ವೈದ್ಯಕೀಯ ತಪಾಸಣೆಗೆ ನಿರಾಕರಿಸಿದ ನ್ಯಾ.ಕರ್ಣನ್

Update: 2017-05-04 09:26 GMT

ಕೋಲ್ಕತಾ,ಮೇ 4: ಇಲ್ಲಿಯ ಸರಕಾರಿ ಆಸ್ಪತ್ರೆಯ ವೈದ್ಯರ ತಂಡದಿಂದ ವೈದ್ಯಕೀಯ ತಪಾಸಣೆಗೊಳಪಡಲು ಗುರುವಾರ ನಿರಾಕರಿಸಿದ ಕೋಲ್ಕತಾ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕರ್ಣನ್ ಅವರು, ತನ್ನ ಆರೋಗ್ಯ ಸಹಜವಾಗಿದೆ ಮತ್ತು ಮನೋಸ್ಥಿತಿ ಉತ್ತಮವಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ಬಗ್ಗೆ ವೈದ್ಯರ ತಂಡಕ್ಕೆ ಲಿಖಿತ ಹೇಳಿಕೆಯನ್ನು ಅವರು ಒಪ್ಪಿಸಿದರು.

ನಾಲ್ವರು ವೈದ್ಯರ ತಂಡವೊಂದು ಇಂದು ಬೆಳಿಗ್ಗೆ ಪೊಲೀಸರೊಂದಿಗೆ ಇಲ್ಲಿಯ ನ್ಯೂ ಟೌನ್‌ನಲ್ಲಿರುವ ನ್ಯಾ.ಕರ್ಣನ್ ಅವರ ನಿವಾಸಕ್ಕೆ ತೆರಳಿತ್ತು.

ತನ್ನನ್ನು ವೈದ್ಯಕೀಯ ತಪಾಸಣೆಗೊಳಪಡಿಸಬೇಕು ಎಂಬ ಸರ್ವೋಚ್ಚ ನ್ಯಾಯಾಲಯದ ಆದೇಶವು ನ್ಯಾಯಾಧೀಶನಾಗಿರುವ ತನಗೆ ಮಾಡಿರುವ ಅವಮಾನ ಮತ್ತು ಕಿರುಕುಳವಾಗಿದೆ ಎನ್ನುವುದು ತನ್ನ ಬಲವಾದ ಅಭಿಪ್ರಾಯವಾಗಿದೆ ಎಂದೂ ಅವರು ಹೇಳಿದ್ದಾರೆ.ಇಂತಹ ವೈದ್ಯಕೀಯ ತಪಾಸಣೆ ನಡೆಸಲು ಪೋಷಕರ ಒಪ್ಪಿಗೆ ಅಗತ್ಯವಾಗಿದೆ. ತನ್ನ ಕುಟುಂಬ ಸದಸ್ಯರು ಇಲ್ಲಿಲ್ಲ, ಹೀಗಾಗಿ ಈ ಒಪ್ಪಿಗೆ ಲಭ್ಯವಿಲ್ಲ. ಆದ್ದರಿಂದ ವೈದ್ಯಕೀಯ ತಪಾಸಣೆ ನಡೆಸಲು ಸಾಧ್ಯವಿಲ್ಲ ಎಂದು ನ್ಯಾ.ಕರ್ಣನ್ ವೈದ್ಯರ ತಂಡಕ್ಕೆ ತಿಳಿಸಿದರು.

ತನ್ನ ಪತ್ನಿ ಮತ್ತು ಓರ್ವ ಪುತ್ರ ಚೆನ್ನೈನಲ್ಲಿದ್ದು, ಇನ್ನೋರ್ವ ಪುತ್ರ ಫ್ರಾನ್ಸ್‌ನಲ್ಲಿ ಉದ್ಯೋಗದಲ್ಲಿದ್ದಾನೆ ಎಂದು ಅವರು ಹೇಳಿದರು.

ಮೇ 1ರಂದು ಸರ್ವೋಚ್ಚ ನ್ಯಾಯಾಲಯವು ಕೋಲ್ಕತಾದಲ್ಲಿಯ ಸರಕಾರಿ ಆಸ್ಪತ್ರೆಯ ವೈದ್ಯರ ತಂಡದಿಂದ ನ್ಯಾ.ಕರ್ಣನ್ ಅವರ ವೈದ್ಯಕೀಯ ತಪಾಸಣೆಗೆ ಆದೇಶಿಸಿತ್ತು.

ವೈದ್ಯಕೀಯ ತಪಾಸಣೆ ನಡೆಸುವ ವೈದ್ಯರ ತಂಡಕ್ಕೆ ನೆರವಾಗಲು ಪೊಲೀಸ್ ಅಧಿಕಾರಿಗಳ ತಂಡವೊಂದನ್ನು ರಚಿಸುವಂತೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಏಳು ನ್ಯಾಯಾಧೀಶರ ಪೀಠವು ಪಶ್ಚಿಮ ಬಂಗಾಲದ ಪೊಲೀಸ್ ಮಹಾ ನಿರ್ದೇಶಕರಿಗೂ ನಿರ್ದೇಶ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News