ಯಾದವ ಕಲಹ ಕವಲು ದಾರಿಯಲ್ಲಿ ಅಖಿಲೇಶ್
ಲಕ್ನೋದಲ್ಲಿ ಕೆಲವು ದಿನಗಳ ಹಿಂದೆ ನಡೆದ ವಿದ್ಯಮಾನಗಳು ಉತ್ತರಪ್ರದೇಶದ ಅತಿ ದೊಡ್ಡ ರಾಜಕೀಯ ಕುಟುಂಬ ವೊಂದರಲ್ಲಿ ಹೊಗೆಯಾಡುತ್ತಿದ್ದ ಬಿಕ್ಕಟ್ಟನ್ನು ಬಯಲಿಗೆ ತಂದಿದೆ. ಇದೊಂದು ಅಖಿಲೇಶ್ ಯಾದವ್ ವಿರುದ್ಧ ನಡೆದ ‘ಅರಮನೆ ಯೊಳಗಿನ ಬಂಡಾಯ’ದಂತಿದೆ. ತನ್ನ ಪುತ್ರ ಅಖಿಲೇಶ್ ಯಾದವ್ ವಸ್ತುಶಃ ಅವಮಾನಕ್ಕೊಳಗಾಗಿರುವುದಕ್ಕೆ ತಾನೇ ಕಾರಣರಾಗಿದ್ದಾರೆ. ತನ್ನ ಪರಂಪರೆಯನ್ನು ಮುಂದಕ್ಕೊಯ್ಯಲು ತಾನೇ ಆಯ್ಕೆ ಮಾಡಿದ ಮಗನ ವಿರುದ್ಧ ಬಂಡಾಯವೇಳಲು ಯತ್ನಿಸಿದ ತಂದೆಯನ್ನು ನೀವು ಈವರೆಗೆ ಕಂಡಿದ್ದೀರಾ?. ಸೋಮವಾರ ನಡೆದ ಸಭೆಯಲ್ಲಿ ಚರ್ಚೆಯಾಗಿರುವುದು ಅಖಿಲೇಶ್ ಯಾದವ್ ಅವರನ್ನು ಬಲವಂತವಾಗಿ ಅಧಿಕಾರ ತ್ಯಜಿಸುವಂತೆ ಮಾಡಲು ಹಾಗೂ ಮುಲಾಯಂ ಸಿಂಗ್ ಯಾದವ್‌ರನ್ನು ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರತಿಷ್ಠಾಪಿಸಲು ವ್ಯವಸ್ಥಿತವಾಗಿ ಆಯೋಜಿಸಿದ ಒಂದು ನಾಟಕವಾಗಿದೆ.
ಸಾರ್ವಜನಿಕ ವ್ಯಕ್ತಿಯೂ ಉತ್ತರಪ್ರದೇಶದ ಮುಖ್ಯಮಂತ್ರಿಯೂ ಆದ ತನ್ನ ಪುತ್ರನನ್ನೇ ಮುಲಾಯಂ ಅವರು ಬಹಿರಂಗವಾಗಿ ಅವಮಾನಿಸಿರುವುದು ಜನತೆಗೆ ಹಿಡಿಸಿಲ್ಲ. ಒಂದು ವೇಳೆ ಮುಲಾಯಂ ಮುಖ್ಯಮಂತ್ರಿಯಾಗಲು ಯತ್ನಿಸಿದರೆ ಅಥವಾ ಬೇರೆ ಯಾರನ್ನಾದರೂ ಆ ಸ್ಥಾನದಲ್ಲಿ ಕುಳ್ಳಿರಿಸಲು ಯತ್ನಿಸಿದಲ್ಲಿ ಅದು ಅವರಿಗೇ ತಿರುಗುಬಾಣವಾಗಲಿದೆ. ಅಖಿಲೇಶ್ ಯಾದವ್ ಅವರು ಸರಿಯಾದುದನ್ನೇ ಮಾಡಿದ್ದಾರೆ. ಆದರೆ ಅವರು ಅದನ್ನು ಇನ್ನೂ ಹೆಚ್ಚು ಶಕ್ತಿಯುತವಾಗಿ ಪ್ರತಿಪಾದಿಸಬೇಕಾಗಿದೆ. ‘ನೀವೇ ನನ್ನ ಗುರು’ ಎಂದು ಹೇಳುವುದರಿಂದ ಯಾವ ಪ್ರಯೋಜನವೂ ಇಲ್ಲ. ಮುಲಾಯಂಗೆ ಗುರುವಿನ ಪಟ್ಟ ಕಟ್ಟುವುದು ಅಖಿಲೇಶ್ ಪಾಲಿಗೆ ವಿನಾಶಕಾರಿಯಾಗಲಿದೆ. ತನ್ನ ತಂದೆಯ ರಾಜಕಾರಣವು ಹೊಂದಾಣಿಕೆಗಳು ಹಾಗೂ ತೋಳ್ಬಲವಲ್ಲದೆ ಮತ್ತೇನೂ ಅಲ್ಲವೆಂಬುದನ್ನು ಅವರು ಮನಗಾಣಬೇಕಿದೆ ಹಾಗೂ ಅವುಗಳಿಂದ ಅವರು ದೂರವುಳಿಯಬೇಕಾಗಿದೆ. ಈಗ ಕಾಲ ಬದಲಾಗಿದೆ ಹಾಗೂ ನೂತನ ರಾಜಕಾರಣವು ಹಳೆಯ ಜಾತಿ ಲೆಕ್ಕಾಚಾರದಿಂದ ಮಾತ್ರವೇ ನಡೆಯಲಾರದು. ರಾಜ್ಯವೊಂದರ ಮುಖ್ಯಮಂತ್ರಿಯು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು ಹಾಗೂ ಸಮರ್ಥವಾಗಿ ಕಾರ್ಯನಿರ್ವಹಿಸಬೇಕು. ಅದೃಷ್ಟವಶಾತ್ ಅಖಿಲೇಶ್‌ಗೆ ನಾವು ರಾಜಕಾರಣದಲ್ಲಿ ಸಾಮಾನ್ಯವಾಗಿ ಕಾಣುವಂತಹ ಯಾವುದೇ ಕಳಂಕವಿಲ್ಲ. ಅವರು ಕೆಲವೊಂದು ಒಳ್ಳೆಯ ಕೆಲಸಗಳನ್ನು ಕೂಡಾ ಮಾಡಿದ್ದಾರೆ. ಆದರೆ ಶಿವಪಾಲ್‌ಸಿಂಗ್ ಮತ್ತವರ ಕಂಪೆನಿಯು ಅದಕ್ಕೆ ಅವಕಾಶ ನೀಡುತ್ತಿಲ್ಲ. ಅಖಿಲೇಶ್ ಬಗ್ಗೆ ಜನರಲ್ಲಿ ಸದಭಿಪ್ರಾಯವಿದೆ ಹಾಗೂ ಹೊಸತಲೆಮಾರಿನ ಪಕ್ಷಕ್ಕೆ ಅವರು ಶುಭಚಿಹ್ನೆಯಾಗಲಿದ್ದಾರೆಯೇ ಹೊರತು ಮುಖವಾಡ ಕಳಚಲ್ಪಟ್ಟ ಮುಲಾಯಂ ಹಾಗೂ ಶಿವಪಾಲ್ ಅವರಲ್ಲ.
