ಇಲ್ಲೊಂದು ಆಕ್ರೋಶ ಇಲ್ಲೊಂದು ಮೌನ

Update: 2017-04-30 04:43 GMT

ತತ್ವಜ್ಞರು, ಧರ್ಮಜಿಜ್ಞಾಸುಗಳು, ಸಮಾಜ ಸುಧಾರಕರು, ಮಹಾನ್ ರಾಷ್ಟ್ರೀಯ ನಾಯಕರು ಮಾನವನ ಬದುಕುಬಾಳ್ವೆ ಕುರಿತಂತೆ ಉನ್ನತ ಸಡಾವಳಿ, ಸಂಪ್ರದಾಯ, ಪರಂಪರಗಳನ್ನು ಬಿಟ್ಟುಹೋಗಿದ್ದಾರೆ. ಇವರೆಲ್ಲ ಕಟುವಾದ, ವಿಮರ್ಶಾತ್ಮಕವಾದ ಪ್ರಶ್ನೆಗಳಿಂದ ಭಾರತೀಯ ಸಮಾಜದ ಅಂತಃಸಾಕ್ಷಿಯನ್ನು ಕಲಕಿದವರು, ಜಾಗೃತಿಗೊಳಿಸಿದವರು, ದಲಿತರು ಮತ್ತು ಸ್ತ್ರೀಯರ ಬದುಕಿನಲ್ಲಿ ಸುಧಾರಣೆಗಳನ್ನು ತಂದವರು. ಹಲವು ಧರ್ಮೀಯರ ನಡುವೆ ಸಮನ್ವಯವನ್ನು ಸಾಧಿಸಿದವರು. ಆದರೆ ಇಂದು ಏನಾಗಿದೆ? ಇಂದಿನ ಪರಿಸ್ಥಿತಿ ಗಮನಿಸಿದಾಗ ಈ ಪರಂಪರೆಯಿಂದ ನಾವು ಕಲಿತದ್ದು ಏನೂ ಇಲ್ಲವೆ ಎಂದು ಪ್ರಶ್ನಿಸುವಂತಾಗುತ್ತದೆ.

‘‘ಖಡ್ಗವಾಗಲಿ ಕಾವ್ಯ’’
-ಎಂದ ನಮ್ಮ ಬಂಡಾಯ ಸಾಹಿತ್ಯದ ಮೊಳಗು ಈಗ ಅಮೆರಿಕದಲ್ಲಿ ಅನುರಣಿಸುತ್ತಿದೆ. ಅಧ್ಯಕ್ಷ ಟ್ರಂಪ್‌ನ ಬಲಪಂಥೀಯ ನೀತಿನಿರೂಪಣೆಗಳ ವಿರುದ್ಧ ಅಮೆರಿಕದ ಕಾವ್ಯ ಈಗ ಜ್ವಾಲಾಮುಖಿಯಾಗಿದೆ. ಅಮೆರಿಕದ ಕವಿಗಳು ಬಲಪಂಥೀಯ ಮಾನವ ವಿರೋಧಿ ನೀತಿಗಳ ವಿರುದ್ಧ ಸಿಡಿದು ನಿಂತಿದ್ದಾರೆ. ಕಾವ್ಯ ಪ್ರತಿಭಟನೆಯ ಹೊಸ ಅಲೆ, ‘ಬೊಬ್ಬೆಯ ಹಬ್ಬಿಸಿ...ಅಬ್ಬರದಲಿ ಭೋರ್ ಭೋರನೆ ಗುಮ್ಮಿಸಿ’ ತೆಂಕಣ ಗಾಳಿಯು ಕೊಂಕಣ ಸೀಮೆಗೆ ಬಂದಂತೆ, ಅಮೆರಿಕ ಸಮುದಾಯಗಳನ್ನು ಚಂಡಮಾರುತದಂತೆ ಅಪ್ಪಳಿಸುತ್ತಿದೆ. ಅಮೆರಿಕದಲ್ಲಿ ಈಗ ಉದ್ಭವಿಸಿರುವ ‘ಪ್ರತಿಭಟನೆಯ ಕಾವ್ಯ’ ಸಮಕಾಲೀನ ಅಮೆರಿಕ ಕಾವ್ಯದ ಒಂದು ಹೊಸ ತಳಿ. ಇದು ಟ್ರಂಪ್ ಸರಕಾರದ ನೀತಿ ಮತ್ತು ಶ್ವೇತ ಭವನದಿಂದ ಹೊರಡುತ್ತಿರುವ ಇತ್ತೀಚಿನ ಕಾರ್ಯಾಂಗದ ಆದೇಶಗಳ ವಿರುದ್ಧ ಸಿಡಿದಿರುವ ಕಾವ್ಯಸ್ಫೋಟ.

