ವೈದ್ಯಲೋಕದ ಅಪ್ರಿಯ ಸತ್ಯಗಳು

Update: 2016-10-14 17:26 GMT

ಸರಕಾರಿ ದಾಸ್ತಾನಿನಲ್ಲಿ 23 ಕೋಟಿ ರೂಪಾಯಿ ವೌಲ್ಯದ ಅವಧಿ ಮೀರಿದ ಔಷಧ ಬಳಕೆಯಾಗದೆ ಉಳಿದಿರುವ ಕುರಿತು ಇತ್ತೀಚಿನ ಸುದ್ದಿಯೊಂದು ಔಷಧ ಹಾಗೆ ಉಳಿಯಲು ಕಾರಣವಾದರವರ ನಿರ್ಲಕ್ಷಕ್ಕೆ ಕನ್ನಡಿ ಹಿಡಿಯುವಂತಿದೆ. ಅಷ್ಟೇ ಅಲ್ಲ ಬಡವರು ಸರಕಾರಿ ಆಸ್ಪತ್ರೆಗಳ ಸೌಲಭ್ಯದಿಂದ ವಂಚಿತರಾಗುತ್ತಿರುವ ಸುದ್ದಿಗಳು ಆಗಾಗ ಪತ್ರಿಕೆಗಳಲ್ಲಿ ಬರುತ್ತಲೇ ಇರುತ್ತವೆ. ಆಸ್ಪತ್ರೆಗಳ ಒಂದು ತರದ ಮಾಫಿಯಾದ ಕಾರಣ ಬಡವರಿಗೆ ಆ್ಯಂಬುಲೆನ್ಸ್ ಸೌಲಭ್ಯ ಸಿಗದಿರುವುದು, ಬರುವ ರೊಗಿಗಳ ಕುರಿತು ಕಾಳಜಿ ವಹಿಸದೆ ಅವರನ್ನು ಖಾಸಗಿ ಆಸ್ಪತ್ರೆಗಳಿಗೆ ಕಳಿಸುವುದು ಹೀಗೆ ರೋಗಿಗಳ ಕುರಿತು ಸರಕಾರಿ ಆಸ್ಪತ್ರೆಗಳಲ್ಲಿನ ನಿರ್ಲಕ್ಷ ಧೋರಣೆ ಆಗಾಗ ಕೇಳಿ ಬರುವ ಸುದ್ದಿಗಳು.

