ಅಸ್ಪಶ್ಯತೆ, ಜಾತಿ ತಾರತಮ್ಯ ಇಲ್ಲದ ಸ್ವಚ್ಛಭಾರತ ಕನಸು

Update: 2016-08-09 17:29 GMT

ರ್ತವ್ಯದ ಬಗೆಗಿನ ಬದ್ಧತೆಗಾಗಿ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಹೈದರಾಬಾದ್ ಮಹಾನಗರ ಪಾಲಿಕೆಯ ಸಫಾಯಿ ಕರ್ಮಚಾರಿಯೊಬ್ಬರನ್ನು ಸನ್ಮಾನಿಸಿದರು. ಎನ್‌ಡಿಟಿವಿಯ ವರದಿಗಾರ್ತಿ ಉಮಾ ಸುಧೀರ್ ವಿವರಣೆಯಂತೆ, ಈ ಪೌರಕಾರ್ಮಿಕ ನಿತ್ಯವೂ ನಿಗದಿತ ಸಮಯಕ್ಕೆ ಮುಂಚೆಯೇ ಕೆಲಸಕ್ಕೆ ಹಾಜರಾಗುತ್ತಾರೆ. ತುರ್ತು ಸಂದರ್ಭದಲ್ಲೂ ರಜೆ ಪಡೆಯದೇ ಕರ್ತವ್ಯ ನಿರ್ವಹಿಸಿದ್ದಾರೆ. ಸಫಾಯಿ ಕರ್ಮಚಾರಿಗಳ ತಂಡದ ಮುಖ್ಯಸ್ಥ. ಹೈದರಾಬಾದ್ ಸ್ವಚ್ಛ ನಗರವಾಗುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಇವರ ಕೆಲಸದ ಬದ್ಧತೆ ಬಗ್ಗೆ ಎಲ್ಲರೂ ಹೆಮ್ಮೆ ಪಡಬೇಕು

ಬಹಳಷ್ಟು ಹಿಂದೆ ಗಾಂಧೀಜಿ ಸಫಾಯಿ ಕರ್ಮಚಾರಿಗಳ ಬಗ್ಗೆ ಇದನ್ನೇ ಹೇಳಿದ್ದರು. ‘‘ನಿಮಗೆ ನೀಡಿದ ಕೆಲಸವನ್ನು ನೀವು ಬದ್ಧತೆಯಿಂದ ಮಾಡಿದರೆ, ಮುಂದಿನ ಜನ್ಮದಲ್ಲಿ ಉತ್ತಮ ವರ್ಗದಲ್ಲಿ ಹುಟ್ಟುತ್ತೀರಿ’’ ಎಂದು ಅವರು ಹೇಳಿದ್ದರು. ಈ ಕಾರಣದಿಂದ ಸಫಾಯಿ ಕರ್ಮಚಾರಿಗಳ ಮುಷ್ಕರ ಅಥವಾ ಹರತಾಳವನ್ನು ಗಾಂಧಿ ಎಂದೂ ಬೆಂಬಲಿಸಿರಲಿಲ್ಲ. ಏಕೆಂದರೆ ಆ ಕೆಲಸ ಮಾಡಲು ಬೇರೆ ಯಾರೂ ಇರಲಿಲ್ಲ. ಪ್ರಧಾನಿ ಮೋದಿಯವರೂ ಹಿಂದೊಮ್ಮೆ ‘‘ಸಫಾಯಿ ಕೆಲಸ ನಿಮಗೆ ಆಧ್ಯಾತ್ಮಿಕ ಅನುಭವ ನೀಡುತ್ತದೆ’’ ಎಂದು ಹೇಳಿದ್ದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಈ ‘ಆಧ್ಯಾತ್ಮಿಕ’ ಕೆಲಸದ ಬಗ್ಗೆ ಪುಸ್ತಕವನ್ನೂ ಬರೆದಿದ್ದರು. ಈ ಪುಸ್ತಕ ಸಿಗುತ್ತದೆಯೋ ಇಲ್ಲವೋ ಎನ್ನುವುದು ಗೊತ್ತಿಲ್ಲ. ಆದರೆ ಬಹುತೇಕ ಗುಜರಾತಿ ಸ್ನೇಹಿತರಲ್ಲಿ ಇದರ ಸಾಫ್ಟ್ ಪ್ರತಿಯಂತೂ ಖಂಡಿತಾ ಇರುತ್ತದೆ ಎಂಬ ನಂಬಿಕೆ ನನ್ನದು.

ಆದರೆ ಈಗ ನೈರ್ಮಲ್ಯ ಕೆಲಸ ಬಗೆಗಿನ ಸಮರ್ಪಣಾ ಮನೋ ಭಾವ ಇದೀಗ ಶೋಷಣಾತ್ಮಕವಾಗಿದೆ. ಬಹಳಷ್ಟು ಹಿಂದೆ ಗಾಜಿಪುರ ಜಿಲ್ಲೆಯ ಮುಹ್ಮದಾಬಾದ್‌ನಲ್ಲಿ ನಾನು ಸ್ವಾತಂತ್ರ್ಯ ದಿನದಂದು ಹಲವು ಸಫಾಯಿ ಕರ್ಮಚಾರಿಗಳ ಜತೆಗಿನ ಸಂವಾದವನ್ನು ಧ್ವನಿಮುದ್ರಣ ಮಾಡಿಕೊಂಡಿದ್ದೆ. ಪಾಲಿಕೆಯ ಬೀದಿ ಹಾಗೂ ಚರಂಡಿಗಳನ್ನು ಬೆಳ್ಳಂಬೆಳಗ್ಗೆಯೇ ಕಸಬರಿಕೆ ಮತ್ತು ಇತರ ಸಾಧನಗಳಿಂದ ಸ್ವಚ್ಛಗೊಳಿಸುತ್ತಿದ್ದರು. ನಿಮಗೆ ಇಂದು ರಜೆ ಇಲ್ಲವೇ ಎಂದು ನಾನು ಅವರನ್ನು ಕೇಳಿದ್ದೆ. ಅದಕ್ಕೆ, ‘‘ಸರ್ ಇಡೀ ದೇಶ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. ಪ್ರತಿಯೊಬ್ಬರೂ ಒಳ್ಳೆಯ ಬಟ್ಟೆ ಧರಿಸುತ್ತಾರೆ; ಸಿಹಿ ಹಂಚುತ್ತಾರೆ. ಪೆರೇಡ್ ವೀಕ್ಷಿಸುತ್ತಾರೆ. ನಮ್ಮ ನಾಯಕರ ಭಾಷಣ ಕೇಳುತ್ತಾರೆ. ಆದರೆ ಸಫಾಯಿ ಕರ್ಮಚಾರಿಗಳಾದ ನಾವು, ಇಂದಿಗೂ ಎಲ್ಲ ಹೀನ ಕೆಲಸಗಳನ್ನು ಮಾಡಬೇಕಾಗುತ್ತದೆ. ನಮಗೆ ಸ್ವಾತಂತ್ರ್ಯ ಸಿಗುವುದು ಯಾವಾಗ? ತುರ್ತು ಸಂದರ್ಭಗಳಲ್ಲಿ ಕೂಡಾ ನಮಗೆ ರಜೆ ಇಲ್ಲ. ಯಾವ ವೈದ್ಯಕೀಯ ಸೌಲಭ್ಯಗಳೂ ಇಲ್ಲ. ಕೈಗವಸು ಮತ್ತು ಸ್ವಚ್ಛತೆಗೆ ಬೇಕಾದ ಅಗತ್ಯ ಪರಿಕರಗಳೂ ಇಲ್ಲ’’ ಎಂಬ ಉತ್ತರ ಬಂದಿತ್ತು.

