28 ಗಂಟೆಗಳ ಕಾಲ ದುಡಿದ ಚೀನಿ ಸರ್ಜನ್‌ಗೆ ಪ್ರಶಂಸೆಯ ಮಹಾಪೂರ!

Update: 2017-04-09 10:06 GMT

ಕೋಲ್ಕತಾ,ಎ.9: ವೈದ್ಯರ ಕೆಲಸ ಉದಾತ್ತವಾದುದೇನೋ ಹೌದು, ಆದರೆ ಅದಕ್ಕಾಗಿ ಅವರು ಬೆಲೆಯನ್ನೂ ತೆರಬೇಕಾಗುತ್ತದೆ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಜನರು ಮತ್ತು ರೋಗಿಗಳು ಇದನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಹೀಗಾಗಿ ಸತತ 28 ಗಂಟೆಗಳ ಕಾಲ ಕೆಲಸ ನಿರ್ವಹಿಸಿ ಸುಸ್ತಾಗಿದ್ದ ಚೀನಾದ ಅನ್‌ಹುಯಿ ಪ್ರಾಂತ್ಯದ ಡಿಂಗ್‌ಯುವಾನ್ ಪಟ್ಟಣದ ಆಸ್ಪತ್ರೆಯೊಂದರಲ್ಲಿ ಸರ್ಜನ್ ಆಗಿರುವ ಡಾ.ಲುವೊ ಹೆಂಗ್ ನೆಲದಲ್ಲಿ ಹುಲ್ಲಿನ ಚಾಪೆಯೊಂದರ ಮೇಲೆ ನಿದ್ರಿಸುತ್ತಿದ್ದ ಚಿತ್ರಗಳು ಅಂತರ್ಜಾಲದಲ್ಲಿ ಹರಿದಾಡಿದಾಗ ಜನರು ಅವರನ್ನು ‘ಹಿರೋ’ಎಂದು ಬಣ್ಣಿಸಿ ಪ್ರಶಂಸೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ಡಾ.ಹೆಂಗ್ ತನ್ನ 28 ಗಂಟೆಗಳ ನಿರಂತರ ಕರ್ತವ್ಯದ ಅವಧಿಯಲ್ಲಿ ಐದು ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿದ್ದರು. ವಿಶ್ವಾದ್ಯಂತದ ಜನರು ಅವರ ಅರ್ಪಣಾ ಮನೋಭಾವವನ್ನು ಪ್ರಶಂಸಿಸಿ, ಸುದೀರ್ಘ ಕರ್ತವ್ಯದ ಅವಧಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರೆ ಭಾರತೀಯರಿಗೆ ಇದು ಹೆಚ್ಚಿನ ಅಚ್ಚರಿಯನ್ನುಂಟು ಮಾಡಿಲ್ಲ. ಇದು ಇಲ್ಲಿಯ ವೈದ್ಯರಿಗೆ ಹೊಸದೇನಲ್ಲ. ಭಾರತ ಮತ್ತು ಇತರ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿಯ ವೈದ್ಯರಿಗೆ ನಿರಂತರ 36 ಗಂಟೆಗಳ ದುಡಿಮೆ ಮಾಮೂಲಾಗಿಬಿಟ್ಟಿದೆ.

ರಾತ್ರಿಯಿಡೀ ಎರಡು ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದ ಡಾ.ಹೆಂಗ್ ಯಾವುದೇ ವಿಶ್ರಾಂತಿಯಿಲ್ಲದೆ ಮರುದಿನವೂ ಮತ್ತೆ ಮೂರು ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿದ್ದಾರೆ ಎಂದು ಚೀನಾದ ಗ್ಲೋಬಲ್ ಟಿವಿ ವರದಿ ಮಾಡಿದೆ.

ಡಾ.ಹೆಂಗ್ ನೆಲದಲ್ಲಿ ಚಾಪೆಯ ಮೇಲೆ ನಿದ್ರಿಸುತ್ತಿದ್ದ ಚಿತ್ರಗಳನ್ನು ಮಾ.31ರಂದು ತೆಗೆಯಲಾಗಿತ್ತೆನ್ನಲಾಗಿದೆ.

 ಭಾರತದಲ್ಲಿ ರೆಸಿಡೆಂಟ್ ವೈದ್ಯರು ಮತ್ತು ಸರ್ಜಿಕಲ್ ಇಂಟರ್ನ್‌ಗಳು ರಜೆಯನ್ನು ಬಿಡಿ....ನಿದ್ರೆ ಮತ್ತು ಸೂಕ್ತ ವಿಶ್ರಾಂತಿಯ ಭಾಗ್ಯವೂ ಇಲ್ಲದೆ ಹಲವಾರು ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಾರೆ. ಸುದೀರ್ಘ ಕರ್ತವ್ಯದ ಅವಧಿಯ ಹೊರೆಯ ಜೊತೆಗೆ ಇಲ್ಲಿಯ ಯುವವೈದ್ಯರು ಆಗಾಗ್ಗೆ ತಾವು ಕೆಲಸ ಮಾಡುವ ಆಸ್ಪತ್ರೆಗಳಿಂದ ಶೋಷಣೆಗೂ ಒಳಗಾಗುತ್ತಾರೆ. ಎರಡು ವರ್ಷಗಳ ಹಿಂದೆ ನಿರಂತರ ಕೆಲಸದಿಂದ ಸುಸ್ತಾಗಿದ್ದ, ಮೆಕ್ಸಿಕೋದ ಮೊಂಟೆರಿಯ ಆಸ್ಪತ್ರೆಯೊಂದರ ಡೆಸ್ಕ್‌ನ ಹಿಂದೆ ನಿದ್ರಿಸುತ್ತಿದ್ದ ರೆಸಿಡೆಂಟ್ ವೈದ್ಯನೋರ್ವನ ವಿರುದ್ಧ ಶಿಸ್ತುಕ್ರಮಗಳನ್ನು ಜರುಗಿಸಿದ್ದು ಜಾಗತಿಕ ಪ್ರತಿಭಟನೆಗೆ ನಾಂದಿ ಹಾಡಿತ್ತು. ಆ ವೈದ್ಯನ ಹೆಜ್ಜೆಗಳಲ್ಲೇ ನಡೆದಿದ್ದ ವಿಶ್ವಾದ್ಯಂತದ ವೈದ್ಯರು ತಾವು ನಿದ್ರೆ ಮಾಡುತ್ತಿರುವ ಚಿತ್ರಗಳನ್ನು ‘‘ನಾನೂ ಕೂಡ ಗಾಢನಿದ್ರೆಯಲ್ಲಿದ್ದೇನೆ ’’ ಎಂಬ ಹ್ಯಾಷ್‌ಟ್ಯಾಗ್‌ನೊಡನೆ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News