ಪೇಜಾವರಶ್ರೀ - ದಿನೇಶ್ ಅಮಿನ್ ಮಟ್ಟು ಜಗಳ್ಬಂದಿ!
ಪೇಜಾವರ ಸ್ವಾಮೀಜಿಯವರಿಗೆ ಗೌರವಪೂರ್ವಕ ನಮನಗಳು.
ಇದು ಬಹಿರಂಗವಾಗಿ ನಾನು ಬರೆಯುತ್ತಿರುವ ಎರಡನೇ ಪತ್ರ. ಹಿಂದೊಮ್ಮೆ ನಾನು ಬರೆಯುತ್ತಿದ್ದ ಅಂಕಣದಲ್ಲಿ ನಿಮಗೊಂದು ಪತ್ರ ಬರೆದಿದ್ದೆ. ಅದಕ್ಕೆ ನೀವು ಗೌರವದಿಂದಲೇ ಪೋನಿನಲ್ಲಿ ಪ್ರತಿಕ್ರಿಯಿಸಿದ್ದೀರಿ. ಅದಕ್ಕೆ ಧನ್ಯವಾದಗಳು. ಈ ಪತ್ರಕ್ಕೂ ಅಷ್ಟೇ ಆಸಕ್ತಿಯಿಂದ ಪ್ರತಿಕ್ರಿಯಿಸುತ್ತೀರಿ ಎಂದು ನಾನು ನಂಬಿದ್ದೇನೆ. ಇದು ವೈಯಕ್ತಿಕ ನೆಲೆಯಲ್ಲಿ ಬರೆಯುತ್ತಿರುವ ಪತ್ರ. ಈ ಪತ್ರಕ್ಕೂ ನಾನು ಸರ್ಕಾರದಲ್ಲಿ ಹೊಂದಿರುವ ಹುದ್ದೆಗಾಗಲಿ ಇಲ್ಲವೆ ದಲಿತ-ದಮನಿತರ ಸ್ವಾಭಿಮಾನ ಹೋರಾಟ ಸಮಿತಿಗಾಗಲಿ ಯಾವ ಸಂಬಂಧವೂ ಇಲ್ಲ. ಜವಾಬ್ದಾರಿಯುತ ನಾಗರಿಕನಾಗಿ ಕರ್ತವ್ಯ ಪ್ರಜ್ಞೆಯಿಂದ ಈ ಪತ್ರ ಬರೆಯುತ್ತಿದ್ದೇನೆ ಎಂದು ಸ್ಪಷ್ಟನೆಯನ್ನೂ ನೀಡಬಯಸುತ್ತೇನೆ.
ವಿವರಗಳಿಗೆ ಹೋಗುವುದಿಲ್ಲ. ನಿಮ್ಮೂರಿನಲ್ಲಿ ನಡೆದ ಉಡುಪಿ ಚಲೋ ಕಾರ್ಯಕ್ರಮ ಮತ್ತು ಅದರ ನಂತರದ ಬೆಳವಣಿಗೆಗಳು ನಿಮಗೆ ಗೊತ್ತಿದೆ. ಈ ಬಗ್ಗೆ ಹೆಚ್ಚುಕಡಿಮೆ ಪ್ರತಿದಿನ ನೀವು ಪ್ರತಿಕ್ರಿಯಿಸುತ್ತಿದ್ದೀರಿ. ಪೇಜಾವರ ಸ್ವಾಮಿಗಳನ್ನೇ ಯಾಕೆ ಕೆಣಕುತ್ತೀರಿ? ಬೇರೆಯವರಿಲ್ವೆ ? ಎಂದು ನಮ್ಮವರು-ನಿಮ್ಮವರು ಸೇರಿಯೇ ಕೆಲವರು ಕೇಳುತ್ತಿರುತ್ತಾರೆ. ನೀವು ಕೂಡಾ ಆ ಪ್ರಶ್ನೆಯನ್ನು ಕೇಳಿದ್ದೀರಿ. ನಿಮ್ಮ ಹೆಸರೆತ್ತಿ ನಾನು ಮಾತನಾಡಿರುವುದರಿಂದ ನನಗೆ ತಿಳಿದ ರೀತಿಯಲ್ಲಿ ಈ ಪ್ರಶ್ನೆಗೆ ಉತ್ತರಿಸುತ್ತೇನೆ.