    ತನ್ನನ್ನು ಅಪ್ಪಟ ಅಂತರ್ಮುಖಿ ಎಂದು ಕರೆದುಕೊಳ್ಳುವ ಜೇನ್ ಹಿರ್ಷ್‌ಫೀಲ್ಡ್ ಕವಯಿತ್ರಿ. ಉದ್ಯಾನವನ ಬೆಳೆಸುವುದು, ತಿರುಗಾಟ ಮತ್ತು ಕವಿತೆ ಬರೆಯುವುದು ಆಕೆಯ ಜೀವನಕ್ರಮ. ಪ್ರಕೃತಿ, ಬದುಕಿನ ನಶ್ವರತೆ, ಪರಸ್ಪರ ಮಾನವ ಸಂಬಂಧಗಳು ಜೇನ್‌ಳ ಕಾವ್ಯಕೃಷಿಯ ಮುಖ್ಯ ಕಾಳಜಿಗಳು. ಕೆಲವು ತಿಂಗಳುಗಳ ಹಿಂದೆ ವಾಷಿಂಗ್ಟನ್‌ನಲ್ಲಿ ವಿಜ್ಞಾನ ಜಾಥಾ ನಡೆಯಿತು. ಈ ಜಾಥಾದಲ್ಲಿ ಕವಿತಾ ವಾಚನಕ್ಕೆ ಅವಕಾಶ ನೀಡುವಂತೆ ಅವಳು ವ್ಯವಸ್ಥಾಪಕರನ್ನು ಆಗ್ರಹಿಸಿದ್ದಳು. ‘ಆನ್ ದಿ ಫಿಫ್ತ್ ಡೇ’ ಅವಳ ಇತ್ತೀಚಿನ ಕವನ. ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಹೊಸತರಲ್ಲೇ ಶ್ವೇತ ಭವನ ಪರಿಸರ ಸಂರಕ್ಷಣೆ ಕುರಿತ ಕೆಲವೊಂದು ನಿಯಂತ್ರಣ ಕಾನೂನುಗಳನ್ನು ರದ್ದುಗೊಳಿಸಿತು.ಇದನ್ನು ವಿರೋಧಿಸಿ ಬರೆದ ‘ಆನ್ ದಿ ಫಿಫ್ತ್ ಡೇ’ ಕವನವನ್ನು ವಿಜ್ಞಾನ ಜಾಥಾದಲ್ಲಿ ವಾಚಿಸುವುದು ಜೇನ್‌ಳ ಬಯಕೆಯಾಗಿತ್ತು. ಎಲ್ಲವೂ ರಾಜಕೀಯಮಯವಾಗುತ್ತಿರುವ ಟ್ರಂಪ್‌ನ ಈ ದಿನಮಾನದಲ್ಲಿ ಕಾವ್ಯವೂ ಇದಕ್ಕೆ ಹೊರತಾಗಿಲ್ಲ. ಅಮೆರಿಕದ ಇತಿಹಾಸದ ಈ ಪ್ರಕ್ಷುಬ್ಧಕಾರಿ ದಿನಗಳಲ್ಲಿ ಕವಿಗಳು, ಸಾಹಿತಿಗಳು ಟ್ರಂಪ್‌ನ ಬಲಪಂಥೀಯ ನೀತಿ ಕಾರ್ಯಕ್ರಮಗಳ ವಿರುದ್ಧ ತೀವ್ರವಾಗಿ ಪ್ರತಿಭಟಿಸುತ್ತಿದ್ದಾರೆ. ವಲಸೆ ನೀತಿ, ಜಾಗತಿಕ ತಾಪಮಾನ, ಸಿರಿಯಾ ನಿರಾಶ್ರಿತರ ಸಮಸ್ಯೆ, ಸಾಂಸ್ಥೀಕರಣಗೊಳ್ಳುತ್ತಿರುವ ಜನಾಂಗೀಯತೆ, ಸಲಿಂಗಿಗಳ ದಾಂಪತ್ಯ, ಇಸ್ಲಾಂ ಭೀತಿ, ಸಾರ್ವಜನಿಕ ಆರೋಗ್ಯ ಇಂಥ ಹಲವಾರು ಪ್ರಚಲಿತ ಸಮಸ್ಯೆಗಳನ್ನು ಬಿಂಬಿಸುವ ಕಾವ್ಯದ ಸುನಾಮಿಯೇ ಎದ್ದಿದೆ. ಈ ಬಗೆಯ ಪ್ರತಿಭಟನೆ ಸಮಕಾಲೀನ ಅಮೆರಿಕನ್ ಕಾವ್ಯದ ಹೊಸ ಒಲವು. ಶ್ವೇತಭವನದಿಂದ ಪುಂಖಾನುಪುಂಖವಾಗಿ ಹೊರಡುತ್ತಿರುವ ಆಜ್ಞೆಗಳು ಮತ್ತು ಸಾರ್ವಜನಿಕ ನೀತಿಗೆ ಕಾವ್ಯ ತೋರುತ್ತರುವ ತೀವ್ರ ಪ್ರತಿಕ್ರಿಯೆ ಇದಾಗಿದೆ. ‘‘ಇದು ತಪ್ಪೊಪ್ಪಿಗೆ ಕಾವ್ಯವಲ್ಲ, ಇದು ಕ್ರಿಯೆಯಲ್ಲಿ ತೊಡಗುವಂತೆ ನಮ್ಮಲ್ಲಿ ಸಂಚಲನ ಉಂಟುಮಾಡುವ ಕಾವ್ಯ’’ ಎನ್ನುತ್ತಾರೆ ಗ್ರೆವುಲ್ಫ್ ಪ್ರೆಸ್ಸಿನ ಸಂಪಾದಕ ಜೆಫ್ ಷಾಟ್ಸ್. ಪ್ರತಿಭಟನೆ ಅಮೆರಿಕ ಕಾವ್ಯ ಪರಂಪರೆಯಲ್ಲಿ ಹೊಸದೇನಲ್ಲ. ಕವಿಗಳು ರಾಜಕೀಯ ಕ್ರಿಯವಾದಿಗಳಾಗಿದ್ದ ಸುದೀರ್ಘ ಕಾವ್ಯ ಪರಂಪರೆಯೊಂದು ಅಮೆರಿಕದಲ್ಲಿದೆ. ಎಚ್.ಡಬ್ಲ್ಯೂ. ಲಾಂಗ್‌ಫೆಲೊ, ವಾಲ್ಟ್ ವಿಟ್ಮನ್ ಮೊದಲಾದವರು ಗುಲಾಮಗಿರಿ ವಿರುದ್ಧ ಪ್ರತಿಭಟನಾ ಕಾವ್ಯ ರಚಿಸಿದ್ದುಂಟು. ವಿಯಟ್ನಾಂ ಯುದ್ಧ ಮತ್ತು ಜನಾಂಗೀಯ ಶೋಷಣೆ-ದಬ್ಬಾಳಿಕೆಗಳ ವಿರುದ್ಧ ಹೋರಾಡಲು ಕಾವ್ಯ ಬೀದಿಗಿಳಿದದ್ದೂ ಉಂಟು. ಸೆಪ್ಟಂಬರ್11ರ ದಾಳಿ, ಇರಾಕ್ ಯುದ್ಧಗಳ ವಿರುದ್ಧ ಕವಿಗಳು ಪ್ರತಿಭಟಿಸಿದ್ದಾರೆ. ಇಂಥ ಪ್ರತಿಭಟನಾ ಕಾವ್ಯ ಸಾಕಷ್ಟು ಪ್ರಮಾಣದಲ್ಲಿ ಪ್ರಕಟವಾಗಿ ಜನಾಭಿಪ್ರಾಯ ರೂಪಿಸುವಲ್ಲಿ ಯಶಸ್ವಿಯಾಗಿದೆ. ಈಗ, 2016ರ ರಾಷ್ಟ್ರಾಧ್ಯಕ್ಷರ ಚುನಾವಣೆಯ ನಂತರ ಪ್ರತಿಭಟನಾ ಕಾವ್ಯ ಪ್ರವಾಹದೋಪಾದಿಯಲ್ಲಿ ಬರುತ್ತಿದೆ ಎನ್ನುವುದು ಕವಿಗಳು, ವಿದ್ವಾಂಸರುಗಳು ಮತ್ತು ಪ್ರಕಾಶಕರುಗಳ ಅಭಿಪ್ರಾಯ. ಈಗಿನ ಟ್ರಂಪ್ ವಿರೋಧಿ ಪ್ರತಿಭಟನಾ ಕಾವ್ಯ, ಶೈಲಿ-ವಸ್ತು ವಿಷಯ-ಭಾವತೀವ್ರತೆಗಳಲ್ಲಿ ಹಿಂದಿನ ಪ್ರತಿಭಟನಾ ಕಾವ್ಯಕ್ಕಿಂತ ಭಿನ್ನವಾಗಿದ್ದು, ಇದು ಹೊಸದೊಂದು ಕಾವ್ಯಮಾರ್ಗಕ್ಕೆ ನಾಂದಿಯಾಗಲಿದೆ ಎನ್ನುತ್ತಾರೆ ವಿಮರ್ಶಕರು. ‘‘ಇಪ್ಪತ್ತನೆಯ ಶತಮಾನದ ಅಮರಿಕನ್ ಕಾವ್ಯದ ಮುಖ್ಯ ಗುಣಲಕ್ಷಣಗಳಾದ ಆತ್ಮಾವಲೋಕನ ಮತ್ತು ಖಾಸಗಿತನಗಳಿಗೆ ವಿದಾಯ ಹೇಳಿ ಹೊಸ ಮಾರ್ಗಕ್ಕೆ ತೆರೆದುಕೊಂಡಿರುವ ಕಾವ್ಯವಿದು. ನಮ್ಮ ಕಾವ್ಯದಲ್ಲಿ ಪ್ರಮುಖ ಪಲ್ಲಟವಾಗಲಿದೆ’’ ಎನ್ನುತ್ತಾರೆ ಪೊಯಟ್ರಿ ಸೊಸೈಟಿ ಆಫ್ ಅಮೆರಿಕದ ಅಧ್ಯಕ್ಷ ಆಲಿಸ್ ಕ್ವಿನ್. ‘‘ನಾನು ಓದುತ್ತಿರುವ ಈ ಪದ್ಯಗಳು, ಟಂಕಸಾಲೆಯಿಂದ ಹೊಚ್ಚಹೊಸದಾಗಿ ಹೊಮ್ಮಿದ್ದು, ಇವು ತುರ್ತುಸ್ಥಿತಿ, ನಿರೀಕ್ಷೆ ಮತ್ತು ಹೊಣೆಗಾರಿಕೆಗಳ ಪ್ರಖರ ಪ್ರಜ್ಞೆಯಿಂದ ಕೂಡಿದ ಕವಿತೆಗಳಾಗಿವೆ’’ಎನ್ನುತ್ತಾರೆ ಆಲಿಸ್ ಕ್ವಿನ್.


