ಮಕ್ಕಳೇ ಮನೆಗೆ-ದೇಶಕ್ಕೆ ಮಾಣಿಕ್ಯ!

Update: 2016-11-13 18:56 GMT

ಹೊಳಪಿನ ಕೆಂಪು ಹರಳುಗಳೆಲ್ಲ ಕಳ್ಳಸಾಗಣೆಯಾಗಿಬಿಟ್ಟಿವೆಯೆ ಎಂಬಷ್ಟು ಎಲ್ಲೆಲ್ಲೂ ಮನೆಗಳು-ದೇಶಗಳು ಭಣಭಣ. ಅಯ್ಯೋ, ಎಲ್ಲಿ ಹೋದರು ಅವರೆಲ್ಲ? ಎಳೆಯರು, ಗೆಳೆಯರು ಹೂವಿನ ಹಂದರದ ಹೃದಯ ದವರು, ‘‘ನಾಳೆ ನಾವೇ ನಾಡ ಹಿರಿಯರು’’ ಎಂದು ಬೀಗಿದವರು ಎಂದು ಹುಡುಕಾಡಿದರೆ, ಮಕ್ಕಳೆಲ್ಲ ಕಷ್ಟ-ಕಾರ್ಪಣ್ಯ-ಅಸ್ಥಿರತೆ-ಅಯೋಮಯ ಲೋಕದಲ್ಲಿ ಹುದುಗಿ ಹೋಗಿದ್ದಾರೆ. ಸಿರಿವಂತರು-ಬಡವರೆನ್ನದೆ. ಆ ಖಂಡದವರು, ಈ ತೀರದವರು, ಪೂರ್ವರಾಷ್ಟ್ರಗಳವರು, ಪಶ್ಚಿಮಕ್ಕೆ ಸೇರಿದವರು ಎಂಬ ಭೇದವಿಲ್ಲದೆ. ಅವರ ಸುಂದರ ಕನಸುಗಳೆಲ್ಲ ಚೂರುಚೂರಾಗಿವೆ. ಎಲ್ಲಕ್ಕೂ ಕಾರಣ ‘‘ದೊಡ್ಡವರು’’ ಎನಿಸಿಕೊಳ್ಳುವ ದಡ್ಡರೇ. ಅದರಲ್ಲೇನೂ ಕಿಂಚಿತ್ ಅನುಮಾನವಿಲ್ಲ.
ಮಕ್ಕಳನ್ನು ಪ್ರಪಂಚಕ್ಕೆ ಬರಮಾಡಿಕೊಳ್ಳುವಾಗಲೇ ನೂರೆಂಟು ತಾಪತ್ರಯ. ಬಡ, ಅಶಿಕ್ಷಿತ ಸಂಸಾರಗಳಿಗೆ ಅದು ಹೊಸ ಸದಸ್ಯನ/ಳ ಆಗಮನದಿಂದ ಶುರುವಾಗಿ, ಹೆಚ್ಚುತ್ತಲೇ ಹೋಗುವ ಖರ್ಚಿನ ಬಾಬ್ತಾದರೆ, ಸ್ಥಿತಿವಂತ ಕುಟುಂಬಗಳ ಮುಚ್ಚಟೆ ಇಂತಹ ದಿನ, ಈ ಮುಹೂರ್ತದಲ್ಲಿ, ಅವರನ್ನು ಬರಮಾಡಿಕೊಳ್ಳಬೇಕೆನ್ನುವುದರಿಂದ ಆರಂಭವಾಗಿ, ಲಾಲನೆ-ಪಾಲನೆಯಲ್ಲಿ ಅವರುದ್ದಕ್ಕೂ ದುಡ್ಡು ಸುರಿಯುವುದರಲ್ಲಿ ಅಂತ್ಯಗೊಳ್ಳುತ್ತದೆ. ಮಕ್ಕಳೊಂದಿಗೆ ಒಡನಾಡಲು ತಂದೆ ತಾಯಿಯರಿಗೆ ಬೇಕಾದ ಸಮಯಕ್ಕೆ ಮಾತ್ರ ಸಂಚಕಾರ. ನಿಸರ್ಗ ರೂಪಿಸಿದಂತೆ, ಶಿಶುವನ್ನು ಹೆತ್ತು, ಒಂದೆರಡು ವರ್ಷ ಅದರೆಡೆ ಸಂಪೂರ್ಣ ಗಮನ ಕೇಂದ್ರೀಕರಿಸಬೇಕಾದ ತಾಯಿ, ತನ್ನ ಉದ್ಯೋಗ, ಬಡ್ತಿ, ಅಡಚಣೆ ಗಳಿಲ್ಲದ ವೃತ್ತಿಜೀವನದ ಕಡೆಗೂ ಅಷ್ಟೇ ಬದ್ಧತೆ, ಸೆಳೆತ ಹೊಂದಿದ್ದಾಳೆ. ಇಂತಹ ಸನ್ನಿವೇಶದಲ್ಲಿ ಅತ್ಯಗತ್ಯವಾದ ಪತಿ ಮತ್ತು ಇತರ ಸದಸ್ಯರ ಬೆಂಬಲ ಎಲ್ಲರಿಗೂ ಸಿಗುತ್ತಿಲ್ಲ. ಈ ಕುರಿತಂತೆ ಆಡಳಿತ ವ್ಯವಸ್ಥೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಆರೋಗ್ಯಕರ ಸಂತಾನ ಹೊಂದಲು ತಾರುಣ್ಯದಲ್ಲಿ ಬಿಡುವಿಲ್ಲದ ಉನ್ನತ ಉದ್ಯೋಗಸ್ಥ ಮಹಿಳೆಯರು ವೈಜ್ಞಾನಿಕ ವಿಧಾನಗಳನ್ನು ಬಳಸಿಕೊಂಡು ತಾವು ತಾಯ್ತನ ಹೊಂದಲು ವೇಳೆ ಸಿಕ್ಕಾಗ, ಭಾವನಾತ್ಮಕವಾಗಿ ಅದಕ್ಕೆ ಸಿದ್ಧರಾದಾಗ ಗರ್ಭ ಧರಿಸುವುದು ಸಾಮಾನ್ಯ ಎಂಬಂತಾಗಿದೆ. ಇಂತಹವರನ್ನು ಒಳಗೊಂಡಂತೆ, ಅನೇಕ ಸ್ಥಿತಿವಂತ ಕುಟುಂಬಗಳು ತಮ್ಮ ಹಲವು ವಿಧದ ಸಮಸ್ಯೆಗಳಿಗೆ ಬಾಡಿಗೆ ತಾಯ್ತನದಲ್ಲಿ ಉತ್ತರ ಕಂಡುಕೊಳ್ಳುತ್ತಿದ್ದಾರೆ.
ತನ್ನದೇ ನೀತಿ,ರೀತಿ,ನಿಯಮಗಳಲ್ಲಿ ಕಾರ್ಯನಿರ್ವಹಿಸುವ ಪ್ರಕೃತಿಯೊಂದಿಗೆ, ಎಷ್ಟು ಹಾಗೂ ಎಲ್ಲಿಯ ತನಕ ಮನುಷ್ಯ ಮಧ್ಯಪ್ರವೇಶಿಸಬಹುದು ಎಂಬ ದ್ವಂದ್ವ ವನ್ನು ಈ ‘‘ಆರ್ಟ್- ಆರ್ಟಿಫಿಶಿಯಲ್ ರಿಪ್ರೊಡಕ್ಟಿವ್ ಟೆಕ್ನಾಲಜಿ’’ ಪ್ರಜ್ಞಾವಂತರಲ್ಲಿ ಹುಟ್ಟುಹಾಕಿದೆ. ಬಹುತೇಕ ಮಹಾನಗರಗಳಲ್ಲಿ ಇಂದು ವಿಶ್ವದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಫರ್ಟಿಲಿಟಿ ಕೇಂದ್ರಗಳಿವೆ. ಸಂತಾನಹೀನತೆಯಿಂದ ಭಾವನಾತ್ಮಕವಾಗಿ ತೊಳಲಾಡುವ ದಂಪತಿಯನ್ನು ಉಪಚರಿಸುತ್ತೇವೆ ಎಂಬ ಉದಾತ್ತತೆಯನ್ನು ಹೆಚ್ಚು ಗಟ್ಟಿಯಾಗಿಯೇ ಇವೆಲ್ಲ ಹೇಳಿಕೊಂಡರೂ ಅವು ನಡೆಸುತ್ತಿರುವ ಒಳ್ಳೆಯ ವಹಿವಾಟು ಕೇಂದ್ರ ಮತ್ತು ರಾಜ್ಯ ಸರಕಾರಗಳ ಗಮನಕ್ಕೆ ಬಂದು ಅವರು ಸಂಬಂಧಪಟ್ಟ ನೀತಿ-ನಿಯಮಗಳನ್ನು ಪರಿಷ್ಕರಿಸುವ ಪ್ರಯತ್ನದಲ್ಲಿದ್ದಾರೆ.
