ಆಯುರ್ವೇದಿಕ್ ಔಷಧಿ ತಯಾರಿಸಲು 60 ದನಗಳನ್ನು ಕೊಂದ ವೈದ್ಯಾಧಿಕಾರಿ !

Update: 2017-04-03 07:26 GMT

ಲಕ್ನೋ, ಎ.3: ಸುಮಾರು 60 ದನಗಳ ಅವಶೇಷಗಳು ಬಹ್ರೈಚ್ ಇಲ್ಲಿನ ಹೆಚ್ಚುವರಿ ಜಿಲ್ಲಾ ವೈದ್ಯಾಧಿಕಾರಿ ಡಾ ಜೆ ಎನ್ ಮಿಶ್ರಾ (57) ಅವರ ಫಾರ್ಮ್ ಹೌಸ್ ಮೇಲೆ ನಡೆಸಲಾದ ದಾಳಿಯೊಂದರಲ್ಲಿ ಪತ್ತೆಯಾಗಿವೆ. 

ಈ ದನಗಳನ್ನು ಹಸಿವಿನಿಂದ ನರಳುವಂತೆ ಮಾಡಿ ಸಾಯಿಸಲಾಗಿದೆಯೆನ್ನಲಾಗಿದ್ದು ಅವುಗಳ ಅವಶೇಷಗಳನ್ನು ಉಪಯೋಗಿಸಿ ಆಯುರ್ವೇದ ಔಷಧಿಗಳನ್ನು ಅನಧಿಕೃತವಾಗಿ ತಯಾರಿಸಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಹಿಂದೂ ಯುವ ವಾಹಿನಿ ನೀಡಿದ ದೂರಿನ ಆಧಾರದಲ್ಲಿ ದಾಳಿ ನಡೆಸಲಾಗಿದೆ.

ಮಿಶ್ರಾ ಅವರ ಫಾರ್ಮ್ ಹೌಸ್ ಮರೊಚ್ ಗ್ರಾಮದಲ್ಲಿದ್ದು ದಾಳಿಯ ವೇಳೆ ಹೊಸದಾದ ಹಾಗೂ ಹಳೆಯದಾದ 60 ದನಗಳ ಸಮಾಧಿ ಪತ್ತೆಯಾಗಿತ್ತಲ್ಲದೆ 46 ದನಗಳು ಹಾಗೂ ಕರುಗಳೂ ಪತ್ತೆಯಾಗಿದ್ದವು.

ಪೊಲೀಸರ ಪ್ರಕಾರ ಮಿಶ್ರಾ ಬಳಿಯಿದ್ದ ದನಗಳೆಲ್ಲವೂ ಯಾರಿಗೂ ಬೇಡವಾದ ದನಗಳಾಗಿದ್ದವು. ತನ್ನ ಬಳಿ ಇಂತಹ ದನಗಳನ್ನು ತಂದವರಿಗೆ ಅವರು  200 ರೂ. ನೀಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಆದರೆ ಲಕ್ನೋದಿಂದ 250 ಕಿಮೀ ದೂರದಲ್ಲಿರುವ ಬಹ್ರೈಚ್ ಪಟ್ಟಣದಲ್ಲಿರುವ ತನ್ನ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ ತಾವು ಔಷಧೀಯ ಸಸ್ಯಗಳಿಂದ ಮಾತ್ರ ಔಷಧಿ ತಯಾರಿಸುತ್ತಿದ್ದು ದನಗಳು ಸ್ವಾಭಾವಿಕವಾಗಿ ಸಾವನ್ನಪ್ಪಿದ್ದವು ಎಂದು ಹೇಳಿದ್ದಾರೆ.
ಪ್ರಾಣಿ ದೌರ್ಜನ್ಯ ತಡೆ ಕಾಯಿದೆಯನ್ವಯ ಪ್ರಕರಣ ದಾಖಲಿಸಿರುವ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದು ನಂತರ ವೈದ್ಯರನ್ನು ಬಂಧಿಸುವ ಸಾಧ್ಯತೆಯಿದೆ.

ಡಾ ಮಿಶ್ರಾ ಅವರು ಹಲವಾರು ವರ್ಷಗಳಿಂದ ಆಯುರ್ವೇದ ಔಷಧಿಗಳನ್ನು ಅನಧಿಕೃತವಾಗಿ ತಯಾರಿಸುತ್ತಿದ್ದರೂ ಅವರ ಹಾಗೂ ಅವರ ಪತ್ನಿ ವಂದನಾ ನಡುವಣ ಸಂಬಂಧ ಹಳಸಿದ ನಂತರವಷ್ಟೇ ಅವರ ಕಾರ್ಯಗಳು ಬೆಳಕಿಗೆ ಬಂದಿದ್ದವು.

ವಂದನಾ ಅವರು ಆರೆಸ್ಸೆಸ್ ಮಹಿಳಾ ಘಟಕ ದುರ್ಗಾ ವಾಹಿನಿಯ ನಾಯಕಿಯಾಗಿದ್ದಾರೆ. ಕಳೆದೆರಡು ವರ್ಷಗಳಿಂದ ಪತಿಯ ಚಟುವಟಿಕೆಗಳ ಬಗ್ಗೆ ಆಕೆ ಹಲವಾರು ದೂರುಗಳನ್ನು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News