ವೈಯಕ್ತಿಕವಾಗಿ ನನಗೆ ನಿಮ್ಮ ಬಗ್ಗೆ ಗೌರವ ಇದೆ. ಇದು ಬಾಯುಪಚಾರದ ಮಾತಲ್ಲ. ನಿಮ್ಮನ್ನೇ ಯಾಕೆ ಎಂಬ ನಿಮ್ಮ ಪ್ರಶ್ನೆಗೆ ತಿರುಗಿ ‘ನನ್ನನ್ನೇ ಯಾಕೆ?’ ಎಂದು ನಾನು ಮರುಪ್ರಶ್ನಿಸಬಹುದು. ಯಾಕೆಂದರೆ ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಯಾವ ಮೂಲೆಯಲ್ಲಿ ಪ್ರಗತಿಪರರಿಂದ ಸಣ್ಣ ಪ್ರತಿಭಟನೆ,ಪ್ರತಿರೋಧ, ಚಳುವಳಿ, ಜಾಥಾಗಳು ನಡೆದರೂ ಕೂಡಾ ಅದರ ಹಿಂದೆ ನನ್ನ ಕುಮ್ಮಕ್ಕು ಇದೆಯೆಂದು ನಿಮ್ಮ ಸ್ನೇಹಿತರು ತೀರ್ಮಾನಿಸಿ ನನ್ನ ಮೇಲೆ ಅತ್ಯಂತ ಕೀಳು ಶಬ್ದಗಳಲ್ಲಿ ವೈಯಕ್ತಿಕವಾಗಿ ದಾಳಿ ನಡೆಸುತ್ತಾರೆ.
ನನ್ನ ಮೇಲಿನ ಅವರ ಆಕ್ರೋಶಕ್ಕೆ ಕಾರಣ ಇರಬಹುದು. ನಾನು ಸರಿಕಂಡದ್ದನ್ನು ಮುಲಾಜಿಲ್ಲದೆ ಸಮರ್ಥಿಸಿಕೊಂಡಿದ್ದೇನೆ, ಸರಿಕಾಣದ್ದನ್ನು ನಿರ್ಭಿತಿಯಿಂದ ಖಂಡಿಸಿದ್ದೇನೆ. ಮುಂದೆಯೂ ಮಾಡುತ್ತೇನೆ. ಇದಕ್ಕಾಗಿಯೇ ನನ್ನ ಮೇಲೆ ದಾಳಿ ನಡೆಸಲಾಗುತ್ತಿದೆ. ನಾನು ಬಾಯಿಮುಚ್ಚಿಕೊಂಡು ಕೂತಿದ್ದರೆ ಯಾರೂ ನನ್ನ ಸುದ್ದಿಗೆ ಬರುತ್ತಿರಲಿಲ್ಲ. ಇದು ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡವರೆಲ್ಲ ತೆರಬೇಕಾದ ಬೆಲೆ. ನೀವು ಕೂಡಾ ಇದಕ್ಕೆ ಹೊರತಲ್ಲ.
ಕೇವಲ ಪೂಜೆ-ಪುನಸ್ಕಾರ, ಮಡಿ-ಮೈಲಿಗೆ ಹೀಗೆ ನಿಮಗೆ ಸರಿಕಂಡ ಧಾರ್ಮಿಕ ವಿಚಾರಗಳಿಗಷ್ಟೇ ನಿಮ್ಮ ನಡೆ-ನುಡಿಯನ್ನು ಸೀಮಿತಗೊಳಿಸಿದ್ದರೆ ಯಾರೂ ನಿಮ್ಮ ಸುದ್ದಿಗೆ ಬರುತ್ತಿರಲಿಲ್ಲ. ಆದರೆ ನೀವು ದಲಿತೋದ್ಧಾರದಿಂದ ಹಿಡಿದು ರಾಮಜನ್ಮಭೂಮಿ ಚಳವಳಿಯ ವರೆಗೆ, ಕಾಂಗ್ರೆಸ್ ಬಿಜೆಪಿಯಿಂದ ಹಿಡಿದು ಕಮ್ಯುನಿಸ್ಟರ ವರೆಗೆ ಬಹುತೇಕ ಸಾರ್ವಜನಿಕ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುತ್ತಲೇ ಇದ್ದೀರಿ. ಇದರ ಜತೆ ಹಿಂದುಗಳೆಲ್ಲರನ್ನು ಒಂದು ಮಾಡಲು ಹೊರಟಿರುವ ವಿಶ್ವಹಿಂದೂ ಪರಿಷತ್ ನ ನಾಯಕರೂ ಕೂಡಾ ಆಗಿದ್ದೀರಿ. ಅಷ್ಟಮಠದ ಸ್ವಾಮಿಗಳು ಸರಿಯೋ? ತಪ್ಪೋ? ಅವರು ತಮ್ಮ ಮಠಗಳ ಎರಡೂ ಬಾಗಿಲುಗಳನ್ನು ಮುಚ್ಚಿ ಒಳಗೊಳಗೆ ತಮಗೆ ಸರಿಕಂಡದ್ದನ್ನು ಮಾಡುತ್ತಾ ಸುಖವಾಗಿ ಇದ್ದಾರೆ.
