ಏಕರೂಪದ ನಾಗರಿಕ ಸಂಹಿತೆಗಾಗಿ ಎದ್ದಿರುವ ಕೂಗಿನ ಹಿಂದೆ

Update: 2016-11-06 18:45 GMT

ಹಿಂದೂಸ್ಥಾನದಲ್ಲಿರುವ ವಿದೇಶಿ ಜನಾಂಗಗಳು (ಅರ್ಥಾತ್ ಕ್ರೈಸ್ತರು ಮತ್ತು ಮುಸ್ಲಿಮರು) ಒಂದೋ ಹಿಂದೂ ಸಂಸ್ಕೃತಿ ಮತ್ತು ಭಾಷೆಯನ್ನು ಅಳವಡಿಸಿಕೊಳ್ಳಬೇಕು, ಹಿಂದೂ ಧರ್ಮಕ್ಕೆ ಗೌರವ ತೋರಿಸಿ ಅದನ್ನು ಭಯಭಕ್ತಿಯಿಂದ ಕಾಣಬೇಕು. ಹಿಂದೂ ಜನಾಂಗವನ್ನು ಹಾಗೂ ಹಿಂದೂ ರಾಷ್ಟ್ರದ ಸಂಸ್ಕೃತಿಯನ್ನು ವೈಭವೀಕರಿಸುವುದರ ಹೊರತು ಬೇರಾವ ವಿಷಯವನ್ನೂ ಮನದೊಳಕ್ಕೆ ಬಿಟ್ಟುಕೊಳ್ಳಬಾರದು ಮತ್ತು ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ತ್ಯಜಿಸಿ ಹಿಂದೂ ಜನಾಂಗದೊಳಕ್ಕೆ ಸೇರಿಕೊಳ್ಳಬೇಕು. ಇಲ್ಲಾ ಯಾವುದಕ್ಕೂ ಆಗ್ರಹಿಸದೆ, ಯಾವುದೇ ಸವಲತ್ತುಗಳಿಗೂ, ವಿಶೇಷ ಸೌಕರ್ಯಗಳಿಗೂ ಅರ್ಹರಾಗದೆ, ನಾಗರಿಕ ಹಕ್ಕುಗಳನ್ನು ಸಮೇತ ಕೇಳದೆ ಹಿಂದೂ ರಾಷ್ಟ್ರಕ್ಕೆ ಪೂರ್ತಿ ಅಧೀನರಾಗಿ ದೇಶದೊಳಗಿರಬಹುದು...

-ಎಂ.ಎಸ್.ಗೋಳ್ವಾಲ್ಕರ್

ಇಂದಿನ ದಿನಗಳಲ್ಲಿ ಎಚ್ಚೆತ್ತುಕೊಂಡ ಮುಸ್ಲಿಂ ಮಹಿಳೆಯರು ತಮ್ಮ ಸಮುದಾಯದಲ್ಲಿರುವ ಕೆಲವೊಂದು ಅನಾರೋಗ್ಯಕರ ಪದ್ಧತಿಗಳ ವಿರುದ್ಧ ಧ್ವನಿ ಎತ್ತುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ. ಇದು ಸುಧಾರಣೆಗಳ ಕೂಗು ಆಯಾ ಸಮುದಾಯ ಅಥವಾ ಗುಂಪಿನ ಒಳಗಿನಿಂದಲೇ ಹುಟ್ಟಿಕೊಳ್ಳುವುದು ಸೂಕ್ತವೆಂಬ ಅನುಭವಜನ್ಯ ಮಾತಿಗೆ ಅನುಗುಣವಾಗಿಯೂ ಇದೆ. ಹೀಗೆ ವೈಯಕ್ತಿಕ ಕಾನೂನುಗಳ ವ್ಯವಸ್ಥಿತ ಕ್ರೋಡೀಕರಣಕ್ಕಾಗಿ ಒತ್ತಾಯಗಳು ಕೇಳಿಬರುತ್ತಿರುವ ಪ್ರಸಕ್ತ ಸಂದಭರ್ದಲ್ಲಿ ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ, ಸಾರ್ವಜನಿಕ ಸಭೆಗಳಲ್ಲಿ ಎಲ್ಲಿ ನೋಡಿದರೂ ತ್ರಿವಳಿ ತಲಾಖ್, ಬಹುವಿವಾಹ ಮತ್ತು ಏಕರೂಪದ ನಾಗರಿಕ ಸಂಹಿತೆಗಳ ಬಗ್ಗೆ ಚರ್ಚೆಗಳೇ ಚರ್ಚೆಗಳು. ಆದರೆ ಈ ವಿಷಯಗಳ ಬಗ್ಗೆ ಮಿಕ್ಕೆಲ್ಲ ಕಡೆಗಳಿಗಿಂತ ಹೆಚ್ಚು ಆವಾಝ್ ಕೇಳಿಬರುತ್ತಿರುವುದು ಸಂಘಿಗಳ ವಲಯದಿಂದ ಎಂಬುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ಈ ಹೊತ್ತು ಸುಪ್ರೀಂ ಕೋರ್ಟಿನ ಮುಂದೆ ತ್ರಿವಳಿ ತಲಾಖ್ ಮತ್ತು ಬಹುವಿವಾಹ ಪದ್ಧತಿ ಕುರಿತು ಹಲವಾರು ಅರ್ಜಿಗಳಿವೆಯಾದರೂ ಏಕರೂಪದ ನಾಗರಿಕ ಸಂಹಿತೆ ಬಗ್ಗೆ ಒಂದಾದರೂ ಅರ್ಜಿ ಇಲ್ಲ. ಆದರೆ ಸಂಘ ಪರಿವಾರದ ಮಸಲತ್ತು ನೋಡಿ. ಅದಿಂದು ತ್ರಿವಳಿ ತಲಾಖ್ ಬಗ್ಗೆ ಮೊಸಳೆಕಣ್ಣೀರು ಸುರಿಸುತ್ತಾ ಮುಸ್ಲಿಂ ಮಹಿಳೆಯರು ಏಕರೂಪದ ನಾಗರಿಕ ಸಂಹಿತೆಗೋಸ್ಕರ ಆಗ್ರಹಿಸುತ್ತಿದ್ದಾರೆಂದು ಅಪಪ್ರಚಾರ ನಡೆಸುತ್ತಿದೆ. ಏಕರೂಪದ ನಾಗರಿಕ ಸಂಹಿತೆ ಜಾರಿಯಾದಲ್ಲಿ ಎಲ್ಲವೂ ನೆಟ್ಟಗಾಗಲಿದೆ. ಮಹಿಳೆಯರ ಹಕ್ಕುಗಳು ಸುರಕ್ಷಿತವಾಗಲಿವೆ ಎನ್ನುತ್ತಿದೆ. ಅತ್ತ ಮೋದಿ ಸರಕಾರವೂ ಇಂತಹ ಸಂಹಿತೆ ಮೂಲಕ ರಾಷ್ಟ್ರೀಯ ಐಕ್ಯತೆ ಸಾಧಿಸಬಹುದೆಂದು ವಾದಿಸುತ್ತಿದೆ. ಇಲ್ಲಿ ವ್ಯಂಗ್ಯ ಏನೆಂದರೆ ಇದೇ ಮೋದಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ತಾನೆ ಖುದ್ದಾಗಿ ಅಥವಾ ತನ್ನ ಪರಿವಾರದ ನೂರಾರು ಉಪಸಂಘಟನೆಗಳು ಹಾಗೂ ಕಾಲಾಳು ಪಡೆಗಳ ಮೂಲಕ ಸಮಾಜವನ್ನು ಕೋಮು ಆಧಾರದಲ್ಲಿ ಧ್ರುವೀಕರಿಸಿ ಐಕ್ಯತೆಯನ್ನು ಒಡೆಯುವ ಕೆಲಸವನ್ನೇ ಮಾಡುತ್ತ ಬಂದಿದೆ. ತಾನೊಬ್ಬ ಮಹಾಜ್ಞಾನಿ ಎಂದು ಭಾವಿಸಿದಂತಿರುವ ಅರುಣ್ ಜೇಟ್ಲಿ, ಧರ್ಮ ವೈಯಕ್ತಿಕ ಹಕ್ಕುಗಳನ್ನು ವಿಧಿಸಕೂಡದು ಎಂದು ಉಪದೇಶ ನೀಡುತ್ತಾರೆ. ಆದರೆ ತನ್ನ ಸಂಘಿಗಳು ಧರ್ಮದ ಹೆಸರಲ್ಲಿ ಎಗ್ಗಿಲ್ಲದೆ ನಡೆಸುತ್ತಿರುವ ಅಸಂಖ್ಯಾತ ಗಲಭೆೆ, ಹತ್ಯೆ, ದಲಿತ ಹಾಗೂ ಮಹಿಳಾ ಹಕ್ಕುಗಳ ದಮನ ಇತ್ಯಾದಿ ಪುಂಡಾಟಿಕೆಗಳ ಬಗ್ಗೆ ಜಾಣ ಕುರುಡು ನಟಿಸುತ್ತಾರೆೆ. ಚುನಾವಣಾ ಕಾಲದಲ್ಲಿ ತನಗೊಬ್ಬ ಪತ್ನಿ ಇರುವುದನ್ನೇ ಮರೆತಿದ್ದಲ್ಲದೆ ಈಗಲೂ ಆಕೆಯ ಹಕ್ಕುಗಳನ್ನು ಕಡೆಗಣಿಸಿರುವ, 2002ರಲ್ಲಿ ಝಾಕಿಯಾ ಜಾಫ್ರಿ ಮತ್ತಿತರ ಅನೇಕ ಮುಸ್ಲಿಂ ಸ್ತ್ರೀಯರ ಮೇಲೆ ದೌರ್ಜನ್ಯಕ್ಕೊಳಗಾಗುತ್ತಿದ್ದಾಗ ವೌನವ್ರತ ತಾಳಿದ್ದ ನರೇಂದ್ರ ಮೋದಿ ಕೂಡಾ ಈಗ ಮುಸ್ಲಿಂ ಮಹಿಳೆಯರ ಹಕ್ಕುಗಳ ಬಗ್ಗೆ ಬಾರಿ ಕಾಳಜಿಯುಳ್ಳವರಂತೆ ತೋರಿಸಿಕೊಳ್ಳುತ್ತಿದ್ದಾರೆ! ಇವರನ್ನೆಲ್ಲ ನೋಡಿದಾಗ ಭೂತ, ಭಗವದ್ಗೀತೆಗಳ ನೆನಪಾಗುತ್ತದೆ. ಹೀಗೆ ಇಡೀ ಸಂಘ ಪರಿವಾರ ಇಂದು ತ್ರಿವಳಿ ತಲಾಖ್‌ಗೆ ಸಂಬಂಧಪಡದ ಏಕರೂಪದ ನಾಗರಿಕ ಸಂಹಿತೆಯ ವಿಚಾರವನ್ನು ಹರಿಯಬಿಟ್ಟಿರುವುದರ ತಕ್ಷಣದ ಉದ್ದೇಶ ಸಮುದಾಯಗಳ ನಡುವೆ ಒಡಕು ಮೂಡಿಸಿ ಚುನಾವಣಾ ಲಾಭ ಪಡೆದುಕೊಳ್ಳುವುದಾಗಿದೆ. ಆದರೆ ಇದರ ಹಿಂದೆ ಒಂದು ದೂರಗಾಮಿ ಉದ್ದೇಶವೂ ಅಡಗಿದೆ. ಅದೇನೆಂದರೆ ಆರೆಸ್ಸೆಸ್‌ನ ಹಿಂದೂ ರಾಷ್ಟ್ರ ಸ್ಥಾಪನೆಯ ಅಜೆಂಡಾದ ಒಂದು ಪ್ರಮುಖಾಂಶವಾಗಿರುವ ಅಲ್ಪಸಂಖ್ಯಾತರ ದಮನಕ್ಕಾಗಿ ಗುರು ಗೋಳ್ವಾಲ್ಕರ್ ಸೂಚಿಸಿದ ಮಾರ್ಗೋಪಾಯಗಳನ್ನು ಕಾರ್ಯರೂಪಕ್ಕೆ ತರಲೆತ್ನಿಸುವುದು. ರಾಷ್ಟ್ರೀಯ ಆಗಿರುವ ಹಿಂದೂ ಜನಾಂಗ, ಧರ್ಮ, ಸಂಸ್ಕೃತಿ ಹಾಗೂ ಭಾಷೆಗೆ ಸೇರದವರೆಲ್ಲ ಸಹಜವಾಗಿ ನೈಜ ರಾಷ್ಟ್ರೀಯ ಜೀವನದ ಪರಿಧಿಯಿಂದ ಹೊರಗಿರುತ್ತಾರೆ....ಯಾರು ಹಿಂದೂ ಜನಾಂಗವನ್ನು ಹಾಗೂ ಹಿಂದೂ ರಾಷ್ಟ್ರವನ್ನು ಕೊಂಡಾಡಿ, ಅವುಗಳನ್ನು ತಮ್ಮ ಹೃದಯಕ್ಕೆ ಸಮೀಪವಾಗಿರಿಸುವ ಹೆಬ್ಬಯಕೆಯೊಂದಿಗೆ ಚಟುವಟಿಕೆಯಲ್ಲಿ ತೊಡಗಲು ಪ್ರೇರೇಪಿತರಾಗಿ, ಗುರಿಸಾಧನೆಗಾಗಿ ದುಡಿಯುತ್ತಾರೋ ಅವರು ಮಾತ್ರ ರಾಷ್ಟ್ರೀಯವಾದಿ ದೇಶಭಕ್ತರು. ಮಿಕ್ಕವರೆಲ್ಲರೂ ಒಂದೋ ದೇಶದ್ರೋಹಿಗಳು ಮತ್ತು ರಾಷ್ಟ್ರೀಯ ಧ್ಯೇಯೋದ್ದೇಶದ ಶತ್ರುಗಳು ಅಥವಾ ಒಂದಿಷ್ಟು ಉದಾರತೆಯಿಂದ ಕರೆಯುವುದಾದರೆ, ಮೂರ್ಖರು....... ಹಿಂದುಸ್ಥಾನದಲ್ಲಿರುವ ವಿದೇಶೀ ಜನಾಂಗಗಳು (ಅರ್ಥಾತ್ ಕ್ರೈಸ್ತರು ಮತ್ತು ಮುಸ್ಲಿಮರು) ಒಂದೋ ಹಿಂದೂ ಸಂಸ್ಕೃತಿ ಮತ್ತು ಭಾಷೆಯನ್ನು ಅಳವಡಿಸಿಕೊಳ್ಳಬೇಕು, ಹಿಂದೂ ಧರ್ಮಕ್ಕೆ ಗೌರವ ತೋರಿಸಿ ಅದನ್ನು ಭಯಭಕ್ತಿಯಿಂದ ಕಾಣಬೇಕು, ಹಿಂದೂ ಜನಾಂಗವನ್ನು ಹಾಗೂ ಹಿಂದೂ ರಾಷ್ಟ್ರದ ಸಂಸ್ಕೃತಿಯನ್ನು ವೈಭವೀಕರಿಸುವುದರ ಹೊರತು ಬೇರಾವ ವಿಷಯವನ್ನೂ ಮನದೊಳಕ್ಕೆ ಬಿಟ್ಟುಕೊಳ್ಳಬಾರದು ಮತ್ತು ತಮ್ಮ ಪ್ರತ್ಯೇಕ ಅಸ್ತಿತ್ವವನ್ನು ತ್ಯಜಿಸಿ ಹಿಂದೂ ಜನಾಂಗದೊಳಕ್ಕೆ ಸೇರಿಕೊಳ್ಳಬೇಕು. ಇಲ್ಲಾ ಯಾವುದಕ್ಕೂ ಆಗ್ರಹಿಸದೆ, ಯಾವುದೇ ಸವಲತ್ತುಗಳಿಗೂ, ವಿಶೇಷ ಸೌಕರ್ಯಗಳಿಗೂ ಅರ್ಹರಾಗದೆ, ನಾಗರಿಕ ಹಕ್ಕುಗಳನ್ನು ಸಮೇತ ಕೇಳದೆ ಹಿಂದೂ ರಾಷ್ಟ್ರಕ್ಕೆ ಪೂರ್ತಿ ಅಧೀನರಾಗಿ ದೇಶದೊಳಗಿರಬಹುದು. ಅವರಿಗೆ ಬೇರಾವ ಮಾರ್ಗವೂ ಇಲ್ಲ; ಕನಿಷ್ಠ ಪಕ್ಷ, ಇರಬಾರದು. ಒಂದು ಪ್ರಾಚೀನ ರಾಷ್ಟ್ರವಾಗಿರುವ ನಾವು ನಮ್ಮ ದೇಶದಲ್ಲಿ ಬದುಕಲು ಆಯ್ಕೆ ಮಾಡಿಕೊಂಡಿರುವ ವಿದೇಶೀ ಜನಾಂಗಗಳೊಂದಿಗೆ ಪ್ರಾಚೀನ ರಾಷ್ಟ್ರಗಳು ವ್ಯವಹರಿಸಬೇಕಿರುವ ಮತ್ತು ವ್ಯವಹರಿಸುವ ವಿಧಾನದಲ್ಲಿ ವ್ಯವಹರಿಸೋಣ (ಗೋಳ್ವಾಲ್ಕರ್, We or Our Nationhood Defined).

