ನೆರವಿನ ನಿರೀಕ್ಷೆಯಲ್ಲಿ ‘ಕರ್ನಾಟಕದ ಸುಲ್ತಾನ್’
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್‌ಖಾನ್ ಅಭಿನಯದ ‘ಸುಲ್ತಾನ್’ ಚಿತ್ರದಲ್ಲಿ ಪ್ರದರ್ಶಿಸಲಾಗಿರುವ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಕ್ರೀಡೆಯು ಭಾರತದಲ್ಲಿಯೂ ತನ್ನ ಜನಪ್ರಿಯತೆಯನ್ನು ವಿಸ್ತರಿಸಿಕೊಳ್ಳಲು ಹವಣಿಸುತ್ತಿರುವ ಸಂದರ್ಭದಲ್ಲಿ, ತಫೀಝ್ ಅಹ್ಮದ್ ಈ ಕ್ರೀಡೆಯ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಆ.29ರಂದು ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸಲಿದ್ದಾರೆ.
ವಿದೇಶಗಳಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿರುವ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್(ಎಂಎಂಎ) ಕ್ರೀಡೆಯಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಹೊರಟಿರುವ ಬೆಂಗಳೂರಿನ ಥಣಿಸಂದ್ರದ ಅತ್ಯಂತ ಬಡಕುಟುಂಬದ ಯುವಕ ಮುಹಮ್ಮದ್ ತಫೀಝ್ ಅಹ್ಮದ್(22) ನೆರವಿನ ನಿರೀಕ್ಷೆಯಲ್ಲಿದ್ದಾರೆ.
ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್‌ಖಾನ್ ಅಭಿನಯದ ‘ಸುಲ್ತಾನ್’ ಚಿತ್ರದಲ್ಲಿ ಪ್ರದರ್ಶಿಸಲಾಗಿರುವ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಕ್ರೀಡೆಯು ಭಾರತದಲ್ಲಿಯೂ ತನ್ನ ಜನಪ್ರಿಯತೆಯನ್ನು ವಿಸ್ತರಿಸಿಕೊಳ್ಳಲು ಹವಣಿಸುತ್ತಿರುವ ಸಂದರ್ಭದಲ್ಲೆ, ತಫೀಝ್ ಅಹ್ಮದ್ ಈ ಕ್ರೀಡೆಯ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಆ.29ರಂದು ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸಲಿದ್ದಾರೆ.
ಮಾಜಿ ಕ್ರೀಡಾ ಸಚಿವ ಅಭಯಚಂದ್ರ ಜೈನ್ ರಾಜ್ಯ ಸರಕಾರದಿಂದ ಒಂದು ಲಕ್ಷ ರೂ.ಗಳ ನೆರವು ಒದಗಿಸಿದ್ದಾರೆ. ಇದೇ ರೀತಿಯಲ್ಲಿ ತನಗೆ ಹೆಚ್ಚಿನ ಪ್ರೋತ್ಸಾಹ ಲಭ್ಯವಾದರೆ, ಈ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡುವ ಮೂಲಕ ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತರಲು ಶ್ರಮಿಸುವುದಾಗಿ ತಫೀಝ್ ಅಹ್ಮದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಾಲ್ಯದಲ್ಲಿಯೆ ತಂದೆ ಹಾಗೂ ತಾಯಿಯನ್ನು ಕಳೆದುಕೊಂಡು ತಮ್ಮ ಕಿರಿಯ ಸಹೋದರನೊಂದಿಗೆ ಅತ್ತೆಯ ಆಶ್ರಯದಲ್ಲಿ ಬೆಳೆಯು ತ್ತಿರುವ ತಫೀಝ್ ಅಹ್ಮದ್, ವಿದ್ಯಾಭ್ಯಾಸವನ್ನು ಪಿಯುಸಿಗೆ ಮೊಟಕುಗೊಳಿಸಿ, ಕರಾಟೆ, ಕುಂಗ್‌ಫು ಸೇರಿದಂತೆ ಮಾರ್ಷಲ್ ಆರ್ಟ್ಸ್‌ನಲ್ಲಿ ತಮ್ಮ ಭವಿಷ್ಯವನ್ನು ಕಂಡುಕೊಳ್ಳಲು ಬಯಸಿದ್ದಾರೆ.
