ದೇಶದಲ್ಲಿಂದು ಅಘೋಷಿತ ತುರ್ತು ಪರಿಸ್ಥಿತಿ ಇದೆಯೇ...?
ಮಾನವೀಯ ಹಾಗೂ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಾಜಾರೋಷವಾಗಿ ಹೊಸಕಿ ಹಾಕುತ್ತಿರುವುದು ಖಂಡಿತವಾಗಿಯೂ ಇದು ತುರ್ತು ಪರಿಸ್ಥಿತಿಯಲ್ಲವೇ? ತುರ್ತು ಪರಿಸ್ಥಿತಿ ಎನ್ನುವುದು, ಏಕವ್ಯಕ್ತಿಯ ಸರ್ವಾಧಿಕಾರಿ ಆಡಳಿತ ವ್ಯವಸ್ಥೆಯಾಗಿದ್ದು, ಪತ್ರಿಕಾ ಸ್ವಾತಂತ್ರ್ಯ ಮೊಟಕುಗೊಳಿಸಲಾಗುತ್ತದೆ. ಪ್ರಸ್ತುತ ಸನ್ನಿವೇಶ ಇದಕ್ಕಿಂತ ಭಿನ್ನತೆ ಇದೆಯೇ?
ಎನ್‌ಡಿಟಿವಿ ಹಿಂದಿ ಸುದ್ದಿವಾಹಿನಿ ವಿರುದ್ಧದ ಒಂದು ದಿನದ ನಿಷೇಧ ದೇಶಕ್ಕೆ ಆಘಾತ ತಂದಿದೆ. ದೇಶದ ಪ್ರಮುಖ ಸುದ್ದಿವಾಹಿನಿಯೊಂದಕ್ಕೆ ಒಂದು ದಿನ ಪ್ರಸಾರ ಮಾಡದಂತೆ ಸೂಚಿಸಲಾಗಿದೆ. ಚಾನಲ್ ಮೇಲಿರುವ ಆರೋಪವೆಂದರೆ, ಪಠಾಣ್‌ಕೋಟ್ ದಾಳಿ ಸಂದರ್ಭದಲ್ಲಿ ದೇಶದ ಭದ್ರತೆಗೆ ಸಂಬಂಧಿಸಿದಂತೆ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸಿದ ಆರೋಪ. ಇದೇ ಪಠಾಣ್‌ಕೋಟ್ ವಿಷಯದಲ್ಲಿ ಸರಕಾರ, ಪಾಕಿಸ್ತಾನ ಅಧಿಕಾರಿಗಳನ್ನು ವಾಯುನೆಲೆ ಪ್ರವೇಶಿಸಲು ಅನುಮತಿ ನೀಡಿದೆ. ಆದರೆ ಎನ್‌ಡಿಟಿವಿ ತನ್ನ ಕಾರ್ಯಕ್ರಮ ಅತ್ಯಂತ ಸಮತೋಲಿತ ಎಂದು ಸಮರ್ಥಿಸಿಕೊಂಡಿದೆ ಹಾಗೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಯಾವ ಮಾಹಿತಿಯನ್ನೂ ಪ್ರಸಾರ ಮಾಡಿಲ್ಲ ಎಂದು ಹೇಳಿಕೊಂಡಿತ್ತು. ಆದರೆ ಸರಕಾರಕ್ಕೆ ಅಹಿತ ಎನಿಸುವಂಥ ವಿಷಯಗಳನ್ನು ಎನ್‌ಡಿಟಿವಿ ಚರ್ಚಿಸುತ್ತಿದ್ದುದಂತೂ ನಿಜ. ಸರಕಾರ ನಿಷೇಧ ಹೇರಿದ ಕ್ರಮದ ವಿರುದ್ಧ ಎಲ್ಲೆಡೆಯಿಂದ ಪ್ರತಿಭಟನೆ ವ್ಯಕ್ತವಾದಾಗ ಸರಕಾರ ತನ್ನ ನಿರ್ಧಾರವನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವುದು ಅನಿವಾರ್ಯವಾಯಿತು.
