ರಾಮಲೀಲೆ ಮತ್ತು ರಾಮರಾಜ್ಯ

Update: 2016-10-19 18:47 GMT

ಹಿಂದೂ ದೇಶಭಕ್ತರಿಗೆ ಸಂತೋಷವಾಗುವ ಸುದ್ದಿಯೊಂದಿದೆ: ಹಿಂದಿ ರಂಗಭೂಮಿ ಮತ್ತು ಚಲನಚಿತ್ರಗಳ ಖ್ಯಾತ ನಟ ನವಾಝುದ್ಧೀನ್ ಸಿದ್ದೀಕಿ ತನ್ನ ಹುಟ್ಟೂರಾದ ಮುಝಪ್ಫರ್ ನಗರದಲ್ಲಿ ಕಳೆದ ಅಕ್ಟೋಬರ್ 11ರಂದು ನವರಾತ್ರಿ ಸಂಬಂಧ ನಡೆಯುವ ರಾಮ್ ಲೀಲಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿದ್ದು ಆತ ಭಾಗವಹಿಸಲಿಲ್ಲ ಮಾತ್ರವಲ್ಲ, ಒಟ್ಟು ರಾಮ್ ಲೀಲಾ ಕಾರ್ಯಕ್ರಮವೇ ರದ್ದಾಗಿದೆ. ಕಾರಣ ಇಷ್ಟೇ: ಅಲ್ಲಿ ನಡೆಯಬೇಕಾಗಿದ್ದ ರಾಮಾಯಣ ನಾಟಕದಲ್ಲಿ ಆತ ಮಾರೀಚನ ಪಾತ್ರವನ್ನು ವಹಿಸುವುದರಲ್ಲಿದ್ದ. ಆದರೆ ಆತ ಮುಸ್ಲಿಂ ಆಗಿರುವುದರಿಂದ ಭಾಗವಹಿಸಬಾರದೆಂದು ಅಲ್ಲಿನ ಹಿಂದೂ ನಾಯಕರು ಫರ್ಮಾನ್ ಹೊರಡಿಸಿದರು. ಅಲ್ಲಿನ ಪೊಲೀಸ್ ಅಧೀಕ್ಷಕರು ಈ ರದ್ದತಿಯನ್ನು ದೃಢಪಡಿಸಿದ್ದಾರೆ. ಆದರೂ ನವಾಝುದ್ಧೀನ್ ಸಿದ್ದೀಕಿ ನಿರಾಶನಾಗದೆ ತಾನು ಈ ನಾಟಕಕ್ಕೆ ಸಾಕಷ್ಟು ತಯಾರಿ ನಡೆಸಿರು ವುದಾಗಿಯೂ ಈ ಬಾರಿ ರದ್ದಾದರೇನಂತೆ ಮುಂದಿನ ವರ್ಷ ಮತ್ತೆ ಬರುವುದಾಗಿಯೂ ಆಸೆ ವ್ಯಕ್ತಪಡಿಸಿದ್ದಾರೆ. ಟಿವಿ ಕಲಾವಿದೆ ಮಿನಿ ಮಾಥುರ್ ತಮ್ಮ ಟ್ವೀಟ್‌ನಲ್ಲಿ ಈ ಬೆಳವಣಿಗೆಯನ್ನು ಖಂಡಿಸಿ ‘‘ಹೀಗಾದರೆ ಮುಂದೆ ಶಾರುಕ್ ರಾಜ್ ಆಗಲು, ಸಲ್ಮಾನ್ ಪ್ರೇಮ್ ಆಗಲು, ಆಮಿರ್ ಫೋಗತ್ ಆಗಲು ಸಾಧ್ಯವಿಲ್ಲವೇನೋ’’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಚುನಾವಣೆ ಸಮೀಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಹಿಂದೂ ಸಂಘಟನೆಗಳ ವಿರೋಧ ಯಾರಿಗೂ ಬೇಡ. ಇನ್ನೂ ಹೆಚ್ಚಾಗಿ ಹೇಳುವುದಾದರೆ ಕೇಂದ್ರದಲ್ಲಿ ಮೋದಿ ಸರಕಾರವಿರುವಾಗ ಹಿಂದೂ ಸಂಘಟನೆಗಳು ಹೇಳಿದ್ದನ್ನು ಮೀರುವ ಮತ್ತು ಹಕ್ಕನ್ನು ಪ್ರತಿಪಾದಿಸುವ ಧೈರ್ಯ ಯಾರಿಗೂ ಇದ್ದಂತಿಲ್ಲ. ಒಂದು ಕೈಯ್ಯಲ್ಲಿ ಚಿವುಟಿ ಇನ್ನೊಂದು ಕೈಯ್ಯಲ್ಲಿ ಸಮಾಧಾನಪಡಿಸುವ ಅದ್ಭುತವಾದ ತಂತ್ರವನ್ನು ಕರಗತಮಾಡಿಕೊಂಡ ಪ್ರಧಾನಿ ಒಂದೆಡೆ ಅಲ್ಪಸಂಖ್ಯಾತರ ರಕ್ಷಣೆ ಬಗ್ಗೆ ಮಾತನಾಡುತ್ತ ಗಣರಾಜ್ಯೋತ್ಸವಕ್ಕೆ ಅಬುಧಾಬಿಯ ರಾಜಕುಮಾರನನ್ನು ಅತಿಥಿಯಾಗಿ ಆಹ್ವಾನಿಸುತ್ತ (ಆತನೂ ಮುಸ್ಲಿಮನೇ!) ಇನ್ನೊಂದೆಡೆ ನಾಥೂರಾಮ ಗೋಡ್ಸೆಯ ಪ್ರತಿಮೆಯನ್ನು ಹಿಂದೂ ಮಹಾಸಭಾದವರು ಉತ್ತರ ಪ್ರದೇಶದಲ್ಲಿ ಗಾಂಧಿ ಜಯಂತಿಯಂದೇ ಅನಾವರಣಮಾಡಿದ್ದನ್ನು ಗಮನಿಸದಂತಿರುತ್ತ ವಿಜಯದಶಮಿಯನ್ನು ಉತ್ತರಪ್ರದೇಶದಲ್ಲೇ ಆಚರಿಸುತ್ತ ಈ ದೇಶವನ್ನು ನಿಜವಾಗಿಯೂ ಜಾತ್ಯತೀತವಾಗಿಸುತ್ತಿದ್ದಾರೆ. ಹಾಗೆಂದು ಮೋದಿಯನ್ನಷ್ಟೇ ದೂಷಿಸಿಯೂ ಪ್ರಯೋಜನವಿಲ್ಲ. ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್ ಯಾದವರ ಸಮಾಜವಾದಿ ಪಕ್ಷವು ತನ್ನೊಳಗಿನ ಯಾದವೀ ಕಲಹಕ್ಕೆ ಔಷಧಿ ಹಚ್ಚುತ್ತಲೇ ಇನ್ನೂ ಹಸಿಯಾಗಿರುವ ದಾದ್ರಿ ಘಟನೆಯ ಆನಂತರವೂ ಈ ಎಲ್ಲ ಕೋಮುವಾದಿ ಚಟುವಟಿಕೆಗಳನ್ನು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಲೇ ಬಂದಿದೆ. ಅಯೋಧ್ಯೆಯ ಸಂದರ್ಭದಲ್ಲಿ ಹೀಗೆ ಇಬ್ಬಂದಿತನದ ರಾಜಕೀಯ ಮಾಡಹೊರಟ ಕಾಂಗ್ರೆಸ್ ಹೇಗೆ ಉತ್ತರ ಪ್ರದೇಶದಿಂದ ಗಾಡಿಕಟ್ಟಿದೆಯೆಂಬುದನ್ನು ನೋಡಿದರೆ ಯಾರೂ ಅಂತಹ ಸಾಹಸವನ್ನು ಮತ್ತೆ ಮಾಡಲಾರರು. ಆದರೆ ಸಾರ್ವಜನಿಕರಿಗೆ ಚರಿತ್ರೆಯ ನೆನಪು ಕ್ಷಣಿಕವಾದ್ದರಿಂದ ಜನತೆ ಎಲ್ಲರಿಗೂ ಅಂತಹ ತಪ್ಪುಮಾಡುವ ಅವಕಾಶವನ್ನು ಕಲ್ಪಿಸುತ್ತ ಬಂದಿದ್ದಾರೆ. ಇದು ನವಾಝುದ್ಧೀನ್ ಸಿದ್ದೀಕಿಯ ಪ್ರಶ್ನೆಯಲ್ಲ. ಪಾಕಿಸ್ತಾನದ ವಿರುದ್ಧದ ಕ್ರಮಗಳನ್ನು ಬೆಂಬಲಿಸುವ ಮಂದಿ ಅತೀವ ದೇಶಭಕ್ತಿಯನ್ನು ಪ್ರದರ್ಶಿಸುವ ಉತ್ಸಾಹದಲ್ಲಿ ಪಾಕಿಸ್ತಾನವನ್ನು ಮಾತ್ರವಲ್ಲ, ಅಲ್ಲಿನ ಕಲಾವಿದರನ್ನು, ಮತ್ತು ಎಲ್ಲ ರೀತಿಯ ಸಾಂಸ್ಕೃತಿಕ ಸಂಬಂಧಗಳನ್ನು ದೂರವಿಡುವ ಕೋಮುವಾದಿ ಕ್ರಮಗಳನ್ನೂ ಬೆಂಬಲಿಸುತ್ತಿದ್ದಾರೆ. ಕಲೆಗೆ ಜಾತಿ-ಜನಾಂಗ-ದೇಶ-ಭಾಷೆಯ ಗಡಿರೇಖೆಗಳಿಲ್ಲವೆಂಬುದನ್ನು ಹೇಳುವ (ಸಾಹಿತ್ಯ, ಸಂಗೀತ, ಚಿತ್ರಕಲೆ, ನಾಟಕ-ಸಿನೆಮಾ ಮುಂತಾದ ದೃಶ್ಯಕಲೆಯೂ ಸೇರಿದಂತೆ) ಅನೇಕ ಕಲಾವಿದರು ಈಗಾಗಲೇ ಈ ಪೀತಪ್ರವೃತ್ತಿಯ ಸ್ಪರ್ಧೆಯಲ್ಲಿ ಸಕ್ರಿಯರಾಗಿ ದ್ದಾರೆ. ಅಜಯ್ ದೇವಗನ್, ಅಕ್ಷಯ ಕುಮಾರ್ ಮುಂತಾದ ಪೂರ್ಣ ಪ್ರಮಾಣದ ನಟರು (ಅನುಪಮ್ ಖೇರ್, ಪರೇಶ್ ರಾವಲ್ ಮುಂತಾದ ರಾಜಕಾರಣಿ ನಟರನ್ನು ಹೊರತುಪಡಿಸಿ ಹೇಳುವುದಾದರೆ) ತಮ್ಮ ದೇಶಭಕ್ತಿಯನ್ನು ಯಾರೂ ಸಂದೇಹಿಸದಂತೆ (ಮತ್ತು ಪ್ರಾಯಶಷ ಹಿಂದಿ ಚಿತ್ರರಂಗದಲ್ಲಿ ಅನನ್ಯ ವೀಕ್ಷಕಾನುರಾಗವನ್ನೂ ಮಾರುಕಟ್ಟೆಯ ಮುಖ್ಯ ಪಾಲನ್ನೂ ಹೊಂದಿದ ಶಾರುಕ್, ಸಲ್ಮಾನ್, ಆಮಿರ್, ಸೈಫ್ ಅಲಿ ಖಾನ್ ಗಳನ್ನು ಒತ್ತರಿಸುವ ಉದ್ದೇಶವನ್ನು ಬಚ್ಚಿಟ್ಟುಕೊಂಡಂತೆ) ತಾವು ಪಾಕ್ ನಟರೊಂದಿಗೆ ಅಭಿನಯಿಸುವುದಿಲ್ಲವಾಗಿ ಘೋಷಿಸಿದ್ದಾರೆ. ಅಜಯ್ ದೇವಗನ್ ಪತ್ನಿ ಮತ್ತೋರ್ವ ಜನಪ್ರಿಯ ತಾರೆ ಕಾಜಲ್ ಪತಿಯ ಈ ದಿವ್ಯ ಸಂಕಲ್ಪದ ಜಲಧಾರೆಗೆ ಸಾಥ್ ಕೊಟ್ಟಿದ್ದಾರೆ. ಅಜಯ್ ದೇವಗನ್ ಅವರ ‘ಶಿವಾಯ’ ಯಶಸ್ಸು ಕಾಣಬೇಕಾದರೆ ಅದೇ ದಿನ ಬಿಡುಗಡೆಯಾಗಲಿರುವ ಮತ್ತು ಪಾಕ್ ನಟನೊಬ್ಬ ಅಭಿನಯಿಸಿರುವನೆಂಬ ನೆಪದಲ್ಲಿ ಐಶ್ವರ್ಯಾ ರೈ, ರಣಬೀರ್ ಕಪೂರ್ ಅನುಷ್ಕಾ ಶರ್ಮ ನಟಿಸಿರುವ ‘ಯೇ ದಿಲ್ ಹೆ ಮುಷ್ಕಿಲ್’ ತೆರೆಕಾಣಬಾರದು. ಇದಕ್ಕಾಗಿ ದೇಶಭಕ್ತಿಯ ಅಟ್ಟಹಾಸ. ಈ ಎಲ್ಲ ನಟನೆ ಈ ದೇಶವನ್ನು ಎಲ್ಲಿಗೆ ಒಯ್ಯುತ್ತದೋ ಗೊತ್ತಾಗುವುದಿಲ್ಲ. ಹಿಂದೂ ಸಂಸ್ಕೃತಿ ಬೇರೆ; ಹಿಂದೂ ಮತಾಂಧತೆ ಬೇರೆ. ನೀರಿಲ್ಲವೆಂದು ಅಣೆಕಟ್ಟೆಯನ್ನು ಒಡೆದಂತೆ ದೇಶಭಕ್ತಿಯ ಹೆಸರಿನಲ್ಲಿ ಒಂದೇ ಬಾರಿಗೆ ಈ ಬಹುಸಂಖ್ಯಾತ-ಅಲ್ಪಸಂಖ್ಯಾತ ವಿಭಜನೆಯನ್ನು ನಡೆಸುವವರಷ್ಟೇ ದುಷ್ಟರು ಎಂದು ತಪ್ಪುತಿಳಿಯಬೇಡಿ; ಈ ಬೆಳವಣಿಗೆಗಳನ್ನು ನೋಡಿಯೂ ನೋಡದವರಂತೆ ತಮ್ಮ ಪಾಡಿಗೆ ತಾವು ಚಳಿ ಕಾಯಿಸುತ್ತ ಕುಳಿತವರು ಇದರ ಪೋಷಕ ನಟರು. ದ್ರೌಪದಿಯ ವಸ್ತ್ರಾಪಹರಣಕ್ಕೆ ದುಶ್ಶಾಃಸನನನ್ನು ಮಾತ್ರ ಹಳಿಯುವಿರೇಕೆ? ಸಭೆಯಲ್ಲಿ ಮಂಡಿಸಿದ ಭೀಷ್ಮ, ದ್ರೋಣ, ಕೃಪರೂ ಕಾರಣರೇ!