ನೀವು ಹಾಗಲ್ಲ. ಈಗಾಗಲೇ ಮಠದ ಒಂದು ಬಾಗಿಲು ತೆರೆದು ಒಂದು ಕಾಲುಹೊರಗಿಟ್ಟಿದ್ದೀರಿ. ಅಂದರೆ ನೀವು ಅಸ್ಪರ್ಶ್ಯತೆಯ ನಿವಾರಣೆಗಾಗಿ ದಲಿತರ ಕೇರಿಗೆ ಹೋಗಿಬಂದಿದ್ದೀರಿ. ಇದಕ್ಕೆ ನಿಮ್ಮವರಿಂದಲೇ ವ್ಯಕ್ತವಾದ ವಿರೋಧವನ್ನು ದಿಟ್ಟತನದಿಂದ ಎದುರಿಸಿದ್ದೀರಿ. ಈಗ ನೀವು ಮಾಡಬೇಕಾಗಿರುವುದು ಮುಚ್ಚಿದ ಎರಡನೆ ಬಾಗಿಲನ್ನು ತೆರೆದು ಎರಡನೇ ಕಾಲನ್ನೂ ಕೂಡಾ ಹೊರಗಿಟ್ಟು ದಲಿತರನ್ನು ಮಠದೊಳಗೆ ಕರೆತಂದು ಜೊತೆಯಲ್ಲಿ ಕೂರಿಸಿಕೊಳ್ಳಬೇಕು ಎಂದಷ್ಟೇ ನನ್ನಂತಹವನ ಕಳಕಳಿಯ ಮನವಿ. ಇಂತಹ ಕೆಲಸಕ್ಕೆ ಸ್ವಾಮಿ ವಿವೇಕಾನಂದರ ಚಿಂತನೆ ನಿಮಗೆ ಪ್ರೇರಣೆ ನೀಡಲಿ ಎಂದು ನಾನು ಆಶಿಸುತ್ತೇನೆ. ಇದನ್ನು ಮಾಡದೆ ಹೋದರೆ ಮಠದಲ್ಲಿ ಮುಚ್ಚಿರುವ ಅರ್ಧಬಾಗಿಲು ಮತ್ತು ಹೊರಗಿಟ್ಟ ನಿಮ್ಮ ಒಂದುಕಾಲು ನಿಮ್ಮ ಆತ್ಮವಂಚನೆಯ ನಡವಳಿಕೆಯ ಸಂಕೇತವಾಗಿ ಜಗತ್ತಿಗೆ ಕಾಣಿಸುತ್ತದೆ. ಈ ಕಾರಣಕ್ಕಾಗಿ ಮನವಿ. ಒತ್ತಡ,ಒತ್ತಾಯ ಎಲ್ಲವೂ. ಇದನ್ನು ತಪ್ಪಾಗಿ ಗ್ರಹಿಸಬೇಡಿ.
ಹೌದು ಸ್ವಾಮೀಜಿಗಳೇ,
ದೇವಸ್ಥಾನ ಸ್ಥಾಪನೆಯನ್ನು ಸಾಮಾಜಿಕ ಚಳುವಳಿಯ ಭಾಗವಾಗಿ ನಡೆಸಿ ಯಶಸ್ವಿಯಾದ ನಾರಾಯಣ ಗುರುಗಳ ಅನುಯಾಯಿ ನಾನು. ದಲಿತರು ಮತ್ತು ದಮನಿತರ ಬದುಕಿನ ಆದ್ಯತೆ ದೇವಸ್ಥಾನ ಪ್ರವೇಶ ಇಲ್ಲವೇ ಸಹಪಂಕ್ತಿಭೋಜನ ಖಂಡಿತ ಅಲ್ಲ. ಬಾಬಾಸಾಹೇಬ ಅಂಬೇಡ್ಕರ್ ಅವರು ಮಹಾಡ್ ಕೆರೆ ನೀರನ್ನು ಮುಟ್ಟಿರುವುದು ಬಾಯಾರಿಕೆಯಿಂದಲ್ಲ, ಕಾಳಾರಾಮ್ ದೇವಸ್ಥಾನ ಪ್ರವೇಶಿಸಿದ್ದು ದೇವರ ಮೇಲಿನ ಭಕ್ತಿ ಯಿಂದಲ್ಲ. ಸಂಕೇತಗಳು ಪ್ರತಿಭಟನೆ-ಚಳವಳಿಗಳ ಭಾಗವಾಗಿರುತ್ತದೆ. ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹದ ಹಿಂದೆ ಉಪ್ಪಿನ ಚಿಂತೆ ಮಾತ್ರ ಇರಲಿಲ್ಲವಲ್ಲಾ?
