ಜೆಲಿಗೆ ಹೋಗಲು ಅವಕಾಶ!, ಸೆಲ್ಫಿಗಾಗಿ ವೀಕ್ಷಣಾ ಗ್ಯಾಲರಿ !

Update: 2016-11-07 18:34 GMT

ಪ್ರವಾಸಿಗರಿಗೆ ಶೀಘ್ರವೇ ಜೈಲು ಪ್ರವಾಸ
ನೀವು ಎಂದಾದರೂ ಜೈಲ್‌ಗೆ ಹೋಗಿದ್ದೀರಾ? ಹೋಗಿಲ್ಲ ಎಂದಾದರೆ ಇನ್ನು ಮುಂದೆ ಶೋಕಿಗಾಗಿ ಆದರೂ ಒಂದು ಸಲ ಜೈಲ್‌ಗೆ ಭೇಟಿ ನೀಡಿ ಬನ್ನಿ. ಹಾಗೂ ಖುಷಿ ಖುಷಿಯಾಗಿ ವಾಪಸು ಬನ್ನಿ. ಅಂದ ಹಾಗೆ ಹೆದರಬೇಡಿ. ನೀವೇನು ಅಪರಾಧ ಮಾಡಿಲ್ಲವಲ್ಲ. ಹಾಗಾಗಿ ಜೈಲ್ ಒಳಗೆ ನಿಮ್ಮನ್ನು ಹಾಕಲಾರರು. ನಿಮಗೆ ಹೋಗಿ ಬರಬೇಕು ಎನ್ನುವ ಇಚ್ಛೆ ಉಂಟಾದರೆ ಒಮ್ಮೆ ಹೋಗಿ ಬರಬಹುದು, ಅದೂ ಪ್ರವಾಸಿಗರಾಗಿ!
ಮಹಾರಾಷ್ಟ್ರ ಸರಕಾರವು ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ಐತಿಹಾಸಿಕ ಜೈಲುಗಳನ್ನು ಜನತೆಗಾಗಿ ತೆರೆಯಲು ನಿರ್ಣಯ ಕೈಗೊಂಡಿದೆ. ಪರ್ಯಟನಾ ವಿಭಾಗದ ಅಧಿಕಾರಿಗಳು ಜೈಲ್ ಪರ್ಯಟನಾ ನೀತಿ ಅಡಿಯಲ್ಲಿ ಕೆಲಸ ಮಾಡಲು ಮುಂದಾಗಿದ್ದಾರೆ. ಶೀಘ್ರವೇ ನಿಶ್ಚಿತ ಜೈಲುಗಳಿಗೆ ಪ್ರವಾಸಿಗರು ಹೋಗಿ ಸುತ್ತಾಡಿ ಬರಬಹುದು.
ಮಹಾರಾಷ್ಟ್ರದಲ್ಲಿ ಸುಮಾರು 30 ಪ್ರಮುಖ ಜೈಲುಗಳಿವೆ. ಇವುಗಳಲ್ಲಿ ಕೆಲವು ಜೈಲುಗಳಲ್ಲಿ ಮಾತ್ರ ಪ್ರವಾಸಿಗರು ಸುತ್ತಾಡಿ ಬರುವ ವ್ಯವಸ್ಥೆ ಕೈಗೊಳ್ಳಲಾಗುವುದು. ಈ ಜೈಲುಗಳಲ್ಲಿ ವಾರಕ್ಕೆ ಕೆಲವು ದಿನ ಮತ್ತು ಕೆಲವು ಗಂಟೆಗಳ ಕಾಲ ಮಾತ್ರ ಪ್ರವಾಸಿಗರನ್ನು ಬಿಡಲಾಗುವುದು. ವಿಶ್ವದಾದ್ಯಂತ ಇಂದು ‘ಜೈಲ್ ಟೂರಿಸಂ’ನ ಕ್ರೇಜ್ ವಿಸ್ತರಿಸುತ್ತಿದೆ. ಇದನ್ನು ಮುಂದಿಟ್ಟು ಮಹಾರಾಷ್ಟ್ರ ಟೂರಿಸಂ ಕೂಡಾ ಪ್ರಮೋಟ್ ಮಾಡುವ ಯೋಜನೆ ಕೈಗೊಂಡಿದೆ.

ಯಾವೆಲ್ಲಾ ಜೈಲುಗಳನ್ನು ಜನರಿಗಾಗಿ ತೆರೆಯಲಾಗುವುದೋ ಮತ್ತು ಜೈಲ್‌ನ ಒಳಗಡೆ ಯಾವ ಯಾವ ಭಾಗಗಳನ್ನು ನೋಡಿ ಬರಬಹುದೋ ಈ ಎಲ್ಲ ವಿಷಯಗಳ ಬಗ್ಗೆ ವಿಚಾರ ವಿಮರ್ಶೆ ನಡೆಯುತ್ತಿದೆ. ಈ ಯೋಜನೆ ಜಾರಿಗೆ ತರುವ ಮೊದಲು ಸುರಕ್ಷಾ ವ್ಯವಸ್ಥೆ ಮುಂದಿಟ್ಟು ಗಂಭೀರವಾಗಿ ವಿಚಾರ ಕೈಗೊಳ್ಳಲಾಗುತ್ತಿದೆ. ದಕ್ಷಿಣ ಆಫ್ರಿಕಾದ ರಾಬೆನ್ ಐಲ್ಯಾಂಡ್‌ನಲ್ಲಿ ನಿರ್ಮಿಸಿದ ಜೈಲನ್ನು ನೋಡಲು ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಅಲ್ಲಿ ನೆಲ್ಸನ್ ಮಂಡೇಲಾ ಬಂದಿಯಾಗಿದ್ದರು. ಅದೇ ರೀತಿ ಅಂಡಮಾನ್‌ನ ರಾಜಧಾನಿ ಪೋರ್ಟ್‌ಬ್ಲೇರ್‌ನ ಸೆಲ್ಯುಲರ್ ಜೈಲ್‌ನಲ್ಲಿ ಸಾವರ್ಕರ್ ಬಂದಿಯಾಗಿದ್ದು ಅಂಡಮಾನ್‌ಗೆ ಭೇಟಿ ನೀಡಿದ ಪ್ರವಾಸಿಗರು ಇಲ್ಲಿಗೂ ಹೋಗಿ ಬರುತ್ತಾರೆ. ಇತಿಹಾಸದಲ್ಲಿ ಆಸಕ್ತಿ ಇರುವ ಪ್ರವಾಸಿಗರು ಇಂತಹ ಜೈಲುಗಳಿಗೆ ಭೇಟಿ ನೀಡಿ ಬರುತ್ತಾರೆ. ಹೀಗಾಗಿ ಮಹಾರಾಷ್ಟ್ರ ಸರಕಾರದ ಜೈಲ್ ವಿಭಾಗದ ಅಧಿಕಾರಿಗಳು, ಟೂರಿಸಂ ಇಲಾಖೆಯ ಅಧಿಕಾರಿಗಳು ಜೈಲ್ ಟೂರಿಸಂ ಪಾಲಿಸಿಯ ಬಗ್ಗೆ ವಿಚಾರ ವಿಮರ್ಶೆ ಕೈಗೊಂಡಿದ್ದಾರೆ.
ಜೈಲ್ ಅಧಿಕಾರಿಯೊಬ್ಬರ ಅನುಸಾರ ಯೆರವಾಡ ಜೈಲ್‌ನಲ್ಲಿ (ಪುಣೆ) ಗಾಂಧಿ, ನೆಹರೂ, ಬಾಲಗಂಗಾಧರ ತಿಲಕ್, ವೀರ ಸಾವರ್ಕರ್ ಮೊದಲಾ ದವರು ಬಂದಿಯಾಗಿದ್ದರು. ಹೀಗಾಗಿ ಈ ಜೈಲ್ ಕೂಡಾ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗುವ ಸಾಧ್ಯತೆಗಳಿವೆ. ಇತ್ತೀಚೆಗೆ ಸಿನೆಮಾ ನಟ ಸಂಜಯ್‌ದತ್ ಕೂಡಾ ಈ ಜೈಲ್‌ನಲ್ಲೇ ಇದ್ದು ಬಂದವರಲ್ಲವೇ!
