ಎನ್ ಡಿಟಿವಿ ವಿರುದ್ಧ ಸ್ಥಗಿತ ಆದೇಶ ನೀಡಿದ ಕೇಂದ್ರ ಸರಕಾರಕ್ಕೆ ಕೆಲವು ಪ್ರಶ್ನೆಗಳು
ಪಠಾಣ್ ಕೋಟ್ ನಲ್ಲಿ ಉಗ್ರಗಾಮಿಗಳ ವಿರುದ್ಧ ಭದ್ರತಾಪಡೆ ನಡೆಸಿದ್ದ ಕಾರ್ಯಾಚರಣೆಯ ನೇರಪ್ರಸಾರ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟುಮಾಡಿದೆ ಎನ್ನುವುದು ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಅಂತರಸಚಿವ ಖಾತೆಗಳ ಸಮಿತಿಯ ಆರೋಪ. ಈ ತಪ್ಪಿಗೆ ಶಿಕ್ಷೆಯ ರೂಪದಲ್ಲಿ ಎನ್ ಡಿಟಿವಿ ಚಾನೆಲ್ ಅನ್ನು ನವಂಬರ್ 9ರಂದು ಸ್ಥಗಿತಗೊಳಿಸಲು ಸಮಿತಿ ಆದೇಶ ನೀಡಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರ ದೇಶದಾದ್ಯಂತ ಸಂಚಲನ ಉಂಟುಮಾಡಿದ್ದು ಪರ-ವಿರೋಧದ ವಾಗ್ವಾದ ನಡೆಯುತ್ತಿದೆ. ಸರ್ಕಾರದ ನಡೆಯನ್ನು ವಿರೋಧಿಸುತ್ತಿರುವವರ ಮೇಲೆ ಯಥಾಪ್ರಕಾರ ಒಂದಷ್ಟು ಟ್ರೋಲ್ ಗಳು ಎರಗಿಬೀಳುತ್ತಿದ್ದಾರೆ. ಕೆಲವರು ಚರ್ಚೆಯ ಹಾದಿ ತಪ್ಪಿಸಲು ಒಂದಿಷ್ಟು ಬಾಲಿಷ ಪ್ರಶ್ನೆಗಳನ್ನೂ ಕೇಳುತ್ತಿದ್ದಾರೆ. ಅಂತಹವರಿಗೂ ಕೆಲವು ಪ್ರಶ್ನೆಗಳಿವೆ.
1. ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯ ಪರಿಪೂರ್ಣವಾದುದಲ್ಲ. ಅದಕ್ಕೆ ಕೆಲವು ಷರತ್ತುಗಳ ಇತಿಮಿತಿಗಳಿವೆ. ಇದರ ಅಂಗವಾಗಿಯೇ ಮಾನನಷ್ಟ ಕಾಯಿದೆ ಇದೆ. ಇದರ ಜತೆಗೆ ಮಾಧ್ಯಮಗಳಿಂದ ಆಗುವ ಮಾನನಷ್ಟದ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಅವಕಾಶವೂ ಇದೆ. ಕೇಂದ್ರ ಸರ್ಕಾರ ಯಾಕೆ ದಾಖಲಿಸಿಲ್ಲ?
2. ಟಿವಿ ಚಾನೆಲ್ ಗಳ ವಿರುದ್ದದ ದೂರು ದಾಖಲೆಗಾಗಿ News broadcasting standard authority (ಸುದ್ದಿ ಪ್ರಸಾರ ಗುಣಮಟ್ಟ ಪ್ರಾಧಿಕಾರ) ಅಸ್ತಿತ್ವದಲ್ಲಿದ್ದು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರು ಇದರ ಅಧ್ಯಕ್ಷರಾಗಿರುತ್ತಾರೆ. ಟಿವಿ ಚಾನೆಲ್ ಗಳ ಕಾರ್ಯಕ್ರಮಗಳಿಂದ ನೊಂದವರು ಈ ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು. ಕೇಂದ್ರ ಸರ್ಕಾರ ಯಾಕೆ ದೂರು ಸಲ್ಲಿಸಿಲ್ಲ?
