ರಾಷ್ಟ್ರೀಯ ಬಿರಿಯಾನಿ ಆಯೋಗದ ಮೂಲಕ ಮೊದಲು ಬಿರಿಯಾನಿ, ಮತ್ತೆ ಬಡವರನ್ನು ಖಾಲಿ ಮಾಡಲಾಗುವುದು

Update: 2016-09-11 12:30 GMT

ಭಾರತದಲ್ಲಿ ರಾಷ್ಟ್ರೀಯ ಬಿರಿಯಾನಿ ಯೋಗದ ತುರ್ತು ಅಗತ್ಯವಿದೆ. ಪ್ರಾಂತ ಹಾಗೂ ಮಾಂಸದ ವಿವಿಧ ಪ್ರಕಾರಗಳನ್ನು ಗಮನದಲ್ಲಿಟ್ಟುಕೊಂಡು ಈ ಬಿರಿಯಾನಿ ಆಯೋಗದಲ್ಲಿ ಕನಿಷ್ಠ 10 ಸದಸ್ಯರಿರಬೇಕು. ಆಯೋಗದ ಪ್ರತಿ ಸದಸ್ಯ ಕನಿಷ್ಠ ಒಂದು ರೀತಿಯ ಬಿರಿಯಾನಿಯ ತಜ್ಞನಾಗಿರಬೇಕು ಹಾಗೂ ಬಿರಿಯಾನಿ ತಿನ್ನುವ ವಿಷಯದಲ್ಲಿ ತನ್ನ ಮಿತ್ರರ ಬಳಗದಲ್ಲಿ ಫೇಮಸ್ಸಾಗಿರಬೇಕು. ಈ ಆಯೋಗದಲ್ಲಿ ಯಾವುದೇ ಸಸ್ಯಾಹಾರಿಗಳಿಗೆ ಅವಕಾಶವಿಲ್ಲ. ಆದರೆ ಗಲ್ಲಿ ಗಲ್ಲಿಗಳಲ್ಲಿ ಬಿರಿಯಾನಿಯ ಸ್ಯಾಂಪಲ್ ಸಂಗ್ರಹಿಸುವವರು ಸಸ್ಯಾಹಾರಿಗಳಾಗಿರಬೇಕು. ಇದರಿಂದ ಸ್ಯಾಂಪಲ್ ತೆಗೆದುಕೊಳ್ಳುವ ಹೆಸರಲ್ಲಿ ಎರಡು ಪ್ಲೇಟ್ ಬಿರಿಯಾನಿ ಪುಕ್ಕಟೆ ತಿಂದು ಹೋಗಿದ್ದಾರೆ ಎಂಬ ಆರೋಪ ಬರುವುದು ತಪ್ಪುತ್ತದೆ.

