ಮೋದಿಯವರ ಸ್ವಾತಂತ್ರ್ಯೋತ್ಸವ ಮಾತು ಮತ್ತು ಕೃತಿ

Update: 2016-08-17 17:40 GMT

ಮೊನ್ನೆ 15ರಂದು ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಕೆಂಪುಕೋಟೆಯಿಂದ ಈ ದೇಶದ ಪ್ರಧಾನಿ ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತ್ಯಂತ ದೀರ್ಘವೆನ್ನಬಹುದಾದ ಭಾಷಣವನ್ನು ಮಾಡಿ (ಅವರೇ ಮಾಡಿದ) ದಾಖಲೆಯನ್ನು ಮುರಿದರು. ಮಾಧ್ಯಮಗಳು ಈ ಭಾಷಣದ ಕುರಿತು ಮಾಮೂಲು ಉತ್ಸಾಹವನ್ನು ತೋರಿದಂತಿಲ್ಲ. ಅವುಗಳಿಗೆ ಇದೂ ಒಂದು ನ್ಯೂಸ್ ಆಯಿತೇ ವಿನಾ ಮೈನವಿರೇಳಿಸುವ ರೋಚಕತೆಯ ಬ್ರೇಕಿಂಗ್ ನ್ಯೂಸ್ ನ್ನು ಸೃಷ್ಟಿಸಿದಂತಿಲ್ಲ. ಮುಖಪುಸ್ತಕ (ಫೇಸ್‌ಬುಕ್) ದ ಒಂದು ಅಭಿವ್ಯಕ್ತಿ ಹೀಗಿತ್ತು: ‘ಎಂತಹ ಅದ್ಭುತ ಭಾಷಣ ಮೋದೀಜೀ

ಚೀನ ಬೆವರಿದೆ ಪಾಕಿಸ್ತಾನ ನಡುಗಿದೆ ಕಾಂಗ್ರೆಸ್‌ನ ಪರಿಸ್ಥಿತಿ ಏನಾಗಿದೆಯೋ॥

(ಭಿತ್ತಿಪತ್ರಗಳಂತಿರುವ ಇಂತಹ ಅನೇಕಾನೇಕ ಪ್ರಕಟನೆಗಳಿವೆ; ಸ್ಯಾಂಪಲ್ಲಿಗೆಂದು ಒಂದನ್ನು ಮಾತ್ರ ಆಯ್ದುಕೊಂಡಿದ್ದೇನೆ!)

ಸ್ವಾತಂತ್ರ್ಯೋತ್ಸವ ಮುಗಿಯಿತು. ರಾತ್ರಿಯಾಯಿತು; ಯಥಾಪ್ರಕಾರ ಜನರು ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಮಂಜೇಶ್ವರ ಗೋವಿಂದ ಪೈಗಳ ಗೊಲ್ಗೊಥಾ ಖಂಡಕಾವ್ಯದಲ್ಲಿ ಬರೆದಂತೆ ‘ಕತ್ತಲೆಯ ದಂಡೆಯಿಂ ಹಿಂಡೆದ್ದ ಕೊಕ್ಕರೆಗಳಂತೆ (ಗೊಲ್ಗೊಥದಿಂದ) ಮನೆಗೆ ತೆರಳಿದರಲ್ಲಿ ಸದ್ದಿಲ್ಲ, ಸುಳಿವಿಲ್ಲ.’ ಮರುದಿನ ಬೆಳಗೂ ಆಯಿತು. ಏನೂ ಬದಲಾದಂತಿಲ್ಲ. ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯದಲ್ಲಿ ಬರುವ ‘‘ಕಳೆಯಿತಾ ಓ ಲಕ್ಷ್ಮಣಾ ರಾತ್ರಿ, ಕಳೆಯಿತಾ ಓ ಲಕ್ಷ್ಮಣಾ ಸ್ಮತಿಯ ಪಂಚವಟಿ ಧಾತ್ರಿಯಂ’’ ನೆನಪಾಗಬೇಕು. ಇನ್ನೊಮ್ಮೆ ಈ ಆವೇಶ, ಉತ್ಸಾಹ ಬರಬೇಕಾದರೆ ಮುಂದಿನ ಅಗಸ್ಟ್ 15 ಬರಬೇಕು.

