ಕ್ಯಾಶ್‌ಲೆಸ್: ದೇಶದ ಮೂರು ಬಹುದೊಡ್ಡ ಆಪತ್ತುಗಳು
ನಾನು ಮಹಾತ್ಮ ಗಾಂಧೀಜಿಯ ಬಹಳ ದೊಡ್ಡ ಅಭಿಮಾನಿ, ಆದರೆ ಅವರಿಗೆ ಕೆಲ ವಿಚಿತ್ರ ಅಭಿಪ್ರಾಯಗಳಿದ್ದವು. ಅವರಿಗೆ 40 ವರ್ಷದ ತುಂಬಿದ ಸ್ವಲ್ಪ ಸಮಯದಲ್ಲೇ, ಅಂದರೆ 1909ರಲ್ಲಿ ಅವರು ಬರೆದ ‘ಹಿಂದ್ ಸ್ವರಾಜ್’ನಲ್ಲಿ ಅವರು ಆಧುನಿಕ ಯುಗದ ಕೆಲ ದ್ಯೋತಕಗಳನ್ನು ಕಟುವಾಗಿ ಟೀಕಿಸಿದರು. ‘‘ಆಸ್ಪತ್ರೆಗಳು ಪಾಪವನ್ನು ಹರಡುತ್ತವೆ’’ ಎಂದು ಅವರು ಬರೆದಿದ್ದರು. ‘‘ಯುರೋಪಿಯನ್ ವೈದ್ಯಶಾಸ್ತ್ರ ಕಲಿಯುವುದೆಂದರೆ ನಮ್ಮ ಗುಲಾಮಗಿರಿಯನ್ನು ಇನ್ನಷ್ಟು ಆಳವಾಗಿಸಿದಂತೆ’’ ಎಂದೂ ಅವರು ಬರೆದಿದ್ದರು. ರೈಲ್ವೇ ವಿರುದ್ಧವೂ ಕಿಡಿ ಕಾರಿದ್ದ ಅವರು ‘‘ಅವುಗಳು ಕೆಟ್ಟದ್ದನ್ನು ಹರಡುತ್ತವೆಯೆಂಬುದು ನಿರ್ವಿವಾದ,’’ ಎಂದು ಹೇಳಿದ್ದರು.
ತಾವು ಕೂಡ ಓರ್ವ ವಕೀಲರಾಗಿದ್ದ ಹೊರತಾಗಿಯೂ ಅವರು ವಕೀಲರ ವಿರುದ್ಧ ವಾದಿಸಿದ್ದರಲ್ಲದೆ ಅವರು ‘‘ದೇಶವನ್ನು ದರಿದ್ರ ತನದತ್ತ ದೂಡಿದ್ದಾರೆ,’’ ಎಂದು ಹೇಳಿದ್ದರು. ಆದರೆ ಇಲ್ಲಿ ಗಮನಿಸಬೇಕಾದ ಅಂಶವೊಂದು ಇದೆ. ಮೇಲಿನೆಲ್ಲಾ ವೈಯಕ್ತಿಕ ಅಭಿಪ್ರಾಯಗಳ ಹೊರತಾಗಿಯೂ ಅವರು ಒಮ್ಮೆ ಕೂಡ ರೈಲ್ವೇ, ಆಸ್ಪತ್ರೆಗಳು ಮತ್ತು ವಕೀಲರನ್ನು ನಿಷೇಧಿಸಬೇಕೆಂದು ಹೇಳಿರಲಿಲ್ಲ.
ಮೇಲಿನ ಯೋಚನಾಲಹರಿಯಷ್ಟೇ ಅಸಂಬಂದ್ಧ ಕಲ್ಪನೆಗಳನ್ನು ಇತ್ತೀಚಿನ ದಿನಗಳಲ್ಲಿ ಹರಡಲಾಗುತ್ತಿದೆ-ಅದೇನೆಂದರೆ ನಗದು ಉಪ ಯೋಗಿಸುವುದರಲ್ಲಿ ಏನೋ ತಪ್ಪಿದೆ ಹಾಗೂ ನಾವು ಕ್ಯಾಶ್‌ಲೆಸ್ ಆರ್ಥಿಕ ವ್ಯವಸ್ಥೆಯತ್ತ ಸಾಗಬೇಕೆಂಬುದು. ಭಾರತಕ್ಕೆ ಕ್ಯಾಶ್‌ಲೆಸ್ ಆರ್ಥಿಕತೆ ವಿನಾಶಕಾರಿಯೇ ಸರಿ. ಏಕೆಂಬುದಕ್ಕೆ ಇಲ್ಲಿದೆ ವಿವರಣೆ.
