ರಾಜಸ್ಥಾನ: ಗೋ ಸಂರಕ್ಷಣಾ ಕೇಂದ್ರದಲ್ಲಿ ದನಗಳ ಸಾವನ್ನು ಪ್ರತಿಭಟಿಸಿದ ಸಂತನ ಬಂಧನ

Update: 2016-08-08 18:14 GMT

  ಜೈಪುರ,ಆ.8: ಗೋರಕ್ಷಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ ಬೆನ್ನಲ್ಲೇ, ಹಿಂಗೋನಿಯಾ ಗೋಸಂರಕ್ಷಣೆ ಕೇಂದ್ರವೊಂದರಲ್ಲಿ ದನಗಳು ಸಾವನ್ನಪ್ಪಿರುವುದನ್ನು ಪ್ರತಿಭಟಿಸಿ ಜೈಪುರದಲ್ಲಿ ಪ್ರದರ್ಶನ ನಡೆಸಿದ ಹಿಂದೂ ಸಂತ ಹಾಗೂ ಅವರ ಸುಮಾರು 60 ಮಂದಿ ಅನುಯಾಯಿಗಳನ್ನು ರಾಜಸ್ಥಾನ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಜೈಪುರದ ಪ್ರಮುಖ ವೃತ್ತವೊಂದರಲ್ಲಿ ಶನಿವಾರ ರಾತ್ರಿ ಪ್ರತಿಭಟನೆ ನಡೆಸುವ ಮೂಲಕ ಸಂತ ಗೋಪಾಲ್ ದಾಸ್ ಹಾಗೂ ಅವರ ಸಹಚರರು, ಆ ಪ್ರದೇಶದಲ್ಲಿ ಜಾರಿಯಲ್ಲಿರುವ ಭಾರತೀಯ ದಂಡಸಂಹಿತೆಯ ಸೆಕ್ಷನ್ 144ನ್ನು ಉಲ್ಲಂಘಿಸಿರುವುದರಿಂದ ಅವರನ್ನು ಬಂಧಿಸಲಾಗಿದೆಯೆಂದು ಅಶೋಕ್ ನಗರ್ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ದಿಗ್ಪಾಲ್ ಸಿಂಗ್ ತಿಳಿಸಿದ್ದಾರೆ.

ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 188 (ಸರಕಾರಿ ಆದೇಶದ ಉಲ್ಲಂಘನೆ) ಹಾಗೂ 283 ( ಸಾರ್ವಜನಿಕ ರಸ್ತೆಗೆ ತಡೆಯೊಡ್ಡುವುದು) ಸೆಕ್ಷನ್‌ಗಳನ್ವಯ ಪ್ರಕರಣ ದಾಖಲಿಸಲಾಗಿದೆಯೆಂದು ಅವರು ಹೇಳಿದ್ದಾರೆ.
  ಹಿಂಗೋರಾದಲ್ಲಿ ರಾಜಸ್ಥಾನ ಸರಕಾರ ನಡೆಸುತ್ತಿರುವ ಗೋ ಆಶ್ರಯ ಕೇಂದ್ರದಲ್ಲಿ ಕಳಪೆ ನಿರ್ವಹಣೆ ಹಾಗೂ ಮೂಲಸೌಕರ್ಯಗಳ ಕೊರತೆಯಿಂದಾಗಿ 100ಕ್ಕೂ ಅಧಿಕ ದನಗಳು ಸಾವನ್ನಪ್ಪಿವೆಯಂದು ಪ್ರತಿಪಕ್ಷ ಕಾಂಗ್ರೆಸ್ ಆಪಾದಿಸಿದ್ದರೆ, ವಿಶ್ವಹಿಂದೂ ಪರಿಷತ್ 500 ಗೋವುಗಳು ಸಾವಿಗೀಡಾಗಿವೆಯೆಂದು ಹೇಳಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News