3. ಮಾಧ್ಯಮಗಳಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗವನ್ನು ತಡೆಯಲು ಕೇಂದ್ರ ಸರ್ಕಾರವೇ ಸ್ಥಾಪಿಸಿರುವ ಪತ್ರಿಕಾ ಮಂಡಳಿ ಇದೆ. ಇದರ ಜತೆಗೆ ಸಂಪಾದಕರ ಗಿಲ್ಡ್ ಇದೆ. ಕೇಂದ್ರ ಸರ್ಕಾರ ಇದಕ್ಕೆ ಯಾಕೆ ದೂರು ನೀಡಿಲ್ಲ?
4. 1994ರಲ್ಲಿ ಜಾರಿಗೆ ಬಂದಿರುವ ಕೇಬಲ್ ಟೆಲಿವಿಷನ್ ನೆಟ್ ವರ್ಕ್ (ರೆಗ್ಯುಲೇಷನ್) ಕಾಯಿದೆ ಇದೆ. ಇದರಲ್ಲಿರುವ ಕಾರ್ಯಕ್ರಮ ಮತ್ತು ಜಾಹಿರಾತು ಸಂಹಿತೆಯಡಿ ಟಿವಿ ಚಾನೆಲ್ ಗಳಿಗೆ ನೋಟೀಸ್ ನೀಡಲು ಅವಕಾಶ ಇದೆ. ಈ ಅವಕಾಶವನ್ನು ಕೇಂದ್ರ ಸರ್ಕಾರ ಯಾಕೆ ಬಳಸಿಕೊಳ್ಳಲಿಲ್ಲ?
5. ಪಠಾಣ್ ಕೋಟ್ ನಲ್ಲಿ ನಡೆದ ಭದ್ರತಾಪಡೆಯ ಕಾರ್ಯಾಚರಣೆಯ ವರದಿಯ ನೇರಪ್ರಸಾರವನ್ನು ಹಲವಾರು ಇಂಗ್ಲೀಷ್ –ಹಿಂದಿ ಮತ್ತು ಸ್ಥಳೀಯ ಚಾನೆಲ್ ಗಳು ಮಾಡಿದ್ದರೂ ಕೇವಲ ಎನ್ ಡಿಟಿವಿಯನ್ನು ಮಾತ್ರ ಗುರಿಮಾಡಲಾಯಿತು? ಅದರಲ್ಲಿ , ‘ಸಿಕ್ಯುಲರ್ ಜರ್ನಲಿಸ್ಟ್’ ಗಳೆಂಬ ಹೀಯಾಳಿಕೆಗೆ ಒಳಗಾಗಿರುವ ಬರ್ಕಾ ದತ್, ರವೀಶ್ ಕುಮಾರ್ ಅವರು ಕಾರ್ಯನಿರ್ವಹಿಸುತ್ತಿರುವುದು ಕಾರಣವೇ? ಆ ಚಾನೆಲ್ ಕೇಂದ್ರ ಸರ್ಕಾರದ ಮುಖವಾಣಿಯಂತೆ ಕಾರ್ಯನಿರ್ವಹಿಸದಿರುವುದು ಕಾರಣವೇ?
6. ತಪ್ಪು ಮಾಡಿದವರನ್ನು ಶಿಕ್ಷಿಸಲು ಲಭ್ಯ ಇರುವ ಈ ಅವಕಾಶಗಳನ್ನು ಬಳಸಿಕೊಳ್ಳದೆ ಕೆಲವು ಅಧಿಕಾರಿಗಳು ಸೇರಿ ವಿಚಾರಣೆ ನಡೆಸದೆ ಏಕಪಕ್ಷೀಯ ತೀರ್ಪು ನೀಡಿರುವುದು ಯಾವ ನ್ಯಾಯ?