ಸಂಪೂರ್ಣ ಕ್ಯಾಶ್‌ಲೆಸ್ ಆರ್ಥಿಕತೆ ಎಂದರೆ ಖಾಸಗಿತನದ ಅಂತ್ಯ. ನೀವು ಮಾಡುವ ಪ್ರತಿಯೊಂದು ಖರೀದಿ ಹಾಗೂ ಹಣ ವರ್ಗಾವಣೆ ಡಿಜಿಟಲೀಕರಣದಿಂದಾಗಿ ದಾಖಲಾಗುತ್ತದೆ. ನೀವು ಏಡ್ಸ್‌ಗಾಗಿ ಔಷಧ ಖರೀದಿಸಿದರೆ, ಪೋರ್ನ್ ಮ್ಯಾಗಝಿನ್ ಖರೀದಿಸಿದರೆ ಅಥವಾ ರೊಮಾನ್ಸ್ ಮಾಡಲೆಂದು ಹೊಟೇಲ್ ಕೊಠಡಿ ಬುಕ್ ಮಾಡಿದಿರೆಂದರೆ- ಆ ಮಾಹಿತಿಯನ್ನು ಸರಕಾರ ಅಥವಾ ಹ್ಯಾಕರ್ ಒಬ್ಬ ಪಡೆಯಬಹುದಾಗಿದ್ದು ಹಾಗೂ ಈ ಮಾಹಿತಿಯನ್ನು ನಿಮ್ಮ ವಿರುದ್ಧವೇ ಪ್ರಯೋಗಿಸಬಹುದಾಗಿದೆ. ಭಾರತದಲ್ಲಿ ಪ್ರೈವೆಸಿ ಕಾನೂನುಗಳಿಲ್ಲ ಹಾಗೂ ಡಾಟಾ ಸಂರಕ್ಷಣೆ ದೊಡ್ಡ ತಲೆನೋವಿನ ಸಂಗತಿಯಾಗಿದೆ. ಪ್ರತಿ ವಾರ ಯಾವುದಾದರೂ ದೊಡ್ಡ ಹ್ಯಾಕಿಂಗ್ ಸುದ್ದಿಯನ್ನು ನಾವು ಓದುತ್ತಿರುತ್ತೇವೆ. ಒಂದೋ ಭಾರತದ ಕಾಂಗ್ರೆಸ್ ಪಕ್ಷದ ಯಾ ಅಮೆರಿಕದ ಡೆಮಾಕ್ರೆಟಿಕ್ ಪಕ್ಷದ ಮಾಹಿತಿ ಹ್ಯಾಕ್ ಮಾಡಿದ ಸುದ್ದಿಯಿರಬಹುದು.
ಎರಡನೆಯದಾಗಿ ಸಂಪೂರ್ಣ ಕ್ಯಾಶ್‌ಲೆಸ್ ಆರ್ಥಿಕತೆಯೆಂದರೆ ಅಸಮ್ಮತಿಯ ಅಂತ್ಯ. ನಿಮ್ಮ ವಿರುದ್ಧವಾಗಿ ಸರಕಾರ ಯಾವುದೇ ಮಾಹಿತಿ ಯನ್ನು ಉಪಯೋಗಿಸಬಹುದಾಗಿದೆ. (ನೀವು ಅಪರಾಧ ನಡೆಸಿಲ್ಲವಾದರೂ ನೀವು ಮುಜುಗರಪಡುವಂತಹ ಹಲವು ವಿಚಾರಗಳಿರುತ್ತವೆ). ಅದಕ್ಕಿಂತಲೂ ಹೆಚ್ಚಾಗಿ ಸರಕಾರ ತಮ್ಮ ವಿರೋಧಿಗಳನ್ನು ಒಂದು ಬಟನ್ ಒತ್ತಿ ದಿವಾಳಿಯಾಗಿಸಬಹುದು ಅಥವಾ ದುರ್ವ್ಯವಹಾರ ಮಾಡಿದ್ದೀರೆಂದು ನಿಮ್ಮ ವಿರುದ್ಧ ತನಿಖೆಯ ಭಾಗವಾಗಿ ನಿಮ್ಮ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಬಹುದು. ಈ ವಿಷಯ ಅರಿತಾಗ ಆಡಳಿತ ಪಕ್ಷದವರು ಜೊಲ್ಲು ಸುರಿಸಬಹುದು ಆದರೆ ಅವರು ವಿಪಕ್ಷ ಸ್ಥಾನದಲ್ಲಿರುವಾಗ ಅವರ ವಿರೋಧಿಗಳು ಅವರ ವಿರುದ್ಧ ಇಂತಹ ಕ್ರಮ ಕೈಗೊಳ್ಳಬೇಕೆಂದು ಬಯಸುತ್ತಾರೇನು?