ದಲಿತ-ದಮನಿತರಿಗೆ ಗೌರವದ ಬದುಕಿನ ಜತೆಗೆ ಅಗತ್ಯವಾಗಿ ಬೇಕಾಗಿರುವುದು ಶಿಕ್ಷಣ, ಭೂಮಿ ಮತ್ತು ಅವಕಾಶ. ಇದನ್ನು ನೀವು ನೀಡಲಾರಿರಿ. ಆದರೆ ಈ ಬೇಡಿಕೆಗಳ ಈಡೇರಿಕೆಗಾಗಿ ನೀವು ಕೈಜೋಡಿಸಬಹುದು. ಇದರಿಂದ ಆ ಹೋರಾಟಕ್ಕೂ ಬಲಬರುತ್ತದೆ. ಇದು ಸಾಧ್ಯವಾಗಬೇಕಾದರೆ ದಲಿತ-ದಮನಿತರು ಮತ್ತು ನಿಮ್ಮ ನಡುವೆ ಇರುವ ಅಸ್ಪೃಶ್ಯತೆಯ ಗೋಡೆಯನ್ನು ಕೆಡವಿ ಅವರನ್ನುನಿಮ್ಮೊಳಗೆ ಬಿಟ್ಟುಕೊಡಬೇಕು. ಮನೆ-ಮನಸ್ಸುಗಳಿಂದ ಹೊರಗಿಟ್ಟು ನಾವೆಲ್ಲ ಒಂದು ಎಂದು ಹೇಳಿದರೆ ಹಿಪಾಕ್ರಸಿ ಆಗುತ್ತದೆ ಅಸ್ಪೃಶ್ಯತೆಯ ನಿವಾರಣೆಯ ನಿಮ್ಮ ಉದ್ದೇಶ ಪ್ರಾಮಾಣಿಕವೇ ಆಗಿದ್ದರೆ ನಿಮ್ಮ ನಡವಳಿಕೆ ಹಿಪಾಕ್ರಸಿ ಅಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡಬೇಕಾಗುತ್ತದೆ.
ಅಂತಹದ್ದೊಂದು ಅವಕಾಶ ನಿಮ್ಮ ಮಠದ ಅಂಗಳಕ್ಕೆ ಬಂದಿತ್ತು. ಆದರೆ ನೀವು ಅದನ್ನು ಬಳಸಿಕೊಳ್ಳಲಿಲ್ಲ, 'ಉಡುಪಿ ಚಲೋ' ಕಾರ್ಯಕ್ರಮವನ್ನು ಬೆಂಬಲಿಸಿ ಒಂದು ಹೇಳಿಕೆ ನೀಡಿದ್ದರೆ ನೀವು ಎಲ್ಲರ ಕಣ್ಣಲ್ಲಿ ದೊಡ್ಡವರಾಗಿ ಬಿಡುತ್ತಿದ್ದೀರಿ. ದಲಿತರ ಕೇರಿಗೆ ನೀವು ಹೋದಿರಿ, ಅವರೇ ನಿಮ್ಮ ಕೇರಿಗೆ ಬಂದಾಗ ಮುಖ ತಿರುಗಿಸಿ ಕೂತುಬಿಟ್ಟಿರಿ.
ಇಷ್ಟುಮಾತ್ರವಲ್ಲ ಕಿಡಿಗೇಡಿತನದಿಂದಲೇ ಹೊಟ್ಟೆ ತುಂಬಿಸಿಕೊಳ್ಳುತ್ತಿರುವ ವ್ಯಕ್ತಿಯೊಬ್ಬ ‘ಚಲೋ ಉಡುಪಿಯಿಂದ ಉಡುಪಿ ಮಲಿನವಾಗುತ್ತಿದೆ. ಇದನ್ನು ಸ್ವಚ್ಚಗೊಳಿಸಲು ಸ್ವಚ್ಚ ಉಡುಪಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ’ ಎಂಬ ಹೇಳಿಕೆಯನ್ನು ಕಾರ್ಯಕ್ರಮದ ಹಿಂದಿನ ದಿನ ನೀಡಿದ.