 ಬಡ ತಾಯಂದಿರನ್ನು ವಾರ್ಡ್‌ಗಳಲ್ಲಿ ಗುಂಪುಗುಂಪಾಗಿ ಇರಿಸಿ, ಪೋಷಿಸಿ, ಅವರು ಗರ್ಭದಲ್ಲಿ ಧರಿಸಿರುವ ಬೇರೆಯವರ ಮಗುವನ್ನು ಸುಸೂತ್ರವಾಗಿ ಹೆರಿಗೆ ಮಾಡಿಸಿ, ಸಂತಾನಾಪೇಕ್ಷೆಯ ದಂಪತಿಗೆ ಒಪ್ಪಿಸಿ ಕಳುಹಿಸಿಕೊಡುವ ವೈದ್ಯರು ಕಾಂಟ್ರ್ಯಾಕ್ಟುದಾರರ ಹೊಸ ಅವತಾರದಲ್ಲಿ ಗೋಚರಿಸುತ್ತಿದ್ದಾರೆ. ಇದರಲ್ಲಿ ಅವರ ಸಂಪಾದನೆಯೂ ಜೋರಾಗಿದೆ. ಇದೆಲ್ಲ ಏನು ರಾಜಕಾರಣ? ಬರಬರುತ್ತಾ ಎಂತಹ ವಕ್ರ ಸ್ವರೂಪವನ್ನು ಇದು ಪಡೆದುಕೊಳ್ಳಬಹುದು ಹಾಗೂ ಬಡ ಮಹಿಳೆಯರನ್ನು ಎಷ್ಟೊಂದು ರೀತಿಯಲ್ಲಿ ಶೋಷಿಸಬಹುದು ಎನ್ನುವ ಅರಿವು ಯಾರಿಗೂ ಇಲ್ಲವೆ ಎಂದು ತೀಕ್ಷ್ಣವಾಗಿ ವಿರೋಧಿಸುತ್ತಿರುವ ಲೇಖಕಿ, ಸಾಮಾಜಿಕ ಕಾರ್ಯಕರ್ತೆ ಪಿಂಕಿ ಇರಾನಿ (ಮಕ್ಕಳ ಲೈಂಗಿಕ ಶೋಷಣೆ ಕುರಿತು ಪ್ರಥಮವಾಗಿ ದನಿಯೆತ್ತಿದ ಬಿಟ್ಟರ್ ಚಾಕಲೆಟ್ ಬರೆದವರು) ತಮ್ಮ ಇತ್ತೀಚಿನ ಪ್ರಕಟನೆ ಪಾಲಿಟಿಕ್ಸ್ ಆಫ್ ದಿ ವೂಂಬ್; ದಿ ಪೆರಿಲ್ಸ್ ಆಫ್ ಐವಿಎಫ್, ಸರೊಗೆಸಿ ಆ್ಯಂಡ್ ಮಾಡಿಫೈಡ್ ಬೇಬೀಸ್ (2016) ಪುಸ್ತಕದಲ್ಲಿ ಈ ಎಲ್ಲ ಅಂಶಗಳನ್ನು ವಿವರವಾಗಿ ಚರ್ಚಿಸುತ್ತಾರೆ.
    ಸರೊಗೆಸಿ ಭಾರತದಲ್ಲಿ ಉಳಿದ ದೇಶಗಳಿಗಿಂತ ಕಡಿಮೆ ಖರ್ಚಿನಲ್ಲಿ ನೆರವೇರುತ್ತದೆ ಎಂಬ ಸಂಗತಿಯಿಂದಾಗಿ ‘‘ಬೇಬಿ ಶಾಪಿಂಗ್’’ ಮಾಡಲು ಇಲ್ಲಿಗೆ ಬಂದ ವಿದೇಶಿ ದಂಪತಿ ವಿಷಯವನ್ನು ಇನ್ನಷ್ಟು ಜಟಿಲಗೊಳಿಸುತ್ತಾರೆ: ಉದಾಹರಣೆಗೆ ತಮ್ಮ ಮಗುವನ್ನು ಬಾಡಿಗೆ ತಾಯಿಯಿಂದ ವಶಕ್ಕೆ ಪಡೆಯುವ ವೇಳೆಗೆ ಸರಿಯಾಗಿ ವಿಚ್ಛೇದನ ಹೊಂದಿದ ಜಪಾನಿ ದಂಪತಿ, ಅದನ್ನು ಹೊಂದಲು ಮುಂದೆ ಬರಲಿಲ್ಲ. ಗಲಾಟೆಯಾದಾಗ ಅದನ್ನು ಕರೆದೊಯ್ದು ಜಪಾನಿನಲ್ಲಿದ್ದ ಅಜ್ಜಿಯ (ಅಮ್ಮನ ಅಮ್ಮ) ಸುಪರ್ದಿಗೆ ಬಿಟ್ಟರು. ಅಲ್ಲಿಯ ಪೌರತ್ವ ನವಜಾತ ಶಿಶುವಿಗೆ ಸಿಗದು, ಹಾಗಿರುವಾಗ ಈ ಪೋಷಣೆ ಎಲ್ಲಿಯತನಕ ನಡೆದೀತು ಎಂಬ ಗೊಂದಲದಲ್ಲಿಯೇ ಮಗು ಬೆಳೆಯುತ್ತಿದೆ. ಇನ್ನೊಂದು ವಿದೇಶಿ ದಂಪತಿ ಒಂದು ಮಗುವನ್ನು ಹೊಂದಲು ಮಾತ್ರ ತಯಾರಿದ್ದರು. ಆದರೆ ಐವಿಎಫ್‌ಗಳಲ್ಲಿ ಒಂದಕ್ಕಿಂತ ಹೆಚ್ಚು ಅಂಡಾಣುಗಳನ್ನು ಫಲೀಕರಿಸುವುದು ಸಾಮಾನ್ಯ ಆಗಿರುವುದರಿಂದ ನಿರೀಕ್ಷೆ ಮೀರಿ ಎರಡು ಭ್ರೂಣಗಳು ಒಂದು ಕೇಸ್‌ನಲ್ಲಿ ಜೀವತಳೆದವು. ಆದರೆ ಈ ಸನ್ನಿವೇಶಕ್ಕೆ ಸಂಬಂಧಪಟ್ಟವರು ತಯಾರಿರಲಿಲ್ಲ. ‘‘ಪ್ಲಾನ್-ಬಿ’’ ಯೋಚಿಸಿಟ್ಟು ಕೊಂಡಿರಲಿಲ್ಲ. ಬಾಡಿಗೆ ತಾಯಿಯಲ್ಲಿ ಬೆಳೆದ ಅವಳಿಯಲ್ಲಿ ಎರಡನೆ ಮಗುವನ್ನು ಏನು ಮಾಡಬೇಕು ಎಂಬ ಸಮಸ್ಯೆ ಎದುರಾಯಿತು. ಮತ್ತೊಂದು ಪ್ರಕರಣದಲ್ಲಿ ವೈಕಲ್ಯ ಹೊತ್ತು ಹುಟ್ಟಿದ ಶಿಶುವನ್ನು ಪಡೆಯಲು ಜೈವಿಕ ತಂದೆತಾಯಿ ನಿರಾಕರಿಸಿ ದರು. ಹೀಗೆಲ್ಲ ವ್ಯಾಪಾರಿ ದೃಷ್ಟಿಯಲ್ಲಿ ತನ್ನ ಭವಿಷ್ಯ ನಿರ್ಧರಿಸಲು, ತನ್ನನ್ನು ವಿನಿಮಯದ ವಸ್ತುವಾಗಿಸಲು ಹೊಟ್ಟೆಯಲ್ಲಿ ಬೆಳೆಯುತ್ತಿರುವ ಜೀವದ ಒಪ್ಪಿಗೆ ಇದೆಯೇ ಎಂಬ ಯೋಚನೆ ಯಾರಿಗೂ ಬರುವುದಿಲ್ಲವೆ? ಅದರ ಹಕ್ಕು, ಬಾಧ್ಯತೆ ಲೆಕ್ಕಕ್ಕೇ ಇಲ್ಲವೆ?’’ ಎಂಬಂಥ (ಪಿಂಕಿ ಇರಾನಿ ಎತ್ತುವ) ಸೂಕ್ಷ್ಮಸಂವೇದಿ ವಿಚಾರಗಳು ವ್ಯಕ್ತಿ ಹಾಗೂ ದೇಶಗಳ ಅಂತರಾತ್ಮ ಕೆಣಕು ವಂತಿವೆ. ಈ ಎಲ್ಲ ಆಯಾಮಗಳನ್ನು ಅನುಕೂಲಕರವಾಗಿ ಕಡೆಗಣಿಸಿ 3 ಶತಕೋಟಿ ಅಮೆರಿಕನ್ ಡಾಲರ್ ವಹಿವಾಟು ಅಭಿವೃದ್ಧಿಸಿಕೊಂಡ ಸರೊಗೆಸಿಯನ್ನು ನಿಯಂತ್ರಣದಲ್ಲಿಡಲು ಕೆಲ ತಿಂಗಳ ಹಿಂದೆ ವಿಧೇಯಕ ಸದನದಲ್ಲಿ ಜಾರಿಯಾಯಿತೇನೋ ಹೌದು. ಆದರೆ ಅದು ಎಷ್ಟು ಪರಿಣಾಮಕಾರಿ ಎಂದು ತಿಳಿಯಲು ಇನ್ನೂ ಸಮಯ ಬೇಕು.
