ಮಣಿಪುರದ ಕಣ್ಣೀರಿಗೆ ದೊರಕಿದ ಆ 90 ಮತಗಳು...

Update: 2017-03-15 04:04 GMT

ಇರೋಮ್ ಶರ್ಮಿಳಾ ಅವರಿಗೆ ದೊರಕಿದ 90 ಮತಗಳು ಸಾಮಾಜಿಕ ಹೋರಾಟಗಾರರ ಅತಿಯಾದ ಆತ್ಮವಿಶ್ವಾಸವನ್ನು ಮುಟ್ಟಿ ನೋಡುವಂತೆ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಿಜಕ್ಕೂ ಇದು ಹೋರಾಟಗಾರರ ಆತ್ಮವಿಮರ್ಶೆಗೆ ಕಾರಣವಾಗಬೇಕಾಗಿರುವ ಫಲಿತಾಂಶವಾಗಿದೆ. ಹತಾಶೆಯನ್ನು ಬದಿಗಿಟ್ಟು ಈ ಫಲಿತಾಂಶದೊಂದಿಗೆ ದೇಶದ ವಿವಿಧ ಸಾಮಾಜಿಕ ಹೋರಾಟಗಾರರು ಮುಖಾಮುಖಿಯಾಗಬೇಕಾಗಿದೆ. ಸಾಮಾಜಿಕ ಹೋರಾಟ ನಿಧಾನಕ್ಕೆ ರಾಜಕೀಯ ಹೋರಾಟವಾಗಿ ಪರಿವರ್ತನೆಯಾಗಬೇಕಾದ ಅಗತ್ಯವನ್ನು ನಾವು ನಿರಾಕರಿಸುವಂತಿಲ್ಲ. ಸಾಮಾಜಿಕ ಹೋರಾಟಗಾರರು ರಾಜಕೀಯವನ್ನು ಅಸ್ಪಶ್ಯವಾಗಿ ನೋಡಿ ದೂರ ಉಳಿಯುವ ಸ್ಥಿತಿ ಸದ್ಯಕ್ಕಂತೂ ದೇಶದಲ್ಲಿಲ್ಲ. ಇತಿಹಾಸದಲ್ಲಿ ಹಲವು ಹೋರಾಟಗಳು ನಿಧಾನಕ್ಕೆ ರಾಜಕೀಯ ರೂಪ ಪಡೆದು ಮತಗಳಾಗಿ ಪರಿವರ್ತನೆಗಳಾಗಿವೆ.

ಕಾನ್ಶೀರಾಂ ಅವರ ಹೋರಾಟ ಉತ್ತರ ಪ್ರದೇಶ ಮಾತ್ರವಲ್ಲ, ಉತ್ತರ ಭಾರತದಲ್ಲೇ ಬಹುಜನ ಹೋರಾಟ ಗಾರರನ್ನು ರಾಜಕೀಯವಾಗಿ ಸಂಘಟಿಸುವಲ್ಲಿ ಯಶಸ್ವಿಯಾಗಿರುವುದನ್ನು ನಾವು ಮರೆಯುವಂತೆಯೇ ಇಲ್ಲ. ಅಷ್ಟು ದೂರ ಬೇಡ. ಯುಪಿಎ ಸರಕಾರದ ಅವಧಿಯಲ್ಲಿ ಭ್ರಷ್ಟಾಚಾರದ ವಿರುದ್ಧದ ಹೋರಾಟಗಳ ಮೂಲಕ ಗುರುತಿಸಿಕೊಂಡು ಬರೇ ಐದು ವರ್ಷಗಳಲ್ಲಿ ರಾಜಕೀಯ ಪಕ್ಷವಾಗಿ ರಾಷ್ಟ್ರೀಯ ನಾಯಕರಿಗೇ ಸವಾಲು ಹಾಕಿದ ಆಮ್ ಆದ್ಮಿ ಪಕ್ಷವೂ ಹೋರಾಟಗಾರರಿಗೆ ಒಂದು ಆಶಾವಾದವೇ ಆಗಿದೆ. ಆದರೆ ರಾಜಕೀಯವಾಗಿ ಸಂಘಟಿತವಾಗುವಾಗ ಜನರ ಬೆಂಬಲವನ್ನು ಮತಗಳಾಗಿ ಪರಿವರ್ತಿಸುವ ತಂತ್ರಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮುತ್ಸದ್ದಿತನ ನಾಯಕರಿಗೆ ಇರಬೇಕಾಗುತ್ತದೆ. ನಾವು ಯಾವ ಜನರ ಪರವಾಗಿ ಹೋರಾಡುತ್ತಿದ್ದೇವೆಯೋ ಆ ಜನರನ್ನು ಜೊತೆ ಜೊತೆಯಾಗಿ ತೊಡಗಿಸಿ ಕೊಂಡಲ್ಲಿ ಮಾತ್ರ ಇದು ಸಾಧ್ಯವಾಗುತ್ತದೆ.

