ಐಟಿ: ಸಿಬ್ಬಂದಿ ಕೊರತೆ ಗಾಯದ ಮೇಲೆ ನೋಟು ಅಮಾನ್ಯದ ಬರೆ
ದೇಶದಲ್ಲಿ 500 ಹಾಗೂ 1000 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಮರುದಿನ ಅಂದರೆ ನವೆಂಬರ್ 9ರಂದು, ಸರಕಾರ ಮತ್ತೊಂದು ಬಾಂಬ್ ಸಿಡಿಸಿತು. ಜನಸಾಮಾನ್ಯರು ತಮ್ಮ ಆದಾಯ ಮಿತಿಗಿಂತ ಅಧಿಕ ಪ್ರಮಾಣದ ಹಳೆ ನೋಟುಗಳನ್ನು ಬ್ಯಾಂಕುಗಳಲ್ಲಿ ಠೇವಣಿ ಮಾಡಿದರೆ ಶೇ. 200ರಷ್ಟು ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿತು. 2016ರ ನವೆಂಬರ್ 9ರಿಂದ ಡಿಸೆಂಬರ್ 31ರವರೆಗೆ 2.5 ಲಕ್ಷ ರೂಪಾಯಿಗಿಂತ ಅಧಿಕ ಠೇವಣಿ ಇಡುವ ಖಾತೆಗಳ ಸಮಗ್ರ ತನಿಖೆ ಕೈಗೊಳ್ಳುವುದಾಗಿಯೂ ಪ್ರಕಟಿಸಿತು.
ಆದರೆ ಈ ಅಸಾಮಾನ್ಯ ಕಾರ್ಯವನ್ನು ನಿರ್ವಹಿಸುವ ಹೊಣೆ ಆದಾಯ ತೆರಿಗೆ ಇಲಾಖೆಯದ್ದು. ವಾಸ್ತವವಾಗಿ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಸಂದರ್ಭದಲ್ಲಿ ಇಂಥ ತನಿಖೆ ಕೈಗೊಳ್ಳಲು ಸಾಧ್ಯವೇ ಎಂಬ ಚಿಂತೆ ಇಲಾಖೆಯನ್ನು ಆವರಿಸಿದೆ.
ಸಂಕೀರ್ಣ ಪ್ರಕ್ರಿಯೆ
ದೇಶದಲ್ಲಿ 2014-15ನೆ ಸಾಲಿನಲ್ಲಿ ಕೇವಲ 51.6 ದಶಲಕ್ಷ ಮಂದಿ ಅಂದರೆ ದೇಶದ ಒಟ್ಟು ಜನಸಂಖ್ಯೆಯ ಶೇಕಡ ನಾಲ್ಕರಷ್ಟು ಮಂದಿ ಮಾತ್ರ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದಾರೆ. ತುಲನಾತ್ಮಕವಾಗಿ ಅಮೆರಿಕದ 375 ದಶಲಕ್ಷ ಮಂದಿಯ ಪೈಕಿ ಶೇಕಡ 45ರಷ್ಟು ಮಂದಿ ತಮ್ಮ ಆದಾಯ ಘೋಷಿಸಿಕೊಂಡಿದ್ದಾರೆ.
ದೇಶದಲ್ಲಿ ಐಟಿ ರಿಟರ್ನ್ಸ್ ಸಲ್ಲಿಸಿದ 51.6 ದಶಲಕ್ಷ ಮಂದಿಯ ಪೈಕಿ ಶೇ. 30ರಷ್ಟು ಮಂದಿ ಯಾವುದೇ ತೆರಿಗೆ ಆದಾಯ ಇಲ್ಲ ಎಂದು ಘೋಷಿಸಿಕೊಂಡಿದ್ದಾರೆ. ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಕಾರ, ಶೇ. 1ರಷ್ಟು ಘೋಷಣೆಗಳನ್ನು ಮಾತ್ರ ಇದುವರೆಗೆ ಸರಿಯಾಗಿ ಪರಿಶೀಲಿಸಲು ಸಾಧ್ಯವಾಗಿದೆ. ಅಂದರೆ, 125 ಕೋಟಿ ಜನಸಂಖ್ಯೆ ಹೊಂದಿರುವ ದೇಶದಲ್ಲಿ, ಆದಾಯ ತೆರಿಗೆ ಇಲಾಖೆಯ ಸರ್ವೇಕ್ಷಣೆಗೆ ಒಳಪಡುವವರು ಕೇವಲ 3.5 ಲಕ್ಷ ಮಂದಿ.