    ಇನ್ನು ಖಾಸಗಿ ಆಸ್ಪತ್ರೆಗಳ ಕತೆ ಬೇರೆ ರೀತಿಯದು. ತಪ್ಪು ರೋಗ ಪರೀಕ್ಷೆಗಳು, ಅನಗತ್ಯ ರಕ್ತ ಪರೀಕ್ಷೆ, ಎಕ್ಸ್ ರೇ, ಬೇಕಾಬಿಟ್ಟಿ ರೋಗಿಗಳ ವಿವಿಧ ತಪಾಸಣೆಗಳಿಂದಾಗಿ ರೋಗಿಗಳು ಭರಿಸಬೇಕಾಗುವ ಅಧಿಕ ಮೊತ್ತದ ಹಣ ಇತ್ಯಾದಿ ಖಾಸಗಿ ಆಸ್ಪತ್ರೆಗಳ ಕಾರ್ಯವೈಖರಿ ಭಯಪಡಿಸುವಂತದ್ದು. ಪೊಲೀಸ್ ವ್ಯವಸ್ಥೆ ಬಿಟ್ಟರೆ ಭ್ರಷ್ಟತೆಗೆ ಎರಡನೆಯ ಸ್ಥಾನ ದಕ್ಕಿರುವುದು ವೈದ್ಯಕೀಯ ಸೇವೆ ಎಂದು ಇತ್ತೀಚೆಗೆ ಸಮೀಕ್ಷೆ ನಡೆಸಿದ ಟ್ರಾನ್ಸ್ ಫರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆಯ ಅಂಬೋಣ. ಔಷಧ ಕಂಪೆನಿಯೊಂದರ ವೆಚ್ಚದಲ್ಲಿ ವಿದೇಶಕ್ಕೆ ಪ್ರವಾಸ ಮುಗಿಸಿ ಬಂದ ಮಧ್ಯಪ್ರದೇಶದ 11 ಮಂದಿ ವೈದ್ಯರ ಪರವಾನಗಿಯನ್ನು ಆರು ತಿಂಗಳ ಮಟ್ಟಿಗೆ ಭಾರತೀಯ ವೈದ್ಯಕೀಯ ಮಂಡಳಿ ಅಮಾನತ್ತಲ್ಲಿಟ್ಟಿರುವುದು ಹೋದ ವರ್ಷ ಚರ್ಚೆಗೆ ಗ್ರಾಸವಾಗಿತ್ತು. ಔಷಧ ತಯಾರಿಕಾ ಕಂಪೆನಿಗಳ ಹಾಗೂ ವೈದ್ಯರ ನಡುವಣ ಪವಿತ್ರ ಮೈತ್ರಿಯನ್ನು ಇಂಥ ಘಟನೆಗಳು ತಿಳಿಸುತ್ತವೆ ಎಂದು ಉತ್ತರ ಭಾರತದ ಎನ್‌ಜಿಒ ‘ಸ್ವಾಸ್ಥ ಅಧಿಕಾರ ಮಂಚ್’ ಇದರ ಅಭಿಪ್ರಾಯ. ಇನ್ನು ಔಷಧ ತಯಾರಿಕೆಯ ವಿಷಯದಲ್ಲಿ ಹೆಚ್ಚಿನ ಬ್ರಾಂಡ್ ಔಷಧ ತಯಾರಿಕಾ ಕಂಪೆನಿಗಳು ತಾವು ಮಾರಾಟ ಮಾಡುವ ಔಷಧಗಳನ್ನು ತಾವೇ ಉತ್ಪಾದಿಸದೆ ಬೇರೆ ಕಂಪೆನಿಗಳಿಗೆ ಉತ್ಪಾದನೆ ಕೆಲಸವನ್ನು ವಹಿಸಿ ಕೊಡುತ್ತವೆ. ಉತ್ಪಾದಕ ಕಂಪೆನಿಗಳಿಗೆ ತಾವು ಉತ್ಪಾದಿಸುವ ಔಷಧಗಳಿಗೆ ಮಾರುಕಟ್ಟೆ ಹುಡುಕುವ ಜರೂರು ಇಲ್ಲದ ಕಾರಣ ತಾವು ಉತ್ಪಾದಿಸುವ ಔಷಧಗಳ ಕುರಿತು ಅವು ತಲೆಕೆಡಿಸಿಕೊಳ್ಳುವುದಿಲ್ಲ. ಔಷಧಗಳ ಗುಣಮಟ್ಟ ಪರೀಕ್ಷೆಗಾಗಿ ಸರಕಾರಿ ನಿಯಮ ಇದ್ದರೂ ಸರಕಾರಿ ಪರೀಕ್ಷೆಗಾಗಿ ಮಾತ್ರ ಉತ್ತಮ ಔಷಧ ತಯಾರಿಸಿ ಉಳಿದಂತೆ ಕಳಪೆ ಗುಣಮಟ್ಟದ ಔಷಧ ತಯಾರಿಸಿ ತನ್ಮೂಲಕ ಲಾಭಗಳಿಸುವುದು ಇಂಥ ಔಷಧ ತಯಾರಿಸಲು ಕಂಪೆನಿಗಳ ಉದ್ದೇಶವೆಂದು ಸ್ಪಷ್ಟವಾಗುತ್ತದೆ. ಜೆನೆರಿಕ್ ಔಷಧಗಳಿಗೂ ಈ ಮಾತು ಅನ್ವಯಿಸುತ್ತದೆ.