  
ಈಗಾಗಲೇ ಕಲಾಕೃತಿಗಳಲ್ಲಿ, ಸ್ಮಾರಕಗಳಲ್ಲಿ, ಇಸ್ಲಾಂ ಕುರುಹುಗಳನ್ನು ಅಳಿಸುವ ಪ್ರಯತ್ನವು ನಡೆಯುತ್ತಿದೆ. ಅವು ಇಸ್ಲಾಂ ಮತಕ್ಕೆ ಸಂಬಂಧಿಸಿದ್ದಲ್ಲ. ಬದಲಾಗಿ ಇತಿಹಾಸಕ್ಕೆ ಸಂಬಂಧಿಸಿದ್ದು. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಾಮಿಯಾನ್ ಬುದ್ಧನನ್ನು ನಿರ್ನಾಮ ಮಾಡಿದಾಗ ಭಾರತವೂ ಪ್ರತಿಭಟಿ ಸಿದೆ. ಅದು ತಪ್ಪಾದರೆ ಭಾರತದಲ್ಲಿ ಈಗ ನಡೆಯುವ ಅನೇಕ ಇಂತಹ (ಕು)ಕೃತ್ಯಗಳೂ ತಪ್ಪೇ. ಆದರೂ ಆಳುವವರು ಈಗ ನಡೆದುಕೊಳ್ಳುವ ರೀತಿಯನ್ನು ಗಮನಿಸಿದರೆ, ಇಲ್ಲೊಂದು ಹಿಂದೂ ತಾಲಿಬಾನ್ ವರ್ಧ ಮಾನ ಸ್ಥಿತಿಯಲ್ಲಿದೆಯೆಂದು ಗೊತ್ತಾಗುತ್ತದೆ. ಇಂತಹ (ದು)ಸ್ಥಿತಿಯಲ್ಲಿ ಸಂವೇದನಾಶೀಲರೆಂದು (ಕೆಲವು ಬಾರಿ ತಮ್ಮನ್ನು ತಾವೇ) ಗುರುತಿಸಿಕೊಂಡ ಚಿಂತನಶೀಲರು, ಬುದ್ಧಿಜೀವಿಗಳು, ಮುಖ್ಯವಾಗಿ ಶಿಕ್ಷಣ-ಸಾಹಿತ್ಯ ಮುಂತಾದ ರಂಗದಲ್ಲಿರುವವರು ತಮ್ಮ ಚಿಂತನೆಯ ಸಿಲೆಬಸ್‌ನೊಳಗೆ ತಮ್ಮ ಅಧ್ಯಯನಶೀಲತೆಯ ಮುಖ-ಮುಖವಾಡವನ್ನು ಹೂತಿಟ್ಟುಕೊಂಡು ನಮಗೆ ಇದೆಲ್ಲ ಸಂಬಂಧವೇ ಇಲ್ಲ, ಅಥವಾ ನಾವಿದನ್ನು ಗಮನಿಸಿಯೇ ಇಲ್ಲ, ಅಥವಾ ನಾವು ಅಭಿವ್ಯಕ್ತಿಸಿ ಏನು ಪ್ರಯೋಜನ ಮುಂತಾದ (ಅನುಕೂಲಸಿಂಧು) ವೈರಾಗ್ಯವನ್ನು ಪ್ರಕಟಿಸಿದರೆ ಮುಂದಿನ ತಲೆಮಾರು ಮಾನಸಿಕ-ಬೌದ್ಧಿಕ ವಿಕಲಚೇತನರಾಗಿಯೇ ಹುಟ್ಟಬೇಕಷ್ಟೆ. ನಾವೀಗ ಸಂವಾದವೇ ಸಾಧ್ಯವಿಲ್ಲದ ಸ್ಥಿತಿಯೊಳಗಿದ್ದೇವೆಂದು ಅನು ಭಾವದ ಮಾತುಗಳನ್ನು ಸಾಹಿತಿಗಳು ಹೇಳುತ್ತಿದ್ದಾರೆ. ಆದರೆ ಈ ಸ್ಥಿತಿಗೆ ನಮ್ಮ ಅಪಾರ ಕೊಡುಗೆಯಿದೆಯೆಂಬ ಅಂಶವನ್ನು ಅವರು ಮರೆಯುತ್ತಾರೆ. ಎಲ್ಲ ಬಗೆಯ ಕಲಾಪ್ರಕಾರಗಳಲ್ಲೂ ತಮ್ಮ ತಮ್ಮ ಬ್ರಾಂಡನ್ನು ಒಂದಷ್ಟು ಸಮಾನ ಸುಖಿಗಳೊಂದಿಗೆ ಸೇರಿ ಮಾರುವ, ಎಲ್ಲ ಬಗೆಯ ಕಲಾ ವೈವಿಧ್ಯಗಳನ್ನೂ ಪ್ರಶಸ್ತಿ-ಪ್ರಚಾರ-ಪ್ರಸಿದ್ಧಿ-ಪ್ರತಿಷ್ಠೆಗಳನ್ನು ಪಡೆಯುವ ಸರಕುಗಳಾಗಿ ಮೂಡಿಸಿ, ಅವನ್ನು ಮಾಧ್ಯಮಗಳ ಮುಖಾಂತರ ಸ್ವಹಿತಕ್ಕಾಗಿ ಬಳಸುವ ಚಿಂತಕರು ಉಗ್ರಗಾಮಿಗಳಿಗಿಂತ ಕಡಿಮೆಯೇನಲ್ಲ. ಈ ನಿಧಾನ ವಿಷವು ಸಮಾಜವನ್ನು ವ್ಯಾಪಿಸುತ್ತಿದೆ. ಹಿಂದೆಲ್ಲ ರಾಜ ಕಾರಣಿಗೆ ಮುಂದಿನ ಚುನಾವಣೆಯ ಕುರಿತಷ್ಟೇ ಬಕಧ್ಯಾನವೆಂಬ ಟೀಕೆಯಿತ್ತು; ಆದರೆ (ಅಪವಾದಗಳ ಹೊರತಾಗಿ) ಸತ್ತಂತಿರುವ ನಮ್ಮ ಚಿಂತಕ-ಲೇಖಕ-ಕಲಾವಿದರಿಗೆ ಮುಂದಿನ ವರ್ಷದ-ಸಾಲಿನ ಪ್ರಶಸ್ತಿಯ ಕುರಿತಷ್ಟೇ ಧ್ಯಾನವೆಂದು ಕಾಣಿಸುತ್ತಿದೆ. ಈ ಪ್ರಬಂಧ ಪ್ರಶಸ್ತಿಗಳ ಕುರಿತು ಅಲ್ಲವಾದರೂ ಒಂದಂಶವನ್ನು ಹೇಳದೇ ಹೋದರೆ ತಪ್ಪಾದೀತು: ಕಾಂಗ್ರೆಸ್ ಸರಕಾರವಿದ್ದರೆ ಅವರ ಪರವಿರುವವರಿಗೆ ಪ್ರಶಸ್ತಿ; ಬಿಜೆಪಿ ಸರಕಾರವಿದ್ದರೆ ಅವರ ಪರವಿರುವವರಿಗೆ ಪ್ರಶಸ್ತಿ! ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ಗಮನಿಸಿ: ಬಿಜೆಪಿ ಕಾಲದಲ್ಲಿ ಪ್ರತಾಪ್ ಸಿಂಹಗಳಿಗೆ ಪ್ರಶಸ್ತಿ ಬಂದರೆ ಕಾಂಗ್ರೆಸ್ ಕಾಲದಲ್ಲಿ ಭಗವಾನ್‌ಗಳಿಗೆ ಪ್ರಶಸ್ತಿ! ಈ ಎರಡೂ ಪಕ್ಷಗಳನ್ನು ವಸ್ತುನಿಷ್ಠರಾಗಿ ಟೀಕಿಸಿದವರಿಗೆ ಯಾರಕಾಲದಲ್ಲೂ ಮನ್ನಣೆಯೇ ಇಲ್ಲ! ಈ ಜಾಡ್ಯವು ಪದ್ಮ ಪ್ರಶಸ್ತಿಗಳನ್ನೂ, ಕೇಂದ್ರ ಸರಕಾರ ಕೊಡುವ ಇತರ ಪ್ರಶಸ್ತಿಗಳನ್ನೂ ಮಾತ್ರವಲ್ಲ, ಖಾಸಗಿಯಾದ ಜ್ಞಾನಪೀಠಗಳನ್ನೂ ಬಿಟ್ಟಿಲ್ಲವೆನ್ನುವುದು ನೈಜ ಪ್ರಜಾಪ್ರಭುತ್ವದ (ದು) ಸ್ಥಿತಿಯನ್ನು ಹೇಳುತ್ತವೆ!