ಸ್ವಾಮೀಜಿಗಳೇ,
ಆ ಕ್ಷಣದಲ್ಲಿ ಅಂತಹ ಅವಮಾನಕಾರಿ ಹೇಳಿಕೆಯನ್ನು ನಾಲ್ಕು ಶಬ್ದಗಳಲ್ಲಿ ನೀವು ಖಂಡಿಸಿಬಿಟ್ಟಿದ್ದರೆ ನಿಮ್ಮ ಮೇಲಿನ ಗೌರವ ಇನ್ನಷ್ಟು ಹೆಚ್ಚಾಗುತ್ತಿತ್ತು. ಆದರೆ ನೀವು ಆಗ ಮಾತ್ರವಲ್ಲ, ನಂತರವೂ ಖಂಡಿಸಲಿಲ್ಲ. ಬದಲಿಗೆ ಪರೋಕ್ಷವಾಗಿ ಬೆಂಬಲಿಸಿದಿರಿ. ಈ ನಿಮ್ಮ ನಡವಳಿಕೆ ಆ ಕಿಡಿಗೇಡಿತನದ ಹಿಂದೆ ನೀವು ಇದ್ದಿರೇನೋ ಎಂಬ ಅನುಮಾನ ಹುಟ್ಟಲು ಕಾರಣವಾಗಿದೆ. ಈಗಲೂ ಕಾಲ ಮಿಂಚಿಲ್ಲ. ನೀವು ದಲಿತ-ದಮನಿತರನ್ನು ಮಾತ್ರವಲ್ಲ, ಈ ವರ್ಗದ ಪ್ರತಿನಿಧಿಯಾಗಿರುವ ಕನಕದಾಸರನ್ನೂ ಅವಮಾನಿಸುವ ಕಾರ್ಯಕ್ರಮವನ್ನು ನಿಲ್ಲಿಸುವಂತೆ ತಿಳಿಸಿ. ನಿಮ್ಮಮಾತನ್ನು ಕೇಳುವುದಿಲ್ಲವೆಂದಾದರೆ ಅವರು ನಿಮ್ಮವರಾಗುವುದಿಲ್ಲ ಸ್ವಾಮಿಗಳೆ.
‘ನಾನೇನೋ ಪ್ರಯತ್ನ ಮಾಡಬಹುದು, ದಲಿತ –ದಮನಿತರ ಸ್ವಾಭಿಮಾನ ಹೋರಾಟ ಸಮಿತಿ ತನ್ನ ಕಾರ್ಯಕ್ರಮವನ್ನು ಸ್ಥಗಿತಗೊಳಿಸುತ್ತೋ ?’ ಎಂದು ನೀವುಕೇಳಬಹುದು. ಅದೂ ಕಷ್ಟ ಇದೆ. ಯಾಕೆಂದರೆ ಅದಕ್ಕೆ ಒಬ್ಬ ನಾಯಕನಿಲ್ಲ, ಅದು ಸಾಮೂಹಿಕನಾಯಕತ್ವದ ಮೂಲಕ ನಡೆಯುತ್ತಿದೆ. ಹೀಗಿದ್ದರೂ ಬಹಳ ಕಾಲದಿಂದ ನಾನು ಬಲ್ಲ ಯುವಕ-ಯುವತಿಯರೇ ಆ ಸಂಘಟನೆಯಲ್ಲಿರುವುದರಿಂದ ಅವರ ಮನವೊಲಿಸಬಹುದು ಎಂಬ ಭರವಸೆ ನನಗಿದೆ. ಅವರು ನನ್ನೊಬ್ಬನ ಮಾತನ್ನು ಖಂಡಿತ ಕೇಳಲಾರರು. ಆದರೆ ಅವರ ಕೋರಿಕೆಯಂತೆ ಕಾರ್ಯಕ್ರಮದ ಜತೆ ಗುರುತಿಸಿಕೊಂಡಿರುವ ನೂರಾರು ಹಿರಿಯರಿದ್ದಾರೆ, ಮಠ-ಮಂದಿರಗಳ ಸ್ವಾಮೀಜಿಗಳಿದ್ದಾರೆ, 165ಕ್ಕೂ ಹೆಚ್ಚು ಸಂಘಟನೆಗಳ ಸಹಭಾಗಿತ್ವ ಇದೆ. ಈ ಹಿರಿಯರ , ಸ್ವಾಮೀಜಿಗಳ ಮತ್ತು ಸಂಘಟನೆಗಳ ನಾಯಕರ ಮನವಿಗೆ ದಲಿತ-ದಮನಿತರ ಸ್ವಾಭಿಮಾನ ಹೋರಾಟ ಸಮಿತಿ ಸ್ಪಂದಿಸಬಹುದೇನೋ?
