ಟ್ಯಾಕ್ಸಿಗಳ ಜಗಳದಲ್ಲಿ ಗ್ರಾಹಕನಿಗೆ ಲಾಭ! ಮನೆಯಲ್ಲಿ ವ್ಯಾಪಾರ ನಡೆಸುವವರಿಗೆ ಎಚ್ಚರಿಕೆ!

Update: 2016-08-08 18:36 GMT

ಇಲ್ಲೀಗ ಟ್ಯಾಕ್ಸಿ ವಾರ್

ಮುಂಬೈಯಲ್ಲೀಗ ಟ್ಯಾಕ್ಸಿ ವಾರ್ ಆರಂಭವಾಗಿದೆ. ಗ್ರಾಹಕರನ್ನು ಆಕರ್ಷಿಸಲು ಕಾಲೀ-ಪೀಲೀ (ಕಪ್ಪು-ಹಳದಿ ಟ್ಯಾಕ್ಸಿ), ಫ್ಲೀಟ್ ಮತ್ತು ಆ್ಯಪ್ ಟ್ಯಾಕ್ಸಿಗಳ ನಡುವೆ ಪೈಪೋಟಿ ಆರಂಭವಾಗಿದೆ. ಆ್ಯಪ್ ಆಧಾರಿತ ಟ್ಯಾಕ್ಸಿಗಳು ಪ್ರತೀ ಕಿಲೋಮೀಟರ್ ಹಣ ವಸೂಲಿಯ ನಂತರ ಗ್ರಾಹಕರನ್ನು ಸೆಳೆಯಲು ಆಫರ್ ನೀಡುತ್ತಿವೆ. ಫ್ಲೀಟ್ ಟ್ಯಾಕ್ಸಿಗಳು ಗ್ರಾಹಕರಿಗೆ 20 ಪ್ರತಿಶತ ಡಿಸ್ಕೌಂಟ್ ಆಫರ್ ನೀಡಿವೆ. ಇದೀಗ ಕಪ್ಪು-ಹಳದಿ ಟ್ಯಾಕ್ಸಿ ಕೂಡಾ ಒಟ್ಟು ಬಾಡಿಗೆ ದರದಲ್ಲಿ 20 ಪ್ರತಿಶತ ಡಿಸ್ಕೌಂಟ್ ಘೋಷಿಸಿದೆ.

 2012ರ ತನಕ ಕಪ್ಪು-ಹಳದಿ ಟ್ಯಾಕ್ಸಿಗಳದ್ದೇ ಪಾರುಪತ್ಯ ನಡೆಯುತ್ತಿತ್ತು. ಗ್ರಾಹಕರ ಜೊತೆ ಅವರು ಖುಷಿ ಬಂದಂತೆ ವರ್ತಿಸುತ್ತಿದ್ದ ದಿನಗಳಿದ್ದವು. ಅದರ ಬಾಡಿಗೆಯೂ ವೃದ್ಧಿಯಾಗುತ್ತಿತ್ತು. ಹಾಗಿದ್ದೂ ಪ್ರಯಾಣಿಕರಿಗೆ ಯಾವ ಸೌಲಭ್ಯವೂ ಇರಲಿಲ್ಲ. ಪ್ರಯಾಣಿಕರು ಹೇಳಿದ ಜಾಗಕ್ಕೆ ಡ್ರೈವರ್‌ಗೆ ಆಸಕ್ತಿ ಇಲ್ಲದಿದ್ದರೆ ನಿರ್ದಾಕ್ಷಿಣ್ಯವಾಗಿ ನಿರಾಕರಿಸುತ್ತಿದ್ದರು. ಆದರೆ ಕಪ್ಪು ಹಳದಿ ಟ್ಯಾಕ್ಸಿಗಳಿಗೆ ಎಲ್ಲಕ್ಕಿಂತ ಮೊದಲು ಸ್ಪರ್ಧೆ ನೀಡಿದ್ದು ಫ್ಲೀಟ್ ಟ್ಯಾಕ್ಸಿ, ಮೆರು ಮತ್ತು ಟ್ಯಾಬ್. ಟೂರಿಸ್ಟ್ ಪರ್ಮಿಟ್‌ನಲ್ಲಿ ಆರಂಭವಾದ ಈ ಟ್ಯಾಕ್ಸಿಗಳು ಗ್ರಾಹಕರಿಂದ ಪ್ರತೀ ಕಿ. ಮೀ. ಲೆಕ್ಕಾಚಾರದಲ್ಲಿ ಬಾಡಿಗೆ ದರ ಪಡೆಯಲಾರಂಭಿಸಿದ್ದವು. ನಡುವೆ 2014ರಲ್ಲಿ ಕಾಲ್ ಸೆಂಟರ್‌ನಿಂದ ಬುಕ್ ಮಾಡುವ ಆ್ಯಪ್ ಆಧಾರಿತ ಖಾಸಗಿ ಟ್ಯಾಕ್ಸಿಗಳಾದ ಓಲಾ ಮತ್ತು ಉಬೆರ್ ಇಲ್ಲಿ ಕಾಲೂರಿತು. ಈ ಟ್ಯಾಕ್ಸಿಗಳು ಸುಲಭವಾಗಿ ಬುಕ್ಕಿಂಗ್ ಸೇವೆ, ಇಚ್ಛಿತ ಸ್ಥಳಕ್ಕೆ ಒಯ್ಯುವ, ಸ್ವಚ್ಛತೆ, ವಾತಾನುಕೂಲಿತ ಸೇವೆ..... ಇತ್ಯಾದಿಗಳ ಮೂಲಕ ಗ್ರಾಹಕರನ್ನು ಸೆಳೆಯಲಾರಂಭಿಸಿದವು. ಕಪ್ಪು-ಹಳದಿ ಟ್ಯಾಕ್ಸಿಯ ದರದಲ್ಲೇ ಅದಕ್ಕಿಂತ ಹೆಚ್ಚು ಸೇವೆ ನೀಡಲಾರಂಭಿಸಿದವು.

