ಅಯೋಧ್ಯಾದಲ್ಲಿ ರಾಮಮಂದಿರ ವಿರೋಧಿಸಿದವರ ತಲೆ ಕತ್ತರಿಸುವೆ : ಬಿಜೆಪಿ ಶಾಸಕ ರಾಜಾ ಸಿಂಗ್ ಧಮಕಿ
ಹೈದರಾಬಾದ್, ಎ.9: ತನ್ನ ವಿವಾದಾಸ್ಪದ ಹೇಳಿಕೆಗಳಿಗೆ ಪ್ರಸಿದ್ಧರಾಗಿರುವ ಹೈದರಾಬಾದ್‌ನ ಬಿಜೆಪಿ ಶಾಸಕ ರಾಜಾ ಸಿಂಗ್, ಕಳೆದ ವಾರ ನಡೆದ ರಾಮನವಮಿ ಉತ್ಸವದ ಸಂದರ್ಭ ಮತ್ತೊಂದು ಮಾತಿನ ಬಾಂಬ್ ಸಿಡಿಸಿದ್ದಾರೆ.
ಶನಿವಾರ ತಮ್ಮ ಫೇಸ್‌ಬುಕ್ ಪುಟದಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಒಂದರಲ್ಲಿ ರಾಜಾ ಸಿಂಗ್- ಅಯೋದ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ಪ್ರತಿಯೋರ್ವ ಹಿಂದೂ ಕಂಡಿರುವ ಕನಸು ನನಸಾಗುವ ದಿನ ದೂರವಿಲ್ಲ ಎಂದು ಹೇಳಿಕೊಂಡಿದ್ದಾರೆ. ಮಾತು ಮುಂದುವರಿಸಿದ ಸಿಂಗ್, ರಾಮಮಂದಿರ ನಿರ್ಮಾಣವಾದರೆ ಘೋರ ಪರಿಣಾಮ ಆಗಬಹುದು ಎಂದು ಎಚ್ಚರಿಕೆ ನೀಡುವವರಿಗೆ ಒಂದು ಮಾತು ಹೇಳಲು ಬಯಸುತ್ತೇನೆ. ನಿಮ್ಮ ತಲೆ ಕಡಿಯಲು ನಾವೂ ಕಾಯುತ್ತಿದ್ದೇವೆ ಎಂದಿದ್ದಾರೆ.
ನಮ್ಮ ಕಾಲು ಹಿಡಿದರೆ ನಿಮ್ಮ ಬಾಬರ್‌ನ ಮಸೀದಿಯನ್ನು ಇನ್ನೆಲ್ಲಾದರೂ ನಿರ್ಮಿಸಲು ಅವಕಾಶ ನೀಡುತ್ತೇವೆ. ಇದು ಹಿಂದೂಸ್ತಾನ. ಇಲ್ಲಿ ಬದುಕುತ್ತಾ, ಹಿಂದೂಗಳನ್ನು ಅವಹೇಳನ ಮಾಡಿದರೆ ಅಂತವರನ್ನು ಇಲ್ಲಿ ಇರಲು ಬಿಡುವುದಿಲ್ಲ ಎಂದು ರಾಜಾ ಸಿಂಗ್ ಹೇಳಿದ್ದಾರೆ.
ಈ ಸಂದರ್ಭ ಅಲ್ಲಿ ನೆರೆದಿದ್ದ ಸಭಿಕರು ಭಾರೀ ಹಷೋದ್ಗಾರ ಮಾಡುತ್ತಿರುವ ದೃಶ್ಯ ವಿಡಿಯೋ ದೃಶ್ಯಾವಳಿಯಲ್ಲಿದೆ. ರಾಜಾ ಸಿಂಗ್ ಅವರ ಸ್ವಕ್ಷೇತ್ರ ಗೋಶಮಹಲ್ ನಲ್ಲಿ ನಡೆದ ಕಾರ್ಯಕ್ರಮ ಇದಾಗಿತ್ತು ಎಂದು ವಿಡಿಯೋ ದೃಶ್ಯದಲ್ಲಿ ಕಂಡುಬರುವ ಬ್ಯಾನರ್‌ನಲ್ಲಿ ಬರೆಯಲಾಗಿದೆ.