 ನಾವು ಸಫಾಯಿ ಕರ್ಮಚಾರಿಗಳ ಒಂದು ದಿನದ ಕೆಲಸವನ್ನು ನೋಡಿದರೆ, ನಾವು ಹೆಮ್ಮೆ ಎಂದು ಕರೆಯುವ ಅವರ ಕೆಲಸ ಎಷ್ಟು ಯಾತನಾಮಯ ಎನ್ನುವುದು ಅರ್ಥವಾಗುತ್ತದೆ. ಪ್ರತಿ ಸರಕಾರಿ ಅಧಿಕಾರಿ ಕೂಡಾ ಸ್ವಚ್ಛ ಭಾರತದ ಆಂದೋಲನದ ಜತೆ ತೊಡಗಿಸಿಕೊಂಡ ಬಗ್ಗೆ ಹೆಮ್ಮೆ ಹೊಂದಿದ್ದಾರೆ. ಪೊರಕೆ ಹಿಡಿದು ರಸ್ತೆ ಗುಡಿಸುವ ಚಿತ್ರವನ್ನು ತಮ್ಮ ಚೇಂಬರ್‌ನಲ್ಲಿ ತೂಗುಹಾಕಿಕೊಂಡು ಹೆಮ್ಮೆ ಪಡುತ್ತಾರೆ. ಆದರೆ ಶತಮಾನಗಳ ಕಾಲದಿಂದ ಎಲ್ಲ ಚರಂಡಿ ಹಾಗೂ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾ ಬಂದಿರುವ ಸಫಾಯಿ ಕರ್ಮಚಾರಿಗಳನ್ನು ಒಳಗೊಳ್ಳದಿದ್ದರೆ, ಇಡೀ ಸ್ವಚ್ಛಭಾರತ ಆಂದೋಲನ ಬೂಟಾಟಿಕೆ ಎನಿಸಿಕೊಳ್ಳುವುದರಲ್ಲಿ ಸಂಶಯವೇ ಇಲ್ಲ. ಸ್ವಚ್ಛಭಾರತ ಇಂಥ ಪೌರಕಾರ್ಮಿಕರಿಗೆ ಸಮಾಜದಲ್ಲಿ ಗೌರವಪೂರ್ವಕ ಸ್ಥಾನಮಾನ ನೀಡಿ, ಪುನರ್ವ ಸತಿಗೆ ಶ್ರಮಿಸುತ್ತದೆಯೇ? ಈ ಕೆಲಸಕ್ಕಾಗಿ ಅವರು ಹೆಚ್ಚಿನ ವೇತನ ಕೇಳುತ್ತಿದ್ದಾರೆಯೇ? ಆದರೆ ಸಫಾಯಿ ಕರ್ಮಚಾರಿಗಳು ಬದ್ಧತೆಯಿಂದ ತಮ್ಮ ಕೆಲಸ ಮಾಡದಿದ್ದರೆ, ನಾವು ಯಾವಾಗ ಸ್ವಚ್ಛಭಾರತ ನಿರ್ಮಿಸಲು ಸಾಧ್ಯ? ಈಗಾಗಲೇ ಸ್ವಚ್ಛಗೊಳಿಸಿದ ರಸ್ತೆಯನ್ನು ಸಫಾಯಿ ಕರ್ಮಚಾರಿಗಳು ಮತ್ತೆ ಸ್ವಚ್ಛಗೊಳಿಸುತ್ತಿದ್ದಾರೆ ಎಂಬಂತಾಗುತ್ತದೆ. ಒಂದು ದಿನದ ಮಟ್ಟಿಗೆ ಆ ಕೊಳಕು ಚರಂಡಿ ಅಥವಾ ಒಳಚರಂಡಿಯತ್ತ ಒಂದು ದಿನ ದೃಷ್ಟಿ ಹಾಯಿಸಿ.
ಹಿಂದೊಮ್ಮೆ ಜರ್ಮನಿಯ ಸ್ನೇಹಿತೆಯೊಬ್ಬರು, ಈ ಕೆಲಸವನ್ನು ಏಕೆ ವಿರೋಧಿಸುತ್ತಿದ್ದೀರಿ? ನಾವೆಲ್ಲರೂ ನಮ್ಮ ಶೌಚಾಲಯ ಸ್ವಚ್ಛಗೊಳಿಸುತ್ತೇವೆ. ನಿಮ್ಮ ಕೆಲಸ ನೀವು ಮಾಡುವುದು ತಪ್ಪಲ್ಲ ಎಂದು ಕೇಳಿದ್ದರು. ಆದರೆ ವಿಷಯ ನೀವು ಎಣಿಸದಷ್ಟು ಸರಳವಲ್ಲ ಎಂದು ನಾನು ಉತ್ತರಿಸಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ನಿಮ್ಮ ಶೌಚಾಲಯಗಳು ಅಥವಾ ಈಗ ಹಸಿರುಕೊಠಡಿಗಳು ನಿದ್ದೆ ಮಾಡಲು ಮತ್ತು ಪುಸ್ತಕ ಓದಲೂ ಸೂಕ್ತ ಎಂಬಷ್ಟು ಚೆನ್ನಾಗಿರುತ್ತವೆ. ನಮ್ಮ ಭಾರತೀಯ ಸಂಡಾಸ್ ಅಥವಾ ಶೌಚಾಲಯಗಳಂತೆ ಗಬ್ಬು ವಾಸನೆಯ, ನೊಣಗಳು ಹಾರಾಡುವ ಕೊಳಕು ಹೊಂಡಗಳಂತಲ್ಲ ಎಂದು ಹೇಳಿದೆ.