ಹೀಗಾದರೆ ಬಾಮಿಯಾನ್ ಬುದ್ಧನ ಗತಿ ತಾಜ್‌ಮಹಲ್, ಕುತುಬ್ ಮಿನಾರ್, ಮುಂತಾದ ಈ ದೇಶದ ಅಸಂಖ್ಯ ಕಲಾಪ್ರತೀಕಗಳಿಗೆ, ಅನೇಕ ಅಲ್ಪಸಂಖ್ಯಾತ ಕಲಾವಿದರಿಗೆ ಬಂದರೆ ಅಚ್ಚರಿಯಿಲ್ಲ. ಘಜನಿ ಮುಹಮ್ಮದ್, ಘೋರಿ ಮುಹಮ್ಮದ್ ವಿದೇಶಗಳಿಂದ ಬಂದರೆ, ಮುಂದಿನ ತಲೆಮಾರಿನ ನಾಶವು ಜಾತಿ ಲೆಕ್ಕದಲ್ಲಿ ನಮ್ಮ ಸ್ವದೇಶಿ ದೇಶಭಕ್ತರಿಂದಲೇ ನಡೆಯಬಹುದು. ಈಗಾಗಲೇ ಚರಿತ್ರೆಯನ್ನು ತಿದ್ದುವ, ಈ ತನಕದ ಇತಿಹಾಸವು ಯುರೋಪ್ ಇಲ್ಲವೇ ಕಮ್ಯುನಿಸ್ಟ್ ಪ್ರಣೀತವೆಂದು ದೂರುವ, ಕೂಗು ಕೇಳಿ ಬರುತ್ತಿದೆ. ಇತಿಹಾಸವನ್ನು ತಿದ್ದಲು ಹೊರಟರೆ ಅದಕ್ಕೆ ಕೊನೆಯೆಂಬುದಿಲ್ಲ. ಗಿರಿಶಿಖರದಲ್ಲಿ ಪ್ರತಿಯೊಬ್ಬರೂ ತಮ್ಮ ವಿಜಯ ಧ್ವಜವನ್ನೂರಲು ಹೊರಟರೆ ಯಾವುದು ಕೊನೆಗೆ ಉಳಿದೀತು ಎಂಬುದನ್ನು ಪಂಪ ಆದಿಪುರಾಣದಲ್ಲಿ ಮಾರ್ಮಿಕವಾಗಿ ಹೇಳಿಸಿದ್ದಾನೆ. ಹಾಗಿದ್ದರೂ ಪ್ರತಿಯೊಂದು ಸಂಘಟನೆಯೂ ಪ್ರತಿಯೊಬ್ಬ ನಾಯಕನೂ ತಾವು (ಮಾತ್ರ) ಶಾಶ್ವತವೆಂಬ ಕಲ್ಪನೆಯಿಂದ ತಮಗೆ ತಾವೇ ಗುಡಿ ಕಟ್ಟಲು ಹೊರಟಿದ್ದಾರೆ. ಇದು ಗುಡಿಯೇ, ಅಥವಾ ಗುಳಿಯೇ ಕಾಲವೇ ಹೇಳಬೇಕು.