ಈ ಆಯೋಗದ ಸದಸ್ಯರು ಬಿರಿಯಾನಿ ತಿಂದು ಅದನ್ನು ಯಾವುದರಿಂದ ಮಾಡಲಾಗಿದೆ ಎಂದು ಹೇಳಬೇಕು. ಅವರು ಮನೆಯಿಂದ ಊಟ ತರಬಾರದು. ಸ್ಯಾಂಪಲ್ ಆನ್ನೇ ಅವರು ತಿನ್ನಬೇಕು. ಹೀಗೆ ತಿಂದು ಅದು ಚಿಕನ್, ಮಟನ್, ಬೀಫ್, ಅಥವಾ ಮೊಟ್ಟೆಯ ಬಿರಿಯಾನಿಯೇ ಎಂದು ಹೇಳಬೇಕು. ಸದಸ್ಯರು ಬೀದಿ ಬೀದಿಗಳಲ್ಲಿ ಬಿರಿಯಾನಿ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಮಾರಾಟಕ್ಕೆ ಇಡುವ ಸಂಜೆ ಹೊತ್ತಲ್ಲೇ ಬರಬೇಕು. ಕೆಲವೆಡೆ ಮಧ್ಯಾಹ್ನದ ಮೊದಲೇ ಸಿಗುತ್ತದೆ. ಇತ್ತೀಚೆಗೆ ದೇಶದ ಬಡವರು ಕಬ್ಬಿನ ಹಾಲು ಮಾರಿದಂತೆ ಬಿರಿಯಾನಿ ಮಾರಲು ಹೊರಟಿದ್ದಾರೆ. ಮನೆಯಲ್ಲಿ ಮಾಡುವುದನ್ನೇ ಈಗ ಬೀದಿಯಲ್ಲಿ ಮಾಡುತ್ತಿದ್ದಾರೆ. ಮೊದಲು ಹೀಗೆಲ್ಲ ಬೀದಿಗಳಲ್ಲಿ ಬಿರಿಯಾನಿ ಇಷ್ಟೊಂದು ಸಿಗುತ್ತಿರಲಿಲ್ಲ. ರೆಸ್ಟಾರೆಂಟ್ ಅಥವಾ ಮದುವೆಯಲ್ಲಿ ಮಾತ್ರ ಸಿಗುತ್ತಿತ್ತು. ಯಾವ ಮನೆಯಲ್ಲಿ ಬಿರಿಯಾನಿ ಮಾಡುತ್ತಾರೆ ಆ ಮನೆಯವರೊಂದಿಗೆ ನಾನು ಯಾವತ್ತೂ ಜಗಳ ಮಾಡುತ್ತಿರಲಿಲ್ಲ. ಏಕೆಂದರೆ ಬಿರಿಯಾನಿ ತಿನ್ನುವ ಚಾನ್ಸ್ ಕಳೆದುಕೊಳ್ಳಲು ನಾನು ಸಿದ್ಧನಿರಲಿಲ್ಲ. ಆದರೆ ಈಗ ಬಡವರು ಬಿರಿಯಾನಿ ಮಾರಿ ಜೀವನ ಸಾಗಿಸಲು ಹೊರಟಿದ್ದಾರೆ. ಬಡವರು ಹೀಗೆ ಹೊಟ್ಟೆಪಾಡಿಗೆ ಬಿರಿಯಾನಿ ಮಾರುವುದನ್ನು ನಾವು ಸಹಿಸಲಸಾಧ್ಯ ! ಇದಕ್ಕಾಗಿ ಪ್ರತಿ ಪಾತ್ರೆಯಲ್ಲಿರುವ ಬಿರಿಯಾನಿಯ ಸ್ಯಾಂಪಲ್ ಸಂಗ್ರಹಿಸಲಾಗುವುದು. ಅವುಗಳಲ್ಲಿ ಬೀಫ್ ಇದೆಯೇ , ಇಲ್ಲವೇ ಎಂದು ತನಿಖೆ ನಡೆಸಲಾಗುವುದು. ಬಿರಿಯಾನಿಯ ಅನ್ನದ ಅಗುಳುಗಳ ನಡುವೆ ಸಿಕ್ಕಿಕೊಂಡಿರುವ ಮಾಂಸ ಬೀಫ್ ಆಗಿರಬಹುದು. ಚಾನಲುಗಳ ಪ್ರಕಾರ ಇದು ಅತ್ಯಂತ ಅಪಾಯಕಾರಿ ಪರಿಸ್ಥಿತಿ. ಸ್ಯಾಂಪಲ್ಲುಗಳಲ್ಲಿರುವ ಮಾಂಸದ ಕಿವಿ ಹಿಡಿದು ಅದನ್ನು ಲ್ಯಾಬ್ ಗೆ ತೆಗೆದುಕೊಂಡು ಹೋಗಲಾಗುವುದು. ಅದು ಬೀಫ್ ಆಗಿದ್ದಲ್ಲಿ ಬಿರಿಯಾನಿಯವನಿಗೆ ಶಿಕ್ಷೆ ಖಚಿತ. ಇನ್ನು ತನ್ನೊಳಗೆ ಬೀಫ್ ಅನ್ನು ಅವಿತುಕೊಳ್ಳಲು ಅವಕಾಶ ನೀಡಿದ ಅನ್ನ ಅಥವಾ ಅದನ್ನು ಬೆಳೆದ ರೈತನನ್ನೂ ಜೈಲಿಗೆ ಕಳಿಸಲಾಗುವುದು. ಆಯೋಗದಿಂದ ಬಿರಿಯಾನಿ ಕುರಿತು ನೂತನ ನೀತಿ ಜಾರಿಗೆ ತರಲಾಗುವುದು. ಬಿರಿಯಾನಿಯಲ್ಲಿ ಬೀಫ್ ಸಿಗದಿದ್ದಲ್ಲಿ ಅದಕ್ಕೆ ದೋಷಮುಕ್ತ ಪ್ರಮಾಣ ಪತ್ರ ನೀಡಲಾಗುವುದು. ಅದಕ್ಕೆ ಸರಕಾರಿ ಬಿರಿಯಾನಿ ಎಂಬ ಮೊಹರು ಹಾಕಲಾಗುವುದು. ಅಪರಾಧಿ ಎಂದು ಸಾಬೀತಾದ ಬಿರಿಯಾನಿಯನ್ನು ಆಯೋಗದ ಸದಸ್ಯರೇ ತಿಂದು ಮುಗಿಸಿ ಸುಮ್ಮನಿರಬೇಕು. ಪ್ರವಾಸಿಗಳಿಗೆ ‘ವಿಶೇಷ ಬಿರಿಯಾನಿಯ’ ಲೈಸೆನ್ಸ್ ನೀಡಲಾಗುವುದು. ಅದನ್ನು ಅವರು ತಮ್ಮ ವೀಸಾ ತೋರಿಸಿ ಪಡೆಯಬಹುದು. ಪಂಚತಾರಾ ಹೋಟೆಲುಗಳ ಬಿರಿಯಾನಿ ಸ್ಯಾಂಪಲ್ ತೆಗೆದುಕೊಳ್ಳಲಾಗುವುದಿಲ್ಲ. ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ಆಯೋಗದ ಸದಸ್ಯರು ದಾಳಿ ಮಾಡುವರು. ಸ್ಯಾಂಪಲ್ ಸಂಗ್ರಹಿಸಿ ಮದುವೆ ದಿಬ್ಬಣದಲ್ಲಿ ಬಂದವರನ್ನು ಅಲ್ಲೇ ಒಂದು ಕೊಠಡಿಯಲ್ಲಿ ಕೂಡಿಡಲಾಗುವುದು. ಮರುದಿನ ಬಿರಿಯಾನಿಯ ಪರೀಕ್ಷೆಯ ಫಲಿತಾಂಶ ಬಂದ ಮೇಲೆಯೇ ಅವರು ಊಟ ಮಾಡಬಹುದು.

 ಒಂದು ಪ್ರತ್ಯೇಕ ಬಿರಿಯಾನಿ ಪೊಲೀಸ್ ವಿಭಾಗವನ್ನು ತಕ್ಷಣ ಪ್ರಾರಂಭಿಸಲಾಗುವುದು. ಇದು ಮುಂದಿನ ಹಂತದಲ್ಲಿ ಕಬಾಬ್, ಕೊರ್ಮ ಹಾಗೂ ಸಾರುಗಳ ಸ್ಯಾಂಪಲ್ ಸಂಗ್ರಹಿಸುವುದು. ಇದರಲ್ಲಿ ಕೇವಲ ಸಸ್ಯಾಹಾರಿ ಪೊಲೀಸರು ಮಾತ್ರ ಇರುತ್ತಾರೆ. ಇಲ್ಲದಿದ್ದರೆ ಸ್ಯಾಂಪಲ್ ದಾರಿಯಲ್ಲೇ ಖಾಲಿಯಾಗುವ ಅಪಾಯವಿದೆ. ಬಿರಿಯಾನಿ ಇನ್‌ಸ್ಪೆಕ್ಟರ್, ಕೊರ್ಮ ಇನ್‌ಸ್ಪೆಕ್ಟರ್ ಹಾಗೂ ಎಸ್ ಎಸ್ ಪಿ ( ಸಾರು) ಅಧಿಕಾರಿಗಳು ಇರುತ್ತಾರೆ. ಇದರಿಂದ ಬಿರಿಯಾನಿ ಮಾಡುವವರಲ್ಲಿ ಭಯ ಹುಟ್ಟುತ್ತದೆ. ನಿಧಾನವಾಗಿ ಬಿರಿಯಾನಿ ನಾಪತ್ತೆಯಾಗುತ್ತದೆ. ಹಾಗೇ ನಿಧಾನವಾಗಿ ಬಡವರು ನಾಪತ್ತೆಯಾಗುತ್ತಾರೆ. ಇದಕ್ಕಾಗಿ 20420 ನೇ ವರ್ಷದ ಗುರಿ ಹಾಕಿಕೊಳ್ಳಲಾಗಿದೆ.