ಯಾವುದೇ ಭಾರತೀಯ ನಗರ ಅಥವಾ ಹಳೆಯ ಪಟ್ಟಣಗಳಲ್ಲಿನ ಶೌಚಾಲಯಗಳಲ್ಲಿ ಇಂದಿಗೂ ಜಾಡಮಾಲಿಗಳೇ ಈ ಕೆಲಸವನ್ನು ಮಾಡುತ್ತಾರೆ. ಹಲವು ಕಡೆಗಳಲ್ಲಿ ಇಂಥ ಕೆಲಸವನ್ನು ನಾನು ವೀಡಿಯೊ ಮಾಡಿದ್ದೇನೆ. ಪ್ರತಿದಿನ ಪೌರಕಾರ್ಮಿಕರು ಸ್ವಚ್ಛಗೊಳಿಸುವ ಮ್ಯಾನ್‌ಹೋಲ್‌ಗಳಿಗೆ ಇಳಿದಿದ್ದೇನೆ. ಈ ಬಗ್ಗೆ ಸ್ಟ್ಯಾಲಿನ್ ನಿರ್ಮಿಸಿದ ಚಿತ್ರವನ್ನು ಬಹಳಷ್ಟು ಮಂದಿ ನೋಡಲೂ ಸಾಧ್ಯವಿಲ್ಲ ಎಂದು ನಾನು ಸವಾಲು ಹಾಕಬಲ್ಲೆ. ಆದ್ದರಿಂದ ಈ ಹೊಲಸು ಕೆಲಸದಲ್ಲಿ ಯಾವ ಆಧ್ಯಾತ್ಮಿಕ ಅನುಭವವನ್ನು ಪಡೆಯಲು ಸಾಧ್ಯ? ನಾವು ಅದನ್ನು ವೈಭವೀಕರಿಸಲು ಕಾರಣವೇನೆಂದರೆ, ಯಾರಾದರೂ ಆ ಕೆಲಸ ಮಾಡಬೇಕು ಎನ್ನುವುದು.
ಹಾಗೆಂದ ಮಾತ್ರಕ್ಕೆ ಸಫಾಯಿ ಕರ್ಮಚಾರಿಗಳನ್ನು ಗೌರವಿಸಬಾರದು ಎಂಬ ಅರ್ಥವಲ್ಲ. ಅವರ ಕೆಲಸವನ್ನು ನಾವು ಗುರುತಿಸುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಆದರೆ ಇಂಥ ಗುರುತಿಸುವಿಕೆಯಿಂದ ಅವರು ಎದುರಿಸುತ್ತಿರುವ ಅಸ್ಪಶ್ಯತೆ ಅಥವಾ ಜಾತಿ ತಾರತಮ್ಯ ನಿರ್ಮೂಲನೆ ಮಾಡಲು ಸಾಧ್ಯವೇ? ಪೌರಕಾರ್ಮಿಕ ಅಥವಾ ಇಂಥ ಸಫಾಯಿ ಕರ್ಮಚಾರಿ ವೃತ್ತಿ ಅಸ್ಪಶ್ಯತೆ ಅಥವಾ ಜಾತಿ ತಾರತಮ್ಯದ ಸಮಸ್ಯೆಯಿಂದ ಪ್ರತ್ಯೇಕವಾಗಿದೆಯೇ? ಅಮಿತಾಬ್ ಬಚ್ಚನ್, ಹೇಮಮಾಲಿನಿ ಅಥವಾ ಸಚಿವರು, ಅಧಿಕಾರಿಗಳು ಒಂದು ದಿನ ಪೊರಕೆ ಹಿಡಿದರೆ, ಅವರು ಜಾತಿ ತಾರತಮ್ಯದ ಬಲಿಪಶುಗಳಾಗುವುದಿಲ್ಲ. ಅಥವಾ ಸಫಾಯಿ ಕರ್ಮಚಾರಿಗಳ ಪರವಾಗಿ ಶ್ರಮಿಸಿದರೂ, ಅಸ್ಪಶ್ಯತೆಯ ಕಳಂಕ ಅವರಿಗೆ ತಟ್ಟುವುದಿಲ್ಲ. ಇಡೀ ಸ್ವಚ್ಛಭಾರತ ಆಂದೋಲನದಲ್ಲಿ ಇಂಥ ಸಫಾಯಿ ಕರ್ಮಚಾರಿಗಳ ಅವಿಶ್ರಾಂತ ಶ್ರಮದ ಬಗ್ಗೆ, ಜಾಡಮಾಲಿ ಪದ್ಧತಿಗೆ ಬಲಿಯಾದ ಇವರ ಬಗ್ಗೆ ಒಂದು ಒಳ್ಳೆಯ ಮಾತೂ ಕೇಳಿಬಂದಿಲ್ಲ.