ಮುಂಬೈ ಅರ್ಥರ್ ರೋಡ್ ಜೈಲ್ ಕೂಡಾ ಪ್ರವಾಸಿಗರ ಆಕರ್ಷಣೆ ಪಡೆದಿರುವ ಜೈಲ್ ಆಗಿದ್ದು ಪಾಕಿಸ್ತಾನಿ ಆತಂಕವಾದಿ ಅಜ್ಮಲ್ ಕಸಬ್ ಕೂಡಾ ಇಲ್ಲೇ ಇದ್ದ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಜಯ್ ಸತ್‌ಬೀರ್ ಸಿಂಗ್ ಅವರು ಸರಕಾರಕ್ಕೆ ಈ ಯೋಜನೆಯ ಮಾಹಿತಿ ನೀಡಿದ್ದಾರೆ.
* * *
ತೆರಿಗೆ ವಸೂಲಿಗೆ ತೃತೀಯ ಲಿಂಗಿಗಳ ಬ್ರಿಗೇಡ್
ಮುಂಬೈ ಸಮೀಪದ ಉಲ್ಲಾಸ್‌ನಗರ ಮಹಾಪಾಲಿಕೆಯ ಕ್ಷೇತ್ರದಲ್ಲಿ ಹತ್ತತ್ತು ವರ್ಷ ಆಸ್ತಿ ತೆರಿಗೆ ಕಟ್ಟದಿರುವವರ ಸಂಖ್ಯೆ ವಿಪರೀತ ಏರುತ್ತಿದೆ. ಇದರಿಂದ ಮನಪಾದ ಆರ್ಥಿಕ ಸ್ಥಿತಿ ತುಂಬಾ ಕೆಟ್ಟದಾಗುತ್ತಿದ್ದು ಹಣದ ಕೊರತೆ ಎದುರಿಸುತ್ತಿದೆಯಂತೆೆ. ಮನಪಾ ಕ್ಷೇತ್ರದಲ್ಲಿ ಈ ತನಕ ಸುಮಾರು 360 ಕೋಟಿ ರೂಪಾಯಿಯಷ್ಟು ಆಸ್ತಿ ತೆರಿಗೆ ಬಾಕಿ ಇದೆ ಎಂದು ವರದಿ ಹೇಳುತ್ತಿದೆ.
ಹೀಗಾಗಿ ಆಸ್ತಿ ತೆರಿಗೆ ಕಟ್ಟದಿರುವ ಜನರಿಂದ ಅವುಗಳನ್ನು ವಸೂಲು ಮಾಡಲು ಉಲ್ಲಾಸ್ ನಗರ ಮನಪಾ ಆಯುಕ್ತ ರಾಜೇಂದ್ರ ನಿಂಬಾಲ್ಕರ್ ಅವರು ಹೊಸ ಉಪಾಯವೊಂದನ್ನು ಕಂಡು ಹಿಡಿದಿದ್ದಾರೆ. ಅದಕ್ಕಾಗಿ ಅವರು ತೃತೀಯ ಲಿಂಗಿಗಳ ಬ್ರಿಗೇಡ್‌ನ ಸಹಾಯವನ್ನು ಪಡೆಯಲು ನಿರ್ಧರಿಸಿದ್ದಾರೆ.
  ಮನಪಾ ಆಯುಕ್ತರು ತಿಳಿಸಿದಂತೆ ದೀಪಾವಳಿಯ ಸಂದರ್ಭದಲ್ಲಿ ಟ್ರಾಫಿಕ್ ಪೊಲೀಸರು ಟ್ರಾಫಿಕ್ ಜಾಮ್ ಆಗದಂತೆ ತೃತೀಯ ಲಿಂಗಿಗಳ ನೆರವನ್ನು ಪಡೆಯುತ್ತಾರೆ. ಅದೇ ರೀತಿ ಅವರಿಂದಲೇ ಆಸ್ತಿ ತೆರಿಗೆ ವಸೂಲಿಯಲ್ಲೂ ಸಹಾಯ ಪಡೆಯುವ ಪ್ರಸ್ತಾವ ತರಲಾಗಿದೆ. ತೃತೀಯ ಲಿಂಗಿಗಳ ಬ್ರಿಗೇಡ್ ಯಾರು ಆಸ್ತಿ ತೆರಿಗೆ ಕಟ್ಟುತ್ತಿಲ್ಲವೋ ಅಂತಹವರ ಮನೆಗಳಿಗೆ ತೆರಳಿ ತೆರಿಗೆ ಕಟ್ಟುವಂತೆ ಹೇಳುವರು. ಯಾರು ಕಟ್ಟುವುದಕ್ಕೆ ಹಿಂದೇಟು ಹಾಕುತ್ತಾರೋ ಅವರಿಗೆ ಅವರ ಭಾಷೆಯಲ್ಲೇ ಉತ್ತರಿಸುವರು. ಇದರಿಂದ ಆ ತೆರಿಗೆ ಬಾಕಿದಾರರು ತಮ್ಮ ಮಾನ ಹೋಗುವುದು ಬೇಡವೆಂದು ತೆರಿಗೆ ಕಟ್ಟಲು ಮುಂದಾಗುವರು. ಇಂತಹ ಉಮೇದನ್ನು ಮನಪಾ ಆಯುಕ್ತ ನಿಂಬಾಲ್ಕರ್ ವ್ಯಕ್ತ ಪಡಿಸಿದ್ದಾರೆ.