ತಫೀಝ್ 2007ರಿಂದ ಕರಾಟೆ, ಕುಂಗ್‌ಫು ಕಲಿಕೆಯನ್ನು ಆರಂಭಿಸಿದರು. 2013ರಲ್ಲಿ ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. 2014ರಿಂದ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್, ಕಿಕ್ ಬಾಕ್ಸಿಂಗ್ ಕಲಿಕೆಯನ್ನು ಆರಂಭಿಸಿದ ತಫೀಝ್, ಅದೇ ಸಾಲಿನಲ್ಲಿ ತಮಿಳು ನಾಡಿನಲ್ಲಿ ನಡೆದ ಕೆ-1 ಓಪನ್ ಕಿಕ್‌ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಗಳಿಸಿದರು.
ಅಶೋಕ ಮಾರ್ಷಲ್ ಆರ್ಟ್ಸ್ ಅಕಾಡಮಿ 2010ರಲ್ಲಿ ಆಯೋಜಿಸಿದ್ದ ಎಂಟನೆ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮೂರನೆ ಸ್ಥಾನ, ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ 2009ರಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಕರಾಟೆ ವಿಭಾಗದಲ್ಲಿ ಪ್ರಥಮ ಸ್ಥಾನ, 2010ರಲ್ಲಿ ಮೂರನೆ ಸ್ಥಾನಗಳಿಸಿದ್ದರು.
ಇಂಟರ್ ನ್ಯಾಷನಲ್ ಪವರ್ ಮಾರ್ಷಲ್ ಆರ್ಟ್ಸ್ ಅಕಾಡಮಿಯು 2014ರಲ್ಲಿ ಆಯೋಜಿಸಿದ್ದ 20ನೆ ರಾಜ್ಯಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಎರಡನೆ ಸ್ಥಾನ, 2015ರಲ್ಲಿ ಅಖಿಲ ಭಾರತ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್ ಆಯೋಜಿಸಿದ್ದ ಬೆಂಗಳೂರು ಓಪನ್-2015 ಪಂದ್ಯಾವಳಿಯಲ್ಲಿ ಎರಡನೆ ಸ್ಥಾನವನ್ನು ಗಳಿಸಿದ್ದರು. ಹೀಗೆಯೇ ಅನೇಕ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ತಮ್ಮ ಸಾಮರ್ಥ್ಯವನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಳ್ಳುತ್ತಿರುವ ತಫೀಝ್ ಅಹ್ಮದ್, ಎಂಎಂಎ ಕ್ರೀಡೆಯನ್ನು ದೇಶದಲ್ಲಿಯೂ ಜನಪ್ರಿಯಗೊಳಿಸುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ದಾನಿಗಳು ತಫೀಝ್ ಅಹ್ಮದ್ ಅವರ ಮೊಬೈಲ್ ಸಂಖ್ಯೆ 7411206932ಗೆ ಸಂಪರ್ಕಿಸಬಹುದು.
ಭಾರತಕ್ಕಾಗಿ ಪದಕ ಗೆಲ್ಲುವ ವಿಶ್ವಾಸ
ಅಮೆರಿಕದಲ್ಲಿ ನಡೆದ ಎಂಎಂಎ ವಿಶ್ವ ಚಾಂಪಿಯನ್‌ಶಿಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಭಾರತದ 10 ಮಂದಿ ಆಯ್ಕೆಯಾಗಿದ್ದರು. ಆದರೆ, ಈ ಪೈಕಿ 9 ಮಂದಿಗೆ ವೀಸಾ ಸಿಕ್ಕಿಲ್ಲ. ಇದೀಗ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿ ರುವ ಚಾಂಪಿಯನ್ ಶಿಪ್‌ನಲ್ಲಿ ಪಾಲ್ಗೊಳ್ಳಲು ನಾಲ್ಕು ಮಂದಿ ಆಯ್ಕೆಯಾಗಿದ್ದು, ಅದರಲ್ಲಿ ನಾನೂ ಒಬ್ಬ. ಆ.29ರಂದು ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸುತ್ತಿದ್ದು, ಭಾರತಕ್ಕಾಗಿ ಈ ಕ್ರೀಡೆಯಲ್ಲಿ ಪದಕ ಗೆಲ್ಲುವುದು ನನ್ನ ಮಹದಾಸೆ.
-ಮುಹಮ್ಮದ್ ತಫೀಝ್‌ಅಹ್ಮದ್