ಅಮರ್‌ಸಿಂಗ್ ವಿರುದ್ಧ ಏನೂ ಹೇಳಿದರೂ ಕೇಳಲಾರೆನೆಂದೂ, ತಾನು ಜೈಲಿಗೆ ಹೋಗದಂತೆ ತಪ್ಪಿಸಿದವರು ಅವರೆಂದು ಮುಲಾಯಂ ಹೇಳಿಕೊಂಡಿರುವುದು ಅವರ ಮೇಲೆ ಅಮರ್‌ಸಿಂಗ್‌ಗೆ ಬಿಗಿಯಾದ ಹಿಡಿತವಿರುವುದನ್ನು ಸೂಚಿಸುತ್ತದೆ. ಅಮರ್‌ಗೆ ಮುಲಾಯಂ ಅವರ ರಹಸ್ಯಗಳು ತಿಳಿದಿವೆಯೇ?. ಮುಲಾಯಂರನ್ನು ರಕ್ಷಿಸಲು ಅಮರ್‌ಸಿಂಗ್ ಯಾರು?, ತನಗೆ ಬೇಕಾದವರನ್ನು ರಕ್ಷಿಸಲು ಅಮರ್‌ಸಿಂಗ್ ಯಾವ ತಂತ್ರಗಳನ್ನು ಅನುಸರಿಸುತ್ತಾರೆ?. ಬಹುಶಃ ಮುಲಾಯಂ ಜೈಲಿಗೆ ಹೋಗದಂತೆ ಅಮರ್‌ಸಿಂಗ್ ಹೇಗೆ ರಕ್ಷಿಸಿದ್ದಾರೆಂಬ ಬಗ್ಗೆ ಮುಂದಿನ ದಿನಗಳಲ್ಲಿ ಯಾರಾದರೂ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡುವ ಸಾಧ್ಯತೆಯಿದೆ.
ಪ್ರಾಮಾಣಿಕವಾಗಿ ಹೇಳುವುದಾದರೆ, ಈ ಎಲ್ಲಾ ಮಾತುಗಳು ಅತ್ಯಂತ ಕೆಟ್ಟ ಅಭಿರುಚಿಯಿಂದ ಕೂಡಿದ್ದಾಗಿವೆ. ದೇಶದ ಪ್ರಧಾನಿಯಾಗಲು ಹಂಬಲಿಸುವ ವ್ಯಕ್ತಿಯೊಬ್ಬ, ತನ್ನನ್ನು ತಾನೇ ಜನಸಮೂಹದ ನಾಯಕನೆಂದು ಬಣ್ಣಿಸಿಕೊಳ್ಳುತ್ತಾನೆ ಹಾಗೂ ಯಾವ ರಾಜಕೀಯ ಪಕ್ಷವೂ ವ್ಯವಹರಿಸಲು ಇಚ್ಛಿಸದಂತಹ ಹಾಗೂ ಚಾರಿತ್ರವಿಲ್ಲವೆಂದು ವ್ಯಕ್ತಿಯಿಂದ ವಸ್ತುಶಃ ಬ್ಲಾಕ್‌ಮೇಲ್‌ಗೆ ಒಳಗಾಗಲು ಅವಕಾಶ ನೀಡುತ್ತಾರೆ. ಲೋಹಿಯಾ ಪರಂಪರೆಯ ಉತ್ತರಾಧಿಕಾರಿಯೆಂದು ಹೇಳಿಕೊಳ್ಳುವ ವ್ಯಕ್ತಿಯು, ಒಂದು ಒಳ್ಳೆಯ ಉದ್ದೇಶವಿರುತ್ತಿದ್ದಲ್ಲಿ ಜೈಲಿಗೆ ಹೋಗುವ ಬಗ್ಗೆ ಯಾಕೆ ಹೆದರಿಕೊಳ್ಳುತ್ತಾರೆ?