ಇದರಿಂದ ತಮ್ಮ ಆದಾಯ ಕಡಿಮೆಯಾಯಿತೆಂದು ಕಪ್ಪು-ಹಳದಿ ಟ್ಯಾಕ್ಸಿಗಳು ಆ್ಯಪ್ ಟ್ಯಾಕ್ಸಿಗಳ ವಿರುದ್ಧ ರಸ್ತೆಗಿಳಿದವು. ಜೈ ಭಗವಾನ್ ಟ್ಯಾಕ್ಸಿ-ರಿಕ್ಷಾ ಯೂನಿಯನ್ ಅಧ್ಯಕ್ಷ ಬಾಲಾ ಸಾಹೇಬ್ ಸಾನಪ್ ಅವರು ಆರೋಪಿಸಿದಂತೆ 6 ರೂ. ದರದಲ್ಲಿ ಪ್ರತೀ ಕಿ.ಮೀ. ಹೇಗೆ ಹೋಗಲು ಸಾಧ್ಯ? ಹೀಗಾಗಿ ಇವುಗಳ ವಿದೇಶಿ ಹಣದ ಮೂಲದ ಬಗ್ಗೆ ಪತ್ತೆ ಮಾಡಬೇಕು ಎಂದು ಸರಕಾರವನ್ನು ಆಗ್ರಹಿಸಿದ್ದಿದೆ. ಇನ್ನೊಂದೆಡೆ ಮೆರು ಕೂಡಾ ಅಮೆರಿಕ ಖಾಸಗಿ ಟ್ಯಾಕ್ಸಿ ಕಂಪೆನಿ ಉಬೆರ್ ಎಲ್ಲಿ ಆರಂಭ ವಾಗುತ್ತದೋ ಅಲ್ಲಿ ಮೊದಲಿಗೆ ಕಾನೂನು ಮುರಿಯುತ್ತದೆ ಎಂದು ಆರೋಪಿಸಿತು. ಚೀನಾದಲ್ಲಿ ಉಬೆರ್ ತನ್ನ ದಂಧೆ ಬಂದ್ ಮಾಡಿ ಈಗ ಪೂರಾ ಗಮನ ಭಾರತದಲ್ಲಿ ಕೇಂದ್ರೀಕರಿಸಿದೆಯಂತೆ. ಆದರೆ ಈ ಎಲ್ಲ ಗಲಾಟೆಗಳ ಲಾಭ ಮಾತ್ರ ಈಗ ಮುಂಬೈಯ ಪ್ರಯಾಣಿಕರಿಗೆ ದೊರೆಯುತ್ತಿವೆ. ಉತ್ತಮ ಸೌಕರ್ಯ ಕೊಡುವ, ಸುಮಾರು 30 ಸಾವಿರಗಳಷ್ಟಿರುವ ಮೆರು, ಓಲಾ, ಉಬೆರ್.... ಇಂತಹ ಆ್ಯಪ್ ಬೇಸ್ ಟ್ಯಾಕ್ಸಿಗಳಿಂದಾಗಿ ಕಪ್ಪು-ಹಳದಿ ಟ್ಯಾಕ್ಸಿಗಳ ಸಂಖ್ಯೆ ಇಳಿಮುಖವಾಗಿವೆ. ಒಂದು ದಶಕದ ಮೊದಲು ಮುಂಬೈ ರಸ್ತೆಗಳಲ್ಲಿ 55 ಸಾವಿರದಷ್ಟು ಕಪ್ಪು-ಹಳದಿ ಟ್ಯಾಕ್ಸಿಗಳು ಓಡಾಡುತ್ತಿದ್ದವು. ಇದೀಗ ಇವುಗಳ ಸಂಖ್ಯೆ 40 ಸಾವಿರಕ್ಕೆ ಇಳಿದಿವೆ.