ಇನ್ನು ವೈದ್ಯರದ್ದು ಇನ್ನೊಂದು ರೀತಿ ‘ವೈದ್ಯೋ ನಾರಾಯಣೋ ಹರಿ’ ಎನ್ನುವ ಪರಂಪರಾಗತ ನಂಬಿಕೆಗೆ ದ್ರೋಹ ಬಗೆಯುವಂತೆ ತಮ್ಮಲ್ಲಿ ಬರುವ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡು ಅವರನ್ನು ಅನಗತ್ಯ ಪರೀಕ್ಷೆಗೊಳಪಡಿಸಿ ದುಡ್ಡಿನ ಸುಲಿಗೆ ಮಾಡುವುದಲ್ಲದೇ ತೀರಾ ಸಾಮಾನ್ಯ ಖಾಯಿಲೆಗಳನ್ನು ಕೂಡಾ ಗಂಭೀರ ಎನ್ನುವಂತೆ ಬಿಂಬಿಸಿ ಅವರನ್ನು ಶಸ್ತ್ರಚಿಕಿತ್ಸೆಗೊಳಗಾಗುವಂತೆ ಮಾಡಿ ರೋಗಿಗಳ ಮೇಲೆ ಅತ್ಯಧಿಕ ಬಿಲ್ಲುಗಳನ್ನು ಹೊರಿಸುವುದು ಜತೆಗೆ ಶಸ್ತ್ರಕ್ರಿಯೆ ಮಾಡಿಸಿಕೊಳ್ಳಲು ಅವರನ್ನು ಕಾರ್ಪೊರೇಟ್ ಆಸ್ಪತ್ರೆಗಳಿಗೆ ಶಿಫಾರಸು ಮಾಡಿ ಅಂಥ ಕಾರ್ಪೊರೇಟ್ ಆಸ್ಪತ್ರೆಗಳಿಂದ ತಲಾ ರೋಗಿಗಳ ತಲೆಯ ಮೇಲೆ ಕಮಿಷನ್ ಪಡೆಯುವ ವೈದ್ಯರ ಧಂದೆ ಗುಟ್ಟಾಗಿ ಉಳಿದಿಲ್ಲ. ಬೇರೆ ಬೇರೆ ರೋಗಿಗಳಿಗೆ ಅನುಸಾರವಾಗಿ ಚಿಕಿತ್ಸೆಗಾಗಿ ತಮ್ಮ ಬಳಿ ಕಲ್ಪಿಸಲ್ಪಡುವ ರೋಗಿಗಳ ತಲೆಗಳ ಮೇಲೆ ವೈದ್ಯರಿಗೆ ಕೊಡುವ ಕಮಿಷನ್‌ಗಳ ದರಪಟ್ಟಿ ಕಾರ್ಪೊರೇಟ್ ಆಸ್ಪತೆಗಳಲ್ಲಿದ್ದು ಇದೆಲ್ಲ ಗುಟ್ಟಾಗಿ ನಡೆಯುವ ವ್ಯವಹಾರವಾಗಿರುತ್ತದೆ. ಕೆಲವೊಮ್ಮೆ ರೋಗಿ ಸತ್ತಿದ್ದಾನೆಂದು ತಿಳಿದು ಬಂದರೂ ರೋಗಿಗೆ ಹೆಚ್ಚಿನ ನಿಗಾ ವಹಿಸುವ ಅಗತ್ಯವಿದೆ ಎಂದು ರೋಗಿಯ ಕಡೆಯವರನ್ನು ನಂಬಿಸಿ ರೋಗಿಯ ಶವವನ್ನು ಐಸಿಯುನಲ್ಲಿ ಇರಿಸಿ ಸುಲಿಗೆ ಮಾಡುವುದೂ ಇದೆ.