ಮೂರನೆಯದಾಗಿ ಸಂಪೂರ್ಣ ಕ್ಯಾಶ್‌ಲೆಸ್ ಆರ್ಥಿಕ ವ್ಯವಸ್ಥೆ ಸ್ವಾತಂತ್ರ್ಯಕ್ಕೆ ಅಪಾಯಕಾರಿ. ನಗದು ಹಣವೆಂದರೆ ಒಂದು ರೀತಿಯಲ್ಲಿ ಸಬಲೀಕರಣವಿದ್ದಂತೆ. ಯುವ ಗೃಹಿಣಿಯೊಬ್ಬಳು ತನ್ನ ಕುಡುಕ ಗಂಡನ ಕಣ್ತಪ್ಪಿಸಿ ಉಳಿತಾಯ ಮಾಡುವ ಸ್ವಲ್ಪಹಣ ಅಥವಾ ಅಜ್ಜಿಯೊಬ್ಬಳು ವರ್ಷ ಗಳಿಂದ ಅಳಿದುಳಿದ ಹಣವನ್ನು ತನ್ನ ಚಾಪೆಯಡಿ ಇಡುವುದು. ಇದು ಒಂದು ರೀತಿಯಲ್ಲಿ ಸ್ವಾತಂತ್ರ್ಯದ ಅನುಭವ ನೀಡುತ್ತದೆ. ಭಾರತದಂತಹ ದೇಶದಲ್ಲಿ ಕ್ಯಾಶ್‌ಲೆಸ್ ಸಮಾಜವೆಂದರೆ ಅದರಿಂದ ಹೆಚ್ಚಾಗಿ ಬಾಧಿತರಾಗುವವರು ಮಹಿಳೆಯರೇ ಸರಿ.
ಮುಂದುವರಿದ ಸಮಾಜವೊಂದು ಕ್ಯಾಶ್‌ಲೆಸ್ ಆಗಬೇಕೆಂದು ಯೋಚಿಸುವುದು ತಪ್ಪು. ನಿರಂಕುಶಾಧಿಕಾರಿತ್ವದ ಅಪಾಯಗಳನ್ನು ಚೆನ್ನಾಗಿ ಅರಿತಿರುವ ದೇಶವಾದ ಜರ್ಮನಿಯಲ್ಲಿ ಶೇ. 80ರಷ್ಟು ವ್ಯವಹಾರಗಳು ನಗದಿನ ಮೂಲಕವೇ ನಡೆಯುತ್ತದೆ. ಅಮೆರಿಕದಲ್ಲಿ ಕೂಡ ಶೇ. 45ರಷ್ಟು ಆರ್ಥಿಕ ವ್ಯವಹಾರಗಳು ನಗದು ವ್ಯವಹಾರಗಳಾಗಿವೆ. ಜರ್ಮನಿ ಮತ್ತು ಅಮೆರಿಕ ದೇಶಗಳಿಗೆ ಕ್ಯಾಶ್‌ಲೆಸ್ ಆಗುವಷ್ಟು ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ಸಂಬಂಧಿತ ಆಧುನಿಕ ಸವಲತ್ತುಗಳಿವೆಯೆಂಬುದನ್ನು ಇಲ್ಲಿ ಗಮನಿಸಬೇಕಾಗಿದೆ. ಭಾರತದಲ್ಲಿ 60 ಕೋಟಿ ಜನರ ಬಳಿ ಬ್ಯಾಂಕ್ ಖಾತೆಗಳಿಲ್ಲ ಹಾಗೂ ಶೇ. 20ಕ್ಕಿಂತ ಕಡಿಮೆ ಭಾರತೀಯರ ಬಳಿ ಸ್ಮಾರ್ಟ್ ಫೋನುಗಳಿವೆ. ಅಂತರ್ಜಾಲ ಸಂಪರ್ಕ ಕೂಡ ಅಷ್ಟಕಷ್ಟೆ. ಎತ್ತಿನ ಗಾಡಿಯೊಂದನ್ನು ಫಾರ್ಮ್ಯುಲಾ 1 ರೇಸಿನಲ್ಲಿ ಬಿಟ್ಟು ಚಾಲಕ ನಿಧಾನವಾಗಿ ಹೋಗುತ್ತಿದ್ದಾನೆಂದು ಆತನಿಗೆ ಚಾಟಿಯೇಟು ಬೀಸಿದಂತಿದೆ ಭಾರತವನ್ನು ಕ್ಯಾಶ್‌ಲೆಸ್ ಮಾಡುವ ಪ್ರಯತ್ನ.