ಭಾರತ್ ಮಾತಾ ಕಿ ಜೈ, ರಾಷ್ಟ್ರೀಯತೆ, ಎನ್‌ಜೆಯು ಹಾಗೂ ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾನಿಲಯ ಘಟನೆ, ಉನಾ ಘಟನೆ ಮತ್ತಿತರ ಚರ್ಚೆಗಳಲ್ಲಿ ಎನ್‌ಡಿಟಿವಿ ಆಡಳಿತಾರೂಢ ಪಕ್ಷವನ್ನು ಕಟುವಾಗಿ ಟೀಕಿಸಿತ್ತು.
ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ರಾಜಕೀಯ ವಾತಾವರಣದಲ್ಲಿ ವಿಪರೀತ ಬದಲಾವಣೆ ಆಗಿದೆ. ಆರಂಭದಲ್ಲಿ ಚರ್ಚ್‌ಗಳ ಮೇಲಿನ ದಾಳಿಯಿಂದ ಹಿಡಿದು, ರಾಷ್ಟ್ರೀಯ ಮಹತ್ವದ ಎಫ್‌ಟಿಐಐ, ಐಐಟಿ, ಜೆಎನ್‌ಯು, ಎಚ್‌ಸಿಯು ಮತ್ತಿತರ ವಿಷಯಗಳಲ್ಲಿ ಸರಕಾರದ ಹಸ್ತಕ್ಷೇಪ ವ್ಯಾಪಕವಾಗಿತ್ತು. ಬಲಪಂಥೀಯ ಸಿದ್ಧಾಂತ ಹಿನ್ನೆಲೆಯ ಅಸಮರ್ಥ ವ್ಯಕ್ತಿಗಳನ್ನು ಈ ಎಲ್ಲ ಸಂಸ್ಥೆಗಳ ಮುಖ್ಯಸ್ಥರಾಗಿ ನೇಮಕ ಮಾಡಲಾಯಿತು. ಕಲಿಕಾ ಕೇಂದ್ರಗಳು ವಿಶೇಷ ಗುರಿಯಾದವು. ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯ ರಾಷ್ಟ್ರವಿರೋಧಿಗಳ ತಾಣ ಎಂದು ಬಿಂಬಿಸಲಾಯಿತು. ಜೆಎನ್‌ಯು ವಿದ್ಯಾರ್ಥಿ ಮುಖಂಡರ ಮಾನ ಹರಾಜು ಹಾಕಲು ತಿದ್ದಿದ ವೀಡಿಯೊಗಳನ್ನು ಹರಿಯಬಿಡಲಾಯಿತು. ಹೈದರಾಬಾದ್ ಕೇಂದ್ರೀಯ ವಿವಿಯಲ್ಲಿ ರೋಹಿತ್ ವೇಮುಲಾ ಆತ್ಮಹತ್ಯೆ ಮಾಡಿಕೊಂಡರು. ಸಮಾಜದಲ್ಲಿ ಅಸಹಿಷ್ಣುತೆ ಹೆಚ್ಚಿದ್ದನ್ನು ಪ್ರತಿಭಟಿಸಿ ಹಲವು ಮಂದಿ ಬುದ್ಧಿಜೀವಿಗಳು, ಸರಕಾರ ತಮಗೆ ನೀಡಿದ್ದ ಪ್ರಶಸ್ತಿಗಳನ್ನು ವಾಪಸು ಮಾಡಿದರು. ಗೋಮಾಂಸ ವಿಚಾರದ ಬಗ್ಗೆ ಎಬ್ಬಿಸಿದ ರಾಡಿ ಆಗಸದೆತ್ತರಕ್ಕೆ ಚಿಮ್ಮಿತು. ಜನರ ಭಾವನೆಗಳನ್ನು