ಭಾಗ್ವತ್ ರೇ ಆರೆಸ್ಸೆಸ್ ವಚನ ಮುರಿದದ್ದೇಕೆ?

Update: 2016-10-14 17:21 GMT

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್ ಅವರ ವಿಜಯ ದಶಮಿ ಸಂದೇಶ ಈ ಬಾರಿ ತಮ್ಮದೇ ಸಂಘಟನೆಯ ಶಪಥವನ್ನು ಭಂಗಪಡಿಸಿದೆ. ಸರಕಾರಕ್ಕೆ ಆದೇಶ ನೀಡುವ ಮೂಲಕ, ವಿರೋಧ ಪಕ್ಷಗಳ ಮೇಲೆ ವಾಗ್ದಾಳಿ ನಡೆಸುವ ಮೂಲಕ ಹಾಗೂ ಕಾನೂನು ಜಾರಿ ಅಧಿಕಾರಗಳಿಗೆ ಸ್ಪಷ್ಟ ಸೂಚನೆ ನೀಡುವ ಮೂಲಕ, ಭಾಗ್ವತ್ ಆಡಳಿತ ಪಕ್ಷದ ಪ್ರಭಾವಿ ಮುಖಂಡನ ಛಾಪು ಮೂಡಿಸಿದ್ದಾರೆ.

ಸಾಂಪ್ರದಾಯಿಕ ಖಾಕಿ ಚಡ್ಡಿಯ ಬದಲಾಗಿ ಪ್ಯಾಂಟ್ ಧರಿಸಿ ಮೊಟ್ಟಮೊದಲ ಬಾರಿಗೆ ಕಾಣಿಸಿಕೊಂಡ ಭಾಗ್ವತ್, ನಾಗ್ಪುರದ ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ನಡೆದ ವಿಜಯದಶಮಿ ಸಮಾರಂಭದಲ್ಲಿ ಮಾಡಿದ ಭಾಷಣದಲ್ಲಿ ಕೇಂದ್ರ ಸರಕಾರಕ್ಕೆ ಪ್ರಮುಖವಾಗಿ ಎರಡು ಅಂಶಗಳ ಬಗ್ಗೆ ಸಲಹೆ ನೀಡಿದ್ದಾರೆ.
 ಗಡಿಯಾಚೆಗಿನ ಶಕ್ತಿಗಳಿಗೆ ಸೂಕ್ತ ಉತ್ತರ ನೀಡಿರುವುದಕ್ಕಾಗಿ ಸರಕಾರವನ್ನು ಹೊಗಳುತ್ತಲೇ, ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯವನ್ನು ಚುರುಕುಗೊಳಿಸುವಂತೆ ಸೂಚನೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಮೀರ್‌ಪುರ, ಮುಝಪ್ಫರಾಬಾದ್, ಗಿಲ್ಗಿಟ್ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಲ್ತಿಸ್ತಾನದಿಂದ ವಲಸೆ ಬಂದಿರುವ ಹಾಗೂ ಕಾಶ್ಮೀರ ಕಣಿವೆಯಿಂದ ಬಲಾತ್ಕಾರವಾಗಿ ಹೊರಗೆ ಅಟ್ಟಲ್ಪಟ್ಟ ಕಾಶ್ಮೀರಿ ಪಂಡಿತರಿಗೆ ಗೌರವಯುತವಾದ ಪುನರ್ವಸತಿ ಕಲ್ಪಿಸುವುದು ತುರ್ತು ಅಗತ್ಯ. ಅವರ ಭದ್ರತೆಗೆ ಗಮನ ಹರಿಸುವ ಜತೆಗೆ ಸರ್ವತೋಮುಖ ಕಲ್ಯಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಭಾಗ್ವತ್ ಸೂಚಿಸಿದ್ದಾರೆ.