  ದಿನನಿತ್ಯದ ಸುದ್ದಿಗಳು ಮತ್ತು ವಿದ್ಯಮಾನಗಳಿಗೆ ತಕ್ಷಣ ಪ್ರತಿಕ್ರಿಯಿುಸಲು ಅಮೆರಿಕದ ಕವಿಗಳು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುತ್ತಿದ್ದು-ಸಾಮಾಜಿಕ ಮಾಧ್ಯಮಗಳಲ್ಲಿ ಹೊಸಕವಿತೆಗಳು ಹರಿದಾಡುತ್ತಿವೆ. ನವೆಂವರ್ 8ರಂದು ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ, ಇಪ್ಪತ್ತೇಳು ವರ್ಷದ ಯುವಕವಿ ಡ್ಯಾನೆಝ್‌ಸ್ಮಿಥ್ ದೇಶದಲ್ಲಿ ನಂಬಿಕೆ ಕಳೆದುಕೊಂಡ ಕವಿತೆಯೊಂದನ್ನು ಬರೆಯುತ್ತಾರೆ.ಕವನದ ಶೀರ್ಷಿಕೆ: ‘ಅಮೆರಿಕ ನೀನು ಸತ್ತಿರುವೆ.’ ಈ ಕವನ ನವೆಂಬರ್ 9ರಂದು ಪ್ರಕಟಗೊಂಡಿತು. ಅದರ ಕೆಲವು ಸಾಲುಗಳು:
  ದೂರದರ್ಶನದಲ್ಲಿ
  