ಆದುದರಿಂದ 21ನೆ ಕೇಂದ್ರ ಕಾನೂನು ಆಯೋಗ ಇದೇ ಅಕ್ಟೋಬರ್ 7ರಂದು ಏಕರೂಪದ ನಾಗರಿಕ ಸಂಹಿತೆ ಬಗ್ಗೆ ಬೇಡಿಕೆ ಮತ್ತು ಪ್ರಶ್ನಾವಳಿಗಳನ್ನು ಹಂಚಿರುವುದು ಮತ್ತು ಸಂಘಿಗಳು ಸಂಹಿತೆಯ ಜಾರಿಗಾಗಿ ಕೂಗು ಹಾಕುತ್ತಿರುವುದು ಆರೆಸ್ಸೆಸ್‌ನ ಕಟ್ಟಾಳುವಾದ ಮೋದಿಯ ನೇತೃತ್ವದಲ್ಲಿರುವ ಕೇಂದ್ರ ಸರಕಾರದ ಆದೇಶದ ಮೇರೆಗೆ ಎಂಬುದರ ಕುರಿತು ಯಾವುದೆ ಸಂಶಯ ಇರಬೇಕಾಗಿಲ್ಲ. ಆದರೆ ಗಮನಿಸಬೇಕಾದ ಅಂಶವೆಂದರೆ ಈ ಏಕರೂಪದ ನಾಗರಿಕ ಸಂಹಿತೆಯ ರೂಪುರೇಷೆಗಳೇನು, ಅದರ ನಿಯಮಾವಳಿಗಳೇನೆಂದು ವಿವರಿಸುವ ಕರಡು ಪ್ರತಿಗಳನ್ನು ಇದುವರೆಗೂ ಸಾರ್ವಜನಿಕರಿಗೆ ಬಿಡುಗಡೆಗೊಳಿಸಲಾಗಿಲ್ಲ! ಯಾವುದೇ ಹೊಸ ಕಾನೂನೊಂದನ್ನು ಮಾಡುವ ಪ್ರಕ್ರಿಯೆಯಲ್ಲಿ ಅಭಿಪ್ರಾಯ ಸಂಗ್ರಹ, ಕಾನೂನು ರಚನೆ ಮತ್ತು ಕಾನೂನು ರಚನೆಯ ನಂತರ ಎಂಬ ಮೂರು ಹಂತಗಳಿರುತ್ತವೆ. ಈಗ ಕಾನೂನು ಆಯೋಗ ಮಾಡಹೊರಟಿರುವ ಅಭಿಪ್ರಾಯ ಸಂಗ್ರಹದಲ್ಲಿ ಪ್ರಸ್ತಾಪಿತ ಕಾನೂನಿನ ಕರಡು ಪ್ರತಿಗಳನ್ನು ಸಾರ್ವಜನಿಕರಿಗೆ ಹಂಚುವ ಬದಲು ಹೌದು, ಅಲ್ಲ ಅಥವಾ ಹಲವು ಉತ್ತರಗಳಲ್ಲಿ ಒಂದನ್ನು ಆರಿಸುವ ಪ್ರಶ್ನಾವಳಿಯನ್ನು ಹಂಚಲಾಗಿದೆ. ಕಾನೂನು ಆಯೋಗದ ಈ ಬೇಡಿಕೆ ಮತ್ತು ಪ್ರಶ್ನಾವಳಿಗಳು ಫೆೆಬ್ರವರಿ 2014ರ ಕೇಂದ್ರೀಯ ಮಾರ್ಗದರ್ಶಿ ಸೂತ್ರಗಳನ್ನು ಬಹಳ ಸ್ಪಷ್ಟವಾಗಿ ಉಲ್ಲಂಘಿಸುತ್ತವೆ. ಹೀಗಾಗಿ ಇವುಗಳ ಆಧಾರದ ಮೇಲೆ ಏಕರೂಪದ ನಾಗರಿಕ ಸಂಹಿತೆಯೊಂದನ್ನು ಹೇರುವುದು ಸಂಪೂರ್ಣ ಕಾನೂನುಬಾಹಿರವೂ ದುರುದ್ದೇಶಪೂರ್ವಕವೂ ಆಗಿದೆ. ಭಾರತದ ಸಂವಿಧಾನದ ರಾಜ್ಯನೀತಿಯ ನಿರ್ದೇಶನ ತತ್ವಗಳ (ಭಾಗ IV) ವಿಧಿ 44ರಲ್ಲಿ ಸರಕಾರ ಏಕರೂಪದ ನಾಗರಿಕ ಸಂಹಿತೆಯೊಂದನ್ನು ಜಾರಿಗೆ ತರಲು ಪ್ರಯತ್ನಿಸಬೇಕೆಂದು ಹೇಳಲಾಗಿದೆ ನಿಜ. ಆದರೆ ಇದು ವಿಶ್ವಸಂಸ್ಥೆ 1948ರಲ್ಲಿ ಅಳವಡಿಸಿಕೊಂಡ ಸಾರ್ವತ್ರಿಕ ಮಾನವ ಹಕ್ಕು ಘೋಷಣೆಯ ಉಲ್ಲಂಘನೆಯಾಗಿದೆ. ಏಕೆಂದರೆ ವಿಶ್ವಸಂಸ್ಥೆಯ ಘೋಷಣೆ ವ್ಯಕ್ತಿಗಳ ಧಾರ್ಮಿಕ ಹಕ್ಕನ್ನು ಮನ್ನಿಸುತ್ತದೆ. ಇದಲ್ಲದೆ 1993ರ ಸರ್ವ ವಿಧದ ಮಹಿಳಾ ತಾರತಮ್ಯಗಳನ್ನು ಕೊನೆಗೊಳಿಸುವ ಒಪ್ಪಂದಕ್ಕೆ ಸಹಿಹಾಕುವ ಸಂದರ್ಭದಲ್ಲಿ ಅಂದಿನ ಕೇಂದ್ರ ಸರಕಾರ ಒಪ್ಪಂದದ ಸೆಕ್ಷನ್ 16ನ್ನು ಒಪ್ಪಿರಲಿಲ್ಲ. ಏಕೆಂದರೆ ಸಮಾನ ವೈಯಕ್ತಿಕ ಕಾನೂನುಗಳ ಕುರಿತಾದ ಈ ಸೆಕ್ಷನ್ 16ನ್ನು ಕಡ್ಡಾಯವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಎಂಬುದು ಅದರ ನಿಲುವಾಗಿತ್ತು. ಮತ್ತೊಂದು ಪ್ರಮುಖ ವಿಷಯವೆಂದರೆ ಧಾರ್ಮಿಕ ಸ್ವಾತಂತ್ರ್ಯ, ಶಿಕ್ಷಣ, ಸಾಂಸ್ಕೃತಿಕ ಹಕ್ಕುಗಳ ರಕ್ಷಣೆಗೆ ಸಂಬಂಧಪಟ್ಟ ಸಂವಿಧಾನದ ವಿಧಿ 25ರಿಂದ 30ರಲ್ಲಿ ತನ್ನದೆ ಆದ ವಿಶಿಷ್ಟ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಹೊಂದಿರುವ ಪ್ರತಿಯೊಂದು ಗುಂಪಿಗೂ ಆ ವಿಶಿಷ್ಟತೆಯನ್ನು ಉಳಿಸಿಕೊಳ್ಳುವ ಹಕ್ಕು ಇದೆ ಎಂದು ಸ್ಪಷ್ಟಪಡಿಸಲಾಗಿದೆ. ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಬೇಕು ಮತ್ತು ಮುಸ್ಲಿಂ ವೈಯಕ್ತಿಕ ಕಾನೂನಿನ (ಬಹುವಿವಾಹ ಮುಂತಾದ) ಕೆಲವೊಂದು ಅಂಶಗಳನ್ನು ಅಸಾಂವಿಧಾನಿಕವೆಂದು ಘೋಷಿಸಬೇಕು ಎಂಬಿತ್ಯಾದಿ ಬೇಡಿಕೆಗಳಿದ್ದ ಅನೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಈ ಹಿಂದೆಯೂ ಸರ್ವೋಚ್ಚ ನ್ಯಾಯಾಲಯದ ಮುಂದೆ ಬಂದಿದ್ದವು. ಆದರೆ ಅವೆಲ್ಲವೂ ತಿರಸ್ಕೃತಗೊಂಡಿವೆ. ಆದರೆ ಮೋದಿ ಸರಕಾರ ಇದೆಲ್ಲವನ್ನೂ ಉದ್ದೇಶಪೂರ್ವಕವಾಗಿ ಅಲಕ್ಷಿಸಿ ಹಿಂಬಾಗಿಲ ಮೂಲಕ ಏಕರೂಪದ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಹೊರಟಿದೆ.
