ತಿಗಳನ್ನು ಏಕವಚನದಲ್ಲಿ ವಾಚಾಮಗೋಚರವಾಗಿ ಬೈಯುವುದು ಇಂದು ಯಾರಿಗೂ ಕಷ್ಟವಾಗುತ್ತಿಲ್ಲ ಮತ್ತು ಅದೊಂದು ನಾಚಿಕೆಗೇಡಿನ ಪ್ರಸಂಗವೆಂದು ಅನ್ನಿಸುವುದೇ ಇಲ್ಲ. ಹಿಂದಿನ ಕಾಲದಲ್ಲಿ ಮಾತ್ರವಲ್ಲ, ಇತ್ತೀಚೆಗಿನವರೆಗೂ ಯಾರಾದರೂ ಹೆಸರು ಮಾಡಬೇಕಾಗಿದ್ದರೆ ಏನಾದರೂ ಒಂದು ಸಾಧನೆ ಮಾಡಬೇಕಾಗಿತ್ತು. ಆದರೆ ಇಂದು ಕಲಬುರ್ಗಿಯಂಥವರನ್ನು ಕೊಂದರೆ, ಅನಂತಮೂರ್ತಿಯಂತಹವರನ್ನು ಬೇಕಾಬಿಟ್ಟಿ ಬೈದರೆ, ಅದನ್ನೂ ಮಹತ್ಸಾಧನೆಯೆಂದು ಗುರುತಿಸುವವರೂ ಹೊಗಳುವವರೂ ಇದ್ದಾರೆ. ಪರ-ವಿರೋಧಗಳ ಸಂತೆಯಂಗಡಿಗಳು ಬೆತ್ತಲೆ ನಿಂತಿವೆ. ರಂಗಸ್ಥಳದಲ್ಲಿ ರಾಕ್ಷಸ ವೇಷಗಳು ತುಂಬಿಕೊಂಡು ಸಾತ್ವಿಕ ವೇಷಗಳಿಗೆ ಜಾಗವಿಲ್ಲದಾಗಿದೆ.
ತಮಿಳುನಾಡಿನಲ್ಲಿ ಪೆರುಮಾಳ್ ಮುರುಗನ್ ಎಂಬ ಸಾಹಿತಿಯ ಒಂದು ಕೃತಿಯ ಕುರಿತು ಕಿಡಿಗೇಡಿಗಳಿಂದ ಎಷ್ಟೊಂದು ಅನಗತ್ಯ ಮತ್ತು ಅವಿವೇಕದ ಪ್ರತಿಕ್ರಿಯೆ ಬಂತೆಂದರೆ ತಾನಿನ್ನು ಮುಂದೆ ಬರೆಯುವುದಿಲ್ಲ ಎಂದು ಈ ಸಾಹಿತಿ ಹೇಳಿಕೆ ಕೊಡುವ ಅನಿವಾರ್ಯತೆ ಬಂದಿತು. ಇಂತಹ ಅನಿವಾರ್ಯತೆಗೆ ಕಾರಣವಾದವರು ಒಂದೂ ಸಾಹಿತ್ಯಕೃತಿಯನ್ನು ಓದಿರುವುದಿಲ್ಲ. ಅವರು ವ್ಯಕ್ತಿನಿಷ್ಠರು. ಯಾರಾದರೊಬ್ಬ ಅದು ಕೆಟ್ಟ ಕೃತಿ ಎಂದು ಹೇಳಿದರೆ ಸಾಕು, ಅದನ್ನು ಓದದೆ, ಅದರ ಸತ್ಯಾಸತ್ಯತೆಯನ್ನು ವಿವೇಕದ ನಿಕಷಕ್ಕೊಡ್ಡದೆ ಆ ಕೃತಿಯನ್ನು ಮಾತ್ರವಲ್ಲ, ಕೃತಿಕಾರನನ್ನೇ ನಾಶಮಾಡುವುದಕ್ಕೆ ಸಿದ್ಧರಾಗುತ್ತಾರೆ. ಪೆರುಮಾಳ್ ಮುರುಗನ್ ಅವರಿಗೆ ಆ ನಂತರದಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯವೇ ರಕ್ಷಣೆ ನೀಡಬೇಕಾಯಿತು. ಅವರ ಕೃತಿಯ ಕುರಿತು ಮಾಡಲಾದ ಟೀಕೆಗಳನ್ನು, ವಿರೋಧವನ್ನು ಖಂಡಿಸಿತು. ಬೇಕಾದರೆ ಓದಿ; ಬೇಡವಾದರೆ ಸುಮ್ಮನಿರಿ; ಅವರಿಗೆ ತೊಂದರೆ ಕೊಡುವುದಕ್ಕೆ ನೀವು ಯಾರು ಎಂದು ಉಗ್ರವಾಗಿಯೇ ತೀರ್ಪು ನೀಡಿತು.