ಆದ್ದರಿಂದ ಪೌರಕಾರ್ಮಿಕರ ಕರ್ತವ್ಯವನ್ನು ಶ್ಲಾಘಿಸುವುದು ಅಗತ್ಯ. ಆದರೆ ಇದನ್ನು ಗಾಂಧೀಜಿ ಹಾಗೂ ಇದೀಗ ಅವರ ಅನುಯಾಯಿಗಳು ಮಾಡಿದಂತೆ ಅವರ ಶೋಷಣೆಗೆ ಭಾವನಾತ್ಮಕ ಅಸ್ತ್ರವಾಗಿ ಬಳಸಿಕೊಳ್ಳಬಾರದು. ಶ್ರಮಗೌರವವನ್ನು ನಾವು ಪ್ರತಿಪಾದಿಸುವುದಾದರೆ ಇತರರಂತೆ ಇಂಥ ಪೌರಕಾರ್ಮಿಕರಿಗೂ ರಜೆ ಸೌಲಭ್ಯ, ವೈದ್ಯಕೀಯ ಸೌಲಭ್ಯ ಹಾಗೂ ಅವರ ಕೆಲಸಕ್ಕೆ ಒಳ್ಳೆಯ ಪ್ರತಿಫಲ ದೊರೆಯುವಂತಾಗಬೇಕು. ಪ್ರಧಾನಿ ಸಫಾಯಿ ಕರ್ಮಚಾರಿಯನ್ನು ಗೌರವಿಸಿದ್ದು ಒಳ್ಳೆಯ ಬೆಳವಣಿಗೆ. ಆದರೆ ಅದೇ ಸಮುದಾಯದ ಒಬ್ಬ ವ್ಯಕ್ತಿಗೆ, ಈ ಸಮುದಾಯದ ಸಮಸ್ಯೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸಿದ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಪ್ರಶಸ್ತಿ ಬಂದರೆ, ಇಡೀ ಸರಕಾರ ಏಕೆ ಮೌನವಾಗಿತ್ತು? ಬೆಜವಾಡ ವಿಲ್ಸನ್ ರೆಮೊನ್ ಮ್ಯಾಗ್ಸೆಸೆ ಪ್ರಶಸ್ತಿಗೆ ಪಾತ್ರರಾದಾಗ ಅವರಿಗೆ ಅಭಿನಂದನೆ ಹೇಳದಂತೆ ಮೋದಿಯನ್ನು ಯಾರು ತಡೆದರು? ಬೆಜವಾಡ ಅವರನ್ನು ಗೌರವಿಸುವುದು ನಮಗೆ ಮ್ಯಾಗ್ಸೆಸೆಗಿಂತಲೂ ಪ್ರಮುಖ. ಸರಕಾರ ಅವರ ಶ್ರಮವನ್ನು ಗುರುತಿಸಿದ್ದರೆ, ಇದು ಅವರಿಗೆ ದೊಡ್ಡ ಗೌರವವಾಗುತ್ತಿತ್ತು ಹಾಗೂ ಸ್ವಚ್ಛಭಾರತ ಅಭಿಯಾನಕ್ಕೆ ದೊಡ್ಡ ಬಲ ಬರುತ್ತಿತ್ತು. ಆದರೆ ಸರಕಾರ ಸಫಾಯಿ ಪ್ರಚಾರವನ್ನು ಟಿವಿ ಸ್ಟುಡಿಯೊಗಳ ಒಳಗೆ ಮಾಡುತ್ತಿದೆ. ಇದಕ್ಕಾಗಿ ದೊಡ್ಡ ಮೊತ್ತದ ಜಾಹೀರಾತು ಹಣ ಖರ್ಚು ಮಾಡುತ್ತಿದೆ. ಶತಮಾನಗಳಿಂದ ಈ ಹೊಲಸು ಹಾಗೂ ತಾರತಮ್ಯವನ್ನು ಎದುರಿಸುತ್ತಲೇ ಭಾರತದ ಸ್ವಚ್ಛತೆಯನ್ನು ಕಾಪಾಡಿಕೊಂಡು ಬಂದ ಈ ವರ್ಗದ ಉನ್ನತಿಗೆ ಹಣ ಬಳಸುವ ಬದಲು, ಟಿವಿ ಜಾಹೀರಾತುಗಳಿಗೆ ಸುರಿಯುವುದು ನಮ್ಮ ಸರಕಾರಕ್ಕೆ ಪ್ರಮುಖವಾಗುತ್ತದೆ. ನಮಗೆ ಸ್ವಚ್ಛ ಸ್ಥಳವನ್ನು ಕಲ್ಪಿಸಿಕೊಟ್ಟ ಯಾವುದಾದರೂ ಸಮುದಾಯಕ್ಕೆ ಛೀಮಾರಿ ಹಾಕಿದ ಇನ್ನೊಂದು ಪರ್ಯಾಯ ನಿದರ್ಶನ ನಮಗೆ ಸಿಗುತ್ತದೆಯೇ?