ಕೆರಳಿಸಿ, ಉದ್ರಿಕ್ತ ಗುಂಪು ಮುಹಮ್ಮದ್ ಅಖ್ಲ್ಲಾಕ್ ಅವರನ್ನು ಹತ್ಯೆ ಮಾಡುವಂತೆ ತಂತ್ರ ಹೂಡಲಾಯಿತು. ಹಲವು ಜಾನುವಾರು ವ್ಯಾಪಾರಿಗಳು ಇಂಥ ಕ್ರೌರ್ಯಕ್ಕೆ ಬಲಿಯಾದರು. ಗುಜರಾತ್‌ನ ಉನಾದಲ್ಲಿ ದಲಿತರ ಮೇಲೆ ಅಮಾನವೀಯ ದೌರ್ಜನ್ಯ ನಡೆಯಿತು. ಉದಾರವಾದಿ ಹಾಗೂ ಜಾತ್ಯತೀತ ಶಕ್ತಿಗಳ ವಿರುದ್ಧ ಮಾಧ್ಯಮ ಪ್ರಹಾರವೂ ನಡೆಯಿತು. ಆದರೆ ಬಲಪಂಥೀಯರ ದೌರ್ಜನ್ಯವನ್ನು ತೆರೆಮರೆಗೆ ಸರಿಸುವಲ್ಲೂ ಮಾಧ್ಯಮಗಳನ್ನು ಬಳಸಿಕೊಳ್ಳಲಾಯಿತು.
ಭೋಪಾಲ್ ಜೈಲಿನಿಂದ ತಪ್ಪಿಸಿಕೊಂಡ ಎಂಟು ಮಂದಿ ಮುಸ್ಲಿಂ ಯುವಕರನ್ನು ಎನ್‌ಕೌಂಟರ್ ಹೆಸರಿನಲ್ಲಿ ಹತ್ಯೆ ಮಾಡಿದ್ದು ಕೂಡಾ ಈ ಘಟನಾವಳಿಗಳ ಮುಂದುವರಿದ ಭಾಗ. ಈ ಘಟನೆಯ ಬಗೆಗಿನ ಪೊಲೀಸ್ ಕಟ್ಟುಕಥೆಗಳಲ್ಲೇ ಹಲವು ವೈರುಧ್ಯಗಳು ಇದ್ದು, ಪೊಲೀಸರ ಲೋಪಗಳು ಎದ್ದುಕಾಣುತ್ತಿದ್ದವು. ಜೆಎನ್‌ಯುನಲ್ಲಿ ಇದೀಗ ನಜೀಬ್ ಎಂಬ ಯುವಕ ಕಳೆದ ಮೂರು ವಾರಗಳಿಂದ ನಾಪತ್ತೆಯಾಗಿದ್ದಾನೆ. ಪೊಲೀಸರು ಆತನ ತಾಯಿಯನ್ನು ಹೊಡೆದು ಚಿತ್ರಹಿಂಸೆ ನೀಡಿದ್ದಾರೆ. ಮಾನವೀಯ ಹಾಗೂ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ರಾಜಾರೋಷವಾಗಿ ಹೊಸಕಿ ಹಾಕುತ್ತಿರುವುದು ಖಂಡಿತವಾಗಿಯೂ ಇದು ತುರ್ತು ಪರಿಸ್ಥಿತಿಯಲ್ಲವೇ? ತುರ್ತು ಪರಿಸ್ಥಿತಿ ಎನ್ನುವುದು, ಏಕವ್ಯಕ್ತಿಯ ಸರ್ವಾಧಿಕಾರಿ ಆಡಳಿತ ವ್ಯವಸ್ಥೆಯಾಗಿದ್ದು, ಪತ್ರಿಕಾ ಸ್ವಾತಂತ್ರ್ಯ ಮೊಟಕುಗೊಳಿಸಲಾಗುತ್ತದೆ. ಖಂಡಿತವಾಗಿಯೂ ಪ್ರಸ್ತುತ ಸನ್ನಿವೇಶಕ್ಕೆ ಇದು ಸಾಕಷ್ಟು ಹೊಂದಿಕೆಯಾಗುತ್ತದೆ.