  ಅದೇ ದೂರದ ಮುಖ- ಮೊಗವಿಲ್ಲದ ಆ
  ನಗುವಿಗೆ ಸಿಟ್ಟಿಗೆ
  ಸರಿಸಾಟಿಯಿಲ್ಲ,
  ಅವನು ಅಧ್ಯಕ್ಷ.
  ಅಮೆರಿಕ
  ಇದು ನಿನ್ನ ಅವಸಾನ


  - ನವೆಂಬರ್‌ನಲ್ಲಿ, ಚುನಾವಣೆಯ ನಂತರ ಅಕಾಡಮಿ ಆಫ್ ಅಮೆರಿಕನ್ ಪೊಯೆಟ್ಸ್ ಮತ್ತು ಬ್ರೈನ್ ಪಿಕಿಂಗ್ಸ್ ಆನ್‌ಲೈನ್ ಪ್ರಕಾಶನ ಸಂಸ್ಥೆ ತುರ್ತು ಕವಿಗೋಷ್ಠಿಯೊಂದನ್ನು ನ್ಯೂಯಾರ್ಕಿನ ವಾಷಿಂಗ್ಟನ್ ಚೌಕದ ಉದ್ಯಾನದಲ್ಲಿ ಏರ್ಪಡಿಸಿತ್ತು. ಸುಮಾರು ಇಪ್ಪತ್ತು ಕವಿಗಳನ್ನು ಆಲಿಸಲು ಅಲ್ಲಿ ಅಂದು ನೂರಾರು ಜನ ಸೇರಿದ್ದರಂತೆ. ಇತ್ತೀಚಿನ ದಿನಗಳಲ್ಲಿ ಅಮೆರಿಕದ ಆನ್‌ಲೈನ್ ಕಾವ್ಯಭಂಡಾರದಲ್ಲಿ ನೂಕುನುಗ್ಗುಲು ಶುರುವಾಗಿದೆಯಂತೆ. ಮಯ ಏಂಜಲೋಸ್ ಎಂಬ ಕವಿಯ ‘ಸ್ಟಿಲ್ ಐ ರೈಸ್’ ಕವಿತೆಯನ್ನು ಆನ್‌ಲೈನ್‌ನಲ್ಲಿ ನವೆಂಬರ್‌ನಿಂದೀಚೆಗೆ 4,70,000 ಮಂದಿ ಓದಿದ್ದಾರಂತೆ. ಇದು ಕಳೆದ ವರ್ಷದ ದಾಖಲೆಯನ್ನು ಮೀರಿಸಿದ ವಿಕ್ರಮವಾಗಿದೆ. ಕಳೆದ ವರ್ಷ,‘ಲೆಟ್ ಅಮೆರಿಕ ಬಿ ಅಮೆರಿಕ’ ಕವಿತೆ ಅತಿಹೆಚ್ಚು ಓದುಗರನ್ನು ಗೆದ್ದ ಕೀರ್ತಿಗೆ ಪಾತ್ರವಾಗಿತ್ತು.
***