16 ವರ್ಷ ಅನ್ನಾಹಾರ ತ್ಯಜಿಸಿ ಆಸ್ಪತ್ರೆಯಲ್ಲಿ ಬದುಕನ್ನು ಕಳೆದ ಇರೋಮ್ ಶರ್ಮಿಳಾ ಚುನಾವಣೆಗೆ ಇಳಿದಾಗ ಇಡೀ ದೇಶ ರೋಮಾಂಚನಗೊಂಡಿತ್ತು. ಆದರೆ ಮಣಿಪುರಕ್ಕೆ ಆ ರೋಮಾಂಚನ ತಲುಪಿರಲೇ ಇಲ್ಲ. ಇರೋಮ್‌ನ ಹೋರಾಟ ಮತಗಳಾಗುವ ಅಗತ್ಯವನ್ನು ಅಲ್ಲಿನ ಜನರಿಗೆ ತಿಳಿಸಿಕೊಡುವ ಪ್ರಯತ್ನದಲ್ಲಿ ಸ್ವತಃ ಆಕೆಯೇ ಸೋತರು. ಆದುದರಿಂದಲೇ ರಾಜಕೀಯ ಶಕ್ತಿಗಳ ಚಕ್ರವ್ಯೆಹದೊಳಗೆ ಯಾವ ಅಸ್ತ್ರಗಳು ಇಲ್ಲದೇ ಬರಿಗೈಯಲ್ಲಿ ನುಗ್ಗಿದ ಇರೋಮ್ ಸುಲಭದಲ್ಲಿ ಬಲಿಯಾಗಿ ಬಿಟ್ಟರು. ಆಕೆಯ ಜೊತೆಗಿರಬೇಕಾಗಿದ್ದ ಇತರ ಜನಪರ ಸಂಘಟನೆಗಳ ದಳಪತಿಗಳು ಚಕ್ರವ್ಯೆಹದ ಹೊರಗೆಯೇ ನಿಂತು ತಮಾಷೆ ನೋಡಿದರು.

16 ವರ್ಷಗಳ ಹಿಂದೆ, ಸೇನೆಯ ಗುಂಡೇಟಿಗೆ ಬಲಿಯಾದ ನಾಲ್ವರು ಅಮಾಯಕರಿಗಾಗಿ ಕಣ್ಣೀರು ಸುರಿಸಿ ಅನ್ನ ನೀರು ಬಿಟ್ಟ ಇರೋಮ್ ಶರ್ಮಿಳಾ, ಮಾನಸಿಕವಾಗಿ ಇನ್ನೂ 16 ವರ್ಷಗಳ ಹಿಂದೆಯೇ ಇದ್ದಾರೆ. ಆಸ್ಪತ್ರೆಯಾಚೆಗೆ ಇರುವ ಮಣಿಪುರವನ್ನು ಪೂರ್ಣವಾಗಿ ಸಮೀಕ್ಷೆ ನಡೆಸಿ ಅದಕ್ಕೆ ಪೂರಕವಾಗಿ ಹೋರಾಟವನ್ನು ರೂಪುಗೊಳಿಸುವ ಬದಲು, ತಾನು ಸೈಕಲ್‌ನಲ್ಲಿ ಮನೆಮನೆಗೆ ತೆರಳಿ ಮತ ಯಾಚನೆ ಮಾಡಿದಾಕ್ಷಣ ಗೆದ್ದು ಬಿಡುತ್ತೇನೆ ಎಂದು ಅವರು ಭ್ರಮಿಸಿದರು.

