ಹೊಸ ಐಟಿ ರಿಟರ್ನ್ ಫಾರ್ಮ್‌ಗಳಲ್ಲಿ ನೋಟು ಅಮಾನ್ಯ ಅವಧಿಯ 2 ಲ.ರೂ ಮತ್ತು ಹೆಚ್ಚಿನ ಠೇವಣಿ ಉಲ್ಲೇಖ ಕಡ್ಡಾಯ

Update: 2017-03-31 15:07 GMT

ಹೊಸದಿಲ್ಲಿ,ಮಾ.31: ನೋಟು ಅಮಾನ್ಯದ ಮೊದಲ 50 ದಿನಗಳ ಅವಧಿಯಲ್ಲಿ ಎರಡು ಲ.ರೂ.ಮತ್ತು ಹೆಚ್ಚಿನ ಮೊತ್ತದ ಸಂಚಿತ ಠೇವಣಿಯನ್ನು ಮಾಡಿದವರು ಅದನ್ನು ತಮ್ಮ 2017-18ನೇ ಸಾಲಿನ ಆದಾಯ ತೆರಿಗೆ ರಿಟರ್ನ್‌ನಲ್ಲಿ ಕಡ್ಡಾಯವಾಗಿ ಕಾಣಿಸ ಬೇಕು ಎಂದು ಸರಕಾರವು ಶುಕ್ರವಾರ ತಿಳಿಸಿದೆ.

ಸರಕಾರವು ಶುಕ್ರವಾರ ಅನಾವರಣಗೊಳಿಸಿದ ಸರಳ, ಒಂದು ಪುಟದ ಐಟಿ ರಿಟರ್ನ್ ನಮೂನೆಯು ನ.9-ಡಿ.30ರ ಅವಧಿಯಲ್ಲಿ ಎರಡು ಲ.ರೂ. ಮತ್ತು ಅಧಿಕ ಮೊತ್ತದ ಠೇವಣಿಗಳನ್ನು ಉಲ್ಲೇಖಿಸಲು ಪ್ರತ್ಯೇಕ ಸ್ಥಳಾವಕಾಶವನ್ನು ಹೊಂದಿದೆ.

ಈ ಒಂದು ಪುಟದ ನಮೂನೆಯು ಉದ್ಯಮವನ್ನು ಹೊರತುಪಡಿಸಿ ಇತರ ಮೂಲಗಳಿಂದ ವಾರ್ಷಿಕ 50 ಲ.ರೂ. ಆದಾಯವಿರುವ ವ್ಯಕ್ತಿಗಳಿಗಾಗಿ ರೂಪಿಸಲಾ ಗಿದ್ದು, ಹಿಂದಿನ ನಮೂನೆಯು ಮೂರು ಪುಟಗಳನ್ನು ಹೊಂದಿತ್ತು.

ಈ ಕ್ರಮದಿಂದ ಸುಮಾರು ಎರಡು ಕೋಟಿ ಜನರಿಗೆ ಲಾಭವಾಗಲಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ ಅಧ್ಯಕ್ಷ ಸುಶೀಲ್ ಚಂದ್ರ ಅವರು ತಿಳಿಸಿದರು.

ಸರಕಾರವು ಈ ಮುನ್ನ ವಾರ್ಷಿಕ ಐದು ಕೋ.ರೂ.ಆದಾಯ ಹೊಂದಿರುವವರಿಗೆ ಮಾತ್ರ ಒಂದು ಪುಟದ ಐಟಿ ರಿಟರ್ನ್ ನಮೂನೆಯನ್ನು ತರಲು ಉದ್ದೇಶಿಸಿತ್ತು.

ಪ್ರಸಕ್ತ ಕಾಯಂ ಖಾತೆ ಸಂಖ್ಯೆ(ಪಾನ್)ಯನ್ನು ಹೊಂದಿರುವ 29 ಕೋಟಿ ಜನರ ಪೈಕಿ ಕೇವಲ ಆರು ಕೊಟಿ ಜನರು ಮಾತ್ರ ಐಟಿ ರಿಟರ್ನ್ ಸಲ್ಲಿಸುತ್ತಿದ್ದಾರೆ.
ಈ ಕ್ರಮವು ಐಟಿ ರಿಟರ್ನ್ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸಲಿದೆ ಮತ್ತು ಈ ವರ್ಷ ರಿಟರ್ನ್‌ಗಳನ್ನು ಸಲ್ಲಿಸುವ ಎಲ್ಲ ತೆರಿಗೆದಾತರಿಗೆ ಅನ್ವಯಗೊಳ್ಳಲಿದೆ ಎಂದು ಚಂದ್ರ ತಿಳಿಸಿದರು.

ಹಾಲಿ ವೇತನದಾರ ವ್ಯಕ್ತಿಗಳು ಸಹಜ್ ಎಂದು ಕರೆಯಲಾಗುವ ಐಟಿಆರ್ 1ನ್ನು ಮತ್ತು ನಿಯಮಿತ ವೇತನ,ಪಿಂಚಣಿ,ಆಸ್ತಿ ಮತ್ತು ಬಂಡವಾಳ ಗಳಿಕೆ ಮೂಲಗಳಿಂದ ಆದಾಯ ಪಡೆಯುತ್ತಿರುವ ಭಾರತೀಯರು,ಎನ್ನಾರೈಗಳು ಮತ್ತು ಹಿಂದು ಅವಿಭಕ್ತ ಕುಟುಂಬಗಳು ಐಟಿಆರ್ 2ನ್ನು ಬಳಸುತ್ತಿದ್ದಾರೆ.

ಉದ್ಯಮ-ವ್ಯವಹಾರಗಳು,ಸ್ವಂತ ಮಾಲಕತ್ವದ ಮತ್ತು ಪಾಲುದಾರಿಕೆಯ ಸಂಸ್ಥೆಗಳಿಗೆ ಇತರ ನಮೂನೆಗಳಿವೆ.ಐಟಿಆರ್ 1ರ ಇ-ಫೈಲಿಂಗ್ ಸೌಲಭ್ಯ ಎ.1ರಿಂದ ಕ್ರಿಯಾಶೀಲಗೊಳ್ಳಲಿದೆ ಮತ್ತು ಐಟಿಆರ್‌ಗಳನ್ನು ಜುಲೈ 31ರೊಳಗೆ ಸಲ್ಲಿಸಬೇಕಾಗಿದೆ.

ಜು.1ರ ಬಳಿಕ ಐಟಿಆರ್ ಸಲ್ಲಿಕೆಗೆ ಆಧಾರ್ ಕಡ್ಡಾಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News