ಹೀಗೆ ಆದಾಯ ತೆರಿಗೆ ಇಲಾಖೆ ಪರಿಶೀಲನೆಗೆ ಖಾತೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಯಾದೃಚ್ಛಿಕ (ರ್ಯಾಂಡಮ್) ವಿಧಾನದಲ್ಲಿ. ಕಂಪ್ಯೂಟರ್ ಎಯಿಡೆಡ್ ಸ್ಕ್ರುಟಿನಿ ಸೆಲೆಕ್ಷನ್ ಎಂಬ ಒಂದು ತತ್ರಾಂಶದ ಸಹಾಯದಿಂದ ಹೀಗೆ ಆಯ್ಕೆ ಮಾಡಲಾಗುತ್ತದೆ. ಈ ತತ್ರಾಂಶವನ್ನು ಸಿದ್ಧಪಡಿಸುವಾಗಲೇ, ತೆರಿಗೆ ಕಳ್ಳತನದ ಕೆಲ ಸಂಭಾವ್ಯ ಅಂಶಗಳನ್ನು ಅಳವಡಿಸಲಾಗಿದೆ. ಇದರ ಜತೆಗೆ ಸಣ್ಣ ಪ್ರಮಾಣದ ಮಾನವ ಆಯ್ಕೆ ವಿಧಾನವೂ ಜಾರಿಯಲ್ಲಿದೆ. ಕೆಲ ನಿರ್ದಿಷ್ಟ ಸ್ವರೂಪದ ಘೋಷಣೆಗಳನ್ನು ಮಾಡಿದಾಗ ಹೀಗೆ ಆಯ್ಕೆ ಮಾಡಿಕೊಂಡು ಪರಿಶೀಲನೆ ನಡೆಸುವುದು ಶಾಸನಾತ್ಮಕ ಅಗತ್ಯ.
ಆದರೆ ಅಂಥ ಸಣ್ಣ ಸಂಖ್ಯೆಯ ಖಾತೆಗಳನ್ನು ತನಿಖೆಗೆ ಒಳಪಡಿಸುವುದು ಕೂಡಾ ಸುಲಭಸಾಧ್ಯವಲ್ಲ. ಖಾತೆಗಳ ಪರಿಶೀಲನೆ ಅಂಥ ಸಂಕೀರ್ಣ ಪ್ರಕ್ರಿಯೆ. ಅದು ಎಷ್ಟರ ಮಟ್ಟಿಗೆ ಸಂಕೀರ್ಣ ಎಂದರೆ, ಇಲಾಖೆ ಒಂದು ವರ್ಷದಲ್ಲಿ ಈ ಉದ್ದೇಶಕ್ಕೆ ಆಯ್ಕೆ ಮಾಡಿಕೊಂಡ ಪ್ರಕರಣಗಳ ತನಿಖೆ ಪೂರೈಸಲು ಎರಡು ವರ್ಷ ಕಾಲ ಹಿಡಿಯುತ್ತದೆ.
ನಗದು ಅಮಾನ್ಯ ಹೊರೆ
ಈ ನಿಧಾನ ಪ್ರಕ್ರಿಯೆಗೆ ಮುಖ್ಯ ಕಾರಣವೆಂದರೆ, ಇಲಾಖೆಯಲ್ಲಿರುವ ಸಿಬ್ಬಂದಿ ಕೊರತೆ. ಕೇಂದ್ರ ಸರಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಕೆ.ಕೆ.ಎನ್.ಕುಟ್ಟಿ ಅವರ ಪ್ರಕಾರ, ‘‘ಆದಾಯ ತೆರಿಗೆ ಇಲಾಖೆಗೆ ಮಂಜೂರಾದ ಹುದ್ದೆಗಳು 72 ಸಾವಿರ. ಆದರೆ ಈ ಪೈಕಿ ಶೇ. 30ರಷ್ಟು ಹುದ್ದೆಗಳು ಖಾಲಿ ಇವೆ.’’