  16 ವರ್ಷಗಳ ಹಿಂದೆ ಇದ್ದ ಮಣಿಪುರ ಸಾಕಷ್ಟು ಬದಲಾವಣೆ ಕಂಡಿದೆ. ಸೇನಾಡಳಿತ ಮಣಿಪುರದ ಮೇಲೆ ಹೇರಿಕೆಯಾಗಿದ್ದರೂ, ಇಂದು ಯೋಧರು ಮೊದಲಿನಂತೆ ತೀರಾ ನಿಷ್ಕರುಣಿಗಳಾಗಿ ವರ್ತಿಸುವ ಅವಕಾಶ ಮಣಿಪುರದಲ್ಲಿಲ್ಲ. ಅಂತಹ ಘಟನೆಗಳೇನಾದರೂ ನಡೆದರೆ, ಮಿಂಚಿನಂತೆ ಮೊಬೈಲ್‌ಗಳು, ಸಾಮಾಜಿಕ ತಾಣಗಳಲ್ಲಿ ಹರಡಿ ಅದು ಪ್ರಬಲ ಹೋರಾಟಕ್ಕೆ ಕಾರಣವಾಗುವುದರಿಂದ, ಸೇನೆಯೂ ಜಾಗೃತವಾಗಿ ಹೆಜ್ಜೆ ಹಾಕುತ್ತಿದೆ. ಈ 16 ವರ್ಷಗಳಲ್ಲಿ ಹೊಸ ತಲೆಮಾರು ತಲೆಯೆತ್ತಿದೆ. ಹಿಂದಿನ ನೋವುಗಳು ಅವರನ್ನು ಅಷ್ಟಾಗಿ ತಟ್ಟಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ, ಜನರಿಗೆ ಸೇನೆ ಅಲ್ಲಿ ಅಭ್ಯಾಸವಾಗಿ ಬಿಟ್ಟಿದೆ. ಶ್ರೀಸಾಮಾನ್ಯರು ತಮ್ಮ ದೈನಂದಿನ ಬದುಕಿನ ಹೋರಾಟದಲ್ಲಿ, ಸೇನಾಧಿಕಾರವನ್ನು ಪ್ರಶ್ನಿಸುವುದನ್ನು ಮರೆತೇ ಬಿಟ್ಟಿದ್ದಾರೆ. ಒಂದು ರೀತಿಯಲ್ಲಿ ಸೇನೆಯ ಜೊತೆಗೆ ರಾಜಿ ಮಾಡಿಕೊಂಡಿದ್ದಾರೆ. ತಾವು ಸ್ವಕ್ಷೇತ್ರವಾದ ಖುರಾಲ್ ಜತೆಗೆ ತೌಬಾಲ್‌ನಿಂದ ಸ್ಪರ್ಧಿಸುವುದಾಗಿ ಅವರು ಪ್ರಕಟಿಸಿದರು.

ಕೊನೆ ಕ್ಷಣದಲ್ಲಿ ಅದನ್ನು ಕೈಬಿಟ್ಟರು. ಈ ಬದಲಾವಣೆಗಳನ್ನೂ ಜನರು ಸ್ವೀಕರಿಸಲು ಸಿದ್ಧರಿರಲಿಲ್ಲ. ಜೊತೆಗೆ ಇರೋಮ್ ಶರ್ಮಿಳಾ ಬಳಿ ಇದ್ದದ್ದು ಸೇನೆಯ ವಿಶೇಷಾಧಿಕಾರವನ್ನುಮಣಿಪುರದಿಂದ ತೊಲಗಿಸುವ ಏಕೈಕ ಅಜೆಂಡಾ. ಒಂದೇ ಒಂದು ಅಜೆಂಡಾಕ್ಕಾಗಿ ಒಬ್ಬ ನಾಯಕಿಯನ್ನು ಸ್ವೀಕರಿಸುವಂತಹ ರಾಜಕೀಯ ಸ್ಥಿತಿ ಮಣಿಪುರದಲ್ಲಿ ಇರಲಿಲ್ಲ. ಇವೆಲ್ಲದರ ಜತೆ ಇದು ಜನಾಂಗೀಯ ಆಧಾರದಲ್ಲಿ ನಡೆದ ಚುನಾವಣೆ. ಪ್ರಬಲವಾದ ಮೇಟೀಸ್ ಸಮುದಾಯದ ಬಹುತೇಕ ಮಂದಿಗೆ ಇಬೋಬಿ ಸಮರ್ಥನಾಯಕ. ನಾಗಾಗಳಿಗೆ ಸವಾಲಾಗಿ ನಿಲ್ಲುವ ಛಾತಿ ಇರುವ ನಾಯಕ ಎಂಬ ನಿರ್ಧಾರಕ್ಕೆ ಬಂದರು. ಮಣಿಪುರದಲ್ಲಿ ಆಳವಾಗಿ ಬೇರಿಳಿಸಿಕೊಂಡಿರುವ ಈ ನಾಯಕನ ಮುಂದೆ, ಏಕಾಏಕಿ ಸೈಕಲ್ ಏರಿದ ಹೆಣ್ಣು ಮಗಳು ಗೆಲ್ಲುವುದು ದೂರದ ಮಾತು. ಯಾಕೆಂದರೆ ಮಣಿಪುರದಲ್ಲಿ ರಾಜಕೀಯವೆನ್ನುವುದು ಮಹಿಳೆಯರಿಗೆ ಸಂಬಂಧಿಸಿದ ವ್ಯವಹಾರವಲ್ಲ ಎಂದು ತಿಳಿದುಕೊಂಡವರೇ ಬಹುತೇಕ ಮಂದಿ. ಈ ಮನಸ್ಥಿತಿಯನ್ನು ದೂರಮಾಡಬೇಕಾದರೆ ಶರ್ಮಿಳಾ ಸಂಘಟಿತವಾಗಿ ಇಳಿಯಬೇಕಾಗಿತ್ತು. ಈ ಚುನಾವಣೆಯಲ್ಲಿ ಕಣದಲ್ಲಿದ್ದ 268 ಅಭ್ಯರ್ಥಿಗಳ ಪೈಕಿ, ಕೇವಲ 10 ಮಂದಿ ಮಾತ್ರ ಮಹಿಳಾ ಅಭ್ಯರ್ಥಿಗಳಿದ್ದರು.

ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಎರಡು ಸ್ಥಾನಗಳನ್ನೂ ಮಹಿಳೆಯರಿಗೆ ನೀಡಿರಲಿಲ್ಲ. ಇದು ಮಣಿಪುರದ ರಾಜಕೀಯ ವಲಯದಲ್ಲಿ ಮಹಿಳೆಯರ ಗೈರುಹಾಜರಿಯನ್ನು ಎತ್ತಿ ತೋರಿಸುತ್ತದೆ. ರಾಜಕೀಯದಲ್ಲಿರುವ ಪುರುಷಾಧಿಪತ್ಯವೂ ಇರೋಮ್ ಶರ್ಮಿಳಾರನ್ನು ಮಣಿಪುರದಿಂದ ಹೊರಗಿಡುವುದಕ್ಕೆ ಒಂದು ಕಾರಣವಾಗಿರಬಹುದು.

ಎಲ್ಲಕ್ಕಿಂತ ಮುಖ್ಯವಾದ ಸಂಗತಿಯೊಂದಿದೆ. ಶ್ರೀಸಾಮಾನ್ಯನ ಮತಗಳು ಆಕೆಗೆ ಬಿದ್ದಿಲ್ಲ ಎನ್ನುವುದು ಇಲ್ಲಿ ಮುಖ್ಯವಾಗಬೇಕಾಗಿಲ್ಲ. ಜನಪರವಾಗಿ ಆಲೋಚಿಸುವ ಮಂದಿಯೂ ಇರೋಮ್ ಶರ್ಮಿಳಾ ಅವರನ್ನು ಕೈ ಬಿಟ್ಟಿದ್ದಾರೆ ಎನ್ನುವುದು ನಮಗಿಂದು ಮುಖ್ಯವಾಗಬೇಕಾಗಿದೆ. ಕನಿಷ್ಠ ಅವೆರೆಲ್ಲ ತಮ್ಮ ತಮ್ಮ ಮತಗಳನ್ನು ಇರೋಮ್ ಶರ್ಮಿಳಾ ಅವರಿಗೆ ನೀಡಿದ್ದರೆ ಒಂದೆರಡು ಸಾವಿರ ಮತಗಳನ್ನಾದರೂ ತನ್ನದಾಗಿಸಿಕೊಳ್ಳುತ್ತಿದ್ದರು. ಶರ್ಮಿಳಾ ಮಣಿಪುರದಲ್ಲಿ ಅದೆಷ್ಟು ಏಕಾಂಗಿಯಾಗಿದ್ದಾರೆ ಎನ್ನುವುದಕ್ಕೆ ಅವರಿಗೆ ಬಿದ್ದ 90 ಮತಗಳು ಸಾಕ್ಷಿಯಾಗಿವೆ.

ಇರೋಮ್ ಶರ್ಮಿಳಾ ತನ್ನ ಮೂಗಿನ ಟ್ಯೂಬ್‌ನ್ನು ಕಿತ್ತು, ಆಹಾರ ಸೇವಿಸುವ ನಿರ್ಧಾರಕ್ಕೇ ಹಲವು ಹೋರಾಟಗಾರರು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಸ್ವತಃ ಶರ್ಮಿಳಾ ಅವರ ತಾಯಿಯೇ ಮಗಳ ಜೊತೆಗೆ ಸಹಮತವನ್ನು ಹೊಂದಿರಲಿಲ್ಲ. ಶರ್ಮಿಳಾ ಪ್ರೇಮಕ್ಕೆ ಸಿಲುಕಿಕೊಂಡಿದ್ದರು. ಅವರು ಮದುವೆಯಾಗಲು ಬಯಸಿದ್ದರು. ಇವೆಲ್ಲವೂ ಹಲವು ವದಂತಿಗಳಿಗೆ ಕಾರಣವಾಯಿತು.