ಒಳ್ಳೆಯದನ್ನು ಬೆಂಬಲಿಸಬೇಕಾದ ಸಮಾಜದ ಒಂದು ಅಂಗವು ಮಾರಕವಾಗಿ ಯೋಚಿಸುವುದು, ಒಳ್ಳೆಯದನ್ನು ವಿರೋಧಿಸುವುದಕ್ಕಾಗಿಯೇ ಕಳೆಯಂತೆ ಬೆಳೆಯುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿ. ಸಾಂಸ್ಕೃತಿಕ ವಲಯದಲ್ಲಿ ಭದ್ರತಾಪಡೆಯನ್ನು ನಿಯೋಜಿಸುವ ಕ್ರಮವಿಲ್ಲ. ಆದರೆ ಇಂದು ಸಂಸ್ಕೃತಿಯ ಹೆಸರಿನಲ್ಲಿ ನಡೆಯುವ ಹಲ್ಲೆಗಳನ್ನು ಗಮನಿಸಿದರೆ ಲೇಖನಿಗಿಂತ ಖಡ್ಗವೇ ಹರಿತವೆಂದು ಹೇಳಬೇಕಾಗುತ್ತದೆ.
ದುರಂತದ ಛಾಯೆ ನಮ್ಮ ಸಂಸ್ಕೃತಿಯ ಮೇಲೆ ಹಿಂದೆಂದೂ ಇಲ್ಲದಂತೆ ಎರಗಿದೆ. ಎಲ್ಲ ಕೆಟ್ಟ ನಡವಳಿಕೆಗಳೂ ಧರ್ಮ ಮತ್ತು ಸಂಸ್ಕೃತಿಯ ಹೆಸರಿನಲ್ಲೇ ನಡೆಯುತ್ತಿವೆೆ. ದಲಿತರ, ಅಲ್ಪಸಂಖ್ಯಾತರ, ಮಹಿಳೆ-ಮಕ್ಕಳ ಮೇಲೆೆ ಭಾರತೀಯತೆಯ ಹೆಸರಿನಲ್ಲೇ ದೌರ್ಜನ್ಯ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲವನ್ನೂ ರಾಜಕಾರಣದ ಮೂಲಕವೇ ನೋಡಬೇಕೆಂದು ನಮ್ಮ ಜನರಿಗೆ ಹೇಳಿಕೊಟ್ಟವರ್ಯಾರು? ಅಶ್ಲೀಲ, ಅವಾಚ್ಯಗಳನ್ನೇ ವಚನವೆಂದು, ಸಾಹಿತ್ಯವೆಂದು ತಿಳಿದ ಒಂದು ದೊಡ್ಡ ಬ್ರಿಗೇಡ್ ನಮ್ಮ ಸಂಸ್ಕೃತಿಯನ್ನು ಗುತ್ತಿಗೆಗೆ ಪಡೆದುಕೊಂಡವರಂತೆ ನಡೆದುಕೊಳ್ಳುತ್ತಿರುವುದನ್ನು ನೋಡಿದರೆ ಎಲ್ಲ ಯೋಚನಾಶೀಲರು, ಪ್ರಜ್ಞಾವಂತರು ದೈಹಿಕ ಹಲ್ಲೆಯನ್ನೆದುರಿಸಲು ಸಜ್ಜಾಗಬೇಕೆಂದು ಕಾಣುತ್ತದೆ.