ಎರಡನೆಯದಾಗಿ ಸರಕಾರ ಶಿಕ್ಷಣ ಕ್ಷೇತ್ರದಲ್ಲಿ ತ್ವರಿತ ಸುಧಾರಣೆಯನ್ನು ಕೈಗೊಳ್ಳುವಂತೆ ಕರೆ ನೀಡಿದ್ದಾರೆ. ಮನುಷ್ಯರಲ್ಲಿ ಒಳ್ಳೆಯ ಮೌಲ್ಯಗಳನ್ನು ರೂಪಿಸುವ ಶಿಕ್ಷಣ ಇಂದಿನ ಅಗತ್ಯ ಎನ್ನುವುದು ಅವರ ಸ್ಪಷ್ಟ ಸಂದೇಶ. ಪಠ್ಯಕ್ರಮದಲ್ಲಿ ಅಗತ್ಯ ಸುಧಾರಣೆ ತರುವ ಜತೆಗೆ ಹೊಸ ಶಿಕ್ಷಣ ಬೋಧಿಸಲು ಸೂಕ್ತ ಶಿಕ್ಷಕರನ್ನು ನೇಮಕ ಮಾಡುವಂತೆಯೂ ಫರ್ಮಾನು ಹೊರಡಿಸಿದ್ದಾರೆ. ಬಹಳ ಕಾಲದಿಂದ ನಾವು ಶಿಕ್ಷಣ ಸುಧಾರಣೆಯನ್ನು ಎದುರು ನೋಡುತ್ತಿದ್ದೆವು. ಆ ಕಾಯುವಿಕೆ ಈಗಲಾದರೂ ಅಂತ್ಯವಾಗಬೇಕು ಎಂದು ಹೇಳಿದ್ದರು.

ವಿಸ್ತೃತ ಕ್ಷೇತ್ರ
ಮಾಜಿ ಸಂಪುಟ ಕಾರ್ಯದರ್ಶಿ ಟಿ.ಎಸ್.ಆರ್. ಸುಬ್ರಹ್ಮಣ್ಯನ್ ನೇತೃತ್ವದ ಸಮಿತಿ ಶಿಫಾರಸು ಮಾಡಿರುವ ಉದ್ದೇಶಿತ ಹೊಸ ಶಿಕ್ಷಣ ನೀತಿಯ ಬಗ್ಗೆ ಆಳವಾಗಿ ಪರಾಮರ್ಶೆ ಮಾಡಬೇಕಾದ ಅಗತ್ಯವನ್ನೂ ಅವರು ಪ್ರತಿಪಾದಿಸಿದ್ದಾರೆ. ಹೊಸ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ, ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಗಮನ ಹರಿಸಲು ಒಂದು ಸಮಿತಿಯನ್ನು ರಚಿಸಲಾಯಿತು. ಆ ಸಮಿತಿ ಈಗ ವರದಿ ಸಲ್ಲಿಸಿದೆ. ಈ ವರದಿ ಅಂಶಗಳ ಬಗ್ಗೆ ನನಗೆ ಖಚಿತ ಮಾಹಿತಿ ಇಲ್ಲ. ಆದರೂ ಈ ಶಿಫಾರಸು, ಶಿಕ್ಷಣತಜ್ಞರು ಹಾಗೂ ಶಿಕ್ಷಣ ಕ್ಷೇತ್ರದ ಹೋರಾಟಗಾರರ ಅಭಿಮತಕ್ಕೆ ಪೂರಕವಾಗಿದೆಯೇ ಎನ್ನುವುದನ್ನು ತಾಳೆ ನೋಡಬೇಕಾಗುತ್ತದೆ ಎಂದು ಹೇಳುವ ಮೂಲಕ ಸಮಿತಿ ಶಿಫಾರಸಿಗೆ ಆರೆಸ್ಸೆಸ್‌ನ ವಿರೋಧ ಇದೆ ಎಂಬ ಸುಳಿವು ನೀಡಿದರು.
ವಿರೋಧ ಪಕ್ಷಗಳು ಮತ್ತು ಮಾಧ್ಯಮಗಳ ಬಗ್ಗೆಯೂ ಭಾಗ್ವತ್ ಒಂದಷ್ಟು ಮಾತನಾಡಿದರು. ‘‘ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಕೆಲ ವರ್ಗದವರು ಸಣ್ಣ ಘಟನೆಯನ್ನು ಅನಗತ್ಯವಾಗಿ ದೊಡ್ಡದು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳು ವಿರೋಧಕ್ಕಾಗಿ ವಿರೋಧ ಮಾಡುವುದು ಸರಿಯಲ್ಲ. ರಾಜಕೀಯ ಪಕ್ಷಗಳು ತಮ್ಮ ಎಲ್ಲೆ ಮೀರಬಾರದು. ಜನರು ಪರಸ್ಪರ ಕಚ್ಚಾಡಿಕೊಳ್ಳುವಂತೆ ಮಾಡಬಾರದು. ಸಮಾಜದಲ್ಲಿ ವಿಭಜನೆಯನ್ನು ಮಾಧ್ಯಮಗಳು ಕೂಡಾ ಸೃಷ್ಟಿಸಬಾರದು’’ ಎಂದು ಅಭಿಪ್ರಾಯಪಟ್ಟರು.