ಶರ್ಮಿಳಾ ಕೆಲವು ಹಿತಾಸಕ್ತಿಗಳ ಸಂಚಿಗೆ ಬಲಿಯಾಗಿದ್ದಾರೆ ಎಂದೂ ಕೆಲವರು ಬರೆದರು. ಹೆಚ್ಚಿನ ಜನಪರ ಹೋರಾಟಗಾರರು, ಇರೋಮ್ ಶರ್ಮಿಳಾ ಮಣಿಪುರಕ್ಕಾಗಿ ಆಸ್ಪತ್ರೆಯ ಮಂಚದಲ್ಲಿ ಸಾಯುವುದನ್ನು ಕಾಯುತ್ತಿದ್ದರು. ಅವರು ಆಸ್ಪತ್ರೆಯ ಮಂಚದಲ್ಲಿರುವವರೆಗೂ ಎಲ್ಲರಿಗೂ ಮನುಷ್ಯಾತೀತ ವ್ಯಕ್ತಿಯಾಗಿದ್ದರು. ಆಸ್ಪತ್ರೆ ಮಂಚದಿಂದ ಇಳಿದು ಆಹಾರ ಸ್ವೀಕರಿಸಿದಾಕ್ಷಣ ಎಲ್ಲ ಕಣ್ಣಲ್ಲಿ ಸಾಮಾನ್ಯ ಮನುಷ್ಯಳಾದರು. ಅವರಲ್ಲಿ ಕುಂದು ಕೊರತೆಗಳನ್ನು ಗುರುತಿಸತೊಡಗಿದರು. ಆ ಕಾರಣದಿಂದಲೇ, ಜನಪರ ಹೋರಾಟಗಾರರೂ ಆಕೆಗೆ ತಮ್ಮ ಮತಗಳನ್ನು ನೀಡಲಿಲ್ಲ.

ಯಾವುದೇ ಹೋರಾಟ ವ್ಯರ್ಥವಾಗುವುದಿಲ್ಲ ಎನ್ನುವುದನ್ನೂ ನಾವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗಿದೆ. ಆದುದರಿಂದಲೇ, ಶರ್ಮಿಳಾರಿಗೆ ಬಿದ್ದ ಆ 90 ಮತಗಳೇ ಮಣಿಪುರದ ಸದ್ಯದ ನಿರೀಕ್ಷೆಗಳಾಗಿವೆ. ಆ 90 ಮತಗಳನ್ನು 90 ಸಾವಿರ ಮತಗಳಾಗಿ ಪರಿವರ್ತಿಸುವ ಹೊಣೆಗಾರಿಕೆ ಮಣಿಪುರದ ಜನಪರ ಹೋರಾಟಗಾರರಿಗಿದೆ. ಆದುದರಿಂದಲೇ ಶರ್ಮಿಳಾ ರಾಜಕೀಯದಿಂದ ಹಿಂದೆ ಸರಿಯದೇ, ತನ್ನ ರಾಜಕೀಯ ಪ್ರವೇಶವನ್ನು ಹೊಸದಾಗಿ ಆರಂಭಿಸಬೇಕು. ಸಾಕಷ್ಟು ಸಿದ್ಧತೆಗಳ ಜೊತೆಗೆ, ಎಲ್ಲರನ್ನು ಜೊತೆಗೂಡಿಸಿಕೊಂಡು. ಸ್ವತಃ ತನ್ನ ತಾಯಿಯನ್ನು ಕೂಡ ಆಕೆ ಅದರಿಂದ ಹೊರಗಿಡಬಾರದು. ಹಾಗಾದಲ್ಲಿ, ಖಂಡಿತವಾಗಿಯೂ ಮುಂದಿನ ಚುನಾವಣೆಯಲ್ಲಿ ಇರೋಮ್ ಶರ್ಮಿಳಾ ಮಣಿಪುರದ ಮುಖ್ಯಮಂತ್ರಿಯಾಗಿ ಹೊರಹೊಮ್ಮಬಹುದು ಮಾತ್ರವಲ್ಲ, ಅಲ್ಲಿರುವ ಸೇನೆ ಸದ್ದಿಲ್ಲದೆ ಜಾಗ ಖಾಲಿ ಮಾಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News