ರಾಜರಿಲ್ಲದ ಮತ್ತು ಪ್ರಜಾರಾಜ್ಯದ ಈ ಕಾಲದಲ್ಲೂ ಜನರ ಭ್ರಮೆ ಹೇಗಿದೆಯೆಂದರೆ- ರಾಜಾ ಪ್ರತ್ಯಕ್ಷ ದೇವತಾಃ! ಮತ್ತು ರಾಜಾ ಕಾಲಸ್ಯ ಕಾರಣಂ! 1936ರ ಬರ್ಲಿನ್ ಒಲಿಂಪಿಕ್ಸ್‌ನಲ್ಲಿ ಕ್ರೀಡಾ ಧ್ವಜವಂದನೆಯನ್ನು ಸ್ವೀಕರಿಸಿದವನು ಹಿಟ್ಲರ್. ಆ ಕಾರಣಕ್ಕೆ ಆತ ಮುಂದೆ ಪೂಜ್ಯನೀಯನಾಗಲಿಲ್ಲ. ಅಧಿಕಾರವಿದ್ದಾಗ ಭವಿಷ್ಯವನ್ನು ಯೋಚಿಸದ ಎಲ್ಲ ಅಧಿಕಾರ-, ಸರ್ವಾಧಿಕಾರ-, ಮದಾಂಧರು ಸಾಂದರ್ಭಿಕ ಗೌರವವನ್ನು ದೈವತ್ವವೆಂದು, ನಿತ್ಯಸ್ಮರಣೀಯತನದ ಅರ್ಹತೆಯೆಂದು ತಪ್ಪುತಿಳಿಯುತ್ತಾರೆ. ಕೆಲವೇ ಮಂದಿಯ ಭಟ್ಟಂಗಿತನ, ಇನ್ನು ಕೆಲವರ ಹಷೋದ್ಗಾರ, ಮತ್ತು ಬಹುಜನರ ಮೌನ, ಇವುಗಳಿಂದಾಗಿ ಸಮಾಜ ಮತ್ತು ಆ ಮೂಲಕ ದೇಶ ತನ್ನ ಆರೋಗ್ಯವನ್ನು ಕೆಡಿಸಿಕೊಳ್ಳುತ್ತದೆ. ಹೇಗೆ ಒಬ್ಬ ಮನುಷ್ಯನ ಬುದ್ಧಿ ಸ್ತಿಮಿತಕ್ಕೆ ಆರೋಗ್ಯ ಅಗತ್ಯವೋ ಒಂದು ದೇಶದ ಬುದ್ಧಿಸ್ತಿಮಿತಕ್ಕೂ ದೇಶ ಆರೋಗ್ಯಕರವಾಗಿರಬೇಕಾದ್ದು ಅಗತ್ಯ. ಆರೋಗ್ಯವನ್ನು ಉಳಿಸಿಕೊಳ್ಳಲು ಜನರು ವಿಫಲರಾದರೆ ದೇಶವು ಗಾಂಧಿ ಕನಸಿನ ರಾಮರಾಜ್ಯವಾಗುವುದಿರಲಿ, ಮತ್ತೆ ಹಿಂದೆ ಬರಲಾರದಷ್ಟು ಆಳಕ್ಕಿಳಿಯುವುದು ಖಚಿತ. ಬಾಮಿಯಾನ್ ಬುದ್ಧ ಮತ್ತೆ ನಿರ್ಮಾಣವಾಗಲು ಅಸಾಧ್ಯ. ನಿರ್ಮಾಣವಾದರೂ ಅದು ಆ ಹಳೆಯ ಕಲಾಸಂಕೇತವಾಗಿ ಉಳಿಯಲು ಸಾಧ್ಯವಿರಲಿಲ್ಲ. ನಮ್ಮ ಎಷ್ಟು ಮಂದಿ ಇಂತಹ ಆರೋಗ್ಯವನ್ನು ಹೊಂದಿದ್ದಾರೆಂದು ಬರಲಿರುವ ದಿನಗಳು ಹೇಳಬಹುದು.
ರಾಮನ ಲೀಲೆಯನ್ನು ವರ್ಣಿಸಬಹುದು: ಆದರೆ ರಾಮಭಕ್ತರ ಲೀಲೆಯನು ವರ್ಣಿಪುದಸದಳ!

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News