ನಮ್ಮ ಫೋನಿಗೆ ನಾವು ಡೌನ್‌ಲೋಡ್ ಮಾಡುವಂತಹ ಆ್ಯಪ್‌ಗಳು ನಮ್ಮ ಖಾಸಗಿತನವನ್ನು ಅಪಾಯಕ್ಕೊಡ್ಡುತ್ತವೆ ಎಂಬುದು ನಿಜ. ಆದರೆ ಇಲ್ಲಿ ನಮಗೆ ಬೇಕಿದ್ದಲ್ಲಿ ಮಾತ್ರ ನಾವು ಆ್ಯಪ್ ಡೌನ್‌ಲೋಡ್ ಮಾಡಬಹುದಾಗಿದೆ. ಇಲ್ಲದೇ ಹೋದಲ್ಲಿ ಅವುಗಳನ್ನು ನಿರ್ಲಕ್ಷಿಸಬಹುದು. ನಾನಿಲ್ಲ್ಲಿ ಕ್ಯಾಶ್‌ಲೆಸ್ ಆರ್ಥಿಕತೆಯನ್ನು ಸಂಪೂರ್ಣವಾಗಿ ವಿರೋಧಿಸುತ್ತಿಲ್ಲ. ಆದರೆ ನವೆಂಬರ್ 8ರ ನೋಟು ಅಮಾನ್ಯೀಕರಣ ಹಾಗೂ ನಂತರದ ಬೆಳವಣಿಗೆಗಳಲ್ಲಿರುವ ಬಲವಂತ. ನಾವಾಗಿಯೇ ನಾವು ಕ್ಯಾಶ್‌ಲೆಸ್ ಸಮಾಜದೆಡೆಗೆ ಹೋದರೆ ಕ್ಯಾಸ್‌ಲೆಸ್ ಆರ್ಥಿಕತೆ ಒಳ್ಳೆಯದೇ ಹೊರತು ನಮ್ಮನ್ನು ಬಲವಂತ ಪಡಿಸಿದರೆ ಅದು ಸರಿ ಬಾರದು.
ಸದ್ಯಕ್ಕೆ ಜನಸಾಮಾನ್ಯ ಒಂದು ಉತ್ತಮ ಕಾರಣಕ್ಕಾಗಿ ಸ್ವಲ್ಪ ಹಿಂಜರಿಯುತ್ತಿದ್ದಾನೆ. ಡಿಜಿಟಲ್ ಹಣ ಪಾವತಿಯಲ್ಲಿ ಟ್ರಾನ್ಸಾಕ್ಷನ್ ವೆಚ್ಚಗಳು ಸೇರಿರುತ್ತವೆ. ಮೇಲಾಗಿ ಇತ್ತೀಚೆಗಿನ ಬೆಳವಣಿಗೆಗಳ ನಂತರ ಬ್ಯಾಂಕುಗಳು ಹಾಗೂ ರಿಸರ್ವ್ ಬ್ಯಾಂಕನ್ನು ಯಾರು ನಂಬುತ್ತಾರೆ? ಬಲವಂತದ ಕ್ಯಾಶ್‌ಲೆಸ್ ಇಕಾನಮಿಯಿಂದ ಅಂತಿಮವಾಗಿ ಬ್ಯಾಂಕುಗಳು ಮತ್ತು ಪೇಮೆಂಟ್ ಕಂಪೆನಿಗಳ ಸ್ಥಾಪಿತ ಹಿತಾಸಕ್ತಿಗಳು ಲಾಭ ಗಳಿಸುತ್ತವೆ. ಮೇಲಾಗಿ ಮಾನವತೆಯ ಇತಿಹಾಸದಲ್ಲಿಯೇ ಇದು ಬಡವರಿಂದ ಶ್ರೀಮಂತರಿಗೆ ಅತಿ ಹೆಚ್ಚು ಹಣ ಮರುವಿತರಣೆಯಾಗಿರುವ ಉದಾಹರಣೆಯಾಗಿರಬಹುದು.