ರಾಜಕಾರಣಿಗಳ ಸ್ವಾತಂತ್ರ್ಯೋತ್ಸವ ಭಾಷಣ ಈಗ ಒಂದು ಕಾಟಾಚಾರ ವಲ್ಲದಿದ್ದರೂ ಯಾಂತ್ರಿಕ ಸಂಪ್ರದಾಯವಾಗುತ್ತಿದೆ. ಇದಕ್ಕೆ ಕಾರಣ ಈ ಉತ್ಸಾಹ, ಘೋಷಣೆ, ಭರವಸೆಗಳ ಹಿಂದೆ ನೈಜ ಕರ್ತೃತ್ವ ಕಾಣಿಸುವುದಿಲ್ಲ. ದೇಶದ ಆಂತರಿಕ-ಬಾಹ್ಯ ಸಮಸ್ಯೆಗಳೆಲ್ಲವನ್ನೂ ರಾಜಕೀಯವಾಗಿ ನೋಡಲಾಗುತ್ತಿದೆಯೇ ಹೊರತು ವಸ್ತುನಿಷ್ಠವಾಗಿಯಾಗಲೀ ಪರಿಹರಿಸುವ ಪ್ರಯತ್ನದಿಂದಾಗಲೀ ನೋಡುವುದಿಲ್ಲ. ಎಲ್ಲವೂ ತಮ್ಮ ಬೆನ್ನನ್ನು ತಾವು ತಟ್ಟಿಕೊಳ್ಳುವ ಇಲ್ಲವೇ ಕಣ್ಣೊರೆಸುವ ತಂತ್ರವಾಗಿ ಕಾಣುತ್ತಿದೆ. ಪ್ರಜಾಪ್ರಭುತ್ವವೆಂದರೆ ಮಾತೇ ಆಗಿಬಿಟ್ಟಿದೆ. ಮಾತಿನ ಮೂಲಕ ಯಾರು ಮರುಳು ಮಾಡಬಲ್ಲರೊ ಅವರೇ ನಾಯಕರಾಗುತ್ತಾರೆ. ಕಾರ್ಯತತ್ಪರತೆಯನ್ನು ಗಮನಿಸಿ ನಾಯಕರಾಗಿಸುವ ಕಾಲ ಕಳೆದು ಹೋಗಿದೆ. ಇದರಿಂದಾಗಿ ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಈ ಮಾತುಗಾರರು ನಾಯಕರಾಗುತ್ತಾರೆ. ಇವರನ್ನು ಅವಲಂಬಿಸಿಕೊಳ್ಳುವ ಮಂದಿ ಧೂರ್ತರಾಗಿ ನಾಯಕತ್ವವಿಲ್ಲದೆಯೇ ತಮ್ಮ ಕಾರ್ಯಸಾಧಿಸಿ ಕೊಳ್ಳುತ್ತಾರೆ. ಆದ್ದರಿಂದ ‘ಮಾತು ಮಾತು ಮಾತು ಏನು, ಮಾತು ಬರಿಯ ಬಾಯ ಡೊಂಬ’ ಎಂಬ ಪದ್ಯದ ಸಾಲುಗಳಿಗೆ ಋಜುತ್ವ ಬಂದಿದೆ. ‘ಮಾತೇ ಜ್ಯೋತಿರ್ಲಿಂಗ ಬೃಹನ್ನಳೆಗೆ’ ಎಂಬ ಎ.ಕೆ.ರಾಮಾನುಜನ್ ಪದ್ಯದ ಸಾಲೂ ನೆನಪಾದರೆ ಅಚ್ಚರಿಯಿಲ್ಲ.

ಪ್ರಧಾನಿ ಮೋದಿ ಅಬ್ಬರದ ಮಾತಿನ ತಂತ್ರಕ್ಕೆ ಹೆಸರಾದವರು. ಅವರ ಭಾಷಣ- ಚುನಾವಣೆಯಲ್ಲಿರಲಿ, ಸಂಸತ್ತಿನಲ್ಲಿರಲಿ, ವೈಜ್ಞಾನಿಕ ಸಮ್ಮೇಳನಗಳ ಲ್ಲಾಗಲೀ, ವಿದೇಶದ ಅಥವಾ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಾಗಲೀ ಸಾಮಾನ್ಯವಾಗಿ ಒಂದೇ ರಾಗ, ತಾಳ, ಲಯವನ್ನು ಹೊಂದಿರುತ್ತದೆ. ಅವರ ಈ ಕೈಚಳಕವನ್ನು ಆಧರಿಸಿಯೇ ಅವರನ್ನು 2014ರಲ್ಲಿ ಭಾಜಪ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರನ್ನಾಗಿ ಆರಿಸಿತು. ಇದು ಪ್ರಧಾನಿ ಹುದ್ದೆಗೆ ಅನಧಿಕೃತ ಆಯ್ಕೆಯಾಗಿ ಪರಿಣಮಿಸಿತು. ಅನಂತರದ್ದು ಇತಿಹಾಸ. ಮೋದಿಯವರ ಈ ತಾಕತ್ತಿಗೆ ಸಮದಂಡಿಯಾಗಬಲ್ಲ ಯಾವ ನಾಯಕರೂ ಕಾಂಗ್ರೆಸ್ ಪಕ್ಷದಲ್ಲಿರಲಿಲ್ಲ. ಸಚಿನ್ ಪೈಲಟ್, ಜ್ಯೋತಿರಾದಿತ್ಯ ಸಿಂಧ್ಯರಂತಹ ದಕ್ಷ ಯುವ ನೇತಾರರಿದ್ದರೂ ವಂಶಪಾರಂಪರ್ಯ ಏಕಾಧಿಪತ್ಯಕ್ಕೆ ಹೆಸರಾದ ಕಾಂಗ್ರೆಸ್‌ನಲ್ಲಿ ರಾಹುಲ್ ಗಾಂಧಿಯ ವರ್ಚಸ್ಸಿಗೆ ಎಲ್ಲಿ ಈ ಮಂದಿಯಿಂದ ಕುಂದು ಬರುತ್ತದೋ ಎಂಬ ಭಯದಿಂದ ಅವರನ್ನು ಪಕ್ಷದ ಹೈಕಮಾಂಡ್ ಗುರುತಿಸುವುದಿಲ್ಲ; ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಅಡ್ಡಿಯಾಗುತ್ತಾರೆಂಬ ಸಂಶಯದಿಂದ ಉಳಿದ ಹಿರಿ-ಕಿರಿ ಕಾಂಗ್ರೆಸಿಗರು ಕಾಂಗ್ರೆಸ್ ಸಂಸ್ಕೃತಿಯಿಂದ ವಿಚಲಿತರಾಗುವುದಿಲ್ಲ.

ದೇಶದ ಏಳು ದಶಕಗಳ ಪ್ರಗತಿಯ ಬಗ್ಗೆ ಮಾತನಾಡುವಾಗ ಪೂರ್ವಸೂರಿಗಳ ಕೊಡುಗೆಯನ್ನು ಸ್ಮರಿಸದೆ ಎಲ್ಲವನ್ನೂ ಈಗ- ರಾತ್ರಿ ಬೆಳಗಾಗುವುದರೊಳಗೆ ಮಾಡಿದಂತೆ ವಿವರಿಸಲಾಗುತ್ತಿದೆ. ಇದನ್ನು ಪ್ರಾಜ್ಞರ ಪೈಕಿ ಎಷ್ಟು ಜನರು ಗಂಭೀರವಾಗಿ ಪರಿಗಣಿಸಿದ್ದಾರೋ ಗೊತ್ತಿಲ್ಲ. ಆದರೆ ಮೋದಿ ಭಕ್ತರು ಸಹಜವಾಗಿಯೇ ಪುಳಕಿತರಾಗಿದ್ದಾರೆ. ಉಚಿತವಾಗಿ ಹರಿಯಬಿಡಬಲ್ಲ ಎಲ್ಲ ಮಾಧ್ಯಮಗಳಲ್ಲೂ ಅತಿರಂಜಿತ ಅಭಿಪ್ರಾಯಗಳು ಬಂದಿವೆ; ಬರುತ್ತಿವೆ.

