ಕನ್ನಡತಿ ನ್ಯಾ. ಮಂಜುಳಾ ಚೆಲ್ಲೂರು ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಾಧೀಶೆ
ಮುಂಬೈ, ಆ.12: ಕೊಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಾಧೀಶೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಕನ್ನಡತಿ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು ಅವರನ್ನು ಮುಂಬೈ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶೆಯಾಗಿ ನೇಮಕ ಮಾಡಲಾಗಿದೆ. ಅವರು ಆಗಸ್ಟ್ 24ರಂದು ಅಧಿಕಾರ ಸ್ವೀಕರಿಸುವರು.
ಇದುವರೆಗೆ ಮುಂಬೈ ಹೈಕೋರ್ಟ್ ಸಿಜೆ ಆಗಿದ್ದ ಹಿರಾಲಾಲ್ ವಘೇಲಾ ಅವರು ಆ.10ರಂದು ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಚೆಲ್ಲೂರು ಅವರನ್ನು ಈ ಹುದ್ದೆಗೆ ನೇಮಕ ಮಾಡಲಾಗಿದೆ. ಒಡಿಶಾ ಹೈಕೋರ್ಟ್‌ನಿಂದ ವಘೇಲಾ ಅವರನ್ನು ಮುಂಬೈ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಫೆಬ್ರವರಿ 15ರಂದು ವರ್ಗಾಯಿಸಲಾಗಿತ್ತು. ಮುಂಬೈ ಹೈಕೋರ್ಟ್ ಇತಿಹಾಸದಲ್ಲೇ ಎರಡನೇ ಮಹಿಳಾ ಮುಖ್ಯ ನ್ಯಾಯಮೂರ್ತಿ ಎಂಬ ಕೀರ್ತಿಗೆ ಮಂಜುಳಾ ಪಾತ್ರರಾಗಲಿದ್ದಾರೆ.
ಬಳ್ಳಾರಿಯಲ್ಲಿ 1955ರಲ್ಲಿ ಜನಿಸಿದ ಚೆಲ್ಲೂರು, 1977ರಲ್ಲಿ ಕಾನೂನು ಪದವಿ ಪಡೆದು ಹತ್ತು ವರ್ಷಗಳ ಕಾಲ ವಕೀಲರಾಗಿ ಸೇವೆ ಸಲ್ಲಿಸಿ, 1988ರಲ್ಲಿ ಕರ್ನಾಟಕ ನ್ಯಾಯಾಂಗ ಸೇವೆಗೆ ಸೇರ್ಪಡೆಯಾಗಿದ್ದರು. 2000ನೆ ಇಸವಿಯಲ್ಲಿ ಇವರು ಕರ್ನಾಟಕ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶೆಯಾಗಿ ನೇಮಕಗೊಂಡರು. ಮತ್ತೆ 10 ವರ್ಷಗಳಲ್ಲಿ ಅವರು ಕೇರಳ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಾಧೀಶೆಯಾಗಿ ನೇಮಕಗೊಂಡರು. 2012ರ ಸೆಪ್ಟೆಂಬರ್‌ನಲ್ಲಿ ಮುಖ್ಯ ನ್ಯಾಯಾಧೀಶೆಯಾದರು.
2014ರ ಆಗಸ್ಟ್‌ನಲ್ಲಿ ಕೊಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಾಧೀಶೆಯಾಗಿ ವರ್ಗಾವಣೆಯಾದ ಅವರು, 2017ರಲ್ಲಿ ಸೇವೆಯಿಂದ ನಿವೃತ್ತರಾಗುವರು. ಬಳ್ಳಾರಿಯಲ್ಲಿ ವಕೀಲಿ ವೃತ್ತಿ ಆರಂಭಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ನ್ಯಾ. ಮಂಜುಳಾರದ್ದು. 1997ರಲ್ಲಿ ಜೆಂಡರ್ ಅಂಡ್ ಲಾ ಫೆಲೋಶಿಪ್ ಅನ್ವಯ ವಾರ್ವಿಕ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ನಡೆಸಿದ್ದರು.