ಎನ್ ಡಿಟಿವಿ ಸ್ಥಗಿತ ನಿರ್ಧಾರದ ಪ್ರಕರಣದ ವಿರುದ್ದ ಜನಾಕ್ರೋಶ ಸ್ಪೋಟಗೊಳ್ಳಲು ಮತ್ತು ಸರ್ಕಾರದ ಕ್ರಮದ ಹಿಂದೆ ದುರುದ್ದೇಶ ಇದೆ ಎಂಬ ಸಂಶಯ ಹುಟ್ಟಲು ಇವು ಮುಖ್ಯವಾದ ಕಾರಣಗಳು. ಇದರ ಜತೆಯಲ್ಲಿ ಕಾಶ್ಮೀರದಲ್ಲಿ ನಡೆಯುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ, ಜಾರ್ಖಂಡ್ ನಲ್ಲಿ ಪತ್ರಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಕೇಂದ್ರ ಸರ್ಕಾರದ ಸ್ನೇಹವಲಯದ ಉದ್ಯಮಿಗಳು ದೇಶದ ಪತ್ರಿಕೆ ಮತ್ತು ಚಾನೆಲ್ ಗಳನ್ನು ವಶಕ್ಕೆ ಪಡೆಯುತ್ತಿರುವುದು ಕೂಡಾ ಆತಂಕಕ್ಕೆ ಕಾರಣಗಳು.
ಕೊನೆಯದಾಗಿ, ಎನ್ ಡಿಟಿವಿ ವಿರುದ್ದದ ಕ್ರಮವನ್ನು ಖಂಡಿಸುವ ನೀವು ಬೆಂಗಳೂರು ಪೊಲೀಸ್ ಕಮಿಷನರ್ ಟಿವಿ ಚಾನೆಲ್ ಗಳ ವಿರುದ್ಧ ಕೈಗೊಂಡಿರುವ ಕ್ರಮವನ್ನು ಹೇಗೆ ಸಮರ್ಥಿಸುತ್ತೀರಿ ಎಂದು ಕೆಲವರು ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಪೊಲೀಸ್ ಕಮಿಷನರ್ ಅವರು ಕೇಬಲ್ ಟೆಲಿವಿಷನ್ ನೆಟ್ ವರ್ಕ್ (ರೆಗ್ಯುಲೇಷನ್) 1995ರ ಕಾಯಿದೆಯಡಿ ‘ಸಲಹಾ ಪತ್ರ (Advisory)ವನ್ನು ಟಿವಿ ಚಾನೆಲ್ ಗಳಿಗೆ ಕಳಿಸಿದ್ದಾರೆ.
ಇಂತಹ Advisory ಗಳನ್ನು ಇಂದಿನ ಮತ್ತು ಹಿಂದಿನ ಕೇಂದ್ರ ಸರ್ಕಾರಗಳು ಹಲವಾರು ಬಾರಿ ನೀಡಿವೆ. ಇತ್ತೀಚೆಗೆ ಕಾವೇರಿ ಜಲವಿವಾದ ಸಂಬಂಧಿ ಗಲಭೆಯ ಸಮಯದಲ್ಲಿ ಕೂಡಾ ಕೇಂದ್ರ ಸರ್ಕಾರ ಟಿವಿ ಚಾನೆಲ್ ಗಳಿಗೆ ಇಂತಹ Advisory ಕಳುಹಿಸಿತ್ತು. ಇದನ್ನೇ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಕಳುಹಿಸಿದ್ದಾರೆ. ಅಂತಹ ಸಂದರ್ಭಗಳಲ್ಲಿ ಯಾವ ಚಾನೆಲ್ ಕೂಡಾ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಎಂದು ಪ್ರತಿಭಟಿಸಿರಲಿಲ್ಲ. 'ಭಕ್ತಿ' ಯ ಜತೆ ಸ್ವಲ್ಪ ಬುದ್ದಿಯನ್ನು ಬೆಳೆಸಿಕೊಂಡರೆ ಎಲ್ಲರಿಗೂ ಕ್ಷೇಮ.