ಈ ಟ್ಯಾಕ್ಸಿಗಳ ಸ್ಪರ್ಧೆಯಲ್ಲಿ ಎಲ್ಲಾ ಟ್ಯಾಕ್ಸಿಗಳವರೂ ತಮ್ಮ ಸೇವೆ ಉತ್ತಮ ಎಂದು ಸಾಬೀತು ಪಡಿಸಲು ನೋಡುತ್ತಿದ್ದಾರೆ. ಅತ್ತ ಓಲಾ-ಉಬೆರ್ ಟ್ಯಾಕ್ಸಿಗಳ ವಿರುದ್ಧವಾಗಿ ಕಪ್ಪು-ಹಳದಿ ಟ್ಯಾಕ್ಸಿ ಸಂಘಟನೆ ಮತ್ತೆ ಮುಷ್ಕರ ಹೂಡುವ ಎಚ್ಚರಿಕೆ ನೀಡಿದೆ.

* * *

ವಿದರ್ಭ ಚರ್ಚೆ: ಶಿವಸೇನೆಯ ಬದಲಾದ ನಿಲುವು!

ಜೂನ್ 2, 2014ರಂದು ತೆಲಂಗಾಣ ರಾಜ್ಯದ ರಚನೆಯ ನಂತರ ಹಲವು ದೊಡ್ಡ ರಾಜ್ಯಗಳಲ್ಲಿ ಪುನಃ ಚಿಕ್ಕ ರಾಜ್ಯಗಳ ರಚನೆಗೆ ಬೇಡಿಕೆ ಆರಂಭವಾಗಿತ್ತು. ಅದರಲ್ಲಿ ಉತ್ತರ ಪ್ರದೇಶದಲ್ಲಿ ಹರಿತ್ ಪ್ರದೇಶ್, ಪಶ್ಚಿಮ ಬಂಗಾಳದಲ್ಲಿ ಗೋರ್ಖಾಲ್ಯಾಂಡ್, ರಾಜಸ್ಥಾನದಲ್ಲಿ ಮರೂ ಪ್ರದೇಶ, ಮಹಾರಾಷ್ಟ್ರದಲ್ಲಿ ವಿದರ್ಭ ರಾಜ್ಯಗಳ ಬೇಡಿಕೆ ಮುಖ್ಯವಾಗಿತ್ತು. ಇಲ್ಲಿ ವಿದರ್ಭ ಹೊರತುಪಡಿಸಿ ಉಳಿದೆಲ್ಲ ಪ್ರತ್ಯೇಕ ರಾಜ್ಯಗಳ ಬೇಡಿಕೆ ಸದ್ಯ ತಣ್ಣಗಿವೆ. ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಾನು ಅಖಂಡ ಮಹಾರಾಷ್ಟ್ರದ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ವಿವಾದವನ್ನು ಸದ್ಯ ತಣ್ಣಗಾಗಿಸಿದ್ದಾರೆ.

ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ಅಖಂಡ ಮಹಾರಾಷ್ಟ್ರದ ಪ್ರಸ್ತಾವ ತಂದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಕ್ಕಿಸುವ ವಿಪಕ್ಷದ ರಣನೀತಿ ಮೊನ್ನೆ ವಿಫಲ ವಾಯಿತು. ಅಖಂಡ ಮಹಾರಾಷ್ಟ್ರಕ್ಕಾಗಿ ಸದಾ ಹೋರಾಡುತ್ತಲೇ ಇರುವ ಶಿವಸೇನೆ ಇಂತಹ ಸಮಯದಲ್ಲಿ ವಿಪಕ್ಷದ ಜೊತೆ ಸೇರಲು ನಿರಾಕರಿಸಿತು!

ಕಳೆದ ಮಂಗಳವಾರ ವಿಪಕ್ಷದ ವತಿಯಿಂದ ವಿಧಾನಸಭಾ ನಿಯಮಾ ವಳಿಯ ನಿಯಮ 106ರ ಅನ್ವಯ ಅಖಂಡ ಮಹಾರಾಷ್ಟ್ರದ ಬೆಂಬಲದಲ್ಲಿ ಪ್ರಸ್ತಾವ ಪಾಸ್ ಮಾಡಲು ಯೋಜನೆ ರೂಪಿಸಿತ್ತು. ಕಾಂಗ್ರೆಸ್-ಎನ್‌ಸಿಪಿಯ ನೇತಾರರು ಶಿವಸೇನೆ ಕೂಡಾ ಈ ಪ್ರಸ್ತಾವವನ್ನು ಬೆಂಬಲಿಸುವುದು ಎಂದು ತಿಳಿದಿದ್ದರು. ಆರಂಭದಲ್ಲಿ ಶಿವಸೇನೆಯ ಸಕಾರಾತ್ಮಕ ವರ್ತನೆ ಕಂಡು ವಿಪಕ್ಷಕ್ಕೆ ಹುರುಪು ಬಂದಿತ್ತು. ಈ ವಿಷಯದಲ್ಲಿ ಶಿವಸೇನೆಯು ಬಿಜೆಪಿಗಿಂತ ಬೇರೆ ನಿಲ್ಲುವುದೆಂದು ವಿಪಕ್ಷ ಭಾವಿಸಿತ್ತು. ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್‌ರಂತೂ ಈ ವಿಷಯದಲ್ಲಿ ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಜೊತೆ ಮಾತಾಡಿದ್ದು ಬೆಂಬಲ ನೀಡಲಿದ್ದಾರೆ ಎಂದೂ ಘೋಷಣೆ ಮಾಡಿದ್ದರು. ಬಿಜೆಪಿ ಸರಕಾರ ಸದನದಲ್ಲಿ ಬಹುಮತ ಕಳೆದುಕೊಳ್ಳಲಿದೆಯೆಂದೇ ಎಲ್ಲರು ನಂಬಿದ್ದರು. ಆದರೆ ಇತ್ತ ಶಿವಸೇನೆ ಶಾಸಕರಿಗೆ ಪರಿಸ್ಥಿತಿ ಶೋಚನೀಯವಾಗಲಿದೆ ಎಂದು ವಾತಾವರಣದಲ್ಲಿ ಕಂಡು ಬರುತ್ತಿದ್ದಂತೆ ಶಿವಸೇನಾ ನಾಯಕರು ಮಾತೋಶ್ರೀಯನ್ನು ಸಂಪರ್ಕಿಸಿ ಉದ್ಧವ್‌ರಿಗೆ ಮುಂದಿನ ಪರಿಣಾಮ ಚೆನ್ನಾಗಿರುವುದಿಲ್ಲ ಎಂದು ಸ್ಪಷ್ಟ ಪಡಿಸಿದ ನಂತರ ಶಿವಸೇನೆ ಅನಿರೀಕ್ಷಿತ ತನ್ನ ರಣನೀತಿಯನ್ನು ಬದಲಿಸಿ ವಿದರ್ಭ ಪ್ರಕರಣದಿಂದ ದೂರ ನಿಂತಿತು.

ಇದೀಗ ಅಖಂಡ ಮಹಾರಾಷ್ಟ್ರದ ಪ್ರಸ್ತಾವದಿಂದ ಶಿವಸೇನೆ ಹಿಂದೆ ಸರಿದ ಬಗ್ಗೆ ಪ್ರತಿಕ್ರಿಯಿಸಿದ ವಿಪಕ್ಷ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರು, ‘‘ಶಿವಸೇನೆಯು ಬಿಜೆಪಿ ಜೊತೆ ಏನು ಒಪ್ಪಂದ ಮಾಡಿದೆಯೋ? ಇದರ ಬದಲು ಶಿವಸೇನೆಯು ಬಿಜೆಪಿಯಿಂದ ಏನು ಬೆಲೆ ವಸೂಲಿ ಮಾಡುತ್ತದೋ ಅದರ ಗುಟ್ಟು ಶಿವಸೇನೆಯೇ ಹೇಳಬೇಕು’’ ಎಂದಿದ್ದಾರೆ.

