ದಾದ್ರಿ ಪ್ರಕರಣ: ಇಬ್ಬರು ಆರೋಪಿಗಳಿಗೆ ಜಾಮೀನು
ಲಕ್ನೊ, ಎ.20: ಗೋಹತ್ಯೆ ಮಾಡಿದ ಮತ್ತು ಗೋಮಾಂಸ ಶೇಖರಿಸಿದ ಆರೋಪದಲ್ಲಿ ವ್ಯಕ್ತಿಯೋರ್ವರ ಮೇಲೆ ಹಲ್ಲೆ ನಡೆಸಿ ಚರ್ಮ ಸುಲಿದ ಪ್ರಕರಣದಲ್ಲಿ ಜೈಲುಪಾಲಾಗಿದ್ದ 18 ಆರೋಪಿಗಳಲ್ಲಿ ಇಬ್ಬರಿಗೆ ಜಾಮೀನು ದೊರೆತಿದೆ.
ಪುನೀತ್ ಎಂಬಾತ ಜಾಮೀನು ಪಡೆದು ಹೊರಬಂದಿದ್ದರೆ, ಅರುಣ್‌ಗೆ ಕೂಡಾ ಜಾಮೀನು ದೊರೆತಿದ್ದು ದಾಖಲೆ ಪತ್ರ ಪ್ರಕ್ರಿಯೆ ಮುಗಿಸಿ ಶುಕ್ರವಾರ ಜೈಲಿನಿಂದ ಹೊರಬರುವ ನಿರೀಕ್ಷೆಯಿದೆ.
ಉ.ಪ್ರದೇಶದ ದಾದ್ರಿ ಗ್ರಾಮದಲ್ಲಿ 2015ರ ಸೆಪ್ಟೆಂಬರ್‌ನಲ್ಲಿ ಹಸುವಿನ ಮಾಂಸ ಶೇಖರಿಸಿಟ್ಟಿದ್ದ ಆರೋಪದಲ್ಲಿ ಗುಂಪೊಂದು ಮುಹಮ್ಮದ್ ಅಖ್ಲಾಕ್ ಎಂಬವರ ಮನೆ ಮೇಲೆ ದಾಳಿ ನಡೆಸಿ ಅವರ ಚರ್ಮ ಸುಲಿದಿತ್ತು. ಆದರೆ ತನಿಖೆ ನಡೆಸಿದ ಪೊಲೀಸರು ಅಖ್ಲಾಕ್ ಮನೆಯಲ್ಲಿ ಗೋವಧೆ ನಡೆಸಿರಲಿಲ್ಲ ಎಂದು ವರದಿ ನೀಡಿದ್ದರು.
ಪ್ರಕರಣದಲ್ಲಿ 18 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಇವರಲ್ಲಿ ಇಬ್ಬರು ಆರೋಪಿಗಳು ಅಪ್ರಾಪ್ತರಾಗಿದ್ದ ಕಾರಣ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿತ್ತು. ಒಬ್ಬ ನ್ಯಾಯಾಂಗ ಬಂಧನದ ವೇಳೆ ಮೃತಪಟ್ಟಿದ್ದ.