ಇದಕ್ಕಾಗಿ ಹಿರಿಯರಾದ ನಿಮ್ಮ ಸಹಕಾರ ಅಗತ್ಯ. ಮೊದಲು ಸ್ವಚ್ಛ ಉಡುಪಿ, ಕನಕ ನಡಿಗೆ ಹೀಗೆ ದಿನಕ್ಕೊಂದು ಹೆಸರು ಕೊಟ್ಟು ದಲಿತರನ್ನು ಲೇವಡಿಮಾಡುವ ಉದ್ದೇಶದಿಂದ ನಡೆಸಲಾಗುತ್ತಿರುವ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಅದರ ಸಂಘಟಕರಿಗೆ ಬುದ್ದಿ ಹೇಳಿ.. ಅದೇ ರೀತಿ ಸ್ವಾಭಿಮಾನ ನಡಿಗೆಯನ್ನೂ ನಿಲ್ಲಿಸುವಂತೆ ಸಮಿತಿಗೆ ಮತ್ತು ಅದರ ಜತೆ ಗುರುತಿಸಿಕೊಂಡಿರುವ ಹಿರಿಯರಿಗೆ, ಸ್ವಾಮೀಜಿಗಳಿಗೆ ಹಾಗೂ ಸಂಘಟನೆಗಳಿಗೆ ಮನವಿಮಾಡಿ. ಉಳಿದದ್ದನ್ನು ಪರಸ್ಪರ ಕೂತು ಚರ್ಚಿಸಬಹುದು.
ಈ ಎರಡೂ ಕಾರ್ಯಕ್ರಮಗಳು ನಡೆದುಹೋದರೆ ಉಡುಪಿಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಪೊಲೀಸರಿಗೂ ಕಷ್ಟವಾಗಬಹುದು. ಅಹಿತಕಾರಿ ಘಟನೆಗಳು ನಡೆದುಹೋದರೆ ಎರಡು ಸಂಘಟನೆಗಳು ಮಾತ್ರವಲ್ಲ ನಾವು-ನೀವು ಎಲ್ಲರೂ ಜವಾಬ್ದಾರರಾಗುತ್ತೇವೆ.
ಪ್ರೀತಿಯಿಂದ
ದಿನೇಶ್ ಅಮಿನ್ ಮಟ್ಟು
***************************************************************************************************************
ಪೇಜಾವರ ಮಠದ ಸ್ವಾಮಿಗಳು ಇಂದು ಸಂಜೆ ಎರಡು ಗಂಟೆಗಳ ಅವಧಿಯಲ್ಲಿ ಎರಡು ಬಾರಿ ಪೋನ್ ಮಾಡಿ ಮಾತನಾಡಿದರು.ದ್ವೇಷದ ಮಾತುಗಳಿಂದ ಕಲ್ಲಾಗಿ ಹೋಗಿರುವ ಮನಸ್ಸು ಕೂಡಾ ಪ್ರೀತಿಯ ಎರಡು ಹನಿಗಳಿಗೆ ಕರಗಿಬಿಡುತ್ತದೆ. ಇಂತಹ ದೌರ್ಬಲ್ಯ ಸರಿಯೋ ತಪ್ಪೋ ಗೊತ್ತಿಲ್ಲ, ಇದೆಲ್ಲ ಮನುಷ್ಯ ಸಹಜವಾದುದು ಎಂದಷ್ಟೆ ಹೇಳಬಹುದೇನೋ?
ಪೇಜಾವರ ಸ್ವಾಮಿಜಿಗಳು ಮೊದಲು ಪೋನ್ ಮಾಡಿದಾಗ ನನಗೆ ಹೀಗೆಯೇ ಆಯಿತು. ಅವರು ಹಲೋ’ಎಂದಾಕ್ಷಣ ನನಗರಿವಿಲ್ಲದಂತೆಯೇ “ಸಾರಿ’ಸ್ವಾಮಿಗಳೇ, ನಿಮ್ಮ ಬಗ್ಗೆ ಸ್ವಲ್ಪ ಕಟುವಾಗಿ ಮಾತನಾಡಿಬಿಟ್ಟೆನೇನೋ”ಎಂದು ಬಿಟ್ಟೆ. ಇದರಿಂದ ಅವರೇ ಮುಜುಗರಕ್ಕೀಡಾದಂತೆ ಕಂಡರು.