ಈ ಸಾಂಸ್ಕೃತಿಕ ಕ್ರೌರ್ಯ ಬರಿಯ ಮಾತು ತಿಳಿಯದವರನ್ನು ಮಾತ್ರ ಕಾಡಿಲ್ಲ. ಮಾತು ಬಲ್ಲವರೂ ಈ ಪಡೆಯ ವಕ್ತಾರರಂತೆ ವರ್ತಿಸುತ್ತಿದ್ದಾರೆ ಮತ್ತು ಅಂತಹ ಬರಹಗಾರರಿಗೇ ಕೆಲವು ಮಾಧ್ಯಮಗಳು ಹೆಬ್ಬಾಗಿಲನ್ನು ತೆರೆದಿವೆ. ಇವರು ಮಾನವೀಯತೆಯೆಂದರೆ ಏನೆಂದು ತಿಳಿಯದವರಲ್ಲ. ಆದರೆ ಒಂದು ಗೌಪ್ಯ ಅಜೆಂಡಾವನ್ನು ನಡೆಸುವ ಮಾಫಿಯದವರಂತೆ ತಮ್ಮ ಕೇಡಿನ ಯೋಚನೆಗಳಿಗೆ ಅಕ್ಷರರೂಪ ನೀಡಬಲ್ಲರು. ಇತರರನ್ನು ತಪ್ಪುಹಾದಿಗೆ ಸರಕ್ಕನೆ ಆಕರ್ಷಕವಾಗಿ ಎಳೆಯಬಲ್ಲರು; ಸೆಳೆಯಬಲ್ಲರು. ಇಸ್ಲಾಮಿಕ್ ಸ್ಟೇಟ್ ಮಾಡಿದ್ದು, ಮಾಡುತ್ತಿರುವುದು ಇದನ್ನೇ. ಭಾರತದಲ್ಲಿ ಕೆಲವು ಸಾಂಸ್ಕೃತಿಕ ಸಂಘಟನೆಗಳಾದರೂ ಹಾಕಿರುವ ನೀಲಿನಕ್ಷೆ ಇಂಥದ್ದೇ. ಇದು ದೇಶಭಕ್ತಿಯಲ್ಲ; ದ್ವೇಷಭಕ್ತಿ.
ಒಂದು ಸಾವಿನ ಸುತ್ತ ಮಡುಗಟ್ಟಿದ ದುಃಖದ ನಡುವೆ ಸತ್ತವನೇನು ಮಹಾ ಎನ್ನುವ ಇಂತಹ ಕುಲಗೇಡಿಗಳಿಗೆ ಸಾವಿನ ಸತ್ಯ-ಸತ್ವ ಗೊತ್ತಿಲ್ಲ. ಇದನ್ನೇ ಮಹಾಭಾರತದ ಯಕ್ಷಪ್ರಶ್ನೆಯಲ್ಲಿ ಧರ್ಮರಾಯನು ವಿಚಿತ್ರ ಎಂದದ್ದು. ನಮ್ಮ ಸುತ್ತ ಕಾರ್ಯಕಾರಣವಿಲ್ಲದೆ ಸಾವು-ನೋವು ಬರುತ್ತಿದ್ದರೂ ನಾವು ಮಾತ್ರ ಶಾಶ್ವತವೆಂದು ಅಮಾನವೀಯವಾಗಿ ನಡೆದುಕೊಳ್ಳುತಿದ್ದೇವಲ್ಲ, ಅದು ಯುಗಾಂತ್ಯದ ಆರಂಭ. ನಾವೀಗ ಇದನ್ನು ನೋಡುತ್ತಿದ್ದೇವೆಯೇ?