ಕೇಂದ್ರ ಸರಕಾರದ ನೋಟು ಅಮಾನ್ಯ ನಿರ್ಧಾರದಿಂದಾಗಿ ಆದಾಯ ತೆರಿಗೆ ಇಲಾಖೆ ಬಹುದೊಡ್ಡ ಪ್ರಮಾಣದ ಖಾತೆಗಳನ್ನು ಪರಿಶೀಲನೆ ಮಾಡಬೇಕಾಗುತ್ತದೆ. ಇಂಥ ಪರಿಶೀಲನಾ ಪ್ರಕ್ರಿಯೆಯಲ್ಲಿ ನೋಟಿಸ್ ನೀಡಿಕೆ, ಪ್ರತಿ ಪ್ರಕರಣಗಳಲ್ಲಿ ತೆರಿಗೆದಾರರು ನೀಡಿದ ಸಮಜಾಯಿಷಿಯ ಉತ್ತರದ ಪರಿಶೀಲನೆ ಹಾಗೂ ಶಿಕ್ಷೆ ಶಿಫಾರಸು ಮಾಡುವುದು ಸೇರುತ್ತದೆ. ಆದ್ದರಿಂದ ಸಹಜವಾಗಿಯೇ ಇಲಾಖೆಯ ಮಾಮೂಲಿ ಕೆಲಸದ ಹೊರೆಗಿಂತ ಅಧಿಕ ಪಟ್ಟು ಹೊರೆ ಹೆಚ್ಚಾಗುತ್ತದೆ. ಜನ ಮಾರ್ಚ್ ಅಂತ್ಯದ ವೇಳೆಗೆ ಹೊಸ ವರ್ಷದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದರಿಂದ, ಈ ಹೊರೆ ಇಲಾಖೆ ತಾಳಿಕೊಳ್ಳಲು ಸಾಧ್ಯವಿಲ್ಲದಷ್ಟರ ಮಟ್ಟಿಗೆ ಏರುತ್ತದೆ.
ಬ್ಯಾಂಕ್ ಖಾತೆಗಳ ಪರಿಶೀಲನೆಗೆ ಕೇಂದ್ರ ಸರಕಾರ ಯಾವುದೇ ಗಡುವು ವಿಧಿಸಿಲ್ಲ ಎಂದು ಕುಟ್ಟಿ ಹೇಳುತ್ತಾರೆ.
‘‘ನವೆಂಬರ್ 9ರಿಂದ ಡಿಸೆಂಬರ್ 31ರವರೆಗೆ 2.5 ಲಕ್ಷ ರೂಪಾಯಿಗಿಂತ ಅಧಿಕ ಠೇವಣಿ ಮಾಡಿದ ಎಲ್ಲ ಖಾತೆಗಳ ವಿವರಗಳನ್ನು ಪರಿಶೀಲಿಸಬೇಕು ಎಂದು ಹಣಕಾಸು ಸಚಿವಾಲಯ ಸೂಚಿಸಿದೆ. ಆದರೆ ಇದರ ಅನುಷ್ಠಾನ ಕಷ್ಟ ಸಾಧ್ಯ’’ ಎಂದು ಹಿರಿಯ ತೆರಿಗೆ ಅಧಿಕಾರಿ ವಿವರಿಸುತ್ತಾರೆ. ‘‘ಸಾಮಾನ್ಯವಾಗಿ ಇಲಾಖೆ ಅಧಿಕ ಮೌಲ್ಯದ ಘೋಷಣೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತದೆಯೇ ವಿನಃ ಸಣ್ಣ ಪ್ರಕರಣಗಳ ಬಗ್ಗೆ ತಲೆ ಕೆಡಿಸಿಕೊಳ್ಲುವುದಿಲ್ಲ. ಇದೀಗ ಅಧಿಕ ಮೌಲ್ಯದ ನೋಟುಗಳ ಅಮಾನ್ಯ ವಿಚಾರದಲ್ಲೂ, ಇದೇ ನೀತಿ ಅನ್ವಯಿಸುತ್ತದೆ. ಅತ್ಯಧಿಕ ಪ್ರಮಾಣದ ಹಣವನ್ನು ಠೇವಣಿ ಮಾಡಿರುವ ಖಾತೆಗಳಿಗೇ ಇಲಾಖೆ ಆದ್ಯತೆ ನೀಡುತ್ತದೆ. ಅದಾಗ್ಯೂ ಹಾಲಿ ಇರುವ ಮೂಲಸೌಕರ್ಯದ ಹಿನ್ನೆಲೆಯಲ್ಲಿ ನಮ್ಮ ಇಲಾಖೆಯ ಹೊಣೆ ಬೆಟ್ಟದಷ್ಟು ದೊಡ್ಡದು’’ ಎಂದು ಅವರು ಹೇಳುತ್ತಾರೆ.
ಕೃಪೆ: scroll.in