ವೈ ಫೈ ಇನ್ನು ಮತ್ತಷ್ಟು ಅಗ್ಗ, ಸುಲಲಿತ

Update: 2017-03-07 06:59 GMT

ಹೊಸದಿಲ್ಲಿ, ಮಾ.7: ದೇಶದಲ್ಲಿ ವೈ ಫೈ ಕ್ಷೇತ್ರದ ಅಭಿವೃದ್ಧಿಯನ್ನು ಕ್ಷಿಪ್ರಗೊಳಿಸುವ ಸಲುವಾಗಿ ಮತ್ತು ದೇಶದ ಎಲ್ಲರಿಗೂ ಅತಿವೇಗದ ಇಂಟರ್‌ನೆಟ್ ಸೌಲಭ್ಯ ಕೈಗೆಟುಕುವಂತೆ ಮಾಡುವ ನಿಟ್ಟಿನಲ್ಲಿ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಯೋಜನೆ ರೂಪಿಸಿದೆ. ಇದರ ಅನ್ವಯ ಸಾರ್ವಜನಿಕರು, ಸಮುದಾಯಗಳು ಹಾಗೂ ಸಣ್ಣ ಉದ್ದಿಮೆದಾರರಿಗೆ ಗುಣಮಟ್ಟದ ಸೇವೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.

ಭಾರತದಲ್ಲಿ ವೈ ಫೈ ಸೇವೆ ಇನ್ನೂ ವಿಸ್ತತವಾಗಿ ಅಭಿವೃದ್ಧಿಯಾಗಿಲ್ಲ. ಆದರೆ ಹಾಲಿ ಇರುವ ದೂರಸಂಪರ್ಕ ಜಾಲಗಳ ಜತೆಗೆ ಕೈಗೆಟುಕುವ ದರದಲ್ಲಿ ಇಂಟರ್‌ನೆಟ್ ಸೌಲಭ್ಯ ನೀಡಿದರೆ, ದೇಶದಲ್ಲಿ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿ ಈ ಕ್ಷೇತ್ರದ ಬೆಳವಣಿಗೆಗೆ ವಿಪುಲವಾದ ಅವಕಾಶಗಳಿವೆ ಎಂದು ಟ್ರಾಯ್ ಅಧಿಕಾರಿಗಳು ಹೇಳಿದ್ದಾರೆ.

ಇದೀಗ ಪ್ರತಿ ಎಂಬಿ ಡಾಟಾಗೆ ಸುಮಾರು 10 ಪೈಸೆಯನ್ನು ಗ್ರಾಹಕರು ತೆರುತ್ತಿದ್ದು, ಇದನ್ನು ಪ್ರತಿ ಎಂಬಿ ನೆಟ್ ಬಳಕೆಗೆ 2 ಪೈಸೆಗೆ ಇಳಿಸಲು ಟ್ರಾಯ್ ಹೊಸ ಯೋಜನೆ ಸಿದ್ಧಪಡಿಸಿದೆ. ಇದರಿಂದಾಗಿ ಕಳಪೆ ಕರೆ ಗುಣಮಟ್ಟ ಹಾಗೂ ಬ್ರಾಡ್‌ಬ್ಯಾಂಡ್ ಸೇವೆಗಳ ಆಮೆ ವೇಗದ ಸಮಸ್ಯೆಗೂ ಪರಿಹಾರ ದೊರಕುತ್ತದೆ ಎಂಬ ವಿಶ್ವಾಸವನ್ನು ಮೂಲಗಳು ವ್ಯಕ್ತಪಡಿಸಿವೆ. "ಈ ಸಂಬಂಧ ಲೈಸನ್ಸಿಂಗ್ ಹಾಗೂ ಇತರ ನಿಯಮಾವಳಿಯಲ್ಲಿ ಅಗತ್ಯ ಬದಲಾವಣೆಗಳನ್ನು ತರುವ ಸಂಬಂಧ ಇಷ್ಟರಲ್ಲೇ ದೂರಸಂಪರ್ಕ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ" ಎಂದು ಮೂಲಗಳು ಹೇಳಿವೆ.

ಈ ಯೋಜನೆಯ ಯಶಸ್ಸಿನ ಮೂಲವೆಂದರೆ ಮೊಬೈಲ್ ಟೆಲಿಕಾಂ ಜಾಲಗಳಿಂದ ವಿವಿಧ ವೈಫೈ ಸೆಟಪ್‌ಗಳಿಗೆ ವರ್ಗಾಯಿಸುವುದಾಗಿದೆ ಎಂದು ಟ್ರಾಯ್ ಅಧಿಕಾರಿಗಳು ಹೇಳಿದ್ದಾರೆ. ಗ್ರಾಹಕರು ತಮ್ಮ ಮೊಬೈಲ್ ನೆಟ್‌ವರ್ಕ್‌ನಿಂದ ಅಗ್ಗದ ವೈ ಫೈ ಹಾಟ್‌ಸ್ಪಾಟ್‌ಗಳಿಗೆ ವರ್ಗಾವಣೆಯಾಗುವಂತೆ ಮಾಡುವುದು ಇದರ ಉದ್ದೇಶ ಎಂದು ವಿವರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News