 ಉತ್ಸಾಹಿತ ಭಕ್ತರ ಅಭಿಪ್ರಾಯಗಳನ್ನು ಗಮನಿಸಿ ಮುಖ್ಯಾಂಶಗಳನ್ನು ಗಮನಿಸಬಹುದು: ಭಾರತಕ್ಕೆ ಈಗ ನಿಜಕ್ಕೂ ತಲೆನೋವಾಗಿರುವುದು ದೇಶದ ಶಿರೋಪ್ರಾಯವಾಗಿರುವ ಕಾಶ್ಮೀರ. ಮುತ್ಸದ್ದಿತನದಿಂದ ಮಾತ್ರ ಈ ತಲೆನೋವು ಶಮನವಾಗಬಹುದು ಎಂದು ನೆಹರೂರವರಿಂದ ವಾಜಪೇಯಿಯವರೆಗೆ ರಾಜಕಾರಣಿಗಳು ಅರ್ಥಮಾಡಿಕೊಂಡಿದ್ದರು. ಆದ್ದರಿಂದಲೇ ಎಲ್ಲರೂ ಪರಿಸ್ಥಿತಿ ಬಿಗಡಾಯಿಸದಂತೆ ಹಾಗೂ ಹೀಗೂ ನಡೆದುಕೊಂಡಿದ್ದರು. ಈಗ ಹಾಗಲ್ಲ: ಎರಡು ದೇಶಗಳಲ್ಲೂ ಹಿಂಸಾತ್ಮಕ ಪ್ರವೃತ್ತಿ ತಲೆದೊರಿದೆ. ಉಳಿದ ರಾಜಕಾರಣಿಗಳು, ಪ್ರಜೆಗಳ ಮಾತು ಬಿಡಿ, ಭುಟ್ಟೋ, ಜಿಯಾ, ಇಂದಿರಾ, ರಾಜೀವ್ ಹೀಗೆ ಈ ಎರಡೂ ದೇಶಗಳ ಅತ್ಯುಚ್ಚ ಸ್ಥಾನದ ವ್ಯಕ್ತಿಗಳು ದುರಂತ ಅಂತ್ಯ ಕಂಡಿದ್ದಾರೆ. ಪಾಕಿಸ್ತಾನದಲ್ಲಿ ರಾಜಕೀಯ ಮತ್ತು ಸೇನೆ ಇವೆರಡರ ನಡುವೆ ಸದಾ ಬಿಕ್ಕಟ್ಟಿದೆ; ಅಷ್ಟೇ ಅಲ್ಲ, ಕಾಶ್ಮೀರವನ್ನು ಕಬಳಿಸಲು ಯೋಜಿಸುವ, ಭಾರತ ವಿರೋಧಿ ಚಟುವಟಿಕೆಯನ್ನು ಬೆಂಬಲಿಸುವ, ಉಗ್ರಗಾಮಿಗಳ ಚಟುವಟಿಕೆಯೂ ಸಾಕಷ್ಟಿದೆ. ಕಾಶ್ಮೀರದ ಕುರಿತು ಭಾರತದ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವುದಿರಲಿ, ಭಾರತದ ಕುರಿತು ತುಸು ಮೃದು ಧೋರಣೆ ತಾಳಿದರೆ ಸಾಕು ಎಲ್ಲಿ ಅಧಿಕಾರ ಮಾತ್ರವಲ್ಲ ಜೀವವನ್ನೇ ಕಳೆದುಕೊಳ್ಳಬೇಕಾಗುತ್ತದೊ ಎಂದು ಅಲ್ಲಿನ ರಾಜಕಾರಣಿಗಳು ಚಿಂತಿತರಾಗಿದ್ದಾರೆ. ಆಡಳಿತದಲ್ಲಿ ಸೇನೆ ತಲೆಹಾಕಿದರೆ ಏನಾಗಬಹುದೆಂಬುದಕ್ಕೆ ಪಾಕಿಸ್ತಾನ (ಮತ್ತು ಕೆಲವು ಆಫ್ರಿಕಾ ದೇಶಗಳು) ಸಾಕ್ಷಿ. ಪಾಕಿಸ್ತಾನವಂತೂ ಸೇನೆಯ ಮತ್ತು ತನ್ನ ಒಟ್ಟಾರೆ ಮಿಲಿಟರಿ ಶಕ್ತಿಯನ್ನು ಹೆಚ್ಚು ಅವಲಂಬಿಸಿಕೊಂಡಿರುವುದರಿಂದ ಅದಕ್ಕೆ ಅಮೆರಿಕ, ಚೀನಾ ಮುಂತಾದ ವಿಶ್ವದ ಸೂಪರ್ ಪವರ್‌ಗಳ ಸಖ್ಯ ಅನಿವಾರ್ಯ. ಅಮೆರಿಕದಂತಹ ಶಕ್ತಿಗಳು ಇದೇ ಕಾರಣಕ್ಕೆ ಪಾಕಿಸ್ತಾನದ ನೆಲವನ್ನು ತಮ್ಮ ಶಕ್ತಿನೆಲೆಗಳಾಗಿ ಮಾಡಿಕೊಂಡಿರುವುದು ಭಾರತಕ್ಕೆ ಗೊತ್ತಿಲ್ಲದಿಲ್ಲ. ಭಾರತದಲ್ಲಿ ಸೇನೆ ಇನ್ನೂ ತನ್ನ ಪಾಡಿಗೆ ತಾನು ಶಿಸ್ತಿನ ಭಟರಂತೆ ವರ್ತಿಸಿದೆ. ಬಾಹ್ಯ ಮಾತ್ರವಲ್ಲ ಆಂತರಿಕ ಸಂದರ್ಭದಲ್ಲೂ ಸೇನೆಯೇ ಆಪದ್ಭಾಂಧವ. ಭಾರತೀಯ ಸೇನೆಗೆ ಇದೊಂದು ಅನನ್ಯ ಹಿರಿಮೆ. ಪರಿಸ್ಥಿತಿ ಹೀಗಿರುವಾಗ ಪಾಕಿಸ್ತಾನದೊಂದಿಗೆ ಮಾತುಕತೆಯನ್ನು ಮುಂದುವರಿಸುವುದು ಭಾರತಕ್ಕೆ ಹೆಚ್ಚು ಒಪ್ಪುವ ಹಾದಿ. ಇನ್ನೂ ಮುಖ್ಯವಾಗಿ ಬಹುಜನ ಭಾರತೀಯರಿಗೆ ಗೊತ್ತಿಲ್ಲದಿರುವ ಅಂಶವೆಂದರೆ ನಾವು ಜಮ್ಮು ಮತ್ತು ಕಾಶ್ಮೀರ ಎಂದು ಹೇಳುವ ರಾಜ್ಯದ ಸರಿ ಸುಮಾರು ಅರ್ಧ ಭಾಗವು ಪಾಕಿಸ್ತಾನ ಮತ್ತು ಚೀನಾದ ನಿಯಂತ್ರಣದಲ್ಲಿದೆ. (ನಮ್ಮ ಪ್ರಧಾನಿಯ ಭಾಷಣದಲ್ಲಿ ಚೀನಾದ ಪ್ರಸ್ತಾಪವೇ ಇಲ್ಲ. ಇದೊಂದು ಥರದ ಇಬ್ಬಂದಿತನ.) ಪ್ರಧಾನಿ ತಮ್ಮ ಭಾಷಣದಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನರೂ ಸ್ವಾಯತ್ತೆಯ ಬೇಡಿಕೆಯನ್ನಿಟ್ಟಿದ್ದಾರೆಂದೂ ಮತ್ತು ಪಾಕಿಸ್ತಾನದ ದಬ್ಬಾಳಿಕೆಯನ್ನು ಅವರು ಪ್ರತಿಭಟಿಸುತ್ತಿದ್ದಾರೆಂದೂ ಅವರನ್ನು ತಾನು ಬೆಂಬಲಿಸುತ್ತಿರುವುದಾಗಿಯೂ ಮತ್ತು ಇದಕ್ಕಾಗಿ ಅವರು ತನ್ನನ್ನು ಹೊಗಳಿದ್ದಾರೆಂದೂ ಅರ್ಥ ಬರುವಂತೆ ಮಾತನಾಡಿದ್ದಾರೆ. ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರು ಈ ರೀತಿ ಆಕ್ರಮಣಶೀಲ ಮಾತನಾಡಿದ್ದಾರೆ. ಇದನ್ನು ಸೇನಾ ಮುಖ್ಯಸ್ಥರು ಸ್ವಾಗತಿಸಿದ್ದಾರೆಂದೂ ಕಾಂಗ್ರೆಸ್ ಮಾತ್ರ ಆಕ್ಷೇಪಿಸಿದೆಯೆಂದೂ ಮಾಧ್ಯಮಗಳಲ್ಲಿ ವರದಿಯಾಗಿದೆ. ಸೇನೆ ತನ್ನದೇ ಆದ ಅರಾಜಕೀಯ ಕಾರಣಕ್ಕಾಗಿ ಬೆಂಬಲಿಸಿರಬಹುದು. ಕಾಂಗ್ರೆಸ್ ಒಂದು ವಿರೋಧ ಪಕ್ಷವಾಗಿ ಆಕ್ಷೇಪಿಸಿದ್ದಾದರೆ ಅದರಲ್ಲಿ ತಪ್ಪಿಲ್ಲ. ಆದರೆ ಪ್ರಜೆಗಳಾಗಿ, ಪ್ರಜಾಪ್ರಭುತ್ವದ ನೀತಿಯ ನೆಲೆಗಟ್ಟಿನಲ್ಲಿ ಪ್ರಧಾನಿ ಮಾಡಿದ್ದು ಸರಿಯೇ ಎಂಬುದು ಪ್ರಶ್ನೆ. ಪಾಕಿಸ್ತಾನದ ನಿಯಂತ್ರಣದಲ್ಲಿರುವ ಭೂಭಾಗದ ಪ್ರತಿಭಟನೆಯನ್ನು ನಾವು ಬೆಂಬಲಿಸಿದರೆ ಪರೋಕ್ಷವಾಗಿ ನಾವು ಪಾಕಿಸ್ತಾನವು ಕಾಶ್ಮೀರದಲ್ಲಿನ ಭಾರತ ವಿರೋಧಿ ಚಟುವಟಿಕೆಯನ್ನು ಬೆಂಬಲಿಸುವ ಪಾಕಿಸ್ತಾನದ ಹಕ್ಕನ್ನು ಮನ್ನಿಸಿದಂತಾಗುವುದಿಲ್ಲವೇ?

ಪಾಕಿಸ್ತಾನದ ಆಡಳಿತಕ್ಕೆ ಸೇನೆ ಮತ್ತು ಉಗ್ರಗಾಮಿಗಳು ಸದಾ (ಸಿಂದಬಾದನ) ಹೆಗಲೇರಿದ ಮುದುಕ(ರು). ಭಾರತಕ್ಕೆ ಈ/ಇಂತಹ ಹೊರೆಯಿರಲಿಲ್ಲ. ಆದರೆ ಇತ್ತೀಚೆಗೆ ಹಿಂಸಾತ್ಮಕ ಚಟುವಟಿಕೆಗಳು ಹೆಚ್ಚುತ್ತಿವೆ. ಮಹಿಳೆಯರನ್ನು ಗೌರವಿಸುವ ಸಂಸ್ಕೃತಿಯ ಹೆಮ್ಮೆಯ ನಾಡಿನಲ್ಲಿ ನೂರಾರು ‘ನಿರ್ಭಯ’ ಪ್ರಕರಣಗಳು ದಾಖಲಾಗುತ್ತಿವೆ. ಸ್ವಾಮಿ ವಿವೇಕಾನಂದರ ಕುರಿತ ಒಂದು ಐತಿಹ್ಯವಿದೆ: ವಿದೇಶಗಳಿಗೂ ಭಾರತಕ್ಕೂ ಏನು ವ್ಯತ್ಯಾಸವೆಂದರೆ- ವಿದೇಶಗಳಲ್ಲಿ ತಾಯಿಯನ್ನು ಹೊರತುಪಡಿಸಿ ಇತರ ಮಹಿಳೆಯರನ್ನು ಪತ್ನಿಯಂತೆ ಕಾಣುತ್ತಾರಾದರೆ, ಭಾರತದಲ್ಲಿ ಪತ್ನಿಯನ್ನು ಹೊರತುಪಡಿಸಿ ಇತರ ಎಲ್ಲ ಮಹಿಳೆಯರನ್ನು ತಾಯಿಯಂತೆ ಕಾಣುತ್ತಾರೆಂದು. ಅವರು ವಿದೇಶಿಯನೊಬ್ಬನ ಪ್ರಶ್ನೆಗೆ ಉತ್ತರಿಸಿದರಂತೆ. ಈಗ ವಿವೇಕಾನಂದರು ಬಂದರೆ ತನ್ನ ಭಾರತದ ನೈತಿಕ ವಿಕೃತಿ ನೋಡಿ ನಾಚಿ ತಲೆತಗ್ಗಿಸಬಹುದು, ಹಾಗಿದೆ ಭಾರತ.