ಅಸ್ಪಶ್ಯತೆ ಹಾಗೂ ಜಾತಿ ತಾರತಮ್ಯದ ಸಂಪರ್ಕ ಇಲ್ಲದೇ, ಭಾರತವನ್ನು ಸ್ವಚ್ಛಗೊಳಿಸುತ್ತೇವೆ ಎಂಬ ಯಾವುದೇ ಪ್ರಯತ್ನಗಳು ಕೂಡಾ ದೇಶದ ಕೊಳಕು ವಾಸ್ತವ ಮುಚ್ಚಿಡುವ ಯೋಜನೆಗಳಾಗುತ್ತವೆ. ಬಹುಶಃ ಯಾವ ದಿನ ಇಂಥ ನೈರ್ಮಲ್ಯ ಕೆಲಸವನ್ನು ಒಂದು ಸಮುದಾಯಕ್ಕೆ ಮೀಸಲಿಡುವುದನ್ನು ನಿಲ್ಲಿಸುವ ಮೂಲಕ ಮತ್ತು ಜಾತಿ ತಾರತಮ್ಯ- ಅಸ್ಪಶ್ಯತೆಯನ್ನು ನಿಲ್ಲಿಸಿದ ದಿನ ನಿಜವಾಗಿಯೂ ಭಾರತ ಸ್ವಚ್ಛವಾಗುತ್ತದೆ. ಜಾಡಮಾಲಿಗಳ ಗೌರವಾರ್ಹ ಪುನರ್ವಸತಿ ಯೋಜನೆ ಕೈಗೊಳ್ಳದೆ ಸ್ವಚ್ಛಭಾರತ ಸಾಧ್ಯವೇ ಇಲ್ಲ. ಜಾತಿ ತಾರತಮ್ಯ ಹಾಗೂ ಅಸ್ಪಶ್ಯತೆಯನ್ನು ಸಂಪೂರ್ಣ ತೊಡೆದುಹಾಕುವವರೆಗೂ ಇದು ಬೂಟಾಟಿಕೆ ಎನಿಸಿಕೊಳ್ಳುತ್ತದೆ.
 

Writer - ವಿದ್ಯಾಭೂಷಣ್ ರಾವತ್

contributor

Editor - ವಿದ್ಯಾಭೂಷಣ್ ರಾವತ್

contributor

Similar News