ಕಳೆದ 16 ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ವಿದರ್ಭದಲ್ಲಿ 35 ಸಾವಿರ ರೈತರ ಆತ್ಮಹತ್ಯೆ, 23 ಸಾವಿರ ಮಕ್ಕಳು ಪೌಷ್ಟಿಕ ಆಹಾ ರದ ಕೊರತೆಯಲ್ಲಿ ಸಾವನ್ನಪ್ಪಿರುವುದು, ನಿರುದ್ಯೋಗ.... ಇಂತಹ ಸಮಸ್ಯೆ ಗಳಿಂದಾಗಿ ವಿದರ್ಭ ಪ್ರತ್ಯೇಕ ರಾಜ್ಯದ ಕೂಗು ಎಬ್ಬಿಸಿದೆ. ಪ್ರತ್ಯೇಕ ವಿದರ್ಭಕ್ಕೆ ಬೆಂಬಲಿಸಿದ್ದ ಮಹಾ ಅಧಿವಕ್ತಾ ಪದದಿಂದ ಶ್ರೀಹರಿ ಅಣೆ ಅವರು ಶಿವಸೇನೆಯ ಆಗ್ರಹದ ಮೇರೆಗೆ ವಿವಾದಕ್ಕೀಡಾಗಿ ರಾಜೀನಾಮೆ ನೀಡಿದ್ದೂ ಇಲ್ಲಿ ಸ್ಮರಿಸಬಹುದು.

* * *

ನಾಲೆಗಳ ಮೇಲೆ ಬಜಾರ್!

ನವಿಮುಂಬೈ ಮಹಾನಗರ ಪಾಲಿಕೆ ವಾಶಿಯಂತಹ ಜನಸಂದಣಿ ದಟ್ಟವಾಗಿರುವ ಬಜಾರ್ ಕ್ಷೇತ್ರಗಳಲ್ಲಿ ನೂಕುನುಗ್ಗಲು ಕಡಿಮೆ ಮಾಡುವಲ್ಲಿ ಹೊಸ ಯೋಜನೆ ರೂಪಿಸುತ್ತಿದೆ. ಬಜಾರ್‌ಗಳಲ್ಲಿ ಹಾದು ಹೋಗುವ ನಾಲೆಗಳನ್ನು ಕಾಂಕ್ರಿಟ್‌ನಿಂದ ಮೇಲ್ಗಡೆ ಮುಚ್ಚಿ ಅಲ್ಲಿಗೆ ಬೀದಿಬಜಾರ್‌ಗಳನ್ನು ಸ್ಥಳಾಂತರ ಮಾಡಲಿದೆ. ಅದಕ್ಕಾಗಿ ಮನಪಾ ಬೀದಿಬಜಾರ್‌ಗಳಿಗೆ ನಾಲೆಗಳ ಮೇಲೆಯೂ ಅನುಮತಿ ನೀಡುವ ಕುರಿತು ಯೋಚಿಸುತ್ತಿದೆ. ಈಗಾಗಲೇ ಮನಪಾ ಆಡಳಿತವು ವಾಶಿಯ ಬಸ್ ಡಿಪೋದ ಪಕ್ಕದಲ್ಲಿದ್ದ ಅಧಿಕೃತ ಬೀದಿಬಜಾರ್‌ಗಳನ್ನು ನಾಲೆಯ ಮೇಲ್ಗಡೆ ನಿರ್ಮಿಸಿದ ಕಾಂಕ್ರಿಟ್ ಜಾಗದಲ್ಲಿ ಸ್ಥಳಾಂತರಿಸಿತ್ತು. ಇದರಿಂದ ವಾಶಿ ಸೆಕ್ಟರ್ 9ರಲ್ಲಿನ ಬೀದಿಬಜಾರ್‌ಗಳ ಅತಿಕ್ರಮಣವೂ ಖಾಲಿಯಾದಂತಾಯಿತು. ಇದೀಗ ನವಿಮುಂಬೈ ಮನಪಾ ನಗರದ ಇನ್ನಿತರ ಕೆಲವು ಕ್ಷೇತ್ರಗಳಲ್ಲೂ ನಾಲೆಗಳ ಮೇಲ್ಗಡೆ ಕಾಂಕ್ರಿಟ್ ಹಾಕಿ ಅಲ್ಲಿ ಬೀದಿಬಜಾರ್‌ಗಳನ್ನು ಸ್ಥಳಾಂತರಿಸಲು ಯೋಚಿಸುತ್ತಿದೆ.