ಒಂದು ವೇಳೆ ಮುಲಾಯಂಗೆ ತನ್ನ ಪುತ್ರ ಹಾಗೂ ಸಹೋದರನ ನಡುವೆ ಸಂಧಾನವೇರ್ಪಡಿಸುವ ಇಚ್ಛೆಯಿದ್ದಲ್ಲಿ, ಅವರು ತನ್ನ ಮನೆಯಲ್ಲಿ ಸಭೆ ಕರೆಯಬಹುದಿತ್ತು ಮತ್ತು ಯಾವುದೇ ಸಂದಿಗ್ಧತೆಯಿಲ್ಲದೆ ಮಾತನಾಡಬಹುದಿತ್ತು. ಆದರ ಬದಲು ಬಹಿರಂಗವಾಗಿ ಸಭೆ ನಡೆಸಿ ತನ್ನ ಪುತ್ರನನ್ನು ಅವಮಾನಿಸಿದ್ದಾರೆ. ತನ್ನ ಪುತ್ರ ಮಾತ್ರವೇ ಅಲ್ಲ, ಭಾರತದ ದೊಡ್ಡ ರಾಜ್ಯವೊಂದರ ಮುಖ್ಯಮಂತ್ರಿಯೂ ಆಗಿರುವ ಅಖಿಲೇಶ್‌ರನ್ನು ಮುಲಾಯಂ ಅಪಮಾನಿಸಿರುವುದು ಅತ್ಯಂತ ಬೇಜವಾಬ್ದಾರಿತನದ ವರ್ತನೆಯಾಗಿದೆ. ರಾಜ್ಯವೆಂಬುದು ಯಾರಾದರೂ ತಮಗಿಷ್ಟವಾದಂತೆ ಮಾಡಬಹುದಾದ ಜಹಗೀರಲ್ಲ. ತಾನು ಜನರನ್ನು ಹೇಗೆ ಬೇಕಾದರೂ ನಡೆಸಿಕೊಳ್ಳಬಲ್ಲೆನೆಂಬ ಮನಸ್ಥಿತಿಯಿಂದ ಮುಲಾಯಂ ಹೊರಬರಬೇಕಿದೆ. ರಾಜ್ಯದ ಉನ್ನತ ಅಧಿಕಾರಿಗಳು ಮುಖ್ಯಮಂತ್ರಿಯ ಆದೇಶವನ್ನು ಅನುಸರಿಸುವರೇ ಅಥವಾ ಇಲ್ಲವೇ?. ತಂದೆಯೊಬ್ಬನು ಮುಖ್ಯಮಂತ್ರಿಯಾದ ತನ್ನ ಮಗನಿಗೆ ‘‘ತುಮಾರಿ ಔಕತ್ ಕ್ಯಾ ಹೈ’’ (ನಿನ್ನ ಯೋಗ್ಯತೆ ಏನು) ಹಾಗೂ ‘‘ನೀನು ಆತನ ಕಾಲಿನ ಪಾದರಕ್ಷೆಗೂ ಸರಿಸಮಾನವಲ್ಲ’’ವೆಂದು ಹೇಳಿದರೆ ಹೇಗೆ ತೋರುತ್ತದೆ?. ಕೆಲವೇ ದಿನಗಳ ಹಿಂದಿನವರೆಗೂ ಸಂಪುಟದಲ್ಲಿ ಸಚಿವನಾಗಿದ್ದು, ಈಗ ರಾಜ್ಯದಲ್ಲಿ ಪಕ್ಷದ ಅಧ್ಯಕ್ಷರಾಗಿರುವವರು ತನ್ನ ಮುಖ್ಯಮಂತ್ರಿಯು ಸುಳ್ಳು ಹೇಳುತ್ತಿದ್ದಾರೆಂದು ಆರೋಪಿಸಿದರೆ ಹೇಗೆ ಕಾಣುತ್ತದೆ. ಒಂದು ವೇಳೆ ಅಖಿಲೇಶ್‌ನನ್ನು ಬಹಿರಂಗವಾಗಿ ಅವಮಾನಿಸಲೆಂದೇ ಈ ಸಭೆಯನ್ನು ಕರೆದಿದ್ದರೆ, ಮುಲಾಯಂ ತಾನಾಗಿಯೇ ತನ್ನ ಗುಟ್ಟನ್ನು ಹೊರಗೆಡವಿದ್ದಾರೆ. ಮುಲಾಯಂ ಅವರ ದೃಷ್ಟಿಯಲ್ಲಿ ಅಖಿಲೇಶ್‌ಗೆ ಯಾವುದೇ ಸ್ಥಾನಮಾನವಿಲ್ಲ. ಒಂದು ವೇಳೆ ಅಧಿಕಾರದಲ್ಲಿ ಉಳಿಯಬೇಕೆಂದಿದ್ದರೆ, ಅವರು ತಮ್ಮ ಅನುಕಂಪದ ನೆರಳಲ್ಲಿ ಇರಬೇಕು ಹಾಗೂ ಬರೀ ಕಾಗದದ ಹುಲಿಯಾಗಿರಬೇಕು. ತಾನು ಭ್ರಷ್ಟ ಹಾಗೂ ಕಳಂಕಿತ ಕುಟುಂಬದಲ್ಲಿ ಬಂಧಿಯಾಗಿಯೇ ಮುಂದುವರಿಯಬೇಕೇ ಅಥವಾ ತನ್ನಲ್ಲಿ ವಯಸ್ಸು ಹಾಗೂ ತೋರಿಸಬಲ್ಲಂತಹ ಸಾಧನೆ ಎರಡೂ ಇರುವಾಗ ಹೊಸ ದಿಗಂತಗಳನ್ನು ಅನ್ವೇಷಿಸಲು ತಾನು ಬಯಸುತ್ತಿರುವೆನೇ ಎಂಬುದನ್ನು ಅಖಿಲೇಶ್ ನಿರ್ಧರಿಸಬೇಕಾಗಿದೆ. ಅವರ ಪಕ್ಷ ಹಾಗೂ ಅದರ ನಾಯಕತ್ವವು ತೀವ್ರವಾಗಿ ಕಳಂಕಿತವಾಗಿರುವುದರಿಂದ ತಕ್ಷಣಕ್ಕೆ ಏನನ್ನೂ ಸಾಧಿಸಲು ಅವರಿಗೆ ಸಾಧ್ಯವಾಗಲಾರದು. ಸದ್ಯದ ಪರಿಸ್ಥಿತಿಯಲ್ಲಿ ಸಮಾಜವಾದಿ ಪಕ್ಷವು ಯಾವ ದಿಕ್ಕಿನಲ್ಲಿ ಸಾಗಲಿದೆಯೆಂಬುದು ನಮಗೆ ತಿಳಿಯಲು ಸಾಧ್ಯವಿಲ್ಲ. ಹೀಗಾಗಿ ಅಖಿಲೇಶ್ ಯಾದವ್ ಭವಿಷ್ಯದಲ್ಲಿ ತನ್ನ ಆದ್ಯತೆಗಳು ಹಾಗೂ ಸೈದ್ಧಾಂತಿಕ ನಿಲುವುಗಳನ್ನು ಬಹಿರಂಗಪಡಿಸದೆ ಹೋದಲ್ಲಿ ಆ ಪಕ್ಷಕ್ಕೆ ಮತ ನೀಡುವುದು ಅಪಾಯಕಾರಿಯಾಗಲಿದೆ. ಬಹಳಷ್ಟು ಸಮಯದ ಹಿಂದೆ, ಮುಲಾಯಂ ಸಿಂಗ್, ಕಾನ್ಶಿರಾಂ ಜೊತೆ ಕೈಜೋಡಿಸಿದಾಗ ಅವರೊಬ್ಬ ಐಕಾನ್ ನಾಯಕನಾಗಿದ್ದರು. ಆದರೆ ಆನಂತರ ಅವರ ನಡುವೆ ಅಂತರ ಹೆಚ್ಚತೊಡಗಿತು. ಸಮಾಜವಾದಿ ಪಕ್ಷ ಹಾಗೂ ಬಿಎಸ್ಪಿಗಳ ನಡುವೆ ಆಗ ಶಾಶ್ವತವಾದ ಅಂತರ ಏರ್ಪಟ್ಟಿತ್ತು. ಇಂದು ನಾವು ಕವಲು ದಾರಿಯಲ್ಲಿದ್ದೇವೆ ಹಾಗೂ ಉತ್ತರಪ್ರದೇಶದಲ್ಲಿ ಪ್ರಮುಖ ರಾಜಕೀಯ ಪಕ್ಷವೊಂದು ದುರ್ಬಲಗೊಳ್ಳುತ್ತಿರುವುದು ಹಿಂದುತ್ವವಾದಿ ಶಕ್ತಿಗಳಿಗೆ ಅಪಾರ ಸಂತಸ ತಂದಿದೆ. ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿ ಮಾಯಾವತಿಯನ್ನು ಬೆಂಬಲಿಸಲು ಅಖಿಲೇಶ್ ನಿರ್ಧರಿಸುವ ಸಾಧ್ಯತೆಯೂ ಇದೆ. ಒಂದು ವೇಳೆ ಹಾಗಾದಲ್ಲಿ, ಉಭಯ ಪಕ್ಷಗಳ ನಡುವೆ ಮೈತ್ರಿಯು ಮುರಿದುಬಿದ್ದ ಬಳಿಕ ದೇಶದಲ್ಲಿ ಶಕ್ತಿಶಾಲಿಯಾದ ಬಹುಜನ ಸಮಾಜ ಚಳವಳಿ ಹೊರಹೊಮ್ಮುವುದನ್ನು ನಾವು ಕಾಣಲಿದ್ದೇವೆ. ಒಂದು ವೇಳೆ ಅಖಿಲೇಶ್ ತನ್ನ ಕುಟುಂಬದ ನೆರಳಿನಿಂದ ಹೊರಬಂದು ಪಕ್ಷವನ್ನು ಕಟ್ಟಿದರೆ, ಸರಿಯಾದ ರಾಜಕೀಯ ಮೈತ್ರಿಯನ್ನು ಏರ್ಪಡಿಸಿದಲ್ಲಿ ಹಾಗೂ ಸೂಕ್ತವಾದ ನಿರ್ಧಾರವನ್ನು ಕೈಗೊಂಡಲ್ಲಿ, ಯಾವುದೇ ಬೆಲೆ ತೆತ್ತಾದರೂ ಉತ್ತರಪ್ರದೇಶವನ್ನು ತಮ್ಮದಾಗಿಸಿಕೊಳ್ಳಲು ಬಯಸುತ್ತಿರುವ ಫ್ಯಾಶಿಸ್ಟ್ ಶಕ್ತಿಗಳಿಂದ ರಕ್ಷಿಸಿದ ಮುತ್ಸದ್ದಿ ನಾಯಕನೆಂದು ಅವರ ಹೆಸರು ಇತಿಹಾಸದಲ್ಲಿ ದಾಖಲಾಗಲಿದೆ. ಸದ್ಯಕ್ಕೆ ಬಿಜೆಪಿಯು ಲಕ್ನೋದಲ್ಲಿ ಈ ಕುಟುಂಬ ಕಲಹವನ್ನು ನೋಡಿ ಆನಂದಿಸುತ್ತಿದೆ. ಬಿಎಸ್ಪಿ ಸರಿಯಾದ ನಿರ್ಧಾರವನ್ನು ಕೈಗೊಳ್ಳದೆ ಇದ್ದಲ್ಲಿ ಸಮಾಜವಾದಿ ಪಕ್ಷದಲ್ಲಿನ ಒಡಕು ಆ ಪಕ್ಷಕ್ಕೆ ಯಾವುದೇ ಪ್ರಯೋಜನವನ್ನುಂಟು ಮಾಡಲಾರದು.
ಒಂದು ವೇಳೆ ಅಖಿಲೇಶ್ ಯಾದವ್ ಮುಂಬರುವ ದಿನಗಳಲ್ಲಿ ತನ್ನ ಪಕ್ಷವನ್ನು ಕಟ್ಟಲು ಹೊಸ ರಾಜಕೀಯ ಇನಿಂಗ್ಸ್ ಆರಂಭಿಸಿದಲ್ಲಿ ಅಖಿಲೇಶ್‌ಗೆ ಬಹಳಷ್ಟು ಪ್ರಯೋಜನವಾಗಲಿದೆ. ಆದರೆ ಮುಂದಿನ ಚುನಾವಣೆಯಲ್ಲಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸುವುದಿಲ್ಲವೆಂದು ಅವರ ತಂದೆ ಸ್ಪಷ್ಟವಾಗಿ ಹೇಳಿರುವುದರಿಂದ, ಅದೊಂದು ಕಠಿಣವಾದ ನಿರ್ಧಾರವಾಗಲಿದೆ. ತನ್ನನ್ನು ಜೈಲಿಗೆ ಹೋಗುವುದರಿಂದ ಕಾಪಾಡಿದ ಹಾಗೂ ತನ್ನ ಪುತ್ರನನ್ನು ಸುಳ್ಳುಗಾರನೆಂದು ನಿಂದಿಸಿರುವ ಶಿವಪಾಲ್‌ರನ್ನು ತೊರೆಯಲು ಮುಲಾಯಂ ಸಿದ್ಧವಿಲ್ಲದಿರುವುದರಿಂದ, ತನ್ನ ಮುಂದಿನ ನಡೆಯನ್ನು ಅಖಿಲೇಶ್ ಸ್ವತಃ ನಿರ್ಧರಿಸಲೇಬೇಕಾಗಿದೆ.