* * *

ಸೆಲ್ಫಿಗಾಗಿ ಸೇಫ್ ಗ್ಯಾಲರಿ

ಮುಂಬೈ ನಗರಕ್ಕೆ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಪ್ರತಿದಿನವೂ ಬರುತ್ತಾರೆ. ನಗರದ ಐತಿಹಾಸಿಕ ಸ್ಥಳಗಳನ್ನು ಅವರೆಲ್ಲ ವೀಕ್ಷಿಸುತ್ತಾರೆ. ದಕ್ಷಿಣ ಮುಂಬೈಯ ಐತಿಹಾಸಿಕ ಕಟ್ಟಡಗಳನ್ನು ವೀಕ್ಷಿಸಲೆಂದೇ ಬರುವವರೂ ಸಾಕಷ್ಟಿದ್ದಾರೆ. ಅಂತಹ ಕಟ್ಟಡಗಳ ಎದುರು ಸೆಲ್ಫಿ ತೆಗೆದುಕೊಳ್ಳುವುದೆಂದರೆ ಅನೇಕರಿಗೆ ಇನ್ನಿಲ್ಲದ ಉತ್ಸಾಹ. ಇದೀಗ ಇಂತಹ ಪ್ರವಾಸಿಗರಿಗೆ ಮಹಾನಗರ ಪಾಲಿಕೆಯು ವೀಕ್ಷಣಾ ಗ್ಯಾಲರಿ ನಿರ್ಮಿಸಲು ಮುಂದಾಗಿದೆ. ಈ ಗ್ಯಾಲರಿ ಮಹಾನಗರ ಪಾಲಿಕೆ ಮುಖ್ಯಾಲಯದ ಸಮೀಪ ನಿರ್ಮಿಸಲಾಗುವುದು. ಈ ಗ್ಯಾಲರಿ ಎದುರು ನಿಂತು ಪ್ರವಾಸಿಗರು ಮತ್ತು ಮುಂಬೈಕರ್ ಇಲ್ಲಿನ ಐತಿಹಾಸಿಕ ಕಟ್ಟಡಗಳ ಎದುರು ಸೆಲ್ಫಿ ತೆಗೆಯಲು ಸುಲಭವಾಗಲಿದೆ. ಇಲ್ಲಿ ಪ್ರವಾಸಿಗರಿಗೆ ಸೆಲ್ಫಿ ತೆಗೆಯುವಾಗ ಯಾವುದೇ ರೀತಿಯ ಅಪಾಯ ಬರಲಾರದು.