ಮಹಾತ್ಮ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಆಹಾರದ ಹಕ್ಕು, ಆರೋಗ್ಯದ ಹಕ್ಕು ಹಾಗೂ ಶಿಕ್ಷಣದ ಹಕ್ಕಿನಂಥ ವಿಷಯಗಳನ್ನು ಕಡೆಗಣಿಸಿ, ಕಾರ್ಪೊರೇಟ್ ಜಗತ್ತಿಗೆ ಮಣೆ ಹಾಕುವ, ರೈತರ ಹಾಗೂ ಕಾರ್ಮಿಕರ ಹಕ್ಕುಗಳನ್ನು ಮೊಟಕುಗೊಳಿಸುವ ಘಟನೆಗಳು ಸರಕಾರದ ನಿರ್ದಿಷ್ಟ ಗುರಿಯನ್ನು ಸ್ಪಷ್ಟಪಡಿಸುತ್ತವೆ. ಇಂಥ ಘಟನಾವಳಿಗಳಿಗೆ ಪೂರಕವಾಗಿ ಹಿಂದೂ ರಾಷ್ಟ್ರೀಯತೆಯನ್ನು ವ್ಯವಸ್ಥಿತವಾಗಿ ಉತ್ತೇಜಿಸುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರ ‘‘ನಾನು ರಾಷ್ಟ್ರೀಯವಾದಿ, ನಾನು ಹಿಂದೂ ಕುಟುಂಬದಲ್ಲಿ ಹುಟ್ಟಿದ್ದೇನೆ’’ ಎಂಬಂಥ ಪ್ರತಿಯೊಂದು ಶಬ್ದ, ಪ್ರತಿಯೊಂದು ವಾಕ್ಯವೂ ಹಿಂದೂ ರಾಷ್ಟ್ರೀಯತೆಯನ್ನು ಬಿಂಬಿಸುತ್ತವೆ. ಇದರೊಂದಿಗೆ ಸಮಾನ ನಾಗರಿಕ ಸಂಹಿತೆ ಹಾಗೂ ಗೋಮಾಂಸದಂಥ ವಿಚಾರದಲ್ಲಿ ಅಲ್ಪಸಂಖ್ಯಾತರನ್ನು ಗುರಿ ಮಾಡಲಾಗುತ್ತಿದೆ. ಕಾಶ್ಮೀರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಮತ್ತು ಪಾಕಿಸ್ತಾನ ವಿರುದ್ಧದ ದಾಳಿ ವಿಚಾರದಲ್ಲಿ ಅತಿರಾಷ್ಟ್ರೀಯತೆ ಎದ್ದುಕಾಣುತ್ತದೆ. ಉನಾ ಘಟನೆ ಹಾಗೂ ಸರ್ಜಿಕಲ್ ದಾಳಿ ವಿಚಾರಗಳನ್ನು ಪ್ರಮುಖ ರಾಜಕೀಯ ವಿಚಾರಗಳಾಗಿ ಬಿಂಬಿಸಲಾಗಿದೆ. ದೇಶದ ಸಾಮಾಜಿಕ ವಲಯದಲ್ಲಿ ಕಾರ್ಯ ನಿರ್ವಹಿಸುವ ಸಾವಿರಾರು ಸ್ವಯಂಸೇವಾ ಸಂಸ್ಥೆಗಳಿಗೆ ವಿವಿಧ ಕಾರಣ ನೀಡಿ ಅನುಮತಿ ನಿರಾಕರಿಸಲಾಗಿದೆ. ಪಾಕಿಸ್ತಾನ ಕಲಾವಿದರ ಮೇಲಿನ ದಾಳಿ ಇಂಥ ಇನ್ನೊಂದು ಹೇಯ ಕೃತ್ಯ. ವಿಭಜನಾ ಜಾತಿವಾದ ಇಲ್ಲಿ ಕೆಲಸ ಮಾಡಿರುವುದು ಸುಸ್ಪಷ್ಟ. ಪಾಕಿಸ್ತಾನದ ಜತೆ ನಾವು ಸಾವಿರಾರು ಕೋಟಿ ರೂಪಾಯಿ ಮೌಲ್ಯದ ವ್ಯಾಪಾರಿ ಸಂಬಂಧ ಹೊಂದಿದ್ದೇವೆ ಎನ್ನುವುದು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಚಾರ. ಕೋಟ್ಯಂತರ ರೂಪಾಯಿ ಮೌಲ್ಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸರ್ದಾರ್ ಪಟೇಲ್ ಪುತ್ಥಳಿ ನಿರ್ಮಾಣ ಕಾಮಗಾರಿಯನ್ನು ಚೀನಾಗೆ ಗುತ್ತಿಗೆ ನೀಡಿರುವ ನಡುವೆಯೇ ಚೀನಾ ವಿಚಾರದಲ್ಲೂ, ಇಂಥದ್ದೇ ದ್ವೇಷ ಮನೋಭಾವನೆ ಅನುಸರಿಸಲಾಗುತ್ತಿದೆ. ಚೀನೀ ವಸ್ತುಗಳನ್ನು ನಿಷೇಧಿಸುವ ಹಂತಕ್ಕೆ ಬಂದಿದೆ. ನೆರೆ ದೇಶಗಳ ಬಗ್ಗೆ, ಅಲ್ಪಸಂಖ್ಯಾತರ ಬಗ್ಗೆ ಮತ್ತು ಮಾನವ ಹಕ್ಕು ಚಳವಳಿಗಾರರ ಬಗ್ಗೆ ಜನಸಾಮಾನ್ಯರಲ್ಲಿ ದ್ವೇಷಭಾವನೆ ಬೆಳೆಯುವಂತೆ ಮಾಡಲಾಗುತ್ತಿದೆ.
ಪ್ರಜಾಸತ್ತಾತ್ಮಕ ಸ್ವಾತಂತ್ರ್ಯ ಹಾಗೂ ಬಡವರ ಕಲ್ಯಾಣವನ್ನು ಹೊಸಕಿ ಹಾಕುವುದು, ಅಲ್ಪಸಂಖ್ಯಾತರು ಮತ್ತು ಮಾನವ ಹಕ್ಕು ಹೋರಾಟಗಾರರ ಮೇಲೆ ದಾಳಿಯಂಥ ಕೃತ್ಯಗಳ ಮೂಲಕ, ದೊಡ್ಡ ಪ್ರಮಾಣದ ಸಮೂಹಸನ್ನಿಯನ್ನು ಸೃಷ್ಟಿಸಿ, ಆಡಳಿತ ಪಕ್ಷದ ವಿಚಾರಧಾರೆಯನ್ನು ಎತ್ತಿಹಿಡಿಯಲು ಸಾವಿರಾರು ಮಂದಿಯನ್ನು ಕ್ರೋಡೀಕರಿಸಲಾಗುತ್ತಿದೆ. ಸರಕಾರವನ್ನು ಪ್ರಶ್ನಿಸುವವರನ್ನು ಜೈಲಿಗೆ ತಳ್ಳುವ ಪ್ರಯತ್ನ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರದ ಉತ್ತರದಾಯಿತ್ವ, ದೇಶದ ಜನತೆಯತ್ತ ಇರುತ್ತದೆ. ಆದರೆ ಇಂದು ಈ ಸೂತ್ರ ಬದಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಶಾಹಿಯನ್ನು ಪ್ರಶ್ನಿಸುವುದು ಸಂವಿಧಾನದ ಅಡಿಗಲ್ಲು ಎನಿಸುವ ಅಂಶ. ಆದರೆ ಈ ಲೋಪ ಎದ್ದು ಕಾಣುತ್ತಿದೆ. ಆದರೆ ಇದು ಖಂಡಿತವಾಗಿಯೂ ತುರ್ತು ಪರಿಸ್ಥಿತಿಗಿಂತಲೂ ಸಿನಿಕ ಸ್ಥಿತಿ. ಇದು ಪ್ರಜಾಪ್ರಭುತ್ವಕ್ಕೆ ಒದಗಿರುವ ದೊಡ್ಡ ಅಪಾಯ. ಆಡಳಿತ ಪಕ್ಷ ಮತ್ತು ಅದರ ಹಿಂದಿರುವ ಮಾತೃಸಂಸ್ಥೆಗಳು ಇದನ್ನು ವ್ಯವಸ್ಥಿತವಾಗಿ ರೂಪಿಸಿವೆ.