ಇಷ್ಟೇ ಅಲ್ಲ, ಗೋರಕ್ಷಣೆಯ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ, ಜಾತಿ-ಮತದ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುತ್ತಿರುವ ಚಟುವಟಿಕೆಗಳು ರಾಷ್ಟ್ರಪತಿಯವರಿಗೂ ಇರಿಸುಮುರುಸು ತಂದಿವೆಯೆಂಬುದು ಅವರ ನುಡಿಗಳಲ್ಲಿ ಸ್ಪಷ್ಟವಾಗಿದೆ. ಇದನ್ನು (ಕನಿಷ್ಠ ಸಾರ್ವಜನಿಕವಾಗಿಯಾದರೂ) ಹೊರಲಾರದೆ ಪ್ರಧಾನಿ ಹೆಣಗಾಡುತ್ತಿದ್ದಾರೆ. ದೇಶದೊಳಗನ ಜನಪ್ರಿಯತೆಗಾಗಿ ಈ ಅಕ್ರಮಗಳನ್ನು ತಾಳಿಕೊಂಡರೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತದ ಗೌರವವು ಕಡಿಮೆಯಾಗುತ್ತದೆ. ಮಾತ್ರವಲ್ಲ ನಮಗೂ ಪಾಕಿಸ್ತಾನಕ್ಕೂ ವ್ಯತ್ಯಾಸವೇ ಇಲ್ಲದಂತಾಗಬಹುದು. ಈ ವಿರೋಧಾಭಾಸಗಳ ನಡುವೆ ಪ್ರಧಾನಿ ತೂಗುಯ್ಯಾಲೆ ನಡೆಸುತ್ತಿದ್ದಾರೆ. ಆದ್ದರಿಂದ ಪ್ರಧಾನಿ ಈ ದೇಶದ ಜನರಿಗೆ ನ್ಯಾಯ ದೊರಕಿಸಿಕೊಟ್ಟು ಆನಂತರ ವಿಶ್ವಮಾನ್ಯತೆಗೆ ಸ್ಪರ್ಧಿಸುವುದು ಸೂಕ್ತ. ಸರ್ವೋಚ್ಚ ಮತ್ತು ಉಚ್ಚ ನ್ಯಾಯಾಲಗಳ ನ್ಯಾಯಮೂರ್ತಿಗಳ ನೇಮಕಾತಿಗೆ ಪ್ರಧಾನಿ ಆಸಕ್ತಿ ತೋರಿದಂತಿಲ್ಲ. ಈ ಸಂಸ್ಕೃತಿಯಲ್ಲಿ ಅವರು ಇಂದಿರಾ ಗಾಂಧಿಯ ನಿಕಟವರ್ತಿಯಂತೆ ಕಾಣುತ್ತಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿಗಳೇ ಈ ವಿಚಾರವನ್ನು ಅನೇಕ ಬಾರಿ ಪ್ರಸ್ತಾಪಿಸಿದರೂ ಪ್ರಧಾನಿ ತನ್ನ ಘನತೆಯನ್ನು, ತನ್ನ ದೇಶದ, ದೇಶವಾಸಿಗಳ, ಘನತೆಯನ್ನು ಮರೆತು ಜಾಣ ಕಿವುಡು, ಕುರುಡನ್ನು ಪ್ರದರ್ಶಿಸುತ್ತಿದ್ದಾರೆ.

ಇಂತಹ ಹತ್ತಾರು ಪ್ರಮುಖ ವಿಚಾರಗಳಲ್ಲಿ ಪ್ರಧಾನಿ ಎಡವುತ್ತಿದ್ದಾರೆ. ಇದು ಅಧಿಕಾರದಲ್ಲಿ ಕುಳಿತವರೆಡಹುವ ನಿದರ್ಶನ. ಹೊಣೆಯರಿತು ಮುಂದುವರಿಯುತ್ತಾರೆಂದು ಆಶಿಸೋಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News