ಸ್ವತಹ ಬಿಜೆಪಿ ನಗದು ದೇಣಿಗೆಗಳನ್ನು ಸ್ವೀಕರಿಸುತ್ತದೆ ಹಾಗೂ ತನ್ನ ನಿಲುವನ್ನು ಬದಲಾಯಿಸುತ್ತಲೇ ಇದೆ. ನೋಟು ಅಮಾನ್ಯೀಕರಣ ಘೋಷಣೆಯಾದ ಆರಂಭದಲ್ಲಿ ಅದು ನಕಲಿ ನೋಟುಗಳು ಹಾಗೂ ಕಾಳಧನದ ಮೇಲೆ ನಿಯಂತ್ರಿಸಲು ತೆಗೆದುಕೊಂಡ ಕ್ರಮವೆಂದು ಹೇಳಲಾಯಿತು. ಆದರೆ ಆ ಕಾರಣಗಳು ಅಸಂಬದ್ಧವೆಂದು ಗೊತ್ತಾಗುತ್ತಲೇ ಸರಕಾರ ಕ್ಯಾಶ್‌ಲೆಸ್ ಆರ್ಥಿಕತೆಯ ಬಗ್ಗೆ ಮಾತನಾಡಲಾರಂಭಿಸಿತು. ಇದಾಗಿ ಹದಿನೈದು ದಿನಗಳಲ್ಲಿಯೇ ಅವರು ಈ ಹೇಳಿಕೆಯಿಂದಲೂ ಹಿಂದೆ ಸರಿಯುತ್ತಿದ್ದು ತಾವು ‘ಲೆಸ್ ಕ್ಯಾಶ್’ ಎಂದು ಹೇಳಲಿಚ್ಛಿಸುತ್ತೇವೆ ಎಂದು ಹೇಳಲು ಆರಂಭಿಸಿದರು. ವಾಸ್ತವವೇನೆಂದರೆ -ನೋಟು ಅಮಾನ್ಯೀಕರಣ ನಮ್ಮ ಆರ್ಥಿಕತೆಯ ಶಕ್ತಿಗುಂದಿಸುತ್ತಿರುವ ಮಾನವೀಯತೆಯ ದುರಂತ, ಮೋದಿ ಹಾಗೂ ಅವರ ಸಂಗಡಿಗರು ಅವುಗಳನ್ನು ಸಮರ್ಥಿಸಲು ಎಷ್ಟೇ ಪ್ರಯತ್ನಿಸಿದರೂ ಅದು ಅಸಾಧ್ಯದ ಮಾತು. ಒಂದು ದಿನ ಅವರು ತಮ್ಮ ಪ್ರಯತ್ನಗಳನ್ನೆಲ್ಲಾ ನಿಲ್ಲಿಸಲಿದ್ದಾರೆ, ಅವರಿಗೆ ಸಮರ್ಥಿಸಲು ಅಸಾಧ್ಯವೆಂದು ತಿಳಿದಾಗ ಅವರು ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಾರೆ.
♦♦♦♦♦♦♦♦♦♦♦♦♦♦♦♦♦♦♦♦♦♦♦♦♦
ಈ ಸುದ್ದಿ / ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯ, ಅನಿಸಿಕೆಯೇನು ?
ಕೆಳಗೆ ಕಮೆಂಟ್ ವಿಭಾಗದಲ್ಲಿ ಬರೆಯಿರಿ.