 ದಕ್ಷಿಣ ಮುಂಬೈಯ ಛತ್ರಪತಿ ಶಿವಾಜಿ ಟರ್ಮಿನಸ್ ಕಟ್ಟಡ ಯುನೆಸ್ಕೋ ಮಾನ್ಯತೆ ಪಡೆದಿದೆ. ಅದರ ಎದುರಿನ ಮಹಾನಗರ ಪಾಲಿಕೆ ಅಥವಾ ಪೋರ್ಟ್ ಕ್ಷೇತ್ರದ ಕಟ್ಟಡಗಳು, ಗೇಟ್ ವೇ ಆಫ್ ಇಂಡಿಯಾ.... ಇಂತಹ ಐತಿಹಾಸಿಕ ಕಟ್ಟಡಗಳ ಎದುರು ಸೆಲ್ಫಿ ತೆಗೆದುಕೊಳ್ಳುವವರು ಪ್ರತೀದಿನ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಕೆಲವರು ರಸ್ತೆಗೆ ಬಂದು ಸೆಲ್ಫಿ ತೆಗೆದುಕೊಳ್ಳುವುದಿದೆ. ಆಗ ದುರ್ಘಟನೆಗಳೂ ಸಂಭವಿಸುವ ಸಾಧ್ಯತೆಗಳಿವೆ. ಇದನ್ನೆಲ್ಲ ಗಮನಿಸಿ ಸದ್ಯಕ್ಕೆ ಮುಂಬೈ ಮಹಾನಗರ ಪಾಲಿಕೆ ಮುಖ್ಯಾಲಯದ ಎದುರು ಪ್ರವಾಸಿಗರಿಗಾಗಿ ವೀಕ್ಷಣಾ ಗ್ಯಾಲರಿ ನಿರ್ಮಿಸಲು ಸಿದ್ಧತೆ ನಡೆದಿದೆ. ಈ ಗ್ಯಾಲರಿಯ ನಿರ್ಮಾಣಕ್ಕಾಗಿ ಮನಪಾ ಆಯುಕ್ತ ಅಜಯ್ ಮೆಹ್ತಾ ಅವರು ಸಹಾಯಕ ಆಯುಕ್ತರಿಗೆ ಪ್ರಸ್ತಾವ ತಯಾರಿಸಲು ಆದೇಶಿಸಿದ್ದಾರೆ. ಇದು ನಿರ್ಮಾಣವಾದ ನಂತರ ಸಿಎಸ್‌ಟಿ ಕಟ್ಟಡ ಮತ್ತು ಮನಪಾ ಮುಖ್ಯಾಲಯಗಳ ಜೊತೆ ಸೆಲ್ಫಿ ಪಡೆಯಲು ಸುಲಭವಾಗಲಿದೆ.


* * * ಮನಪಾದಿಂದ 112 ಉದ್ಯಾನಗಳು
ಮುಂಬೈಯ ಜನನಿಬಿಡ ಯಾಂತ್ರಿಕ ಬದುಕಿನ ನಡುವೆ ಜನರಿಗೆ ಒಂದಿಷ್ಟು ಆರಾವವಾಗಿ ಉಸಿರು ಬಿಡಲೂ ಸ್ಥಳದ ಕೊರತೆ ಇದೆ! ಇದನ್ನು ಮುಂದಿಟ್ಟು ಮಹಾನಗರ ಪಾಲಿಕೆಯಿಂದ ಎರಡು ವರ್ಷಗಳಲ್ಲಿ 112 ನೂತನ ಉದ್ಯಾನಗಳನ್ನು ಮುಂಬೈ ನಗರದಲ್ಲಿ ನಿರ್ಮಾಣ ಮಾಡಲಾಗಿದೆ.