ಹೀಗೆ ಜೈವಿಕ ತಂದೆತಾಯಿಯರೋ ಇಲ್ಲವೇ ದಾನಿ ಹಾಗೂ ಬಾಡಿಗೆ ತಾಯಿಯೋ ಭೂಮಿಗೆ ತಂದ ಮೇಲಾದರೂ ಮಕ್ಕಳು ಒಂದು ಸುರಕ್ಷಿತ ಜೀವನ ನಡೆಸಬಲ್ಲರೆ ಎನ್ನುವುದು ಕೂಡ ತೂಗುಯ್ಯಲೆ. ಎಲ್ಲೆಡೆ ಅರಾಜಕತೆ, ಆಂತರಿಕ ಕದನ, ಸರಕಾರ ಹಾಗೂ ಸೇನೆ ಅನ್ಯ ದೇಶಗಳ ನೆರವಿನೊಂದಿಗೆ ಪ್ರತ್ಯೇಕತಾವಾದಿಗಳ ಜತೆ ನಡೆಸುವ ಯುದ್ಧ, ಯಾರು ದಂಗೆಯೆದ್ದವರು, ಯಾರು ಸಿಂಧುವಾದ ಅಧಿಕಾರ ಹೊಂದಿರು ವವರು ಎಂದು ನಿರ್ಧರಿಸಲಾಗದ ಸ್ಥಿತಿ. ಕಳೆದ ನಾಲ್ಕು ವರ್ಷಗಳಿಂದ ಜಾರಿಯಲ್ಲಿರುವ ಇರಾಕ್-ಸಿರಿಯ ಸಂಘರ್ಷ ಇವೆಲ್ಲ ಸಂಕೀರ್ಣತೆ ಹೊಂದಿದ್ದು, ನಾಗರಿಕತೆಯ ಯಾವ ಅನುಸಂಧಾನಕ್ಕೂ ಜಗ್ಗದೆ ಮುಂದುವರಿಯುತ್ತಿದೆ. ವಿಶ್ವದ ಮಕ್ಕಳ ಸ್ಥಿತಿ-ಗತಿ ಕುರಿತ 2016ರ ಯುನಿಸೆಫ್ (ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಮಕ್ಕಳ ತುರ್ತು ನಿಧಿ) ವರದಿ, ಅನಿರ್ದಿಷ್ಟವಾಗಿ ಮುಂದುವರಿದ ಯುದ್ಧ-ಕದನಗಳು ಅಸಹಾಯಕ ಹಸುಳೆಗಳನ್ನು ಬರ್ಬರ ಪರಿಸರದಲ್ಲಿ ಜೀವಿಸುವಂತೆ ಮಾಡಿ, ಎಣಿಸಲಾರದ ಹಾನಿ ಉಂಟುಮಾಡುತ್ತಿವೆ ಎನ್ನುತ್ತದೆ. ‘‘ಲಕ್ಷಾನುಗಟ್ಟಲೆ ಮಕ್ಕಳ ಬದುಕು ಹಾಗೂ ಭವಿಷ್ಯ ಕಳೆದ ಹತ್ತೆಂಟು ವರ್ಷಗಳಲ್ಲಿ ಅತ್ಯಂತ ಡೋಲಾಯಮಾನವಾಗಿದೆ; ಮಾನವತೆಯ ಮುಂದೆ ಈಗ ಇರುವುದು ಎರಡೇ ಆಯ್ಕೆ; ಅತ್ಯಂತ ಹೊರಗುಳಿದ ಮಕ್ಕಳನ್ನೂ ಒಂದು ಸುರಕ್ಷಿತ ವ್ಯವಸ್ಥೆಯಡಿ ತರಲು ಈಗ ಅಂದರೆ ಈಗಲೇ ಪ್ರಾಮಾಣಿಕ ಪ್ರಯತ್ನ ಮಾಡುವುದು ಅಥವಾ ಕಣ್ಣೆದುರೇ ಒಂದು ಅತ್ಯಂತ ವಿಘಟಿತ, ಅನ್ಯಾಯದ ಸಮಾಜ ನಿರ್ಮಾಣ ಆಗುವುದರ ಅಪಾಯ ಎದುರಿಸುವುದು ಎಂಬ ತೀವ್ರ ಎಚ್ಚರಿಕೆಯನ್ನು ಅದು ನೀಡುತ್ತಿದೆ.