     
ಇನ್ನು ಸ್ವದೇಶಕ್ಕೆ ಬರೋಣ. ಏನಾಗಿದೆ ನಮ್ಮ ಜನಕ್ಕೆ? ಅವರೇಕೆ ಮಾತಾಡುವುದಿಲ್ಲ? ಹಿಂದೂ ಸಮಾಜವನ್ನು, ಅದರ ಆತ್ಮವನ್ನು ಅಲ್ಲಾಡಿಸಿ ಪ್ರಶ್ನಿಸಿದ ಕೊನೆಯ ವ್ಯಕ್ತಿಗಳು ರಾಜಾರಾಂ ಮೋಹನರಾಯ್, ಮಹಾತ್ಮಾ ಗಾಂಧಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್. ಅವರ ನಂತರ ಹಿಂದೂ ಸಮಾಜವನ್ನು ತೀವ್ರವಾಗಿ ಪ್ರಶ್ನಿಸಿದವರು ಯಾರೂ ಢಾಳಾಗಿ ಕಾಣಿಸುವುದಿಲ್ಲ. ಭಾರತೀಯ ಸಮಷ್ಟಿಪ್ರಜ್ಞೆಯ ಒಳಹೊಕ್ಕು ನೋಡಿದವರು, ಚಿಂತನಮಂಥನ ಮಾಡಿದವರು ವಿರಳ. ಇದೊಂದು ದೊಡ್ಡ ದುರಂತ. ಸಮಾಜವೊಂದು ಕಾಲಕಾಲಕ್ಕೆ ಮೂಲಭೂತ ಪ್ರಶ್ನೆಗಳನ್ನು ಎತ್ತದಿದ್ದರೆ, ಆತ್ಮವಿಮರ್ಶೆ ಮಾಡಿಕೊಳ್ಳದಿದ್ದರೆ ಅದು ಸತ್ತಂತೆಯೇ. ಸಮಾಜದ ಸಮಷ್ಟಿ ಪ್ರಜ್ಞೆ ಮತ್ತು ವ್ಯಕ್ತಿತ್ವವನ್ನು ಶೋಧಿಸಿ ನೋಡಬೇಕಾದ ಬೌದ್ಧಿಕ ಕಾಯಕವನ್ನು ನಾವಿಂದು ಮರೆತಿದ್ದೇವೆ. ‘‘ನಾನು ಹಿಂದೂ’’ ಎಂದು ಹೆಮ್ಮೆಯಿಂದ ಕೊಚ್ಚಿಕೊಳ್ಳುತ್ತಾ, ‘ನವ ಭಾರತ’, ‘ಸ್ವಚ್ಛ ಭಾರತ’, ‘ಡಿಜಿಟಲ್ ಇಂಡಿಯಾ’-ಇಂಥ ಬಣ್ಣಬಣ್ಣದ ಮಾತುಗಳ ಜೋಗುಳಕ್ಕೆ ನಿದ್ದೆ ಹೋಗುತ್ತಿರುವ ನಾವು ಏಕೆ ಅಲ್ಪಸಂಖ್ಯಾತರ ಬಗ್ಗೆ, ದಲಿತರ ಬಗ್ಗೆ, ಮಹಿಳೆಯರ ಬಗ್ಗೆ ಆಕ್ರಮಣಕಾರಿಗಳಾಗಿದ್ದೇವೆ? ನಾವೇಕೆ ನಮ್ಮೀ ದೇಶಬಾಂಧವರ ದುರ್ಗತಿ ಬಗ್ಗೆ ಅಸಡ್ಡೆಯಿಂದ ಇದ್ದೇವೆ? ಉದಾಸೀನರಾಗಿದ್ದೇವೆ? ಇವು ಅಹಿತಕರವೆನಿಸಿದರೂ ಜ್ವಲಂತ ಸತ್ಯ. ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಸ್ವಹಿತ ಮಾತ್ರವಲ್ಲ, ಪರರಹಿತವೂ ಮುಖ್ಯವಾಗಬೇಕು. ಅಂದರೆ ಸಹನಾಗರಿಕರ ಹಿತ, ಯೋಗಕ್ಷೇಮಗಳ ಬಗ್ಗೆಯೂ ಕಾಳಜಿ ಇರಬೇಕಾಗುತ್ತದೆ. ಒಬ್ಬ ವ್ಯಕ್ತಿ ಅಥವಾ ಒಂದು ಸಮುದಾಯ ವ್ಯವಸ್ಥಿತವಾಗಿ ಮೂಲಭೂತ ಹಕ್ಕುಗಳಿಂದ ವಂಚಿಸಲ್ಪಟ್ಟಾಗ ಸಹಪೌರರಿಗೆ ಏನೂ ಅನ್ನಿಸುವುದೇ ಇಲ್ಲವೇ? ಸಹಜವಾಗಿ ಸಹಾನುಭೂತಿಯುಂಟಾಗಬೇಕು, ನಮ್ಮ ನಡುವಣ ಅಮಾನವೀಯ ಕೃತ್ಯಗಳ ಬಗ್ಗೆ ನಾಚಿಕೆಯಾಗಬೇಕು. ಆದರೆ ನಮಗೆ ಇದೇನೂ ಆಗುತ್ತಿಲ್ಲ. ದಿವ್ಯ ನಿರ್ಲಕ್ಷ್ಯದಿಂದಿದ್ದೇವೆ. ಆದರೆ ನಮ್ಮ ಇತಿಹಾಸ, ಪರಂಪರೆ ಶ್ರೀಮಂತವಾದುದು. ತತ್ವಜ್ಞರು, ಧರ್ಮಜಿಜ್ಞಾಸುಗಳು, ಸಮಾಜ ಸುಧಾರಕರು, ಮಹಾನ್ ರಾಷ್ಟ್ರೀಯ ನಾಯಕರು ಮಾನವನ ಬದುಕುಬಾಳ್ವೆ ಕುರಿತಂತೆ ಉನ್ನತ ಸಡಾವಳಿ, ಸಂಪ್ರದಾಯ, ಪರಂಪರಗಳನ್ನು ಬಿಟ್ಟುಹೋಗಿದ್ದಾರೆ. ಇವರೆಲ್ಲ ಕಟುವಾದ, ವಿಮರ್ಶಾತ್ಮಕವಾದ ಪ್ರಶ್ನೆಗಳಿಂದ ಭಾರತೀಯ ಸಮಾಜದ ಅಂತಃಸಾಕ್ಷಿಯನ್ನು ಕಲಕಿದವರು, ಜಾಗೃತಿಗೊಳಿಸಿದವರು, ದಲಿತರು ಮತ್ತು ಸ್ತ್ರೀಯರ ಬದುಕಿನಲ್ಲಿ ಸುಧಾರಣೆಗಳನ್ನು ತಂದವರು. ಹಲವು ಧರ್ಮೀಯರ ನಡುವೆ ಸಮನ್ವಯವನ್ನು ಸಾಧಿಸಿದವರು. ಆದರೆ ಇಂದು ಏನಾಗಿದೆ? ಇಂದಿನ ಪರಿಸ್ಥಿತಿ ಗಮನಿಸಿದಾಗ ಈ ಪರಂಪರೆಯಿಂದ ನಾವು ಕಲಿತದ್ದು ಏನೂ ಇಲ್ಲವೆ ಎಂದು ಪ್ರಶ್ನಿಸುವಂತಾಗುತ್ತದೆ.

