ಒಂದು ಕೋಟಿ ಲೀಟರ್ ಹಾಲು ಉತ್ಪಾದಿಸುವ ಗುರಿ: ಎ.ಮಂಜು

Update: 2017-02-17 14:06 GMT

ಬೆಂಗಳೂರು, ಫೆ. 17: ಪ್ರತಿದಿನ ರಾಜ್ಯದಲ್ಲಿ ಒಂದು ಕೋಟಿ ಲೀಟರ್ ಹಾಲು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ಹೈನುಗಾರಿಕೆ ಹಾಗೂ ರೇಷ್ಮೆ ಖಾತೆ ಸಚಿವ ಎ.ಮಂಜು ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ನಗರದ ಹೆಸರುಘಟ್ಟದಲ್ಲಿ ಪಶುಪಾಲನೆ ಮತ್ತು ಪಶು ವೈದ್ಯ ಇಲಾಖೆಯು ಆಯೋಜಿಸಿದ್ದ, ಜಾನುವಾರು ಸಂವರ್ಧನಾ ಕ್ಷೇತ್ರ, ರಾಜ್ಯ ವೀರ್ಯ ಸಂಕಲನಾ ಕೇಂದ್ರ ಹಾಗೂ ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಪ್ರತಿದಿನ 72 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, 9ಲಕ್ಷ ಕುಟುಂಬಗಳು ಹಾಲು ಉತ್ಪಾದನೆಯಲ್ಲಿ ತೊಡಗಿವೆ. ಮುಂಬರುವ ದಿನಗಳಲ್ಲಿ ಒಂದು ಕೋಟಿ ಲೀಟರ್ ಹಾಲು ಉತ್ಪಾದಿಸುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಆರೂವರೆ ಕೋಟಿ ಜನರಿಗೆ ಹೈನು ಒದಗಿಸುವ ನಿಟ್ಟಿನಲ್ಲಿ 30 ರಿಂದ 60 ಲೀಟರ್ ಹಾಲು ಕರೆಯುವ ಜಾನುವಾರು ತಳಿಗಳ ಅಭಿವೃದ್ಧಿ ಮಾಡಲಾಗುವುದೆಂದು ಮಂಜು ಭರವಸೆ ನೀಡಿದರು.

  ಹೈನುಗಾರಿಕೆ ನಂಬಿದ ರೈತರು ಆರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ. ಪಶುಭಾಗ್ಯ ಯೋಜನೆಯಡಿ 22 ಸಾವಿರ ಪಶುಗಳನ್ನು ರೈತರಿಗೆ ನೀಡಲಾಗುತ್ತಿದ್ದು, ಈ ಪೈಕಿ 10 ಸಾವಿರ ವಿಧವಾ ಮಹಿಳೆಯರಿಗೆ ಆದ್ಯತೆ ಮೇಲೆ ನೀಡಲಾಗುವುದು ಎಂದ ಅವರು, ಮಹಿಳೆಯರು ಆರ್ಥಿಕ ಸಬಲರಾಗಿ ಸಮಾಜದ ಮುಖ್ಯವಾಹಿನಿಗೆ ಬರುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಎಚ್.ಎಫ್ ತಳಿಗಳ ವೀರ್ಯದಿಂದ ಒಂದೇ ಬಾರಿಗೆ 200 ಕರುಗಳನ್ನು ಪಡೆಯುವ ಅವಕಾಶವಿದೆ. ಇದುವರೆಗೂ ಹೊರದೇಶದಿಂದ ಆಮದಾಗುತ್ತಿದ್ದ ವೀರ್ಯವನ್ನು ನಿಲ್ಲಿಸಿ, ವೀರ್ಯ ಸಂವರ್ಧನಾ ಕೇಂದ್ರದಲ್ಲಿ ವೀರ್ಯ ಉತ್ಪಾದನೆಯನ್ನು ಹೆಚ್ಚಿಸಿ ಸ್ಥಳೀಯ ರೈತರಿಗೆ ಇದರ ಪ್ರಯೋಜನ ನೀಡಲಾಗುತ್ತಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಮಾಂಸಕ್ಕಾಗಿ ಬೇಡಿಕೆ ಹೆಚ್ಚುತ್ತಿದ್ದು, ಮುಂದಿನ ಬಜೆಟ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಮೇಕೆ ಫಾರಂ ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಅದೇರೀತಿ, 160 ತಾಲೂಕುಗಳು ಬರದಿಂದ ತತ್ತರಿಸಿದ್ದು, ಜಾನುವಾರುಗಳಿಗಾಗಿ ಸರಕಾರವು ಮೇವು ಬ್ಯಾಂಕುಗಳನ್ನು ಹಾಗೂ ಗೋಶಾಲೆಗಳನ್ನು ಆರಂಭಿಸಿ ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.

ಪಶುಪಾಲನೆ ಇಲಾಖೆಯ ಅಪರ ನಿರ್ದೇಶಕ ಡಾ.ಚಲುವಯ್ಯ ಮಾತನಾಡಿ, 1930ರಲ್ಲಿ ಬ್ರಿಟಿಷರು ಕುದುರೆಗಳ ಮೇವಿಗಾಗಿ ಹುಲ್ಲು ಬೆಳೆಯುತ್ತಿದ್ದ ಈ 3459 ಎಕರೆ ಪ್ರದೇಶದಲ್ಲಿಂದು ಕೇಂದ್ರ ಹಾಗೂ ರಾಜ್ಯ ಸೇರಿದಂತೆ 11 ಪಶುಪಾಲನಾ ಹಾಗೂ ಮೇವು ಅಭಿವೃದ್ಧಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ವೀರ್ಯ ಸಂಕಲನಾ ಕೇಂದ್ರದ ಉಪನಿರ್ದೇಶಕ ಡಾ. ಶಿವಕುಮಾರ್, ಪಶು ಸಂಗೋಪನಾ ಇಲಾಖೆ ಆಯುಕ್ತ ಎಸ್.ಶೇಖರ್ ಸೇರಿ ಪ್ರಮುಖರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News