ಸತ್ವಯುತ ಆಹಾರ, ಶುದ್ಧ ಕುಡಿಯುವ ನೀರು, ನೈರ್ಮಲ್ಯ ವ್ಯವಸ್ಥೆ ಎಳೆಯ ಮಕ್ಕಳ ಪ್ರಾಥಮಿಕ ಅಗತ್ಯಗಳು. ತಮ್ಮೆಲ್ಲ ಇತಿಮಿತಿಯಲ್ಲಿ ಬಡ ಪಾಲಕರು ಇವನ್ನು ಒದಗಿಸಲು ಜೀವ ತೇಯುತ್ತಾರಾದರೂ ಬಾಂಗ್ಲಾದಂತಹ ಬಡ ದೇಶದ ಉದಾಹರಣೆ ತೆಗೆದುಕೊಂಡರೆ, ಕೇವಲ ಅಕ್ಕಿ ಹಾಗೂ ಆಲೂಗಡ್ಡೆ ಅನೇಕ ಮಕ್ಕಳ ಆಹಾರ ಆಗಿರುತ್ತದೆ. ವಿಶ್ವದ 900 ದಶಲಕ್ಷ ಮಕ್ಕಳಲ್ಲಿ ಅರ್ಧಕ್ಕರ್ಧ ದಿನವಹಿ 1.9 ಅಮೆರಿಕನ್ ಡಾಲರ್ ವರಮಾನದಲ್ಲಿ ಪೋಷಿಸಲ್ಪಡುತ್ತವೆ ಎನ್ನುವುದು 2014ರ ಅಂಕಿ-ಸಂಖ್ಯೆ. ಶುದ್ಧ ಕುಡಿಯುವ ನೀರು ಸಿಗದ ಕಾರಣ ಪದೇಪದೆ ನಿರ್ಜಲೀಕರಣದಿಂದ ತೊಳಲುತ್ತವೆ. ಯುದ್ಧ ಪೀಡಿತ ಸಿರಿಯಾದಲ್ಲಿ ಶುದ್ಧ ಕುಡಿಯುವ ನೀರಿಲ್ಲದೆ ದಿನ ಕಳೆಯುತ್ತಿರುವ ಸುಮಾರು ಎರಡೂವರೆ ಲಕ್ಷ ಜನರಲ್ಲಿ ಮೂರನೆ ಒಂದು ಭಾಗ ಮಕ್ಕಳು ಎಂಬ ಆಘಾತಕಾರಿ ಅಂಶ ಒಂದು ವರದಿಯಿಂದ ಬಯಲಾಗಿದೆ. ಆರೋಗ್ಯವಂತ ಆಕಾರ, ತೂಕ ಇಲ್ಲದ ಕುಂಠಿತ ಬೆಳವಣಿಗೆ ಇದೆಲ್ಲದರ ಒಟ್ಟು ಪರಿಣಾಮ. ಆಯಾ ಪ್ರದೇಶಗಳಲ್ಲಿ ಬೀಡುಬಿಟ್ಟಿರುವ ರೋಗ ರುಜಿನಗಳು, ಕಲುಷಿತ ಪರಿಸರ ಇದಕ್ಕೆ ತಮ್ಮದೇ ಕಾಣಿಕೆ ಸಲ್ಲಿಸುತ್ತವೆ. ಜಪಾನೀಸ್ ಎನ್‌ಸೆಪಲೈಟಿಸ್ ಎಂಬ ಮಾರಣಾಂತಿಕ, ವೈಕಲ್ಯಗೊಳಿಸುವ ಬೇನೆಯ ನೆಲೆಯಾಗಿರುವ ಭಾರತದ ಒಡಿಶಾ ರಾಜ್ಯದ ಪೋರನೊಬ್ಬ ಇತ್ತೀಚೆಗೆ ಪ್ರಧಾನಿಯನ್ನು ತಮ್ಮ ಪ್ರದೇಶಕ್ಕೆ ಬಂದು ಅಲ್ಲಿನ ಮಕ್ಕಳ ದುಸ್ಥಿತಿ ನೋಡಿ, ಸುಧಾರಿಸುವಂತೆ ವಿನಂತಿಸಿಕೊಂಡ. ನಿರಾಶ್ರಿತರ ಕ್ಯಾಂಪುಗಳಲ್ಲಿ, ವಲಸಿಗರ ಸಾಗರದಲ್ಲಿ ಎದ್ದುಕಾಣುವಂತೆ ಇರುವ ಅಸ್ಥಿರ ನಡೆ, ಬೆಳ್ಳನೆ ಕಣ್ಣುಗಳ, ಹಗುರ, ಚಿಕ್ಕ ಆಕಾರದ ಕುಪೋಷಣೆಯ ಮಕ್ಕಳು ಕರುಣೆ, ಅಂತಃಕರಣ ಇತ್ಯಾದಿ ಜೀವನ ವೌಲ್ಯಗಳು ಇರುವುದು ನಿಜವೇ ಎನಿಸಿಬಿಡುತ್ತಾರೆ.