ಇದನ್ನೆಲ್ಲ ಇತ್ತೀಚೆಗೆ ಬಹಿರಂಗಗೊಳಿಸಿದವರು ಮಹಾರಾಷ್ಟ್ರದ ನಾಸಿಕ್ ಬಲಿಯ ಲಸತ್‌ಗಾಂವ್ ಎಂಬ ಊರಿನಲ್ಲಿ ಸುಮಾರು 20 ವರ್ಷಗಳಿಂದ ಸ್ವತಃ ವೈದ್ಯಕೀಯ ವ್ಯಕ್ತಿ ನಡೆಸುತ್ತಿರುವ ಡಾ. ಅರುಣಗದ್ದೆ ಎಂಬ ಹೆಸರಾಂತ ವೈದ್ಯರು. ಸಮಾಜಸೇವಕ ಡಾ.ಆಮ್ಟೆಯವರ ನಿಕಟವರ್ತಿಯಾದ ಇವರು ತಮ್ಮ ಮಿತ್ರ ಡಾ.ಅಭಯ ಶುಕ್ಲಾ ಜೊತೆ ಸೇರಿ ಭಾರತದ ಪ್ರಮುಖ ನಗರಗಳಲ್ಲಿನ ಸುಮಾರು 78 ವೈದ್ಯರನ್ನು ಸಂದರ್ಶಿಸಿ ಬರೆದ ಸಂಶೋಧನಾತ್ಮಕ ವರದಿ. ‘ವೈದ್ಯಕೀಯ ಲೋಕದೊಳಗಣ ಆತ್ಮಸಾಕ್ಷಿಯ ಧ್ವನಿಗಳು’ (Voiced of consciences from medical profession) ಇದರಲ್ಲಿ ಎಲ್ಲವನ್ನೂ ವಿಶದವಾಗಿ ದಾಖಲಿಸಿದ್ದು ಈ ಕೃತಿ ವಿವಾದವನ್ನು ಎಬ್ಬಿಸಿದೆ. ಹೆಸರಾಂತ ಮಾಲ್‌ಗಳಲ್ಲಿ ಆಗಾಗ ‘ರಿಯಾಯಿತಿ ಮಾರಾಟ’ ನಡೆಸಿ ಗಿರಾಕಿಗಳನ್ನು ಸೆಳೆಯುವ ಮಾದರಿಯಲ್ಲಿ ಕಾರ್ಪೊರೇಟ್ ಆಸ್ಪತ್ರೆಗಳು ಕೂಡಾ ರೋಗಿಗಳನ್ನು ಸೆಳೆಯಲು ಆಗಾಗ ರಿಯಾಯ್ತಿ ದರದ ಶಸ್ತ್ರ ಚಿಕಿತ್ಸೆ ನಡೆಸುವ ತಂತ್ರಗಾರಿಕೆಯನ್ನು ಅನುಸರಣೆ ಮಾಡುವುದೂ ಇದೆ ಎಂದು ವಿದರ್ಭ ಪಿಸಿಯೋಲಜಿಸ್ಟ್ ಅಸೋಸಿಯೇಶನ್ ಅಧ್ಯಕ್ಷರ ಅಭಿಪ್ರಾಯ. ಹೀಗೆ ರೋಗಿಗಳನ್ನು ಸುಲಿಗೆ ಮಾಡುವ ಜಾಲದಲ್ಲಿ ಬರಿಯ ಖಾಸಗಿ ಮತ್ತು ಕಾರ್ಪೊರೇಟ್ ಆಸ್ಪತ್ರೆಗಳು ಮಾತ್ರವಲ್ಲ ವಿಮಾ ಕಂಪೆನಿಗಳು, ಔಷಧ ತಯಾರಿಸುವ ಕಂಪೆನಿಗಳು, ವೈದ್ಯಕೀಯ ಉಪಕರಣಗಳನ್ನು ತಯಾರಿಸುವ ಫ್ಯಾಕ್ಟರಿಗಳು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಂದ ಅಧಿಕ ಮೊತ್ತದ ಡೊನೇಶನ್ ವಸೂಲಿ ಮಾಡುವ ವೈದ್ಯಕೀಯ ಕಾಲೇಜುಗಳೂ ಸೇರಿವೆ. ಇಂತಹ ಅವ್ಯವಹಾರ ತಡೆಯಲು ಕ್ಲಿನಿಕಲ್ ಎಷ್ಟಾಬ್ಲಿಸ್‌ಮೆಂಟ್ ಸಹಿತ ಇನ್ನೂ ಬೇರೆ ಬೇರೆ ಕಾನೂನುಗಳಿದ್ದರೂ ನಮ್ಮ ಸರಕಾರಗಳ ಇಚ್ಛಾಶಕ್ತಿಯ ಕೊರತೆಯಿಂದ ಅವು ಕಟ್ಟು ನಿಟ್ಟಾಗಿ ಪಾಲಿಸುವುದಿಲ್ಲವಾದ ಕಾರಣ ಈ ಕ್ಷೇತ್ರದಲ್ಲಿ ಅವ್ಯವಹಾರಗಳಿಗೆ ಹೆದ್ದಾರಿ ತೆರೆದಿಟ್ಟಂತಾಗಿದೆ.