‘‘ಗೋಸಂರಕ್ಷಕರನ್ನು ಆಡಳಿತ ವ್ಯವಸ್ಥೆ ನಡೆಸಿಕೊಳ್ಳುವ ಮನೋಭಾವದ ಬಗ್ಗೆಯೂ ಮರುಚಿಂತನೆ ಅಗತ್ಯ. ಗೋರಕ್ಷಕರು ಮತ್ತು ಸಮಾಜಘಾತುಕ ಶಕ್ತಿಗಳ ನಡುವಿನ ವ್ಯತ್ಯಾಸವನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಗೋಸಂರಕ್ಷಣೆಗೆ ಅಸಂಖ್ಯಾತ ಮಂದಿ ಶ್ರಮಿಸುತ್ತಿದ್ದಾರೆ. ಇಡೀ ಜೈನ ಸಮುದಾಯವೇ ಇದಕ್ಕೆ ಕಂಕಣಬದ್ಧವಾಗಿದೆ. ಈ ಒಳ್ಳೆಯ ವ್ಯಕ್ತಿಗಳು ಕಾನೂನು ಹಾಗೂ ಸಂವಿಧಾನದ ಪರಿಧಿಯಲ್ಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಮಾಜದಲ್ಲಿ ತೊಂದರೆ ಸೃಷ್ಟಿಸುವವರನ್ನು ಗೋಸಂರಕ್ಷರ ಜತೆ ಅಧಿಕಾರಿಗಳು ಹೋಲಿಸಬಾರದು’’ ಎಂದು ಹೇಳಿದರು.

ಸ್ಪಷ್ಟ ಕಾರ್ಯ ಸೂಚಿ
ಯಾವ ಜವಾಬ್ದಾರಿಯುತ ರಾಜಕಾರಣಿ ಕೂಡಾ ವಿಭಿನ್ನ ವ್ಯಕ್ತಿಗಳಿಗೆ ಪ್ರತ್ಯೇಕ ಮಾನದಂಡ ಅನುಸರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ನಿದರ್ಶನಗಳಿಲ್ಲ. ಆದರೆ ಯಾವುದೇ ಪರಿಸ್ಥಿತಿಯಲ್ಲೂ, ಭಾಗ್ವತ್, ತಾವೊಬ್ಬ ರಾಜಕಾರಣಿ ಎಂದು ಒಪ್ಪಿಕೊಳ್ಳುವುದಿಲ್ಲ. ಗಾಂಧೀಜಿ ಹತ್ಯೆಯ ಸುಳಿಯಿಂದ ಹೊರಬರುವ ಪ್ರಯತ್ನವಾಗಿ 1949ರಲ್ಲಿ ಸರಕಾರಕ್ಕೆ ಆರೆಸ್ಸೆಸ್ ಒಂದು ವಚನ ಕೊಟ್ಟಿತು. ಅದೆಂದರೆ ಆರೆಸ್ಸೆಸ್ ರಾಜಕೀಯ ಲೇಪವಿಲ್ಲದೇ ಸಾಂಸ್ಕೃತಿಕ ಸಂಘಟನೆಯಾಗಿ ಮಾತ್ರ ಕಾರ್ಯನಿರ್ವಹಿಸುತ್ತದೆ ಎನ್ನುವ ಮುಚ್ಚಳಿಕೆ. ಆರೆಸ್ಸೆಸ್ ಮೇಲೆ ಹೇರಿದ್ದ ನಿಷೇಧ ವಾಪಸು ಪಡೆಯುವ ಮುನ್ನ 1949ರಲ್ಲಿ ಆರೆಸ್ಸೆಸ್ ಸಂವಿಧಾನದ 4ನೆ ವಿಧಿಗೆ ತಿದ್ದುಪಡಿ ತರಲಾಯಿತು. ಈ ತಿದ್ದುಪಡಿಯು, ಸಂಘ ಯಾವುದೇ ರಾಜಕೀಯ ಹಸ್ತಕ್ಷೇಪ ನಡೆಸದೆ, ಸಾಂಸ್ಕೃತಿಕ ಕಾರ್ಯಗಳಲ್ಲಷ್ಟೇ ತೊಡಗಿಸಿಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿತ್ತು.