ಆಹಾರದಷ್ಟೇ ಪ್ರಾಥಮಿಕ ಅಗತ್ಯವಾದ ವಿದ್ಯಾಭ್ಯಾಸಕ್ಕೂ ಈ ವಿಷಮ ಯುಗದಲ್ಲಿ ಹೆಜ್ಜೆಗೊಂದು ಧಕ್ಕೆ. ದಿಲ್ಲಿಯಲ್ಲಿ ಹೊಗೆಪೂರಿತ ಮಂಜು ಸ್ಮಾಗ್ ಕವುಚಿಕೊಂಡು ಮಕ್ಕಳ ಕ್ಷೇಮಕ್ಕಾಗಿ ಶಾಲೆಗಳು ಮುಚ್ಚಿಕೂತವು. ಕಾಶ್ಮೀರ ಪ್ರತ್ಯೇಕತಾವಾದಿಗಳ ಅಬ್ಬರದಿಂದಾಗಿ ಅಲ್ಲಿ ನಾಲ್ಕು ತಿಂಗಳಿಂದ ಶಾಲಾ ಮಕ್ಕಳಿಗೆ ರಜೆ ಎಂಬ ಸಜೆ. ಭಯೋತ್ಪಾದಕರು ಮಕ್ಕಳನ್ನು, ಸ್ಕೂಲ್‌ಗಳನ್ನು ಗುರಿಯಾಗಿಸಿಕೊಂಡು ತಮ್ಮ ಪೈಶಾಚಿಕತೆಯನ್ನು ವಿಸ್ತರಿಸಿಕೊಂಡಿದ್ದಾರೆ. ಶಾಲೆಗೆ ಭರ್ತಿಯಾಗುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, 6-11 ವಯೋಮಾನದ ಮಕ್ಕಳು ಶಾಲೆ ತೊರೆಯುವುದು ಹೆಚ್ಚಾಗುತ್ತಿದೆ; ಪ್ರತಿ ಐವರಲ್ಲಿ ಇಬ್ಬರು ಅಕ್ಷರ ಜ್ಞಾನವಿಲ್ಲದೆ, ಗಣಿತ ಕಲಿಯದೆ ಪ್ರಾಥಮಿಕ ವಿದ್ಯಾಭ್ಯಾಸದಿಂದ ಹೊರಬೀಳುತ್ತಿದ್ದಾರೆ ಎಂದು 2013ರ ಸಮೀಕ್ಷೆ ತಿಳಿಸುತ್ತದೆ. ಸುಮಾರು 124 ದಶಲಕ್ಷ ಹದಿವಯಸ್ಸಿನವರು ಸ್ಕೂಲುಗಳಿಗೆ ಹಾಜರಾಗುಮದೇ ಇಲ್ಲ ಎನ್ನುತ್ತದೆ ಇತ್ತೀಚಿನ ಯುನಿಸೆಫ್ ವರದಿ.

ಸ್ಥಿತಿವಂತ ಕುಟುಂಬಗಳ ಕೈಗೆಟಕುವ ಶಿಕ್ಷಣ ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ ಅತ್ಯಂತ ದುಬಾರಿಯಾಗಿರುವುದು, ಈ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿರುವ ಖಾಸಗಿ ಶಾಲೆಗಳ ತಡೆಯೇ ಇಲ್ಲದ ‘ದರ್ಬಾರ್’ ಬೇರೆಯದೇ ಒಂದು ಸಮಸ್ಯೆ. ಪಾಲಕರು ತಮ್ಮ ದುಡಿಮೆ ಸಾಮರ್ಥ್ಯ ಒತ್ತೆ ಇಟ್ಟು ಮಕ್ಕಳಿಗೆ ಪ್ರಾಥಮಿಕ ವಿದ್ಯಾಭ್ಯಾಸ ಕೊಡಿಸಬೇಕಾದ ದುರವಸ್ಥೆ ಕೊನೆಗೊಳ್ಳುವ ಲಕ್ಷಣಗಳೇ ಇಲ್ಲ. ಶಾಲೆಗೆ ಹೋಗುವ ಮಕ್ಕಳಿಗೆ ಮತ್ತೆ, ಮೂಲಭೂತ ಅಗತ್ಯವೇ ಆದ ಆಟೋಟ ಗಳು ‘ಲಕ್ಷುರಿ’ ಆಗಿಬಿಟ್ಟಿರುವುದು ಇನ್ನೊಂದು ಕರಾಳ ಸಂಗತಿ. ಐ ಪಾಡ್‌ಗಳಲ್ಲಿ ಮುಖ ತೂರಿಸಿ ‘ಸುಳ್ಳು’ ಆಟಗಳನ್ನು (ವರ್ಚ್ಯುಯಲ್ ಗೇಮ್ಸ್)ಆಡುವವರನ್ನು, ಸೋಫಾದಲ್ಲಿ ಹುದುಗಿ ಕೂತು ವೀಡಿಯೊ ಗೇಮ್ಸ್‌ನಲ್ಲಿ ಪಾರಂಗತರಾಗುವವರನ್ನು ಆಟದ ಬಯಲಿಗೆ ಒಯ್ದು ಬಿಡಿ; ದೈಹಿಕ ಚಟುವಟಿ ಕೆಗಳು, ಕಸರತ್ತು ಈ ಹಂತದಲ್ಲಿ ಅತ್ಯಗತ್ಯ ಎಂಬ ಪರಿಣತರ ಮಾತು ಕೇಳಿ, ಓದಿಯೂ ಪೋಷಕರು ಸುಮ್ಮನುಳಿಯುತ್ತಾರೆ. ‘ಆಡಿ ಬಾ ನನಕಂದ, ಅಂಗಾಲ ತೊಳೆದೇನು, ತೆಂಗಿನ ತಿಳಿನೀರ ತಕ್ಕೊಂಡು, ಬಂಗಾರದ ಮೋರೆ ತೊಳೆದೇನು’ ಎನ್ನಲು ಎಲ್ಲಿದೆ ವ್ಯವಧಾನ? ನಂತರ ಅಧಿಕ ತೂಕ ಗಳಿಸಿಕೊಂಡು ನಾನಾ ಬೇನೆ ಆಹ್ವಾನಿಸಿದ ಎಳೆಯರ ಮೆಡಿಕಲ್ ಬಿಲ್ ಪೇಚಾಡಿಕೊಂಡು ಭರಿಸುತ್ತಾರೆ. ಬೆಳೆಯುವ ಮಕ್ಕಳ ಮಾನಸಿಕ, ಭಾವನಾತ್ಮಕ ವಿಕಸನಕ್ಕೆ ಆಸ್ಥೆಯಿಂದ ಗಮನ ನೀಡುವುದಂತೂ ದೂರವೇ ಉಳಿದಿದೆ.