ನವಿಮುಂಬೈ ನಗರದ ಅನೇಕ ಉಪನಗರಗಳ ನಡುವೆ ನಾಲೆಗಳು ಹಾದುಹೋಗುತ್ತವೆ. ಇವುಗಳನ್ನು ಕಾಂಕ್ರಿಟ್‌ನಿಂದ ಮುಚ್ಚಿದರೆ ಅನೇಕ ಸಮಸ್ಯೆಗಳು ದೂರವಾಗುವ ಸಾಧ್ಯತೆಗಳಿವೆ. ಜೊತೆಗೆ ನಾಲೆಗಳಿಂದ ಸೃಷ್ಟಿ ಯಾಗುವ ಸೊಳ್ಳೆಗಳಿಂದಲೂ ರಕ್ಷಣೆ ಸಿಗಲಿದೆ. ನಡುವೆ ಅಗತ್ಯಬಿದ್ದರೆ ನಾಲೆಗಳ ಮೇಲಿನ ಕಾಂಕ್ರಿಟ್‌ನ ನೆಲದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡುವ ಬಗ್ಗೆಯೂ ಮನಪಾ ಯೋಚಿಸುತ್ತಿದೆ. * * *

20 ಸಾವಿರ ಅಂಗಡಿಗಳಿಗೆ ಮನಪಾ ನೋಟಿಸ್

ವಸತಿ ಕ್ಷೇತ್ರದ ಕಟ್ಟಡಗಳಲ್ಲಿನ ಮನೆಗಳಲ್ಲಿ ಚಿಕ್ಕಪುಟ್ಟ ವ್ಯಾಪಾರ ವಹಿವಾಟು ಕೈಗೊಂಡಿರುವ ನವಿಮುಂಬೈ ಶಹರದ ಸುಮಾರು 20 ಸಾವಿರಕ್ಕೂ ಅಧಿಕ ಅಂಗಡಿಗಳವರಿಗೆ ನವಿ ಮುಂಬೈ ಮನಪಾ ನೋಟಿಸ್ ಜಾರಿಗೊಳಿಸಿದೆ. ಇದರಲ್ಲಿ ತಮ್ಮ ಮನೆಗಳಲ್ಲಿ ಅಂಗಡಿಗಳನ್ನು ನಡೆಸುವವರಿಗೆ ಎಚ್ಚರಿಕೆ ನೀಡಲಾಗಿದ್ದು ನೋಟಿಸ್ ಜಾರಿಗೊಳಿಸಿದ 30 ದಿನಗಳೊಳಗೆ ಮಹಾನಗರ ಪಾಲಿಕೆಯ ಲೈಸನ್ಸ್ ಪಡೆದುಕೊಳ್ಳಬೇಕು. ಇಲ್ಲವಾದರೆ ತಮ್ಮ ಅಂಗಡಿಗಳನ್ನು ಮುಚ್ಚಬೇಕು ಎಂದು ತಿಳಿಸಿದೆ.

20 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರುವ ಅಂಗಡಿ ಮಾಲಕರು ಶಹರದ ಗಾಂವ್‌ಠಾಣಾಕ್ಷೇತ್ರ, ಸಿಡ್ಕೋ ನಿರ್ಮಿತ ನಿವಾಸಿ ಚಾಳ್‌ಗಳು, ಹಳೆಯ ವಸತಿ ಕಟ್ಟಡಗಳಲ್ಲಿ, ಜೋಪಡಿ ಕ್ಷೇತ್ರಗಳಲ್ಲಿ ತಮ್ಮ ತಮ್ಮ ಮನೆಯ ಒಂದು ರೂಮಿನಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಇದೀಗ ಈ 20 ಸಾವಿರಕ್ಕೂ ಅಧಿಕ ಜನರಿಗೆ ಭಯ ಶುರುವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News