ಆದ್ದರಿಂದ ಈ ವಿಷಯವನ್ನು ಕೇವಲ ಶೈಕ್ಷಣಿಕ ಕಳಕಳಿಯ ವಿಷಯ ಮಾತ್ರವಲ್ಲ ಎಂದು ಗುರುತಿಸದಿರಲು ಹೇಗೆ ಸಾಧ್ಯ? ಸಿಪಿಎಂ ಮುಖಂಡ ಪ್ರಕಾಶ್ ಕಾರಟ್ ಅವರು ಇತ್ತೀಚೆಗೆ, ‘‘ಸದ್ಯದ ಆಡಳಿತ ಪರಿಸ್ಥಿತಿ ಕೇವಲ ಫ್ಯಾಶಿಸ್ಟ್ ಮಾತ್ರವಲ್ಲ. ಅದು ಸರ್ವಾಧಿಕಾರಿ ಧೋರಣೆ’’ ಎಂದು ಹೇಳಿದ್ದರು. ಈ ಎರಡರ ನಡುವಿನ ವ್ಯತ್ಯಾಸ ಖಂಡಿತವಾಗಿಯೂ ಐತಿಹಾಸಿಕ ಚರ್ಚೆಯ ವಿಚಾರ. ಫ್ಯಾಶಿಸಂನ ಮೂಲತತ್ವವೆಂದರೆ, ಸರಕಾರ ಜನರ ಮೇಲೆ ಅಧಿಕಾರ ಚಲಾಯಿಸುವಂಥದ್ದು. ವ್ಯಕ್ತಿ ಪ್ರಾಬಲ್ಯ, ಕಾರ್ಪೊರೇಟ್ ಹಿಡಿತ, ಬಡವರ ಹಕ್ಕುಗಳನ್ನು ಕಸಿದುಕೊಳ್ಳುವುದು, ಅಲ್ಪಸಂಖ್ಯಾತರನ್ನು ಗುರಿ ಮಾಡುವುದು, ಅತಿರಾಷ್ಟ್ರೀಯವಾದ ಹಾಗೂ ನೆರೆ ದೇಶಗಳ ವಿರುದ್ಧ ಆಕ್ರಮಣಕಾರಿ ಮನೋಭಾವ. ದೇಶದಲ್ಲಿ ಪ್ರಜಾಪ್ರಭುತ್ವದ ಮತ್ತು ಸಂವಿಧಾನದ ಸಂರಕ್ಷಣೆಗೆ ಬದ್ಧವಾಗಿರುವವರಿಗೆ ಪ್ರಮುಖವಾದ ಅಂಶವೆಂದರೆ, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳ ಹೊರತಾಗಿಯೂ ಸಾಮಾಜಿಕ ಹಾಗೂ ರಾಜಕೀಯ ಮೈತ್ರಿಯನ್ನು ರಚಿಸಿಕೊಳ್ಳುವುದು ಹಾಗೂ ಈ ಮೂಲಕ ದ್ವೇಷದ ರಾಜಕೀಯ ಮತ್ತು ಒಡೆದು ಆಳುವ ಪಂಥೀಯ ರಾಷ್ಟ್ರೀಯವಾದದ ವಿರುದ್ಧ ಹೋರಾಡುವುದು.