ಮಕ್ಕಳ ಜಗತ್ತಿನಲ್ಲಿ ಎಲ್ಲವೂ ನಿರಾಶಾದಾಯಕವಾಗಿಯೇ ಇಲ್ಲ ಎನ್ನುವುದೂ ನಿಜ. ಕಾಲಕ್ಕೆ ತಕ್ಕಂತೆ ಅವರು ಪಾದರಸ ಚುರುಕಿನ ಬುದ್ಧಿ, ಅನನ್ಯ ಪ್ರತಿಭೆೆ, ಕರ್ತೃತ್ವಶೀಲತೆ, ಧೈರ್ಯ-ಸಾಹಸ-ಸಮಯಪ್ರಜ್ಞೆ ಹೊಂದಿರುವುದು ಚೇತೋಹಾರಿಯಾಗಿದೆ. ಹತ್ತೂ ತುಂಬದವರು ಕಂಪೆನಿಯ ಸಿಇಒ ಆಗುವುದು, ಸಂಶೋಧನೆ ಕೈಗೊಳ್ಳುವುದು, ಸಾಪ್ಟ್ ವೇರ್ ತಂತ್ರಾಂಶ ಅಭಿವೃದ್ಧಿಪಡಿಸುವುದು, ಗೃಹೋಪಯೋಗಿ ಸಲಕರಣೆಗಳ ವಿನ್ಯಾಸ ಮಾರ್ಪಡಿಸುಮದು, ನಾಟಕ, ಸಿನೆಮಾಗಳಲ್ಲಿ ದೊಡ್ಡವರ ಸರಿಸಮನಾಗಿ ನಟಿಸುವುದು ಈ ದಿನಗಳಲ್ಲಿ ಏನು ಮಹಾ ಎನಿಸುವಷ್ಟು ಸಾಮಾನ್ಯ. ಆದರೆ ಈ ಅತಿಶಯ ಸಂಗತಿಗಳಿಗೆ ಪೂರಕವಾಗುವಂತೆ ಮಾಮೂಲಿ ಮಕ್ಕಳ ಮಾಮೂಲಿ ಸ್ಥಿತಿಗತಿ, ಭವಿಷ್ಯ ದೃಢವಾಗಿಲ್ಲದಿರುವುದು ನಮ್ಮ ಭೂಗೋಲದ ಅಭಿವೃದ್ಧಿಗೆ, ಮಗುವಿನ ಮೂಲಕ ತನ್ನ ಇರವನ್ನು ಗಟ್ಟಿಗೊಳಿಸಿಕೊಳ್ಳುವ ಮನುಷ್ಯನ ಜೀವನ್ಮುಖತೆಗೆ, ಮಾನವತೆಯ ವಿಕಸನಕ್ಕೆ ಮಾರಕ. ಮಕ್ಕಳ ದಿನಾಚರಣೆಯ ಈ ದಿನ ಎಲ್ಲ ದೊಡ್ಡವರೂ ಈ ಕುರಿತು ತಲೆ ಕೆಡಿಸಿಕೊಳ್ಳಲಿ ಮತ್ತು ಮುಂದೆಯೂ ಕೆಡಿಸಿಕೊಳ್ಳುತ್ತಲೇ ಇರಲಿ!

Writer - ವೆಂಕಟಲಕ್ಷ್ಮೀ ವಿ.ಎನ್.

contributor

Editor - ವೆಂಕಟಲಕ್ಷ್ಮೀ ವಿ.ಎನ್.

contributor

Similar News