ಮುಂಬೈಕರ್‌ಗಾಗಿ ಎಷ್ಟು ಸಾಧ್ಯವೋ ಅಷ್ಟು ಉದ್ಯಾನಗಳನ್ನು ನಿರ್ಮಿಸುವುದಾಗಿ ಆಡಳಿತ ಪಕ್ಷ ಮನಪಾ ಚುನಾವಣೆಯ ಸಮಯ ಈ ಹಿಂದೆ ಘೋಷಿಸಿತ್ತು. ಇದೀಗ ಮುಂದಿನ ವರ್ಷ 2017ರಲ್ಲಿ ಮತ್ತೆ ಮನಪಾ ಚುನಾವಣೆ ನಡೆಯಲಿದ್ದು ಅದರ ಪೂರ್ವ ತಯಾರಿ ಎಂಬಂತೆಯೋ ಏನೋ 112 ಹೊಸ ಉದ್ಯಾನಗಳನ್ನು ಮನಪಾ ವತಿಯಿಂದ ನಿರ್ಮಿಸಲಾಗಿದ್ದು ಆ ಬಗ್ಗೆ ಪುಸ್ತಕವನ್ನು ಮೇಯರ್ ಸ್ನೇಹಲ್ ಆಂಬೇಕರ್ ಇತ್ತೀಚೆಗೆ ಬಿಡುಗಡೆ ಮಾಡಿದರು. ಮಹಾನಗರ ಪಾಲಿಕೆಯು ವರ್ಷ 2012 ರಿಂದ 2014ರ ತನಕ ಈ ಎರಡು ವರ್ಷಗಳಲ್ಲಿ 112 ಉದ್ಯಾನಗಳನ್ನು ನಿರ್ಮಿಸಲು ಮುಂದಾಗಿತ್ತು. ಕೆಲವು ಕ್ಷೇತ್ರಗಳ ಖಾಲಿ ಸ್ಥಳದಲ್ಲಿ ಉದ್ಯಾನಗಳನ್ನು ನಿರ್ಮಿಸಲಾಗಿದೆ. ಈ 112 ಉದ್ಯಾನಗಳಿಗಾಗಿ ಮಹಾನಗರ ಪಾಲಿಕೆ ಸುಮಾರು 250 ಕೋಟಿ ರೂ. ಖರ್ಚು ಮಾಡಿದೆ. ಮನಪಾ ಉಪಾಯುಕ್ತ ಕಿಶೋರ್ ಕ್ಷೀರ ಸಾಗರ್ ಅವರು ತಿಳಿಸಿದಂತೆ ಇನ್ನೂ 50 ಹೊಸ ಉದ್ಯಾನಗಳನ್ನು ವಿಕಾಸಗೊಳಿಸಲಾಗುತ್ತಿದೆ. ಇವುಗಳಲ್ಲಿ 30 ಉದ್ಯಾನಗಳ ಕೆಲಸ ಮುಗಿದಿದೆ.
* * *

ಮುಂಬೈ ಮನಪಾದ ಲಾ ವಿಭಾಗದ ದಯನೀಯ ಸ್ಥಿತಿ!
ದೇಶದ ಅತಿ ಶ್ರೀಮಂತ ಮಹಾನಗರ ಪಾಲಿಕೆಯಾದ ಮುಂಬೈ ಮಹಾನಗರ ಪಾಲಿಕೆಯು ತನ್ನ ಕಾನೂನು ಹೋರಾಟಗಳಲ್ಲಿ ಪ್ರಭಾವ ಬೀರಲು ವಿಫಲವಾಗಿದ್ದು ಇದಕ್ಕೆ ಸಾಕ್ಷಿ ಎಂಬಂತೆ ಸುಮಾರು 60,000 ಪೆಂಡಿಂಗ್ ಪ್ರಕರಣಗಳು ಮತ್ತು ತಾರೀಕಿನ ಮೇಲೆ ತಾರೀಕು.......ಮುಂಬೈ ಮನಪಾದ ಲಾ ವಿಭಾಗದ ಇದು ಸದ್ಯದ ದೃಶ್ಯ! ಇದನ್ನು ಬದಲಿಸುವುದಕ್ಕೆ ಆಡಳಿತವು ತಾಂತ್ರಿಕತೆಯ ಸಹಾಯವನ್ನು ಪಡೆಯಲು ತಯಾರಿ ನಡೆಸುತ್ತಿದೆ. ಲಾ ವಿಭಾಗದ ಕೆಲಸ ಕಾರ್ಯಗಳ ಮೇಲೆ ನಿಗಾ ಇರಿಸುವುದಕ್ಕೆ ಸಾಫ್ಟ್‌ವೇರ್ ತಯಾರಿಸಲಾಗುತ್ತಿದೆ. ಪೈಲಟ್ ಪ್ರೊಜೆಕ್ಟ್ ಮೇಲೆ ಕೆಲಸ ಶುರುವಾಗಿದೆ. ಡಿಸೆಂಬರ್ ತಿಂಗಳ ಆರಂಭದ ವಾರದಲ್ಲಿ ಮುಖ್ಯಮಂತ್ರಿಯವರ ಹಸ್ತದಿಂದ ಇದರ ಶುಭಾರಂಭವಾಗುವ ಸಾಧ್ಯತೆಯಿದೆ.