 ಮಾಂಸಾಹಾರಿ ಬಿರಿಯಾನಿಯ ಜನಪ್ರಿಯತೆ ಕಡಿಮೆ ಮಾಡಲು ಸಸ್ಯಾಹಾರಿ ಬಿರಿಯಾನಿಯ ಸ್ಪರ್ಧೆಯನ್ನು ಆಯೋಗ ಆಯೋಜಿಸುತ್ತದೆ. ‘ಗೋಶ್ತ್ ಕಾ ಕೋಯಿ ದೋಸ್ತ್ ನಹೀ ಹೋತಾ (ಮಾಂಸಕ್ಕೆ ಯಾರೂ ಮಿತ್ರರಿಲ್ಲ)’ನಮ್ಮ ಘೋಷಣೆಯಾಗಲಿದೆ. ‘ಭಯಮುಕ್ತ ಬಿರಿಯಾನಿಯ’ ಅಭಿಯಾನ ನಡೆಯಲಿದೆ. ಮತ್ತು ಟಿವಿ ಸ್ಟುಡಿಯೋಗೆ ಹೋಗಿ ಬಿರಿಯಾನಿಯ ಮಾತಾಡುವವರನ್ನು ನೋಡಿಕೊಳ್ಳಲಾಗುವುದು. ಬಿರಿಯಾನಿ ಆಯೋಗದ ಐಡಿಯಾ ನನ್ನದು. ನಿಮ್ಮ ಬೆಂಬಲ ಸಿಕ್ಕಿದರೆ ನಾವು ಹಲಸು ಹಾಗೂ ಆಲೂಗಡ್ಡೆಯ ಪಲ್ಯದ ಸ್ಯಾಂಪಲನ್ನೂ ಸಂಗ್ರಹಿಸಲಿದ್ದೇವೆ. ಬಿರಿಯಾನಿ ಮುಕ್ತ ಭಾರತ ಮಾಡಲಿದ್ದೇವೆ. ಹಾಗೆ ಮಾಡಲು ಸಾಧ್ಯವಿಲ್ಲದಿದ್ದರೆ ಬಿರಿಯಾನಿ ತಿಂದಾದರೂ ಅದನ್ನು ಮುಗಿಸುತ್ತೇವೆ.

ರವೀಶ್ ಕುಮಾರ್

(ಲೇಖಕರು ಎನ್ ಡಿ ಟಿವಿ ಇಂಡಿಯಾದ ಕಾರ್ಯನಿರ್ವಾಹಕ ಸಂಪಾದಕ)

Writer - ರವೀಶ್ ಕುಮಾರ್

contributor

Editor - ರವೀಶ್ ಕುಮಾರ್

contributor

Similar News