 ಇಂದು ಮತ್ತೊಮ್ಮೆ ತ್ರಿವಳಿ ತಲಾಖ್ ಮತ್ತು ಬಹುವಿವಾಹ ಪದ್ಧತಿಗಳನ್ನು ಪ್ರಶ್ನಿಸಿ ಹಲವಾರು ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈಗಷ್ಟೆ ಕೆಲವು ದಿನಗಳ ಕೆಳಗೆ ಮೋದಿ ಸರಕಾರ ಕೂಡಾ ನ್ಯಾಯಾಲಯಕ್ಕೆ ಅಫಿದಾವಿತ್ ಸಲ್ಲಿಸಿ ತ್ರಿವಳಿ ತಲಾಖ್, ನಿಖಾ ಹಲಾಲಾ ಮತ್ತು ಬಹುವಿವಾಹಗಳ ನ್ಯಾಯ ಸಮ್ಮತೆಯನ್ನು ಸೂಕ್ಷ್ಮ ಪರಿಶೀಲನೆಗೆ ಒಡ್ಡಬೇಕೆಂದು ಕೋರಿದೆ. ಆದರೆ ಸರ್ವೋಚ್ಚ ನ್ಯಾಯಾಲಯ ಈಗಾಗಲೆ 2002ರ ಶಮೀಮ್ ಆರಾ ಪ್ರಕರಣದಲ್ಲಿ ದಿಢೀರ್ ತ್ರಿವಳಿ ತಲಾಖ್ ನ್ಯಾಯ ಸಮ್ಮತವಲ್ಲ ಎಂದು ತೀರ್ಪು ನೀಡಿದೆ. ಮಾತ್ರವಲ್ಲ ಮುಸ್ಲಿಂ ಜೋಡಿಯೊಂದರ ವಿಚ್ಛೇದನೆಯ ಸರಿಯಾದ ವಿಧಾನವನ್ನೂ ನಿರೂಪಿಸಿದೆ. ದಿಢೀರ್ ತ್ರಿವಳಿ ತಲಾಖ್‌ನೊಂದಿಗೆ ನಿಖಾ ಹಲಾಲಾ (ದಿಢೀರ್ ತಲಾಖ್‌ಗೆ ತುತ್ತಾದ ಮಹಿಳೆ ಅದೇ ಮೊದಲನೆ ಪತಿಯನ್ನು ಮತ್ತೆ ವಿವಾಹವಾಗಲು ಬಯಸಿದಲ್ಲಿ ಆಕೆ ಇನ್ನೋರ್ವ ಪುರುಷನೊಂದಿಗೆ ತಾತ್ಕಾಲಿಕ ವಿವಾಹವಾಗಿ ವಿಚ್ಛೇದನ ಪಡೆಯಲೆಬೇಕಾಗಿರುವುದು) ಕೂಡಾ ಕಾನೂನುಬಾಹಿರ ಎಂದಾಗಿದೆ. ಹಾಗೆ ನೋಡಿದರೆ ಕುರ್‌ಆನ್ ದಿಢೀರ್ ವಿಚ್ಛೇದನೆಯನ್ನು ಸಮ್ಮತಿಸುವುದಿಲ್ಲ; ಅದು ಇಬ್ಬರಿಗೂ ಸಾಕಷ್ಟು ಕಾಲಾವಕಾಶ ಒದಗಿಸುತ್ತದೆ; ಪ್ರತ್ಯೇಕವಾಗಲು ನಿರ್ಧರಿಸುವ ಮುನ್ನ ಸಂಧಾನ ಮಾತುಗಳು ಅವಶ್ಯವೆಂದು ಹೇಳುವ ಅದು ಮದುವೆಯನ್ನು ಉಳಿಸುವುದಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ.


ವಿದ್ವಾಂಸರ ಅಭಿಮತದಲ್ಲಿ ಕುರ್‌ಆನ್‌ನಲ್ಲಿ ಏಕಪತ್ನಿತ್ವಕ್ಕೆ ಒತ್ತು ನೀಡಲಾಗಿದ್ದು ಅದರಲ್ಲಿ ಪತ್ನಿಯ ಬಗ್ಗೆ ಹೇಳುವಾಗ ಏಕವಚನದ ಪ್ರಯೋಗ ಮಾಡಲಾಗಿದೆ, ವಿವಾಹವನ್ನು ಎರಡು ಮನಗಳ ನಡುವಿನ ಭಾವನಾತ್ಮಕ ಬೆಸುಗೆ ಎಂದು ಕರೆಯಲಾಗಿದೆ. ಅದೇ ವೇಳೆ ಬಹುಪತ್ನಿತ್ವಕ್ಕೆ ಒಪ್ಪಿಗೆ ಇರುವುದೂ ನಿಜ. ಆದರೆ ಅದನ್ನು ನಿರ್ದಿಷ್ಟ ಸಂದರ್ಭಕ್ಕಷ್ಟೆ ಸೀಮಿತಗೊಳಿಸಲಾಗಿದೆ. ಪ್ರವಾದಿಯವರ ಕಾಲದಲ್ಲಿ ಸನ್ನಿವೇಶಗಳು ಹೇಗಿದ್ದುವೆಂದರೆ ನಿರಂತರ ಯುದ್ಧಗಳಿಂದಾಗಿ ವಿಧವೆಯರು ಮತ್ತು ಅನಾಥ ಮಕ್ಕಳ ಸಂಖ್ಯೆ ಹೆಚ್ಚಿತ್ತು. ಅವರ ಸಂಕಷ್ಟಗಳ ನಿವಾರಣೆಗೆ ಸಮಾಜದಲ್ಲಿ ಯಾವುದೇ ವ್ಯವಸ್ಥೆ ಇಲ್ಲದುದರಿಂದ ಪ್ರವಾದಿಯವರು ಇಂತಹದೊಂದು ನಿಯಮವನ್ನು ಅನೇಕ ರಕ್ಷಣೋಪಾಯಗಳ ಷರತ್ತುಗಳೊಂದಿಗೆ ಜಾರಿಗೆ ತಂದಿದ್ದರು. ಆದುದರಿಂದ ಬಹುಪತ್ನಿತ್ವ ಅಂದಿನ ಸಂದರ್ಭಕ್ಕನುಗುಣವಾಗಿ ರಚಿಸಲಾದ ನಿಯಮವೆ ಹೊರತು ಪುರುಷರ ಭೋಗಲಾಲಸೆಗಾಗಿ ಹಲವು ಸ್ತ್ರೀಯರನ್ನು ಮದುವೆಯಾಗಲು ಕೊಟ್ಟಿರುವ ಪರವಾನಿಗೆ ಅಲ್ಲ ಎಂಬುದನ್ನು ಗಮನಿಸಬೇಕು. ಆದರೆ ವಾಸ್ತವಾಂಶಗಳನ್ನು ಪರಿಗಣಿಸಿದಾಗ ಯಾವುದೇ ಸಮುದಾಯದಲ್ಲಿ ಬಹುಪತ್ನಿತ್ವವನ್ನು ಕಾನೂನಿನ ಮೂಲಕ ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿದೆಯೆ ಎಂಬ ಪ್ರಶ್ನೆ ಏಳುತ್ತದೆ. ಉದಾಹರಣೆಗೆ ಸಂಘಿಗಳು ಈಗ ಗೋವಾದ ಏಕರೂಪಿ ನಾಗರಿಕ ಸಂಹಿತೆಯನ್ನು ಮಾದರಿ ಎಂಬಂತೆ ಬಿಂಬಿಸುತ್ತಿದ್ದಾರೆ. ಆದರೆ ಅಸಲಿಗೆ ಇದೊಂದು ಸಮಸ್ಯಾತ್ಮಕ ಕಾಯ್ದೆಯಾಗಿ ಪರಿಣಮಿಸಿದೆ ಎಂದು ತಿಳಿದುಬರುತ್ತದೆ. ಅಂದು ಪೋರ್ಚುಗೀಸರು ಈ ಕಾನೂನನ್ನು ರೂಪಿಸುವ ಸಂದರ್ಭದಲ್ಲಿ ಗೋವಾದ ಕುಲೀನ ಹಿಂದೂಗಳು ಸರಕಾರಕ್ಕೆ ಅರ್ಜಿ ಸಲ್ಲಿಸಿ ತಮ್ಮ ಆಗಿನ ಧಾರ್ಮಿಕ ಸಂಪ್ರದಾಯಗಳನ್ನು ಮಾನ್ಯಮಾಡಿ ಅವುಗಳನ್ನು ಉಳಿಸಿಕೊಳ್ಳುವಂತೆ ಕೋರಿದ್ದರು. ಅದರಂತೆಯೆ ಗೋವಾದ ಕಾನೂನಿನಲ್ಲಿ ಹಿಂದೂಗಳು ಮತ್ತಿತರ ಕ್ರೈಸ್ತೇತರ ಸಮುದಾಯಗಳಿಗೆ ಸೀಮಿತ ಬಹುವಿವಾಹದ ಅವಕಾಶ ಒದಗಿಸಲಾಗಿದೆ! ಗಮನಾರ್ಹವಾಗಿ ಈ ನಿಯಮವನ್ನು ಇದುವರೆಗೆ ರದ್ದುಗೊಳಿಸಲಾಗಿಲ್ಲ. ಹೀಗಾಗಿ ಗೋವಾದಲ್ಲಿ ಅಧಿಕೃತ ದ್ವಿಪತ್ನಿತ್ವ ಪ್ರಕರಣಗಳು ಇವೆ; ಆದರೆ ವಿರಳ ಸಂಖ್ಯೆಯಲ್ಲಿ. ಅದೇ ವೇಳೆ ಅನಧಿಕೃತ ಪ್ರಕರಣಗಳ ಸಂಖ್ಯೆ ಸಾಕಷ್ಟಿದೆ ಎಂದು ತಿಳಿದುಬರುತ್ತದೆ. ಇದರಲ್ಲಿ ಸ್ತ್ರೀಯರಿಗೆ ಮೋಸಮಾಡಿ ಎರಡನೆ ಮದುವೆ ಮಾಡಿಕೊಳ್ಳುವ ಪ್ರಕರಣಗಳಲ್ಲದೆ ಗುಟ್ಟಿನಲ್ಲಿ ಮದುವೆಯಾಗುವ ಪ್ರಕರಣಗಳೂ ಸೇರಿವೆ. ಕಾನೂನಿನಂತೆ ಅಧಿಕೃತ ವಿವಾಹವಾಗಲಿಚ್ಛಿಸುವ ಜೋಡಿ ಮೊದಲು ವಿವಾಹದ ಇರಾದೆ ಫಾರ್ಮ್‌ಗೆ ಸಹಿ ಹಾಕಬೇಕು ಮತ್ತು ಮದುವೆಯಾದ ನಂತರ ನಿಜವಾದ ವಿವಾಹ ಒಪ್ಪಂದಕ್ಕೆ ಸಹಿಹಾಕಬೇಕೆಂದಿದೆ. ಆದರೆ ಇಲ್ಲಿ ಮಹಿಳೆಯರನ್ನು ಹೇಗೆ ವಂಚಿಸಲಾಗುತ್ತದೆಂದರೆ ಮೊದಲನೆ ಫಾರ್ಮ್ ಮಾತ್ರ ಭರ್ತಿ ಮಾಡಲಾಗುತ್ತದೆ; ಎರಡನೆಯದನ್ನು ಮಾಡಲಾಗುವುದಿಲ್ಲ! ಗೋವಾದಲ್ಲಿ ಹೀಗಿದ್ದರೆ ಇತರ ರಾಜ್ಯಗಳಲ್ಲಿ ಹೇಗಿದೆ? 