ನಾನು ಐಪಿಎಸ್ ಅಧಿಕಾರಿಯಾಗುತ್ತೇನೆ: ಬುಲಂದ್ ಶಹರ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ

Update: 2016-08-04 03:06 GMT

ಗಾಜಿಯಾಬಾದ್, ಆ.4: ನಾನು ಐಪಿಎಸ್ ಅಧಿಕಾರಿಯಾಗುತ್ತೇನೆ ಎಂದು ಬುಲಂದ್ ಶಹರ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ 14ರ ಬಾಲಕಿ ಹೇಳಿದ್ದಾಳೆ.
ಪೊಲೀಸರು ಕಳುಹಿಸಿದ ಸ್ವಯಂಸೇವಾ ಸಂಸ್ಥೆಯ ಇಬ್ಬರು ಸಲಹಾಗಾರರು ಬಾಲಕಿಯ ಸ್ನೇಹ ಸಂಪಾದಿಸಿದ್ದರೂ, ತನಗೆ ಏನಾಗಿದೆ ಎಂಬ ಬಗ್ಗೆ ಆಕೆಗೆ ಇನ್ನೂ ಖಚಿತವಾಗಿ ತಿಳಿದಿಲ್ಲ. ಪ್ರತಿ ಬಾರಿ ರಾಜಕಾರಣಿಗಳು ಮನೆಗೆ ಭೇಟಿ ನೀಡುವ ವೇಳೆ ಕೂಡಾ ಮುಖ ಮುಚ್ಚಿಕೊಳ್ಳುವ ಬಾಲಕಿಗೆ ಇಂಥ ಭೇಟಿ ಹಿಂಸೆಯಾಗಿ ಪರಿಣಮಿಸಿದೆ ಎಂದು ಆಕೆ ಹೇಳಿಕೊಂಡಿದ್ದಾಳೆ.

ಕುಟುಂಬದ ಬಗ್ಗೆ ಸಹಾನುಭೂತಿ ಪ್ರದರ್ಶಿಸುವ ಮೂಲಕ, ಬಾಲಕಿ ಮುಕ್ತವಾಗಿ ಘಟನೆ ಬಗ್ಗೆ ಹೇಳಿಕೊಳ್ಳುವಂತೆ ಮಾಡಲು ವಾತಾವರಣ ಸೃಷ್ಟಿಸುತ್ತಿದ್ದೇವೆ ಎಂದು ಸಲಹಾಗಾರರಲ್ಲಿ ಒಬ್ಬರು ಪ್ರಕಟಿಸಿದ್ದಾರೆ. ಗಾಜಿಯಾಬಾದ್ ಕಾಲನಿಯಲ್ಲಿರುವ ಮನೆಯೊಳಕ್ಕೆ ಪ್ರವೇಶ ಪಡೆದ ಕೆಲವೇ ವ್ಯಕ್ತಿಗಳಲ್ಲಿ ಸಮವಸ್ತ್ರದಲ್ಲಿಲ್ಲದ ಒಬ್ಬ ಪೊಲೀಸ್ ಕೂಡಾ ಸೇರಿದ್ದಾರೆ. ಗೋಡೆಯಲ್ಲಿ ಆಕರ್ಷಕ ಚಿತ್ರಗಳು ನೇತಾಡುತ್ತಿದ್ದು, ಇದನ್ನು ತಾನೇ ಮಾಡಿದ್ದಾಗಿ ಬಾಲಕಿ ಸಂಕೋಚದಿಂದ ಹೇಳಿಕೊಂಡಿದ್ದಾಳೆ.

ಮಾತುಗಳು ಕೃತಿಯಾಗಿ ಪರಿವರ್ತನೆಯಾದರೆ ನಮ್ಮ ನೆರವಿಗೆ ನಿಂತಿರುವವರಿಗೆ ಅಗತ್ಯ ಸಹಕಾರ ನೀಡಲು ನಾವು ಸಿದ್ಧ. ಕೆಲ ಹೊತ್ತಿನಲ್ಲಿ ಎಲ್ಲರೂ ಹೋಗುತ್ತಾರೆ. ಆರೋಪಿಗಳ ಬಂಧನವಾಗಬೇಕಾದ್ದು ಮುಖ್ಯ ಎಂದು ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ತಾಯಿ ಹೇಳುತ್ತಾರೆ. 38 ವರ್ಷದ ಈಕೆಯ ಮೇಲೂ ಅತ್ಯಾಚಾರ ಎಸಗಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News