‘ಮಹಿಳೆಯರ ಮೇಲಿನ ಅಪರಾಧ ಪ್ರಕರಣ ಹೆಚ್ಚಳಕ್ಕೆ ಸಿನಿಮಾ ಕಾರಣ’
ಚೆನ್ನೈ, ಮೇ 5: ಸಿನಿಮಾಗಳಲ್ಲಿ ಮಹಿಳೆಯರನ್ನು ಕೀಳಾಗಿ ಚಿತ್ರೀಕರಿಸುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ತಮಿಳುನಾಡಿನ ಮೂವರು ಮಹಿಳಾ ಐಪಿಎಸ್ ಅಧಿಕಾರಿಗಳು, ಮಹಿಳೆಯರ ಮೇಲಿನ ಕ್ರೈಮ್ ಪ್ರಕರಣಗಳು ಹೆಚ್ಚಾಗಲು ಇಂತಹ ಸಿನಿಮಾಗಳೇ ಕಾರಣ ಎಂದು ಹೇಳಿದ್ದಾರೆ.
ಮೂವರು ಮಹಿಳಾ ಅಧಿಕಾರಿಗಳಾದ ಕೊಯಮತ್ತೂರು ಎಸ್‌ಪಿ ಆರ್.ವಿ ರಮ್ಯಾಭಾರತಿ, ಕೊಯಮತ್ತೂರು ಡಿಸಿಪಿ ಎಸ್. ಲಕ್ಷ್ಮೀ ಹಾಗೂ ತಿರುಪುರ್ ನಗರ ಡಿಸಿಪಿ ದಿಶಾ ಮಿತ್ತಲ್ ಅವರು ಕೊಯಮತ್ತೂರು ಮೂಲದ ಆನ್‌ಲೈನ್ ಪೋರ್ಟಲ್ ‘ದಿ ಕೋವಲ್ ಪೋಸ್ಟ್’ಗೆ ನೀಡಿರುವ ಸಂದರ್ಶನ ವೈರಲ್ ಆಗಿದೆ.
ಘನತೆಗೆ ಧಕ್ಕೆ ತರುವಂತಹ ವಿಚಾರವನ್ನು ವೈಭವೀಕರಿಸಬಾರದು. ಅಶ್ಲೀಲ ಸಂಭಾಷಣೆ ಹಾಗೂ ಸಾಹಿತ್ಯವನ್ನು ಬಳಸುವುದನ್ನು ನಿಲ್ಲಿಸಬೇಕು ಎಂದು ಮೂವರೂ ಮಹಿಳಾ ಪೊಲೀಸ್ ಅಧಿಕಾರಿಗಳು ಸಿನಿಮಾರಂಗದವರನ್ನು ವಿನಂತಿಸಿಕೊಂಡಿದ್ದಾರೆ.
‘‘ಸಿನಿಮಾವೊಂದರ ಹಾಡಿನ ಸಾಹಿತ್ಯ ಹಾಗೂ ಸಂಭಾಷಣೆಗಳು ಯುವ ಮನಸ್ಸಿನ ಮೇಲೆ ಕೆಟ್ಟ ಪರಿಣಾಮಬೀರುತ್ತದೆ. ಆಧುನಿಕ ಯುಗದಲ್ಲಿ ಸಿನಿಮಾ ಅತ್ಯಂತ ಪ್ರಭಾವಿ ಮಾಧ್ಯಮವಾಗಿದ್ದು, ಮಹಿಳೆಯರ ಮೇಲೆ ಅಪರಾಧ ಪ್ರಕರಣ ಹೆಚ್ಚಲು ಸಿನಿಮಾಗಳೇ ಕಾರಣವಾಗುತ್ತಿರುವುದು ಬೇಸರದ ವಿಷಯ. ಪೊಲೀಸರು ಪ್ರತಿದಿನವೂ ಮಹಿಳೆಯರಿಗೆ ಆಗುತ್ತಿರುವ ಅಸಭ್ಯ ವರ್ತನೆ, ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿ ಗರಿಷ್ಠ ಪ್ರಮಾಣದ ದೂರುಗಳನ್ನು ಸ್ವೀಕರಿಸುತ್ತಿದ್ದಾರೆ’’ ಎಂದು ರಮ್ಯಾಭಾರತಿ ಅಭಿಪ್ರಾಯಪಟ್ಟಿದ್ದಾರೆ.
‘‘ಸಿನಿಮಾವೊಂದು ಶಕ್ತಿಶಾಲಿ ಮಾಧ್ಯಮವಾಗಿದ್ದು, ಇದು ಜನರ ಮೇಲೆ ಅದರಲ್ಲೂ ಯುವಕರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ಶಕ್ತಿಶಾಲಿ ಮಾಧ್ಯಮವನ್ನು ಎಚ್ಚರಿಕೆಯಿಂದ ಬಳಸಬೇಕಾಗಿದೆ. ಸಿನಿಮಾ ಹಾಡುಗಳಲ್ಲಿನ ಸಾಹಿತ್ಯ ಮಹಿಳೆಯರ ಮೇಲಿನ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದೆ’’ಎಂದು ಡಿಸಿಪಿ ಲಕ್ಷ್ಮೀ ಹೇಳಿದ್ದಾರೆ.
‘‘ನಮ್ಮ ದಿನನಿತ್ಯದ ಜೀವನದಲ್ಲಿ ಮನೋರಂಜನಾ ಕ್ಷೇತ್ರ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಟಿವಿ ಕಾರ್ಯಕ್ರಮಗಳು, ಜಾಹೀರಾತುಗಳು, ಸಾಹಿತ್ಯ ಹಾಗೂ ಸಂಭಾಷಣೆಗಳು ಜನರ ಮನಸ್ಸಿನ ಮೇಲೆ, ಅವರ ನಡವಳಿಕೆಯಲ್ಲಿ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾಮ ಬೀರುತ್ತದೆ. ಇಂದಿನ ಯುವಕರು ಅಶ್ಲೀಲ ಹಾಡು ಹಾಗೂ ಸಂಭಾಷಣೆಯಿಂದ ಪ್ರಚೋದಿತಗೊಂಡು ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸುವ ಪ್ರಕರಣ ಹೆಚ್ಚಾಗುತ್ತಿದೆ’’ಎಂದು ಡಿಸಿಪಿ ದಿಶಾ ಮಿತ್ತಲ್ ಹೇಳಿದ್ದಾರೆ.