1955ರ ಹಿಂದೂ ವಿವಾಹ ಕಾಯ್ದೆಯನ್ವಯ ಹಿಂದೂಗಳಲ್ಲಿ (ಸಿಖ್ಖರು, ಬೌದ್ಧರು, ಜೈನರನ್ನು ಹೊರತುಪಡಿಸಿ) ದ್ವಿಪತ್ನಿತ್ವ ಸಂಪೂರ್ಣವಾಗಿ ನಿಷೇಧಿಸಲ್ಪಟ್ಟಿದೆಯಾದರೂ 2011ರ ಜನಗಣತಿ ಅಂಕಿ ಅಂಶಗಳು ಬೇರೆಯೆ ಕಥೆಯನ್ನು ಹೇಳುತ್ತವೆ. ವಿವಾಹಿತ ಪುರುಷರ ಸಂಖ್ಯೆ 23,35,20,803 ಇದ್ದರೆ ವಿವಾಹಿತ ಸ್ತ್ರೀಯರ ಸಂಖ್ಯೆ 23,78,77,097 ಅಂದರೆ 43,56,294 ಕಡಿಮೆ ಇದೆ. ಇದರರ್ಥ ಒಂದೇ. ದ್ವಿಪತ್ನಿತ್ವ! ಆದರೆ ಈ ಅನಧಿಕೃತ ಎರಡನೆ ಹೆಂಡಂದಿರಿಗೆ ಯಾವುದೇ ಹಕ್ಕುಗಳಿಲ್ಲ; ಸಮಾನತೆ ಇಲ್ಲ; ಘನತೆಯ ಬದುಕು ಇಲ್ಲ. ವೃಂದಾವನದಲ್ಲಿರುವ ವಿಧವೆಯರ ನಿಕೃಷ್ಟ ಬದುಕಿನ ಕುರಿತು ಹಲವಾರು ವರದಿಗಳು ಲಭ್ಯವಿವೆ. ಇನ್ನು ಹಲವಾರು ಬುಡಕಟ್ಟು ಸಮಾಜಗಳಲ್ಲೂ ಬಹುವಿವಾಹ ಪದ್ಧತಿ ಜಾರಿಯಲ್ಲಿರುವುದರಿಂದ ಅವರೆಲ್ಲರೂ ಏಕರೂಪದ ನಾಗರಿಕ ಸಂಹಿತೆಗೆ ವಿರೋಧ ಸೂಚಿಸಿದ್ದಾರೆ. ಹೀಗೆ ತಮ್ಮದೆ ಎಲೆಯಲ್ಲಿ ಕತ್ತೆ ಸತ್ತು ಬಿದ್ದಿದ್ದರೂ ಮುಸ್ಲಿಮರತ್ತ ಬೆಟ್ಟುಮಾಡುವ ಸಂಘಿಗಳು ಅವರು ಹಲವು ಹೆಂಡಿರನ್ನು ಮದುವೆಯಾಗುತ್ತಾರೆ, ತಮ್ಮವರ ಜನಸಂಖ್ಯೆಯನ್ನು ಹೆಚ್ಚಿಸುತ್ತಾರೆ, ಇದರಿಂದ ಹಿಂದೂ ಧರ್ಮಕ್ಕೆ ಅಪಾಯವಿದೆ ಎಂದು ಸುಳ್ಳುಸುಳ್ಳೆ ಆರೋಪಿಸುತ್ತಾ ಮುಗ್ಧ ಜನಸಾಮಾನ್ಯರನ್ನು ತಪ್ಪುದಾರಿಗೆ ಎಳೆಯಲೆತ್ನಿಸುತ್ತಿರುವುದಕ್ಕೆ ಏನೆನ್ನಬೇಕು? ಈಗಂತೂ ತಮ್ಮದೆ ಮೋದಿ ಸರಕಾರದ ಕುಮ್ಮಕ್ಕಿನಿಂದ ಪ್ರೇರಿತರಾಗಿ ಇದನ್ನೆಲ್ಲ ತಡೆಯಬೇಕಿದ್ದರೆ ಏಕರೂಪದ ನಾಗರಿಕ ಸಂಹಿತೆ ಬೇಕು ಎಂದು ಬೊಬ್ಬಿರಿಯುತ್ತಾ ಒಡೆದ ಸಮಾಜ, ಛಿದ್ರಗೊಂಡ ಸಹಬಾಳ್ವೆಯ ಬದುಕುಗಳ ಗೋರಿಯ ಮೇಲೆ ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಹೊರಟಿದ್ದಾರೆ.

(ಆಧಾರ: ವಿವಿಧ ಮೂಲಗಳಿಂದ)

ಸಂಘ ಪರಿವಾರ ಇಂದು ತ್ರಿವಳಿ ತಲಾಖ್‌ಗೆ ಸಂಬಂಧಪಡದ ಏಕರೂಪದ ನಾಗರಿಕ ಸಂಹಿತೆಯ ವಿಚಾರವನ್ನು ಹರಿಯಬಿಟ್ಟಿರುವುದರ ತಕ್ಷಣದ ಉದ್ದೇಶ ಸಮುದಾಯಗಳ ನಡುವೆ ಒಡಕು ಮೂಡಿಸಿ ಚುನಾವಣಾ ಲಾಭ ಪಡೆದುಕೊಳ್ಳುವುದಾಗಿದೆ. ಆದರೆ ಇದರ ಹಿಂದೆ ಒಂದು ದೂರಗಾಮಿ ಉದ್ದೇಶವೂ ಅಡಗಿದೆ. ಅದೇನೆಂದರೆ ಆರೆಸ್ಸೆಸ್‌ನ ಹಿಂದೂ ರಾಷ್ಟ್ರ ಸ್ಥಾಪನೆಯ ಅಜೆಂಡಾದ ಒಂದು ಪ್ರಮುಖಾಂಶವಾಗಿರುವ ಅಲ್ಪಸಂಖ್ಯಾತರ ದಮನಕ್ಕಾಗಿ ಗುರು ಗೋಳ್ವಾಲ್ಕರ್ ಸೂಚಿಸಿದ ಮಾರ್ಗೋಪಾಯಗಳನ್ನು ಕಾರ್ಯರೂಪಕ್ಕೆ ತರಲೆತ್ನಿಸುವುದು.

Writer - ಸುರೇಶ್ ಭಟ್ ಬಾಕ್ರಬೈಲ್

contributor

Editor - ಸುರೇಶ್ ಭಟ್ ಬಾಕ್ರಬೈಲ್

contributor

Similar News