ಆರೆಸ್ಸೆಸ್ ಸಂವಿಧಾನದ ಪ್ರಕಾರ ‘ಸಾಂಸ್ಕೃತಿಕ ವ್ಯಕ್ತಿ’ ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿ ಮಾಡಿದ ಈ ರಾಜಕೀಯ ಲೇಪದ ಭಾಷಣವನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಭಾಗ್ವತ್ ಅವರಲ್ಲಿ ರಾಜಕಾರಣಿಯ ಮನೋಸ್ಥಿತಿಯನ್ನು ತರುವಂತೆ ಮಾಡಿದ ಅಂಶ ಯಾವುದು?
ಕಳೆದ ಎರಡೂವರೆ ವರ್ಷಗಳಿಂದ ಅವರು ಸಂಘ ಪರಿವಾರದಲ್ಲಿ ವಿಭಿನ್ನ ಆಸಕ್ತಿ ಗುಂಪುಗಳ ನಡುವೆ ಸಮತೋಲನ ಸಾಧಿಸುವ ಕಸರತ್ತು ಮಾಡುತ್ತಲೇ ಬಂದಿದ್ದರು. ಕಾಲಕ್ರಮೇಣ ಈ ಭಿನ್ನಾಭಿಪ್ರಾಯ ತಾನಾಗಿಯೇ ಶಮನಗೊಳ್ಳುತ್ತದೆ ಎನ್ನುವುದು ಅವರ ಎಣಿಕೆಯಾಗಿತ್ತು. ಆದರೆ ಅದು ಆಗಲಿಲ್ಲ.

ಪ್ರಮುಖವಾಗಿ ಎರಡು ನಿರ್ದಿಷ್ಟ ಕ್ಷೇತ್ರಗಳಲ್ಲಿ ಸಂಘ ಪರಿವಾರದಲ್ಲಿ ವ್ಯಾಪಕ ಅಸಮಾಧಾನವಿದೆ. ಅವುಗಳೆಂದರೆ ಗೋರಕ್ಷಕರ ಚಟುವಟಿಕೆಗಳು ಹಾಗೂ ಆರೆಸ್ಸೆಸ್ ಸೂಚನೆಯ ಶಿಕ್ಷಣ ಸುಧಾರಣೆ ನಿಧಾನಗತಿಯಲ್ಲಿ ಆಗುತ್ತಿರುವುದು. ‘‘ಶೇ. 80ರಷ್ಟು ಗೋರಕ್ಷಕರು ಸಮಾಜಘಾತುಕರು’’ ಎಂದು ಕಳೆದ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡಿದ್ದಾಗ, ಇದು ಸರಕಾರ ಹಾಗೂ ಆರೆಸ್ಸೆಸ್ ಸಹಸಂಸ್ಥೆಯಾದ ವಿಶ್ವಹಿಂದೂ ಪರಿಷತ್ ನಡುವಿನ ಸಂಘರ್ಷಕ್ಕೆ ಕಾರಣವಾಗಿತ್ತು. ಪರೋಕ್ಷ ವಿಧಾನದ ಮೂಲಕ ಅಧಿಕಾರ ವಶಪಡಿಸಿಕೊಳ್ಳಲು ಆರೆಸ್ಸೆಸ್ ಕಾಲಾವಕಾಶ ತೆಗೆದುಕೊಂಡಿತ್ತು. ಇದೀಗ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸುವ ಪ್ರಯತ್ನ ಮಾಡುತ್ತಿದೆ. ಈ ನಿಟ್ಟಿನಲ್ಲಿ ಸಂಘ ಪರಿವಾರದ ಎಲ್ಲ ಸಂಘಟನೆಗಳು ಒಗ್ಗಟ್ಟಿನಿಂದ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಏಳು ದಶಕ ಹಿಂದೆ ನೀಡಿದ್ದ ಭರವಸೆಯಿಂದ ಭಾರತವನ್ನು ಹಿಂದೂರಾಷ್ಟ್ರವಾಗಿ ಪರಿವರ್ತಿಸುವ ಸಂಘಟನೆಯ ಮುಖ್ಯ ಗುರಿಸಾಧನೆಯಾಗದು ಎನ್ನುವುದನ್ನು ಮಂಗಳವಾರ ರಾಜಕೀಯ ಲೇಪಿತ ಭಾಷಣದ ಮೂಲಕ ಭಾಗ್ವತ್ ಸ್ಪಷ್ಟಪಡಿಸಿದ್ದಾರೆ.

Writer - ಧೀರೇಂದ್ರ ಕೆ. ಝಾ

contributor

Editor - ಧೀರೇಂದ್ರ ಕೆ. ಝಾ

contributor

Similar News