ಮೊದಲು ಪೋನ್ ಮಾಡಿದಾಗ ‘’ಅವರು ನನ್ನ ಮಾತೆಲ್ಲಿ ಕೇಳುತ್ತಾರೆ ?’ಎಂದು ಅನುಮಾನ ವ್ಯಕ್ತಪಡಿಸಿದ ಸ್ವಾಮಿಗಳು, ಮತ್ತೆ ಪೋನ್ ಮಾಡಿ ‘ಉಡುಪಿಯ ಸುತ್ತಲಿನ ರಥಬೀದಿಯನ್ನಷ್ಟೇ ಅವರು ಸ್ವಚ್ಚ ಮಾಡುತ್ತಾರೆ. ಉಡುಪಿ ಚಲೋ ಸಾಗಿಬಂದ ರಸ್ತೆ ಕಡೆ ಅವರು ಹೋಗುವುದಿಲ್ಲ. ಇದಕ್ಕಿಂತ ಹೆಚ್ಚು ನಾನೇನು ಮಾಡಲಾರೆ’ಎಂದರು.
ಸಂಭಾಷಣೆ ಹೀಗೆ ಸಾಗಿತ್ತು:
ನಾನು: ನಿಮ್ಮ ಪ್ರಯತ್ನಕ್ಕೆ ಕೃತಜ್ಞತೆಗಳು. ಉಡುಪಿ ಸ್ವಚ್ಚಗೊಳಿಸುತ್ತೇವೆ ಎಂದು ಅವರು ಹೇಳಿದಾಗಲೇ ನೀವು ಬೇಡ ಎಂದು ಹೇಳಿಬಿಟ್ಟಿದ್ದರೆ ಇಷ್ಟೊಂದು ಬೆಳೆಯುತ್ತಲೇ ಇರುತ್ತಿರಲಿಲ್ಲಾ ಸ್ವಾಮಿಗಳೇ.
ಸ್ವಾಮೀಜಿಗಳು: ’ ಉಡುಪಿ ಚಲೋದಿಂದ ಮಲಿನಗೊಂಡಿರುವ ಉಡುಪಿಯನ್ನು ಸ್ವಚ್ಚಗೊಳಿಸುತ್ತೇವೆ ಎಂದು ಹೇಳಿರುವುದು ನನಗೆ ಗೊತ್ತಿರಲಿಲ್ಲ. ನಿಮ್ಮ ಕಾರ್ಯಕ್ರಮದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳನ್ನು ಓದಿದಾಗಲೇ ಹೀಗೆಲ್ಲ ನಡೆದಿತ್ತು ಎಂದು ಗೊತ್ತಾಗಿದ್ದು. ಉಡುಪಿ ಚಲೋ ಕಾರ್ಯಕ್ರಮದ ವಿಷಯ ಗೊತ್ತಾದ ನಂತರ ರಾಜಶೇಖರ್ (ಕೋಟ್ಯಾನ್) ಅವರಿಗೆ ಪೋನ್ ಮಾಡಿ ಮಟ್ಟು ಮತ್ತು ದ್ವಾರಕನಾಥ್ ಅವರನ್ನು ಮಠಕ್ಕೆ ಕರೆದುಕೊಂಡು ಬರಲು ತಿಳಿಸಿದ್ದೆ. ನೀವು ಬಂದಿದ್ದರೆ ಮಾತನಾಡಬಹುದಿತ್ತು.
ನಾನು: ಈಗಲೂ ಮಾತನಾಡಬಹುದು. ಅದಕ್ಕೆಂದೇ ಪತ್ರ ಬರೆದಿದ್ದೆ. ಈಗಲೂ ಕಾಲಮಿಂಚಿಲ್ಲ, ನಿಮ್ಮವರಿಗೆ ಹೇಳಿ ಸ್ವಚ್ಚ ಉಡುಪಿ,ಕನಕ ನಡಿಗೆ ಇತ್ಯಾದಿ ಹೆಸರಲ್ಲಿ ನಡೆಯುತ್ತಿರುವ ಸಾರ್ವಜನಿಕ ಕಾರ್ಯಕ್ರಮವನ್ನು ಕೈಬಿಡಲು ಅವರಿಗೆ ಹೇಳಿಬಿಡಿ.
ಸ್ವಾಮಿಗಳು: ಎಲ್ಲ ಸಿದ್ದತೆಯಾಗಿಬಿಟ್ಟಿದೆಯಂತೆ, ಅವರು ನಮ್ಮ ಮಾತು ಎಲ್ಲಿ ಕೇಳುತ್ತಾರೆ?
ನಾನು: ಅವರು ಉಡುಪಿಯ ಬೀದಿಗಳಲ್ಲಿ ಕಾರ್ಯಕ್ರಮ ನಡೆಸಿದರೆ ಸ್ವಾಭಿಮಾನ ನಡಿಗೆಯೂ ನಡೆಯ ಬಹುದು. ಎಲ್ಲ ಜಿಲ್ಲೆಗಳಿಂದ ಜನ ಬರುತ್ತಾರೆ. ಹಲವಾರು ಸ್ವಾಮೀಜಿಗಳು ಬರಬಹುದು. ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತಿರುವ ಕಾರಣ ಅವರನ್ನು ನಿಲ್ಲಿಸುವುದು ಕೂಡಾ ಕಷ್ಟ.