ಇಂದು 6 ಕೋರ್ಟ್‌ಗಳಲ್ಲಿ 60 ಸಾವಿರಕ್ಕೂ ಅಧಿಕ ಪ್ರಕರಣಗಳು ವಿಚಾರಣೆ ನಡೆಯುತ್ತಿವೆ. ಮನಪಾ ಲಾ ವಿಭಾಗದ ಬಳಿ ಕೇಸ್‌ನ ತಾರೀಕುಗಳ ಪೂರ್ವ ತಯಾರಿ ಇರುವುದಿಲ್ಲ. ಅಧಿಕಾರಿಗಳೇ ಎಲ್ಲವನ್ನೂ ಮಾಡಬೇಕಾಗುತ್ತದೆ. ಮುಂಬೈ ಮನಪಾದ ಲಾ ವಿಭಾಗದ ಬಳಿ ಯಾವ ತಾರೀಕಿಗೆ ಯಾವ ಕೇಸ್ ಇದೆ ಎನ್ನುವ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ತಯಾರಿ ಕೂಡಾ ಸರಿಯಾಗಿ ನಡೆಯುತ್ತಿಲ್ಲ. ಇತ್ತೀಚೆಗೆ ಒಂದು ಕೇಸ್‌ನ ವಿಚಾರಣೆಯಲ್ಲಿ ಈ ಕಾರಣದಿಂದಾಗಿಯೇ ಮಹಾನಗರ ಪಾಲಿಕೆ ಕಮಿಶನರ್‌ಗೆ ಕೋರ್ಟ್‌ನ ಛೀಮಾರಿ ಸಿಕ್ಕಿತು. ಮುಂಬೈ ಮಹಾನಗರ ಪಾಲಿಕೆ ದುಬಾರಿ ವಕೀಲರ ತಂಡವನ್ನೇ ಇರಿಸಿ ಅವರಿಗೆ ದೊಡ್ಡ ಮೊತ್ತದ ಫೀಸ್ ನೀಡುತ್ತಿದ್ದರೂ ವ್ಯವಸ್ಥೆಯಲ್ಲಿ ಪಾರದರ್ಶಿತ್ವ ಇರುವುದಿಲ್ಲ. ಇಂತಹ ಸ್ಥಿತಿಯಲ್ಲಿ ಹೊಸ ಸಾಫ್ಟ್‌ವೇರ್ ಬಂದ ನಂತರ ಒಂದು ಕ್ಲಿಕ್‌ಗೆ ಕೇಸ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ದೊರೆಯಲಿದೆಯಂತೆ.
ವರ್ತಮಾನದಲ್ಲಿ ಕೆಲವು ಕೇಸ್‌ಗಳಂತೂ ವರ್ಷಗಟ್ಟಲೆಯಿಂದ ನಡೆಯುತ್ತಿದೆ. ಇವುಗಳಲ್ಲಿ ಕೇವಲ ತಾರೀಕು ಮಾತ್ರ ಸಿಗುತ್ತಿವೆ. ಕೆಲವೊಮ್ಮೆ ಅಧಿಕಾರಿಗಳೇ ತಮ್ಮೆಳಗೆ ಒಪ್ಪಂದ ಮಾಡಿಕೊಂಡು ತಾರೀಕು ಪಡೆಯು ವುದೂ ಇದೆಯಂತೆ! ಇದಕ್ಕಾಗಿ ದೊಡ್ಡ ಮೊತ್ತವನ್ನು ಸಲ್ಲಿಸಬೇಕಾಗುವುದು.
ಈಗ ಮುಂಬೈ ಮನಪಾ ತನ್ನ ವಕೀಲರ ಪ್ಯಾನೆಲ್ ರಚಿಸಿದೆ. ಇವರಿಗೆ ಆಯಾಯ ಕೇಸ್‌ಗಳನ್ನು ನೀಡಲಾಗುತ್ತದೆ. ಸಾಫ್ಟ್‌ವೇರ್ ಬಂದ ನಂತರ ವಕೀಲರಿಗೆ ಕೇಸ್‌ಗಳ ಮಾಹಿತಿಯ ಆಧಾರದಲ್ಲಿ ಜವಾಬ್ದಾರಿ ನೀಡಲಾ ಗುವುದು. ಇದರಲ್ಲಿ ಅಧಿಕಾರಿಗಳ ಹಸ್ತಕ್ಷೇಪ ಇರುವುದಿಲ್ಲವಂತೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News