1990ರ ದಶಕದಲ್ಲಿ ಬಿಜೆಪಿ, ವೈಶಿಷ್ಟ್ಯ ಹೊಂದಿರುವ ಪಕ್ಷ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಆರಂಭಿಸಿತು. ಅದು ಸತ್ಯ ಕೂಡಾ. ಅದು ಹಿಂದೂ ರಾಷ್ಟ್ರೀಯವಾದಿ ಆರೆಸ್ಸೆಸ್ ಕಾರ್ಯಸೂಚಿಯನ್ನು ಹೊಂದಿರುವ ಮತ್ತು ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ಮೌಲ್ಯವನ್ನು ತಿರಸ್ಕರಿಸುವ ಏಕೈಕ ಪಕ್ಷ. ಇದನ್ನು ವಿದೇಶಿ ಆಮದು ಎಂದು ಪರಿಗಣಿಸಿ, ಹಿಂದೂಗಳ ಪವಿತ್ರ ಗ್ರಂಥಗಳ ನಿಯಮಾವಳಿಗೇ ಬದ್ಧವಾಗಿರುವುದು ಅವರ ಧ್ಯೇಯ. ಈ ಗ್ರಂಥಗಳು ಯಾವುವು ಎಂದರೆ, ಹಿಂದೆ ಅಂಬೇಡ್ಕರ್ ಅವರು ಜಾತಿ ಹಾಗೂ ಲಿಂಗ ತಾರತಮ್ಯ, ಬ್ರಾಹ್ಮಣ್ಯದ ವಿರುದ್ಧ ಪ್ರತಿಭಟನಾತ್ಮಕವಾಗಿ ಯಾವುದನ್ನು ಸುಟ್ಟುಹಾಕಿದರೋ ಅವು. ಚರ್ಚೆಗಳು ಮುಂದುವರಿಯಬಹುದು. ಆದರೆ ಆದರೆ ಭಾರತದ ಸಂವಿಧಾನವನ್ನು ಸಂರಕ್ಷಿಸುವ ರಾಜಕಾರಣ ಇನ್ನು ಕಾಯಲಾಗದು.
ಕೃಪೆ: thecitizen
1990ರ ದಶಕದಲ್ಲಿ ಬಿಜೆಪಿ, ವೈಶಿಷ್ಟ್ಯ ಹೊಂದಿರುವ ಪಕ್ಷ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ಆರಂಭಿಸಿತು. ಅದು ಸತ್ಯ ಕೂಡಾ. ಅದು ಹಿಂದೂ ರಾಷ್ಟ್ರೀಯವಾದಿ ಆರೆಸ್ಸೆಸ್ ಕಾರ್ಯಸೂಚಿಯನ್ನು ಹೊಂದಿರುವ ಮತ್ತು ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ಮೌಲ್ಯವನ್ನು ತಿರಸ್ಕರಿಸುವ ಏಕೈಕ ಪಕ್ಷ. ಇದನ್ನು ವಿದೇಶಿ ಆಮದು ಎಂದು ಪರಿಗಣಿಸಿ, ಹಿಂದೂಗಳ ಪವಿತ್ರ ಗ್ರಂಥಗಳ ನಿಯಮಾವಳಿಗೇ ಬದ್ಧವಾಗಿರುವುದು ಅವರ ಧ್ಯೇಯ. ಈ ಗ್ರಂಥಗಳು ಯಾವುವು ಎಂದರೆ, ಹಿಂದೆ ಅಂಬೇಡ್ಕರ್ ಅವರು ಜಾತಿ ಹಾಗೂ ಲಿಂಗ ತಾರತಮ್ಯ, ಬ್ರಾಹ್ಮಣ್ಯದ ವಿರುದ್ಧ ಪ್ರತಿಭಟನಾತ್ಮಕವಾಗಿ ಯಾವುದನ್ನು ಸುಟ್ಟುಹಾಕಿದರೋ ಅವು. ಚರ್ಚೆಗಳು ಮುಂದುವರಿಯಬಹುದು. ಆದರೆ ಆದರೆ ಭಾರತದ ಸಂವಿಧಾನವನ್ನು ಸಂರಕ್ಷಿಸುವ ರಾಜಕಾರಣ ಇನ್ನು ಕಾಯಲಾಗದು.