ಇಂದು, ದಲಿತರು, ಮುಸ್ಲಿಮರು ಮತ್ತು ಮಹಿಳೆಯರ ಮೇಲೆ ಅಪರಿಮಿತ ದೌರ್ಜನ್ಯ ನಡೆಯುತ್ತಿದ್ದರೂ,‘ವಸುದೆೈವ ಕುಟುಂಬಕಂ’ ನಂಬಿಕೆಯ ಹಿಂದೂ ಸಮಾಜ ಅವುಗಳಲ್ಲಿ ಷರೀಕಾಗಿ ದಿವ್ಯ ಮೌನ ತಾಳಿದೆ.ರಕ್ಷಕರು ಎನಿಸಿಕೊಂಡವರು ಏಕಪಕ್ಷೀಯವಾಗಿ ‘ನೈತಿಕತೆ’ಯನ್ನು ಅರ್ಥವಿಸುತ್ತಾರೆ ಹಾಗೂ ಹಿಂದೂ ಸಂಹಿತೆಗಳನ್ನು ಉಲ್ಲಂಘಿಸದರೆಂದು ಶಂಕೆಮಾತ್ರದಿಂದಲೇ ಅಮಾಯಕರನ್ನು ಕ್ರೂರಶಿಕ್ಷೆಗೆ ಗುರುಪಡಿಸುತ್ತಾರೆ. ಅಧಿಕಾರ ಬಲದ ರಾಜಕಾರಣಿಗಳು ಮತ್ತು ಪೊಲೀಸರ ಬೆಂಬಲವುಳ್ಳ ಈ ‘ರಕ್ಷಕ’ರು, ಇವರೇ ಶಾಸಕರು, ಕ್ರಮ ಜರಗಿಸುವವರು, ನ್ಯಾಯಾಧೀಶರು ಮತ್ತು ಶಿಕ್ಷೆಕೊಡುವವರು ಎಲ್ಲವೂ ಆಗಿದ್ದಾರೆ. ದಿನಬೆಳಗಾದರೆ ಈ ‘ರಕ್ಷಕರ’ ಕಾರ್ಯಾಚರಣೆಗಳು ಪತ್ರಿಕೆಗಳಲ್ಲಿ ವರದಿಯಾಗುತ್ತಲೇ ಇವೆ. ಎಪ್ರಿಲ್ ಪ್ರಾರಂಭದಲ್ಲಿ ರಾಜಸ್ತಾನದ ಆಳ್ವಾರ್‌ನಲ್ಲಿ ಹಸುಗಳ ಸಾಗಣೆ ಗುಮಾನಿಯ ಮೇಲೆ ‘ಗೋರಕ್ಷಕರು’, ಇಪ್ಪತ್ತು ಮಂದಿ ಮುಸ್ಲಿಮರ ಮೇಲೆ ದಾಳಿ ನಡೆಸಿದರು. ಅವರ ಅಮಾನುಷ ಹಲ್ಲೆಗೆ ಪೆಹ್ಲೂ ಖಾನ್ ಎಂಬವರು ಬಲಿಯಾದರು, ಉಳಿದವರು ಗಾಯಗೊಂಡರು.ರಾಜಸ್ತಾನದಲ್ಲಿ ಗೋವುಗಳ ಕಳ್ಳ ಸಾಗಣೆ ನಿಷಿದ್ಧವಾದ್ದರಿಂದ ಗೋರಕ್ಷಕರ ಕ್ರಮ ಸರಿ ಎಂದು ಸಮರ್ಥಿಸಿಕೊಂಡ ಗೃಹ ಸಚಿವ ಗುಲಾಬ್ ಸಿಂಗ್ ಕಟಾರಿಯಾ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ‘‘ಪೆಹ್ಲೂಖಾನ್‌ರ ಮೇಲೆ ಹಲ್ಲೆ ನಡೆಸಿದವರ ಚಿಂತನೆಗಳು ಸರಿಯಾಗಿವೆ, ಬಹುಶಃ ಅವರ ವಿಧಾನ ಸರಿ ಇರಲಿಕ್ಕಿಲ್ಲ’’ ಎಂದು ಬೆನ್ನುತಟ್ಟಿದ್ದಾರೆ. ಇಂಥ, ಸ್ವಯಂನೇಮಿತ ಹಿಂದೂ ಧರ್ಮರಕ್ಷಕರು ಕಾನೂನನ್ನು ಕೈಗೆತ್ತಿಕೊಂಡು ಧರ್ಮದ ಹೆಸರಿನಲ್ಲಿ ಅಲ್ಪಸಂಖ್ಯಾತರು ದಲಿತರು ಮತ್ತು ಮಹಿಳೆಯರ ಮೇಲೆ ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಈ ನಡುವೆ (ಬಿ.ಜೆ.ಪಿ ಅಧಿಕಾರಕ್ಕೆ ಬಂದ ನಂತರ) ಹೆಚ್ಚುತ್ತಿವೆ. ಪ್ರತಿನಿತ್ಯ ಇಂಥ ಹಲ್ಲೆ ಪ್ರಕರಣಗಳ ವರದಿಗಳು ಓದುಗರಿಗೆ, ಧರ್ಮಪಾಲನೆ, ಕಲೆ, ಸಾಹಿತ್ಯ, ಸಮಾಜ ಕುರಿತ ತಪ್ಪುಕಲ್ಪನೆಯ ವಿಕೃತ ಘಟನೆಗಳು ಎನ್ನಿಸಬಹುದು. ಹಲ್ಲೆಗೊಳಗಾದವರು ದುರ್ದೈವಿಗಳು ಎನ್ನಿಸಬಹುದು. ಆದರೆ ಈ ವಿಕೃತಮನಸ್ಸುಗಳ ‘ಸರಿದಾರಿಗೆ’ ತರುವ ಹಲ್ಲೆಗಳು ನಾಳೆ ಇಡೀ ಸಮಾಜದತ್ತ ತಿರುಗಿದರೆ? ನಾಳೆ ಆ ದುರ್ದೈವಿಗಳು ನೀವೇ ಆದರೆ? ಹಿಟ್ಲರನ ಜರ್ಮನಿಯಲ್ಲಿ ಹೀಗೆ ಆದದ್ದು ಈಗ ಇತಿಹಾಸ. ಮೊದಲು ನಾಜಿಗಳನ್ನು ಬೆಂಬಲಿಸಿ ಕೊನೆಗೆ ಅವರ ಸಂಚಿಗೆ ತಾನೇ ಬಲಿಯಾದ ದೈವ ಶಾಸ್ತ್ರಜ್ಞ ಮಾರ್ಟಿನ್ ನಿಮೋಲ್ಲರ್ ತನ್ನ ತಪ್ಪಿಗೆ