ತನ್ನ ತಂದೆ ಹಾಗೂ ಚಿಕ್ಕಪ್ಪ ಅವರಿಗೆ ದೊರೆಯದಂತಹ ಜನತೆಯ ಸದ್ಭಾವನೆಯು ಅಖಿಲೇಶ್‌ಗೆ ಲಭಿಸಿದೆ. ಮುಲಾಯಂ ಹಾಗೂ ಶಿವಪಾಲ್ ತಮ್ಮ ಇನಿಂಗ್ಸ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಇನ್ನು ಏನಿದ್ದರೂ ಅವರು ತಂತ್ರಗಾರಿಕೆಗಳ ಮೂಲಕ ಮಾತ್ರವೇ ರಾಜಕೀಯದಲ್ಲಿ ಉಳಿದುಕೊಳ್ಳಬಹುದು. ಹೀಗಾಗಿ ತನ್ನ ನಿಲುವನ್ನು ಪ್ರತಿಪಾದಿಸಲು, ನಿರ್ಧರಿಸಲು ಹಾಗೂ ಕಾರ್ಯಪ್ರವೃತ್ತವಾಗಲು ಅಖಿಲೇಶ್‌ಗೆ ಇದು ಸಕಾಲವಾಗಿದೆ. ಆದರೆ ಅವರು ನಾಳೆಗೆಂದು ಕಾದರೆ ಕಾಲ ಮಿಂಚಿ ಹೋಗಲೂಬಹುದು.
ಕೃಪೆ: countercurrents.org
ಮುಲಾಯಂ ಅವರ ದೃಷ್ಟಿಯಲ್ಲಿ ಅಖಿಲೇಶ್‌ಗೆ ಯಾವುದೇ ಸ್ಥಾನಮಾನವಿಲ್ಲ. ಒಂದು ವೇಳೆ ಅಧಿಕಾರದಲ್ಲಿ ಉಳಿಯಬೇಕೆಂದಿದ್ದರೆ, ಅವರು ತಮ್ಮ ಅನುಕಂಪದ ನೆರಳಲ್ಲಿ ಇರಬೇಕು ಹಾಗೂ ಬರೀ ಕಾಗದದ ಹುಲಿಯಾಗಿರಬೇಕು. ತಾನು ಭ್ರಷ್ಟ ಹಾಗೂ ಕಳಂಕಿತ ಕುಟುಂಬದಲ್ಲಿ ಬಂದಿಯಾಗಿಯೇ ಮುಂದುವರಿಯಬೇಕೇ ಅಥವಾ ತನ್ನಲ್ಲಿ ವಯಸ್ಸು ಹಾಗೂ ತೋರಿಸಬಲ್ಲಂತಹ ಸಾಧನೆ ಎರಡೂ ಇರುವಾಗ ಹೊಸ ದಿಗಂತಗಳನ್ನು ಅನ್ವೇಷಿಸಲು ತಾನು ಬಯಸುತ್ತಿರುವೆನೇ ಎಂಬುದನ್ನು ಅಖಿಲೇಶ್ ನಿರ್ಧರಿಸಬೇಕಾಗಿದೆ.