ಕಾಫಿ-ಕಾರ್ಟೂನ್ ಸಂಗಮವೇ ಶಂಕರಣ್ಣ
‘ಎಲ್ಲರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂದು ಪುರಂದರ ದಾಸರು ಹಾಡಿದ ಈ ವಾಕ್ಯ ಎಷ್ಟು ಅರ್ಥಗರ್ಭಿತವಾಗಿದೆ.
ಜೀವನದ ಅವಶ್ಯಕತೆಗಳಿಗೆ, ಅನಿವಾರ್ಯತೆಗಳಿಗೆ ತಕ್ಕಂತೆ ದುಡಿಮೆ ಮಾಡಲೇಬೇಕು. ಕಷ್ಟಪಟ್ಟು ದುಡಿದು ಸಾರ್ಥಕ ಬದುಕು ನಡೆಸುವುದು ಒಂದು ವರ್ಗವಾದರೆ, ಕೆಲಸ ಮಾಡದೆ ಅನ್ಯರು ದುಡಿದು ತಂದ ಅನ್ನ ಉಣ್ಣುವವರ ವರ್ಗ ಮತ್ತೊಂದೆಡೆ. ಜೀವನದ ಹೊರೆ ಹೊರಲಿಕ್ಕಾಗಿ, ತನ್ನ ಕುಟುಂಬ ಮಾತ್ರವಲ್ಲ ತನ್ನ ಅಣ್ಣನ ಕುಟುಂಬವನ್ನೂ ಪೋಷಿಸುತ್ತಿರುವ, ಬ್ಯಾಂಕ್ ಎಕ್ಸಿಕ್ಯೂಟಿವ್ ಕೆಲಸದಿಂದ ಹಿಡಿದು ಚಿಕ್ಕ ಬೈಕ್‌ನಲ್ಲಿ ಟೀ ಕಾಫಿ ಮಾರಾಟ ಮಾಡುತ್ತಿರುವ, ವೃತ್ತಿಯ ಜೊತೆಗೆ ಸದಭಿರುಚಿಯ ಪ್ರವೃತ್ತಿಯನ್ನೂ ಬೆಳೆಸಿಕೊಂಡಿರುವ ಶಂಕರಣ್ಣನ ಕಾಫಿ ಕತೆ ಇದು.
ಮುಂಜಾನೆ ಐದು ಗಂಟೆಗೆ ಸಿಲಿಕಾನ್ ಸಿಟಿ ಬೆಂಗಳೂರಿನ ಬನಶಂಕರಿಯ ಬಿಡಿಎ ಕಾಂಪ್ಲೆಕ್ಸ್ ಎದುರು ಬಂದರೆ ಖಂಡಿತವಾಗಿಯೂ ಪರಿಮಳದ ಬಿಸಿ ಬಿಸಿ ಫಿಲ್ಟರ್ ಕಾಫಿ, ಟೀ, ಬಾದಾಮಿ ಹಾಲು ಜೊತೆಗೆ ಕಾರ್ಟೂನ್ ಕೂಡ ನಿಮ್ಮನ್ನು ಸ್ವಾಗತಿಸುತ್ತದೆ. ಅಲ್ಲದೆ, ಆ ಕಾಫಿಗೊಂದು ಹೆಸರೂ ಇದೆ, ‘ಶಂಕರ್ ಕಾರ್ಟೂನಿಸ್ಟ್ ಕಾಫಿ’.
ವೃತ್ತಿಯಿಂದ ಕಾಫಿ ಟೀ ಮಾರಾಟಗಾರರಾಗಿರುವ ಶಂಕರ್ ಅವರು ಕುಮಾರಸ್ವಾಮಿ ಲೇಔಟ್ ನಿವಾಸಿಯಾಗಿದ್ದು, ಪ್ರವೃತ್ತಿಯಲ್ಲಿ ವ್ಯಂಗ್ಯಚಿತ್ರಕಾರ. ಅವರನ್ನು ಎಲ್ಲರೂ ಪ್ರೀತಿಯಿಂದ ಶಂಕರಣ್ಣ ಎನ್ನುತ್ತಾರೆ. ಶಂಕರ್ ಕಾಫಿ-ಟೀ ವ್ಯಾಪಾರ ಪ್ರಾರಂಭಿಸುವುದು ಬೆಳಗಿನ 5 ಗಂಟೆಗೆ. ಇನ್ನು 7ಗಂಟೆವರೆಗೂ ಬೇರೆ ಬೇರೆ ಕಚೇರಿ, ಫ್ಯಾಕ್ಟರಿ, ಬ್ಯಾಂಕ್, ಗ್ಯಾರೇಜ್ ಹಾಗೂ ಇತರ ಸಣ್ಣಪುಟ್ಟ ಅಂಗಡಿಗಳಿಗೆ ಕಾಫಿ/ಟೀ ಸರಬರಾಜು ಮಾಡಲು ತಿರುಗಾಡುತ್ತಾರೆ. ಹಿರಿಯ ನಾಗರಿಕರಿಗೆ, ರಸ್ತೆಯಲ್ಲಿರುವ ಪೌರ ಕಾರ್ಮಿಕರಿಗೆ 5 ರೂಪಾಯಿಗಳಿಗೆ ಕಾಫಿ ಕೊಡುತ್ತಾರೆ ಎಂಬುದು ವಿಶೇಷ.
ಶಂಕರ್‌ಗೆ ಬಾಲ್ಯದಿಂದಲೂ ವ್ಯಂಗ್ಯಚಿತ್ರದಲ್ಲಿ ಆಸಕ್ತಿ. ‘ಮಾಲ್ಗುಡಿ ಡೇಸ್’ನ ಟೈಟಲ್ ಕಾರ್ಡ್‌ನಲ್ಲಿ ಮೂಡಿಬರುವ ಆರ್.ಕೆ.ಲಕ್ಷ್ಮಣ್ ಅವರ ಕಾರ್ಟೂನ್ ಅವರನ್ನು ಹೆಚ್ಚಾಗಿ ಆಕರ್ಷಿಸಿತ್ತು. ವ್ಯಂಗ್ಯಚಿತ್ರದ ಬಗ್ಗೆ ಅವರ ತಂದೆಯೊಂದಿಗೆ ಮಾತುಕತೆ ನಡೆಸಿದಾಗ, ‘ಬಿಳಿ ಹಾಳೆಯೊಂದರ ಮೇಲೆ ಎರಡು ಮುಖ ಬರೆದು’ ಇದೇ ಕಾರ್ಟೂನ್ ಎಂದು ಕೈಗೆ ಕೊಟ್ಟರಂತೆ. ಅದರಲ್ಲಿ ಒಂದು ನಗುಮುಖ, ಇನ್ನೊಂದು ಅಳುಮುಖ. ನನ್ನ ತಂದೆ ಜೀವನದ ಸಾರವನ್ನೇ ಈ ಎರಡು ಚಿತ್ರದಲ್ಲಿ ತುಂಬಿದ್ದರು. ನಾನೂ ಒಬ್ಬ ಕಾರ್ಟೂನಿಸ್ಟ್ ಆಗಬೇಕೆಂಬ ಹುಚ್ಚು ಬೆಳೆದದ್ದು ಆಗಲೇ. ವ್ಯಂಗ್ಯಚಿತ್ರಕಾರ ಸು.ವಿ.ಮೂರ್ತಿ ಅವರು ನನ್ನ ಗೀಚುಗೆರೆಗಳನ್ನು ತಿದ್ದಿ ತೀಡಿ ವ್ಯಂಗ್ಯಚಿತ್ರ ರಚಿಸಲು ಬೆಂಬಲಿಸಿದರು ಎಂದು ಶಂಕರ್ ನೆನಪಿಸಿಕೊಂಡರು.
ಶಂಕರ್ ಅವರ ವ್ಯಂಗ್ಯಚಿತ್ರಗಳಿಗೆ ಅಡಿ ಬರಹದ ಅಗತ್ಯವೇ ಇಲ್ಲ. ಮೊದಲ ನೋಟಕ್ಕೇ ನಗೆ ಉಕ್ಕಿಸುವ ಶಕ್ತಿ ಅವುಗಳಲ್ಲಿರುತ್ತವೆ. ಅವರ ನೂರಾರು ವ್ಯಂಗ್ಯಚಿತ್ರಗಳು ಕನ್ನಡ ಮತ್ತು ಆಂಗ್ಲ ದಿನಪತ್ರಿಕೆಗಳು, ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಪ್ರತಿವರ್ಷ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಸಾಹಿತಿಗಳ ವ್ಯಂಗ್ಯ ಚಿತ್ರಗಳನ್ನು ಶಂಕರ್ ಪ್ರದರ್ಶಿಸುತ್ತಾರೆ. ಜೊತೆಗೆ ಈಗಾಗಲೇ 13 ಕಡೆ ಏಕವ್ಯಕ್ತಿ ವ್ಯಂಗ್ಯ ಚಿತ್ರಕಲಾ ಪ್ರದರ್ಶನಗಳೂ ನಡೆದಿವೆ.
ಸಾರಿಗೆ ಇಲಾಖೆ ಏರ್ಪಡಿಸಿದ್ದ ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯದ ದುಷ್ಪರಿಣಾಮ ಕುರಿತ ವ್ಯಂಗ್ಯಚಿತ್ರ ಸ್ವರ್ಧೆಯಲ್ಲಿ ಪಾಲ್ಗೊಂಡು ಪ್ರಶಂಸೆ ಗಳಿಸಿದ್ದಾರೆ. ಜಲಮಂಡಳಿ ಹಮ್ಮಿಕೊಂಡಿದ್ದ ನೀರು ಉಳಿಸಿ ಆಂದೋಲನದಲ್ಲಿ ಶಂಕರ್ ಅವರ ವ್ಯಂಗಚಿತ್ರಗಳನ್ನು ಮೆಚ್ಚಿದ ಮಂಡಳಿಯು ಶಂಕರ್ ಕಾಫಿ ಕಾರ್ಟೂನಿಸ್ಟ್ ಹೆಸರಿನ ಪುಸ್ತಕ ಬಿಡುಗಡೆ ಮಾಡಿದೆ.
ಇದೇ ಪುಸ್ತಕವನ್ನು ಕರ್ನಾಟಕ ಗ್ರಂಥಾಲಯ ಇಲಾಖೆಯು ರಾಜ್ಯದೆಲ್ಲೆಡೆ ಗ್ರಂಥಾಲಯಗಳಿಗೆ ಒದಗಿಸಿದೆ. ಶಂಕರ್ ಅವರಲ್ಲಿರುವ ಕಲಾವಿದನನ್ನು ಗೌರವಿಸಿ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಕ್ರಾಂತಿವೀರ ಭಗತ್ ಸಿಂಗ್ ಪ್ರಶಸ್ತಿಗಳು ಬಂದಿವೆ.