ಸ್ವಾಮೀಜಿ: ಗೋರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಕಾನೂನುಬಾಹಿರ ಕೆಲಸಗಳನ್ನು ಹಿಂದೆಯೂ ಖಂಡಿಸಿದ್ದೇನೆ. 23ರಂದು ಮಠದಲ್ಲಿ ನಡೆಯುವ ಸಭೆಯಲ್ಲಿಯೂ ಖಂಡಿಸುತ್ತೇನೆ. ಇಷ್ಟು ಮಾತ್ರ ಅಲ್ಲ, ಚಲೋ ಉಡುಪಿ ಯಲ್ಲಿ ಪ್ರಸ್ತಾಪವಾದ ಭೂಮಿಯ ಹಕ್ಕಿನ ಬಗ್ಗೆ ಕೂಡಾ ಮಾತನಾಡುತ್ತೇನೆ. ಉಡುಪಿ ಮಠವನ್ನು ಬಿಟ್ಟುಬಿಡಿ. ದಲಿತರಿಗಾಗಿ ಇಷ್ಟೊಂದು ಕೆಲಸಮಾಡಿದ ನಂತರವೂ ನಮ್ಮನ್ನೇ ಪ್ರಶ್ನಿಸುತ್ತಿರಲ್ಲಾ?
ನಾನು: ಸ್ವಾಮೀಜಿಗಳೇ, ಕೆಲಸಗಳ್ಳರನ್ನು ಯಾರೂ ಕೇಳುವುದಿಲ್ಲ, ಕೆಲಸಮಾಡುವವರಿಂದ ಇನ್ನೂ ಹೆಚ್ಚಿನ ಕೆಲಸ ನಿರೀಕ್ಷಿಸುತ್ತಾರೆ. ನೀವು ಸಾರ್ವಜನಿಕ ವಿಷಯಗಳ ಬಗ್ಗೆ ಸ್ಪಂದಿಸುತ್ತಿರುವ ಕಾರಣ ನಿಮ್ಮನ್ನು ಪ್ರಶ್ನೆ ಮಾಡಲಾಗುತ್ತಿದೆ. ಇದರಲ್ಲಿ ವೈಯಕ್ತಿಕವಾದುದೇನೂ ಇಲ್ಲ. ಈಗಲೂ ಕಾಲ ಮಿಂಚಿಲ್ಲ. ನಿಮ್ಮ ಮನವಿಯ ಹೊರತಾಗಿಯೂ ಬೀದಿ ಸ್ವಚ್ಚಗೊಳಿಸಲೇಬೇಕೆಂದು ಅವರಾದರೂ ಯಾಕೆ ಹಠ ಮಾಡುತ್ತಾರೆ. ಮಠದೊಳಗೆ ಕಾರ್ಯಕ್ರಮ ನಡೆಸಬಹುದಲ್ಲಾ? ಬೀದಿಯಲ್ಲಿ ಕಾರ್ಯಕ್ರಮ ನಡೆಸಿದರೆ ಅವರೂ ಬೀದಿಯಲ್ಲಿಯೇ ಸ್ವಾಭಿಮಾನ ನಡಿಗೆ ನಡೆಸಬಹುದು.
ಸ್ವಾಮೀಜಿ:‘’ ನನಗೂ ಇತಿಮಿತಿಗಳಿವೆ. ಇದನ್ನು ಇಷ್ಟಕ್ಕೆ ಬಿಟ್ಟುಬಿಡಿ, ಬೆಳೆಸುವುದು ಬೇಡ. ಆಮೇಲೆ ರಾಜಕೀಯವೆಲ್ಲ ಶುರುವಾಗಿಬಿಡುತ್ತೆ. ಅದಕ್ಕೆ ಅವಕಾಶ ಮಾಡಿಕೊಡುವುದು ಬೇಡ. ನಾನು ದಲಿತರ ಪರವಾಗಿದ್ದೇನೆಂದು ಅವರಿಗೆ ಹೇಳಿ. ನೀವೂ ಮಠಕ್ಕೆ ಬನ್ನಿ, ಕೂತು ಮಾತನಾಡುವ.
ನಾನು: ನಮಸ್ಕಾರ. ನಿಮ್ಮ ಪ್ರಯತ್ನ ಮುಂದುವರಿಸಿ, ಫಲಪ್ರದವಾದರೆ ತಿಳಿಸಿ ಸ್ವಾಮೀಜಿಗಳೇ.