ಪಶ್ಚಾತ್ತಾಪಪಟ್ಟು ಹಾಲೊಕಾಸ್ಟ(ನರಮೇಧ) ಕವಿತೆ ಬರೆದ. ಅದರ ಕೆಲವು ಸಾಲುಗಳು:

 ಮೊದಲು ಅವರು ಸಮಾಜವಾದಿಗಳನ್ನರಸಿ ಬಂದರು
 ನಾನು ಮಾತಾಡಲಿಲ್ಲ, ಏಕೆಂದರೆ ನಾನು ಸಮಾಜವಾದಿಯಾಗಿರಲಿಲ್ಲ.
 ನಂತರ ಕಾರ್ಮಿಕ ನಾಯಕರನ್ನರಸಿ ಬಂದರು
 ನಾನು ಮಾತಾಡಲಿಲ್ಲ, ಏಕೆಂದರೆ ನಾನು ಕಾರ್ಮಿಕ ನಾಯಕನಾಗಿರಲಿಲ್ಲ.
 ನಂತರ ಅವರು ಯೆಹೂದಿಗಳನ್ನರಸಿ ಬಂದರು
 ನಾನು ಮಾತಾಡಲಿಲ್ಲ, ಏಕೆಂದರೆ ನಾನೂ ಯೆಹೂದಿಯಾಗಿರಲಿಲ್ಲ.
 ನಂತರ ಅವರು ನನ್ನನ್ನು ಅರಸಿ ಬಂದರು
 ನನ್ನ ಪರ ಮಾತಾಡುವವರು ಯಾರೂ ಇರಲಿಲ್ಲ.

- ಕವಿ ಮೈಕೆಲ್ ಆರ್. ಬರ್ಚ್ ಅದನ್ನು ಅಮೆರಿಕೀಕರಣ ಗೊಳಿಸಿರುವುದು ಹೀಗೆ:

ಮೊದಲು ಅವರು ಮುಸ್ಸಿಮರನ್ನರಸಿ ಬಂದರು,/ನಂತರ ಸಲಿಂಗಿಗಳನ್ನು,/ನಂತರ ಸ್ತ್ರೀ ವಿಮೋಚನಾವಾದಿಗಳನ್ನು/ಮುಂದಿನ ಸರದಿ ನನ್ನಾದಾಗಬಹುದೇ?
ಮೌನ ಸದ್ಗುಣ ಇರಬಹುದು. ಆದರೆ ದುಷ್ಟ-ದೌರ್ಜನ್ಯ ಇತ್ಯಾದಿ ಘೋರ ಅಮಾನುಷ ಕೃತ್ಯಗಳನ್ನು ಕಂಡೂ ಕಾಣದಂತೆ ಮೌನಿಗಳಾಗಿರುವುದು ಮೂಕೊಪ್ಪಿಗೆಯಾಗುತ್ತದೆ.    

Writer - ಜಿ.ಎನ್. ರಂಗನಾಥ ರಾವ್

contributor

Editor - ಜಿ.ಎನ್. ರಂಗನಾಥ ರಾವ್

contributor

Similar News

ನಾಸ್ತಿಕ ಮದ