ಇವೆಲ್ಲದರ ಹೊರತಾಗಿ ಬೇರೊಂದು ದೃಷ್ಟಿಕೋನದಿಂದ ನೋಡಿದಾಗ ವೈದ್ಯರಾಗಿರುವವರಿಗೆ ತಮ್ಮದೇ ಆದ ಆತಂಕ ಒತ್ತಡಗಳು ಇಲ್ಲದಿಲ್ಲ. ಕೆಲವು ರೋಗಿಗಳು ತಮ್ಮ ರೋಗಗಳನ್ನು ಮುಚ್ಚಿಡುವ ಕಾರಣ ಅವರ ಸೋಂಕು ಅವರ ವೈದ್ಯರಿಗೆ ತಗಲುವ ಸಂಭವ ಇಲ್ಲದಿಲ್ಲ. ಉದಾಹರಣೆಗಾಗಿ; ಏಡ್ಸ್ ಎಚ್‌ಐವಿ ಪೀಡಿತ ರೋಗಿಗಳ ದಂತ ತಪಾಸಣೆ ಮಾಡುವ ದಂತ ವೈದ್ಯರು ಚಿಕಿತ್ಸೆ ನೀಡುವ ಸಂದರ್ಭಗಳಲ್ಲಿ ಏಡ್ಸ್ ಎಚ್‌ಐವಿ ಸೋಂಕು ತಗಲಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ ಎಂದು ದಿಲ್ಲಿಯ ಏಮ್ಸ್ ಆಸ್ಪತ್ರೆಯ ವೈದ್ಯರೊಬ್ಬರ ಅಂಬೋಣ. ಟಿಬಿ ಕಾಯಿಲೆ ಪೀಡಿತ ರೋಗಿಗಳಿಗೆ ಶುಶ್ರೂಷೆ ನೀಡುವ ವೈದ್ಯರಿಗೂ ಈ ಮಾತು ಅನ್ವಯಿಸುತ್ತದೆ. ಇನ್ನು ಹಲವಾರು ಗಂಟೆಗಳಷ್ಟು ಅವಧಿಯ ವೇಳೆ ನಿಂತು ಅಥವಾ ಬಗ್ಗಿ ಶಸ್ತ್ರ ಚಿಕಿತ್ಸೆ ಮಾಡುವ ಸಂದರ್ಭ ಬಂದಾಗ ಅಂತಹ ವೈದ್ಯರಿಗೆ ಮಾನಸಿಕ ಒತ್ತಡದ ಜತೆ ದೇಹಾಯಾಸವು ಸಾಕಷ್ಟಾಗುತ್ತದೆ ಎಂದು ತಮ್ಮ ಅನುಭವಗಳನ್ನು ದಿಲ್ಲಿ ಮೂಲದ ಡಾ. ಅಪರ್ಣ ಹಾಗೂ ಡಾ. ಶಿಲ್ಪಾ ಅವರು ಹೇಳಿಕೊಳ್ಳುತ್ತಾರೆ. ‘‘ಚಿಕಿತ್ಸೆ ಫಲಕಾರಿಯಾಗದಿರುವ ಸಂದರ್ಭಗಳಲ್ಲಿ ಕೆಲವು ವೈದ್ಯರ ಸಲಹೆ ಮೇಲೆ ಹಲ್ಲೆಗೊಳಗಾಗುವುದೂ ಇದೆ’’ ಎಂದು ದಿಲ್ಲಿಯ ಡಾ. ಖರ್ಬಂಡಾ ಹೇಳುತ್ತಾರೆ. ‘‘ನಮ್ಮ ಕೆಲಸದ ಒತ್ತಡದಿಂದ ಹೊರಬರಲು ಕೆಲವು ಹವ್ಯಾಸಗಳು ನಮಗೆ ನೆರವಾಗುತ್ತವೆ’’ ಎನ್ನುತ್ತಾರೆ ಒತ್ತಡ ತಗ್ಗಿಸಲು ಪೈಂಟಿಂಗ್ ಅನ್ನು ಹವ್ಯಾಸ ಮಾಡಿಕೊಂಡಿರುವ ಡಾ. ಅರ್ಪಣಾ ಅವರು. ಹಾಗೆ ಮಾಡುವುದರಿಂದ ಮುಂದಿನ ಕೆಲಸ ಸುಲಭ ಎಂದು ಅವರ ಅಂಬೋಣ. ವೈದ್ಯರ ಕುರಿತು ಹೇಳುವಾಗ ಕೇವಲ 1.2 ಕೋಟಿ ಜನಸಂಖ್ಯೆ ಹೊಂದಿರುವ ಪುಟ್ಟ ದೇಶ ಕ್ಯೂಬಾದ ಹೆಸರನ್ನು ಉಲ್ಲೇಖಿಸದಿದ್ದರೆ ಈ ಲೇಖನ ಪೂರ್ಣವಾಗದು.

ಉತ್ತಮ ವೈದ್ಯರನ್ನು ಹೊಂದಿರುವ ಕ್ಯೂಬಾ ತನ್ನ ಪ್ರಜೆಗಳಿಗೆ ಮಾತ್ರವಲ್ಲ ಇತರ ದೇಶಗಳ ಪ್ರಜೆಗಳಿಗೂ ಉತ್ತಮ ವೈದ್ಯಕೀಯ ಸೇವೆ ನೀಡಿ ಜಗತ್ತಿನ ನಂಬರ್ ಒನ್ ಸ್ಥಾನದಲ್ಲಿದೆ. ಜಗತ್ತಿನ 103 ದೇಶಗಳಲ್ಲಿ ಇಲ್ಲಿನ ಸುಮಾರು ಅರ್ಧಲಕ್ಷಕ್ಕೂ ಹೆಚ್ಚಿನ ವೈದ್ಯರು ತಮ್ಮ ಸೇವೆ ನೀಡಿ ಸೈ ಎನಿಸಿಕೊಂಡಿದ್ದಾರೆ. ಆಫ್ರಿಕಾದಲ್ಲಿ ಹರಡಿದ ಎಬೋಲಾ ರೋಗ ಪೀಡಿತರ ಆರೈಕೆ ಮಾಡಲು ಈ ದೇಶ ತನ್ನ 500 ಮಂದಿ ವೈದ್ಯರನ್ನು ಕಳಿಸಿತ್ತು. ತಮ್ಮ ಪ್ರಾಣವನ್ನು ಪಣಕ್ಕೊಡ್ಡಿ ಈ ವೈದ್ಯರು ಆಫ್ರಿಕಾದ ಎಬೋಲಾ ಪೀಡಿತರ ಶುಶ್ರೂಷೆ ಮಾಡಿದ್ದರ ಸಲುವಾಗಿ ಇವರನ್ನು ನೊಬೆಲ್ ಪುರಸ್ಕಾರಕ್ಕೂ ಶಿಫಾರಸು ಮಾಡಲಾಗಿತ್ತು. ಇನ್ನು ಕಳೆದ ಸಾಲಿನ ಬ್ರೆಝಿಲ್ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಡಿಲ್ಮಾ ಕೌಸೆಫ್ ಇವರ ಮರು ಆಯ್ಕೆಗೆ ಕಾರಣವಾಗಿದ್ದು, ಇದೇ ಕ್ಯೂಬಾ ದೇಶದ ವೈದ್ಯರ ಸಮೂಹ. ಬ್ರೆಝಿಲ್‌ನ ವೈದ್ಯರು ಅಲ್ಲಿನ ಕುಗ್ರಾಮಗಳಿಗೆ ಹೋಗಿ ಸೇವೆ ಸಲ್ಲಿಸಲು ನಿರಾಕರಿಸಿದಾಗ ಡಿಲ್ಮಾ ಕೌಸೆಫ್ ಕೋರಿಕೆಯಂತೆ ಕ್ಯೂಬಾದಿಂದ ಬ್ರೆಝಿಲ್‌ಗೆ ಕಳಿಸಲಾದ 11 ಸಾವಿರ ವೈದ್ಯರು ಅಲ್ಲಿನ ಕುಗ್ರಾಮಗಳಿಗೆ ತೆರಳಿ ನಿಷ್ಠೆಯಿಂದ ಸೇವೆ ಸಲ್ಲಿಸಿದ ಕಾರಣ ಡಿಲ್ಲಾ ಕೌಸೆಫ್ ಆಯ್ಕೆಯಾಗಿ ಬರಲು ಸಾಧ್ಯವಾಯಿತು. ಇಲ್ಲಿನ ವೈದ್ಯರ ನಿಷ್ಠೆಯ ಸೇವೆಗಾಗಿ ಜಗತ್ತೇ ಇಂದು ಈ ಪುಟ್ಟ ದೇಶವನ್ನು ಬೆರಗುಗಣ್ಣುಗಳಿಂದ ನೋಡುತ್ತಿದೆ. ವೈದ್ಯರಿಂದ ಏನೆಲ್ಲ ಆಗಬಹುದು ಎಂಬುದಕ್ಕೆ ಕ್ಯೂಬಾ ಉದಾಹರಣೆಯಾಗಿದೆ.

Writer - ಕೆ. ಶಾರದಾ ಭಟ್

contributor

Editor - ಕೆ. ಶಾರದಾ ಭಟ್

contributor

Similar News